ಅಂಕಣ

ವಿಚಾರಕ್ರಾಂತಿಯ ಕಿಡಿ ಹೊತ್ತಿಸಿದ ಮಹಾಮಾನವ

ಇದು ಬುದ್ಧ ಹುಟ್ಟಿದ 2603ನೇ ವರ್ಷ (ಜನನ: ಕ್ರಿ.ಪೂ 581 ಮಾರ್ಚ್​ 30 ಶುಕ್ರವಾರ). ಜಗತ್ತಿನ ಮಹಾಮಾನವ, ಜ್ಞಾನಜ್ಯೋತಿ ಮತ್ತು ಭಾರತದಲ್ಲಿ ವಿಚಾರಕ್ರಾಂತಿಯ ಕಿಡಿ ಹೊತ್ತಿಸಿದ ಆಚಾರ್ಯಪುರುಷ ಎಂದೆಲ್ಲ ಹೆಸರಾದ ಗೌತಮ ಬುದ್ಧ ಹುಟ್ಟಿದ್ದು, ಬೋಧಿಜ್ಞಾನ ಹೊಂದಿದ್ದು ಮತ್ತು ಪರಿನಿರ್ವಾಣ ಹೊಂದಿದ್ದು ಈ ಮೂರೂ ಸಂದರ್ಭಗಳು ವೈಶಾಖ ಪೂರ್ಣಿಮೆಯ ಅಮೃತ ಗಳಿಗೆಯಲ್ಲಿ. ಹಾಗಾಗಿ ಬೌದ್ಧರಿಗೆ ವೈಶಾಖ ಪೂರ್ಣಿಮೆ ಪವಿತ್ರವಾದ ದಿನ. ಇಂಥ ಮಹಾನುಭಾವನನ್ನು ಕುರಿತು ಬರೆದ ಕವಿಗಳಿಗೆ ಲೆಕ್ಕವಿಲ್ಲ. ಬುದ್ಧನ ಬಗ್ಗೆ ಎಲ್ಲರಿಗಿಂತ ಮೊದಲು "ಬುದ್ಧಚರಿತೆ' ಎಂಬ ಮಹಾಕಾವ್ಯವನ್ನು ಬರೆದ ಕವಿ ಅಶ್ವೂಷನಾದರೆ ನಮ್ಮ ಕನ್ನಡದ ಕವಿ ಎಚ್​.ಎಸ್​ ವೆಂಕಟೇಶಮೂರ್ತಿ ಮಹತ್ವದ ಕಾವ್ಯ ರಚಿಸಿದ ಈಚಿನ ಕವಿ. ಈ ಮಧ್ಯೆ ಗೋವಿಂದ ಪೈ, ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿ, ಎಲ್ಲರೂ ಬುದ್ಧನಿಗೆ ಸಂಬಂಧಿಸಿದಂತೆ, ಕವನ, ನಾಟಕ, ಖಂಡಕಾವ್ಯಗಳನ್ನು ಬರೆದಿದ್ದಾರೆ.

ಶುದ್ಧೋಧನನ ಅರಸಿ ಮಾಯಾದೇವಿ ಕಪಿಲವಸ್ತುವಿನಿಂದ ಬಸುರಿ ಸಹಜವಾದ ಬಯಕೆ ಉಂಟಾಗಿ ತಂಗಿ ಗೌತಮಿ ಮತ್ತಿತರ ಸಖಿಯರೊಂದಿಗೆ ಲುಂಬಿನೀ ವನಕ್ಕೆ ಹೋಗಿದ್ದಾಳೆ. ಅಲ್ಲಿ ವಸಂತದಲ್ಲಿ ವೈಶಾಖ ಹುಣ್ಣಿಮೆಯ ಚಂದ್ರಕಿರಣಗಳು ಎಲ್ಲೆಡೆ ಪಸರಿಸಿರುವಂದು ಅರಳಿದ ಹೂವುಗಳ ಭಾರದಿಂದ ಕೆಳಕ್ಕೆ ಜಗ್ಗಿರುವ "ಸಾಲವೃಕ್ಷದ ಬಾಗು ಹರೆಗೆ ಉಯ್ಯಾಲೆಯಾಡಲಾಶಿಸುತ' ತೂಗುಬಿದ್ದಿರುವ ಸಮಯದಲ್ಲಿ ರೆಂಬೆ ಮೇಲೆ ಕೆಳಗೆ ತೂಗುತ್ತಿದ್ದಾಗ "ಅದೆ ಅಮೃತ ಗಳಿಗೆ! ನೆಲವಲ್ಲ ಬಾನೂ ಅಲ್ಲ! /ನಡುವೆ ಹಕ್ಕಿಯ ಕೊಕ್ಕಿನಿಂದ ಜಾರಿದ ಹಾಗೆ ಹಾಡು ಲುಂಬಿನಿಯಲ್ಲಿ ಮತ್ತೊಬ್ಬ ಪೂರ್ಣಶಶಿ/ಹುಟ್ಟಿದನೊ ಎಂಬಂತೆ ಅವತರಿಸಿದನು ಬೋಧಿ/ಸತ್ವ! ಮುಗಿಲಿನ ತೆರೆ ಹುಣ್ಣಿಮೆಯ ಚಂದ್ರನಿಗೆ!/ ಆಹ! ಅವತರಿಸಿತ್ತು ಸಮಶ್ರುತಿಯ ಸಮಲಯದ/ಬಿದುರ ಕೊಳಲಿಂದುದುವ ಆಪ್ತಗಿತೆಯ ಹಾಗೆ. (ಬುದ್ಧ ಚರಣ&ಎಚ್​. ಎಸ್​. ವಿ) ಬುದ್ಧನಾಗುವ ಮುನ್ನ ತನ್ನ 29ನೇ ವರ್ಷದಲ್ಲಿ ಸಿದ್ಧಾರ್ಥ "ಮಡದಿ, ಮನೆಮಾರು ರಾಜ್ಯಗಿಜ್ಯ' ತೊರೆದು ಹೊರಟಿದ್ದು ಕೂಡ ಬೇಂದ್ರೆ ವರ್ಣಿಸಿದಂತೆ ಜಗವೆಲ್ಲ ಗಾಢನಿದ್ರೆಯಲ್ಲಿ ಮುಳುಗಿದ್ದಾಗ. ವೈಶಾಖ ಪೂರ್ಣಿಮೆಯ (ಕ್ರಿ.ಪೂ. 546 ಏಪ್ರಿಲ್​ 3 ಬುಧವಾರ) ಮಹಾರಾತ್ರಿಯ ಕಡೆಯ ಯಾಮದಲ್ಲಿ ಬೋಧಿಜ್ಞಾನವನ್ನು ಪಡೆದು ಸಿದ್ಧಾರ್ಥ ಸರ್ವತ್ವವನ್ನು ಹೊಂದಿದ ಸಂದರ್ಭ ಕೂಡ ಧರೆ ಗಾಢನಿದ್ರೆಯಲ್ಲಿ "ಮತ್ತ ರಮಣಿಯ ಹಾಗೆ' ಮುಳುಗಿದ್ದಾಗ. ಆಗ ಸಿದ್ಧಾರ್ಥನಿಗೆ 36ನೇ ವರ್ಷ. ಅಶ್ವೂಷನ ಕಾವ್ಯ ಅದನ್ನು ಹೀಗೆ ಚಿತ್ರಿಸಿದೆ:

ಮತ್ತ ರಮಣಿವೊಲಿತ್ತು ಧಾರಿಣಿ ಬುದ್ಧನಾದಂದಾತನು

ಸಿದ್ಧರೊಂದಿಗೆ ದಿಕ್ಕು ಬೆಳಗಿತು ದೇವದುಂದುಭಿ ಮೊಳಗಿತು

ಮೋಡವಿಲ್ಲದೆ ಮಳೆಯು ಬಂದಿತು ಗಾಳಿ ಮೆಲ್ಲನೆ ಬೀಸಿತು

ವೃಕ್ಷವೃಂದವಕಾಲವಾದರು ಹೂವು ಹಣ್ಣನು ತಾಳಿತು.

(ಕನ್ನಡ ಬುದ್ಧಚರಿತೆ: ಎಸ್​. ವಿ. ಪರಮೇಶ್ವರ ಭಟ್ಟ)

