ಅಂಕಣ

ಪಿಯುಸಿ ಫೇಲ್?; ಜೀವನದಲ್ಲಿ ಪಾಸ್!

ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ತಮ್ಮ ಬದುಕಿನ ದಾರಿ ಮುಗಿದೇ ಹೋಯಿತು ಎಂದು ಹತಾಶರಾಗಿ ಕೂರುವ ಕಾಲ ಇದಲ್ಲ ಮತ್ತು ಅದು ಅನಿವಾರ್ಯವೂ ಅಲ್ಲ. ಪೂರಕ ಪರೀಕ್ಷೆ ಬರೆಯಲು ಬಯಸದವರು ಬರೆದರೂ ತೇರ್ಗಡೆ ಆಗುತ್ತೇವೆ ಎಂಬ ನಂಬಿಕೆ ಇರದವರು ಕಂಗಾಲಾಗಬೇಕಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಕೌಶಲ ಕಲಿಸುವ ಕೋರ್ಸಗಳಿಗೆ ದಾಖಲಾಗಿ ಓದು ಮುಂದುವರಿಸಿ ಕೌಶಲ ಕಲಿತು ಕೆಲಸಕ್ಕೆ ಸೇರಿ ತಮ್ಮದೇ ಜೀವನ ರೂಪಿಸಿಕೊಳ್ಳಬಹುದು. ಅದಕ್ಕಾಗಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಡೆಸುವ, ರೂಪಿಸಿರುವ ಅನೇಕ ಹಂತದ ಕಲಿಕಾ ಕೋರ್ಸಗಳು ಮಾನ್ಯತೆ ಪಡೆದ ಶಾಲಾ-ಕಾಲೇಜುಗಳಲ್ಲಿ ಲಭ್ಯವಿವೆ. ಕೆಲಸ ಗಿಟ್ಟಿಸಿ ಹಣ ಸಂಪಾದಿಸಿ ಸುಖಕರ ಜೀವನ ನಡೆಸಲು ಅವಕಾಶವಿದೆ. ಫೇಲ್ ಆದ ತಕ್ಷಣ ಜೀವನ ಮುಗಿದೇಹೋಯಿತು ಎಂದು ನಿರಾಶರಾಗಬೇಕಿಲ್ಲ.
| ಎಸ್. ಗುರುರಾಜ್ ಪ್ರಾಚಾರ್ಯರು, ವಿಡಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು

ಪಿಯುಸಿ ಪಾಸ್ ಆದವರಿಗೆ ಒಂದೇ ದಾರಿಯಾದರೆ ಫೇಲ್ ಆದವರಿಗೆ ಹಲವು ದಾರಿಗಳಿವೆ. ಇಂತಹ ವಿದ್ಯಾರ್ಥಿಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಕೋರ್ಸ್​ಗಳನ್ನು ಪ್ರಾರಂಭಿಸಿದೆ. ಅವುಗಳನ್ನು ಕಲಿತು ಜೀವನ ರೂಪಿಸಿಕೊಳ್ಳಬಹುದಾಗಿದೆ. ಜತೆಗೆ ಸ್ವಂತ ಉದ್ಯಮ ಪ್ರಾರಂಭಿಸಿ ಇತರರಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆಯಬಹುದು. ಪಿಯುಸಿಯ ಯಾವುದೇ ವಿಭಾಗದಲ್ಲಿ ಫೇಲ್ ಆಗಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ನಡೆಸುವ ಕೌಶಲ ಅಭಿವೃದ್ಧಿ ಕೋರ್ಸ್​ಗಳಿಗೆ ದಾಖಲಾತಿ ಪಡೆಯಬಹುದು. ಪಿಯುಸಿ ಪಾಸಾಗದ ಹೆಚ್ಚಿನ ವಿದ್ಯಾರ್ಥಿಗಳು ಡಿಪ್ಲೊಮಾ ಕೋರ್ಸ್​ಗಳ ಕಡೆ ಮುಖ ಮಾಡುತ್ತಾರೆ. 10ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳ ಅಂಕಗಳನ್ನಾಧರಿಸಿ ಕಂಪ್ಯೂಟರ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಏರೋನಾಟಿಕಲ್, ಸಿವಿಲ್, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಡಿಸೈನ್, ಆಟೋಮೊಬೈಲ್, ಅನಿಮೇಶನ್ , 3ಡಿ ಪ್ರಿಂಟಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ ನಂತಹ ಹಲವು ಕೋರ್ಸಗಳಿಗೆ ದಾಖಲಾಗಿ, ಅವುಗಳನ್ನು ಕಲಿತು ಉದ್ಯೋಗ ಪಡೆಯಬಹುದು. ತಾಂತ್ರಿಕ ಪರಿಣತಿ ಮತ್ತು ಕೌಶಲ ಸಂಪಾದನೆಯ ನಂತರ ಉದ್ಯಮಗಳನ್ನು ಸೇರಬಹುದು.

ಫೇಲಾದವರ ಬೆನ್ನಿಗೆ ನಿಲ್ಲಿ

ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬೆಂಗಳೂರು ಬಂಡೇಪಾಳ್ಯ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಎಲ್.ವೈ.ರಾಜೇಶ್ ಗುರುತಿಸಿ ಅವರನ್ನು ಪೂರಕ ಪರೀಕ್ಷೆಗಾಗಿ ತಯಾರು ಮಾಡಿದ್ದಾರೆ. ವಿದ್ಯಾರ್ಥಿಗಳನ್ನು ಪೂರಕ ಪರೀಕ್ಷೆಗೆ ತಯಾರು ಮಾಡಲು ನುರಿತ ಶಿಕ್ಷಕರ ಮತ್ತು ಯುವಕರ ತಂಡವನ್ನು ಕಟ್ಟಿ ವಿಶೇಷ ತರಗತಿಯನ್ನು ಆಯೋಜಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ರೀತಿ ಫೇಲ್ ಆದ ಮಕ್ಕಳಿಗೆ ಸಮಾಧಾನ ಪಡಿಸಿ ಬೆನ್ನುತಟ್ಟಿದರೆ ಅವರು ಪೂರಕ ಪರೀಕ್ಷೆಯನ್ನು ಪಾಸು ಮಾಡುವ ಮನಸ್ಸು ಮಾಡುತ್ತಾರೆ. ಇಲ್ಲವಾದರೆ ಅವರು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿ ಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಫೇಲಾದ ಮಕ್ಕಳ ಬೆನ್ನಿಗೆ ಸಮಾಜ ನಿಲ್ಲಬೇಕಿದೆ.

ಎನ್​ಎಸ್​ಡಿಸಿ ಎಂಬ ಆಪತ್ಬಾಂಧವ

ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಅಪಾರ ಶಕ್ತಿ ತುಂಬುತ್ತಿರುವ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾಪೋರೇಷನ್ (ಎನ್​ಎಸ್​ಡಿಸಿ) ದೇಶದ ಯುವಜನರಿಗಾಗಿ ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಂ ವರ್ಕ್ (ಎನ್​ಎಸ್​ಕ್ಯೂಎಫ್) ರೂಪಿಸಿದ್ದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಹತ್ತು ಹಂತಗಳ ಕೌಶಲ ತರಬೇತಿ ಕೋರ್ಸ್ ಪ್ರಾರಂಭಿಸಿದೆ. ಎಸ್ಸೆಸ್ಸೆಲ್ಸಿ ಪಾಸಾದ ಮತ್ತು ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳು ಅಗ್ನಿಶಾಮಕ ಮತ್ತು ಸುರಕ್ಷತೆ, ಫಿಟ್ಟರ್, ಟರ್ನರ್, ವೆಲ್ಡರ್, ಎಲೆಕ್ಟ್ರಿಷಿಯನ್, ಪ್ಲಂಬರ್, ಪ್ರಿಂಟರ್, ಸರ್ವೆಯರ್, ಅನಿಮೇಟರ್, ಕಂಟೆಂಟ್ ರೈಟರ್, ಪಾಡ್ ಕಾಸ್ಟರ್, ರೇಡಿಯೋ ಅನೌನ್ಸರ್, ಫೋಟೋಗ್ರಾಫರ್, ಪ್ಯಾರಾಮೆಡಿಕಲ್ ಹೆಲ್ಪರ್, ