ಅಂಕಣ

ಮಕ್ಕಳಾದ ಮೇಲೆ ದಪ್ಪ ಆಗ್ಲೇಬೇಕಾ?; ಸಣ್ಣ ಆಗೋದು ದೊಡ್ಡ ವಿಷ್ಯಾನೇ ಅಲ್ಲ..

ಮಕ್ಕಳಾದ ಮೇಲೆ ಮಹಿಳೆಯರು ದಪ್ಪವಾಗುವುದು ಸಾಮಾನ್ಯ ಎಂಬ ಅಭಿಪ್ರಾಯ ಇದೆ. ಆದರೆ ಇದು ಅನಿವಾರ್ಯವೇ? ಆರೋಗ್ಯಕಾರಿಯೇ? ಅಥವಾ ಮಕ್ಕಳನ್ನು ಹೆತ್ತ ಮೇಲೂ ಫಿಟ್ ಆಂಡ್ ಫೈನ್ ಆಗಿರಬಹುದೇ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

| ರಶ್ಮಿ ರಾ. ಹೆಬ್ಬೂರು

ನಮ್ಮ ನಿಮ್ಮ ನಡುವೆ ಎಷ್ಟೋ ಮಹಿಳೆಯರು, ನಾವು ಮಕ್ಕಳಾದ ಮೇಲೇ ದಪ್ಪಗಾಗಿದ್ದು ಎಂದು ಹೇಳಿಕೊಳ್ಳುವುದನ್ನು ನೋಡಿದ್ದೇವೆ. ಹಲವರು ಎರಡು ಮಕ್ಕಳನ್ನು ಹಡೆದಿದ್ದೀನಿ... ಇಷ್ಟೂ ಹೊಟ್ಟೆ ಬರೋಲ್ವ? ಎನ್ನುತ್ತಾ ತಮ್ಮ ಸ್ಥೂಲಕಾಯದ ಬಗ್ಗೆ ಅರೆಬರೆ ಸಾಂತ್ವನ ಹೇಳಿಕೊಳ್ಳುತ್ತಾರೆ. ನಿಜ, ಮಕ್ಕಳಾದ ಮೇಲೆ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಆದರೆ, ತಾಯಿಯಾದ ಮಾತ್ರಕ್ಕೆ ಸ್ಥೂಲಕಾಯ ಕಟ್ಟಿಟ್ಟ ಬುತ್ತಿ ಎಂಬ ಮನೋಭಾವ ಸರಿಯಲ್ಲ ಎನ್ನುತ್ತಾರೆ ತಜ್ಞರು. ಮಕ್ಕಳಿರುವ ಮತ್ತು ಮಕ್ಕಳಿಲ್ಲದ ಮಹಿಳೆಯರ ನಡುವಿನ ತೂಕದಲ್ಲಿನ ವ್ಯತ್ಯಾಸದ ಬಗ್ಗೆ ಇತ್ತೀಚೆಗೆ ಅಮೆರಿಕದ ಮಿಚಿಗನ್ ಯೂನಿವರ್ಸಿಟಿಯ ಪೊ›ಫೆಸರ್ ಓಲ್ಗಾ ಯಕುಶೇವ ಅಧ್ಯಯನ ನಡೆಸಿದ್ದಾರೆ. ಇದಕ್ಕಾಗಿ ಒಂದರಿಂದ ನಾಲ್ಕು ಮಕ್ಕಳ ತಾಯಂದಿರಾದ 30,000 ಮಹಿಳೆಯರ ಸಮೀಕ್ಷೆ ನಡೆದಿದ್ದು, ಬಹುತೇಕ ಮಹಿಳೆಯರಿಗೆ ಮಕ್ಕಳಾದ ಮೇಲೆ ಗರ್ಭಿಣಿಯಾಗುವ ಮೊದಲಿದ್ದ ದೇಹತೂಕಕ್ಕೆ ವಾಪಸಾಗಲು ಸಾಧ್ಯವೇ ಆಗಿಲ್ಲ ಎಂಬುದು ತಿಳಿದುಬಂದಿದೆ. ಮಹಿಳೆಯರಲ್ಲಿ ವಯಸ್ಸಿನೊಂದಿಗೆ ಹೆಚ್ಚುವ ಸಾಮಾನ್ಯ ತೂಕದ ಪ್ರಮಾಣ ವರ್ಷಕ್ಕೆ 1.94 ಪೌಂಡ್ಸ್(870 ಗ್ರಾಂ)ನಷ್ಟು ಮಾತ್ರ. ಆದರೆ ಬೆಳೆಯುವ ಮಕ್ಕಳ ತಾಯಂದಿರು ಕನಿಷ್ಠ 1 ಪೌಂಡ್ಸ್(ಅರ್ಧ ಕೆಜಿ)ನಷ್ಟು ಹೆಚ್ಚು ತೂಕ ಗಳಿಸುತ್ತಿದ್ದಾರೆ ಎಂದು ಈ ಅಧ್ಯಯನ ತಿಳಿಸಿದೆ. ಆದರೆ, ಮಕ್ಕಳಾದ ಮೇಲೂ ಫಿಟ್ ಆಂಡ್ ಫೈನ್ ಆಗಿರುವ ಸೆಲಬ್ರಿಟಿ ತಾಯಂದಿರಿಗೇನೂ ಕಡಿಮೆ ಇಲ್ಲ. ಮೂರು ಮಕ್ಕಳ ತಾಯಿ ಮೇರಿ ಕೋಂ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿದ್ದಾರೆ. ಮಕ್ಕಳಾದ ಮೇಲೂ ಆರೋಗ್ಯಕರ ತೂಕ ಹೊಂದಿರಬಹುದು ಎಂಬುದು ನಿಜವಾಗಿದೆ.

ತೂಕ ಹೆಚ್ಚಳಕ್ಕೆ ಏನು ಕಾರಣ?: ಮಕ್ಕಳಾದ ನಂತರದ ಸ್ಥೂಲಕಾಯಕ್ಕೆ ತಾಯಂದಿರ ಜೀವನಶೈಲಿಯೇ ಕಾರಣ. ತಾಯಂದಿರು ಮಕ್ಕಳ ಅಗತ್ಯವನ್ನು ಆದ್ಯತೆ ಮಾಡಿಕೊಂಡು ತಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳದೆ, ವ್ಯಾಯಾಮ ಮಾಡದಿರುವುದು, ಮಕ್ಕಳು ತಟ್ಟೆಯಲ್ಲಿ ಉಳಿಸಿದ್ದನ್ನು ತಿನ್ನುವುದು ಮತ್ತು ಅವರೊಂದಿಗೆ ಓದುತ್ತಾ, ಇಲ್ಲವೆ ಟಿವಿ ನೋಡುತ್ತಾ ಹೆಚ್ಚು ಕಾಲ ಕಳೆಯುವುದು ತೂಕ ಹೆಚ್ಚಲು ಕಾರಣ. ಭಾರತದಲ್ಲಿ ಮಧ್ಯಮವರ್ಗದ ಮಹಿಳೆಯರಲ್ಲಿ ತೂಕ ಹೆಚ್ಚುವುದಕ್ಕೆ ಗರ್ಭ ಧರಿಸಿದ ನಂತರ ಅವರು ಅನುಸರಿಸುವ ಆಹಾರ ಪದ್ಧತಿಯೇ ಮುಖ್ಯ ಕಾರಣ. ಗರ್ಭಿಣಿಯರು 8ರಿಂದ 10 ಕೆಜಿ ತೂಕ ಹೆಚ್ಚಿಸಿಕೊಳ್ಳುವುದು ಸ್ವಾಭಾವಿಕ. ಆದರೆ ಗರ್ಭಿಣಿ ಎಂದಾಕ್ಷಣ ಅವರಿಗೆ ಎಲ್ಲವನ್ನೂ ಹೆಚ್ಚಾಗಿ ತಿನ್ನಿಸುವುದು ಶುರುವಾಗುತ್ತದೆ. ಹೀಗಾಗಿ ಹೆರಿಗೆ ಸಮಯಕ್ಕೆ ಬಹುತೇಕ ಮಹಿಳೆಯರು 15ರಿಂದ 20 ಕೆಜಿ ಹೆಚ್ಚು ತೂಕ ಗಳಿಸಿಬಿಡುತ್ತಾರೆ. ಇದು ಅನಗತ್ಯವಷ್ಟೇ ಅಲ್ಲ, ಹಲವರಲ್ಲಿ ಅಧಿಕ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಈ ಅಭ್ಯಾಸ ಡೆಲಿವರಿ ನಂತರವೂ ಮುಂದುವರಿಯುತ್ತದೆ.

