ಮೈಸೂರು: ಬಿಗ್ ಬಾಸ್ ಸೀಸನ್-5ರ ವಿಜೇತ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬುಧವಾರ ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಪ್ರವೇಶಿಸಿದರು. ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ನಲ್ಲಿ ಬುಧವಾರ ಬೆಳಗ್ಗೆ 8.15 ರಿಂದ 9 ಗಂಟೆಯೊಳಗೆ ಇದ್ದ ಶುಭ ಮುಹೂರ್ತದಲ್ಲಿ ನಿವೇದಿತಾ ಗೌಡ ಕೊರಳಿಗೆ ಚಂದನ್ ಶೆಟ್ಟಿ ತಾಳಿ ಕಟ್ಟಿದರು.
ಒಕ್ಕಲಿಗ ಮತ್ತು ಶೆಟ್ಟಿ ಸಂಪ್ರದಾಯದಂತೆ ಈ ಮದುವೆ ನಡೆದಿದ್ದು, ವಿವಾಹಕ್ಕೆ ಕುಟುಂಬಸ್ಥರು, ಆತ್ಮೀಯರು ಹಾಜರಾಗಿದ್ದರು. ಮಂಗಳವಾರ ಸಂಜೆ ರಾಯಲ್ ಥೀಮ್ ನಲ್ಲಿ ನಡೆದ ರಿಸೆಪ್ಷನ್ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ, ಅಕುಲ್ ಬಾಲಾಜಿ, ನಿರ್ದೇಶಕ ಭರ್ಜರಿ ಚೇತನ್ಕುಮಾರ್ ಸೇರಿ ಸಾಕಷ್ಟು ಮಂದಿ ನವದಂಪತಿಗೆ ಶುಭಾಶಯ ಕೋರಿದರು. ನಿವೇದಿತಾ ಕುಟುಂಬದವರು ಚಂದನ್ ಶೆಟ್ಟಿಗೆ ಉಡುಗೊರೆಯಾಗಿ ಜಾಗ್ವಾರ್ ಕಾರನ್ನು ನೀಡಿದ್ದಾರೆ. ಕಾರನ್ನು ಕಲ್ಯಾಣ ಮಂಟಪದ ಎದುರು ನಿಲ್ಲಿಸಿ ಚಂದನ್ಶೆಟ್ಟಿಗೆ ಸರ್ಪ್ರೖೆಸ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಿವೇದಿತಾ ‘ಬಿಗ್ ಬಾಸ್ ಇಲ್ಲದೇ ಹೋಗಿದ್ದರೆ, ನಾವಿಬ್ಬರೂ ಪರಿಚಯವಾಗುತ್ತಿರಲಿಲ್ಲ. ವಿಶೇಷ ಎಂದರೆ ಬಿಗ್ಬಾಸ್ ಟ್ರೋಫಿಯೂ ನನಗೆ ಸಿಕ್ಕಿತು. ಜತೆಗೆ ವಿನ್ನರ್ ಕೂಡ ಸಿಕ್ಕಿದ್ದಾರೆ ಎಂದು ಹೇಳಿದರು. ಬಿಗ್ಬಾಸ್ ಸೀಸನ್-5ರಲ್ಲಿ ಸ್ಪರ್ಧಿಯಾಗಿದ್ದಾಗ ಇಬ್ಬರಿಗೂ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಯಾಗಿ ಪರಿವರ್ತನೆಗೊಂಡು ದಸರಾ ಸಮಯದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು.