ಅಂಕಣ

ಶಿಕ್ಷಕರಿಗಾಗಿ ಪರಿಹಾರ ಕೇಂದ್ರವಿರಲಿ

lakshmihegde

ವ್ಯಕ್ತಿ ತನ್ನ ಜೀವನವನ್ನು ಆತ್ಮಹತ್ಯೆ ಮೂಲಕ ಅಂತ್ಯಗೊಳಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದು ವಿಷಾದನೀಯ ಹಾಗೂ ಕಳವಳಕಾರಿ. ಮಾನಸಿಕ ಆಘಾತಕ್ಕೆ ಸಿಲುಕಿ ಇಂತಹ ಕೃತ್ಯಕ್ಕೆ ಮುಂದಾಗುವವರ ಸಂಖ್ಯೆ ಅಧಿಕವಾಗಿದೆ. ಶಿವಮೊಗ್ಗದ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ನೇಣಿಗೆ ಶರಣಾದ ಘಟನೆಯನ್ನು ಅವಲೋಕಿಸಿದಾಗ, ವ್ಯವಸ್ಥೆಯಲ್ಲಿನ ಲೋಪ ಕಂಡುಬರುತ್ತದೆ. ಇವರ ಆತ್ಮಹತ್ಯೆಗೆ ಶಾಲೆಯಲ್ಲಿನ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ಇದು ಸತ್ಯವೇ ಆಗಿದ್ದರೆ, ತಪ್ಪಿತಸ್ಥರಿಗೆ ಕಾನೂನಿನಂತೆ ಶಿಕ್ಷೆ ಆಗುತ್ತದೆ. ಆದರೆ ಹೋದ ಜೀವ ಹಿಂದಿರುಗಿ ಬರಲು ಸಾಧ್ಯವಿಲ್ಲವಲ್ಲ! ಇಂತಹ ಎಷ್ಟೋ ಪ್ರಕರಣಗಳು ವರದಿಯಾಗಿ ನೇಪಥ್ಯಕ್ಕೆ ಸರಿಯುತ್ತವೆ. ಆದರೆ ವ್ಯವಸ್ಥೆ ಇಂತಹ ದುರಂತಕ್ಕೆ ಕಾರಣವಾಯಿತೆಂಬ ಬಗ್ಗೆ ಚಿಂತಿಸಿ ಪರಿಹಾರ ರೂಪಿಸಬೇಕು.

ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಣ ಮಂದಿರಗಳಾದ ಶಾಲೆಗಳಲ್ಲಿ ಶಿಕ್ಷಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದ್ದು ಸರ್ಕಾರದ ಕರ್ತವ್ಯ. ಶಾಲೆಗಳ ಅಭಿವೃದ್ಧಿಗೆ ಸಹಾಯವಾಗಲೆಂದು ಶಾಲಾ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. ಎಷ್ಟೋ ಶಾಲೆಗಳಲ್ಲಿ ಈ ಸಮಿತಿ ಸದಸ್ಯರು ತಮಗಿಲ್ಲದ ಅಧಿಕಾರದ ಮೂಲಕ ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾದ ಶಿಕ್ಷಕರಿಗೆ ಅದರಲ್ಲೂ ಮಹಿಳಾ ಶಿಕ್ಷಕರಿಗೆ ತಮ್ಮ ದೂರನ್ನು ಗುಪ್ತವಾಗಿ ನಿವೇದಿಸಿಕೊಳ್ಳಲು ಒಂದು ವ್ಯವಸ್ಥೆ ಅಗತ್ಯ. ಅನೇಕ ಸಂದರ್ಭಗಳಲ್ಲಿ ತಾವು ಅನುಭವಿಸುವ ಸಮಸ್ಯೆಯನ್ನು ಕುಟುಂಬದ ಸದಸ್ಯರಲ್ಲೂ ಹೇಳಿಕೊಳ್ಳಲಾಗುವುದಿಲ್ಲ. ಹೇಳಿಕೊಂಡರೂ ಅದನ್ನು ಹಗುರವಾಗಿ ತೆಗೆದುಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಭರವಸೆಯ ಒಂದು ವ್ಯವಸ್ಥೆ ಇರುವುದು ಅನಿವಾರ್ಯ. ಹಲವು ಕ್ಷೇತ್ರಗಳಲ್ಲಿ ಈ ರೀತಿ ಪ್ರತ್ಯೇಕ ಸೆಲ್​ಗಳನ್ನು ತೆರೆದು ಸಮಸ್ಯೆಗೆ ಪರಿಹಾರ ನೀಡುವ ಕ್ರಮ ಇದೆ. ಅದೇ ರೀತಿಯಲ್ಲಿ ಶಿಕ್ಷಣ ಇಲಾಖೆಯೂ ಈ ದಿಸೆಯಲ್ಲಿ ಚಿಂತನೆ ಮಾಡಬೇಕಾದ ಸಂದರ್ಭ ಇದಾಗಿದೆ. ಇಲಾಖೆ ಹಲವು ರೀತಿಯಲ್ಲಿ ಶಿಕ್ಷಕಸ್ನೇಹಿ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿರುವುದು ಶ್ಲಾಘನೀಯ. ಅದೇ ರೀತಿಯಲ್ಲಿ ಶಿಕ್ಷಕ-ಶಿಕ್ಷಕಿಯರು ಉದ್ಯೋಗದ ವೇಳೆ ಅನುಭವಿಸುವ ಕಿರುಕುಳವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಪ್ರತಿಯೊಬ್ಬರ ಜೀವವೂ ಅಮೂಲ್ಯ, ವೃತ್ತಿನಿರತರಿಗೆ ಕೆಲಸದ ಸ್ಥಳದಲ್ಲಿ ಮಾನಸಿಕ ಕಿರುಕುಳ ತಪ್ಪಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಕರಿಗಾಗಿ ವೃತ್ತಿಪರ ಪರಿಹಾರ ಕೇಂದ್ರ ಆರಂಭಿಸಲಿ.

