ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ 180-200 ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ‘ಇರಾನ್ ಬಹು ದೊಡ್ಡ ತಪ್ಪೆಸಗಿದೆ’ ಎಂದು ಗುಡುಗಿದ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಘೊಷಿಸಿದ್ದು, ಉತ್ತರ ಇರಾನ್ನ ಸನ್ಮಾನ್ನಲ್ಲಿ ಘಟಿಸಿದ ‘ಅಸಹಜ ಭೂಕಂಪ’ ಇರಾನ್ ಯಶಸ್ವಿಯಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿರಬಹುದೇ ಎಂಬ ಅನುಮಾನ ಉಂಟುಮಾಡಿದ್ದು, ಇಂತಹ ಸನ್ನಿವೇಶದಲ್ಲಿ ಇಸ್ರೇಲಿ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಅಮೆರಿಕ ತನ್ನ ಅತ್ಯಾಧುನಿಕ ‘ಟರ್ವಿುನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್’ (ಥಾಡ್) ಕ್ಷಿಪಣಿ ವ್ಯವಸ್ಥೆಯನ್ನು ಆ ಯೆಹೂದಿ ರಾಷ್ಟ್ರದಲ್ಲಿ ನೆಲೆಗೊಳಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೆಲ್ಲವನ್ನೂ ಕಳೆದವಾರದದ ‘ಜಗದಗಲ’ದಲ್ಲಿ ವಿವರವಾಗಿ ಹೇಳಿದ್ದೇನೆ. ನಾನೀಗ ಹೇಳಹೊರಟಿರುವ ವಿಷಯವೆಂದರೆ ಇಷ್ಟೆಲ್ಲ ಅದಮೇಲೂ ಇರಾನ್ ವಿರುದ್ಧ ಇಸ್ರೇಲ್ ಇನ್ನೂ ಯಾವ ದಾಳಿಯನ್ನೂ ನಡೆಸಿಲ್ಲದಿರುವುದು ಯಾಕೆ ಎಂದು.
‘ಮಿಡ್ಲ್ ಈಸ್ಟ್ ಸ್ಪೆಕ್ಟೇಟರ್’ ಎಂಬ ಇರಾನ್-ಪರ ಸಂಸ್ಥೆ ಪೆಂಟಗನ್ನ ಎರಡು ರಹಸ್ಯ ದಾಖಲೆಗಳನ್ನು ಸೋಮವಾರ ಸಾರ್ವಜನಿಕಗೊಳಿಸಿದೆ. ಆ ದಾಖಲೆಗಳು ಬಹಿರಂಗಪಡಿಸುವುದು ಇರಾನ್ ಮೇಲೆ ದಾಳಿಯೆಸಗಲು ಇಸ್ರೇಲ್ ಮಾಡಿಕೊಳ್ಳುತ್ತಿದ್ದ ತಯಾರಿ, ದಾಳಿಯ ಗುರಿ, ಸಮಯ ಮತ್ತು ವಿಧಾನಗಳನ್ನು. ಹೀಗೆ ತನ್ನ ರಹಸ್ಯ ದಾಖಲೆಗಳು ಸೋರಿಕೆಯಾಗಿ ಜಾಗತಿಕವಾಗಿ ಸುದ್ದಿಯಾಗುತ್ತಿರುವುದು, ಅದೂ ಇರಾನ್-ಪರ ಸಂಸ್ಥೆಯಿಂದ, ಬೈಡೆನ್ ಸರ್ಕಾರಕ್ಕೆ ಸಹಜವಾಗಿಯೇ ತೀವ್ರತರದ ಇರಿಸುಮುರಿಸು ತಂದಿದೆ. ಅಮೆರಿಕದ ರಕ್ಷಣಾ ಇಲಾಖೆಯಲ್ಲೇ ಇರಾನ್-ಪರ ರಹಸ್ಯ ಕೈಗಳು ಕೆಲಸ ಮಾಡುತ್ತಿರುವುದನ್ನು ಈ ದಾಖಲೆ ಸೊರಿಕೆ ಜಗಜ್ಜಾಹೀರು ಮಾಡಿದೆ. ಇದು ಬೈಡೆನ್ ಸರ್ಕಾರಕ್ಕೆ ನುಂಗಲಾರದ ತುತ್ತು. ಹಾಗೆ ನೋಡಿದರೆ ಅಮೆರಿಕದ ರಕ್ಷಣಾ ಇಲಾಖೆಯಿಂದ ಗೌಪ್ಯ ದಾಖಲೆಗಳು ಸೋರಿಕೆಯಾಗುವುದು ಇದೇ ಮೊದಲಲ್ಲ. ಇಂತಹ ಪ್ರಕರಣಗಳಲ್ಲಿ ಮುಖ್ಯವಾದುದು ‘ಅಂಡರ್ಸನ್ ಪೇಪರ್ಸ್’.
