ಅಂಕಣ

ತೆರಿಗೆ ಸಾಧನೆಯತ್ತ ಬಿಬಿಎಂಪಿ: ಪ್ರಸಕ್ತ ಸಾಲಿನ ಶೇ.85ರಷ್ಟು ಪಾವತಿ

ಬಿಬಿಎಂಪಿ 2019-20ನೇಸಾಲಿನಲ್ಲಿ 3,500 ಕೋಟಿ ರೂ. ಆಸ್ತಿ ತೆರಿಗೆ ಗುರಿಯಲ್ಲಿ, ಈವರೆಗೆ 2,534 ಕೋಟಿ ರೂ. ಸಂಗ್ರಹಿಸುವ ಮೂಲಕ ಶೇ. 72 ಗುರಿ ಸಾಧಿಸಿದೆ. ಜತೆಗೆ ಹಾಲಿ ವಿತ್ತೀಯ ವರ್ಷದ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ. 85 ಗುರಿ ತಲುಪುವ ಮೂಲಕ ಪಾಲಿಕೆ ಉತ್ತಮ ಸಾಧನೆ ಮಾಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 20 ಲಕ್ಷಕ್ಕೂ ಅಧಿಕ ಆಸ್ತಿಗಳಿರುವು ದಾಗಿ ಕಂದಾಯ ಇಲಾಖೆ ಮಾಹಿತಿ ನೀಡಿದೆ. ಈ ಆಸ್ತಿಗಳಿಂದ 3,500 ಕೋಟಿ ರೂ. ತೆರಿಗೆ ಸಂಗ್ರಹಣೆ ಮಾಡುವ ಗುರಿ ಹೊಂದಲಾಗಿತ್ತು. ಅದರಂತೆ ಫೆ.18 ರವರೆಗೆ 2,534 ಕೋಟಿ ರೂ. ಸಂಗ್ರಹಣೆಯಾಗಿದ್ದು, ಶೇ 72.4 ಗುರಿಯನ್ನು ಈಗಾಗಲೇ ಸಾಧಿಸಿದೆ. ತೆರಿಗೆ ಸಂಗ್ರಹಣೆ ಮಾಡಲು ಇನ್ನೂ 40 ದಿನಗಳು ಬಾಕಿಯಿದ್ದು, 966 ಕೋಟಿ ರೂ. ಅಂದರೆ ಶೇ 27.6 ಮಾತ್ರ ಬಾಕಿಯಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಆಸ್ತಿ ತೆರಿಗೆ ಪಾವತಿಯಲ್ಲಿ ಉತ್ತಮ ಗುರಿ ಸಾಧನೆಯಾಗಿದೆ.

