ಅಂಕಣ

ಅನಾಥಶವಗಳಿಗೆ ಮುಕ್ತಿಯ ಮಡಿಲು ಆಶಾ

ಬದುಕೇ ನಿನಗೆ ನಮಸ್ಕಾರ! ಹೌದು, ಜೀವನದಲ್ಲಿ ಎಷ್ಟೇ ಕಷ್ಟ, ನೋವು ಅನುಭವಿಸಿದರೂ ಸರಿಯೇ. ಆದರೆ, ಯಾರೂ ಅನಾಥರಾಗಿ ಸಾಯಲು ಇಚ್ಛೆ ಪಡುವುದಿಲ್ಲ. ಕೊನೆಯುಸಿರು ಎಳೆಯುವಾಗ ತಮ್ಮವರು ಜತೆಯಲ್ಲಿ ಇರಬೇಕು ಎಂಬ ಪುಟ್ಟ ಆಸೆ ಎಲ್ಲರಲ್ಲೂ ಇರುತ್ತದೆ. ಇದು ಅಸಹಜವೂ ಅಲ್ಲ, ದೊಡ್ಡ ಬೇಡಿಕೆಯೂ ಅಲ್ಲ. ಬದುಕಿಗೆ, ಬದುಕಿನ ದಾರಿಗೆ, ಕನಸುಗಳಿಗೆ, ಸಾಧನೆಗಳಿಗೆ ಒಂದು ಘನತೆ ಇರುವಂತೆ ಸಾವಿಗೂ ಒಂದು ಘನತೆಯಿದೆ. ಅದಕ್ಕೇ ಅಂತಿಮಸಂಸ್ಕಾರ ಎಂಬುದು ಸಾಮಾನ್ಯ ಸಂಸ್ಕಾರವಲ್ಲ. ಇಲ್ಲಿ ಸಂಪ್ರದಾಯದ ನಂಟೂ ಇದೆ. ಮೃತ ವ್ಯಕ್ತಿಯ ಅಂತಿಮಸಂಸ್ಕಾರ ಸರಿಯಾಗಿ ನಡೆಯದಿದ್ದರೆ ಅವರು ಮೋಕ್ಷದ ದಾರಿಯಲ್ಲಿ ಪಯಣಿಸಲು ಅಡ್ಡಿಆತಂಕಗಳು ಸೃಷ್ಟಿಯಾಗುತ್ತವೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಬಡವರು, ಸಿರಿವಂತರು ಎಂಬ ಭೇದವಿಲ್ಲದೆ ಅಂತಿಮ ಕಾರ್ಯವನ್ನು ಆದಷ್ಟು ಶ್ರದ್ಧೆಯಿಂದ ನಡೆಸಲಾಗುತ್ತದೆ.

ಬದುಕಿನ ತಿರುವುಗಳಿಗೆ ಹಲವು ಮುಖಗಳಿರುವಂತೆಯೇ ಸಾವಿನಲ್ಲೂ ಹಲವು ವಿಧ. ರೈಲು ಹಳಿಗೆ ಸಿಲುಕಿಯೋ, ಹೊಳೆಗೆ ಹಾರಿಯೋ ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ರಸ್ತೆಬದಿಯ ನಿರ್ಗತಿಕರು, ಭಿಕ್ಷುಕರು, ರೋಗಿಗಳು ಮೃತರಾದಾಗ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ. ಇಂಥ ಸಂದರ್ಭದಲ್ಲೇ ತೆರೆಮರೆಯ ಸಾಧಕರು ಆಪದ್ಬಾಂಧವರ ರೂಪದಲ್ಲಿ ಬಂದು, ಕಠಿಣ ಕೆಲಸವನ್ನೂ ಸುಲಭವಾಗಿಸುತ್ತಾರೆ. ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಅಥವಾ ರಸ್ತೆಬದಿಯಲ್ಲಿನ ಅಪರಿಚಿತ ಶವಗಳನ್ನು ಕಂಡು ಬೆಚ್ಚಿಬೀಳುವವರು, ಆ ಜಾಗದಿಂದ 100 ಮೀಟರ್ ದೂರದಿಂದ ಕ್ರಮಿಸುತ್ತ ಸ್ವಲ್ಪ ಮುಂದೆ ಹೋಗಿ ದೀರ್ಘ ಉಸಿರು ಎಳೆದುಕೊಳ್ಳುವವರು ಅದೆಷ್ಟೋ ಮಂದಿ. ವಾಸ್ತವ ಹೀಗಿರುವಾಗ ಹೆಣ್ಣುಮಗಳೊಬ್ಬಳು ಇಂಥ ಅನಾಥ ಶವಗಳಿಗೆ ಅಂತಿಮ ಸಂಸ್ಕಾರದ ಮೂಲಕ ಮುಕ್ತಿ ದೊರಕಿಸುತ್ತಿದ್ದಾರೆಂದರೆ, ಮೊದಲಿಗೆ ಅವರ ಶಕ್ತಿಗೆ, ದೃಢಸಂಕಲ್ಪಕ್ಕೆ ನಮಿಸಲೇ ಬೇಕು.

ಇವರು ಪೊಲೀಸ್ ಇಲಾಖೆಗೆ ಮನೆಮಗಳಿದ್ದಂತೆ. ರಾಮನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲೇ ಅನಾಥ ಶವ ಸಿಕ್ಕರೂ, ಸಿವಿಲ್ ಪೊಲೀಸ್ ಮತ್ತು ರೈಲ್ವೆ ಪೊಲೀಸ್ ಫೋನ್ ಮಾಡುವುದು ಇವರಿಗೇ! ಫೋನ್ ಬಂದಾಕ್ಷಣ ವಾಹನ ಓಡಿಸಿಕೊಂಡು (ಮೊದಲು ಓಮ್ನಿ ವ್ಯಾನ್, ಈಗ ಆಂಬುಲೆನ್ಸ್) ಘಟನಾಸ್ಥಳಕ್ಕೆ ಹೋಗುತ್ತಾರೆ. ಆ ಶವದ ಸ್ಥಿತಿ ಹೇಗೇ ಇರಲಿ; ಆ ಬಗ್ಗೆ ಒಂದಿಷ್ಟು ಬೇಸರ ಮಾಡಿಕೊಳ್ಳದೆ ವಾಹನಕ್ಕೆ ಶಿಫ್ಟ್ ಮಾಡುತ್ತಾರೆ. ಪೊಲೀಸ್ ಪ್ರಕ್ರಿಯೆಗಳು ಮುಗಿದ ಬಳಿಕ ಮುಂದಿನ ನಿಲ್ದಾಣ ಸ್ಮಶಾನ! ಅಲ್ಲಿ ಶವಕ್ಕೆ ಪೂಜೆ ಮಾಡಿ, ಅಂತಿಮಸಂಸ್ಕಾರ ನೆರವೇರಿಸುತ್ತಾರೆ. ಇಂಥ ಒಂದೊಂದು ಅಂತ್ಯಸಂಸ್ಕಾರದ ಹಿಂದೆಯೂ ನೋವಿನ ಕಥೆಗಳಿರುತ್ತವೆ, ಕಣ್ಣೀರು ಹಾಕಲು ಯಾರೂ ಇಲ್ಲದ ನಿರ್ವಾತ ಸ್ಥಿತಿ ಇರುತ್ತದೆ, ಬದುಕಿನ ದಯನೀಯ ಮುಖದ ಅನಾವರಣವಾಗಿರುತ್ತದೆ. ಅದೇನಿದ್ದರೂ, ಅಂತಿಮಸಂಸ್ಕಾರ ನಡೆಸಿದ ಇವರು ಸಾರ್ಥಕತೆಯೊಂದಿಗೆ ಮರಳುತ್ತಾರೆ; ಮತ್ತೊಂದು ಶವವಿರುವ ಸ್ಥಳಕ್ಕೆ!

ಈ ದಿಟ್ಟಮಹಿಳೆಯ ಹೆಸರು ಆಶಾ ಸ್ವಾಮಿ. ಸಮಾಜಸೇವೆಯ ಆಸೆಯೇ ಇವರ ಈ ಅಸಾಮಾನ್ಯ ಕೆಲಸಕ್ಕೆ ಪ್ರೇರಣೆ. 2016-17ರಿಂದ ಈವರೆಗೆ ನಾಲ್ಕೈದು ಸಾವಿರ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನಡೆಸಿದ್ದಾರೆ. ಅದರಲ್ಲೂ, ಕರೊನಾ ಕಾಲಾವಧಿಯಲ್ಲಿ ಜೀವಭಯವನ್ನು ಬದಿಗಿಟ್ಟು ಕಾರ್ಯನಿರ್ವಹಿಸಿದ್ದಾರೆ. ಇದೆಲ್ಲ ಸುಲಭವಾಗಿ ಸಾಕಾರಗೊಂಡ ಪಥವೇನಲ್ಲ. ಬೀದಿಯಲ್ಲಿ ಶವ ಎತ್ತುವವಳು ಅಂತ ಹೀಯಾಳಿಸಿ ಗಂಡನ ಮನೆಯವರೇ ಆಚೆ ಹಾಕಿದರು, ಸಂಬಂಧಿಕರು ದೂರವಾದರು, ಹೆತ್ತ ತಾಯಿ ಮನೆಗೆ ಬರಲೇಬೇಡ ಎಂದರು, ಸ್ನೇಹಿತೆಯರು ಬಾಯ್ ಬಾಯ್ ಎಂದು, ಬೆನ್ನು ತಿರುಗಿಸಿದರು. ಗೌರಿಹಬ್ಬಕ್ಕೆ ಕುಂಕುಮ ಕೊಡಲು ಯಾರೂ ಕರೆಯದಿದ್ದಾಗ; ಮನೆಯಲ್ಲಿ ಆಶಾ ಕಣ್ಣೀರು ಹಾಕಿದರು. ಅಷ್ಟೇಕೆ, ‘ತುಂಬ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ; ಬನ್ನಿ ನಮ್ಮ ಸಂಸ್ಥೆಯಿಂದ ನಿಮಗೆ ಸನ್ಮಾನ ಮಾಡುತ್ತೇವೆ’ ಎಂದು ಸಮಾರಂಭಕ್ಕೆ ಕರೆದವರು, ‘ಹೆಣ ಎತ್ತುವವಳು, ದೊಡ್ಡವರ ಜತೆ ಕೂರಿಸುವುದು ಬೇಡ, ಎಲ್ಲ ಮುಗಿದ ಮೇಲೆ ಕೊನೆಗೇ ಸನ್ಮಾನ ಮಾಡಿ ಕಳುಹಿಸಿದರಾಯಿತು’ ಎಂದು ಅವಮಾನಿಸಿದರು.

ಹೀಗೆ ನೋವು ನುಂಗುತ್ತ ನುಂಗುತ್ತ ಆಶಾ ಮತ್ತಷ್ಟು ಗಟ್ಟಿಗಿತ್ತಿಯಾದರು. ಸೇವೆಯ ಪುಟ್ಟಲೋಕವನ್ನೇ ಸೃಷ್ಟಿಸಿಕೊಂಡರು. ಅನಾಥ ಶವಗಳ ಅಂತಿಮ ಸಂಸ್ಕಾರ, ವೃದ್ಧ ರೋಗಿಗಳ ನೆರವಿನಲ್ಲೇ ಭಗವಂತನನ್ನು ಕಂಡರು. ಅದಕ್ಕೆಂದೆ, ರಾಮನಗರದ ಜನರು ಈಗ ಆಶಮ್ಮ, ಆಶಕ್ಕ ಎಂದೇ ಗೌರವಿಸುತ್ತ, ಅವರಿಂದ ಪ್ರೇರಣೆ ಪಡೆಯುತ್ತಿದ್ದಾರೆ.

ಆಶಾ ಹುಟ್ಟಿದ್ದು ರಾಮನಗರ ಬಳಿಯ ಜಯಪುರ ಎಂಬ ಪುಟ್ಟಗ್ರಾಮದಲ್ಲಿ. ತಂದೆ ವೆಂಕಟ್ಟಪ್ಪ, ತಾಯಿ ಸಾಕಮ್ಮ. ತಂದೆ ಗಾರೆ ಕೆಲಸ ಮಾಡುತ್ತಿದ್ದರೆ, ತಾಯಿ ಒಂದಿಷ್ಟು ಕುರಿಗಳನ್ನು ನೋಡಿಕೊಳ್ಳುತ್ತಿದ್ದರು. ಜಯಪುರದಲ್ಲಿ ಪ್ರಾಥಮಿಕ ಶಿಕ್ಷಣ, ಕೂಟಗಲ್ಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದ ಆಶಾ ಅವರಿಗೆ ಎಸ್ಸೆಸ್ಸೆಲ್ಸಿ ಪಾಸಾಗುತ್ತಿದ್ದಂತೆ ಮದುವೆ ಮಾಡಿಕೊಡಲಾಯಿತು. ಗಂಡನ ಮನೆಯಲ್ಲಿ ಸಮೃದ್ಧವಾಗಿ ಇದ್ದದ್ದು ಬಡತನವೊಂದೇ! ಆಯಾ ದಿನ ಕೂಲಿ ಮಾಡಿದರೆ ಊಟ ಎಂಬಂಥ ದಯನೀಯ ಸ್ಥಿತಿ. ಆಶಾ ಗದ್ದೆತೋಟಗಳಲ್ಲಿ ಕೂಲಿ ಮಾಡುತ್ತ ಹೇಗೋ ಜೀವನದ ಬಂಡಿಯನ್ನು ನೂಕುತ್ತಿದ್ದರು. ಇಬ್ಬರು ಪುತ್ರರು (ತೇಜಸ್ ಮತ್ತು ಮನೀಷ್) ಜನಿಸಿದ ಮೇಲೆ ಜವಾಬ್ದಾರಿ ಮತ್ತಷ್ಟು ಹೆಚ್ಚಿತು. ಆಗ, 2012ರಲ್ಲಿ ರಾಮನಗರದಲ್ಲಿ ಪುಟ್ಟ ಸಂಬಳದ ಖಾಸಗಿ ಕೆಲಸಕ್ಕೆ ಸೇರಿಕೊಂಡರು.

