ಮೂರನೇ ಕ್ಲಾಸಿನ ಮನು, ಶಾಲೆಯಲ್ಲಾಗಲೀ, ಮನೆಯಲ್ಲಾಗಲೀ ಬರೆಯಲು ರೆಡಿಯೇ ಇಲ್ಲ, ಯಾರು ಏನೇ ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ. ‘ಮಗುವಿಗೆ ನಡವಳಿಕೆ ಸಮಸ್ಯೆ ಇದೆ, ಸೂಕ್ತ ತರಬೇತಿ ಅವಶ್ಯಕತೆ ಇದೆ, ದಯವಿಟ್ಟು ತಜ್ಞರನ್ನು ಸಂರ್ಪಸಿ’ ಎಂದು ಶಾಲೆಯಲ್ಲಿ ಹೇಳಿ ಕಳಿಸಿಬಿಟ್ಟರು.
ಸಂಪಾದನೆಯಿಂದಾಗಿ ತನ್ನ ಜವಾಬ್ದಾರಿ ಹಾಗೂ ಕರ್ತವ್ಯ ನಾನು ಮಾಡುತ್ತಿದ್ದೇನೆ ಎನ್ನುವಂತಹ ಭ್ರಮೆಗೆ ಬಹಳಷ್ಟು ಸಲ ತಂದೆಯಂದಿರು ಒಳಗಾಗಿರುತ್ತಾರೆ. ಹಾಗಾಗಿ ಮನೆಗೆ ಬಂದಾಗ ಹೆಂಡತಿ, ಮಕ್ಕಳನ್ನು ಗದರಿಸಿ ಹಿಡಿತದಲ್ಲಿ ಇಟ್ಟುಕೊಳ್ಳುವ ಹಾಗೂ ಅವರ ಅಸಾಮರ್ಥ್ಯಗಳನ್ನು ತೋರಿಸಿ ಅವಹೇಳನ ಮಾಡುತ್ತಾ ಹಿಂಸಿಸುತ್ತಾ ಜೀವನ ನಡೆಸುತ್ತಾರೆ. ಸಮಸ್ಯೆಗೆ ಪರಿಹಾರವನ್ನು ಬೇರೆ ರೀತಿಯಲ್ಲಿ ಹುಡುಕುವ ಸಹನೆ, ತಿಳಿವಳಿಕೆ ಹಾಗೂ ಅಗತ್ಯವನ್ನು ಮನಗಂಡಿರುವುದಿಲ್ಲ. ಸಹಾಯ ಅರಸಿ ಬಂದಾಗಲೂ ತಮ್ಮ ನಡವಳಿಕೆಯನ್ನು ಪುಷ್ಟಿಗೊಳಿಸಿ ಕೊಳ್ಳಲು ಬಹಳ ಪ್ರಯತ್ನ ಮಾಡುತ್ತಾರೆ.
ಮನು ಪ್ರಕರಣದಲ್ಲಿಯೂ ಹಾಗೆಯೇ ಆಗಿತ್ತು. ಪ್ರಾರಂಭದಲ್ಲಿ ಸ್ಪಷ್ಟವಾದ ಮಾಹಿತಿಯನ್ನು ಆತನಿಂದ ಪಡೆದುಕೊಳ್ಳುವುದು ಕಷ್ಟವಾಯಿತು. ಕೆಲವು ಚಿಕಿತ್ಸೆಗಳ ನಂತರ ನಿಧಾನವಾಗಿ ಸಮಸ್ಯೆಯನ್ನು ಹೇಳಿಕೊಂಡ. ಅವನಪ್ಪ ತುಂಬಾ ಕೋಪಿಷ್ಠ. ಮನು, ಅಕ್ಕ ಹಾಗೂ ತಾಯಿಯನ್ನು ಕೋಲು, ಬೆಲ್ಟು ಇತ್ಯಾದಿ ಕೈಗೆ ಸಿಕ್ಕಿದ ವಸ್ತುಗಳಿಂದ ಹೊಡೆಯುತ್ತಾನೆ.
