| ವಿದ್ಯಾ ಉಪೇಂದ್ರ ಜೋಶಿ
ತಂದೆಯ ನಿಧನದ ಬಳಿಕ ನರೇಂದ್ರ ಮನೆಯ ದಾರಿದ್ರ್ಯದ ಕತ್ತಲನ್ನು ದೂರ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಚಿಂತಿಸುತ್ತಿದ್ದಂತೆ ಒಂದು ದಿನ ತುಂಬ ದುಃಖ ವಾಯಿತು. ಈ ದುಃಖದ ಹೃದಯದೊಂದಿಗೇ ತನ್ನ ಗುರುಗಳಾದ ಶ್ರೀರಾಮಕೃಷ್ಣರ ಬಳಿಗೆ ಬಂದ. ‘ಗುರುಗಳೇ, ತಾವು ಎಷ್ಟಾದರೂ ಕಾಳಿಮಾತೆಯ ಅನನ್ಯ ಭಕ್ತರು. ನನ್ನ ಮನೆಯ ಸಂಕಷ್ಟವನ್ನು ಆಕೆಗೆ ತಿಳಿಸಬಾರದಾ?’ ಎಂದರು. ಶ್ರೀರಾಮಕೃಷ್ಣರು ಕ್ಷಣಕಾಲ ಶಿಷ್ಯನನ್ನೇ ನೋಡಿ, ‘ಮಗು, ಮಾತೆ ನಿನಗೆ ಜನ್ಮ ನೀಡಿರುವುದು ಧನವಂತನಾಗುವುದಕ್ಕಲ್ಲವೋ, ಬೇರೊಂದು ಮಹಾಕಾರ್ಯಕ್ಕಾಗಿ. ಅದನ್ನು ಮಾಡುವುದೇ ನಿನ್ನ ಗುರಿ ಆಗಿರಬೇಕು’ ಎಂದರು.
ನರೇಂದ್ರ ಬೇಸರ ಹಾಗೂ ದುಗುಡದಿಂದ, ‘ನನಗೆ ಅದ್ಯಾವ ಕಾರ್ಯವೂ ಬೇಕಿಲ್ಲ. ನನ್ನ ಹೆತ್ತತಾಯಿ ಮನೆಯಲ್ಲಿ ಕಣ್ಣೀರು ಸುರಿಸುವುದನ್ನು ತಪ್ಪಿಸಬೇಕು. ಹಾಗೆ ತಪ್ಪಿಸಲು ನಾನು ಹಣವಂತನಾಗಲೇಬೇಕು’ ಎಂದ. ಗುರುಗಳು- ‘ಹಾಗಾದರೆ ನೀನೂ ಕಾಳಿಮಾತೆಯ ಭಕ್ತನೇ ತಾನೇ? ಹೋಗು ತಾಯಿ ಮುಂದೆ ನಿಂತು ಭಕ್ತಿಯಿಂದ ಪ್ರಾರ್ಥನೆ ಮಾಡು’ ಎಂದರು.
ನರೇಂದ್ರ ಮರುಕ್ಷಣವೇ ಕಾಳಿಯ ಧ್ಯಾನದಲ್ಲಿ ಮುಳುಗಿದ. ಕೆಲ ಕಾಲದಲ್ಲಿ ತಾಯಿ ಪ್ರತ್ಯಕ್ಷಳಾದಾಗ ನರೇಂದ್ರನಿಗಾದ ಸಂತೋಷ ಅಷ್ಟಿಷ್ಟಲ್ಲ. ಲೌಕಿಕವನ್ನೇ ಮರೆತುಬಿಟ್ಟ. ರಾಮಕೃಷ್ಣರು, ‘ತಾಯಿಯನ್ನು ಕಂಡಾಗ ಧನವನ್ನೇಕೆ ಕೇಳಲಿಲ್ಲ? ಮತ್ತೆ ಪ್ರಾರ್ಥಿಸು’ ಎಂದರು. ನರೇಂದ್ರ ಮತ್ತೆ ಧ್ಯಾನಮಗ್ನನಾದಾಗ ಕಾಳಿ ಪ್ರತ್ಯಕ್ಷಳಾದಳು. ಈಗಲೂ ಮಾತೆಯ ಮುಖಾರವಿಂದವನ್ನು ನೋಡುತ್ತ ತನ್ನನ್ನು ತಾನೇ ಮರೆತು, ಧನದ ಸ್ಮರಣೆಯೇ ಬರಲಿಲ್ಲ. ‘ಅಮ್ಮಾ ನನಗೆ ನನ್ನ ಜನರೆಲ್ಲರ ಸೇವೆ ಮಾಡಲು ಜ್ಞಾನ, ಶಕ್ತಿ, ಸಾಮರ್ಥ್ಯವನ್ನು ಕೊಡು’ ಎಂದಾಗ ಮಾತೆ ಅಭಯಹಸ್ತದಿಂದ ಆಶೀರ್ವದಿಸಿದಳು.
