ಅಂಕಣ

ಬಿಹಾರ ರಾಜಕೀಯದ ಚದುರಂಗದಾಟ

ಬಿಹಾರದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತಕ್ಕೆ ನ.6ರಂದು ಮತದಾನ ನಡೆಯಲಿದೆ. ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ಈ ಚುನಾವಣೆ ರಾಜಕೀಯ ಪಕ್ಷಗಳ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ. ಎನ್​ಡಿಎ ಹಾಗೂ ಐಎನ್​ಡಿಐಎ ಮೈತ್ರಿಕೂಟಗಳು ಮತದಾರನ ಮನಗೆಲ್ಲಲು ಎಲ್ಲ ಕಸರತ್ತುಗಳನ್ನೂ ನಡೆಸಿದ್ದು, ಜನತಾ ಜನಾರ್ದನ ಯಾರಿಗೆ ಒಲಿಯಲಿದ್ದಾನೆ ಎಂಬ ಕುತೂಹಲಕ್ಕೆ ನ.14ಕ್ಕೆ ಉತ್ತರ ಸಿಗಲಿದೆ. ಈ ನಡುವೆ ಬಿಹಾರದ ರಾಜಕೀಯ ಎಷ್ಟು ಕ್ಷಿಪ್ರವಾಗಿ ಬದಲಾಗುತ್ತ ಬಂದಿದೆ ಎಂಬುದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಮಾತಿನ ಸಮರ, ವೋಟಿನ ಬೇಟೆ, ನಾಯಕರ ಅವಿಶ್ರಾಂತ ಓಡಾಟ, ರಸ್ತೆಗಳೇ ಇಲ್ಲದ ಕುಗ್ರಾಮಗಳಲ್ಲೂ ಧೂಳೆಬ್ಬಿಸಿ ಓಡಾಡುತ್ತಿರುವ ಕಾರುಗಳು, ಭಾಷಣಗಳ ಅಬ್ಬರ, ಆಶ್ವಾಸನೆಗಳ ಸುರಿಮಳೆ- ಈ ಎಲ್ಲ ದೃಶ್ಯಗಳೂ ಬಿಹಾರದ ಆಮ್​ದಿ್ಮಳು ಕಣ್ಣು-ಕಿವಿ ತುಂಬಿಕೊಂಡು ಕಡೆಗೆ ಮತದಾನವೆಂಬ ಅಸ್ತ್ರವನ್ನು ಯಾರತ್ತ ಚಲಾಯಿಸಬೇಕು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಪ್ರಚಾರ ಮತ್ತಷ್ಟು ತಾರಕಕ್ಕೇರಲಿದೆ. ರಾಜ್ಯದಲ್ಲಿ ಮೊದಲಹಂತದ ಚುನಾವಣೆ ನ.6ರಂದು, ಎರಡನೇ ಹಂತದ ಮತದಾನ ನ.11ರಂದು ನಡೆಯಲಿದ್ದು, ಜನರ ನಾಡಿಮಿಡಿತವನ್ನು ಅರಿಯಲು ಎಲ್ಲ ಪಕ್ಷಗಳೂ ಹರಸಾಹಸ ನಡೆಸುತ್ತಿವೆ. ಆದರೆ, ಕಳೆದ ಮೂರು ದಶಕಗಳ ರಾಜ್ಯ ರಾಜಕೀಯದ ಇತಿಹಾಸ ಗಮನಿಸಿದರೆ ಏಕ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿಲ್ಲ. ಮತದಾರರ ತೀರ್ಪಿನಂತೆ ಮೈತ್ರಿ ಸರ್ಕಾರವೇ ಅಸ್ತಿತ್ವದಲ್ಲಿದ್ದು, ಈ ಬಾರಿಯೂ ಎನ್​ಡಿಎ, ಐಎನ್​ಡಿಐಎ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಇದೆ.