| ನ.ರಾ.ವೆಂಕಟೇಶ್, ಶಿವಮೊಗ

ಮರೆತರಾ ನವರಸಪುರ ಉತ್ಸವ?

ಕರ್ನಾಟಕ ಕಲೆಯ ತವರೂರು, ಇಂತಹ ನಾಡಿನಲ್ಲಿ ಹಲವು ಉತ್ಸವಗಳ ಹೆಸರಿನಡಿಯಲ್ಲಿ ಸಾಂಸ್ಕೃತಿಕ ಕಲರವಗಳು ಆಯಾ ಭಾಗಗಳ ಹೆಮ್ಮೆಯನ್ನು ಪ್ರದರ್ಶಿಸುತ್ತವೆ. ಪ್ರಸ್ತುತ ಆನೆಗೊಂದಿ ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ, ಜಲಪಾತೋತ್ಸವ ಹೀಗೆ ಹಲವು ಉತ್ಸವಗಳನ್ನು ಸರ್ಕಾರ ಪ್ರತಿ ವರ್ಷ ಆಚರಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ವಿಜಯಪುರ ಪಾರಂಪರಿಕ ಐತಿಹಾಸಿಕ ತಾಣವಾಗಿದ್ದು, ಗುಮ್ಮಟ ನಗರಿ ಎಂದೇ ಹೆಸರುವಾಸಿಯಾಗಿದೆ. ವಿವಿಧ ಸ್ಮಾರಕಗಳನ್ನೊಳಗಂಡ ವಿಜಯಪುರದಲ್ಲಿ ‘ನವರಸಪುರ ಉತ್ಸವ’ ಹೆಸರಿಲ್ಲದಂತೆ ಮರೆಯಾಗುತ್ತಿದೆ. 2015ರಲ್ಲಿ ಜರುಗಿದ್ದ ಈ ಹಬ್ಬರೂಪದ ಉತ್ಸವ ಜಿಲ್ಲೆಯ ಜನರ ಸಾಂಸ್ಕೃತಿಕ ಆಶೋತ್ತರಗಳಿಗೆ ಪೂರಕವಾಗಿತ್ತು.

ಆದರೆ, ಹಲವು ವರ್ಷಗಳಿಂದ ಈ ಉತ್ಸವವನ್ನು ಕಡೆಗಣಿಸಲಾಗಿದೆ. ಕವ್ವಾಲಿ ಸಂಗೀತ ಸೇರಿ ಜಿಲ್ಲೆಯ ಜಾನಪದ ಕಲೆಗಳಿಗೆ ಭವ್ಯ ವೇದಿಕೆಯಾಗಿದ್ದ ಈ ಉತ್ಸವ ನಿಂತುಹೋಗಿರುವುದಕ್ಕೆ ಜನಪ್ರತಿನಿಧಿಗಳ ನಿರಾಸಕ್ತಿಯೇ ಪ್ರಮುಖ ಕಾರಣ. ಹಂಪಿ ಉತ್ಸವಕ್ಕಿರುವಷ್ಟು ಬೆಲೆ ‘ನವರಸಪುರ ಉತ್ಸವ’ಕ್ಕೆ ಇಲ್ಲದಂತಾಗಿದೆ. ಹಂಪಿಯಲ್ಲಿನ ಐತಿಹಾಸಿಕ ಪ್ರಾಮುಖ್ಯದಷ್ಟೇ ಸ್ಮಾರಕಗಳು ಹಾಗೂ ಐತಿಹಾಸಿಕ ನೆಲೆಗಳು, ಕೊಡುಗೆಗಳು ವಿಜಯಪುರ ಜಿಲ್ಲೆಯಲ್ಲಿವೆ. ಉತ್ಸವಗಳು ವಿನಾಕಾರಣವಲ್ಲ, ಅವುಗಳು ಸ್ಥಳೀಯ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವ ಕಾರ್ಯಗಳೇ ಹೊರತು ಆಡಂಬರದ ಆಚರಣೆಗಳಲ್ಲ. ಸ್ಮಾರಕಗಳು ಕಲಿಕೆಗೆ ಶಾಲೆಗಳಾದರೆ ‘ಉತ್ಸವ’ಗಳು ಪ್ರಯೋಗಶಾಲೆಗಳಿದ್ದಂತೆ. ಆದ್ದರಿಂದ ನವರಸಪುರ ಉತ್ಸವದ ವೈಭವವನ್ನು ಮರುಕಳಿಸುವಂತೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂಬುದು ಉತ್ಸವಾಸಕ್ತರ ಹೆಬ್ಬಯಕೆ.

| ಪ್ರಶಾಂತ ಹೊಸಮನಿ, ನಾಗಠಾಣ (ವಿಜಯಪುರ ತಾಲೂಕು)