ಆದರೆ ಬೋಧಿ ಜ್ಞಾನ ಪಡೆದದ್ದು ತಾನು ಮಾತ್ರ; ಉಳಿದ ಜಗ "ಇದ್ದುದಿದ್ದಂತಿದ್ದುದನ್ನು' ಮನಸ್ಸಿಗೆ ತಂದುಕೊಂಡು ಬೋಧಿಯಲ್ಲಿ ತಾನು ಪಡೆದ ಬೆಳಕನ್ನು ಬೀರುತ್ತ ಎಂಬತ್ತು ವರ್ಷದವರೆಗೂ ಬದುಕಿ ತನ್ನ ಧರ್ಮಪ್ರಚಾರ ಮಾಡಿದ ಎಂದು ಇತಿಹಾಸ ಹೇಳುತ್ತದೆ. ಬೌದ್ಧ ಧರ್ಮದ ಪ್ರಕಾರ& ದು@ಖ, ತೃಷ್ಣೆ, ದು@ಖನಿರೋಧ ಮತ್ತು ದು@ಖನಿರೋಧಗಾಮಿ ಮಾರ್ಗ ಈ ನಾಲ್ಕು ಶ್ರೇಷ್ಠ ಆರ್ಯ ಸತ್ಯಗಳು. ಜನ್ಮದು@ಖ, ಜರಾದು@ಖ, ವ್ಯಾಧಿದು@ಖ, ಮರಣದು@ಖ, ಅಪ್ರಿಯ ಸಮಾಗಮ ದು@ಖ, ಪ್ರಿಯವಿಯೋಗ ದು@ಖ, ವಾಂಛಿತ ಲಾಭ ಎಂಬುವು ಅವನು ಹೆಸರಿಸುವ ದು@ಖಗಳು. ಕಾಮ ತೃಷ್ಣೆ, ಭವ ತೃಷ್ಣೆ, ವಿಭವ ತೃಷ್ಣೆ ಎಂಬೀ ತೃಷ್ಣೆಗಳೇ ದು@ಖಕ್ಕೆ ಕಾರಣ ಎಂಬುದು ಎರಡನೆಯ ಆರ್ಯ ಸತ್ಯ. ಈ ತೃಷ್ಣೆಗಳನ್ನೆಲ್ಲ ವೈರಾಗ್ಯದಿಂದ ನಿರೋಧ ಮಾಡಿ ತ್ಯಜಿಸಿ ಅವುಗಳಿಂದ ಮುಕ್ತನಾಗುವುದು ದು@ಖನಿರೋಧವೆಂಬ ಮೂರನೆಯ ಆರ್ಯ ಸತ್ಯ. ದು@ಖನಿರೋಧ ಗಾಮಿ ಮಾರ್ಗವೇ ನಾಲ್ಕನೆಯ ಆರ್ಯ ಸತ್ಯ. ಮಾರ್ಗವೆಂದರೆ& ದೃಷ್ಟಿ, ಸಂಕಲ್ಪ, ವಚನ, ಕರ್ಮ, ವಾಜೀವ, ವ್ಯಾಯಾಮ, ಸ್ಮ$ತಿ, ಮತ್ತು ಸಮಾಧಿ ಎಂಬುವೇ ಆ ಅಷ್ಟಾಂಗ ಮಾರ್ಗಗಳು. ಬುದ್ಧನ ಈ ಮಾರ್ಗ ಮಧ್ಯಮ ಮಾರ್ಗವೆಂದು ಹೆಸರಾಗಿದೆ.

ಬುದ್ಧ ದೇವರ ಬಗ್ಗೆ ಏನೂ ಹೇಳಲಿಲ್ಲ. ದೇಹವನ್ನು ಹೊರತು ಪಡಿಸಿದ ಆತ್ಮವೊಂದಿದೆ ಎಂದು ಬೌದ್ಧಧರ್ಮ ನಂಬುವುದಿಲ್ಲ. ಉಳಿದೆಲ್ಲ ಧರ್ಮಗಳೂ ಲೋಕವನ್ನು "ಈಗಾಗಲೇ ಆಗಿ ಇರುವ ವಸ್ತುಪ್ರಪಂಚ' ಎಂದು ಹೇಳಿದರೆ ಬೌದ್ಧಧರ್ಮ ಲೋಕವನ್ನು ಆಗುತ್ತಲೇ ಇರುವ ನಿರಂತರವಾದ ಪ್ರವಾಹ ಎಂದು ಹೇಳುತ್ತ ನಿತ್ಯ ಪರಿವರ್ತನಶೀಲವಾದ ಈ ಜಗತ್ತಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎನ್ನುತ್ತದೆ. ಆ ಕಾರಣ ಸೃಷ್ಟಿಕರ್ತನೊಬ್ಬನ ಪ್ರಸಕ್ತಿ ಬೌದ್ಧ ತಾತ್ವಿಕತೆಗೆ ಇಲ್ಲ. ಹಾಗಾಗಿ ದೇವರ ಬಗ್ಗೆ ಪ್ರಸ್ತಾಪಿಸುವ ಪ್ರಮೇಯವೇ ಬುದ್ಧನಿಗೆ ಬರಲಿಲ್ಲ. ಬುದ್ಧಚರಿತೆಯ ಕವಿ ಇದನ್ನು ಸ್ಪಷ್ಟವಾಗಿ ಸಾರುತ್ತಾನೆ.

"ದೇಹವನು ಉಳಿದನ್ಯವಿರದಾ ಶಾಶ್ವತಾತ್ಮವು ಇದು ಸುನಿಶ್ಚಯ ತತ್ತ$$$್ವವು

ಜಗವು ಆತ್ಮದಿನಾದ ವರ ಪರಿಣಾಮವಲ್ಲವು. ಜಗವಿದೀಶ್ವರ ರಹಿತವು'

(ಕನ್ನಡ ಬುದ್ಧಚರಿತೆ. ಪುಟ 291) ಎಂದು ಹೇಳುತ್ತ 45 ವರ್ಷಗಳ ಕಾಲ ದೇಶದ ಉದ್ದಗಲಗಳಲ್ಲಿ ಸಂಚರಿಸುತ್ತ ಅಖಂಡವಾಗಿ ಧರ್ಮಪ್ರಚಾರ ಮಾಡಿದ. ಬುದ್ಧನ ಧರ್ಮ ಮತ್ತು ಉಪದೇಶಗಳೆಲ್ಲವೂ ಪಾಲಿ ಧರ್ಮಗ್ರಂಥಗಳೆಂದು ಹೆಸರಾದ "ಸುತ್ತ ಪಿಟಕ', "ವಿನಯ ಪಿಟಕ' ಮತ್ತು "ಅಭಿಧಮ್ಮ ಪಿಟಕ'ಗಳಲ್ಲಿ ಸಂಗ್ರಹಿತವಾಗಿವೆ. ಹೆಸರು ಕೇಳಿದರೇ ನಡುಕ ಹುಟ್ಟಿಸುತ್ತಿದ್ದ ಸಮಾಜ ತಿರಸತರಾದ ಅಂಗುಲಿಮಾಲನಂಥ ಮಹಾಕ್ರೂರಿ, ಎಲ್ಲರೂ ಪಾಪಿ ಎಂದು ಹೀನೈಸಿ ನೋಡುತ್ತಿದ್ದ ಆಮ್ರಪಾಲಿಯಂಥ ವೇಶ್ಯೆ ಇವರುಗಳನ್ನು ತನ್ನ ಪ್ರೀತಿ, ಕರುಣೆಗಳಿಂದ ಗೆದ್ದು ಅವರಲ್ಲಿ ಪರಿವರ್ತನೆ ತಂದ ಮಹಾತ್ಮ.

ಬುದ್ಧನು ಸಾರನಾಥದಲ್ಲಿ ತನ್ನ ಮೊದಲ ಧರ್ಮಚಕ್ರ ಪ್ರವರ್ತನ ಮಾಡಿದ ನಂತರದಲ್ಲಿ 2500 ವರ್ಷಗಳ ನಂತರದಲ್ಲಿ ಡಾ.ಬಾಬಾಸಾಹೇಬ್​ ಅಂಬೇಡ್ಕರ್​ ಅವರು ನಮ್ಮ ಕಾಲದಲ್ಲಿ "ಬುದ್ಧಂ ಶರಣಂ ಗಚ್ಛಾಮಿ' ಎಂದು ತಾವು ಬೌದ್ಧಧರ್ಮಕ್ಕೆ ಪರಿವರ್ತನೆ ಹೊಂದುವುದರ ಜೊತೆಗೆ ಸಹಸ್ರಾರು ದಲಿತಬಂಧುಗಳು ಬೌದ್ಧಧರ್ಮಕ್ಕೆ ಸೇರಲು ಪ್ರೇರಣೆ ನೀಡುವ ಮೂಲಕ ಎರಡನೇ ಸಲ ಬೌದ್ಧ ಧರ್ಮಚಕ್ರ ಪ್ರವರ್ತನೆ ಮಾಡಿದರು. ಹತ್ತಿರ ಹತ್ತಿರ ಅರ್ಧ ಶತಮಾನ ಕಾಲ ಬುದ್ಧ ಮಳೆಗರೆದ ಧರ್ಮಾಮೃತ ಹನಿಗಳನ್ನು ಪರಿನಿರ್ವಾಣವನೈದಿದ ಹುಣ್ಣಿಮೆಯಂದು ಶಿಷ್ಯಗಣಕ್ಕೆ ಮತ್ತೆ ನೆನಪಿಸಿದ್ದನ್ನು "ವೈಶಾಖಿ'ಯ ಕವಿ ಗೋವಿಂದ ಪೈ ಬಿತ್ತರಿಸಿರುವುದು ಹೀಗೆ:

"ಶ್ರದ್ಧೆ, ಶೀಲಂ, ಲಜ್ಜೆ. ಲೋಕಾಪವಾದಭಯ,/ ವಿದ್ಯೆ, ಸ್ವಾರ್ಥತ್ಯಾಗ ಪ್ರೆ/

ಎಂಬ ಅಗ್ನಿಯಿಂ ಸುಡದ ನೀರಿಂ ನಾಂದದ/ ಅರಸರುಂ ಕಳ್ಳರುಂ ದಾಯಾದರುಂ ದೋಚದೀ/

ಸಪ್ತಧನವ ಸಂಗ್ರಹಿಸಿ... ಜೀವಿಗಳೊಳಪರಿಮಿತ ಮೈತ್ರವಂ ತೋರುತಿರಿ/ ಅಪ್ರಮತ್ತರಾಗಿರಿ. ನಿಮ್ಮ ಧರ್ಮಮಂ/ ನಿಮ್ಮ ಸಾಮ್ರಾಜ್ಯವನ್ನನ್ಯರಲಿ ಹೊರಿಸೆ ಮೇಲ್ವಾಯದಿರಿ. ಯಾರನ್ಯ ಧರ್ಮಮಂ ಯಾರನ್ಯ ಜನಗಳ/ ಸ್ವಾತಂತ್ರ$್ಯಮಂ ಮನ್ನಿಸುವರೊ ತಮ್ಮದರಂತೆ/ ಅವರ ಧರ್ಮಂ ಜನಂ ಸ್ವಾತಂತ್ರ$್ಯ ಬಾನಂತೆ ಬೆಳೆಯುತಿದೆ./ಯಾರನ್ಯ ಧರ್ಮವನನ್ಯರ ಸ್ವಾತಂತ್ರ$್ಯ ಕೆಡಿಸುವರೊ ಅವರ ಧರ್ಮಂ ಜನಂ ಸ್ವಾತಂತ್ರ$್ಯಂ ಎದ್ದ ತೆರೆಯಂತೆ ಕುಸಿದಳಿಯುತಿದೆ/ ತಾನನ್ಯಗೆಸಗಿದಾ ಕೆಡುಕೆ ತನ್ನಯ ಕೆಡುಕು/ ಒಳಿತೆ ತನ್ನಯ ಒಳಿತು... ಇದುವೆ ಗಡಾ ಬುದ್ಧರನುಶಾಸನಂ (ವೈಶಾಖಿ. ಸಾಲುಗಳು: 467-485).

ಬುದ್ಧನ ಅಂದಿನ ಉಪದೇಶ ಅಂದಿಗಿಂತ ಹೆಚ್ಚಾಗಿ ಹಿಂಸೆ, ಕ್ರೌರ್ಯ, ಯುದ್ಧ, ಮೌಢ್ಯ, ಧರ್ಮಾಂಧತೆಗಳಿಂದ ಪೀಡಿತವಾದ ಇಂದಿನ ಹಾಗೂ ಎಲ್ಲ ಕಾಲದ ತುರ್ತಾಗಿದೆ ಎನ್ನುವುದೇ ಬುದ್ಧನ ಮತ್ತು ಅವನ ಧರ್ಮದ ಮಹಾನತೆ. ವರಕವಿಯ ಮಾತು ಅದೆಷ್ಟು ಸತ್ಯಸ್ಯ ಸತ್ಯ.

"ಬುದ್ಧನೆಂಬುವನೊಬ್ಬ ಎಂದೊ ಇದ್ದ /ಎನುವಂತೆ ಇಂದಿಗೂ ಇಲ್ಲೆ ಇಲ್ಲ/ ಬುದ್ಧನ ಸಮಾಧಿಯದು ಮಾನವನ ಹೃದಯವಾಗಿರುವ ಕಾರಣ& ಬುದ್ಧ ಸತ್ತನು ಎಂದು ಯಾರೆಂದರೂ/ ಬುದ್ಧನ ಜಯಂತಿಗಿದೆ ಜಯವೆಂದಿಗೂ'.

(ಲೇಖಕರು ಸಾಹಿತಿ)