ಒಂದೇ ವಂಶದಲ್ಲಿ ತಂದೆ-ಮಗ ಇಬ್ಬರೂ ತಪಸ್ವಿಗಳಾಗಿ, ಅವಧೂತರಾಗಿ ಬೆಳೆದದ್ದು ಆಧುನಿಕ ಭಾರತದ ಅಧ್ಯಾತ್ಮಚರಿತ್ರೆಯಲ್ಲಿ ವಿರಳ. ಅಷ್ಟು ವಿಶೇಷವಾದುದು ಶ್ರೀ ಸಹಜಾನಂದರು ಮತ್ತು ಶ್ರೀ ರಾಮಾನಂದರ ಸಾಧನೆ.
ಶ್ರೀಗಳ ಹಿನ್ನೆಲೆ: ಮೂಲತಃ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಜಾಗನಳ್ಳಿಯ ನಾರಾಯಣ-ಲಕ್ಷ್ಮೀ ದಂಪತಿಯ ಹಿರಿಯ ಮಗ ರಾಮಚಂದ್ರ. ಆ ಕಾಲದಲ್ಲಿ ಆವರಿಸಿದ ಮೈಲಿಬೇನೆಗೆ ನಾರಾಯಣ ಅವರು ತಂದೆ, ಮಡದಿ ಹಾಗೂ ಕಿರಿಯ ಮಗನನ್ನು ಕಳೆದುಕೊಂಡರು. ಬದುಕುಳಿದವರು ಇಬ್ಬರೇ, ಅವರು ಮತ್ತು ಹಿರಿಯ ಮಗ ರಾಮಚಂದ್ರ. ನಾರಾಯಣ ಅವರೂ ಮೈಲಿಯಿಂದ ಒಂದು ಕಣ್ಣನ್ನು ಕಳೆದುಕೊಂಡಿದ್ದರು. ಆದರೂ ಅವರ ಅಂತರಂಗದ ಕಣ್ಣು ಪ್ರಜ್ವಲಿಸುತ್ತಿತ್ತು. ಅಂಥ ಬೆಳಕಿನ ಬಟ್ಟೆಯನ್ನೇ ಕಂಡುಕೊಂಡ ಮೇಲೆ ಈ ಶರೀರಕ್ಕೆ ಆಡಂಬರದ ವೇಷವೇಕೆ ಅನಿಸಿತು. ನೆಲೆಮಾವಿನ ಶ್ರೀ ಪುರುಷೋತ್ತಮ ನೃಸಿಂಹ ಭಾರತೀ ಸ್ವಾಮಿಗಳಿಂದ ಸಂನ್ಯಾಸದೀಕ್ಷೆ ಪಡೆದು ಸಹಜಾನಂದ ನಾಮಾಂಕಿತರಾದರು. ದಿಗಂಬರರಾಗಿ ಗೋಕರ್ಣಕ್ಕೆ ತೆರಳಿ ತಪೋನಿರತರಾದರು. ಕೆಲಕಾಲದ ನಂತರ ಕಾಶಿ, ಕೈಲಾಸಪರ್ವತದೆಡೆ ಹೋಗಿ ತಪಸ್ಸನ್ನಾಚರಿಸಿದರು. ಅನಂತರ ಶ್ರೀಧರಸ್ವಾಮಿಗಳ ಅಪ್ಪಣೆಯಂತೆ ಶಿರಸಿ ಬಳಿಯ ಕೊಳಗಿಬೀಸಿನ ಮಾರುತಿಮಂದಿರದಲ್ಲಿ ನೆಲೆಸಿ ಭಕ್ತರ ಕಷ್ಟಗಳನ್ನು ನಿವಾರಿಸುತ್ತ, ಕೊಳಗಿಬೀಸಿನ ಅವಧೂತರು ಎಂದೇ ಪ್ರಸಿದ್ಧರಾದರು.
