ರಾಜಸ್ಥಾನದ ಮಹೇಂದ್ರ ಸಿಂಗ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಸೈನ್ಯಕ್ಕೆ ಸೇರಬೇಕೆಂಬ ಬಯಕೆಯಿಂದ ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದ. ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸಾದ ಕೆಲವೇ ವಾರಗಳ ನಂತರ ಅವನಿದ್ದ ಊರಿಗೇ ಸೈನ್ಯಕ್ಕಾಗಿ ಭರ್ತಿ ನಡೆದಾಗ ಹಾಜರಾದ. ದೈಹಿಕ ಪರೀಕ್ಷೆಗಳಲ್ಲಿ ಪಾಸಾದ. ಮುಂದೆ ವೈದ್ಯಕೀಯ ಪರೀಕ್ಷೆ ಮಾಡಿದಾಗ ಆತನ ಕಣ್ಣುಗಳಿಗೆ ಬಣ್ಣಗಳ ವ್ಯತ್ಯಾಸ ತಿಳಿಯುವುದಿಲ್ಲ (ಕಲರ್ ಬ್ಲೆ ೖಂಡ್ ನೆಸ್ ) ಎಂದು ಸೈನ್ಯವು ಅವನನ್ನು ಭರ್ತಿ ಮಾಡಿಕೊಳ್ಳಲು ನಿರಾಕರಿಸಿತು.
ಒಂದು ದಿನ ಫೇಸ್ ಬುಕ್ ನಲ್ಲಿ ಆತನಿಗೆ ಸೀಮಾ ಎನ್ನುವವಳ ಫ್ರೆಂಡ್ ರಿಕ್ವೆಸ್ಟ್ ಬಂತು. ಮಹೇಂದ್ರ ಅವಳ ವಿವರಗಳನ್ನು ನೋಡಿದ. ಆಕೆ ತನಗೆ 22 ವರ್ಷಗಳೆಂದು, ಅವಿವಾಹಿತೆಯೆಂದು ಹೇಳಿಕೊಂಡು ಉತ್ತರ ಪ್ರದೇಶದ ನಿವಾಸಿಯಾಗಿರುವುದಾಗಿ ತಿಳಿಸಿದ್ದಳು. ತನಗೆ ರಕ್ಷಣಾ ಪಡೆಗಳ ಸದಸ್ಯರು ಬಹಳ ಇಷ್ಟವಾಗುತ್ತಾರೆ ಎಂದು ಬರೆದುಕೊಂಡಿದ್ದಳು. ಸೀಮಾಳ ಫೋಟೋ ನೋಡಿದ ಕೂಡಲೇ ಮಹೇಂದ್ರ ಅವಳತ್ತ ಆಕರ್ಷಿತನಾಗಿ ಅವಳ ಫ್ರೆಂಡ್ ರಿಕ್ವೆಸ್ಟ್ ನ್ನು ಒಪ್ಪಿದ. ಅವರಿಬ್ಬರೂ ಫೇಸ್ ಬುಕ್ ಮೆಸೆಂಜರ್ ಮೂಲಕ ಚಾಟ್ ಮಾಡತೊಡಗಿದರು. ಕೆಲವು ದಿನಗಳ ನಂತರ ಸೀಮಾ ತಾನು ಸೈನಿಕನನ್ನೇ ಮದುವೆಯಾಗಲು ನಿರ್ಧರಿಸಿರುವುದಾಗಿ ತಿ
ಳಿಸಿ ಮಹೇಂದ್ರನಿಗೆ ಆತ ಸದ್ಯ ಕೆಲಸ ಮಾಡುತ್ತಿರುವ ಸೈನ್ಯ ಘಟಕದ ಫೋಟೋ ಕಳುಹಿಸಲು ಕೇಳಿದಳು. ಮಹೇಂದ್ರ ಒಂದು ಕ್ಷಣ ತಬ್ಬಿಬ್ಬಾದರೂ ಸಾವರಿಸಿಕೊಂಡು ತನ್ನ ಊರಿನಲ್ಲಿ್ಲುೕ ಇದ್ದ ಸೈನ್ಯದ ಪ್ಯಾರಾಚೂಟ್ ರೆಜಿಮೆಂಟ್ ನ ಮುಖ್ಯದ್ವಾರದ ಮುಂದೆ ನಿಂತು ಸೆಲ್ಪಿ ತೆಗೆದು ಕಳುಹಿಸಿದ. ಇದರ ಉತ್ತರವಾಗಿ ಸೀಮಾ, ‘ಈ ಘಟಕದ ಕೆಲಸಕಾರ್ಯಗಳೇನು?’ ಮುಂತಾದ ಪ್ರಶ್ನೆಗಳನ್ನು ಹಾಕಿದಾಗ ಮಹೇಂದ್ರ ಅದೇ ಘಟಕದ ಸೈನಿಕನನ್ನು ಪರಿಚಯ ಮಾಡಿಕೊಂಡು ಅವನಿಂದ ಮಾಹಿತಿ ಕಲೆಹಾಕಿ ಸೀಮಾಳಿಗೆ ರವಾನಿಸಿದ.
