ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರದ ಬಜೆಟ್ ಮಂಡಿಸಲಿದ್ದಾರೆ. ರಾಜ್ಯ ಹೆಚ್ಚಿನ ನಿರೀಕ್ಷೆ ಹೊಂದಿದ್ದು ಅದಕ್ಕೆ ಸಕಾರಣಗಳಿವೆ. ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಆಯ್ಕೆಯಾಗಿರುವುದು ಕರ್ನಾಟಕದಿಂದ, ಅದರ ಜತೆಗೆ ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ಸಹ ಇರುವುದರಿಂದ ಸಹಜವಾಗಿಯೇ ಕೇಂದ್ರ ಸರ್ಕಾರ ಹಿಂದೆ ಬೇರೆ ಬೇರೆ ರಾಜ್ಯಗಳಿಗೆ ನೀಡಿದಂತೆ ತನ್ನ ಕೃಪಕಟಾಕ್ಷ ಬೀರಬಹುದೆಂಬುದು ನಿರೀಕ್ಷೆಯಾಗಿದೆ.
ಕಳೆದ ಕೆಲವು ಆಯವ್ಯಯಗಳಲ್ಲಿ ರಾಜ್ಯಕ್ಕೆ ನಿರೀಕ್ಷಿತ ನೆರವು ಸಿಕ್ಕಿಲ್ಲ. ಈ ಬಾರಿ ಆ ಎಲ್ಲ ನೋವು ಮರೆಯಾಗಬಹುದು ಎಂಬುದು ರಾಜ್ಯದ ಜನರ ಆಶಯವಾಗಿದೆ. ಮೂಲಸೌಕರ್ಯ, ತೆರಿಗೆ ಪಾಲು, ಹೊಸ ಯೋಜನೆ, ರೈಲ್ವೆ ಹೀಗೆ ವಿವಿಧ ಕ್ಷೇತ್ರದಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ಸಿಗಬಹುದೆಂದು ಎದುರು ನೋಡಲಾಗುತ್ತಿದೆ. ಆದಾಯ ತೆರಿಗೆ ಮತ್ತು ಜಿಎಸ್ಟಿ ನೀಡುವಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ವಾರ್ಷಿಕ 90 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಮೊತ್ತ ರಾಜ್ಯದಿಂದ ಕೇಂದ್ರಕ್ಕೆ ಸಂದಾಯವಾಗುತ್ತಿದೆ. ಇದರಲ್ಲಿ ರಾಜ್ಯಕ್ಕೆ ವಾಪಸ್ ಬರುವುದು ಶೇ.42 ಮಾತ್ರ. ಈ ಮೊತ್ತವನ್ನು ಹೆಚ್ಚು ಮಾಡಬೇಕೆಂಬ ಬೇಡಿಕೆ ಮೊದಲಿನಿಂದಲೂ ಇದೆ. ಜಿಎಸ್ಟಿ ಪರಿಹಾರ 2023ಕ್ಕೆ ನಿಂತು ಹೋಗುತ್ತದೆ. ಅದನ್ನು ಇನ್ನೂ 5 ವರ್ಷ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ಇದೆ. ಬಹುತೇಕ ರಾಜ್ಯಗಳ ಬೇಡಿಕೆ ಇದೆ ಆಗಿದೆ. ಆದರೆ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬಜೆಟ್ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಬಹುದೆಂಬ ನಿರೀಕ್ಷೆ ಮಾಡಲಾಗುತ್ತಿದೆ.
ಕಚ್ಚಾ ವಸ್ತು ಬೆಲೆ ಹೆಚ್ಚಳ: ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ತತ್ತರಿಸಿವೆ. ಕಸ್ಟಮ್ ಡ್ಯೂಟಿ ಹಾಗೂ ಅಮದು ಸುಂಕ ಕಡಿಮೆ ಮಾಡಬೇಕು ಎಂಬುದು ಇರುವ ಈ ವಲಯದ ಪ್ರಮುಖ ಬೇಡಿಕೆಯಾಗಿದೆ. ರಾಜ್ಯದಲ್ಲಿ ಇರುವ ಸಣ್ಣ ಕೈಗಾರಿಕೆಗಳು ಇದರಿಂದ ಮಾತ್ರ ಬದುಕಲು ಸಾಧ್ಯವಾಗುತ್ತದೆ.
ರೆಡ್ ಜೋನ್ನಲ್ಲಿದೆ...: ಪ್ರಕೃತಿ ವಿಕೋಪದಲ್ಲಿ ರಾಜ್ಯ ರೆಡ್ ಜೋನ್ನಲ್ಲಿದೆ. ಸತತ ಬರ ಅಥವಾ ಪ್ರವಾಹಕ್ಕೆ ತುತ್ತಾಗುತ್ತಿದೆ. ಶಾಶ್ವತ ಪರಿಹಾರ ಯೋಜನೆಗಳಿಗೆ ಕೇಂದ್ರದಿಂದ ನೆರವು ಬೇಕಾಗಿದೆ. ಉತ್ತರ ಕರ್ನಾಟಕದಲ್ಲಿ ಅನೇಕ ಹಳ್ಳಿಗಳ ಸ್ಥಳಾಂತರ ಅನಿವಾರ್ಯವಾಗಿದೆ.