ಶ್ರೀ ರಾಮಾನಂದರಾದ ರಾಮಚಂದ್ರ: ಪ್ರಾಥಮಿಕ ಶಿಕ್ಷಣ ಮುಗಿಸಿ ಉಪನಯನಾನಂತರ ಶೀಗೆಹಳ್ಳಿಯಲ್ಲಿ ಸಂಸ್ಕೃತ ವ್ಯಾಸಂಗ ಆರಂಭಿಸಿದ ರಾಮಚಂದ್ರನಿಗೆ ಆದಿಶಂಕರರ ಅದ್ವೈತಮಾರ್ಗ ಇಷ್ಟವಾಗಿತ್ತು. ಇಹಪರಗಳ ಮರ್ಮವನ್ನರಿಯುವ ತುಡಿತವಿತ್ತು. ಒಂದೆಡೆ ನಾರಾಯಣ ಸಹಜಾನಂದರಾದರೆ, ಮಗ ರಾಮಚಂದ್ರ ಸದಾ ಅಧ್ಯಾತ್ಮಚಿಂತನೆಯಲ್ಲೇ ತೊಡಗಿ ನೆಲೆಮಾವು, ಶೀಗೆಹಳ್ಳಿ, ಗೋಕರ್ಣ ಮುಂತಾದೆಡೆ ಸಂಚರಿಸಿ ವೇದ ಮನನ ಮತ್ತು ವಿದ್ವಾಂಸರ ಜತೆ ರ್ಚಚಿಸುತ್ತ ಬೆಳೆದರು. 22ನೆಯ ವಯಸ್ಸಿಗೇ ರಾಮಚಂದ್ರನ ಮನಸ್ಸು ಪಕ್ವಗೊಂಡಿತ್ತು. ಪೂರ್ವಾಶ್ರಮದ ತಂದೆಯಿಂದಲೇ ಸಂನ್ಯಾಸದೀಕ್ಷೆ ಪಡೆದ ರಾಮಚಂದ್ರ ಮುಂದೆ ರಾಮಾನಂದ ಅವಧೂತರೆನಿಸಿದರು. ಕರಾವಳಿ ಭಾಗದ ಭಕ್ತರ ಮೊರೆಯನ್ನಾಲಿಸಿ ಕುಮಟಾ ಬಳಿಯ ಅಘನಾಶಿನಿ ದಡದ ದೀವಗಿಗೆ ಬಂದು ನೆಲೆಸಿದರು. ಅಲ್ಲಿ ಮಾರುತಿ ಮಂದಿರ ನಿರ್ವಣವಾಗಿ, ಭಕ್ತರ ಶ್ರದ್ಧಾಕೇಂದ್ರವಾಗಿದೆ. ಶ್ರೀ ರಾಮಾನಂದರ ಮಹಿಮಾತಿಶಯಕ್ಕೆ ಮಣಿದು ದೂರದೂರದ ಭಕ್ತರೂ ದೀವಗಿಗೆ ಬರುತ್ತಿದ್ದಾರೆ.
ದೀವಗಿಯಲ್ಲಿ ಗುರುಗಳ ಆಶ್ರಮ ಸ್ಥಾಪನೆಯಾದಾಗಿನಿಂದ ನಿತ್ಯ ಬರುವ ಭಕ್ತರಿಗೆ ಅನ್ನದಾನ ನಡೆಯುತ್ತಿದೆ. ಪ್ರತಿ ಹುಣ್ಣಿಮೆಯಂದು ವಿಶೇಷ ಧಾರ್ವಿುಕ ಕಾರ್ಯಕ್ರಮಗಳು ಸೇರಿದಂತೆ ಲೋಕಕಲ್ಯಾಣಾರ್ಥ ಅವಧೂತರು ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ದೊಡ್ಡ ಗೋಶಾಲೆಯಿದ್ದು, ಶ್ರದ್ಧೆಯಿಂದ ಗೋಸೇವೆ ಜರುಗುತ್ತಿದೆ. ಆಶ್ರಮದ ವತಿಯಿಂದ ಪ್ರತಿವರ್ಷ ಸರ್ಕಾರಿ ಶಾಲೆಯ ಸುಮಾರು ಮೂನ್ನೂರು ವಿದ್ಯಾರ್ಥಿಗಳಿಗೆ ಉಚಿತ ಶಾಲಾಬ್ಯಾಗ್ಗಳನ್ನು ವಿತರಿಸಲಾಗುತ್ತಿದೆ. ಯಕ್ಷಗಾನ, ಭಜನೆ, ಕೀರ್ತನೆಯಂಥ ಕಾರ್ಯಕ್ರಮಗಳೂ ನಡೆಯುತ್ತಿವೆ.
