ಪುರಾಣದಲ್ಲಿ ವರ್ಣಿತವಾಗಿರುವ ದೇವಿಯ ಒಂಬತ್ತು ಅವತಾರಗಳಲ್ಲೊಂದು ಭ್ರಾಮರಿದೇವಿ. ಇವಳೇ ಭ್ರಮರಾಂಬಾ ಎನಿಸಿರುವಳು. ಇಂಥ ದೇವಿಯೇ ಭ್ರಮರಾಂಬಾ ಎನಿಸಿ ಭರತನಹಳ್ಳಿಯಲ್ಲಿ ರಾರಾಜಿಸುತ್ತಿದ್ದಾಳೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಪೂರ್ವಭಾಗದಲ್ಲಿನ ಬೇಡ್ತಿಹೊಳೆ ಮತ್ತು ತುಡುಗುಣಿ ಹೊಳೆಯ ಮಧ್ಯದ ಭೂವಿಸ್ತೀರ್ಣವು ಭರತನಹಳ್ಳಿ ಸೀಮೆ ಎಂದು ಗುರುತಿಸಲ್ಪಟ್ಟಿದೆ. ಈ ನಾಮಧೇಯಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಹನ್ನೆರಡನೇ ಶತಮಾನದಲ್ಲಿ ತೈಲಪದೇವನು ಆಳುತ್ತಿದ್ದಾಗ ಒಂದು ಯುದ್ಧದಲ್ಲಿ ಇಲ್ಲಿಯ ತಾಯಮ್ಮ ನಾಯಕಿಯ ಮಗ ಕಪ್ಪೆನಾಯಕನು ಹೋರಾಡಿ ಪ್ರಾಣ ತೆತ್ತಿದ್ದನು. ತೈಲಪದೇವನು ಅದಕ್ಕೆ ಪ್ರತಿಯಾಗಿ ಕಪ್ಪೆನಾಯಕನ ತಮ್ಮ ಬರಪನ ನಾಯಕನಿಗೆ ಸುತ್ತಲಿನ ಹಳ್ಳಿಗಳನ್ನು ಉಂಬಳಿಯಾಗಿ ನೀಡುವುದರ ಜತೆಗೆ ಈ ಪ್ರದೇಶದ ಆಡಳಿತದ ಜವಾಬ್ದಾರಿಯನ್ನು ನೀಡಿದ್ದನು. ಅವನಿಂದ ಈ ಊರು ಭರತನಹಳ್ಳಿಯಾಯಿತು.
ಇಂದಿಗೂ ಇಲ್ಲಿನ ಸುತ್ತಲಿರುವ ಬೆಟ್ಟಗಳಲ್ಲಿ ಶಿಲಾಶಾಸನ, ವೀರಗಲ್ಲು, ಮಹಾಸತಿ ಕಲ್ಲುಗಳು ಕಾಣಸಿಗುತ್ತವೆ. ಒಂದು ಕೋಟೆ ಇದ್ದುದರ ಅವಶೇಷವೂ ಕಾಣುತ್ತಿದೆ. 13ನೇ ಶತಮಾನದಲ್ಲಿ ಮುಲ್ಲಿದೇವನೆಂಬ ಕದಂಬ ಅರಸನು ಭರತನಹಳ್ಳಿಯ ದೇವಾಲಯಗಳ ಪುರ್ನನಿರ್ವಣ ಗೈದಿದ್ದನು ಎನ್ನಲಾಗುತ್ತದೆ. ಇಲ್ಲಿ ಶ್ರೀ ಭ್ರಮರಾಂಬಾ ಮತ್ತು ಮಲ್ಲಿಕಾರ್ಜುನ ದೇವರು ರಾರಾಜಿಸುತ್ತಿದ್ದಾರೆ.
ಇಲ್ಲಿ ಈ ದೇವರ ಸ್ಥಾಪನೆಯಾಗಿ ಏಳೆಂಟು ಶತಮಾನಗಳೇ ಕಳೆದಿದ್ದರೂ ಮಧ್ಯೆ ಇಡೀ ಊರು ಅವನತಿಗೊಂಡುದರಿಂದ ಉತ್ಸವಾದಿಗಳೂ ಕುಂಠಿತವಾಗಿದ್ದವು. 1960ರಲ್ಲಿ ಪುನಃ ದೇವಿಯ ಜಾತ್ರೋತ್ಸವ ಪ್ರಾರಂಭವಾಯಿತು. ಪ್ರತಿ ಐದು ವರ್ಷಗಳಿಗೊಮ್ಮೆ ಈ ಜಾತ್ರೋತ್ಸವ ಜರುಗುತ್ತದೆ. ಫೆ. 24ರಿಂದ ಪ್ರಾರಂಭವಾಗಿರುವ ಜಾತ್ರೆಯು ಮಾರ್ಚ್ ಒಂದರಂದು ಸಮಾಪನೆಗೊಳ್ಳಲಿದೆ. ನೂರಾರು ವರ್ಷಗಳ ಹಿಂದಿನ ದೇವಿಯ ಕಾಷ್ಠಮೂರ್ತಿ ಜೀರ್ಣಗೊಂಡಿದ್ದರಿಂದ ಹೊಸ ಮೂರ್ತಿಯ ಶಾಸ್ತ್ರೋಕ್ತ ಮರುಪ್ರತಿಷ್ಠಾಪನೆ ನೆರವೇರಿದ್ದು ಈ ಸಲದ ಜಾತ್ರೆಯ ವಿಶೇಷ. ಜಾತ್ರೆಯ ಅವಧಿಯಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತಿವೆ.
| ನಾ.ಸು.ಭರತನಹಳ್ಳಿ