ಇಂದು ಡಾ. ರಾಜಕುಮಾರ್ ಅವರ 92ನೇ ಜನ್ಮದಿನ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿದ ನಟ ಎಂದರೆ ಅದು ಡಾ. ರಾಜಕುಮಾರ್. ಅವರ ಯಾವ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯ ಮತ್ತು ಕಾಳಜಿ ಇದೆ ಎನ್ನುವುದಕ್ಕಿಂತ, ಯಾವುದರಲ್ಲಿ ಇಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ. ಬರೀ ತೆರೆಯ ಮೇಲಷ್ಟೇ ಅಲ್ಲ, ತೆರೆಯ ಹಿಂದಿನ ಅವರ ಕಾಳಜಿ ಸಹ ಅನನ್ಯ ಮತ್ತು ಅಮೂಲ್ಯ. ಅವರ ಈ ಕಾಳಜಿ ಅನೇಕರಿಗೆ ಸ್ಪೂರ್ತಿಯಾಗಿದೆ.
ಅವರು ಭಕ್ತಿ ಪ್ರಧಾನ ಸಿನಿಮಾಗಳನ್ನು ಮಾಡಿದರು. ಸಾಮಾಜಿಕ, ಐತಿಹಾಸಿಕ ... ಹೀಗೆ ಎಲ್ಲಾ ರೀತಿಯ ಸಿನಿಮಾಗಳನ್ನೂ ಮಾಡಿದರು. ಸಿನಿಮಾ ಯಾವುದೇ ಇರಲಿ, ಯಾವುದೇ ಜಾನರ್ಗೆ ಸೇರಲಿ, ಸಾಮಾಜಿಕ ಮೌಲ್ಯ, ಕಾಳಜಿ, ಹೋರಾಟಗಳನ್ನು ಎತ್ತಿ ಹಿಡಿಯುವಂತಹ ಚಿತ್ರಗಳಲ್ಲೇ ಡಾ. ರಾಜಕುಮಾರ್ ಹೆಚ್ಚು ಕಾಣಿಸಿಕೊಂಡಿದ್ದು ವಿಶೇಷ.
ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಡಾ. ರಾಜಕುಮಾರ್ ಅವರ ಅದ್ಭುತ ಚಿತ್ರ ಯಾವುದು ಎಂದರೆ ಎಲ್ಲರೂ ಒಕ್ಕೊರಲಿನಿಂದ ಹೇಳುವ ಚಿತ್ರವೆಂದರೆ ಅದು ‘ಬಂಗಾರದ ಮನುಷ್ಯ’. ಈ ಚಿತ್ರ ಬಿಡುಗಡೆಯಾಗಿ 48 ವರ್ಷಗಳೇ ಆಗಿವೆ. ಈಗಲೂ ಕನ್ನಡಿಗರ ಮನಸ್ಸಿನಲ್ಲಿ ಈ ಚಿತ್ರ ಹಸಿರಾಗಿರುವುದಕ್ಕೆ ಕಾರಣ ಇದರಲ್ಲಿನ ಅದ್ಭುತ ಸಂದೇಶಗಳು. ಈ ಚಿತ್ರದ ‘ಆಗದು ಎಂದು ಕೈಕಟ್ಟಿ ಕುಳಿತರೆ ...’, ‘ನಗುನಗುತಾ ನಲಿ ನಲಿ ...’, ‘ಹನಿಹನಿ ಗೂಡಿದ್ರೆ ಹಳ್ಳ ...’ ಹಾಡುಗಳು ಜನರನ್ನು ಬಡಿದೆಬ್ಬಿಸಿದ್ದು ಸುಳ್ಳಲ್ಲ. ಕನ್ನಡ ಚಿತ್ರರಂಗದಲ್ಲಿ ಅದುವರೆಗೂ ನೂರಾರು ಚಿತ್ರಗಳು ಬಂದಿದ್ದರೂ, ಕೃಷಿಯ ಪ್ರಾಮುಖ್ಯತೆಯನ್ನು ತೋರಿಸಿಕೊಟ್ಟಿದ್ದಷ್ಟೇ ಅಲ್ಲ, ಒಬ್ಬ ಮನುಷ್ಯ ಶ್ರಮ ಹಾಕಿದರೆ, ಸ್ವಾವಲಂಬಿಯಾಗಿ ಮತ್ತು ಸ್ವಾಭಿಮಾನಿಯಾಗಿ ಹೇಗೆ ಬದುಕಬಹುದು ಎಂದು ತೋರಿಸಿಕೊಟ್ಟ ಚಿತ್ರ ಅದು. ಇದು ಡಾ. ರಾಜಕುಮಾರ್ ಅವರ ಚಿತ್ರಜೀವನದಲ್ಲೇ ಒಂದು ಅದ್ಭುತ ಚಿತ್ರವಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲೂ ಒಂದು.