ಬದಲಾದ ಕಾಲಘಟ್ಟ: 20 ವರ್ಷಗಳ ಹಿಂದೆ ಅಂದರೆ 1995ರಲ್ಲಿ ಜನತಾದಳ ಹೋಳಾಗಿ ಸಂಯುಕ್ತ ಜನತಾದಳ ಉದಯಿಸಿದ್ದಾಗ ಅದರ ಸ್ಥಿತಿ ಈಗಿನಂತಿರಲಿಲ್ಲ. ಆಗ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳದ ಭದ್ರಕೋಟೆಯನ್ನು ಯಾರೂ ಭೇದಿಸಲಾರರು ಎಂಬಮಟ್ಟಿಗೆ ಅದರ ಬೇರುಗಳು ಗಟ್ಟಿಯಾಗಿದ್ದವು. ಜೆಡಿಯುನಲ್ಲಿ ಬರಬರುತ್ತ ಅಪಸ್ವರಗಳು, ಬಂಡಾಯಗಳು ಭುಗಿಲೆದ್ದವು. ಈಗ ಜೆಡಿಯು ಸವೋಚ್ಚ ನಾಯಕರೆಂದೇ ಬಿಂಬಿಸಿಕೊಳ್ಳುತ್ತಿರುವ ನಿತೀಶಕುಮಾರ್ ಆಗ ಜೆಡಿಯುನಲ್ಲಿರಲಿಲ್ಲ! ಜಾರ್ಜ್ ಫರ್ನಾಂಡಿಸ್ ಸಹ ತಮ್ಮದೇಪಕ್ಷ (ಸಮತಾ ಪಾರ್ಟಿ) ಕಟ್ಟಿಕೊಂಡಿದ್ದರು. 2000ರಲ್ಲಿ ನಿತೀಶ್ ಮೊದಲಬಾರಿ ಮುಖ್ಯಮಂತ್ರಿ ಪಟ್ಟವೇರಿದ್ದೂ ಸಂಯುಕ್ತ ಜನತಾದಳದಿಂದಲ್ಲ. ಬದಲಿಗೆ, ಸಮತಾ ಪಕ್ಷದಿಂದ. ಅದೂ, ಕೇವಲ ಏಳು ದಿನದ ಅವಧಿಗಾಗಿ!

2003ರಲ್ಲಿಯೂ ಹೊಸ ಧ್ರುವೀಕರಣವಾಗಿತ್ತು. ಸಮತಾ ಪಕ್ಷದಲ್ಲಿದ್ದ ರಘುನಾಥ್ ಝಾ ಸೇರಿದಂತೆ ಕೆಲ ನಾಯಕರು ಬಂಡಾಯವೆದ್ದಾಗ ಲಾಲು ಪ್ರಸಾದರ ರಾಷ್ಟ್ರೀಯ ಜನತಾದಳ ಈ ಬಂಡಾಯಗಾರರಿಗೆ ರತ್ನಗಂಬಳಿ ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿತು. ಈ ಬೆಳವಣಿಗೆ ಸಮತಾ ಪಕ್ಷ, ಲೋಕಜನಶಕ್ತಿ ಪಕ್ಷದಲ್ಲಿ ಸಂಚಲನ ಮೂಡಿಸಿದ್ದವು. ಮತ್ತೆ ಒಗ್ಗಟ್ಟಿನ ಮಂತ್ರ ಕೇಳಲಾರಂಭಿಸಿತು. ಹಾಗೆ, ಜನತಾದಳ ಹೋಳಾಗುವುದು, ಮತ್ತೆ ಕೆಲ ಗುಂಪುಗಳು ಒಂದಾಗುವ ರೂಢಿ ನಡೆದುಕೊಂಡೇ ಬಂದಿದೆ.

2003ರ ಅಕ್ಟೋಬರ್ 30ರಂದು ಜಾರ್ಜ್ ಫರ್ನಾಂಡಿಸ್​ರ ಸಮತಾ ಪಕ್ಷ, ದಿ.ರಾಮವಿಲಾಸ್ ಪಾಸ್ವಾರ್​ರ ಲೋಕ ಜನಶಕ್ತಿ ಪಕ್ಷ ಜೆಡಿಯುನಲ್ಲಿ ವಿಲೀನವಾದವು (ಈಗ ಪಾಸ್ವಾನ್ ಪುತ್ರ ಚಿರಾಗ್ ತಂದೆ ಕಟ್ಟಿದ ಲೋಕಜನಶಕ್ತಿ ಪಕ್ಷದಲ್ಲಿದ್ದಾರೆ). ಇದರ ಪರಿಣಾಮ 2005ರ ಬಿಹಾರ ವಿಧಾನಸಭೆಗೆ ಚುನಾವಣೆಯಲ್ಲಿ ಕಂಡುಬಂತು. ಆರ್​ಜೆಡಿ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಸಂಯುಕ್ತ ಜನತಾದಳ ಶಕ್ತಿ ವೃದ್ಧಿಸಿಕೊಂಡಿತ್ತು. 243 ಸದಸ್ಯಬಲದ ವಿಧಾನಸಭೆಯಲ್ಲಿ ಜೆಡಿಯು 88 ಹಾಗೂ ಬಿಜೆಪಿ 55 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದವು.

