ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮಕ್ಕೆ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಭೇಟಿ ನೀಡಿ ಗ್ರಾಮಸ್ಥರ ಬೇಡಿಕೆ ಆಲಿಸಿ ಚರ್ಚಿಸಿದರು. ಸಿದ್ದಯ್ಯ ಗುರುವಿನ್, ಸಹದೇವಯ್ಯ ಗುರವಿನ್, ಹುಚ್ಚಯ್ಯ ಗುರವಿನ್, ಪರಪ್ಪ ಬಾದವಾಡಗಿ, ಮಹಾಂತಪ್ಪ ಕುಷ್ಟಗಿ, ಸಿದ್ದಪ್ಪ ಹೊಳಿ, ಬಸವರಾಜ ಬಾದವಾಡಗಿ, ತಿಮ್ಮಣ್ಣ ಮಾನೆ, ಮಹಾಂತಯ್ಯ ಹಿರೇಮಠ, ಪ್ರಚಂಡಪ್ಪ ಸರೂರ, ಸಿದ್ದು ತೊಂಡಿಹಾಳ ಇತರರಿದ್ದರು. 
ಅಂಕಣ

ಸರ್ಕಾರಿ ಭೂಮಿ ಅತಿಕ್ರಮಿಸಿದರೆ ಕೇಸ್

ಮುದ್ದೇಬಿಹಾಳ (ಗ್ರಾ): ಸರ್ಕಾರಿ ಭೂಮಿ ಅತಿಕ್ರಮಿಸಿದಲ್ಲಿ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರು ಎಚ್ಚರಿಕೆ ನೀಡಿದ್ದು, ಈಗಾಗಲೇ ಸರೂರ ಗ್ರಾಮದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿ ಮರಳಿ ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ಸಮೇತ ಸರೂರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು, ಸರ್ಕಾರದ ಭೂಮಿ ಅತಿಕ್ರಮಿಸುವುದು ಕಾನೂನು ರೀತಿಯಲ್ಲಿ ಅಪರಾಧವಾಗುತ್ತದೆ. ಈಗಾಗಲೇ ಅತಿಕ್ರಮಣ ಮಾಡಿಕೊಂಡಿದ್ದರೆ ಕೂಡಲೇ ತೆರವುಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ವರದಿ ಆಧರಿಸಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ಈ ವೇಳೆ ತಮ್ಮ ಬೇಡಿಕೆ ಮಂಡಿಸಿದ ಗ್ರಾಮಸ್ಥರು, ಸರೂರ ಗ್ರಾಮದಲ್ಲಿ 130 ಎಕರೆಗೂ ಹೆಚ್ಚು ವಿಸ್ತಾರದ ಗುಡ್ಡ ಇದೆ. ಇದನ್ನು ಹಿರೇಗುಡ್ಡ ಎಂದೇ ಕರೆಯಲಾಗುತ್ತದೆ. ಇಲ್ಲಿ ಗಿಡಗಳನ್ನು ನೆಟ್ಟರೆ ಪರಿಸರ ಹೆಚ್ಚಾಗುವುದು ಮಾತ್ರವಲ್ಲದೆ ನಮ್ಮೂರಿನ ಸರ್ಕಾರಿ ಭೂಮಿಯೂ ಅತಿಕ್ರಮಣದಿಂದ ರಕ್ಷಿಸಿದಂತಾಗುತ್ತದೆ. ಸರ್ಕಾರದ ಎಲ್ಲ ಭೂಮಿಯನ್ನು ಸಮೀಕ್ಷೆ ಮಾಡಿ, ಬೌಂಡರಿ ಗುರುತಿಸಿ ಮುಂದಿನ ದಿನಗಳಲ್ಲಿ ಅತಿಕ್ರಮಣ ಆಗುವುದನ್ನು ತಡೆಗಟ್ಟಬೇಕು. ಈ ಭೂಮಿಯನ್ನು ಆದಷ್ಟು ಬೇಗ ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿ ಅಲ್ಲಿ ಗಿಡಗಳನ್ನು ನೆಡಲು ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೆ ಮುಂದಿಟ್ಟರು.

ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಅವರು, ಕಂದಾಯ ಇಲಾಖೆಯಿಂದ ಲ್ಯಾಂಡ್ ಬೀಟ್ ಮಾಡಿ ಸರ್ಕಾರಿ ಭೂಮಿಯ ಸರಹದ್ದು ಗುರುತಿಸಿ ಒತ್ತುವರಿ ಆಗದಂತೆ ನೋಡಿಕೊಳ್ಳಲು ಕ್ರಮ ಕೈಗೊಂಡಿದ್ದೇವೆ. ಸರೂರ ಗ್ರಾಮದ ಸರ್ಕಾರಿ ಜಮೀನು ಅರಣ್ಯ ಇಲಾಖೆಯವರ ಸುಪರ್ದಿಗೆ ನೀಡುತ್ತೇವೆ. ಆದರೆ ಈ ಕೆಲಸ ಕೇವಲ ನಮ್ಮ ಕಂದಾಯ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆಯವರದ್ದಾಗಬಾರದು. ಊರಿನ ಹಿರಿಯರು, ಯುವಕರು ಕೂಡ ಗಿಡ ಬೆಳೆಸಲು ಮುಂದಾಗಬೇಕು. ಈಗಾಗಲೇ ಹಚ್ಚಿದ ಮತ್ತು ಮುಂದೆ ಹಚ್ಚುವ ಗಿಡಗಳನ್ನು ರಕ್ಷಿಸಲು ಒಗ್ಗಟ್ಟು ಪ್ರದರ್ಶಿಸಬೇಕು. ನೀವೆಲ್ಲರೂ ಮನಸ್ಸು ಮಾಡಿದರೆ ಸರ್ಕಾರಿ ಭೂಮಿಯೂ ಉಳಿಯುತ್ತದೆ, ಪರಿಸರ ರಕ್ಷಣೆಯ ಜೊತೆಗೆ ಪರಿಸರದ ಬೆಳವಣಿಗೆಯೂ ಆಗುತ್ತದೆ ಎಂದರು.

ಊರಿನ ಹಿರಿಯರು, ಮುಖಂಡರಾದ ಸಿದ್ದಯ್ಯ ಗುರವಿನ್, ಸಹದೇವಯ್ಯ ಗುರವಿನ್, ಹುಚ್ಚಯ್ಯ ಗುರವಿನ್, ಪರಪ್ಪ ಬಾದವಾಡಗಿ, ಮಹಾಂತಪ್ಪ ಕುಷ್ಟಗಿ, ಸಿದ್ದಪ್ಪ ಹೊಳಿ, ಬಸವರಾಜ ಬಾದವಾಡಗಿ, ತಿಮ್ಮಣ್ಣ ಮಾನೆ, ಮಹಾಂತಯ್ಯ ಹಿರೇಮಠ, ಆರ್.ವೈ.ವಾಲಿಕಾರ, ಪ್ರಚಂಡಪ್ಪ ಸರೂರ, ಸಿದ್ದು ತೊಂಡಿಹಾಳ, ನಿಖಿಲ್ ಮಲಗಲದಿನ್ನಿ ಇತರರಿದ್ದರು.

ಇದೇ ವೇಳೆ ಈಚೆಗೆ ಮಳೆಯಿಂದ ಹಾನಿಗೀಡಾದ ಮನೆಗಳನ್ನು ತಹಸೀಲ್ದಾರ್ ಅವರು ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಗ್ರಾಮಲೆಕ್ಕಾಧಿಕಾರಿ ಇನ್ನಿತರರೊಂದಿಗೆ ಪರಿಶೀಲಿಸಿದರು.

‘ವಿಜಯವಾಣಿ’ಯಲ್ಲಿ 2024ರ ಜೂನ್. 29ರ ಸಂಚಿಕೆಯಲ್ಲಿ ‘ಸರೂರ ಹಿರೇಗುಡ್ಡದಲ್ಲಿ ಗಿಡಗಳನ್ನು ನೆಡುವ ಕಾರ್ಯ: ಪರಿಸರ ಪ್ರೇಮಿಗಳ ವ್ಯಾಪಕ ಬೆಂಬಲ: ಬೇಡಿಕೆಗೆ ಆಂದೋಲನ ರೂಪ’ ಶಿರೋನಾಮೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿ ತಹಸೀಲ್ದಾರ್ ಅವರು ಈ ಭೇಟಿ ನೀಡಿದ್ದರು.