ಅಂಕಣ

ಮನೋಲ್ಲಾಸ: ಯೋಗ್ಯರ ಸಹವಾಸವಿರಲಿ

| ಸುಮಾವೀಣಾ

ಊರ ಮುಂದೆ ದೊಡ್ಡ ಆಲದಮರ ನೆರಳಾಗಿ ತಂಪಾಗಿ ಬಳಲಿತರ ಆಶ್ರಯತಾಣವಾಗಿತ್ತು. ಮನುಷ್ಯ ಯಾವುದನ್ನೇ ಆಗಲಿ ಉಪಯೋಗಿಸಿ ಹಾಳುಮಾಡುವುದು ಸಾಮಾನ್ಯ ಅಲ್ಲವೆ. ಹಾಗೆ ಈ ಮರದ ಚಿಗುರನ್ನು ಚಿವುಟುವುದು, ಕೊಂಬೆಗಳನ್ನು ಕಡಿಯುವುದು ಮಾಡಿ ಮರಕ್ಕೆ ಹಿಂಸೆ ಕೊಡುತ್ತಿದ್ದರು. ಮರದ ವೇದನೆ ಅರಿತ ಕಾಗೆಗಳು ‘ನೀನು ಒಪ್ಪಿಗೆ ಕೊಟ್ಟರೆ ನಿನ್ನನ್ನು ಯಾರೂ ಹಿಂಸಿಸದಂತೆ ಮಾಡುತ್ತೇವೆ’ ಎಂದಾಗ ಆಲದ ಮರ ‘ಸರಿ! ನನಗೆ ಯಾರೂ ತೊಂದರೆ ಕೊಡದೆ ಇದ್ದರೆ ಉಪಕಾರವಾಗುತ್ತದೆ’ ಎಂದಿತು.

ಅದರಂತೆ ಕಾಗೆಗಳು ಅಲ್ಲಿ ಇಲ್ಲಿ ಬಿದ್ದಿದ್ದ ಮೂಳೆಗಳನ್ನು ಮರದ ಮೇಲೆ ನೇತು ಹಾಕುತ್ತವೆ. ಮರುದಿನ ಆಲದ ಮರದ ಬಳಿಗೆ ಬಂದವರು ಅಯ್ಯೋ! ಈ ಮರದಲ್ಲಿ ಪಿಶಾಚಿಗಳು ವಾಸವಾಗಿವೆ ಹೋಗಬಾರದು ಎಂದು ಅದರ ಹತ್ತಿರ ಸುಳಿಯುವುದಿಲ್ಲ. ಹೀಗೆ ಕೆಲ ದಿನ ಕಳೆಯುತ್ತವೆ. ಕಾಗೆಗಳು ಗೂಡನ್ನು ಕಟ್ಟಿ ಮೊಟ್ಟೆಗಳನ್ನು ಇಡುತ್ತವೆ. ಹೊರಗೆ ಹೋಗುವಾಗ ಮೊಟ್ಟೆಗಳು ಜಾಗೃತೆ ಎಂದು ಮರಕ್ಕೆ ಹೇಳಿ ಹೋಗುತ್ತಿರುತ್ತವೆ. ಈ ಎಲ್ಲವನ್ನು ಕೆಳಗೆ ಇದ್ದ ಹಾವೊಂದು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಕಾಗೆಗಳು ಆಹಾರ ಅರಸಿ ಹೋದಾಗ ಆಲದ ಮರದ ಬಳಿ ಹೋಗಿ ‘ಆ ಕಾಗೆಗಳಿಗಿಂತ ಚೆನ್ನಾಗಿ ನಾನು ನಿನ್ನ ಯೋಗಕ್ಷೇಮ ನೋಡುವೆ. ಯಾರೂ ನಿನ್ನ ಹತ್ತಿರ ಸುಳಿಯಲೂ ಬಿಡುವುದಿಲ್ಲ’ ಎನ್ನುತ್ತಾ ನಯವಾದ ಮಾತುಗಳಿಂದ ಆಲದ ಮರದ ಸ್ನೇಹವನ್ನು ಸಂಪಾದಿಸಿ ಕಾಗೆಗಳ ಮೊಟ್ಟೆಗಳನ್ನು ತಿನ್ನಲು ಆಸ್ಪದ ಕೊಡುವಂತೆ ಪುಸಲಾಯಿಸಿತು.

