| ಸಿ.ಎ. ಶ್ರೀಪಾದ ಎಚ್.ಎನ್.
ಸಂಸತ್ನಲ್ಲಿ ಅನುಮೋದಿತ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯ್ದೆ 1949ರ ಪ್ರಕಾರ ಸ್ಥಾಪಿತವಾದ ಸಂಸ್ಥೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ). ಇದು ಕಂಪನಿಗಳ ವ್ಯವಹಾರ ಮಂತ್ರಾಲಯ, ಕೇಂದ್ರ ಸರ್ಕಾರದ ಅಧೀನ ಕೆಲಸ ಮಾಡುವ ಸ್ವಾಯತ್ತ ಸಂಸ್ಥೆಯಾಗಿದೆ. ವಿಶ್ವದಲ್ಲೇ 2ನೇ ಅತಿದೊಡ್ಡ ವೃತ್ತಿಪರ ಸಂಸ್ಥೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯೂ ಹೌದು. ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ (ಸಿಎ ಕೋರ್ಸ್) ಅನ್ನು ಈ ಸಂಸ್ಥೆಯು ನಿರ್ವಹಿಸುತ್ತಿದ್ದು, ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳನ್ನು ಸನ್ನದು ಲೆಕ್ಕಿಗರನ್ನಾಗಿಸುತ್ತಿದೆ. ಈ ಲೆಕ್ಕಿಗರು ಮುಂದೆ ಸ್ವಂತ ಉದ್ದಿಮೆ/ವೃತ್ತಿ, ಬ್ಯಾಂಕಿಂಗ್, ಉದ್ದಿಮೆ, ಆರ್ಥಿಕ, ಸರ್ಕಾರಿ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿವಿಧ ವಿಷಯಗಳ ಆಳವಾದ ಅಧ್ಯಯನ ಮತ್ತು ವೃತ್ತಿ ತರಬೇತಿ ಕಾರ್ಯಕ್ರಮಗಳು ಈ ಕೋರ್ಸ್ಗೆ ಹೆಚ್ಚಿನ ಬೆಲೆ ತಂದು ಕೊಟ್ಟಿದೆ. ಪ್ರಸ್ತುತ ಸಿ.ಎ ಉತ್ತಮ ಕೋರ್ಸ್. ಸಿ.ಎ ಪಾಸಾದವರಿಗೆ ಹಲವು ವಲಯಗಳಲ್ಲಿ ಅಪಾರ ಅವಕಾಶಗಳಿವೆ. ಪಾಸಾಗದಿರು ವವರಿಗೂ ಜೀವನ ನಿರ್ವಹಣೆಗೆ ತೊಂದರೆಯಾಗದು. ಕ್ರಿಯಾಶೀಲ ವ್ಯಕ್ತಿಗಳು ಎಲ್ಲಿದ್ದರೂ ಜಯಿಸುವರು.
ಮಧ್ಯಮ ಸ್ತರದಲ್ಲಿ ಅವಕಾಶ: ಸಿಎ ಐಪಿಸಿಸಿ ಪಾಸಾದವರಿಗಂತೂ ಕಂಪನಿಗಳ ಮಧ್ಯಮ ಸ್ತರದಲ್ಲಿ ಅನೇಕ ನೌಕರಿಗಳ ವಿಪುಲ ಅವಕಾಶವಿದೆ. ಸಿಎ ಪಾಸಾಗಿದ್ದರೂ ಜೀವನದಲ್ಲಿ ಅನುತ್ತೀರ್ಣರಾಗುವವರು ಇದ್ದಾರೆಂದರೆ, ಸಿಎ ಮುಗಿಯದವರು ಲೆಕ್ಕ ಪತ್ರ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಬಹಳ ಮೇಲೇರಿದವರೂ ಇದ್ದಾರೆ. ಅವರವರ ಪರಿಶ್ರಮ ಮತ್ತು ಚಾಕಚಕ್ಯತೆಗೆ ಅನುಗುಣವಾಗಿ ವ್ಯಕ್ತಿಗೆ ಯಶಸ್ಸು ಸಿಗುತ್ತಿರುತ್ತದೆ. ಸಿ.ಎ. ವಿದ್ಯಾಭ್ಯಾಸ ಪ್ರಾರಂಭಿಸಲು, ಎರಡು ಬಾಗಿಲುಗಳಿವೆ. ಒಂದು ಫೌಂಡೇಶನ್ ಪರೀಕ್ಷೆ ಮೂಲಕ, ಇನ್ನೊಂದು ನೇರ ಪ್ರವೇಶ.
ಸಿಎ ಫೌಂಡೇಶನ್: 10 ನೇ ಕ್ಲಾಸಿನಲ್ಲಿ ಪಾಸಾದವರು ಸಿಎ ಫೌಂಡೇಶನ್ಗೆ ನೋಂದಾಯಿಸಿಕೊಳ್ಳಬಹುದು. 12ನೇ ಕ್ಲಾಸ್ ಉತ್ತೀರ್ಣರಾದಾಗ ಮೊದಲ ಪರೀಕ್ಷೆ ತೆಗೆದುಕೊಳ್ಳಬಹುದು. ಇದರಲ್ಲಿ 100 ಗುಣಗಳ ನಾಲ್ಕು ವಿಷಯಗಳಿವೆ. ಪ್ರತಿ ವಿಷಯದಲ್ಲಿ ಕನಿಷ್ಠ 40 ಅಂಕ ತೆಗೆದು ನಾಲ್ಕು ವಿಷಯ ಸೇರಿ 50% ಗುಣ ಪಡೆದವರು ಉತ್ತೀರ್ಣ. ನಂತರ ಸಿಎ ಕೋರ್ಸ್ ಗೆ ನೊಂದಾಯಿಸಿ, ಎರಡನೆ ಹಂತದ ಐಪಿಸಿಸಿ ಪರೀಕ್ಷೆ ತೆಗೆದುಕೊಳ್ಳಬಹುದು. ನೊಂದಾವಣೆಯಾಗಿ 9 ತಿಂಗಳ ನಂತರ ಪರೀಕ್ಷೆಗೆ ಅರ್ಹತೆ ಲಭ್ಯವಾಗುತ್ತದೆ. ಈ ಹಂತದಲ್ಲಿ ನಾಲ್ಕು ವಿಷಯಗಳ ಎರಡು ಗ್ರೂಪ್ಗಳಿರುತ್ತವೆ. ಮೊದಲನೆ ಗ್ರೂಪ್ ಪಾಸಾದವರು ವೖತ್ತಿನಿರತ ಸಿಎಗಳ ಕೆಳಗೆ 3 ವರ್ಷಗಳ ವೃತ್ತಿ ತರಬೇತಿಗೆ ನೊಂದಾಯಿಸಿಕೊಳ್ಳಬಹುದು. ಇದಕ್ಕೆ ಆರ್ಟಿಕಲ್ಶಿಪ್ ಎನ್ನುತ್ತಾರೆ. ಐಪಿಸಿಸಿ ಎರಡೂ ಗ್ರೂಪ್ ಪಾಸಾಗಿದ್ದಲ್ಲಿ, 2.5 ವರ್ಷಗಳ ತರಬೇತಿಯ ನಂತರ ಅಂತಿಮ ಪರೀಕ್ಷೆಗೆ ಅರ್ಹತೆ ಬರುವುದು. ಫೈನಲ್ ಪರೀಕ್ಷೆಯ 4 ವಿಷಯಗಳ ಎರಡೂ ಗ್ರೂಪ್ ಪಾಸಾದಾಗ ಸಿಎ ಆದಂತಾಗುವುದು. ಐಸಿಎಐ ಸದಸ್ಯತ್ವ ಪಡೆಯುವ ಮೊದಲು ಐಟಿಟಿ (ಮಾಹಿತಿ ತಂತ್ರಜ್ಞಾನ ತರಬೇತಿ) ಹಾಗೂ ಓರಿಯೆಂಟೇಶನ್ (ವೖತ್ತಿ ಪರತೆ ಹಾಗು ವ್ಯಕ್ತಿತ್ವ ವಿಕಸನ) ತರಬೇತಿ ಪಡೆದಿರಬೇಕು. ಈ ಪದ್ದತಿಯಲ್ಲಿ, ಬುದ್ಧಿವಂತ ವಿದ್ಯಾರ್ಥಿಗಳು 20ರಿಂದ21 ವಯಸ್ಸಿನಲ್ಲೇ ಸಿಎ ಮುಗಿಸಬಹುದು. ಪ್ರತಿ ವಿಷಯದಲ್ಲಿ ಕನಿಷ್ಠ 40 ಗುಣಗಳೂ ಜತೆಗೆ ಪ್ರತಿ ಗ್ರುಪ್ನಲ್ಲಿ 50% ಸರಾಸರಿ ಗುಣಗಳು ಬಂದರೆ ಮಾತ್ರ ಉತ್ತೀರ್ಣ. ಸರಾಸರಿ ಬಾರದಿದ್ದರೆ ಅಥವಾ ಯಾವುದೇ ವಿಷಯದಲ್ಲಿ 40 ಕ್ಕಿಂತ ಕಡಿಮೆ ಅಂಕ ಬಂದರೆ ಆ ಗ್ರೂಪ್ ಪರೀಕ್ಷೆಯನ್ನು ಪುನಃ ತೆಗೆದುಕೊಳ್ಳಬೇಕಾಗುತ್ತದೆ.
ಪ್ರವೇಶ ಪದ್ಧತಿ: ವಾಣಿಜ್ಯ ಪದವಿಯಲ್ಲಿ 55% ಅಂಕಗಳು ಬಂದಿದ್ದರೆ, ವಾಣಿಜ್ಯೇತರ ಪದವಿಯಲ್ಲಿ 60% ಅಂಕಗಳು ಬಂದಿದ್ದರೆ ನೇರವಾಗಿ ಫೌಂಡೇಶನ್ ಪರೀಕ್ಷೆ ಇಲ್ಲದೆ ಸಿಎ ಕೋರ್ಸ್ಗೆ ನೋಂದಾಯಿಸಿಕೊಳ್ಳಬಹುದು. ನೇರವಾಗಿ ವೖತ್ತಿನಿರತ ಸಿಎಗಳ ಕೆಳಗೆ ಮೂರು ವರ್ಷಗಳ ವೖತ್ತಿ ತರಬೇತಿಗೆ ನೊಂದಾಯಿಸಿಕೊಳ್ಳಬಹುದು. 9 ತಿಂಗಳ ತರಬೇತಿಯ ನಂತರ ಐಪಿಸಿಸಿ ಪರೀಕ್ಷೆಗೆ ಅರ್ಹತೆ. ಐಪಿಸಿಸಿ ಎರಡೂ ಗ್ರೂಪ್ ಪಾಸಾಗಿದ್ದಲ್ಲಿ, 2.5 ವರ್ಷಗಳ ತರಬೇತಿಯ ನಂತರ ಸಿಎ ಅಂತಿಮ ಪರೀಕ್ಷೆಗೆ ಅರ್ಹತೆ ಬರುವುದು. ಉಳಿದೆಲ್ಲವೂ ಮೊದಲ ಪದ್ದತಿಯಂತೆ ಇರುವುದು. ನೇರ ಪ್ರವೇಶದ ವಿದ್ಯಾರ್ಥಿಗಳು 24ರಿಂದ 5 ರ ವಯಸ್ಸಿನಲ್ಲಿ ಕೋರ್ಸ್ ಮುಗಿಸಬಹುದು.
