ಅಂಕಣ

ಬೈಸಿಕಲ್ ಸಂಚಾರಿ

ಸುದೀಪ್​ ವಿ.ಎನ್​

ಡಿ.ಟಿ.ಸುದರ್ಶನ ಚಿತ್ರದುರ್ಗ ಜಿಲ್ಲೆಯ ಹನುಮನಹಳ್ಳಿ ಗ್ರಾಮದವರು. ಸಣ್ಣ ರೈತಾಪಿ ಕುಟುಂಬ. ಬೈಸಿಕಲ್ ಅವರ ಜೀವನದ ಭಾಗವಾಗಿ ಹೋಗಿದೆ. ಅಷ್ಟೇ ಅಲ್ಲ ಅವರಿಗೆ ಕೀರ್ತಿ ತಂದಿದೆ, ಆ ಸೈಕಲ್ ತುಳಿಯುವಿಕೆ ಶ್ರಮದಿಂದಲೇ ಓದಿದ ಶಾಲೆಗೆ ಬಳುವಳಿ ಕೊಡುವ ಪ್ರಯತ್ನದಲ್ಲಿದ್ದಾರೆ. ಸೈಕಲ್​ಯಾನದ ಅನುಭವಗಳನ್ನು ಅವರ ಮಾತಿನಲ್ಲೇ ಕೇಳೋಣ.

ಆವೇಶ ಸೃಷ್ಟಿಸಿದ ಅವಕಾಶ: ನಮ್ಮ ತಂದೆ ತಿಪ್ಪೇಸ್ವಾಮಿ, ತಾಯಿ ಗಿರಿಜಮ್ಮ. ನಮ್ಮದು ಕೃಷಿ ಕುಟುಂಬ. ನಾನು ಬಿಎ ವ್ಯಾಸಂಗದ ಬಳಿಕ ಹೈದ್ರಾಬಾದ್​ನ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕಂಪನಿ ಮುಚ್ಚುವ ಹಂತಕ್ಕೆ ತಲುಪಿ ವೇತನ ಬಾಕಿ ಉಳಿಸಿಕೊಂಡರು. ಬಾಕಿ ಕೊಡಲ್ಲ, ಬೇಕಿದ್ದರೆ ನಾವು ಕೊಟ್ಟಷ್ಟು ಪಡೆಯಬೇಕೆಂದರು. ನಾನು ನನ್ನ ಹಣ ಕೊಡಬೇಕೆಂದು ಹಠ ಹಿಡಿದೆ. ವೇತನ ಕೊಡುವಂತೆ ಪ್ರತಿಭಟನಾರ್ಥವಾಗಿ ನಮ್ಮೂರು ಹನುಮನಹಳ್ಳಿಯಿಂದ ಹೈದ್ರಾಬಾದ್​ವರೆಗೆ ಸೈಕಲ್ ತುಳಿದೆ. ಈ ಹಠವೇ ಪೂರ್ಣಪ್ರಮಾಣದಲ್ಲಿ ಸೈಕಲ್ ಸವಾರಿ ಮಾಡುವಂತೆ ಮಾಡಿತು.

ಹಣ ಕೂಡಿಸಿ 2019ರಲ್ಲಿ ಹೊಸ ಸೈಕಲ್ ಖರೀದಿಸಿದೆ. 3-4 ಸ್ನೇಹಿತರು ರಾಜ್ಯದ ಪ್ರವಾಸಿತಾಣ ಸುತ್ತಾಡಬೇಕೆಂದು ಹೊರಟೆವು. ಹಂಪಿ, ಚಿಕ್ಕಮಗಳೂರು, ಧರ್ಮಸ್ಥಳ, ಹೀಗೆ ಬೇರೆ ಬೇರೆ ಕಡೆ ಸುತ್ತಾಡುತ್ತಿದ್ದೆವು. ಸಹಜವಾಗಿ ದೇಶಪರ್ಯಟನೆ ಆಸೆ ಮೊಳಕೆಯೊಡೆಯಿತು. ಪಿಎಫ್ ಅಮೌಂಟ್ ಒಂದು ಲಕ್ಷ ರೂ.ದಷ್ಟು ಬಂದಿತ್ತು. ಅದನ್ನು ಕ್ಯಾಪಿಟಲ್ ಇಟ್ಟುಕೊಂಡು ಬಿಜಿನೆಸ್ ಮಾಡಬೇಕೇ ಅಥವಾ ಟ್ರಾವೆಲಿಂಗ್ ಮಾಡಬೇಕೆ ಎಂಬ ಗೊಂದಲದಲ್ಲಿ ಸ್ನೇಹಿತರ ಅಭಿಪ್ರಾಯ ಕೇಳಿದ್ದೆ. ಎಲ್ಲರೂ ಪ್ರವಾಸದ ಬಗ್ಗೆಯೇ ಒಲವು ತೋರಿಸಿದರು. ನನಗೂ ಅದರ ಬಗ್ಗೆಯೇ ಹೆಚ್ಚು ಒಲವು ಉಂಟಾಯಿತು.