ಸ್ವತಃ ಕವಿಗಳಾಗಿರುವ ಶ್ರೀ ರಾಮಾನಂದರು ಸಂನ್ಯಾಸದೀಕ್ಷೆ ಪಡೆದ ಸಂದರ್ಭದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಎರಡು ಕೃತಿಗಳು ಲಭ್ಯವಿವೆ. ‘ಬಗೆಬಗೆಯ ಜಪ, ಯಜ್ಞ, ದಾನಕರ್ಮಗಳನ್ನು ಮಾಡಿಸುವುದು ಎಲ್ಲರಿಗೂ ಸುಲಭಸಾಧ್ಯವಲ್ಲ. ಆದರೆ ತ್ರಿಮೂರ್ತಿಸ್ವರೂಪಿ ದತ್ತಗುರುವಿನ ಸ್ಮರಣೆಗೆ ಭಕ್ತಿಯೊಂದೇ ಸಾಕು. ಇರುವ ನೆಲೆಯಲ್ಲಿಯೇ ಅವನನ್ನು ಸ್ಮರಿಸಿ ಇಷ್ಟಾರ್ಥವನ್ನು ಪಡೆಯಬಹುದು’ ಎಂಬುದು ‘ಸದ್ಗುರು ಚರಿತಾಮೃತಂ’ ಕೃತಿಯ ಸಂದೇಶ. ಹೀಗಾದಾಗ ಸಾಮಾಜಿಕ, ಧಾರ್ವಿುಕ, ಆರ್ಥಿಕ ಅಂತರಗಳು ಮಾಯವಾಗಿ ಎಲ್ಲೆಡೆ ನೆಮ್ಮದಿಯ ಸಮಾಜ ನಿರ್ವಣವಾಗುತ್ತದೆ. ಅದಕ್ಕೆಂದೇ ಅವಧೂತರು ಬೆಳಗಿದ್ದು ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ ತಾರಕಮಂತ್ರ. ಈ ನಾಮಸ್ಮರಣೆಗೆ ಬಡವ-ಬಲ್ಲಿದ, ಗಂಡು-ಹೆಣ್ಣೆಂಬ ಭೇದವಿಲ್ಲ. ಈ ಮಾರ್ಗ ಅತಿ ಸುಲಭ. ಈ ಮೂಲಕವೇ ಗುರುಗಳು ಭಕ್ತರನ್ನು ಉದ್ಧರಿಸಿದ್ದಾರೆ.ಅವರ ದಿವ್ಯತ್ವ ವರ್ಣನಾತೀತ. ನೋಡಲು ಎಷ್ಟು ಸರಳವೋ ಅರಿಯಲು ಅಷ್ಟೇ ನಿಗೂಢ. ಅವರ 92ನೇ ವರ್ಧಂತ್ಯುತ್ಸವವನ್ನು ಈ ರಥಸಪ್ತಮಿಯಂದು (ಫೆ. 1) ಆಚರಿಸಲಾಗುತ್ತದೆ.
| ಡಾ. ಜಿ.ಎಸ್. ಹೆಗಡೆ, ಹಡಿನಬಾಳ ಹೊನ್ನಾವರ