ಬಹಳಷ್ಟು ತಂದೆ ತಾಯಂದಿರು ತಮ್ಮ ಮಕ್ಕಳು ಸಿಎ ಮುಗಿಸದಿದ್ದರೆ ಮುಂದೇನು ಎಂಬ ಚಿಂತೆ ಮಾಡುವುದನ್ನು ನೋಡಿದ್ದೇವೆ. ಸಿಎ ಮುಗಿಸದಿದ್ದರೂ ಚಿಂತೆಯಿಲ್ಲ. ಈ ಮಕ್ಕಳು ಕೇವಲ ಪರೀಕ್ಷೆಯಲ್ಲಿ ಅನುತ್ತೀರ್ಣರು, ಜೀವನ ಶಿಕ್ಷಣದಲ್ಲಲ್ಲ. ಆರ್ಟಿಕಲ್ಶಿಪ್ ಸಮಯದಲ್ಲಿ ಸಿಕ್ಕಿರುವ ಅಪಾರವಾದ ಕಾನೂನು ಹಾಗು ವ್ಯವಹಾರ ಅನುಭವವು ಅವರಿಗೆ ಜೀವನದ ದಾರಿ ತೋರಿಸುವುದರಲ್ಲಿ ಸಂಶಯವಿಲ್ಲ. ಬಹಳಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರೂ ನೇರ ಹಾಗೂ ಪರೋಕ್ಷ ತೆರಿಗೆಯಲ್ಲಿ ಸ್ವಂತ ವೃತ್ತಿ ನಡೆಸಿ ವಿಜಯಶೀಲರಾಗಿದ್ದಾರೆ. ಇವರು ಪ್ರಮಾಣೀಕರಣ ಒಂದನ್ನು ಹೊರತು ಪಡಿಸಿ ಸಿಎಗಳು ಮಾಡುವ ಎಲ್ಲ ಕೆಲಸಗಳನ್ನು ಮಾಡಬಹುದು.
ಸಿಎ ಪರೀಕ್ಷೆ ನಡೆಯುವ ಅವಧಿ: ಸಿಎ ಪರೀಕ್ಷೆಗಳನ್ನು ಪ್ರತಿವರ್ಷ 2 ಬಾರಿ, ಮೇ ಮತ್ತು ನವೆಂಬರ್ ತಿಂಗಳಲ್ಲಿ ನಡೆಸಲಾಗುತ್ತಿದೆ.
ಸಿಎಗಳಿಗೆ ಬೇಡಿಕೆಗಳು ಇರುವುದು ಸತ್ಯ. ವಿಷಯಗಳ ಮೇಲೆ ಆಳವಾದ ಜ್ಞಾನ ಮತ್ತು ಅನುಭವ, ವಿಷಯಗಳ ನಿರೂಪಣೆ, ಸಂವಹನಾ ಶಕ್ತಿ. ಇವುಗಳಲ್ಲಿ ಯಾವುದು ಕಡಿಮೆಯಾದರೂ ಈ ಕ್ಷೇತ್ರ ಬಹು ಕಠಿಣ. ಉತ್ತೀರ್ಣರಾಗುವವರ ಸಂಖ್ಯೆ ಶೇಕಡ 2 ರಿಂದ 11 ರ ವರೆಗೆ ಇರುವುದರಿಂದ, ಬಹಳಷ್ಟು ಜನ ಮಧ್ಯದಲ್ಲೇ ಬಿಟ್ಟುಬಿಡುವವರಿದ್ದಾರೆ. 35 ವರ್ಷ ಕಷ್ಟಪಟ್ಟರೂ ಪಾಸಾಗದಿದ್ದರೆ ಬೇರೆ ಕೋರ್ಸ್ಗಳ ಆಯ್ಕೆಯ ಅವಕಾಶ ವಂಚಿತರಾಗುವರು. ಉತ್ತಮ ಸಂವಹನ ಶಕ್ತಿ ಇಲ್ಲಿ ಬಹಳ ಮುಖ್ಯ. ಇದರಲ್ಲಿ ದುರ್ಬಲರಿದ್ದರೆ, ಉದ್ಯೋಗ ಮತ್ತು ವೃತ್ತಿಯಲ್ಲಿ ಮೇಲೇರಲು ತೊಡಕಾಗುವುದು ಸಹಜ. ಕ್ರೀಯಾಶೀಲ ವಿದ್ಯಾರ್ಥಿ ಇದನ್ನು ಗೆಲ್ಲಲು ಸಾಧ್ಯ. ಭಾರತೀಯ ಸಿಎ ಉಳಿದ ದೇಶಗಳಲ್ಲಿ ಗುರುತಿಸಲ್ಪಡುವವರೆಗೆ ಪರದೇಶಗಳಲ್ಲಿ ಕೆಲಸ ಸಿಗುವದು ದುಸ್ತರ. ಆ ದೇಶದ ತತ್ ಸಮಾನ ಕೋರ್ಸ್ ಮಾಡಿದರೆ ಪರದೇಶಗಳಲ್ಲಿ ಒಳ್ಳೆಯ ಸಂಪಾದನೆ ಸಾಧ್ಯ. ಎಂಬಿಎ, ಸಿಎಂಎ ಮುಂತಾದ ಕೋರ್ಸ್ ಮಾಡಿದವರು ಕಡಿಮೆ ಸಂಬಳದಲ್ಲಿ ಸಿಗುವುದಾದರೆ, ಸಿಎಗಳ ಸಂಬಳದಲ್ಲಿ ಕುಸಿತ ಕಾಣಬಹುದು. ಸರ್ಕಾರದ ಡಿಜಿಟಲೀಕರಣದ ಪ್ರಯತ್ನದಲ್ಲಿ ಸಿಎಗಳ ಅಧಿಪತ್ಯ ಕಡಿಮೆಯಾಗುವ ಸಾಧ್ಯತೆ ಇಲ್ಲದಿಲ್ಲ. ಹೆಚ್ಚೆಚ್ಚು ಮಾಹಿತಿ ತಂತ್ರಜ್ಞಾನದ ಅಳವಡಿಕೆಯಿಂದ ವ್ಯವಸ್ಥೆ ಹೆಚ್ಚು ಪಾರದರ್ಶಕವಾಗಿ ಆಡಿಟ್ ಮಾಡಬೇಕಾದ ಅನಿವಾರ್ಯತೆ ಕಡಿಮೆಯಾಗತೊಡಗಿವೆ.
ಚಾರ್ಟರ್ಡ್ ಅಕೌಂಟೆನ್ಸಿ ಪದವಿಗೆ ಈ ಮೊದಲು ವೃತ್ತಿಪರ ಕೋರ್ಸ್ನ ಮಾನ್ಯತೆ ಅಷ್ಟೇ ಇತ್ತು.ಕಳೆದ ಮಾರ್ಚ್ ತಿಂಗಳಲ್ಲಿ ಇದಕ್ಕೆ ಸ್ನಾತಕೋತ್ತರ ಪದವಿಯ ಮಾನ್ಯತೆಯೂ ಸಿಕ್ಕಿದೆ. ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಸಿಎ ಕೋರ್ಸ್ಗೆ ಈ ಮಾನ್ಯತೆಯನ್ನು ಕಳೆದ ಮಾರ್ಚ್ ತಿಂಗಳಲ್ಲಿ ನೀಡಿ ಆದೇಶ ಹೊರಡಿಸಿತ್ತು. ಈ ಮಾನ್ಯತೆ ಸಿಕ್ಕ ಕಾರಣ ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಸಿಎ ಪದವೀಧರರು ಪಿಎಚ್ಡಿ ಪದವಿ ಕಾರ್ಯಕ್ರಮಕ್ಕೆ ಸೇರ್ಪಡೆಗೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗಿದೆ. ಇದಕ್ಕೂ ಮೊದಲು ಸಿಎ ಪದವೀಧರರು ಕೇವಲ 106 ವಿಶ್ವವಿದ್ಯಾಲಯಗಳು, 2 ಐಐಟಿಗಳು, ಏಳು ಐಐಎಂಗಳಲ್ಲಿ ಮಾತ್ರವೇ ಪಿಎಚ್ಡಿ ಪದವಿಗೆ ಸೇರ್ಪಡೆಗೊಳ್ಳುವುದು ಸಾಧ್ಯವಿತ್ತು. ಯುಜಿಸಿ ಆಯೋಜಿಸುವ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ (ಎನ್ಇಟಿ)ಗೂ ಹಾಜರಾಗಲು ಸಿಎ ಪದವೀಧರರು ಅರ್ಹತೆಯನ್ನು ಪಡೆದಿರುತ್ತಾರೆ. ಈ ಮೂಲಕ ಅವರಿಗೆ ಜ್ಯೂನಿಯರ್ ಫೆಲೋಶಿಪ್, ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಭಾರತದ ಎಲ್ಲ ವಿವಿಗಳಲ್ಲಿ ಪ್ರಾಧ್ಯಾಪನ ಮಾಡುವುದಕ್ಕೆ ಅವಕಾಶ ಸಿಕ್ಕಂತಾಗಿದೆ.