ಗಳಿಕೆ, ಇಳಿಕೆ ಎರಡೂ ಇದೆ: ಬಾಣಂತನದ ಹೆಸರಲ್ಲಿ 5 ತಿಂಗಳು ಚೆನ್ನಾಗಿ ತಿನ್ನಿಸಿ ಅವರಿಗೆ ಯಾವುದೇ ಕೆಲಸ, ವ್ಯಾಯಾಮ ಮಾಡಲು ಬಿಡುವುದಿಲ್ಲ. ಹಾಲುಣಿಸುವ ತಾಯಂದಿರಿಗೆ 500 ಕ್ಯಾಲರಿ ಹೆಚ್ಚುವರಿ ಸಿಕ್ಕಿದರೆ ಸಾಕು. ಆದರೆ ಬಹುತೇಕ ಮಹಿಳೆಯರು ಸಾವಿರಗಟ್ಟಲೆ ಕ್ಯಾಲರಿ ಪೇರಿಸಿ ಕೊಳ್ಳುತ್ತಾರೆ. ಥೈರಾಯ್ಡ್ ಮಟ್ಟದಲ್ಲಿ ವ್ಯತ್ಯಾಸ, ಒತ್ತಡ ಅಥವಾ ಸಾಕಷ್ಟು ನಿದ್ದೆ ಮಾಡದಿರುವುದು. ರಾತ್ರಿ ಐದು ಗಂಟೆಗಿಂತ ಕಡಿಮೆ ನಿದ್ದೆ ಮಾಡುವ ಮಹಿಳೆಯರಿಗೆ ಹೆರಿಗೆ ನಂತರ ತೂಕ ಇಳಿಯದಿರುವ ಸಾಧ್ಯತೆ ಹೆಚ್ಚು.

ನಾನು ಆದಷ್ಟು ಆಕ್ಟಿವ್ ಮತ್ತು ಫಿಟ್ ಆಗಿರಲು ಪ್ರಯತ್ನಿಸುತ್ತೇನೆ. ನನ್ನ ಮಗ ಬೆಳಗ್ಗೆ ಎದ್ದರೆ ರಾತ್ರಿವರೆಗೂ ಫುಲ್ ಆಕ್ಟಿವ್ ಆಗಿರ್ತಾನೆ. ಅವನ ಹಿಂದೆ ಓಡಾಡೋದು ಜಿಮ್ಲ್ಲಿ ಕಾರ್ಡಿಯೋ ಮಾಡಿದ ಎಫೆಕ್ಟ್ ಕೊಡುತ್ತೆ. ನಾನು ಯದ್ವಾ ತದ್ವಾ ತಿನ್ನುವುದಿಲ್ಲ. ಪ್ರತಿದಿನ ಒಂದೇ ಸಮಯಕ್ಕೆ ಆಹಾರ ಸೇವಿಸುವ ಶಿಸ್ತು ಪಾಲಿಸುತ್ತೇನೆ.

| ಶ್ವೇತಾ ಚಂಗಪ್ಪ ನಟಿ

ಗರ್ಭದಲ್ಲಿರುವ ಮಗು ಆರೋಗ್ಯವಾಗಿ ಬೆಳೆಯಲು 8ರಿಂದ 10 ಕೆಜಿ ತೂಕ ಹೆಚ್ಚಾದರೆ ಸಾಕು. ಪ್ರತಿ ತಿಂಗಳು ವೈದ್ಯರನ್ನು ನೋಡಲು ಹೋಗುವಾಗ ಒಂದು ಕೆಜಿಯಷ್ಟು ಮಾತ್ರ ಹೆಚ್ಚಿರಬೇಕು. ಯಥೇಚ್ಛವಾಗಿ ತಿಂದು ತೂಕ ಹೆಚ್ಚಿಸಿಕೊಂಡರೆ ತಾಯಿಗೆ ಬಿಪಿ, ಶುಗರ್ ಸಮಸ್ಯೆಯಾಗುತ್ತದೆ.

| ಡಾ. ವಿದ್ಯಾಭಟ್ ಸ್ತ್ರೀರೋಗ ತಜ್ಞೆ, ಬೆಂಗಳೂರು

ಗರ್ಭಧಾರಣೆಯಾದ ಮೇಲೆ ಮೆಟರ್ನಲ್ ಫ್ಯಾಟ್ ಶೇಖರಣೆಯಾಗಿರುತ್ತದೆ. ಇದು ಹಾಲುಣಿಸುವ ತಾಯಂದಿರಿಗೆ ಅವಶ್ಯಕ. ಮಗುವಿಗೆ ಚೆನ್ನಾಗಿ ಹಾಲು ಕುಡಿಸುವುದರಿಂದ ಈ ಕೊಬ್ಬು ಬಳಕೆಯಾಗುತ್ತಾ ತಾಯಿಯ ತೂಕ ಕಡಿಮೆ ಆಗುತ್ತೆ. ಬಾಣಂತಿಯರಿಗೆ ನೀಡುವ ಲೇಹ್ಯ ಮತ್ತು ವೀಳ್ಯದೆಲೆಗಳು ಈ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತವೆ.

