ಒಂದು ದೇಶದ ಬೆನ್ನೆಲುಬು ಎಂದರೆ ಗಡಿಯನ್ನು ಕಾಯುವ ಯೋಧ, ಅನ್ನವನ್ನು ನೀಡುವ ರೈತ. ಆದರೆ ವಿದ್ಯೆ ಇಲ್ಲದವರು ಮಾತ್ರ ಕೃಷಿ ಕೆಲಸದಲ್ಲಿ ತೊಡಗಬೇಕೆಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಇದನ್ನು ತೊಡೆದುಹಾಕಿ, ಕೃಷಿ ಮಾಡುವ ಅನ್ನದಾತನಿಗೆ ಎಲ್ಲಕ್ಕಿಂತ ಹೆಚ್ಚಿನ ಗೌರವ ಮತ್ತು ಪ್ರಾಮುಖ್ಯತೆ ಸಿಗಬೇಕು ಎಂಬ ಕಾರಣಕ್ಕೆ ಹೊನ್ನಾಳಿ ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹಮ್ಮಿಕೊಂಡಿರುವ ಚಂದ್ರಸ್ಮರಣೆ ಕಾರ್ಯಕ್ರಮ ಹೊಸ ಸಂದೇಶವನ್ನು ಸಾರುತ್ತಿದೆ.
ಹಿರಿಯ ಗುರುಗಳ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಡೆಯುವ ವಾರ್ಷಿಕ ಜಾತ್ರೆಯ ಪ್ರಮುಖ ಭಾಗವಾಗಿ ಇದೇ ಮಾ. 5ರಿಂದ 7ರ ವರೆಗೆ ರಾಜ್ಯಮಟ್ಟದ ಬೃಹತ್ ಕೃಷಿಮೇಳವನ್ನು ಹಮ್ಮಿಕೊಳ್ಳಲಾಗಿದೆ. ಅನ್ನದಾತ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಕುರಿತು ಮೂರು ದಿನಗಳ ಕಾಲ ವಿಶೇಷ ಗೋಷ್ಠಿಗಳು ನಡೆಯಲಿವೆ. ಕರ್ನಾಟಕ ಸರ್ಕಾರ, ತೋಟಗಾರಿಕಾ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ನಡೆಯುವ ಕೃಷಿಮೇಳದಲ್ಲಿ ತಜ್ಞ ಕೃಷಿವಿಜ್ಞಾನಿಗಳು ಪಾಲ್ಗೊಂಡು ಆಧುನಿಕ ವಿಧಾನದಲ್ಲಿ ಮಾಡಬಹುದಾದ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಯೋಗಗುರು ಬಾಬಾ ರಾಮದೇವ್ ಅವರ ನೇತೃತ್ವದಲ್ಲಿ ಮಾ. 5ರಿಂದ 7ರವರೆಗೆ ಪ್ರತಿದಿನ ಬೆಳಗ್ಗೆ ಯೋಗಶಿಬಿರ ನಡೆಯಲಿದೆ.
ದೇಶದಲ್ಲೇ ಬೃಹತ್ ಶಿಲಾಮಠ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿರುವ ಹಿರೇಕಲ್ಮಠವು ದೇಶದಲ್ಲೇ ಬೃಹತ್ ಶಿಲಾಮಠ ಎಂದು ಕೇಂದ್ರ ಪುರಾತತ್ತ್ವ ಇಲಾಖೆಯಿಂದ ದೃಢೀಕರಣಗೊಂಡಿದೆ. ಸುಮಾರು 15 ಅಡಿ ಉದ್ದವಿರುವ 136 ಬೃಹತ್ ಕಲ್ಲಿನ ಕಂಬಗಳುಳ್ಳ 108 ಅಂಕಣದ ಮಠದ ಗೋಡೆ, ಚಾವಣಿ ಸಹ ಕಲ್ಲು ಬಂಡೆಗಳಿಂದ ನಿರ್ವಿುಸಲಾಗಿದ್ದು, ಪ್ರತ್ಯಕ್ಷ ನೋಡಿದಾಗ ಅಚ್ಚರಿಯ ಅನುಭವವಾಗುತ್ತದೆ. ಹವಾನಿಯಂತ್ರಿತ ಮಾದರಿಯಲ್ಲಿ ಎರಡು ಪದರಗಳಲ್ಲಿ ನಿರ್ವಣಗೊಂಡಿರುವ ಕಲ್ಲಿನ ಚಾವಣಿ ನಿಜಕ್ಕೂ ಪುರಾತನ ಭಾರತೀಯ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿ. 11ನೇ ಶತಮಾನದಲ್ಲಿ ನಿರ್ವಣಗೊಂಡಿರುವ ಮಠವು ಅದರ ಕರ್ತೃ ಚನ್ನಪ್ಪಸ್ವಾಮಿಗಳ ಹೆಸರಿನಿಂದಲೇ ಪರಿಚಿತ.
ಶ್ರೀಶೈಲಪೀಠದ ಜಗದ್ಗುರು ಜಡೆಯ ಶಂಕರ ಭಗವತ್ಪಾದರು ಒಣಗಿದ ಮರವೊಂದರಲ್ಲಿ ಹೊನ್ನಿನ ಹೂವು ಸುರಿಸಿ ಪವಾಡ ಮೆರೆದಿದ್ದರಿಂದ ಈ ಊರಿಗೆ ಹೊನ್ನರಳಿ ಎಂಬ ಹೆಸರು ಬಂತು. ಮುಂದೆ ಅದೇ ಹೊನ್ನಾಳಿ ಎಂದಾಗಿದೆ. ಜಡೆಯ ಶಂಕರ ಭಗವತ್ಪಾದರು ಇಲ್ಲಿಯೇ ಜೀವಂತ ಸಮಾಧಿಯಾಗಿದ್ದು, ಅವರ ಶಿಷ್ಯರಾದ ಚನ್ನಪ್ಪಸ್ವಾಮಿಯವರಿಂದ ಇಲ್ಲಿಯವರೆಗೆ 16 ಗುರುಗಳು ಈ ಮಠದ ಪೀಠಾಧಿಪತಿಗಳಾಗಿದ್ದಾರೆ. ಸದ್ಯದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು 17ನೆಯವರು.
ಶ್ರೀ ಚಂದ್ರಶೇಖರ ಶಿವಾಚಾರ್ಯಶ್ರೀ ಪ್ರಶಸ್ತಿ: ಹೊನ್ನಾಳಿ ಹಿರೇಕಲ್ಮಠದ 16ನೇ ಪಟ್ಟಾಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳನ್ನು ಈ ಭಾಗದ ಭಕ್ತರು ನಡೆದಾಡುವ ದೇವರು ಎಂದು ಕರೆಯುತ್ತಿದ್ದರು. ಹೊನ್ನಾಳಿ ಕ್ಷೇತ್ರವನ್ನು ಶಿಕ್ಷಣಕಾಶಿಯನ್ನಾಗಿ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಮಾ. 7ರಂದು ನಡೆಯುವ ಶ್ರೀಗಳ ಐದನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ 2020ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ತಮ್ಮ ಪರಂಪರೆಯಲ್ಲಿದ್ದ ಒಡೆಯರ್ ಎಂಬ ಪದವಿಯನ್ನು ಮೈಸೂರು ಮಹಾರಾಜರಿಗೆ ನೀಡಿದವರು ಹೊನ್ನಾಳಿ ಚನ್ನಪ್ಪಸ್ವಾಮಿಗಳು. ಇಂದಿಗೂ ಗುರುಮನೆ ಮತ್ತು ಅರಮನೆ ಎರಡೂ ಪರಂಪರೆಯಲ್ಲಿ ಒಡೆಯರ್ ಪದಬಳಕೆ ಮುಂದುವರಿದಿದೆ. ಅದರ ದ್ಯೋತಕವಾಗಿ ಹಾಲಿ ಮಹಾರಾಜ ಯದುವೀರ ಒಡೆಯರ್ ಅವರು ಮಾ. 6ರಂದು ಕಾಶಿ, ಶ್ರೀಶೈಲ ಮತ್ತು ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಧರ್ಮಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾ. 5ರಂದು ಕೃಷಿಮೇಳ ಉದ್ಘಾಟನೆ ಹಾಗೂ ಯೋಗಶಿಬಿರಕ್ಕೆ ಚಾಲನೆ ದೊರೆಯಲಿದ್ದು, 6 ಮತ್ತು 7ರಂದು ಕೃಷಿಗೋಷ್ಠಿ, ಕವಿಗೋಷ್ಠಿಗಳು ನಡೆಯಲಿವೆ. ಅಂದು ರಾತ್ರಿ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಅರ್ಜುನ ಜನ್ಯ ಮತ್ತು ಕುರಿಗಾಹಿ ಹನುಮಂತ ಅವರ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಖ್ಯಾತ ನಿರ್ದೇಶಕ ಪ್ರೇಮ್ ಮತ್ತು ನಿರೂಪಕಿ ಅನುಶ್ರೀ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
| ಪ್ರಶಾಂತ ರಿಪ್ಪನ್ಪೇಟೆ