ಅಂಕಣ

ಬಜೆಟ್​ನಲ್ಲಿ ರಾಜಧಾನಿ ಬೆಂಗಳೂರಿಗೆ ಸಿಕ್ಕಿದ್ದೇನು? ಇಲ್ಲಿದೆ ವಿವರ..

Webdesk - Narayanaswamy

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್​ನಲ್ಲಿ ರಾಜಧಾನಿ ಬೆಂಗಳೂರಿಗೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಸುರಂಗ ಮಾರ್ಗ, ಮೆಟ್ರೋ ವಿಸ್ತರಣೆ, ಬಿಎಂಟಿಸಿಗೆ ಸಹಕಾರ ಸೇರಿ ಹತ್ತು ಹಲವು ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಎಲ್ಲ 20 ಲಕ್ಷ ಆಸ್ತಿಗಳ ಆಸ್ತಿ ತೆರಿಗೆ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವುದು, 2024 - 25 ನೇ ಸಾಲಿನಲ್ಲಿ ಮಾಲೀಕರಿಗೆ ಡಿಜಿಟಲ್ ಇ-ಖಾತಾ ಮತ್ತು ಆಸ್ತಿ ತೆರಿಗೆ ಪಾವತಿ ವಿವರಗಳು ಲಭ್ಯವಾಗುವಂತೆ ಮಾಡಲಾಗುವುದು. ನಗರದ ಪ್ರಮುಖ ರಸ್ತೆಗಳಲ್ಲಿ 147 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. 1,700 ಕೋಟಿ ರೂ. ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಗಳನ್ನು ಡಿಸೆಂಬರ್ 2025 ರೊಳಗೆ ಪೂರ್ಣಗೊಳಿಸುವುದು, ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಿಸುವ ಮೂಲಕ ಸಂಚಾರ ದಟ್ಟಣೆಯನ್ನು ಬಗೆಹರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹೆಬ್ಬಾಳ ಜಂಕ್ಷನ್ ನಲ್ಲಿ ಪ್ರಾಯೋಗಿಕವಾಗಿ ಟನೆಲ್ ನಿರ್ಮಾಣ ಮಾಡುವುದು, ರಾಜಕಾಲುವೆ ನಾಲೆಗಳ ಬಫರ್ ವಲಯದೊಳಗೆ ನಾಲಾ ಬಫರ್ ನಿರ್ಮಾಣ ಬಳಸಿಕೊಂಡು ಸರ್ವಋತು ರಸ್ತೆಗಳ ನಿರ್ಮಾಣ, 200 ಕೋಟಿ ರೂ. ಅಂದಾಜು ವೆಚ್ಚದಲ್ಲಿ 100 ಕಿ.ಮೀ. ಉದ್ದದ ಬಫರ್ ರಸ್ತೆ ಅಭಿವೃದ್ಧಿ, ಸಂಚಾರ ದಟ್ಟಣೆ ಕಡಿಮೆಗೊಳಿಸಲು ಪೆರಿಫೆರಲ್ ರಿಂಗ್ ರೋಡ್, ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂಬ ಹೊಸ ಪರಿಕಲ್ಪನೆಯಲ್ಲಿ 73 ಕಿ.ಮೀ. ಉದ್ದದ ರಸ್ತೆಯನ್ನು 27,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ-ಡೆಕ್ ನಿರ್ಮಾಣ, ವಿದ್ಯುತ್ ಶುಲ್ಕ ಪಾವತಿಯ ಆರ್ಥಿಕ ಹೊರೆ ಕಡಿಮೆಗೊಳಿಸಲು ಸೋಲಾರ್ ಪಾರ್ಕ್ ನಿರ್ಮಾಣ,

ಬಿ.ಎಂ.ಟಿ.ಸಿ ಸೇವೆಯೊಂದಿಗೆ ಮೆಟ್ರೋ ರೈಲು ಹಾಗೂ ಸಬ್-ಅರ್ಬನ್ ರೈಲು ಯೋಜನೆಗಳು ಸೇರಿ ಬಹುವಿಧ ಸಾರಿಗೆ ವ್ಯವಸ್ಥೆಗಳ ಒಗ್ಗೂಡಿಸುವಿಕೆ, ಆಕರ್ಷಕ ಪ್ರವಾಸಿ ತಾಣ ನಿರ್ಮಾಣಕ್ಕೆ ಯೋಜನೆ ಮಾಡಲಾಗಿದೆ ಎಂದು ಹೇಳಿದರು.

2025ರೊಳಗೆ ಹೊಸದಾಗಿ 44 ಕಿ.ಮೀ ಮೆಟ್ರೋ ಮಾರ್ಗ ಸೇರ್ಪಡೆ, ಮೆಟ್ರೋ ಯೋಜನೆ ಹಂತ-2, 2ಎ ಯೋಜನೆಯಡಿ ಹೊರವರ್ತುಲ ರಸ್ತೆ, ವಿಮಾನ ನಿಲ್ದಾಣ ಮಾರ್ಗವನ್ನು 2026ಕ್ಕೆ ಪೂರ್ಣ, ಅಂದಾಜು 15 ಸಾವಿರದ 661 ಕೋಟಿ ವೆಚ್ಚದಲ್ಲಿ ನಮ್ಮ ಮೆಟ್ರೋ ಹಂತ 3ಕ್ಕೆ ಆಡಳಿತಾತ್ಮಕ ಅನುಮೋದನೆ, ಸರ್ಜಾಪುರ, ಅಗ್ರಹಾರ ಕೋರಮಂಗಲ, ಡೈರಿ ವೃತ್ತ, ಮೇಖ್ರಿ ವೃತ್ತ ಹೆಬ್ಬಾಳ ಸಂಪರ್ಕಿಸುವ ಮಾರ್ಗ, ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣವರ, ಹೀಲಲಿಗೆಯಿಂದ ರಾಜಾನಕುಂಟೆ ವರೆಗೆ 42.2 ಕಿಲೋ ಮೀಟರ್ ನಮ್ಮ ಮೆಟ್ರೋ ಹಂತ-3 ರಡಿ ಅಂದಾಜು 15,611 ಕೋಟಿ ರೂ. ವೆಚ್ಚ. ಇದಕ್ಕೆ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದು. ಉಳಿದಿದ್ದನ್ನು ಕೇಂದ್ರ ಸರ್ಕಾರದ ಅನುಮೋದನೆ ನಿರೀಕ್ಷೆಯಲ್ಲಿದೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ 200 ಕೋಟಿ ರೂ.ಗಳ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ, ನಗರ ಜಿಲ್ಲೆಯ 30 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ವಲಯಗಳನ್ನಾಗಿ ವಿಂಗಡಣೆ ಮಾಡಿ, ಹೊರವಲಯದ ನಾಲ್ಕು ಕಡೆ 50 ರಿಂದ 100 ಎಕರೆ ಜಮೀನಿನಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ‌ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ವಿವರಿಸಿದರು