ಪ್ರಸಕ್ತ ಸಾಲಿನ ತೆರಿಗೆ ಶೇ 85.97 ಪಾವತಿ: 2019-20ನೇ ಸಾಲಿನ ಆಸ್ತಿ ಬಳಕೆಗೆ ಸಂಬಂಧಿಸಿದಂತೆ 12.83 ಲಕ್ಷ ಆಸ್ತಿ ಬಳಕೆದಾರರಿಂದ ಒಟ್ಟು 2,296 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಣೆ ಗುರಿ ಹೊಂದಿತ್ತು. ಇದರಲ್ಲಿ ಫೆ.18ರ ವೇಳೆಗೆ 1974 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಪ್ರಸಕ್ತ ಗುರಿಯಲ್ಲಿ ಶೇ 85.97 ಸಾಧನೆ ಮಾಡಿದೆ. ಕಳೆದ ಎರಡು ತಿಂಗಳಿಂದ ಆಸ್ತಿ ತೆರಿಗೆ ವಿಚಾರದಲ್ಲಿ ಅನೇಕ ಶಿಸ್ತು ಕ್ರಮಗಳನ್ನು ಜರುಗಿಸುವ ಹಾಗೂ ಆಸ್ತಿ ಜಪ್ತಿಯಂತಹ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮ ಆಸ್ತಿ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗಿದೆ. ಹಿಂದಿನ ಆಸ್ತಿ ಪಾವತಿ ಬಾಕಿ ಉಳಿಸಿಕೊಂಡು, ಪ್ರಸಕ್ತ ಸಾಲಿನ ತೆರಿಗೆ ಪಾವತಿ ಮಾಡುವ ಮೂಲಕ ಪಾಲಿಕೆ ಕೆಂಗಣ್ಣಿನಿಂದ ಪಾರಾಗಿದ್ದಾರೆ. ಇದರಲ್ಲಿ ಮಹದೇವಪುರ ವಲಯದಲ್ಲಿ 2.18 ಲಕ್ಷ ಆಸ್ತಿಗಳಿಂದ 494.73 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಪಾಲಿಕೆಗೆ ಹೆಚ್ಚು ಆದಾಯ ಬರುವ ವಲಯವಾಗಿದೆ. ಪೂರ್ವ ವಲಯದಲ್ಲಿ 2.02 ಲಕ್ಷ ಆಸ್ತಿಗಳಿಂದ 411.21 ಕೋಟಿ ರೂ. ತೆರಿಗೆ ಸಂಗ್ರಹಣೆಯಾಗಿದೆ.
ಶೇ. 45 ಬಾಕಿ ತೆರಿಗೆ ಸಂಗ್ರಹ: ಬಾಕಿ ತೆರಿಗೆ (ಅರಿಯರ್ಸ್)1,204 ಕೋಟಿ ರೂ. ಸಂಗ್ರಹಣೆ ಗುರಿಯನ್ನು ಪಾಲಿಕೆ ಹೊಂದಿತ್ತು. ಅದರಲ್ಲಿ 541.59 ಕೋಟಿ ರೂ. ಸಂಗ್ರಹಿಸಿದ್ದು, ಶೇ.45 ಸಾಧನೆ ಮಾಡಲಾಗಿದೆ. ಆದರೆ ನಗರದಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿ ಮಾಡದ ಅನೇಕ ಆಸ್ತಿಗಳಿದ್ದು, ಅದರ ಬಡ್ಡಿಯೂ ಬೆಳೆಯುತ್ತಾ ಹೋಗಿದೆ. ಹಾಗಾಗಿ ಬಾಕಿದಾರರಿಂದ ಆಸ್ತಿ ತೆರಿಗೆ ಸಂಗ್ರಹಣೆಗೆ ಹಿನ್ನಡೆಯಾಗಿದೆ. ಯಾರೊಬ್ಬರೂ ತೆರಿಗೆ ಬಾಕಿ ಉಳಿಸಿಕೊಳ್ಳದೆ ಪಾವತಿ ಮಾಡುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡುತ್ತಾರೆ.

ಆಫ್​ಲೈನ್ ತೆರಿಗೆಯೇ ಹೆಚ್ಚು: ಆಸ್ತಿ ತೆರಿಗೆ ಪಾವತಿ ಮಾಡಲು ತೆರಿಗೆದಾರ ರಿಗೆ ಕಳೆದ ಎರಡು ವರ್ಷಗಳಿಂದ ಆನ್​ಲೈನ್ ಮತ್ತು ಆಫ್​ಲೈನ್ ಸೌಲಭ್ಯವನ್ನು ಪಾಲಿಕೆ ಒದಗಿಸಿದೆ. ಆದರೆ ಆನ್​ಲೈನ್ ಪಾವತಿಯಲ್ಲಿ ಕೊಂಚ ಹಿಂದೆ ಬಿದ್ದಿರುವ ತೆರಿಗೆದಾರರು ಆಫ್​ಲೈನ್ (ಬ್ಯಾಂಕ್ ಚಲನ್) ಮೂಲಕ ತೆರಿಗೆ ಹೆಚ್ಚು ಪಾವತಿಸಿದ್ದಾರೆ. ಆನ್​ಲೈನ್ ಮೂಲಕ 1,021 ಕೋಟಿ ರೂ. ಸಂಗ್ರಹವಾದರೆ, ಆಫ್​ಲೈನ್ ಮೂಲಕ 1,515 ಕೋಟಿ ರೂ. ಸಂಗ್ರಹಣೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಫೆ.18ರಲ್ಲಿ 150 ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಬಾಕಿ ಉಳಿಸಿಕೊಂಡವರಿಗೆ ಜಪ್ತಿ ವಾರೆಂಟ್ ನೀಡಿ ತೆರಿಗೆ ಸಂಗ್ರಹ ಮಾಡುತ್ತೇವೆ. ಈ ಸಾಲಿನಲ್ಲಿ ಪಾಲಿಕೆ ಗುರಿಯನ್ನು ಶೇ 100 ಸಾಧನೆ ಮಾಡುತ್ತೇವೆ. | ಬಿ.ಎಚ್. ಅನಿಲ್​ಕುಮಾರ್ ಪಾಲಿಕೆ ಆಯುಕ್ತ

| ಸತೀಶ್