ಮಳೆಗಾಲದಲ್ಲಿ ಬಿಸಿ ಬಿಸಿ ಕಾಫಿಯನ್ನು ಆಗಾಗ ಹೀರುತ್ತಿದ್ದರೆ, ದೇಹಕ್ಕೆ ಬಿಸಿ, ಮನಸ್ಸಿಗೆ ಹಿತ, ಮೆದುಳಿಗೆ ಚುರುಕು ನೀಡಿದಂತಾಗುತ್ತದೆ. ಆದರೆ ಈ ಕಾಫಿಗೆ ಹಾಲು ಸಕ್ಕರೆಯನ್ನು ಹದವಾಗಿ ಸೇರಿಸಿ, ಕಾಯಿಸುವಷ್ಟು ಸಮಯ ಇಲ್ಲದಿದ್ದರೆ, ಕೇವಲ ಬಿಸಿನೀರಿಗೆ ಕಾಫಿ ಪೌಡರ್ ಹಾಕಿ ತಕ್ಷಣಕ್ಕೆ ಬ್ಲ್ಯಾಕ್ ಕಾಫಿ ತಯಾರಿಸಬಹುದು. ಈ ಬ್ಲ್ಯಾಕ್ ಕಾಫಿಯ ಸೇವನೆ, ಕೆಲಸದಿಂದಾಗುವ ಒತ್ತಡವನ್ನು ದೂರ ಮಾಡಿ, ನಮ್ಮ ದೇಹದಲ್ಲಿರುವ ಎಕ್ಸ್‌ಟ್ರಾ ಕ್ಯಾಲರಿಗಳನ್ನು ಕರಗಿಸಿ ದೇಹ ತೆಳ್ಳಗಾಗಲು ಕಾರಣವಾಗುತ್ತದೆ ಎಂದು ಹಲವು ಸಂಶೋಧನೆಗಳಿಂದ ಸಾಬೀತಾಗಿದೆ. ಹಾಗಾದರೆ ಈ ಬ್ಲ್ಯಾಕ್ ಕಾಫಿಯಿಂದಾಗುವ ಒಟ್ಟಾರೆ ಪ್ರಯೋಜನಗಳೇನು? ಇದು ನಮ್ಮ ಮನಸ್ಸು ಮತ್ತು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಹಲವು ಪೊಷಕಾಂಶಗಳ ಆಗರ:
ಈ ಬ್ಲ್ಯಾಕ್ ಕಾಫಿಯಲ್ಲಿರುವ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ, ಕಾಫಿಯು ನೈಸರ್ಗಿಕವಾಗಿ ವಿಟಮಿನ್ ಬಿ-2, ವಿಟಮಿನ್ ಬಿ-3, ಮೆಗ್ನೀಷಿಯಂ, ಪೊಟಾಷಿಯಂ ಸೇರಿದಂತೆ ವಿವಿಧ ಫಿನಾಲಿಕ್ ಸಂಯುಕ್ತ ಅಂಶಗಳಿಂದ ಸಮೃದ್ಧವಾಗಿದೆ. ಜತೆಗೆ ಬ್ಲ್ಯಾಕ್ ಕಾಫಿಯಲ್ಲಿ ಹಾಲು ಮತ್ತು ಸಕ್ಕರೆ ಇಲ್ಲದ ಕಾರಣ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳು ಇದರಲ್ಲಿ ಸೊನ್ನೆ ಎಂದೇ ಹೇಳಬಹುದು. ಒಂದು ಕಪ್ ಕಾಫಿಯು ಮ್ಯಾಂಗನೀಸ್, ಸೋಡಿಯಂ, ರೈಬೋಫ್ಲಾವಿನ್ ಮತ್ತು ನಿಯಾಸಿನ್‌ನಂತಹ ಹಲವು ಸೂಕ್ಷ್ಮ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಬ್ಲ್ಯಾಕ್ ಕಾಫಿಯಲ್ಲಿರುವ ಕೆಫೀನ್ ಅಂಶವು ಮೆದುಳನ್ನು ಚುರುಕುಗೊಳಿಸುವುದಲ್ಲದೆ, ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರಿಂದ ಬಹಳಷ್ಟು ಮಂದಿ ವ್ಯಾಯಾಮಕ್ಕಿಂತ ಮೊದಲು ಬ್ಲ್ಯಾಕ್ ಕಾಫಿ ಸೇವನೆಗೆ ಹೆಚ್ಚು ಒತ್ತು ಕೊಡುತ್ತಾರೆ.
