ಅಂಕಣ

ವಿಶ್ವ ಧರ್ಮ ಸಮ್ಮೇಳನದ ಹಿನ್ನೆಲೆ ಮತ್ತು ಪರಿಣಾಮ

ಸ್ವಾಮಿ ವಿವೇಕಾನಂದರ ಒಂದೊಂದು ಮಾತನ್ನೂ, ಒಂದೊಂದು ನಡೆಯನ್ನೂ, ಅವರ ದೈಹಿಕ ಸೌಂದರ್ಯವನ್ನೂ ಅಮೆರಿಕದ ಪತ್ರಿಕೆಗಳು ಮೋಡಿಗೊಳಗಾದವರಂತೆ ದೇಶದ ಮೂಲೆ-ಮೂಲೆಗೂ ತಿಳಿಸುತ್ತಿದ್ದವು. ಅವರನ್ನು ಅತಿಥಿಯನ್ನಾಗಿ ಪಡೆಯುವುದು ಪ್ರತಿಷ್ಠೆಯ ವಿಷಯವಾಗಿತ್ತು ಅಲ್ಲಿಯ ಜನರಿಗೆ. ಸಹಜವಾಗಿಯೇ ಆ ದೇಶದ ಉದ್ದಗಲಕ್ಕೂ ಆಹ್ವಾನಗಳ ಸುರಿಮಳೆಯೇ ಆಗುತ್ತಿತ್ತು.

ಅಮೆರಿಕನ್ ಸಂಸ್ಕೃತಿಯನ್ನು ಕಟ್ಟಿದ ಮಹನೀಯರಲ್ಲಿ ಮೂವರು ಅಗ್ರಗಣ್ಯರು. ಅವರೇ ವಾಲ್ಡೋ ಎಮರ್ಸನ್, ಹೆನ್ರಿ ಡೇವಿಡ್ ಥೋರೋ ಮತ್ತು ವಾಲ್ಟ್ ವಿಟ್ಮನ್, ಆಶ್ಚರ್ಯವೇನೆಂದರೆ ಈ ಮೂವರೂ, ಭಾರತೀಯ ತತ್ತ್ವಶಾಸ್ತ್ರಗಳಿಂದ ಆಳವಾಗಿ ಪ್ರಭಾವಿತರಾದವರು. ಮೂವರೂ ವಿಶೇಷವಾಗಿ ವಿಟ್ಮನ್ ಮತ್ತು ಥೋರೋ ಋಷಿಗಳಂತೆಯೇ ಬದುಕಿದವರು. ತಮ್ಮ ಆಧ್ಯಾತ್ಮಿಕ-ಸಾಂಸ್ಕೃತಿಕ ಚಳವಳಿಯನ್ನು (Spirituo-Cultural Movement) ಅತೀತ ಧರ್ಮ (Transcendentalism) ಎಂದೇ ಕರೆದವರು. ಈ ಹೆಸರಿನಲ್ಲೇ ಭಾರತೀಯ ಆಧ್ಯಾತ್ಮಿಕ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು. ಥೋರೋ ಋಷಿಸಂಸ್ಕೃತಿಯ ಗಾಂಭೀರ್ಯಕ್ಕೆ ಮಾರು ಹೋಗಿ ಸೈಂಟ್ ಲಾರೆನ್ಸ್ ನದಿಯ ದಡದಲ್ಲಿ ಕುಟೀರ ನಿರ್ವಿುಸಿಕೊಂಡು, ಬಾಹ್ಯ ಪ್ರಪಂಚಕ್ಕೆ ಬೆನ್ನು ತಿರುಗಿಸಿ ಆಳವಾದ ಧ್ಯಾನಜೀವನದಲ್ಲಿ ಮುಳುಗಿ ಬಿಟ್ಟ.