ಮನೆ, ಕೆಲಸ, ಮಕ್ಕಳು ಎಲ್ಲವನ್ನೂ ನಿರ್ವಹಿಸಿಕೊಂಡು ಹೋಗುತ್ತಿದ್ದ ಆಶಾ ಅವರಿಗೆ ಜೀವನದಲ್ಲಿ ಮತ್ತೊಂದು ತಿರುವು ಕಾದಿತ್ತು. ಇವರ ಸೋದರಮಾವ ಪ್ರವೀಣ್​ಕುಮಾರ್ ಆಂಬುಲೆನ್ಸ್ ಚಾಲಕರು. ಅದೊಂದು ದಿನ ರೈಲ್ವೆ ಪೊಲೀಸರಿಂದ ಕರೆ ಬಂದಾಗ, ನೆರವಿಗೆ ಯಾರೂ ಇಲ್ಲವೆಂದು ಆಶಾ ಅವರನ್ನು ಕರೆದುಕೊಂಡು ಹೋದರು. ರೈಲ್ವೆ ಹಳಿಯಲ್ಲಿ ಶವ ಚೆಲ್ಲಾಪಿಲ್ಲಿಯಾಗಿತ್ತು; ಶವದ ಭಾಗಗಳನ್ನು ಪ್ರವೀಣ್ ಬ್ಯಾಗಿನಲ್ಲಿ ತುಂಬಿಸುತ್ತಿದ್ದರೆ; ಅಲ್ಲಿದ್ದ ನೂರಾರು ಜನ ನೋಡುತ್ತ ನಿಂತಿದ್ದರು. ‘ಯಾರಾದರೂ ನೆರವಿಗೆ ಬನ್ನಿ’ ಎಂಬ ಆಶಾ ಅವರ ಮನವಿಗೂ ಸ್ಪಂದನೆ ದೊರಕದೆ ಇದ್ದಾಗ, ಸ್ವತಃ ಆಶಾ ಗ್ಲೌಸ್ ಹಾಕಿಕೊಂಡು ಕೆಲಸಕ್ಕೆ ನಿಂತರು. ಪೊಲೀಸರು, ‘ಇದು ಹೆಣ್ಣುಮಕ್ಕಳು ಮಾಡುವ ಕೆಲಸವಲ್ಲಮ್ಮ’ ಎಂದರೂ, ಇವರು ಮುಂದುವರಿದರು.

ಈ ಘಟನೆ ಆಶಾರವರ ಮೇಲೆ ಗಾಢವಾದ ಪ್ರಭಾವ ಬೀರಿತಲ್ಲದೆ, ಈ ನಿಟ್ಟಿನಲ್ಲಿ ತಾನೂ ಕೆಲಸ ಮಾಡಬೇಕು ಎಂಬ ಪ್ರೇರಣೆ ಹುಟ್ಟಿಕೊಂಡಿತು. ಸೋದರಮಾವನೊಂದಿಗೆ ಸೇರಿ ಅನಾಥ ಶವಗಳ ಅಂತಿಮಸಂಸ್ಕಾರ ಮುಂದುವರಿಸಿದರು. ಆದರೆ, ಈ ವಿಷಯ ಗಂಡನಿಗೆ ಗೊತ್ತಾದಾಗ ರಾದ್ಧಾಂತವೇ ನಡೆಯಿತು. ‘ಹಳ್ಳಿಯವರೆಲ್ಲ ನಿನ್ನನ್ನು ಬೀದಿಯಲ್ಲಿ ಹೆಣ ಎತ್ತುವವಳು ಎಂದು ಜರಿಯುತ್ತಿದ್ದಾರೆ. ಇನ್ಮೇಲೆ ನಮ್ಮ ಮನೆಯಲ್ಲಿ ನಿನಗೆ ಸ್ಥಾನವಿಲ್ಲ’ ಎಂದಾಗ ಆಕಾಶವೇ ಕಳಚಿಬಿದ್ದ ಪರಿಸ್ಥಿತಿ.