ಬ್ಲ್ಯಾಕ್ ಕಾಫಿಯಿಂದಾಗುವ ಪ್ರಯೋಜನಗಳು:
1. ತೂಕ ಕಡಿಮೆಯಾಗುತ್ತದೆ: ಬ್ಲ್ಯಾಕ್ ಕಾಫಿಯು ಕ್ಯಾಲೊರಿಮುಕ್ತವಾಗಿರುವುದರಿಂದ ದೇಹದ ತೂಕ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ಕೆಫೀನ್‌ನಿಂದ ಸಮೃದ್ಧವಾಗಿರುವುದರಿಂದ, ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಶಕ್ತಿಯ ಮಟ್ಟವನ್ನು ಹೆಚ್ಚಿಸುವುದಲ್ಲದೆ, ಹಸಿವನ್ನು ನಿಗ್ರಹಿಸುತ್ತದೆ. ಬ್ಲ್ಯಾಕ್ ಕಾಫಿಯು ಕ್ಲೋರೊಜೆನಿಕ್ ಆಮ್ಲವನ್ನು ಹೊಂದಿದ್ದು, ಇದು ಗ್ಲೂಕೋಸ್ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಊಟದ ನಂತರ ಬ್ಲ್ಯಾಕ್ ಕಾಫಿ ಸೇವಿಸಿದರೆ, ಗ್ಲೂಕೋಸ್ ಬಿಡುಗಡೆಯನ್ನು ನಿಧಾನಗೊಳಿಸಿ, ದೇಹದ ತೂಕವನ್ನು ನಿರ್ವಹಣೆ ಮಾಡುವಲ್ಲಿ ಸಹಾಯ ಮಾಡುತ್ತದೆ.
2. ದೈಹಿಕ ಕಾರ್ಯಕ್ಷಮತೆ ಸುಧಾರಣೆ: ಕಾಫಿಯಲ್ಲಿರುವ ಕೆಫೀನ್ ಅಂಶವು ನರಮಂಡಲವನ್ನು ಉತ್ತೇಜಿಸುತ್ತದೆ ಎಂಬುದು ತಿಳಿದಿರುವ ವಿಚಾರ. ಈ ಪ್ರಚೋದನೆಯೇ ರಕ್ತದಲ್ಲಿನ ಅಡ್ರಿನಲಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹವನ್ನು ತೀವ್ರವಾದ ದೈಹಿಕ ಶ್ರಮಕ್ಕೆ ಸಿದ್ಧಪಡಿಸುತ್ತದೆ.
3. ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ: ಬ್ಲ್ಯಾಕ್ ಕಾಫಿ ಸೇವನೆಯು ಮಧುಮೇಹದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಬ್ಲ್ಯಾಕ್ ಕಾಫಿಯು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೆ, ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿರ್ವಹಿಸುತ್ತದೆ.
4. ಹೃದಯ ರಕ್ತನಾಳದ ಕಾಯಿಲೆ ತಡೆಯುವಲ್ಲಿ ಸಹಕಾರಿ: ಕೆಫೀನ್ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು. ಇದು ಸತ್ಯವಲ್ಲ. ಕಾಫಿಯ ನಿಯಮಿತ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಿದರೂ, ನಂತರದಲ್ಲಿ ಈ ಪರಿಣಾಮವು ಕಡಿಮೆ ಆಗುತ್ತದೆ. ಕಾಫಿಯ ನಿಯಮಿತ ಸೇವನೆಯು ಹೃದಯ ರಕ್ತನಾಳದ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
5. ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ: ಯಕೃತ್ತು ನಮ್ಮ ದೇಹವನ್ನು ಆರೋಗ್ಯವಾಗಿಡಲು ಸದ್ದಿಲ್ಲದೆ ಕೆಲಸ ಮಾಡುವ ಅಂಗ. ರಕ್ತದಲ್ಲಿ ಕಂಡುಬರುವ ಹಾನಿಕಾರಕ ಪಿತ್ತಜನಕಾಂಗದ ಕಿಣ್ವಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯಕೃತ್ತಿನ ಕ್ಯಾನ್ಸರ್, ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ, ಹೆಪಟೈಟಿಸ್ ಮತ್ತು ಲಿವರ್ ಸಿರೋಸಿಸ್ ಅಪಾಯವನ್ನು ಬ್ಲ್ಯಾಕ್ ಕಾಫಿಯು ಕಡಿಮೆ ಮಾಡುತ್ತದೆ.
6. ಮೂತ್ರದ ವ್ಯವಸ್ಥೆಯನ್ನು ಉತ್ತಮ: ಕಾಫಿ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುವುದರಿಂದ ಹೆಚ್ಚು ಮೂತ್ರ ವಿಸರ್ಜನೆಯಾಗುತ್ತದೆ. ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯನ್ನು ಸ್ವಚ್ಛವಾಗಿಡುವುದಲ್ಲದೆ, ಆರೋಗ್ಯವಾಗಿಡಲು ನೆರವಾಗುತ್ತದೆ.
7. ಕ್ಯಾನ್ಸರ್‌ನ ಆಪಾಯ ದೂರ: ಯಕೃತ್ತಿನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ನಂತಹ ನಿರ್ದಿಷ್ಟ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಲು ಬ್ಲ್ಯಾಕ್ ಕಾಫಿ ಸಹಕಾರಿಯಾಗಿದೆ. ಜತೆಗೆ ಆಂತರಿಕ ಉರಿಯೂತವನ್ನು ಕಡಿಮೆ ಮಾಡುತ್ತದೆ.