ಸ್ನೇಹಿತನ ಅಗಲಿಕೆಯಿಂದ ಬೇಸತ್ತು ಎಮರ್ಸನ್ ಅವನನ್ನು ಕಾಣಲು ಹೋದ. ‘ವೃತ್ತಪತ್ರಿಕೆಗಳಿಲ್ಲದ ಈ ಜೀವನ ನಿನಗೆ ಬೇಸರ ತರಿಸುತ್ತಿಲ್ಲವೇ?’ ಎಂದು ಅವನನ್ನು ಕೇಳಿದಾಗ ಥೋರೋ ಕೊಟ್ಟ ಉತ್ತರ ಮಾರ್ವಿುಕವಾಗಿತ್ತು. ‘ಪ್ರಪಂಚದಲ್ಲಿ ಇರುವ ಸುದ್ದಿಗಳಾದರು ಎಷ್ಟು? ಕ್ರಿಸ್ತನನ್ನು ಶಿಲುಬೆಗೇರಿಸಿದ್ದು, ಕೊಲಂಬಸ್ಸನ ಅಮೆರಿಕ ಸಂಶೋಧನೆ ಮತ್ತು ಫ್ರೆಂಚ್ ಕ್ರಾಂತಿ ಇಷ್ಟಲ್ಲದೆ ಬೇರೆ ಸುದ್ದಿಯಾದರೂ ಎಲ್ಲಿದೆ?’. 50 ವರ್ಷಗಳ ನಂತರ ಈ ಪ್ರಶ್ನೆ ಎದ್ದಿದ್ದರೆ ಇನ್ನೊಂದು ಘಟನೆ ಸೇರ್ಪಡೆಯಾಗುತಿತ್ತು. ಅದೇ 1893ರ (ಸೆಪ್ಟೆಂಬರ್ 11) ವಿಶ್ವಧರ್ಮ ಸಮ್ಮೇಳನ! ಅದರ ಹಿನ್ನೆಲೆ, ಅದರ ಪ್ರಗತಿ, ಪರಿಣಾಮಗಳು, ಆಳ ಗಾಂಭೀರ್ಯಗಳು ಒಂದು ವಿದ್ವತ್ ಸಭೆಯ ದೀರ್ಘಕಾಲದ ಚರ್ಚೆಗೆ ಪ್ರತಿಷ್ಠಿತ ಮತ್ತು ಸಮಯೋಚಿತ ವಿಷಯವಾಗಬಲ್ಲದು ಎಂಬುದು ಸ್ಪಷ್ಟ ಮತ್ತು ಸರ್ವವಿದಿತ.

ಇತಿಹಾಸದ ಒಳಸೂಕ್ಷ್ಮಗಳನ್ನು ಅರಿತವರಿಗೆ, ಅರಿಯಬಲ್ಲವರಿಗೆ ಈ ವಿಶ್ವಧರ್ಮ ಸಮ್ಮೇಳನ ಕಾಣುವುದು ಆರ್ಯಸಂಸ್ಕೃತಿ ಅನಾರ್ಯ ಸಂಸ್ಕೃತಿಯನ್ನು ನವಿರಾಗಿಸಿದ ಪ್ರಕ್ರಿಯೆಯಂತೆ; ವೈವಿಧ್ಯದಲ್ಲಿ ಏಕತೆ ಎಂಬ ತತ್ತ್ವ ಏಕರೂಪಿ ಸಂಸ್ಕೃತಿಯನ್ನು, ಸಾಂತತೆ, ಅತೀತತೆ, ರಾಜತ್ವವನ್ನು ಸಂತತ್ವ ಮೌನವಾಗಿಸಿದ ಸಂಭ್ರಮದ ಸಂದರ್ಭದಂತೆ! ಈ ಮುಖಾಮುಖಿ, ಇತಿಹಾಸದ ಉದ್ದಕ್ಕೂ ಕೆಲವೊಮ್ಮೆ ಸ್ಪಷ್ಟವಾಗಿ ಕೆಲವೊಮ್ಮೆ ಸೂಚ್ಯವಾಗಿ ನಡೆಯುತ್ತಲೇ ಇದೆ. ಭಾರತೀಯ ಸಂಸ್ಕೃತಿಯ ಮೇರುದಂಡವನ್ನು ಮುರಿಯಲು ಪ್ರಜ್ಞಾಪೂರ್ವಕವಾಗಿಯೇ ಲಾರ್ಡ್ ಮೆಕಾಲೆ 1836ರಲ್ಲಿ ಷಡ್ಯಂತ್ರವೆಂಬಂತೆ ರಚಿಸಿದ ಶಿಕ್ಷಣ ವ್ಯವಸ್ಥೆಗೆ ಭಾರತ ಪ್ರತಿಕ್ರಿಯಿಸಿದ್ದು ಅದೇ ವರ್ಷದಲ್ಲೇ. ಶ್ರೀರಾಮಕೃಷ್ಣರೆಂಬ ಮುನಿ ಕುಲೋತ್ತುಂಗರಿಗೆ ಜನ್ಮಕೊಡುವುದರ ಮೂಲಕ. 1893ರಲ್ಲಿ ವಿಶ್ವದಾದ್ಯಂತ ಒಂದೇ ಧರ್ಮವಿರುವುದೇ ಸರಿ ಎನ್ನುವ ಧೋರಣೆಯನ್ನು ಸಾರ್ವತ್ರಿಕ, ಅಧಿಕೃತವಾಗಿಸಲು ಹೊರಟ ಷಡ್ಯಂತ್ರಕ್ಕೆ ಭಾರತ ಪ್ರತಿಕ್ರಿಯಿಸಿದ್ದು. ಯಾರ ಇಡೀ ಜೀವನವೇ ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ( ಇರುವ ಸತ್ಯ ಒಂದೇ, ಪ್ರಾಜ್ಞರು ಅದನ್ನು ಬಹು ಹೆಸರುಗಳಿಂದ ಕರೆಯುತ್ತಾರೆ) ಎನ್ನುವ ಮಹಾನ್ ಸತ್ಯದ ಜೀವಂತ ಉದಾಹರಣೆ ಆಗಿತ್ತೋ ಆ ಶ್ರೀರಾಮಕೃಷ್ಣರ ಶಿಷ್ಯ ಸ್ವಾಮಿ ವಿವೇಕಾನಂದರ ಮೂಲಕ. ಇದೇ ಸಮ್ಮೇಳನದ ಭಾಷಣವೊಂದರಲ್ಲಿ ಸ್ವಯಂ ವಿವೇಕಾನಂದರೇ ಹೀಗೆ ಹೇಳಿದ್ದಾರೆ.

‘ಪೌರ್ವಾತ್ಯ ದೇಶಗಳಿಂದ ಬಂದು ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ನಾವು, ‘ಕ್ರೖೆಸ್ತ ರಾಷ್ಟ್ರಗಳು ಅತ್ಯಂತ ಸಂಪದ್ಭರಿತ ರಾಷ್ಟ್ರಗಳಾದ್ದರಿಂದ ನೀವೂ ಕ್ರೖೆಸ್ತಧರ್ಮವನ್ನು ಸ್ವೀಕರಿಸಬೇಕು’ ಎಂಬ ಅದೇ ಪಲ್ಲವಿಯನ್ನು ಮತ್ತೆ ಮತ್ತೆ ಕೇಳಿದ್ದೇವೆ. ಸುತ್ತಲೂ ಕಣ್ಣು ಹಾಯಿಸಿದರೆ ನಮಗೇನು ಕಾಣುತ್ತದೆ? ಜಗತ್ತಿನ ಸಂಪದ್ಭರಿತ ಕ್ರೖೆಸ್ತ ರಾಷ್ಟ್ರವಾದ ಇಂಗ್ಲೆಂಡ್, ಇಪ್ಪತೆôದು ಕೋಟಿ ಏಷ್ಯನ್ನರ ಕುತ್ತಿಗೆಯ ಮೇಲೆ ಕಾಲಿಟ್ಟು ನಿಂತಿದೆ. ಚರಿತ್ರೆಯನ್ನು ನೋಡಿದರೆ ಗೊತ್ತಾಗುತ್ತದೆ-ಕ್ರೖೆಸ್ತ ಯುರೋಪಿನ ಭಾಗ್ಯ ಪ್ರಾರಂಭವಾದದ್ದು ಸ್ಪೇನ್​ನಿಂದ, ಸ್ಪೇನಿನ ಭಾಗ್ಯ ಪ್ರಾರಂಭವಾದದ್ದು ಮೆಕ್ಸಿಕೋ ಮೇಲಿನ ಆಕ್ರಮಣದೊಂದಿಗೆ, ಕ್ರೖೆಸ್ತ ಧರ್ಮವು, ತನ್ನ ಸಹಮಾನವರ ಕತ್ತನ್ನು ಕತ್ತರಿಸುವುದರ ಮೂಲಕ ತನ್ನ ಸೌಭಾಗ್ಯವನ್ನು ಸಂಪಾದಿಸಿಕೊಳ್ಳುತ್ತದೆ. ಆದರೆ ಹಿಂದುವಾದವನು ಆ ಬೆಲೆಯನ್ನು ತೆತ್ತು (ಹಾಗೆ ಕತ್ತು ಕುಯ್ಯುವುದರ ಮೂಲಕ) ಎಂದೂ ಸಂಪತ್ತನ್ನು ಗಳಿಸಲಾರ’.

ಇಡೀ ಶಿಕ್ಷಿತ ಸಮಾಜ ಅದರಲ್ಲೂ ಪಾಶ್ಚಾತ್ಯ ಸಮಾಜ ಧರ್ಮದ ಬಗ್ಗೆ ಉದಾಸೀನ ಭಾವ ತಳೆದಿದ್ದ ದಿನಗಳವು, ಧರ್ಮದ ಹೆಸರಿನಲ್ಲಿ ಮಧ್ಯಯುಗದಿಂದಲೂ ಜನರ ಮೇಲೆ ನಡೆದಿದ್ದ ದಬ್ಬಾಳಿಕೆ, ವಿಜ್ಞಾನಗಳನ್ನು, ವಿಜ್ಞಾನಿಗಳನ್ನು ಚಿವುಟಿ ಹಿಂಸಿಸಿದ ರೀತಿ, ಆಷಾಡಭೂತಿತನ, ಮತಾಂಧತೆ, ಅಧಿಕಾರ, ದರ್ಪಗಳ ತವರುನೆಲೆಯಾಗಿತ್ತು ಧರ್ಮಕ್ಷೇತ್ರ, Protestantism ಇದಕ್ಕೆ ಖಡ್ಗ ಪ್ರಹಾರ ಕೊಟ್ಟಿದ್ದರೆ ಡಾರ್ವಿನ್​ನ ವಿಕಾಸವಾದ ಬೆನ್ನುಹುರಿ ಮುರಿದಿತ್ತು. ಈ ಸಂದರ್ಭದಲ್ಲಿ ಇಡೀ ಪಶ್ಚಿಮಕ್ಕೆ ಸಾಂತ್ವನ ನೀಡಿದ್ದು ವಾರನ್ ಹೇಸ್ಟಿಂಗ್ಸ್​ನ ಸ್ನೇಹಿತ ವಿಲಿಯಮ್ ಜೋನ್ಸ್ ಕಲ್ಕತ್ತೆಯಲ್ಲಿ ಪ್ರಾರಂಭಿಸಿ ಮುಂದೆ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿಗಳಿಗೆ ಹಬ್ಬಿಸಿದ ಏಷಿಯಾಟಿಕ್ ಸೊಸೈಟಿಗಳು. ಇದರ ಮತ್ತೊಂದು ರೂಪವೇ ಈ ಹಿಂದೆ ಪ್ರಸ್ತಾಪಿಸಿದ ಅಮೆರಿಕನ್ Transcendentalism. ಆದರೂ ಪಾಶ್ಚಿಮಾತ್ಯ ಸಾಂಪ್ರದಾಯಿಕ ತತ್ತ್ವಗಳಿಗೆ ಸ್ವಲ್ಪ ಹೆಚ್ಚು ಕಡಿಮೆ ವಿರುದ್ಧವೆಂಬಂತೆ ಇದ್ದ ಈ ಹಿಂದೂ ಭಾವನೆಗಳು ಎಷ್ಟೇ ರ್ತಾಕತೆ, ವೈಶಾಲ್ಯ, ವೈಜ್ಞಾನಿಕತೆಗಳಿಂದ ಕೂಡಿದ್ದರೂ, ತಮ್ಮ ಕನಸಿನ Christian science ಎಂಬ ಹೊಸ ಪಂಥಕ್ಕಿಂತಲು ಆಪ್ಯಾಯಮಾನವಾಗಿದ್ದರೂ, ಆ ಸತ್ಯಗಳನ್ನು ಸಾಕ್ಷಾತ್ಕರಿಸಿಕೊಂಡ ವ್ಯಕ್ತಿಯೊಬ್ಬನ ಅನುಭವದ ಕುಲುಮೆಯಿಂದ ಹೊರಹೊಮ್ಮುವ ಶುಭಸಂದರ್ಭಕ್ಕಾಗಿ ಎಷ್ಟೋ ಪ್ರಾಮಾಣಿಕ ಹೃದಯಗಳು ಕಾತರಿಸುತ್ತಿದ್ದವು ಎಂಬುದು ಸುಳ್ಳಲ್ಲ. ಪ್ರತಿ ದೇಶ, ಧರ್ಮದಲ್ಲೂ, ಪ್ರಾಮಾಣಿಕ ಸಾಧಕರು ಇದ್ದೇ ಇರುತ್ತಾರೆ ಎಂದು ವೇದವ್ಯಾಸರ ಮೂಲಕ ಭಾರತ ಎಂದೋ ತನ್ನ ದೃಷ್ಟಿವೈಶಾಲ್ಯವನ್ನು ಮೊಳಗಿಸಿದೆ. ಇಂಥ ಪ್ರಾಮಾಣಿಕ ಮನಸ್ಸುಗಳೇ ಅಂದು ಷಿಕಾಗೋ ಸಮ್ಮೇಳನದಲ್ಲಿ ಉಪಸ್ಥಿತರಿದ್ದದು. ಆಧ್ಯಾತ್ಮಿಕ ಸತ್ಯಗಳೇ ಪೂರ್ಣಪ್ರಮಾಣದಲ್ಲಿ ಮೂರ್ತಿವೆತ್ತಂತಿದ್ದ, ಜಗನ್ಮಾತೆಯಿಂದಲೇ ಆಚಾರ್ಯ ಪೀಠಕ್ಕೆ ದೀಕ್ಷಾವಿಧಿಯಿಂದ ಅನುಗ್ರಹೀತನಾದ, ಹಿಮಾಲಯ ಸದೃಶ, ಯಾರು ನೋಡಿದರೂ ಯಾರಿವನು? ಎಂಬ ಉದ್ಗಾರದ ಮೂಲಕ ತನ್ನ ‘ಆಶ್ಚರ್ಯವತ್’ ಲಕ್ಷಣಗಳಿಂದ ಶೋಭಿತ ವೀರಸಂನ್ಯಾಸಿ ವೇದಿಕೆಯ ಮೇಲೆ ಅದ್ವೈತ ದುಂದುಭಿಯಂತೆ ‘ಸೋದರ ಸೋದರಿಯರೇ’ ಎಂದು ಸಂಬೋಧಿಸಿದಾಗ ಒಮ್ಮೆಲೇ ದ್ವಿತೀಯ ಸೃಷ್ಟಿಗೆ ನಾಂದಿಯಂಬಂತೆ ಮಹಾಸ್ಪೋಟ (Big Bang) ದ ಮೂಲಕ, (ಆ ಸಿಡಿಲ ಕರತಾಡನದ ಮೂಲಕ) ಅನಾವರಣಗೊಂಡಿದ್ದು!