ಇದಕ್ಕೂ ಮುನ್ನವೂ ರಾಜಕುಮಾರ್ ಅವರು ತಮ್ಮ ಚಿತ್ರಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದಿದ್ದರು. ಆ ನಂತರ ಅವರ ಬಹುತೇಕ ಚಿತ್ರಗಳಲ್ಲಿ ಮನರಂಜನೆಯ ಜತೆಗೆ ಸಾಮಾಜಿಕ ಕಳಕಳಿ ಮತ್ತು ಮೌಲ್ಯಗಳನ್ನು ಗಮನಿಸಬಹುದು. ‘ಗಂಧದ ಗುಡಿ’, ‘ಸಂಪತ್ತಿಗೆ ಸವಾಲ್’, ‘ಗಿರಿಕನ್ಯೆ’, ‘ಕಾಮನ ಬಿಲ್ಲು’, ‘ಜ್ವಾಲಾಮುಖಿ’, ‘ಧ್ರುವತಾರೆ’, ‘ಜೀವನ ಚೈತ್ರ’, ‘ಆಕಸ್ಮಿಕ’, ‘ಒಡಹುಟ್ಟಿದವರು’, ‘ಶಬ್ಧವೇಧಿ’ ಹೀಗೆ ಹಲವು ಚಿತ್ರಗಳನ್ನು ಹೆಸರಿಸಬಹುದು. ಒಂದೊಂದು ಚಿತ್ರದಲ್ಲೂ ಒಂದೊಂದು ಸಾಮಾಜಿಕ ಕಳಕಳಿ ಇದೆ, ಒಂದೊಂದು ನೀತಿಪಾಠವಿದೆ. ‘ಗಂಧದ ಗುಡಿ’ಯಲ್ಲಿ ಅರಣ್ಯ ರಕ್ಷಣೆ, ‘ಜೀವನ ಚೈತ್ರ’ದಲ್ಲಿ ಕುಡಿತದಿಂದಾಗುವ ಸಮಸ್ಯೆಗಳು, ‘ಆಕಸ್ಮಿಕ’ದಲ್ಲಿ ವೇಶ್ಯಾವೃತ್ತಿಯ ಕರಿನೆರಳು, ‘ಶಬ್ದವೇಧಿ’ಯಲ್ಲಿ ಸಮಾಜಕ್ಕೆ ಮಾರಕವಾಗಿರುವ ಡ್ರಗ್ಸ್ ಮಾಫಿಯಾ, ‘ಜ್ವಾಲಾಮುಖಿ’ಯಲ್ಲಿ ಶ್ರೀಮಂತರ ದರ್ಪ, ‘ಒಡಹುಟ್ಟಿದವರು’ ಚಿತ್ರದಲ್ಲಿ ಕೃಷಿಯ ಜತೆಗೆ ಒಗ್ಗಟ್ಟಾಗಿ ಬಾಳಬೇಕೆಂಬ ಸಂದೇಶ ... ಹೀಗೆ ರಾಜ್ ಅವರ ಹಲವು ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯ ಮತ್ತು ಕಾಳಜಿಗಳನ್ನು ಗಮನಿಸಬಹುದು.