ಭಾರತ ಮತ್ತು ಪಾಕಿಸ್ತಾನಗಳ ನಡುವೆ 1971ರ ಡಿಸೆಂಬರ್ 3ರಂದು ಯುದ್ಧ ಆರಂಭವಾದ ಮರುದಿನವೇ ಪಾಕಿಸ್ತಾನದ ಪರವಾಗಿ ನಿಂತು ಭಾರತವನ್ನು ಬೆದರಿಸಲು ರಿಚರ್ಡ್ ನಿಕ್ಸನ್ ಸರ್ಕಾರ ತನ್ನ ದೊಡ್ಡ ನೌಕಾದಳ ‘ಸೆವೆಂತ್ತ್ ಫ್ಲೀಟ್’ನ್ನು ಬಂಗಾಳ ಕೊಲ್ಲಿಗೆ ಕಳುಹಿಸಿತು. ಆದರೆ ಅದು ಜಗತ್ತಿಗೆ ಹೇಳಿದ್ದು ತನ್ನ ನೌಕಾಸೇನೆಯ ಬಂಗಾಳ ಕೊಲ್ಲಿ ಪ್ರವೇಶ ಪೂರ್ವ ಪಾಕಿಸ್ತಾನದಲ್ಲಿ ಸಿಲುಕಿದ್ದ ಅಮೆರಿಕನ್ ನಾಗರಿಕರನ್ನು ರಕ್ಷಿಸಿ ಕರೆದೊಯ್ಯಲು ಎಂದು. ಕೇವಲ ಹದಿಮೂರು ಅಮೆರಿಕನ್ನರನ್ನು ರಕ್ಷಿಸಲು ಐವತ್ತಾರು ಯುದ್ಧನೌಕೆಗಳು! ಈ ಬಗ್ಗೆ ಗೊಂದಲವೆದ್ದಾಗ, ತನ್ನ ವಿಮಾನವಾಹಕ ನೌಕೆ ‘ಯುಎಸ್ಎಸ್ ಎಂಟರ್ಪ್ರೖೆಸಸ್’ ಮುಂದಾಳತ್ವದಲ್ಲಿ ಸೆವೆನ್ತ್ ಫ್ಲೀಟ್ನ್ನು ನಿಕ್ಸನ್ ಸರ್ಕಾರ ಕಳುಹಿಸುವುದು ಭಾರತವನ್ನು ಬೆದರಿಸಿ ಯುದ್ಧದಿಂದ ಹಿಮ್ಮೆಟ್ಟಿಸಲು ಎಂದು ಪತ್ರಕರ್ತ ಜಾಕ್ ಅಂಡರ್ಸನ್ ದಾಖಲೆಗಳೊಂದಿಗೆ ವಿವರವಾದ ಲೇಖನವನ್ನು ‘ವಾಷಿಂಗ್ಟನ್ ಪೋಸ್ಟ್’ನಲ್ಲಿ ಪ್ರಕಟಿಸಿಬಿಟ್ಟರು. ನಿಕ್ಸನ್ ಸರ್ಕಾರದ ತೀರ್ವನವಿದ್ದ, ಹೆನ್ರಿ ಕಿಸಿಂಜರ್ ನೇತೃತ್ವದ ರಾಷ್ಟ್ರೀಯ ಭದ್ರತಾ ಸಮಿತಿ ತಯಾರಿಸಿದ್ದ ಮೂಲ ದಾಖಲೆಯ ಫೋಟೋಕಾಪಿಯನ್ನೂ ಪತ್ರಕರ್ತ ಅಂಡರ್ಸನ್ ತಮ್ಮ ಲೇಖನದೊಂದಿಗೆ ಓದುಗರಿಗೆ ಒದಗಿಸಿದ್ದರು! ತಮ್ಮ ಸುಳ್ಳುಗಳು ಮತ್ತು ಪಾಕಿಸ್ತಾನಿ ಸೇನೆಯ ಕ್ರೌರ್ಯದ ಪರವಾಗಿ ನಿಂತ ಕಾರಣಗಳಿಗಾಗಿ ನಿಕ್ಸನ್ ಮತ್ತು ಕಿಸಿಂಜರ್ ಅಂತಾರಾಷ್ಟ್ರೀಯವಾಗಿ ಅವಮಾನಿತರಾದ ಗಳಿಗೆ ಅದು.