ಆ ಸಂದರ್ಭದಲ್ಲೂ ಪ್ರವೀಣ್​ಕುಮಾರ್ ನೆರವಿಗೆ ಬಂದರು. ಪುಟ್ಟ ಕಂದಮ್ಮಗಳೊಂದಿಗೆ ಬಂದಿದ್ದ ಆಶಾರಿಗೆ ರಾಮನಗರದಲ್ಲಿ ಬಾಡಿಗೆಮನೆ ಮಾಡಿಕೊಟ್ಟು, ಚಿಂತೆ ಬೇಡ ಎಂಬ ಅಭಯ ನೀಡಿದರು. ತಂದೆಯ ಒಂದು ಎಕರೆ ಜಮೀನಿನಲ್ಲಿ ರಾಗಿ ಮತ್ತು ತರಕಾರಿ ಬೆಳೆಯುತ್ತ ; ಬರುವ ಅಲ್ಪ ಆದಾಯದಲ್ಲೇ ಜೀವನ ನಿರ್ವಹಿಸತೊಡಗಿದರು. ಈ ಜಂಜಾಟಗಳ ನಡುವೆಯೇ ಆಂಬುಲೆನ್ಸ್ ಓಡಿಸುವುದನ್ನು ಕಲಿತರು. ಸೋದರಮಾವನ ಹಳೆಯ ಓಮ್ನಿ ವಾಹನ ಚಲಾಯಿಸಿಕೊಂಡು ಹೋಗಿ, ಶವಗಳ ಅಂತ್ಯಸಂಸ್ಕಾರ ಮಾಡತೊಡಗಿದರು. ಇವರ ಇಚ್ಛಾಶಕ್ತಿ, ಸಮರ್ಪಣೆ, ಧೈರ್ಯ ಎಲ್ಲವನ್ನೂ ಕಂಡು ಪೊಲೀಸರು ಪ್ರಶಂಸಿಸಿದರು, ಬೆಂಬಲಕ್ಕೆ ನಿಂತರು.