ದೇಶದ ಪ್ರತಿ ಜಿಲ್ಲೆಗೂ ಹೋಗಬೇಕೆಂಬ ಗುರಿಯಂತೆ ಪ್ಲಾನ್ ಕೂಡ ತಯಾರಾಯಿತು. ಇದೆಲ್ಲ ನಡೆದಿದ್ದು 2020ರ ಡಿಸೆಂಬರ್​ನಲ್ಲಿ. ಆದರೆ, ಅಷ್ಟರಲ್ಲಿ ಹಣವೆಲ್ಲ ಖಾಲಿಯಾಗಿತ್ತು. ಈ ಸಂದರ್ಭದಲ್ಲಿ ಲಾಕ್​ಡೌನ್ ಬೆರೆ ಇತ್ತು. ಒಂದು ಕ್ಯಾಟರಿಂಗ್​ಗೆ ಹೋಗಿದ್ದೆ, ಅಲ್ಲಿ ಬಂದ 5 ಸಾವಿರ ರೂ.ನಲ್ಲಿ ಸೈಕಲ್​ಗೆ ಬೇಕಾದ ಉಪಕರಣಗಳನ್ನು ಖರೀದಿಸಿ ಬೆಂಗಳೂರಿಂದ 2021ರ ಆಗಸ್ಟ್ 18ಕ್ಕೆ ನನ್ನ ಪ್ರವಾಸ ಆರಂಭಿಸಿದೆ. ತಮಿಳುನಾಡು, ಗುಜರಾತ್, ಸಿಕ್ಕಿಂ, ಮೇಘಾಲಯ, ಮಿಜೋರಾಂ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಹೀಗೆ ಪ್ರವಾಸ ಮಾಡುತ್ತ ಸಾಗಿದೆ. ಸೈಕಲ್ ಪ್ರಯಾಣದಲ್ಲಿ ಪ್ರತಿದಿನವೂ ಹೊಸ ಅನುಭವ. ಲೆಕ್ಕವಿಲ್ಲದಷ್ಟು ಸ್ನೇಹಿತರು ಸಿಕ್ಕಿದ್ದಾರೆ.

ಸೈಕಲ್ ಬಳಕೆಗೆ ಇನ್ನೊಂದು ಕಾರಣವೂ ಇದೆ. ಕಿಡ್ನಿ ಸ್ಟೋನ್ ಆಗಿತ್ತು, ಹೆಚ್ಚು ನೀರು ಕುಡಿಯಬೇಕೆಂದು ಸಲಹೆ ಬಂದಿತ್ತು. ಹೆಚ್ಚು ಸೈಕಲ್ ತುಳಿದರೆ ಹೆಚ್ಚು ನೀರು ಕುಡಿಯಬಹುದೆಂದು ಯಾರೋ ಹೇಳಿದ್ದರು. ಹೀಗಾಗಿ ಹೆಚ್ಚು ಸೈಕಲ್ ತುಳಿಯಲು ಆರಂಭಿಸಿದೆ. ಬೈಸಿಕಲ್​ನಲ್ಲಿ ಬೇರೆ ದೇಶಕ್ಕೆ ಹೋದರೆ ಹೇಗೆ ಎಂಬ ಆಲೋಚನೆಯಲ್ಲಿ ನೇಪಾಳಕ್ಕೂ ಹೋಗಿ ಬಂದೆ. ಈ ವೇಳೆ ಅಂತಾರಾಷ್ಟ್ರೀಯ ಸೈಕ್ಲಿಂಗ್ ಕನಸು ಮೂಡಿ, ಬೆಂಗಳೂರಿನಿಂದ ಸಿಂಗಾಪುರಕ್ಕೆ ಸೈಕಲ್​ನಲ್ಲೇ ಹೊರಟುಬಿಟ್ಟೆ. ಈ ಸೈಕಲ್ ಯಾತ್ರೆ ಕೇವಲ ವೈಯಕ್ತಿವಾಗಿರಬಾರದು, ಸಮಾಜಕ್ಕೂ ಏನಾದರೂ ಉಪಯೋಗವಾಗಬೇಕೆಂದು ನಾನು ಓದಿದ ಶಾಲೆಗೆ ಫಂಡ್ ರೈಸ್ ಮಾಡುವ ಗುರಿಯನ್ನು ಜತೆಗೆ ಕಟ್ಟಿಕೊಂಡೆ.