ಆದರೆ ಆ ‘ಸೋರಿಕೆ’ಯನ್ನು ಈ ಸೋರಿಕೆಗೆ ಹೋಲಿಸಲಾಗುವುದಿಲ್ಲ. ಆಧುನಿಕ ಜಗತ್ತಿನ ಪಾಶವೀ ಕ್ರೌರ್ಯದ ವಿರುದ್ಧ ಹೋರಾಡುತ್ತಿದ್ದ ಪ್ರಜಾಪ್ರಭುತ್ವವಾದಿ ಭಾರತದ ಪರವಾಗಿ ಅಮೆರಿಕದಲ್ಲೇ ದನಿಗಳೆದ್ದದರಲ್ಲಿ ಆಶ್ಚರ್ಯವಿಲ್ಲ. ಆದರೆ ಇಂದು ಅಮೆರಿಕದ ಬದ್ಧವಿರೋಧಿ, ಇಸ್ಲಾಮಿಕ್ ಮೂಲಭೂತವಾದಿ ಹಾಗೂ ಭಯೋತ್ಪಾದಕ-ಪೋಷಕ ಇರಾನ್ ಪರವಾಗಿಯೂ ನಿಲ್ಲುವಂತಹ ಜನ ಅಮೆರಿಕದ ರಕ್ಷಣಾ ಇಲಾಖೆಯಲ್ಲೇ ಇದ್ದಾರೆ ಎನ್ನುವುದು ಬೈಡೆನ್ ಸರ್ಕಾರವಿರಲಿ, ಅಮೆರಿಕ ಎಂಬ ರಾಷ್ಟ್ರಕ್ಕೇ ಅರಗಿಸಿಕೊಳ್ಳಲಾಗದ ವಿಷಯ.
ಇರಾನ್ ಮೇಲೆ ದಾಳಿಯೆಸಗಲು ಅಷ್ಟೆಲ್ಲ ಯೋಜನೆ ರೂಪಿಸಿದ ಇಸ್ರೇಲ್ ಅದನ್ನೇಕೆ ಕಾರ್ಯರೂಪಕ್ಕೆ ತರಲಿಲ್ಲ? ಇದನ್ನು ‘ಮಿಡ್ಲ್ ಈಸ್ಟ್ ಸ್ಪೆಕ್ಟೇಟರ್’ ಬಯಲುಮಾಡಿರುವ ಪೆಂಟಗನ್ ದಾಖಲೆಗಳು ಹೇಳುವುದಿಲ್ಲ. ಆದರೆ ಇಡೀ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ನಮಗೆ ಅದು ಗೊತ್ತಾಗಿಯೇಬಿಡುತ್ತದೆ.