ಹೌದು! ಅದೊಂದು ಹೊಸ ಸೃಷ್ಟಿಯೇ. ಹೊಸ ಯುಗದ ನಿರ್ವಣವೇ. ಮುಂದೆ ವಿವೇಕಾನಂದರು ಮೂರು ವರ್ಷ ಮೂರು ತಿಂಗಳು ಪಶ್ಚಿಮದಲ್ಲಿ ಕಳೆದದ್ದು ನವಯುಗದ ನಿರ್ವಪಕನಂತೆ; ಹೊಸ ಹೊಸ ದಿಗಂತಗಳ ಸಂಶೋಧಕನಂತೆ; ಕತ್ತಲೆಯ ಲೋಕಕ್ಕೆ ಧಾವಿಸಿದ ಸೂರ್ಯನಂತೆ; ಅವರ ಒಂದೊಂದು ಭಾಷಣವೂ ಆ ಜನರಲ್ಲಿ ಉತ್ಸಾಹ, ಭರವಸೆ, ಆತ್ಮಶ್ರದ್ಧೆ, ವೈಶಾಲ್ಯ, ಸಹೋದರತೆಯ ಭಾವನೆಗಳನ್ನೇ ಸೃಷ್ಟಿಸುತ್ತಿದ್ದವು. ಮಿಚಿಗನ್ ಪ್ರಾಂತ್ಯದ ಗವರ್ನರ್​ರ ಪತ್ನಿ ಬ್ಯಾಗ್ಲಿ, ‘ನಾವು ಜೀವನದಲ್ಲಿ ಎಂದೂ ಕೇಳದಿದ್ದ, ಅರಿಯದಿದ್ದ ಚಿಂತನೆಗಳನ್ನು ಕೊಟ್ಟರು ಇವರು. ಅವರು ಯಾರನ್ನೂ ಟೀಕಿಸುವುದಿಲ್ಲ. ಪ್ರತಿಯೊಬ್ಬರನ್ನೂ ಅವರವರ ಸ್ಥಾನದಿಂದಲೇ ಮೇಲೆತ್ತುತ್ತಾರೆ. ಪ್ರತಿಯೊಬ್ಬ ಅಮೆರಿಕನ್ ವಿವೇಕಾನಂದರನ್ನು ನೋಡುವ, ಅವರ ಭಾಷಣವನ್ನು ಕೇಳುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬಾರದು. ಭಾರತದಲ್ಲಿ ಇಂಥವರಿದ್ದರೆ ಅವರೆಲ್ಲರೂ ಇಲ್ಲಿ ಬರಲಿ’ ಎಂದು ಬರೆದಿದ್ದಾರೆ. ಒಂದು ಪತ್ರಿಕೆಯಂತೂ ಅವರು ಬೌದ್ಧರೋ, ಹಿಂದೂವೋ, ಮುಸ್ಲಿಂರೋ ಅಥವಾ ಕ್ರಿಶ್ಚಿಯನ್ರೋ? ಎಂದು ಸೋಜಿಗವನ್ನು ವ್ಯಕ್ತಪಡಿಸಿದ್ದು ಉಂಟು. ಖಂಡನೆಯ ಸುಳಿವೇ ಇಲ್ಲದ ಕೇವಲ ಸಹಾನುಭೂತಿಯೇ ತುಂಬಿದ್ದ ಆ ಮಾತುಗಳು, ಮತಾಂಧತೆ, ಸಂಕುಚಿತತೆ, ಪರಮತ ನಿಂದನೆ, ಇವುಗಳನ್ನೇ ಕಂಡು ಬೇಸತ್ತಿದ್ದ ಪತ್ರಿಕೆಗಳಿಗೆ, ಸಾರ್ವಜನಿಕರಿಗೆ ಮರುಭೂಮಿಯ ಓಯಸಿಸ್​ನಂತೆ ಕಾಣುತ್ತಿತ್ತು. ಭಾರತೀಯ ಸಂನ್ಯಾಸದ ಬಗ್ಗೆ ಏನೂ ಅರಿಯದಿದ್ದ ಆ ಜನತೆ ಮೂವತ್ತರ ಹರೆಯದಲ್ಲಿದ ವಿವೇಕಾನಂದರನ್ನು ಯೋಗ್ಯ ಯುವತಿಯೊಂದಿಗೆ ವಿವಾಹವಾಗಿಸಿ ತಮ್ಮಲ್ಲಿಯೇ ಇಟ್ಟುಕೊಂಡುಬಿಡುವ ಮಟ್ಟಕ್ಕೂ ಅವರಲ್ಲಿ ಉತ್ಸುಕರಾಗಿದ್ದರು. ಅಮೆರಿಕನ್ ಮಹಿಳೆ ಮೇರಿ ಲೂಯಿ ಬರ್ಕ್ ರಚಿಸಿದ New discoveries- Vivekananda in the West ಎಂಬ ಶೀರ್ಷಿಕೆ ಹೊತ್ತ ಆರು ಸಂಪುಟಗಳು ಈ ವಿಷಯಗಳನ್ನೆಲ್ಲ ಮಾರ್ವಿುಕವಾಗಿ ಚಿತ್ರಿಸುತ್ತವೆ.

ಇದೆಲ್ಲದರ ನಡುವೆ ಕಳಶವಿಟ್ಟಂತೆ ಉದ್ಭವಿಸಿದ್ದು ಇಡೀ ವಿಶ್ವದ ಪ್ರಮುಖನಾಗಿ ಅಮೆರಿಕನ್ ವಿದ್ವನ್ವಲಯ ಸಾರ್ವಕಾಲಿಕ ಪ್ರಮುಖ ವಿಷಯಗಳಾದ ಧರ್ಮ, ಮಾನವೀಯ ಸಂಬಂಧಗಳು, ವೈವಿಧ್ಯತೆಗಳ ನಡುವೆಯೂ ಪರಸ್ಪರ ಬೆಸೆಯಲ್ಪಟ್ಟ ಏಕಸೂತ್ರತೆಯ ಮಹತ್ವ, ಇವುಗಳ ಬಗ್ಗೆ ಗಂಭೀರವಾಗಿ ಯೋಚಿಸಲಾರಂಭಿಸಿತು. ಪರಸ್ಪರಭಾವ, ಸಹೋದರತೆಯೇ ಹೊರತು ಸ್ಪರ್ಧೆ, ಸ್ವಾರ್ಥಗಳು, ವೈಯಕ್ತಿಕ ನೆಲೆಯಲ್ಲಾಗಲಿ, ಸಾರ್ವತ್ರಿಕ ನೆಲೆಯಲ್ಲಾಗಲಿ ಎಂದೂ ಪ್ರಗತಿಗೆ ಸಹಾಯಕವಲ್ಲ ಎಂಬ ಉಪನಿಷತ್ ಪ್ರಣೀತ ಭಾರತೀಯ ಪರಂಪರಾನುಗತ ವಿದೇಶಾಂಗ ನೀತಿ ಒಂದಲ್ಲ ಒಂದು ರೀತಿಯಲ್ಲಿ ವಿವೇಕಾನಂದರ ಭಾವನೆಗಳಲ್ಲಿ (ಅದ್ವೈತ ತತ್ತ್ವದ Practical Applicationನ ರೂಪದಲ್ಲಿ) ನುಸುಳುತ್ತಿದ್ದುದು ಅಮೆರಿಕನ್ ಸೂಕ್ಷ್ಮಮತಿಗಳಿಗೆ ಗೋಚರಿಸಿದ್ದಷ್ಟೇ ಅಲ್ಲ, ಒಪ್ಪಿಗೆಯ ಮುದ್ರೆಯನ್ನೂ ಪಡೆಯಿತು. ಮುಂದೆ ಅಮೆರಿಕನ್ ಖ್ಯಾತವೆತ್ತರು ಭಾರತೀಯ ಬಂಧುಗಳಿಗೆ ಕೃತಜ್ಞತಾ ಪತ್ರ ಬರೆಯುವಾಗ ಸಂಬೋಧಿಸಿದ್ದು, ‘ಮಹಾನ್ ಆರ್ಯ ಕುಟುಂಬದ ಭಾರತೀಯ ಸೋದರ-ಸೋದರಿಯರಿಗೆ’ ಎಂದು.