| ಡಾ. ಹೆಚ್.ಎಸ್.ಪ್ರೇಮಾ ಆಹಾರ ವಿಶೇಷ ತಜ್ಞರು

ಸ್ಥೂಲಕಾಯ ಬರದಿರಲು ಹೀಗೆ ಮಾಡಿ

  1. ಗರ್ಭಿಣಿಯಾದಾಗ ಹೆಚ್ಚು ತಿನ್ನಬಾರದು. ಹೈಪೊ›ಟಿನ್ ಡಯಟ್ ಪಾಲಿಸಬೇಕು.
  2. ಅಧಿಕ ಕ್ಯಾಲರಿ ಇರುವ ಅಥವಾ ಸಿಹಿ ಅಂಶ ಇರುವ ಪದಾರ್ಥ ಹೆಚ್ಚಾಗಿ ತಿನ್ನಬಾರದು.
  3. ಗರ್ಭ ಧರಿಸುವುದಕ್ಕೂ ಮುಂಚೆ, ಗರ್ಭಿಣಿಯಾಗಿರುವಾಗ ಮತ್ತು ಹೆರಿಗೆ ನಂತರ ಆಹಾರ ಮತ್ತು ಚಟುವಟಿಕೆಗಳ ಬಗ್ಗೆ ಗಮನವಹಿಸಬೇಕು.
  4. ಹೆರಿಗೆ ನಂತರ ಆಹಾರದ ಆಯ್ಕೆ ಸರಿಯಾಗಿರಬೇಕು. ಎಲ್ಲ ತರಹದ ಪದಾರ್ಥಗಳನ್ನು ಸೀಮಿತವಾಗಿ ತಿನ್ನಬೇಕು. ಮಗುವಿಗೆ ಮೂರು ತಿಂಗಳು ತುಂಬುವವರೆಗೆ ತಾಯಿ ಮಾಂಸಾಹಾರ ಸೇವಿಸುವುದು ಒಳ್ಳೆಯದಲ್ಲ.
  5. ಸರಿಯಾದ ಸಮಯಕ್ಕೆ ಮನೆಯಲ್ಲೇ ಮಾಡಿದ ಆಹಾರ ಸೇವಿಸಬೇಕು. ದಪ್ಪಗಾಗುತ್ತೇವೆ ಎಂದು ಅರ್ಧಹೊಟ್ಟೆ ತಿಂದರೆ ಕ್ರೇವಿಂಗ್ ಜಾಸ್ತಿ ಆಗುತ್ತದೆ.
  6. ಮಗುವನ್ನು ಪ್ರ್ಯಾಮ್​ನಲ್ಲಿ ಕೂರಿಸಿಕೊಂಡು ಹೊರಗಡೆ ತಾಜಾ ವಾತಾವರಣದಲ್ಲಿ ಓಡಾಡುವ ಅಭ್ಯಾಸ ಮಾಡಿಕೊಳ್ಳಬೇಕು.
  7. ಹುಟ್ಟಿದ ಮಗುವಿಗೆ ಚೆನ್ನಾಗಿ ಹಾಲು ಕುಡಿಸಬೇಕು. ಹಾಲುಣಿಸುವುದರಿಂದ ನಿತ್ಯ 500 ಕ್ಯಾಲರಿ ಬಳಕೆಯಾಗುತ್ತದೆ.
  8. ಹೆರಿಗೆಯಿಂದ ಚೇತರಿಸಿಕೊಂಡ ನಂತರ ಪ್ರತಿನಿತ್ಯ ಕನಿಷ್ಠ 30 ನಿಮಿಷ ವಾಕಿಂಗ್ ಅಥವಾ ಅನ್ಯ ವ್ಯಾಯಾಮಗಳೊಂದಿಗೆ ದೇಹ ಚುರುಕಾಗಿಟ್ಟುಕೊಳ್ಳಬೇಕು.