ಬದಲಾದ ನಿತೀಶ್: 2010ರಲ್ಲಿ ಮತ್ತೆ ಅಧಿಕಾರ ಸಿಕ್ಕ ಬಳಿಕ ನಿತೀಶ್ ಸಂಪೂರ್ಣ ಬದಲಾಗಿದ್ದರು. ತಾವು ಹೇಳಿದ್ದೇ ಆಗಬೇಕು ಎಂಬ ವಿಪರಿತ ಹಠ ಮೊಂಡುತನಕ್ಕೆ ತಿರುಗಿದಾಗ ಸ್ವಪಕ್ಷೀಯರೇ ವಿರೋಧದ ದನಿ ಎತ್ತಿದ್ದರು. ಶಿಕ್ಷಕರ ನೇಮಕಾತಿ ವಿಷಯದಲ್ಲೂ ನಿತೀಶ್ ಜನರ ಭಾರಿ ಪ್ರತಿರೋಧ ಕಟ್ಟಿಕೊಳ್ಳಬೇಕಾಯಿತು. ಉದ್ರಿಕ್ತ ಶಿಕ್ಷಕಾಕಾಂಕ್ಷಿಗಳು ಬೀದಿ-ಬೀದಿಗಳಲ್ಲಿ ನಿತೀಶ್ ಪ್ರತಿಕೃತಿ ದಹಿಸಿದಾಗ ಲಾಲು ಒಳಗೊಳಗೇ ನಕ್ಕು, ಹಗುರವಾಗಿದ್ದರು. ಪಕ್ಷದ ಅಧ್ಯಕ್ಷ ಶರದ್ ಯಾದವ್​ರನ್ನೂ ಮೂಲೆಗುಂಪು ಮಾಡಿ ಎಲ್ಲ ನಿರ್ಣಯಗಳನ್ನು ತಾವೇ ತೆಗೆದುಕೊಳ್ಳಲು ಆರಂಭಿಸಿದರು. ಬಹಿರಂಗವಾಗಿಯೇ ಶರದ್ ಹೇಳಿಕೆಗಳಿಗೆ ತದ್ವಿರುದ್ಧವಾಗಿ ಹೇಳಿಕೆ ನೀಡತೊಡಗಿದರು.

ಎರಡನೇ ಬಾರಿ ದಕ್ಕಿದ ಗದ್ದುಗೆ

‘ಲಾಲುರ ಜಂಗಲ್​ರಾಜ್​ನಿಂದ ಬಿಹಾರವನ್ನು ಮುಕ್ತಗೊಳಿಸಿದ್ದೇವೆ. ಬಿಹಾರವನ್ನು ಅಭಿವೃದ್ಧಿಪಡಿಸಲು ಇನ್ನೊಮ್ಮೆ ಅವಕಾಶ ನೀಡಿ’ ಎಂದು ಎರಡೂ ಪಕ್ಷಗಳು ಕೇಳಿಕೊಂಡಾಗ 2010ರಲ್ಲಿಯೂ ಜನರು ಆಶೀರ್ವದಿಸಿದರು. 141 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜೆಡಿಯು 115 ಸ್ಥಾನಗಳಲ್ಲಿ ಗೆಲವು ಸಾಧಿಸಿದರೆ, 102 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 91 ಸ್ಥಾನಗಳಲ್ಲಿ ಗೆದ್ದು ಗಮನ ಸೆಳೆಯಿತು. ಬಿಜೆಪಿಯ ಬಲ ವೃದ್ಧಿಸಿದ್ದು ಸ್ಪಷ್ಟಗೊಂಡಿತ್ತು. ನಿತೀಶ್ ಈ ಬೆಳವಣಿಗೆಯಿಂದ ಸ್ವಲ್ಪಮಟ್ಟಿಗೆ ಆತಂಕಗೊಂಡರೂ ಮೈತ್ರಿ ಇದ್ದೇ ಇದೆಯಲ್ಲ ಎಂಬ ಭರವಸೆಯಿಂದ ಮುಂದುವರಿದರು.