ಸಾಗಿದ ಹಾದಿ: ಬೆಂಗಳೂರಿಂದ ಸೈಕಲ್​ನಲ್ಲಿ ಕೊಲ್ಕತ್ತಗೆ ಹೋದೆ. ಅಲ್ಲಿಂದ ವಿಮಾನದಲ್ಲಿ ವಿಯೆಟ್ನಾಂ ತಲುಪಿ ಅಲ್ಲಿಂದ ಹನೋಯ್ನಿಂದ ಹೋಚಿಮಿನ್, ಕಾಂಬೊಡಿಯಾ ಲಾವೋಸ್, ಥಾಯ್ಲೆಂಡ್, ಮಲೇಷ್ಯಾ ಮೂಲಕ ಸಿಂಗಾಪುರ ತಲುಪಿದೆ. ಈ ಸಂದರ್ಭದಲ್ಲಿ ಆರು ದೇಶಗಳನ್ನು ಸೈಕಲ್ ಮೂಲಕ ಪ್ರಯಾಣಿಸಿದೆ.

ಮಲೇಷ್ಯಾದಲ್ಲಿ ಅಲ್ಲಿನ ಪೊಲೀಸರು ‘ಮುಂದಿನ ಪ್ರಯಾಣ ಎಲ್ಲಿಗೆ?’ ಎಂದು ಪ್ರಶ್ನಿಸಿದಾಗ ‘ವಿಶ್ವಪರ್ಯಟನೆ’ ಎಂದೆ. ಇದೀಗ ಆ ದಿಕ್ಕಿನತ್ತ ತಯಾರಿ ನಡೆದಿದೆ. ನಂತರ ಶ್ರೀಲಂಕಾ ಹೋಗಿ ಬಂದೆ, ಎರಡು ತಿಂಗಳು ಶ್ರೀಲಂಕಾದಲ್ಲಿ ಸೈಕಲ್​ನಲ್ಲೇ ಸುತ್ತಾಡಿದೆ. ಸರ್ಕಾರಿ ಶಾಲೆಗೆ ನೆರವಾಗಬೇಕೆಂಬ ಉದ್ದೇಶದಿಂದ ಎನ್​ಜಿಒ ಕೂಡ ಕಟ್ಟಿದೆ. ಮುಂದೆ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯಿಂದ ಆಫ್ರಿಕಾದ ದಕ್ಷಿಣ ತುದಿಯವರೆಗೆ ಹೊರಡುವ ಸಿದ್ಧತೆ ಮಾಡಿಕೊಂಡಿದ್ದೇನೆ. ಈ ಪ್ರಯಾಣದಲ್ಲಿ 30 ದೇಶ ಕ್ರಾಸ್ ಮಾಡಬಹುದು. ಪ್ರಯಾಣಕ್ಕೆ ಎರಡು ವರ್ಷ ಬೇಕಾಗುತ್ತದೆ. ಅಂದಾಜು 40 ಸಾವಿರ ಕಿಲೋಮೀಟರ್ ಆಗಲಿದೆ.

ಪ್ಲಾನ್ ಹೇಗಿರುತ್ತೆ?