ಅದೊಂದು ದಿನ, ವೃದ್ಧೆ ಕಾಯಿಲೆಗೆ ಬೇಸತ್ತು ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಮರಣೋತ್ತರ ಪರೀಕ್ಷೆಯ ನಂತರ ಆಶಾರವರ ಸಂಬಂಧಿಯೊಬ್ಬರು ಆ ಅಜ್ಜಿಯ ಶವ ನೋಡಲು ಆಸ್ಪತ್ರೆಗೆ ಬಂದರು. ಆ ಅಜ್ಜಿ ಇವರಿಗೆ ಸಂಬಂಧಿ ಅಂತ ಗೊತ್ತಾಗಿದ್ದು ಆಗಲೇ. ಆ ವೃದ್ಧೆಗೆ ಆಸ್ತಿಪಾಸ್ತಿ ಯಾವುದೂ ಇರಲಿಲ್ಲ. ಹಾಗಾಗಿ, ಆಸ್ಪತ್ರೆಯಿಂದ ಮರಳಿದ ಸಂಬಂಧಿಗಳು ಶವವನ್ನು ಕೊಂಡೊಯ್ಯಲು ಬರಲೇ ಇಲ್ಲ. ಆ ಶವಕ್ಕೂ ಅಂತಿಮಸಂಸ್ಕಾರ ನೆರವೇರಿಸಿದ ಆಶಾ, ಹಣವಿದ್ದರಷ್ಟೇ ಸಂಬಂಧಗಳು ಎಂಬ ಸ್ಥಿತಿಯನ್ನು ನೋಡಿ ಮರುಗಿದರು. ಇನ್ನೊಂದು ಸಂದರ್ಭದಲ್ಲಿ, ಮತ್ತೊಬ್ಬ ಯುವಕನ ಶವ ತೆಗೆದುಕೊಂಡು ಹೋಗಲು ಬಂದಿದ್ದ ಬಡ ತಂದೆ-ತಾಯಿಗೆ ವಾಹನದ ಖರ್ಚು ಭರಿಸುವಷ್ಟು ಶಕ್ತಿ ಇರಲಿಲ್ಲ. ಅಂಥ ಸಂದರ್ಭದಲ್ಲೂ, ಒಂದಿಷ್ಟು ಜನರಿಂದ ಹಣ ಜೋಡಿಸಿ, ಅವರಿಗೆ ನೆರವಾಗಿ, ಯುವಕನ ಶವ ಅವರ ಊರು (ಆಂಧ್ರ) ತಲುಪುವಂತೆ ಮಾಡಿದ್ದು ಆಶಾ. ಕರೊನಾ ಸಮಯದಲ್ಲಂತೂ, ಪುರುಸೊತ್ತು ಇಲ್ಲದಂತೆ ಅಂತಿಮಸಂಸ್ಕಾರ ನಡೆಬೇಕಾಗುತ್ತಿತ್ತು; ಅಂಥ ಸಂದರ್ಭದಲ್ಲೂ ಪಾರ್ಥಿವಶರೀರಗಳಿಗೆ ಪೂಜೆ ಸಲ್ಲಿಸಿ, ಗೌರವಯುತವಾಗಿಯೇ ಅಂತ್ಯಸಂಸ್ಕಾರ ನಡೆಸಿದ್ದು, ಮಾನವೀಯತೆಯ ಉತ್ತಮ ಸಂದೇಶ.

ಇಷ್ಟೇ ಅಲ್ಲ, ರಸ್ತೆಬದಿಯ ನಿರ್ಗತಿಕರಿಗೆ ಒಂದಿಷ್ಟು ಆಹಾರ, ಔಷಧ ಒದಗಿಸುವುದು, ಬಡರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಹೀಗೆ ಹತ್ತಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಹಲವು ದಾನಿಗಳು ಸೇರಿ ಇವರಿಗೆ ಆಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ. ಗರ್ಭಿಣಿಯರನ್ನು ಇದರಲ್ಲಿ ಕೊಂಡೊಯ್ಯುವಾಗ ದಾರಿಮಧ್ಯೆಯೇ ಹಲವು ಹೆರಿಗೆಗಳು ಆಗಿವೆ. ತಾಯಿ-ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ ಸಾರ್ಥಕತೆ ಅನನ್ಯ.

‘ಈ ಜೀವನದಲ್ಲಿ ಯಾರೂ ಅನಾಥರಲ್ಲ. ನಾನು ಅಂತ್ಯಸಂಸ್ಕಾರ ಮಾಡಿದವರೂ ಅನಾಥರಲ್ಲ. ಏಕೆಂದರೆ, ಯಾವುದೋ ಜನ್ಮದಲ್ಲಿ ನಾನು ಅವರ ಅಕ್ಕ-ತಂಗಿ, ಮಗಳು ಆಗಿದ್ದಕ್ಕೆ ಈ ಜನ್ಮದಲ್ಲಿ ಈ ಕರ್ತವ್ಯ ನಿರ್ವಹಿಸುವಂತಾಗಿದೆ’ ಎನ್ನುವ ಆಶಾ (ಸಂಪರ್ಕಕ್ಕಾಗಿ: 74112-81181) ಈಗ ತಮ್ಮದೇ ಆದ ಪುಟ್ಟ ತಂಡ ಕಟ್ಟಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ಮಶಾನವನ್ನು ಸಾಕ್ಷಾತ್ ಕಾಳಿ ಮಾತೆ ಕಾಯುತ್ತಾಳೆ ಎಂಬ ನಂಬಿಕೆಯಿದೆ. ಅದರಂತೆ, ಆ ಕಾಳಿಯ ತತ್ತ ್ವೇ ಈ ಮಾನವೀಯ ಕಾರ್ಯಕ್ಕೆ ಆಶಾರನ್ನು ಆಯ್ಕೆ ಮಾಡಿಕೊಂಡಿದೆ ಏನೋ. ಬದುಕೇ ನಿನಗೆ ಮತ್ತೊಮ್ಮೆ ನಮಸ್ಕಾರ!!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)