ಬದಲಾಗುತ್ತಿದೆ ಬಿಹಾರ

ಇಡೀ ರಾಜ್ಯದ ಚಿತ್ರಣ ಅವಲೋಕಿಸುವುದಾದರೆ ಎರಡು ದಶಕದ ಹಿಂದಿದ್ದ ಭಯಾನಕ ಬಿಹಾರದ ಚಿತ್ರಣ ಈಗಿಲ್ಲ ಎಂಬುದನ್ನು ಪಕ್ಷಾತೀತವಾಗಿ ಎಲ್ಲರೂ ಒಪು್ಪತ್ತಾರೆ. ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆ, ಆರ್ಥಿಕ ಅಭಿವೃದ್ಧಿ ಹೆಚ್ಚಳಗೊಂಡು ಜಿಡಿಪಿ ಏರಿಕೆಯಾಗುತ್ತಿದೆ, ಮೂಲಸೌಕರ್ಯಗಳು ವಿಸ್ತಾರಗೊಳ್ಳುತ್ತಿವೆ, ಕಾನೂನು ಸುವ್ಯವಸ್ಥೆ ಸಮಾಧಾನಕರವಾಗಿದೆ. ರಾಜ್ಯಕ್ಕೆ ಹೂಡಿಕೆಯೂ ಬರುತ್ತಿದೆ. ಕೇಂದ್ರದಲ್ಲೂ ಎನ್​ಡಿಎ ಸರ್ಕಾರ ಇರುವುದರಿಂದ ‘ಡಬಲ್ ಇಂಜಿನ್ ಸರ್ಕಾರ’ದ ಬಲ ಹೆಚ್ಚಿದೆ. ಕೇಂದ್ರದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆ. ಆದರೂ, ಬಿಹಾರದಲ್ಲಿ ನಿರುದ್ಯೋಗ ಪ್ರಮಾಣ ಚಿಂತೆಯ ಪ್ರಮಾಣದಲ್ಲಿದೆ. ಕಾರ್ವಿುಕರ ವಲಸೆ ಮುಂದುವರಿದಿದೆ. ಆರೋಗ್ಯ ವ್ಯವಸ್ಥೆ ಸುಧಾರಣೆ ಆಗಬೇಕಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಬೇಕಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಬೇಕಿದೆ. ಅಂದರೆ, ಮಾಡುವ ಕೆಲಸಗಳು ಬೆಟ್ಟದಷ್ಟಿವೆ. ಅಲ್ಲದೆ, ಸಾರಾಯಿ ನಿಷೇಧ ಮಾಡಿರುವ ಅಡ್ಡಪರಿಣಾಮವಾಗಿ ರಾಜ್ಯದಲ್ಲಿ ನಕಲಿ ಸಾರಾಯಿ ದಂಧೆ ಹೆಚ್ಚಿದ್ದು, ಈ ಪಿಡುಗಿಗೆ ಹಲವರು ಬಲಿಯಾಗಿದ್ದಾರೆ. ಚುನಾವಣೆಗೆ ಇವೆಲ್ಲ ಮುಖ್ಯ ವಿಷಯಗಳೇ ಆದರೂ, ಪ್ರಮುಖವಾಗಿ ಚರ್ಚೆಯಾಗುತ್ತಿರುವುದು ಜಂಗಲ್​ರಾಜ್ ವರ್ಸಸ್ ಸುಶಾಸನ!

ರಾಜಕೀಯ ಕನ್ನಡಕದಲ್ಲಿ ಕಂಡದ್ದೇ ಸರಿ...