ಅಮ್ಮ ಹಾಗೂ ಅಕ್ಕ ದುಃಖಿಸುತ್ತಲೇ ಕೆಲಸ ಮಾಡುತ್ತಾರೆ. ಆದರೆ ಮನುವಿಗೆ ಅದು ಅಷ್ಟು ಸುಲಭವಾಗಿರಲಿಲ್ಲ. ಯಾರೊಬ್ಬರ ನಡವಳಿಕೆಯಲ್ಲಿ ವ್ಯತ್ಯಾಸವಾದರೂ ಎಲ್ಲರಿಗೂ ಸಾಮೂಹಿಕ ಏಟು! ಮಗುವಿನ ಮನಸ್ಸಿನಲ್ಲಿ ನೋವು ಅಸಹಾಯಕತೆ ಹೆಪ್ಪುಗಟ್ಟುವಂತೆ ಮಾಡಿತ್ತು. ಅಪ್ಪ ಹೇಳಿದ ಯಾವ ಕೆಲಸವನ್ನೂ ಮಾಡದೇ ಇರುವಂತಹ ಒಂದು ಜಡತ್ವ ಹಾಗೂ ಪ್ರತೀಕಾರದ ಭಾವನೆ ಕಾಣಿಸಿಕೊಂಡಿದೆ.
ನಂತರ ನಿಧಾನವಾಗಿ ಎಲ್ಲಾ ಕೆಲಸಗಳಲ್ಲಿಯೂ ಬೇರೆಯವರು ಏನೇ ಹೇಳಿದರೂ ಕೇಳದೆ ಇರುವಂತಹ ಪ್ರವೃತ್ತಿ ಬೆಳೆದಿದೆ. ಮಗುವಿನ ನಡವಳಿಕೆಯಲ್ಲಿ ವಿದ್ಯಾಭ್ಯಾಸದ ಬಗ್ಗೆ ನಿರ್ಲಿಪ್ತತೆ ಬೆಳೆದಷ್ಟೂ ತಂದೆಯಲ್ಲಿ ಶಿಕ್ಷಿಸುವ ಪ್ರವೃತ್ತಿ ಹೆಚ್ಚಿದೆ. ಹೀಗೆ ಒಂದಕ್ಕೊಂದು ನಕಾರಾತ್ಮಕ ವ್ಯೂಹ ಬೆಳೆಯುತ್ತಾ ಹೋಗಿದೆ.
ಕೇವಲ ಮಕ್ಕಳ ಅಭಿವ್ಯಕ್ತಿಯಿಂದ ಮಾತ್ರ ಯಾವುದೇ ವ್ಯಕ್ತಿಯ ನಡವಳಿಕೆ ಅಥವಾ ಸಂದರ್ಭಗಳನ್ನು ಸರಿ ತಪ್ಪು ಎಂದು ಚಿಕಿತ್ಸಕರು ನಿರ್ಧರಿಸುವುದಿಲ್ಲ. ಇದಕ್ಕೆ ಬದಲಾಗಿ ಮಾಹಿತಿಯ ಬಗ್ಗೆ ಸತ್ಯಾಸತ್ಯತೆಗಳನ್ನು ಪ್ರತಿಯೊಬ್ಬರಿಂದಲೂ ಪಡೆದುಕೊಳ್ಳುತ್ತಾರೆ. ಒಮ್ಮೆ ಸಮಸ್ಯೆಯ ಮೂಲ ಗೊತ್ತಾದ ನಂತರ ಚಿಕಿತ್ಸೆಯ ಸ್ವರೂಪ ನಿರ್ಧರಿಸಲ್ಪಡುತ್ತದೆ.
ಇದರಲ್ಲಿ ತಂದೆ ಮತ್ತು ತಾಯಿಯರಿಗೆ ಅವರ ಸ್ಥಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕಾದ ವಿಧಿ ವಿಧಾನಗಳ ಬಗ್ಗೆ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ನೀಡಬೇಕಾಗುತ್ತದೆ ಹಾಗೂ ಪರಿವರ್ತನೆ ಬರುವಂತೆ ನೋಡಿಕೊಳ್ಳಬೇಕಾಗುತ್ತದೆ.
