ಅಂಕಣ

ಅದ್ಭುತ ಪ್ರತಿಭೆ ಪುಟಾಣಿ ಆದ್ಯಾ

ಎಲ್ಲ ಮಕ್ಕಳಲ್ಲಿಯೂ ಹುಟ್ಟುತ್ತಲೇ ಇರುತ್ತದೆ. ಪಾಲಕರು ಅದನ್ನು ಗಮನಿಸಿ, ಬಾಲ್ಯದಿಂದಲೇ ಮಕ್ಕಳ ಚಿತ್ತವನ್ನು ಉತ್ತಮ ಚಟುವಟಿಕೆಗಳತ್ತ ಹರಿಸಿದರೆ ಅದು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುತ್ತದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ಹೆಸರು ದಾಖಲಿಸಿಕೊಂಡಿರುವ ಪುಟಾಣಿ.

ತುಮಕೂರು ಜಿಲ್ಲೆಯ ಕುಣಿಗಲ್​ನ ಕುವೆಂಪು ನಗರದ ಬೆಸ್ಕಾಂ ಉದ್ಯೋಗಿ ಮಹೇಶ್ ಹಾಗೂ ಆಶಾ ದಂಪತಿಯ ಪುತ್ರಿ 2.9 ವರ್ಷದ ಆದ್ಯಾ. ಇನ್ನೂ ಶಾಲೆಯ ಮುಖ ನೋಡದ ಈಕೆಯೀಗ ‘ಎಕ್ಸಲೆಂಟ್ ಮೆಮೋರಿ ಪವರ್ ಕಿಡ್ ಪ್ರಶಸ್ತಿ’ಯ ಜತೆಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಪ್ರಶಸ್ತಿಯನ್ನು ಮುಡಿಲಿಗೇರಿಸಿಕೊಂಡಿದ್ದಾಳೆ.

ಈ ಪುಟ್ಟ ಬಾಲೆಯ ಜ್ಞಾಪಕಶಕ್ತಿ ಎಷ್ಟು ಅದ್ಭುತವಾಗಿದೆ ಎಂದರೆ, ಪ್ರಾಣಿಗಳ ಹೆಸರು, ದೇಹದ ಭಾಗಗಳು, ಭಾರತದ ರಾಷ್ಟ್ರೀಯ ಚಿಹ್ನೆ, ರಾಜ್ಯಗಳು, ಹೂವುಗಳು, ತಿಂಗಳು, ಸಂಗೀತ ಉಪಕರಣಗಳ ಹೆಸರು, ಕನ್ನಡ ಹಾಗೂ ಇಂಗ್ಲಿಷ್ ವರ್ಣಮಾಲೆ, ಬಟ್ಟೆ, ಪಕ್ಷಿಗಳು, ವಾರದ ದಿನಗಳು, ಸಂಖ್ಯೆಗಳು, ಆಹಾರದ ಹೆಸರುಗಳು, ಕೀಟಗಳು, ತರಕಾರಿಗಳು, ಸಾರಿಗೆಯ ಹೆಸರುಗಳನ್ನು ಪಟಪಟನೆ ಹೇಳುತ್ತಾಳೆ.

ಇವಳ ಈ ಪ್ರತಿಭೆಯ ಸಂಪೂರ್ಣ ಶ್ರೇಯಸ್ಸು ತಾಯಿ ಆಶಾ ಅವರಿಗೆ ಸಲ್ಲುತ್ತದೆ. ಗೋಡೆಯ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸುವ ಮೂಲಕ ಪಕ್ಷಿ, ಪ್ರಾಣಿ ಹಾಗೂ ಇತರ ವಸ್ತುಗಳ ಪರಿಚಯವನ್ನು ಮಾಡಿಸುತ್ತಿದ್ದರು.ಪುಸ್ತಕದಲ್ಲಿ ಕಾಣುವ ಹೊಸಹೊಸ ಚಿತ್ರಗಳು ಹಾಗೂ ಮನೆ ಹೊರಗೆ ಬಂದಾಗ ಕಾಣುವ ಹೊಸಹೊಸ ವಸ್ತುಗಳ ಬಗ್ಗೆ ಆದ್ಯಾ ಅಮ್ಮನ ಬಳಿ ಪ್ರಶ್ನಿಸುತ್ತಿದ್ದಳು. ಉತ್ತರ ಸಿಗುವವರೆಗೂ ಬಿಡುತ್ತಿರಲಿಲ್ಲ. ಆಶಾ ಅವರೂ ಮಗಳ ಪ್ರಶ್ನೆಗಳಿಗೆ ತಾಳ್ಮೆಯಿಂದಲೇ ಉತ್ತರಿಸುತ್ತಿದ್ದರು. ಒಮ್ಮೆ ಹೇಳಿಕೊಟ್ಟುಬಿಟ್ಟರೆ ಆದ್ಯಾ ಅದನ್ನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದುದರಿಂದ ತಮ್ಮ ಮಗಳಲ್ಲಿ ಅದ್ಭುತ ಜ್ಞಾಪಕ ಶಕ್ತಿ ಇದೆ ಎಂದು ಆಶಾ ಅವರಿಗೆ ಅನ್ನಿಸಿತ್ತು. ಈ ವಿಶೇಷ ಪ್ರತಿಭೆಯನ್ನು ಆಶಾ ಅವರು ವಿಡಿಯೋ ರೆಕಾರ್ಡ್ ಮಾಡಿದ್ದರು. ‘ಕಿಡ್ಸ್ ಆಂಡ್ ಯಂಗ್ ಸ್ಟಾರ್’ ಪ್ರಶಸ್ತಿಗೆ ಆ ವಿಡಿಯೋವನ್ನು ನೀಡಿದ್ದರು. ಇಂಡಿಯಾ ಬುಕ್ ಆಫ್ ರೆಕಾರ್ಡ್​ನ ವೆಬ್​ಸೈಟ್​ಗೂ ಅದನ್ನು ಅಪ್​ಲೋಡ್ ಮಾಡಿದ್ದರು. ಇವೆರಡೂ ಪ್ರಶಸ್ತಿ ಈಗ ಆದ್ಯಾಳಿಗೆ ಸಿಕ್ಕಿದೆ.

ಎಸ್. ತಾರಾನಾಥ್ ಭದ್ರಾವತಿ