ಬೆಂಗಳೂರಿಗೆ ಬೇಕು ನೆರವಿನ ಮಹಾಪೂರ: ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 25 ಸಾವಿರ ಕೋಟಿ ರೂ.ಗಳಿಗೆ ಬೇಡಿಕೆ ಸಲ್ಲಿಸಿ ವರ್ಷಗಳೇ ಕಳೆದು ಹೋಗಿವೆ. ಕೇಂದ್ರದಿಂದ ಈ ಬಾರಿಯಾದರೂ ಐಟಿ ಕ್ಯಾಪಿಟಲ್, ಸ್ಟಾರ್ಟಪ್ ಕ್ಯಾಪಿಟಲ್ ಎಂಬ ಹೆಗ್ಗಳಿಕೆಯ ನಗರಕ್ಕೆ ಹೆಚ್ಚಿನ ನೆರವು ದೊರಕುವುದೇ ಎಂಬುದನ್ನು ಎದುರು ನೋಡಲಾಗುತ್ತಿದೆ.
ನೀರಾವರಿ ಯೋಜನೆಗಳು: ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ನೀರಾವರಿ ಯೋಜನೆಗಳಿಗೆ ವಿಶೇಷ ನೆರವು ನೀಡುವ ಕಾರ್ಯಕ್ರಮ ಜಾರಿ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ನಿಂತು ಹೋಗಿದೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಮುಗಿಸಲು 2.50 ಲಕ್ಷ ಕೋಟಿ ರೂ. ಅಗತ್ಯವಿದೆ. ಸದ್ಯದ ಮಟ್ಟಿಗೆ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಸೇರಿ ಕೆಲವನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಣೆ ಮಾಡುವುದೇ ಪರಿಹಾರವೆಂದು ಒತ್ತಡ ತರುತ್ತಿದೆ. ಆ ನಿಟ್ಡಿನಲ್ಲಿ ಕೇಂದ್ರ ರಾಜ್ಯದ ಕೈ ಹಿಡಿಯಬೇಕಾಗಿದೆ. ಮೇಕೆದಾಟು, ಮಹದಾಯಿ, ಕೃಷ್ಣಾ ಮೂರನೇ ಹಂತ ಸೇರಿ ಅನೇಕ ಯೋಜನೆಗಳಿಗೆ ಕೇಂದ್ರದ ಯೋಜನೆ ನಿರೀಕ್ಷೆ ಮಾಡಲಾಗುತ್ತಿದೆ.
ಅನೇಕ ರೈಲ್ವೆ ಯೋಜನೆಗಳು ದಶಕಗಳಿಂದ ಬಾಕಿ ಉಳಿದಿವೆ. ಹಣಕಾಸಿನ ನೆರವಿಲ್ಲದೆ ಅನೇಕ ಯೋಜನೆಗಳು ಕುಂಟುತ್ತಿವೆ. ನೆರೆ ರಾಜ್ಯಗಳಲ್ಲಿ ಆಗಿರುವಷ್ಟು ರೈಲ್ವೆ ಅಭಿವೃದ್ಧಿಯಾಗಿಲ್ಲ. ಈ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿದ್ದೇವೆ. | ಡಾ. ಪ್ರಕಾಶ್ ಮಂಡೋತ್ ರೈಲ್ವೆ ತಜ್ಞರು ಕೇಂದ್ರದಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಈ ಬಜೆಟ್ನಲ್ಲಿ ಅವೆಲ್ಲವೂ ಈಡೇರುತ್ತವೆ ಎಂಬ ವಿಶ್ವಾಸವಿದೆ. ಮೂಲಸೌಕರ್ಯ, ಎಂಎಸ್ಎಂಇ ಕ್ಷೇತ್ರಗಳಲ್ಲಿ ಅನೇಕ ಯೋಜನೆಗಳು ಬಾಕಿ ಇವೆ. ರಾಜ್ಯದವರೇ ಆಗಿರುವ ನಿರ್ಮಲಾ ಸೀತಾರಾಮನ್ ನೆರವಿಗೆ ಬರುತ್ತದೆ ಎಂದು ನಂಬಿದ್ದೇವೆ. | ಐ.ಎಸ್.ಪ್ರಸಾದ್ ಅಧ್ಯಕ್ಷ, ಎಫ್ಕೆಸಿಸಿಐ