ಕೌಟುಂಬಿಕ ಕಾರಣಗಳಿಂದ ಮಗುವಿನಲ್ಲಿ ಸಮಸ್ಯೆ ಉಂಟಾದಾಗ ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆ ಇಡೀ ಕುಟುಂಬಕ್ಕೂ ಅಗತ್ಯವಿರುತ್ತದೆ. ಮಕ್ಕಳು ನಾವು ಹೇಳುವ ಮಾರ್ಗದರ್ಶನವನ್ನು ಅನುಸರಿಸುವಷ್ಟು ಸುಲಭವಾಗಿ ಪೋಷಕರಿಗೆ ಆಗುವುದಿಲ್ಲ. ಏಕೆಂದರೆ ಅವರಿಗೂ ಒಂದು ಹಿನ್ನೆಲೆ ಇರುತ್ತದೆ.
ಅವರಿಗೂ ಒಂದು ಬಾಲ್ಯವಿರುತ್ತದೆ. ಅಲ್ಲಿಂದ ಪಡೆದ ಸಂಸ್ಕಾರ ಅನುಭವ ದೃಷ್ಟಿಕೋನಗಳು ಗಟ್ಟಿಗೊಂಡಿರುವುದರಿಂದ ಸಮಸ್ಯೆಯ ಪರಿಹಾರಕ್ಕೆ ತಮ್ಮದೇ ಮಾರ್ಗ ಸರಿ ಎನ್ನುವ ಮೊಂಡುತನ ಹಠಮಾರಿತನ ಭ್ರಮೆಯೂ ಕೂಡಿರುತ್ತದೆ.
ಹಾಗಾಗಿ ಇಂತಹ ಚಿಕಿತ್ಸೆಗಳಲ್ಲಿ ಪೋಷಕರು ಬದಲಾದ ಹೊರತು ಮಕ್ಕಳ ಸಮಸ್ಯೆ ನಿವಾರಿಸುವುದು ಸುಲಭವಾಗುವುದಿಲ್ಲ.ಆದರೆ ಮಕ್ಕಳ ಮೇಲಿನ ಪ್ರೀತಿ ಕಾಳಜಿಯಿಂದಾಗಿ ಪೋಷಕರು ನಿಧಾನವಾಗಿಯಾದರೂ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಸಕಾರಾತ್ಮಕವಾಗಿ ತಮ್ಮ ಕುಟುಂಬವನ್ನು ರೂಪಿಸಿಕೊಳ್ಳಲು ಪಣ ತೊಡುತ್ತಾರೆ. ಒಮ್ಮೆ ಇಡೀ ಕುಟುಂಬ ಒಟ್ಟಾಗಿ ಪರಿವರ್ತನೆ ಮಾಡಿಕೊಳ್ಳಬೇಕೆಂಬ ಸಕಾರಾತ್ಮಕ ನಿರ್ಧಾರ ತೆಗೆದುಕೊಂಡರೆ ಚಿಕಿತ್ಸೆಯ ನಿಜವಾದ ಯಶಸ್ಸು ಅದರಲ್ಲಿ ಅಡಗಿದೆ. ಅಲ್ಲಿಂದ ಚಿಕಿತ್ಸೆಯ ಮುಂದಿನ ಹಂತ ಸುಲಭವಾಗಿ ಬಿಡುತ್ತದೆ.
ಸಂಸಾರವೆಂದರೆ ಒಬ್ಬರು ಹೆಚ್ಚು ಒಬ್ಬರು ಕಮ್ಮಿ ಎನ್ನುವುದಲ್ಲ. ಪ್ರತಿಯೊಬ್ಬರಿಗೂ ಕೂಡ ಅವರದೇ ಆದಂತಹ ವೈಶಿಷ್ಟ್ಯವಿರುತ್ತದೆ ಹಾಗೂ ಅವರ ಅಗತ್ಯ ಮನೆಯಲ್ಲಿ ಇದ್ದೇ ಇರುತ್ತದೆ. ಹೆಚ್ಚಿನ ಮನೆಯಲ್ಲಿ ಗೃಹಿಣಿಯಾಗಿ ಕಾರ್ಯನಿರ್ವಹಿಸುವ ಹೆಣ್ಣುಮಕ್ಕಳ ಸಾಮರ್ಥ್ಯವನ್ನು ಆರ್ಥಿಕ ಅಳತೆಗೋಲಿನಲ್ಲಿ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ಅವರ ಪರಿಸ್ಥಿತಿಯನ್ನು ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು.