ಕೆಲ ದಿನಗಳ ನಂತರ ಸೀಮಾ ತನಗೆ ಸೈನ್ಯ ನೆಲೆಗಳ ಫೋಟೋಗಳನ್ನು ಕಲೆಹಾಕುವ ಹುಚ್ಚಿದೆ ಎಂದು ತಿಳಿಸಿ, ‘ನೀನು ನನಗಾಗಿ ಬೇರೆ ಬೇರೆ ಊರುಗಳಿಗೆ ಹೋಗಿ ಅಲ್ಲಿನ ಸೈನ್ಯ, ಏರ್ ಫೋರ್ಸ್ ಮತ್ತು ನೌಕಾನೆಲೆಗಳ ಫೋಟೋಗಳನ್ನು ತೆಗೆದು ಕಳಿಸಬಲ್ಲೆಯಾ?’ ಎಂದು ಕೋರಿದಳು. ಅವಳನ್ನು ತೃಪ್ತಿ ಪಡಿಸುವ ಉದ್ದೇಶದಿಂದ, ‘ನಿನಗೆ ಯಾವ ಯಾವ ಘಟಕಗಳ ಫೋಟೋ ಬೇಕೆಂದು ಹೇಳಿದರೆ ಅವನ್ನು ನಾನು ಕಳಿಸುವೆ’ ಎಂದ ಮಹೇಂದ್ರ. ಅವಳಿಗಾಗಿ ಆತ ದಕ್ಷಿಣ ಭಾರತದ ಹಲವಾರು ರಕ್ಷಣಾ ನೆಲೆಗಳ ಫೋಟೋಗಳನ್ನು ತೆಗೆದು ಅವನ್ನು ವಾಟ್ಸ್ ಆಪ್ ಮೂಲಕ ಕಳುಹಿಸಿಕೊಟ್ಟ.