8. ನೆನಪಿನಶಕ್ತಿ ಹೆಚ್ಚಳ: ಬ್ಲ್ಯಾಕ್ ಕಾಫಿ ಸೇವನೆಯು ಮೆದುಳು ಸಾಮಾನ್ಯವಾಗಿ ನಿರ್ವಹಿಸುವ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ ಮತ್ತು ಮೆದುಳಿನ ಕ್ಷಮತೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಮೆದುಳಿನ ನರಗಳನ್ನು ಬಲಗೊಳಿಸುವುದಲ್ಲದೆ, ನೆನಪಿನ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ.
9. ಒತ್ತಡವನ್ನು ನಿರ್ವಹಣೆ: ಬ್ಲ್ಯಾಕ್ ಕಾಫಿ ಒಂದು ಮಾಂತ್ರಿಕ ಪಾನೀಯವಾಗಿದ್ದು, ಇದು ನಿಮ್ಮ ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಬ್ಲ್ಯಾಕ್ ಕಾಫಿ ತಕ್ಷಣವೇ ನಿಮ್ಮ ಮನಸ್ಥಿತಿಯನ್ನು ತಿಳಿಗೊಳಿಸಿ, ನರಮಂಡಲವನ್ನು ಉತ್ತೇಜಿಸುತ್ತದೆ. ಇದು ಡೋಪಮೈನ್ ಮತ್ತು ಸಿರೊಟೋನಿನ್‌ನಂತಹ ನರಪ್ರೇಕ್ಷಕಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
10. ಮರೆವಿನ ಕಾಯಿಲೆಗೆ ತಡೆ: ಸಾಮಾನ್ಯವಾಗಿ 65 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ಮರೆವಿನ ಕಾಯಿಲೆ ಕಾಡುತ್ತದೆ. ಬ್ಲ್ಯಾಕ್ ಕಾಫಿ ಸೇವನೆಯು ಈ ಕಾಯಿಲೆಯ ಅಪಾಯವನ್ನು ಎದುರಿಸುವಲ್ಲಿ ಸಹಾಯ ಮಾಡುತ್ತದೆ.
ಬ್ಲ್ಯಾಕ್ ಕಾಫಿಯ ಅಡ್ಡಪರಿಣಾಮಗಳು:
ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ನಿಯಮಿತ ಪ್ರಮಾಣಕ್ಕಿತ ಹೆಚ್ಚಾಗಿ ಬ್ಲ್ಯಾಕ್ ಕಾಫಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ.
1. ಅತಿಯಾದ ಬ್ಲ್ಯಾಕ್ ಕಾಫಿ ಸೇವನೆಯೇ ಒಂದು ರೀತಿಯ ಆತಂಕ ಮತ್ತು ಒತ್ತಡಕ್ಕೆ ಕಾರಣವಾಗಬಹುದು.
2. ಮಲಗುವ ಮುನ್ನ ಬ್ಲ್ಯಾಕ್ ಕಾಫಿ ಸೇವಿಸಿದರೆ ನಿದ್ರಾಭಂಗಕ್ಕೆ ಕಾರಣವಾಗುತ್ತದೆ.
3. ಕಾಫಿಯಲ್ಲಿರುವ ಕೆಫೀನ್ ಅಂಶವು ಹೈಪರ್ ಅಸಿಡಿಟಿಗೆ ಕಾರಣವಾಗಬಹುದು.
4. ಬ್ಲ್ಯಾಕ್ ಕಾಫಿ ಹೆಚ್ಚು ಸೇವಿಸುವುದರಿಂದ ನಿಮ್ಮ ದೇಹವು ದೈನಂದಿನ ಆಹಾರದಿಂದ ಖನಿಜಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ.
ಎಷ್ಟು ಸೇವಿಸಿದ್ರೆ ಒಳ್ಳೆಯದು?:
ಒಂದು ದಿನದಲ್ಲಿ ನೀವು 400 ಮಿಲಿಗ್ರಾಮ್‌ಗಿಂತ ಹೆಚ್ಚು ಕೆಫೀನ್ ಸೇವಿಸಬಾರದು. ಒಂದು ದಿನದಲ್ಲಿ 1-2 ಕಪ್ ಬ್ಲ್ಯಾಕ್ ಕಾಫಿ ಸೇವಿಸಿದರೆ ಉತ್ತಮ. 4 ಕಪ್‌ಗಳಿಗಿಂತಲೂ ಹೆಚ್ಚು ಸೇವನೆ ಒಳ್ಳೆಯದಲ್ಲ. ಬ್ಲ್ಯಾಕ್ ಕಾಫಿಯು ನಿಮ್ಮ ನಿದ್ರೆಗೆ ಭಂಗ ಉಂಟುಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಲಗುವ ಸಮಯಕ್ಕೆ ಕನಿಷ್ಠ 6 ಗಂಟೆಗಳ ಮೊದಲು ಕಾಫಿ ಸೇವಿಸಿದ್ದರೆ ಒಳಿತು.