ಲೋಕನಾಯಕ ಜಯಪ್ರಕಾಶ್ ನಾರಾಯಣ ಸಿದ್ಧಾಂತವನ್ನೇ ನಿತೀಶ್ ಪ್ರತಿಪಾದಿಸುತ್ತಿದ್ದಾರೆ. ಆದರೆ, ಇತಿಹಾಸದ ಚೋದ್ಯಗಳನ್ನು ಗಮನಿಸಿ. ಇದೇ ಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘ಮೂಲಭೂತವಾದಿ’ ಎಂದು ಜರೆದಿದ್ದರು. ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಸಂಘವೂ ಇದನ್ನು ಬಲವಾಗಿ ವಿರೋಧಿಸಿ ಆಂದೋಲನ ಶುರುಮಾಡಿತು. ಮಾತ್ರವಲ್ಲ, ಜೆಪಿಗೆ ಸಾಥ್ ಸಹ ಕೊಟ್ಟಿತು. ಆಗ ಜೆಪಿ, ‘ಸಂಘ ಮೂಲಭೂತವಾದಿ ಎಂದಾದರೆ ನಾನೂ ಮೂಲಭೂತವಾದಿ’ ಎಂದು ಹೇಳುವ ಮೂಲಕ ಅಚ್ಚರಿ ಉಂಟುಮಾಡಿದ್ದರು.

ಮೂರು ದಶಕದ ಹಿಂದೆ ಲಾಲ್​ಕೃಷ್ಣ ಆಡ್ವಾಣಿ ರಥಯಾತ್ರೆ ಕೈಗೊಂಡ ಸಂದರ್ಭ. ನಿತೀಶ್ ಆಡ್ವಾಣಿ ಅವರನ್ನು ‘ಮೂಲಭೂತವಾದಿ’ ಎಂದರಲ್ಲದೆ, ಜಾತ್ಯತೀತರಲ್ಲದ ಕಾರಣ ಆಡ್ವಾಣಿಯವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಆಡ್ವಾಣಿ ಯಾತ್ರೆಯನ್ನು ಬಿಹಾರದಲ್ಲಿ ನಿಲ್ಲಿಸಿ ಅವರನ್ನು ಬಂಧಿಸಿದ್ದ ಲಾಲು ಪ್ರಸಾದರ ಜತೆಗೆ ನಿತೀಶ್ ಆಗ ಗುರುತಿಸಿಕೊಂಡಿದ್ದರು, ಒಂದೇ ವೇದಿಕೆಯಲ್ಲಿ ಇಬ್ಬರೂ ನಾಯಕರು ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, 2014ರ ಲೋಕಸಭೆ ಚುನಾವಣೆಯ ಮುನ್ನ ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಿದ್ದನ್ನು ವಿರೋಧಿಸಿ, ಬಿಜೆಪಿ ಜತೆಗಿನ 17 ವರ್ಷಗಳ ಮೈತ್ರಿ ಮುರಿದುಕೊಂಡಿದ್ದ ನಿತೀಶ್, ಮೋದಿಯವರ ವಿರುದ್ಧ ಹಲವು ಬಾರಿ ಟೀಕೆ ಮಾಡಿದ್ದರು. ಆದರೆ, ತಾವು ಇಟ್ಟಿದ್ದು ರಾಜಕೀಯವಾಗಿ ಪ್ರಮಾದದ ಹೆಜ್ಜೆ ಎಂಬುದು 2014ರ ಲೋಕಸಭೆ ಚುನಾವಣೆ ಫಲಿತಾಂಶವೇ ನಿತೀಶರಿಗೆ ಸಾಕ್ಷಿಯಾಯಿತು.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು 40ರ ಪೈಕಿ 31 ಸ್ಥಾನಗಳಲ್ಲಿ ಗೆದ್ದು ಬೀಗಿದರೆ (ಬಿಜೆಪಿ-22, ರಾಮ ವಿಲಾಸ್ ಪಾಸ್ವಾನರ ಲೋಕ ಜನಶಕ್ತಿ ಪಕ್ಷ-6 ಹಾಗೂ ರಾಷ್ಟ್ರೀಯ ಲೋಕಸಮತಾ ಪಕ್ಷ-3), ಜೆಡಿಯುಗೆ ಸಿಕ್ಕಿದ್ದು ಕೇವಲ ಎರಡು ಸ್ಥಾನಗಳು. ಪಕ್ಷದ ಕೆಲ ಶಾಸಕರು ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಅವಮಾನಕರ ಸೋಲಿನಿಂದಾಗಿ ಪಕ್ಷದಲ್ಲಿನ ಆಂತರಿಕ ಅಸಮಾಧಾನ ಸ್ಪೋಟಗೊಂಡು, ಪಕ್ಷದ ವಿಭಜನೆಯನ್ನು ತಡೆಯುವ ಸಲುವಾಗಿ ನಿತೀಶ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಅಷ್ಟೇ ಅಲ್ಲ, ಲಾಲು ಪ್ರಸಾದ್ ಯಾದವರ ಆರ್​ಜೆಡಿ ಬೆಂಬಲದಿಂದಾಗಿ ಅಧಿಕಾರದಲ್ಲಿ ಉಳಿಯಬೇಕಾದ ಸ್ಥಿತಿ ನಿರ್ವಣವಾಯಿತು.