ಇಬ್ಬರ ಗೆಳೆತನವಾಗಿ ಒಂದು ವರ್ಷ ಕಳೆದ ನಂತರ ಮಹೇಂದ್ರನಿಗೆ ಸೀಮಾಳನ್ನು ಭೇಟಿಯಾಗಿ ಅವಳ ಮೇಲಿನ ಪ್ರೀತಿ ನಿವೇದಿಸಿಕೊಳ್ಳಬೇಕೆನಿಸಿತು. ಅವಳಿಗೆ ವಾಟ್ಸ್ ಆಪ್ ಮೂಲಕ ಫೋನ್ ಮಾಡಿ, ‘ನಾವಿಬ್ಬರೂ ಒಮ್ಮೆಯೂ ಮುಖಾಮುಖಿಯಾಗಿಲ್ಲ, ನೀನೆಲ್ಲಿರುವೆ ಎಂದು ತಿಳಿಸಿದರೆ ನಿನ್ನ ಊರಿಗೆ ಬರುವೆ’ ಎಂದ. ಸೀಮಾ, ‘ನಾನಿರುವುದು ದೆಹಲಿಯಲಿ. ನೀನು ಇಲ್ಲಿಗೆ ಬಂದು ಹೋಗಬೇಕಾದರೆ ಹದಿನೈದು ದಿನಗಳ ರಜೆಯಾದರೂ ನಿನಗೆ ಬೇಕಾಗಬಹುದು, ಅಷ್ಟು ದಿನಗಳ ರಜೆ ಕೊಡಲು ನಿನ್ನ ಅಧಿಕಾರಿಗಳು ತಯಾರಿದ್ದರೆ ಮುಂದಿನ ವಾರವೇ ಇಲ್ಲಿಗೆ ಬಾ, ನಿನಗಾಗಿ ಎದುರುನೋಡುತ್ತಿರುತ್ತೇನೆ’ ಎಂದಳು. ‘ಆದರೆ ಇಲ್ಲಿಗೆ ಬರುವ ಮೊದಲು ನನಗಾಗಿ ಸಣ್ಣ ಕೆಲಸ ಮಾಡಬೇಕು’ ಎಂದಳು. ‘ಅದೇನದು’ ಎಂದು ಮಹೇಂದ್ರ ಕೇಳಿದಾಗ, ‘ನಿಮ್ಮ ಊರಿನಲ್ಲಿ ರಕ್ಷಣಾ ಇಲಾಖೆಯ ಪ್ರಯೋಗಾಲಯವಿದೆ. ಅಲ್ಲಿ ಯಾವ ಮುಖ್ಯ ವಿಷಯಗಳ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ ಎಂದು ತಿಳಿದು ಆ ಮಾಹಿತಿ ತಾ’ ಎಂದಳು. ಮಹೇಂದ್ರನಿಗೆ ಅವಳ ಕೋರಿಕೆ ಹೇಗೆ ಈಡೇರಿಸಬೇಕು ಎನ್ನುವುದೇ ಸಮಸ್ಯೆಯಾಯಿತು. ‘ನಾನಿರುವ ಕಚೇರಿಗೂ ಆ ಪ್ರಯೋಗಾಲಯಕ್ಕೂ ಯಾವುದೇ ಸಂಬಂಧವಿಲ್ಲ, ಹೀಗಾಗಿ ಈ ಮಾಹಿತಿ ಸಿಗುವುದು ಕಷ್ಟ’ ಎಂದು ಮಹೇಂದ್ರ ಹೇಳಿದಾಗ, ‘ನನಗಾಗಿ ಇಷ್ಟನ್ನೂ ಮಾಡಲಾಗುವುದಿಲ್ಲವೇ?’ ಎಂದಳು. ಮಹೇಂದ್ರ ಆ ಪ್ರಯೋಗಾಲಯದ ಬಳಿಗೆ ಹೋಗಿ ನೋಡಿದಾದ ಅಲ್ಲಿ ಹೆಚ್ಚಿನ ಭದ್ರತೆಯಿರುವುದು ಕಂಡಿತು. ಆದರೂ ಧೃತಿಗೆಡದೆ ಆತ ಆ ಪ್ರಯೋಗಾಲಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಸಂರ್ಪಸಿ ಅವನಿಂದ ಮಾಹಿತಿ ಕಲೆಹಾಕಲು ನೋಡಿದ. ಆ ವ್ಯಕ್ತಿ ಯಾವುದೇ ಮಾಹಿತಿ ಕೊಡಲು ನಿರಾಕರಿಸಿದ.