ಇತ್ತ ಭಾರತದಲ್ಲೇನೂ ಸಮ್ಮೇಳನದ ಪ್ರಭಾವ ಅಲ್ಪವಾಗಿರಲಿಲ್ಲ. ದೀರ್ಘತಮ ನಿದ್ದೆಯಿಂದ ಎದ್ದ ಭಾರತಕ್ಕೆ ಗೋಚರಿಸಿದ್ದು ಶತಶತಮಾನಗಳ ರಾಜಕೀಯ ಹಾಗೂ ಸಾಮಾಜಿಕ ಕುಸಿತದ ನಡುವೆಯೂ ತನ್ನ ಅಂತಃಸತ್ವ, ಆಧ್ಯಾತ್ಮಿಕ ಶ್ರೀಮಂತಿಕೆ ಎಳ್ಳಷ್ಟೂ ಕಡಿಮೆಯಾಗಲಿಲ್ಲ ಎಂಬುದು, ಕೇವಲ, ಮೂರು ವರ್ಷ ಮೂರು ತಿಂಗಳಲ್ಲಿ ಆಧ್ಯಾತ್ಮಿಕ ಪ್ರಪಂಚದ ಚಕ್ರವರ್ತಿಯಂತೆ ದಿಗ್ವಿಜಯ ಸಾಧಿಸಿ ಮರಳಿದ ವಿವೇಕಾನಂದರಲ್ಲಿ ಪ್ರತಿಯೊಬ್ಬ ಭಾರತೀಯನೂ ಕಂಡಿದ್ದು ತನ್ನದೇ ಆತ್ಮವನ್ನು, ತನ್ನದೇ ಶಕ್ತಿ ಪೌರುಷಗಳನ್ನು, ಫ್ರೆಂಚ್ ನೊಬೆಲ್ ವಿಜೇತ ರೋಮಾ ರೋಲಾ ಉದ್ಗರಿಸುತ್ತಾರೆ- ‘ಪ್ರಪಂಚದ ಇತಿಹಾಸದಲ್ಲಿ ಇಂತಹ ಭವ್ಯಸ್ವಾಗತ ಯಾವ ರಾಜನಿಗೂ, ಸೇನಾಧಿಪತಿಗೂ, ವಿದ್ವಾಂಸನಿಗೂ ಇಲ್ಲಿಯವರೆಗೆ ದೊರೆತ ದಾಖಲೆಯಿಲ್ಲ’ ಎಂದು. ಈ ಮಹಾನ್ ಜಾಗೃತಿಯೇ ಮುಂದೆ ಸ್ವಾತಂತ್ರ್ಯ ಹೋರಾಟದ ತೀವ್ರ ಸ್ವರೂಪಕ್ಕೆ ಕಾರಣವಾಗಿದ್ದು. ಇದರ ನಾಂದಿ ವಿವೇಕಾನಂದರ ತವರುನೆಲೆಯಾದ ಬಂಗಾಳದಲ್ಲೇ ಹಾಡಲ್ಪಟ್ಟರೂ ಅದರ ವೇದಿಕೆ ನಿರ್ವಣವಾಗಿದ್ದು ಮದ್ರಾಸಿನ ಉಪನ್ಯಾಸಗಳಲ್ಲಿ. ಮದ್ರಾಸಿನವರೇ ಆದ ಸಿ.ರಾಜಗೋಪಾಲಾಚಾರಿ ಮುಂದೊಮ್ಮೆ ಉದ್ಗರಿಸುತ್ತಾರೆ "Vivekananda saved Hinduism and saved India, but for him, we would not have got our Independence and would have lost our religion ' ಎಂದು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)