ನಿರ್ದಿಷ್ಟವಾಗಿ ದೊಡ್ಡ ಬಜೆಟ್​ನೊಂದಿಗೆ ಪ್ರವಾಸ ಹೊರಡಲ್ಲ. ಏಕೆಂದರೆ ಅಷ್ಟೆಲ್ಲ ಹಣ ಇಲ್ಲ. ಬೆಂಗಳೂರಿನಿಂದ ಸಿಂಗಾಪುರಕ್ಕೆ ಹೊರಟಾಗ ಇದ್ದಿದ್ದು 2 ಸಾವಿರ ರೂ. ಮಾತ್ರ. ಯಾವುದೋ ಒಂದು ಪ್ರಮೋಷನ್ ಆಕ್ಟಿವಿಟಿ ಬಂದಿತ್ತು, ಆ ಹಣದಲ್ಲಿ ವೀಸಾ ಪಡೆದುಕೊಂಡಿದ್ದೆ. ನಾನು ಲೋ ಬಜೆಟ್​ನ ಟ್ರಾವೆಲರ್. ಪ್ರವಾಸದ ವೇಳೆ ಯಾರಾದರೂ ಊಟ, ತಿಂಡಿ ಕೊಡಲು ಮುಂದೆ ಬಂದರೆ ಬೇಡ ಎನ್ನಲ್ಲ. ಟೆಂಟ್​ನಲ್ಲೇ ಉಳಿದುಕೊಳ್ಳುತ್ತೇನೆ. ಅನೇಕ ಕಡೆ ಜನರೇ ಮನೆಯಲ್ಲಿ ಉಳಿಸಿಕೊಳ್ಳುತ್ತಾರೆ, ನನ್ನ ಕತೆ ಕೇಳುತ್ತಾರೆ. ಪ್ರತಿ ದಿನ ಸರಾಸರಿ 100 ಕಿ.ಮೀ.ನಷ್ಟು ಸಾಗುತ್ತೇನೆ.

ಸಹಾಯ- ಸಹಕಾರ: ನನ್ನ ಈ ಪಯಣಕ್ಕೆ ಮನೆಯವರ ಪೂರ್ಣ ಬೆಂಬಲ ಇದೆ. ಎರಡು ವರ್ಷದ ಸೈಕಲ್ ಸವಾರಿಗೆ ಅನುಮತಿ ಕೇಳಿದ್ದೆ, ಈಗ ನಾಲ್ಕು ವರ್ಷ ಮುಗಿದಿದೆ. ಮುಂದೆ ಎರಡು ವರ್ಷ ಸಾಗುವುದಿದೆ. ‘ಇದನ್ನು ಇಲ್ಲಿಗೆ ನಿಲ್ಲಿಸು’ ಎಂದು ಮನೆಯವರ ಒತ್ತಾಯವಿಲ್ಲ. ಇನ್ನು ವಿದೇಶದಲ್ಲಿ ಇರುವವರು ಕೆಲವೊಮ್ಮೆ ಹಣಕಾಸು ನೆರವು ಮಾಡಿದ್ದಿದೆ. ವಿಯೆಟ್ನಾಂನಲ್ಲಿ ಕನ್ನಡಿಗರು ಸಹಾಯ ಮಾಡಿದ್ದಾರೆ.

ನಾನು ಓದಿದ, ನನ್ನ ತಂದೆಯೂ ಓದಿದ ಶ್ರೀಕರಿಯಾಂಬ ಪ್ರೌಢ ಶಾಲೆಯ ಎಲ್ಲ ಮಕ್ಕಳಿಗೆ ಸೈಕಲ್ ಕೊಡಬೇಕೆಂಬ ಆಸೆ ಇದೆ. ಸೈಕಲ್ ಬ್ಯಾಂಕ್ ಮಾಡಿ ಪ್ರೌಢಶಾಲೆ ಮುಗಿದ ಬಳಿಕ ಆ ಮಗು ಸೈಕಲನ್ನು ಶಾಲೆಗೆ ವಾಪಸ್ ನೀಡಿದರೆ ಮುಂದೆ ಬರುವ ವಿದ್ಯಾರ್ಥಿಗೆ ಅನುಕೂಲವಾಗಲಿದೆ. (76768-51757)

ನಿರೂಪಣೆ: ಶ್ರೀಕಾಂತ ಶೇಷಾದ್ರಿ