ಎಂದಿಗೂ ಅವರನ್ನು ಆರ್ಥಿಕ ದೃಷ್ಟಿಯಿಂದ ಹೀಯಾಳಿಸುವುದು ಹಾಗೂ ಅವರ ಮನಸ್ಸಿನಲ್ಲಿ ಅಭದ್ರತೆಯನ್ನು ಸೃಷ್ಟಿಸುವುದು ತಪ್ಪು. ಇದರಿಂದ ಇಡೀ ಸಂಸಾರಕ್ಕೆ ಧಕ್ಕೆಯಾಗುತ್ತದೆ. ಪರಸ್ಪರ ಗೌರವಿಸುತ್ತಾ ಭವಿಷ್ಯದ ಸಾಂಸಾರಿಕ ಜೀವನ ಹೇಗಿರಬೇಕು ಎನ್ನುವ ದೂರದೃಷ್ಟಿ ಇಟ್ಟುಕೊಂಡಾಗ ಪರಸ್ಪರರನ್ನು ಗೌರವಿಸುವುದು ಸಾಧ್ಯವಾಗುತ್ತದೆ. ನಿಯಮಿತವಾಗಿ ಚಿಕಿತ್ಸೆ ಮಾರ್ಗದರ್ಶನ ತರಬೇತಿಯಿಂದಾಗಿ ಕೆಲವೇ ತಿಂಗಳುಗಳಲ್ಲಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಇದರಲ್ಲಿನ ಬಹುಪಾಲು ಸಮಸ್ಯೆಗೆ ತಮ್ಮ ಕುಟುಂಬವನ್ನು ಬೇರೆಯವರ ಜತೆ ಹೋಲಿಸಿಕೊಳ್ಳುವುದು ತನ್ನಲ್ಲಿರುವ ದೋಷಗಳನ್ನು ಸರಿ ಎಂದು ಭ್ರಮಿಸಿಕೊಳ್ಳುವುದು ನಿರಂತರವಾಗಿ ಬೇರೆಯವರ ತಪ್ಪುಗಳನ್ನು ಎತ್ತಿ ಆಡುವುದು ಇಂತಹ ಪ್ರಮುಖ ದೋಷಗಳು ಸಂಸಾರದಸುಖವನ್ನು ನಾಶಮಾಡುತ್ತದೆ ಹಾಗೂ ಕಠೋರ, ದುಃಖಮಯಗೊಳಿಸುತ್ತದೆ. ಸಂಸಾರದಲ್ಲಿ ಯಾರು ಸರಿ ಯಾರು ತಪ್ಪು ಎಂದು ನಿರ್ಧರಿಸುವುದಕ್ಕಿಂತ ಯಾವುದು ಇಡೀ ಕುಟುಂಬಕ್ಕೆ ಹಿತ ಎಂದು ಅರಿತು ನಡೆದುಕೊಳ್ಳುವುದು ಮುಖ್ಯ.
ಕೌಟುಂಬಿಕ ಜೀವನದಲ್ಲಿ ಪರಸ್ಪರ ಪ್ರೀತಿ ನಂಬಿಕೆ ಬಹಳ ಮುಖ್ಯ. ಒಬ್ಬರ ಸದ್ಗುಣಗಳನ್ನು ಇನ್ನೊಬ್ಬರು ಮೆಚ್ಚಿ ನುಡಿಯುವುದು ನಡೆಯುವುದು ಗೌರವಿಸುವುದು ಬಾಂಧವ್ಯ ಅಭಿವೃದ್ಧಿಗೆ ಮೂಲ ಸೂತ್ರಗಳು. ಹೆಣ್ಣು-ಗಂಡು ವಿದ್ಯೆ ಅಧಿಕಾರ ಹಣದ ಇತ್ಯಾದಿ ಅಹಂಕಾರದಲ್ಲಿ ವೈಯಕ್ತಿಕ ಬದುಕನ್ನುಬಲಿ ಕೊಡದಿರುವುದು ಜಾಣತನ.