ಮಹೇಂದ್ರ ಮುಂದಿನ ವಾರವೇ ದೆಹಲಿಗೆ ಹೋಗಿ ಸೀಮಾಳನ್ನು ಭೇಟಿ ಮಾಡಲು ಒಂದು ಹೋಟೆಲ್ಲಿಗೆ ಹೋದ. ಅಲ್ಲಿ ಅವರಿಬ್ಬರೂ ಮಾತನಾಡುತ್ತಿರುವಾಗಲೇ ಕೆಲವರು ಅವರನ್ನು ಸುತ್ತುವರಿದು ತಾವು ಭಾರತದ ಗುಪ್ತಚರ ದಳದ ಅಧಿಕಾರಿಗಳೆಂದು ಹೇಳಿ ಅವರಿಬ್ಬರನ್ನೂ ಹತ್ತಿರದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಠಾಣೆಯಲ್ಲಿ ಅಧಿಕಾರಿಗಳು ಸೀಮಾಳನ್ನು ಪ್ರಶ್ನಿಸಿದಾಗ ಆಕೆ ತನ್ನನ್ನು ಪಾಕಿಸ್ತಾನ ದೂತಾವಾಸದ ಅಧಿಕಾರಿಯೊಬ್ಬ ಸಂರ್ಪಸಿ ತಾನು ಕೇಳುವ ಮಾಹಿತಿ ತರಿಸಿದರೆ ಕೈತುಂಬ ಹಣಕೊಡುವುದಾಗಿ ಹೇಳಿದನೆಂದೂ, ಆತನ ಸೂಚನೆ ಮೇರೆಗೆ ಫೇಸ್ ಬುಕ್ ಅಕೌಂಟನ್ನು ತೆರೆದು ರಕ್ಷಣಾ ಪಡೆಗಳ ಸದಸ್ಯರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಿದ್ದೆ ಎಂದಳು. ‘ಪಾಕಿಸ್ತಾನಿ ಅಧಿಕಾರಿ ಆ ದೇಶದ ಗೂಢಚಾರಿಯೆಂದು ನಮಗೆ ಅರಿವಿತ್ತು. ನಾವು ಅವನನ್ನು ಹಿಂಬಾಲಿಸುವ ಸಮಯದಲ್ಲಿ ಅವನ ಹಾಗೂ ನಿನ್ನ ಸಂಪರ್ಕದ ಬಗ್ಗೆ ಅರಿವಾಗಿ ನಿನ್ನ ವಾಟ್ಸ್ ಆಪ್, ಇಮೇಲ್ ಮುಂತಾದ ಅಕೌಂಟುಗಳನ್ನು ಗಮನಿಸುತ್ತಿದ್ದೆವು’ ಎಂದ ಆ ಅಧಿಕಾರಿಗಳು ಸೀಮಾಳನ್ನು ಬಂಧಿಸಿದರು.
ಆನಂತರ ಅವರು ಮಹೇಂದ್ರ ಸೀಮಾಳಿಗೆ ಕಳುಹಿಸಿದ್ದ ಫೋಟೋಗಳ ಪ್ರತಿಗಳನ್ನು ಅವನಿಗೆ ತೋರಿಸಿ ‘ಇದನ್ನು ನೀನೇ ತೆಗೆದಿರುವೆಯಾ?’ ಎಂದು ಪ್ರಶ್ನಿಸಿದರು. ಹೌದೆಂದು ಆತ ಒಪ್ಪಿಕೊಂಡ. ತಾನೊಬ್ಬ ಬಟ್ಟೆ ವ್ಯಾಪಾರಿ ಹೊರತು ತನಗೂ ಸೈನ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದ. ‘ನಿಷೇಧಿತ ಸ್ಥಳಗಳ ಫೋಟೋ ತೆಗೆಯಬಾರದು ಎಂದು ಎಚ್ಚರಿಕೆಯ ಫಲಕಗಳನ್ನು ಹಾಕಿದ್ದರೂ ಅವುಗಳ ಫೋಟೋಗಳನ್ನೇಕೆ ತೆಗೆದೆ?’ ಎಂದು ಅಧಿಕಾರಿಗಳು ಪ್ರಶ್ನಿಸಿದಾಗ, ‘ಸೀಮಾಳನ್ನು ಒಲಿಸಿಕೊಳ್ಳಲು ಅವಳು ಹೇಳಿದ ಕೆಲಸ ಮಾಡಿದೆ’ ಎಂದ.