ಸಿಎ ಪದವೀಧರರು ಮತ್ತು ಸಿಎ ಪರೀಕ್ಷೆ ಪ್ರಯತ್ನಿಸಿ ಸೋತವರಿಗೆ ಉದ್ಯೋಗಾವಕಾಶಗಳಿಗೆ ಕೊರತೆ ಇಲ್ಲ. ಮೂರು ರೀತಿಯಲ್ಲಿ ಉದ್ಯೋಗ ಕಂಡುಕೊಳ್ಳಬಹುದು. ಸಿಎ ಉತ್ತೀರ್ಣ ರಾದವರು ನೇರವಾಗಿ ಸಿಎ ಪ್ರಾಕ್ಟೀಸ್ ಶುರುಮಾಡಬಹುದು. ಸಿಎ ಪಾಸಾದವರು ಮತ್ತು ಸಿಎ ಪಾಸಾಗದವರು ಕೂಡ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಬಹುದು. ಉದ್ಯಮ ಸ್ಥಾಪನೆಗೆ ಎಲ್ಎಲ್ಪಿ ಸಂಸ್ಥೆ ಅನುಕೂಲಕರ. ಅಥವಾ ಸಿಎ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳಬಹುದು. ಕಂಪನಿಗಳಿಗೆ ಕಂಪನಿ ಸೆಕ್ರಟರಿ ಇನ್ ಪ್ರಾಕ್ಟೀಸ್ ಚಾರ್ಟರ್ಡ್ ಅಕೌಂಟೆಂಟ್ ಆಗಿ, ಇನ್ ಪ್ರಾಕ್ಟೀಸ್ ಕಾಸ್ಟ್ ಅಕೌಂಟೆಂಟ್ ಆಗಿ, ಇನ್ ಪ್ರಾಕ್ಟೀಸ್ ಆರ್ಕಿಟೆಕ್ಟ್ ಪ್ರೊಫೆಷನಲ್ ಅಡ್ವೊಕೇಟ್ ಆಗಿ, ಇಂಜಿನಿಯರ್ (ಚಾರ್ಟರ್ಡ್) ಆಕ್ಚುವರಿ ಪ್ರೊಫೆಷನಲ್ ಆಗಿ ಕನ್ಸಲ್ಟೆನ್ಸಿ ಫಮ್ರ್ ಸ್ಥಾಪಿಸಬಹುದು ಅಥವಾ ದೊಡ್ಡ ಆಡಿಟ್ ಸಂಸ್ಥೆಯ ಪಾಲುದಾರರಾಗಬಹುದು. ಪಾಲುದಾರರಾಗುವುದಕ್ಕೆ ಮುಂಚಿತವಾಗಿ ಉದ್ಯೋಗಿಯಾಗಿ ಕೆಲಸ ಆರಂಭಿಸಬಹುದು. ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಅಸೋಸಿಯೇಟ್ ಡೈರೆಕ್ಟರ್, ಬಳಿಕ ಪಾಲುದಾರರಾಗಬಹುದು. ಪಾರ್ಟ್ ಟೈಮ್ ಬೋಧಕರಾಗಿಯೂ ಕೆಲಸ ಮಾಡಬಹುದು.