ಇರಾನ್ನಲ್ಲಿ ಇಸ್ರೇಲ್ಗೆ ಮೊದಲಿದ್ದ ಗುರಿಗಳು ಆ ಮೂಲಭೂತವಾದಿ ರಾಷ್ಟ್ರದ ಅಣುಸ್ಥಾವರಗಳು ಮತ್ತು ತೈಲ ಸಂಕೀರ್ಣಗಳು. ಆದರೆ ಇವೆರಡನ್ನು ತನ್ನ ಗುರಿಯಿಂದ ಹೊರಗಿಡಬೇಕಾದ ಒತ್ತಡಕ್ಕೆ ಇಸ್ರೇಲ್ ಒಳಗಾಯಿತು. ನತಾಂಜ್ನಲ್ಲಿರುವ ಇರಾನ್ನ ಪ್ರಮುಖ ಅಣುಸ್ಥಾವರ ಇರುವುದು ನೆಲದಿಂದ 382 ಅಡಿಗಳ ಕೆಳಗೆ. ಅಷ್ಟು ಆಳಕ್ಕೆ ಇಳಿಯಬಲ್ಲ ಬಾಂಬ್ ಇಸ್ರೇಲ್ ಬಳಿ, ಅಮೆರಿಕದ ಬಳಿ ಇಲ್ಲ. ಇಷ್ಟಾಗಿಯೂ ಇರಾನಿ ಅಣು ಸ್ಥಾವರಗಳ ಮೇಲೆ ದಾಳಿಯೆಸಗಬಾರದೆಂದು ಇಸ್ರೇಲ್ಗೆ ಅಮೆರಿಕ ಹೇಳಿದ್ದು ಗಮನಾರ್ಹ. ಅಂತಹ ದಾಳಿಯೆಸಗುವ ಸಾಮರ್ಥ್ಯ ಇಸ್ರೇಲ್ಗಿರಬಹುದು ಎಂಬ ಊಹೆಗೆ ಇದು ದಾರಿಮಾಡಿಕೊಡುವುದರ ಜತೆಗೆ ಇರಾನಿ ಅಣುಸ್ಥಾವರಗಳಲ್ಲಿ ಯುರೇನಿಯಂ ಸಂಸ್ಕರಣೆ ನಡೆಯುತ್ತಿರಬಹುದು, ಅಂತಹ ಸ್ಥಿತಿಯಲ್ಲಿ ದಾಳಿಯಾದರೆ ಅಣುವಿಕಿರಣ ಹೊರಸೂಸಿ ಇರಾನ್ ಅಲ್ಲದೆ ಸುತ್ತಲಿನ ಇತರ ದೇಶಗಳಿಗೂ ಹರಡಬಹುದು ಎಂಬ ಆತಂಕ ಅಮೆರಿಕಕ್ಕೆ ಇದ್ದಿರಬಹುದು. ಹೀಗಾಗಿ ನತಾಂಜ್ ಅಥವಾ ಇನ್ನಾವುದೇ ಇರಾನಿ ಅಣುಸ್ಥಾವರದ ಮೇಲೆ ದಾಳಿಯೆಸಗುವ ಯೋಜನೆಯನ್ನು ಇಸ್ರೇಲ್ ಕೈಬಿಡಬೇಕಾಯಿತು.
ಇಸ್ರೇಲ್ಗಿದ್ದ ಎರಡನೆಯ ಗುರಿ ಇರಾನಿ ತೈಲ ಸಂಕೀರ್ಣಗಳು. ಮುಖ್ಯವಾಗಿ ಖರ್ಗ್ ದ್ವೀಪದಲ್ಲಿರುವ ಅಯಿಲ್ ಟರ್ವಿುನಲ್. ಇದು ಇರಾನ್ನ ಕಚ್ಚಾತೈಲ ರಫ್ತಿನ 90% ಅನ್ನು ನಿರ್ವಹಿಸುತ್ತದೆ. ಖರ್ಗ್ ಟರ್ವಿುನಲ್ ಮೇಲೆ ದಾಳಿಯಾಗಬಹುದೆಂಬ ಆತಂಕ ಈ ತಿಂಗಳ ಆರಂಭದಲ್ಲಿ ಇರಾನ್ಗೂ ಉಂಟಾಗಿತ್ತು. ಉಪಗ್ರಹಗಳಿಂದ ಲಭ್ಯವಾದ ಚಿತ್ರಗಳು ಹೇಳುವುದು ಸೆಪ್ಟೆಂಬರ್ ತಿಂಗಳುದ್ದಕ್ಕೂ ಖರ್ಗ್ ಟರ್ವಿುನಲ್ನಲ್ಲಿ ಟ್ಯಾಂಕರ್ಗಳು