ಬರೀ ತೆರೆಯ ಮೇಲಷ್ಟೇ ಅಲ್ಲ, ನಿಜಜೀವನದಲ್ಲಿ ಸಾಮಾಜಿಕ ಮೌಲ್ಯ ಮತ್ತು ಕಳಕಳಿಯನ್ನು ಪ್ರತಿಪಾದಿಸಿದವರು ಡಾ. ರಾಜ್. ಕನ್ನಡ ನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಇಳಿದರು. ಗೋಕಾಕ್ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಾದಾಗ, ಡಬ್ಬಿಂಗ್ ವಿರುದ್ಧ ಚಿತ್ರರಂಗ ಒಂದಾದಾಗ ರಾಜಕುಮಾರ್ ಮುಂಚೂಣಿಯಲ್ಲಿ ನಿಂತರು. ಇದಲ್ಲದೆ, 60ರ ದಶಕದಲ್ಲಿ ಕರ್ನಾಟಕದಲ್ಲಿ ಭೀಕರ ಪ್ರವಾಹವಾದಾಗ, ಡಾ. ರಾಜಕುಮಾರ್ ಅವರ ನೇತೃತ್ವದಲ್ಲಿ ಕಲಾವಿದರೆಲ್ಲಾ ನಾಡಿನುದ್ದಕ್ಕೂ ಪ್ರವಾಸ ಮಾಡಿ, ಎಲ್ಲೆಡೆ ಹಣ ಸಂಗ್ರಹ ಮಾಡಿ, ಪ್ರವಾಹ ಪರಿಹಾರ ನಿಧಿಗೆ ಅರ್ಪಿಸಿದರು. ಗುಜರಾತ್ನಲ್ಲಿ ಭೂಕಂಪವಾದ ಸಂದರ್ಭದಲ್ಲಿ, ಭೂಕಂಪಪೀಡಿತರಿಗೆ ಧನಸಹಾಯ ಮಾಡಿದ್ದಲ್ಲದೆ, ರಸ್ತೆಗಿಳಿದು ಹಣ ಸಂಗ್ರಹ ಮಾಡಿದರು. ಇನ್ನು, ಚಿತ್ರಗಳಿಗಾಗಿ ಹಾಡಿದಾಗ ಬಂದ ಸಂಭಾವನೆಯನ್ನು ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವಾದ ಶಕ್ತಿಧಾಮಕ್ಕೆ ಕೊಡುತ್ತಿದ್ದುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಹೀಗೆ ಡಾ. ರಾಜಕುಮಾರ್ ಅವರು ತಮ್ಮ ಜೀವನದುದ್ದಕ್ಕೂ, ಅದು ವೃತ್ತಿ ಜೀವನವೇ ಇರಲಿ ಅಥವಾ ವೈಯಕ್ತಿಕ ಜೀವನವಿರಲಿ, ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಜತೆಗೆ, ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುತ್ತಲೇ ಇದ್ದರು. ಅವರ ಸಿನಿಮಾಗಳು ಮತ್ತು ಕೆಲಸಗಳು ಹಲವರಿಗೆ ಸ್ಪೂರ್ತಿಯಾಗಿವೆ. ಅದರಿಂದಾಗಿಯೇ ಅವರು ಬರೀ ತೆರೆಯ ಮೇಲಷ್ಟೇ ಅಲ್ಲ, ನಿಜಜೀವನದಲ್ಲೂ ‘ಬಂಗಾರದ ಮನುಷ್ಯ’ನಾಗಿ ಬಾಳಿದರು, ಬೆಳಗಿದರು ಎಂದರೆ ತಪ್ಪಿಲ್ಲ.