ಲೋಕಸಭಾ ಚುನಾವಣೆಯ ಬಳಿಕ ಒಲ್ಲದ ಮನಸ್ಸಿನಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶಕುಮಾರ್ ‘ಛಾಯಾ ಸರ್ಕಾರ’ದಂತೆ ವರ್ತಿಸುತ್ತಿದ್ದರು ಹಾಗೂ ಜೀತನ್ ರಾಮ್ ಮಾಂಝಿಯವರ ಪ್ರತಿ ನಿರ್ಣಯದ ಹಿಂದೆ ನಿತೀಶ್ ಸೂಚನೆ ಇರುತ್ತಿತ್ತು. ಆದರೆ ಮಾಂಝಿ ತಮ್ಮ ವಿರುದ್ಧವೇ ತಿರುಗಿಬಿದ್ದಾಗ ಮುನಿಸಿಕೊಂಡ ನಿತೀಶ್ ಮತ್ತೊಮ್ಮೆ ತಾವೇ 2015ರ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಏರಿದರು. ಆದರೆ, ಇದೇ ನಿತೀಶ್ ಕಳೆದ ಕೆಲ ತಿಂಗಳಲ್ಲೇ ವೇದಿಕೆಯಲ್ಲಿ ಮೋದಿಯವರ ಕಾಲಿಗೆ ಎರಗಿದ ದೃಶ್ಯ ಗಮನ ಸೆಳೆಯಿತು. ಮೋದಿಯವರು ಕೂಡ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ‘ಬಿಹಾರದ ಮಹಿಳೆಯರಿಗೆ ಇಬ್ಬರು ಸೋದರರು. ಒಬ್ಬರು ನರೇಂದ್ರ ಮೋದಿ, ಇನ್ನೊಬ್ಬರು ನಿತೀಶಕುಮಾರ್’ ಎಂದು ಹೇಳುವ ಮೂಲಕ ಮೈತ್ರಿಯ ಶಕ್ತಿಯನ್ನು ಸಾರಲು ಯತ್ನಿಸಿದರು.

ಬಿಹಾರದ ಬಲಾಬಲ (2020ರ ಚುನಾವಣೆ)

ಒಟ್ಟು ಸ್ಥಾನಗಳು: 243, ಎನ್​ಡಿಎ: 125, ಬಿಜೆಪಿ 74, ಜೆಡಿಯು 43, ಎಚ್​ಎಎಮ್ 04, ಇತರರು 04

ಐಎನ್​ಡಿಐಎ: 94, ಆರ್​ಜೆಡಿ 75, ಕಾಂಗ್ರೆಸ್ 19

2023ರಲ್ಲಿ ಬಿಹಾರದಲ್ಲಿ ನಡೆದ ಜಾತಿಗಣತಿ ವರದಿ ಪ್ರಕಾರ ರಾಜ್ಯದ ಜನಸಂಖ್ಯೆ 13,07,25,310. ಗ್ರಾಮೀಣ ಭಾಗದಲ್ಲಿ ನೆಲೆಸಿರುವವರು 89%, ಹಿಂದುಗಳ ಜನಸಂಖ್ಯೆ ಪ್ರಮಾಣ 82.69%, ಮುಸ್ಲಿಮರ ಪ್ರಮಾಣ 16.87%.

ಜಾತಿವಾರು ಪ್ರಮಾಣ, ಇತರ ಹಿಂದುಳಿದ ವರ್ಗ (ಒಬಿಸಿ) 27.12%, ಆರ್ಥಿಕವಾಗಿ ಹಿಂದು ಳಿದ ವರ್ಗ (ಇಬಿಸಿ) ಶೇ.36.01%, ಪರಿಶಿಷ್ಟ ಜಾತಿ 19.65%, ಮುಂದುವರಿದ ವರ್ಗ 15.52%, ಪರಿಶಿಷ್ಟ ಪಂಗಡ 1.68%.

-ರವೀಂದ್ರ.ಎಸ್.ದೇಶಮುಖ್