ಗುಡುಗಿದ್ದವು, ಆದರೆ ಅಕ್ಟೋಬರ್ ಮೊದಲ ವಾರದ ಹೊತ್ತಿಗೆ ಆ ಟರ್ವಿುನಲ್ ಪೂರ್ಣವಾಗಿ ಖಾಲಿಯಾಗಿತ್ತು. ಖರ್ಗ್ ಟರ್ವಿುನಲ್ ಮೇಲಿನ ದಾಳಿಯನ್ನು ತಡಯಲಾಗದಿದ್ದರೂ ತನ್ನ ತೈಲ ಸಾಗಾಣಿಕಾ ಜಹಜುಗಳನ್ನು ಕಾಪಾಡಿಕೊಳ್ಳಲು ಇರಾನ್ ಲೆಕ್ಕಹಾಕಿದ್ದರ ಸೂಚನೆ ಇದು. ತೆಹರಾನ್ ಸರ್ಕಾರ ಇಷ್ಟಕ್ಕೇ ನಿಲ್ಲಲಿಲ್ಲ. ತನ್ನ ತೈಲ ಟರ್ವಿುನಲ್ಗಳು ಮತ್ತು ತೈಲ ಕ್ಷೇತ್ರಗಳ ಮೇಲೆ ಇಸ್ರೇಲ್ ಅಥವಾ ಅದರ ಪರವಾಗಿ ಅಮೆರಿಕ ದಾಳಿಯೆಸಗಿದರೆ ಇಡೀ ಪರ್ಶಿಯನ್ ಕೊಲ್ಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಬಿಡುವುದಾಗಿ ಇರಾನಿ ಸರ್ಕಾರ ಧಮಕಿಯನ್ನೂ ಹಾಕಿತು. ಅದರ ಬೆದರಿಕೆಯನ್ನು ಪೊಳ್ಳು ಎಂದು ನಿರ್ಲಕ್ಷಿಸುವುದೂ ತಪ್ಪಾಗುತ್ತದೆ. ಇಂದು ದೇಶದ ಅರ್ಥವ್ಯವಸ್ಥೆಯನ್ನೂ, ಅದಕ್ಕಿಂತಲೂ ಹೆಚ್ಚಾಗಿ ತನ್ನ ಉಳಿವನ್ನೂ ಕಾಪಾಡಿಕೊಳ್ಳಬೇಕಾದ ಒತ್ತಡದಲ್ಲಿ ಆಯತೊಲ್ಲಾ ಖಮೆನೀ ನೇತೃತ್ವದ ಇಸ್ಲಾಮಿಕ್ ಮೂಲಭೂತವಾದಿ ಸರ್ಕಾರವಿದೆ. ವಾಸ್ತವ ಹೀಗಿರುವಾಗ ಇರಾನ್ ಯಾವ ಹಂತಕ್ಕಾದರೂ ಹೋಗಬಹುದಾದ ಅಪಾಯವಿದೆ. ಒಂದುವೇಳೆ ಪರ್ಶಿಯನ್ ಕೊಲ್ಲಿಗೆ ಅಥವಾ ಅದನ್ನು ಹೊರಜಗತ್ತಿಗೆ ಸಂರ್ಪಸುವ ಹಾಮುಝå್ ಜಲಸಂಧಿಗಷ್ಟೇ ಇರಾನ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಬಿಟ್ಟರೂ ಸಾಕು, ಜಗತ್ತಿಗೆ ಸುಮಾರು 70% ತೈಲ ಪೂರೈಕೆ ನಿಂತುಹೋಗುತ್ತದೆ! ಇರಾಕ್, ಕುವೈತ್, ಕತಾರ್, ಬಹರೀನ್ ಮತ್ತು ಯುಎಇಗಳ ತೈಲ ರಫ್ತು ಸಂಪೂರ್ಣವಾಗಿ ನಿಂತುಹೋಗುತ್ತದೆ. ಸೌದಿ ಅರೇಬಿಯಾ ಸಹ ಸಾಕಷ್ಟು ತೊಂದರೆಗೀಡಾಗುತ್ತದೆ. ಇದರಿಂದ ಕಷ್ಟಕ್ಕೆ ಸಿಲುಕುವುದು ಮುಖ್ಯವಾಗಿ ಚೀನಾ ಜತೆಗೆ ಪೂರ್ವ ಏಷ್ಯಾದ ತೈಲ ಆಯಾತಕ ದೇಶಗಳು. ಜಪಾನ್ ಜತೆ ನಮಗೂ ತೊಂದರೆಯಾದರೂ ಅದನ್ನು ತುಸು ಮಟ್ಟಿಗೆ ನಿಭಾಯಿಸಿಕೊಳ್ಳಲು ಸಾಧ್ಯವಿದೆ. ಆದರೆ ತೊಂದರೆಯಾಗುವುದಂತೂ ನಿಜ. ತನ್ನ ಘನಿಷ್ಟ ಮಿತ್ರನಾದ ಭಾರತವನ್ನೂ, ಬೆಂಬಲಿಗನಾದ ಜಪಾನ್ ಅನ್ನೂ ತೊಂದರೆಗೀಡುಮಾಡುವುದು ಇಸ್ರೇಲ್ಗೆ ರಾಜತಾಂತ್ರಿಕವಾಗಿ ಹೊರೆಯೇ ಆಗುತ್ತದೆ. ಜತೆಗೆ, ಪ್ರಮುಖ ಕ್ವಾಡ್ ಸದಸ್ಯರುಗಳಾದ ಇವೆರಡೂ ದೇಶಗಳ ಅರ್ಥವ್ಯವಸ್ಥೆಗೆ ತಾತ್ಕಾಲಿಕವಾದರೂ ಒಂದು ಹಂತಕ್ಕೆ ಧಕ್ಕೆ ತರುವುದು ಮತ್ತದರ ಋಣಾತ್ಮಕ ಪರಿಣಾಮಗಳನ್ನು ನಿಭಾಯಿಸುವುದು ಹೆಣಗುವುದು, ಅದೂ ಚೀನಾ ಜತೆಗೆ ಸಾಮರಿಕ ಮತ್ತು ಆರ್ಥಿಕ ಸಂಬಂಧಗಳು ವೇಗವಾಗಿ ಹದಗೆಡುತ್ತಿರುವ ಈ ಸಂದರ್ಭದಲ್ಲಿ, ಅಮೆರಿಕಕ್ಕೆ ಸಮ್ಮತವಾಗದ ವಿಷಯ.
ಈ ವಾಸ್ತವಗಳನ್ನು ಮನಗಂಡ ಬೈಡೆನ್ ಸರ್ಕಾರ ಇರಾನ್ನ ತೈಲ ಸಂಕೀರ್ಣಗಳನ್ನೂ ತನ್ನ ದಾಳಿಯ ಗುರಿಯಾಗಿಸಿಕೊಳ್ಳದಂತೆ ಇಸ್ರೇಲ್ನ ಮನವೊಲಿಸಿತು. ಬದಲಾಗಿ ಅದು ಸೂಚಿಸಿದ್ದು ಇರಾನ್ನ ಸೇನಾ ಸಂಕೀರ್ಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನಷ್ಟೇ ತನ್ನ ದಾಳಿಯ ಗುರಿಯಾಗಿಸಿಕೊಳ್ಳುವುದು ಸೂಕ್ತ ಎಂದೂ ಸಲಹೆ ನೀಡಿತು. ಅಂತಿಮವಾಗಿ ಇಸ್ರೇಲ್ನ ಆಯ್ಕೆ ಇದೇ ಆಯಿತು. ಆದರೆ ಇರಾನ್ ಇದಕ್ಕೂ ಪರಿಹಾರ ಹುಡುಕಿಕೊಂಡಿತು. ಭೌಗೋಳಿಕ ವ್ಯಾಪ್ತಿಯಲ್ಲಿ ಚಿಕ್ಕದಾದ ನಿರ್ದಿಷ್ಟ ಗುರಿಯ ಮೇಲೆ ದಾಳಿಯೆಸಗಲು ಮಿಸೈಲ್ಗಳು ಸೂಕ್ತವಲ್ಲ. ಅದಕ್ಕೆ ಯುದ್ಧವಿಮಾನಗಳೇ ಬೇಕು. ದಾಳಿಗಾಗಿ ಇಸ್ರೇಲ್ ಬಳಿ ಅತ್ಯಾಧುನಿಕ ಯುದ್ಧವಿಮಾನಗಳೇನೋ ಇವೆ. ಆದರೆ, ಅವು ಇರಾನ್ ತಲುಪುವ ಹಾದಿಯಲ್ಲಿ ಸಿರಿಯಾ ಮತ್ತು ಇರಾಕ್ ಅಥವಾ ಜೋರ್ಡಾನ್, ಸೌದಿ ಅರೇಬಿಯಾ, ಯಎಇ ಮತ್ತು ಒಮಾನ್ಗಳ ವಾಯುಪ್ರದೇಶದಲ್ಲಿ ಸಾಗಬೇಕು. ಎರಡನೆಯ ಹಾದಿ ಹಿಡಿದರೆ ಮಾರ್ಗಮಧ್ಯದಲ್ಲಿ ಅಥವಾ ಹಿಂತಿರುಗುವಾಗ ಇಂಧನ ಪೂರೈಕೆ ಅಗತ್ಯವಾಗುತ್ತದೆ. ಇಸ್ರೇಲಿ ವಾಯುಪಡೆಯ ಈ ಇಕ್ಕಟ್ಟನ್ನು ಮನಗಂಡ ಇರಾನ್ ಚಾಣಾಕ್ಷ ನಡೆ ಪ್ರದರ್ಶಿಸಿತು. ಇಸ್ರೇಲಿ ಯುದ್ಧವಿಮಾನಗಳಿಗೆ ತಮ್ಮ ವಾಯುಪ್ರದೇಶದಲ್ಲಿ ಸಾಗಲು ಅರಬ್ ರಾಷ್ಟ್ರಗಳು ಅವಕಾಶ ನೀಡಿದರೆ ಹಾಗೂ ಇಂಧನ ಪೂರೈಕೆಗೂ ವ್ಯವಸ್ಥೆ ಮಾಡಿಕೊಟ್ಟರೆ ಅವುಗಳ ಕೃತ್ಯವನ್ನು ತನ್ನ ವಿರುದ್ಧ ಯುದ್ಧದ ಆರಂಭ ಎಂದು ಪರಿಗಣಿಸುವುದಾಗಿ ಮತ್ತು ಪ್ರತಿ ಕಾರ್ಯಾಚರಣೆ ಕೈಗೊಳ್ಳುವುದಾಗಿ ಇರಾನ್ ಅ.10ರಂದು ಎಚ್ಚರಿಕೆ ನೀಡಿತು.
ಹೆಚ್ಚಿನ ಇರಾನಿ ಕ್ಷಿಪಣಿ ದಾಳಿಗಳನ್ನು ತಡೆಯಲು ಇಸ್ರೇಲ್ನಲ್ಲಿ ರಕ್ಷಣಾ ವ್ಯವಸ್ಥೆಯೇನೋ ಇದೆ. ಅದರೆ ಅಂತಹ ವ್ಯವಸ್ಥೆ ಅರಬ್ ರಾಷ್ಟ್ರಗಳಲ್ಲಿ ಇಲ್ಲ. ಅದನ್ನು ಸದ್ಯಕ್ಕೆ ವ್ಯವಸ್ಥೆಗೊಳಿಸಲು ಇಸ್ರೇಲ್ ಇರಲಿ, ಅಮೆರಿಕಕ್ಕೂ ಸಾಧ್ಯವಿಲ್ಲ. ಅಂದರೆ ಇರಾನ್ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದರೆ, ಇರಾನ್ನ ಪ್ರತಿದಾಳಿಗೆ ಬಲಿಯಾಗುವುದು ಶ್ರೀಮಂತ, ತೈಲಸಂಪನ್ನ ಅರಬ್ ದೇಶಗಳು! ಶಿಯಾ ಇರಾನ್ ದಾಳಿಗೊಳಗಾಗಿ ಕುಸಿದುಬೀಳುವುದು ಸುನ್ನಿ ಅರಬ್ ದೇಶಗಳಿಗೆ ಸಮ್ಮತ, ನಿಜ. ಆದರೆ ಅದಕ್ಕಾಗಿ ತಮ್ಮ ಮೈಮೇಲೆ ಅಪಾಯ ಎಳೆದುಕೊಳ್ಳಲು ಯಾಕಾದರೂ ಬಯಸುತ್ತವೆ ಹೇಳಿ! ಹೀಗಾಗಿ ಅವು ಇರಾನ್ ಮೇಲೆ ವಾಯುದಾಳಿ ಎಸಗದಂತೆ ಇಸ್ರೇಲ್ ಮತ್ತು ಅಮೆರಿಕಗಳಿಗೆ ಮನವಿ ಮಾಡಿಕೊಂಡವು ಮತ್ತು ಆ ಮನವಿ ಸ್ವೀಕೃತವಾಯಿತು.