ಗುರುಗಳು ಮತ್ತೆ ಪ್ರಶ್ನಿಸಿದರು- ‘ಧನವನ್ನೇಕೆ ಕೇಳಲಿಲ್ಲ?’ ನರೇಂದ್ರ ಹೇಳಿದ, ‘ತಾಯಿಯ ಮುಖವನ್ನು ನೋಡುತ್ತಿದ್ದಂತೆ ನನ್ನ ಮನೆಯ ಚಿಂತೆಯೇ ಮರೆತು ಹೋಗುತ್ತದೆ. ಜಗನ್ಮಾತೆಯಂತೆಯೇ ಜಗತ್ತಿನ ಕಲ್ಯಾಣದ ಚಿಂತೆ ಕಾಡುತ್ತದೆ’ ಎಂದ. ಶ್ರೀರಾಮಕೃಷ್ಣರು ಹೇಳಿದರು- ‘ಈಗಲಾದರೂ ನನ್ನ ಮಾತಿನಲ್ಲಿ ನಂಬಿಕೆ ಬಂತಾ? ತಾಯಿ ನಿನಗೆ ಜನ್ಮ ಕರುಣಿಸಿರುವುದು ಜಗತ್ತಿನ ದೀನದಲಿತರ ಸೇವೆಗಾಗಿ. ನಾನು ನನ್ನದು ಎಂಬ ಸ್ವಾರ್ಥ ಸಂಕುಚಿತ ಚಿಂತನೆಯನ್ನು ಬಿಟ್ಟು, ತಾಯಿ ಆದೇಶದಂತೆ ನಡೆ. ಆಗ ಮಾತ್ರ ಸರ್ವಸುಖ ಲಭಿಸಿದಂತಾಗುವುದು’. ಗುರುವಿನ ಮಾತನ್ನು ಆಲಿಸುತ್ತಿದ್ದಂತೆ ನರೇಂದ್ರನಿಗೆ ವಿವೇಕ, ಆನಂದ ಎರಡೂ ಉಂಟಾಯಿತು. ಈತನೇ ಮುಂದೆ ವಿವೇಕಾನಂದ ಆಗಿ, ಜಗತ್ತಿಗೆ ವಿವೇಕದ ಬೆಳಕನ್ನು ಚೆಲ್ಲಿದ.
ಶಾಲೆಯ ಕೊಠಡಿಗಳಲ್ಲಿ ಕಲಿಸುವವರು ಮಾತ್ರ ಗುರು ಅಲ್ಲ. ಗು ಅಂದರೆ ಅಂಧಕಾರ ರು ಎಂದರೆ ದೂರವಾಗಿಸುವುದು, ಅಂಧಕಾರ ಕಳೆದು ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವ ನಿಜವಾದ ಗುರು. ವಿದ್ಯಾರ್ಥಿಗೆ ಜೀವನಯಾನದ ಬದುಕಿಗೆ ಆದರ್ಶ ದಡ ಸೇರಿಸಲು ನಾವಿಕನಾಗಿ, ಜ್ಞಾನದಾಹಿಗಳಿಗೆ ಅಕ್ಷರದಾಸೋಹಿಯಾಗಿ, ಬಾಳಲ್ಲಿ ಭರವಸೆ ಬೀಜ ಬಿತ್ತಿ ಸಾಧನೆಯ ಕಿರೀಟಕ್ಕೆ ಸ್ಪೂರ್ತಿಯ ಸೆಲೆಯಾಗಿರುವವನೇ ನಿಜವಾದ ಗುರು. ಇಂಥ ನಿಜವಾದ ಗುರುವನ್ನು ಪಡೆದು, ಅವನ ಮಾರ್ಗದರ್ಶನದಲ್ಲಿ ಜೀವನವನ್ನು ಧನ್ಯವಾಗಿಸಿಕೊಳ್ಳೋಣ.
(ಲೇಖಕರು ಹವ್ಯಾಸಿ ಬರಹಗಾರರು)