ಆಲದಮರಕ್ಕೆ ಹಾವಿನ ನಯವಂಚಕತನ ತಿಳಿಯುವುದಿಲ್ಲ. ಆಯಿತು! ಎಂದು ಸಮ್ಮತಿ ಕೊಡುತ್ತದೆ. ಹಾವು ಕಾಗೆಗಳ ಮೊಟ್ಟೆಗಳನ್ನು ತಿನ್ನುತ್ತದೆ. ಕಾಗೆಗಳು ಗೂಡಿಗೆ ಬಂದು ನೋಡಿದಾಗ ಖೇದವುಂಟಾಗುತ್ತದೆ. ಆಲದ ಮರ ತಮ್ಮ ಉಪಕಾರವನ್ನು ಮರೆತು, ಹೋಗಿ ಹೋಗಿ ಆ ದುಷ್ಟ ಹಾವಿನ ಸಹವಾಸಕ್ಕೆ ಇಳಿದಿದೆಯಲ್ಲ ಎಂದು ಬೇರೆ ಕಡೆ ಆಶ್ರಯವನ್ನರಸಿ ಹೋದವು. ಇತ್ತ ಹಾವು ಆಲದ ಮರಕ್ಕೆ ಕೊಟ್ಟ ಮಾತನ್ನು ಈಡೇರಿಸುತ್ತೇನೆ ಎಂಬಂತೆ ಅಲ್ಲಿ ಬಂದವರಿಗೆ ಕಚ್ಚಿ, ಹೆದರಿಸಿ ದುಷ್ಟತನ ಮೆರೆಯತೊಡಗಿತು. ಈ ಸುದ್ದಿ ಊರಿನವರಿಗೆ ತಿಳಿದು ಹಾವನ್ನು ಹುಡುಕಿಕೊಂಡು ಬರಲು ಹಾವು ಮರವನ್ನೇರುತ್ತದೆ. ಆಗ ಊರವರು ಇದೊಂದು ದುಷ್ಟ ಹಾವು. ನಾವು ಮರವನ್ನೇರಿ ಹಾವು ಹೊಡೆಯಲು ಸಾಧ್ಯವಿಲ್ಲ ಎನ್ನುತ್ತಾ ಹೊದರನ್ನೆಲ್ಲಾ ಸೇರಿಸಿ ಬೆಂಕಿ ಹಾಕಿದರು.

ಹೊತ್ತಿಸಿದ ಬೆಂಕಿ ಹೊಗೆಯಾಡುತ್ತದೆ. ಹೊಗೆ ಉರಿಯಾಗುತ್ತದೆ. ಹಾವಿನ ಜೊತೆ ಆಲದ ಮರವೂ ನಾಶವಾಗುತ್ತದೆ. ಕಾಗೆಗಳ ಸಹವಾಸ ಮಾಡಿದ್ದಾಗ ಆಲದ ಮರ ಚೆನ್ನಾಗಿಯೇ ಇತ್ತು. ಬಿನ್ನಾಣದ ಮಾತಿಗೆ ಮರುಳಾಗಿ ಹಾವಿನ ಸಹವಾಸಕ್ಕಿಳಿದು ನಾಶವಾಯಿತು. ನಾವು ಯಾರೊಂದಿಗಾದರೂ ಸಖ್ಯ ಬೆಳೆಸುವಾಗ ಜಾಗರೂಕರಾಗಿರಬೇಕು. ತುಸು ಜಾರಿದರೂ ಅಪಾಯ ಖಂಡಿತ. ನಾವು ಯಾರ ಸ್ನೇಹದಲ್ಲಿದ್ದೇವೆ ಎಂಬುದೂ ಯೋಗ್ಯತೆಯನ್ನಳೆಯುವ ಸನ್ನೆಗೋಲು. ಈ ಎಚ್ಚರ ನಿತ್ಯ ನಮ್ಮಲ್ಲಿರಬೇಕು.

(ಲೇಖಕರು ಉಪನ್ಯಾಸಕರು)

(ಪ್ರತಿಕ್ರಿಯಿಸಿ: manollasavv@gmail.com)