ಅಂದರೆ ಇರಾನ್ ಮೇಲೆ ಇಸ್ರೇಲ್ ದಾಳಿಯೆಸಗುವುದಿಲ್ಲವೇ? ಅಕ್ಟೋಬರ್ 1ರ ಕ್ಷಿಪಣಿ ದಾಳಿಗಳಿಗೆ ಅದು ಸೇಡು ತೀರಿಸಿಕೊಳ್ಳುವುದಿಲ್ಲವೇ? ಹಾಗಿಲ್ಲ ಅನಿಸುತ್ತದೆ. ಇರಾನ್ ವಿರುದ್ಧ ಇಸ್ರೇಲ್ ಬದಲು ಅಮೆರಿಕ ಅರಬ್ಬಿ ಸಮುದ್ರದಲ್ಲಿರುವ ತನ್ನ ಯುದ್ಧನೌಕೆಗಳ ಮೂಲಕ ಸಂಘರ್ಷಕ್ಕಿಳಿಯುವ ಸಾಧ್ಯತೆ ಕಾಣುತ್ತಿದೆ. ಅಂತಹ ದಾಳಿಗಳಿಗೆ ಅದಕ್ಕೆ ಅರಬ್ ದೇಶಗಳ ವಾಯುಪ್ರದೇಶವನ್ನು ಬಳಸುವ ಅಗತ್ಯವೇ ಇರುವುದಿಲ್ಲ (ಇದನ್ನು ಅರ್ಥಮಾಡಿಕೊಳ್ಳಲು ನೀವು ಭೂಪಟ ನೋಡುವುದು ಸೂಕ್ತ).
ಆ ದಾಳಿ ಈ ತಿಂಗಳ ಅಂತ್ಯ ಅಥವಾ ನವೆಂಬರ್ 1ರ ಹೊತ್ತಿಗೆ ನಡೆಯಬಹುದು. ಯಾಕೆಂದರೆ ಅದು ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಮೇಲುಗೈ ಸಾಧಿಸಲು ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಮಾಡಿಕೊಡುತ್ತದೆ ಅಥವಾ ಹಾಗಂತ ಅಧ್ಯಕ್ಷ ಬೈಡೆನ್, ಡೆಮೋಕ್ರಾಟಿಕ್ ಪಕ್ಷ ಮತ್ತು ಅವರ ಹಿಂದಿರುವ ಯುದ್ಧಕೋರ ‘ಡೀಪ್ ಸ್ಟೇಟ್’ ಅಂದುಕೊಂಡಿವೆ! ಇದರ ವಿವರಗಳು ಮತ್ತು ಭಾರತ ಚೀನಾ ಒಪ್ಪಂದ ಬೈಡೆನ್ ಸರ್ಕಾರಕ್ಕೆ ತಂದಿರುವ ತಲೆತುರಿಕೆಯ ವಿಶ್ಲೇಷಣೆಗೆ ಪ್ರತ್ಯೇಕ ಲೇಖನವೇ ಅಗತ್ಯ. ಅದನ್ನು ಮುಂದಿನವಾರ ಮಾಡೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)