‘ಸೀಮಾ ಪಾಕಿಸ್ತಾನದ ಐಎಸ್ ಐ ಗುಪ್ತಚರ ದಳಕ್ಕಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ನಮಗೆ ಅರಿವಿದ್ದ ಕಾರಣ ಎರಡು ವರ್ಷಗಳಿಂದ ಅವಳ ಚಟುವಟಿಕೆಗಳನ್ನು ಗಮನಿಸುತ್ತಿದ್ದೆವು. ಅವಳಿಗೆ ನೀನು ನಮ್ಮ ದೇಶದ ಸಂವೇದನಾಶೀಲ ಮಾಹಿತಿ ನೀಡಿ ಭಾರತದ ವೈರಿದೇಶಕ್ಕೆ ಸಹಾಯ ಮಾಡಿರುವ ಕಾರಣಕ್ಕಾಗಿ ನಿನ್ನನ್ನು ಬಂಧಿಸಿದ್ದೇವೆ’ ಎಂದ ಅಧಿಕಾರಿಗಳು ಅವರಿಬ್ಬರನ್ನೂ ನ್ಯಾಯಾಧೀೕಶರ ಮುಂದೆ ಹಾಜರು ಮಾಡಿದರು. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.
ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡುವ ಉದ್ದೇಶಕ್ಕೆ ಕುಮ್ಮಕ್ಕು ನೀಡುತ್ತಿದ್ದ ಹಾಗೂ ದೇಶದ ವಿರುದ್ಧ ಅಪರಾಧಗಳನ್ನು ಮಾಡುವ ಷಡ್ಯಂತ್ರದಲ್ಲಿ ಪಾಕಿಸ್ತಾನದ ಗೂಢಚರನ ಜತೆ ಶಾಮೀಲಾದ ಆರೋಪದ ಮೇರೆಗೆ ಸೀಮಾಳ ಮೇಲೆಯೂ, ದೇಶದ ರಹಸ್ಯ ಮಾಹಿತಿ ವೈರಿದೇಶದೊಂದಿಗೆ ಹಂಚಿಕೊಂಡ ಆರೋಪದ ಮೇರೆಗೆ ಮಹೇಂದ್ರನ ಮೇಲೆಯೂ ಅಧಿಕೃತ ರಹಸ್ಯ ಕಾಯ್ದೆ ಮೇರೆಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಆರೋಪ ನ್ಯಾಯಾಲಯದಲ್ಲಿ ಸಾಬೀತಾದರೆ ಇಬ್ಬರಿಗೂ ಹದಿನಾಲ್ಕು ವರ್ಷಗಳ ಜೈಲುವಾಸವಾಗಬಹುದು. ಪಾಕಿಸ್ತಾನ ದೂತಾವಾಸದ ಅಧಿಕಾರಿಯನ್ನು ದೇಶದಿಂದ ತತ್ ಕ್ಷಣವೇ ಹೊರಹೋಗಲು ಸರ್ಕಾರ ಸೂಚಿಸಿ ಈ ಬಗ್ಗೆ ಪಾಕಿಸ್ತಾನಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
‘ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ, ಗೆಲ್ಲಲ್ಲಿಲ್ಲಿವನಾ ಪರೀಕ್ಷೆಯೊಳಗೊಂದು ವಿಧಿ, ಸೊಲ್ಲಿಪಿದು ಸರಿಯೇನೋ ಮಂಕುತಿಮ್ಮ’ ಎಂಬಂತೆ ಹೆಣ್ಣಿನ ಮೋಹಕ್ಕೆ ಸಿಲುಕಿ ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ಕಲೆಹಾಕುವುದು ಮತ್ತು ಇತರರೊಡನೆ ಅದನ್ನು ಹಂಚಿಕೊಳ್ಳುವುದು ಗುರುತರ ಅಪರಾಧವೆಂದರಿಯದ ಮಹೇಂದ್ರ ಅನಾವಶ್ಯಕವಾಗಿ ತೊಂದರೆಗೀಡಾದ. ಇಂಥ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರುವುದು ಅವಶ್ಯ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)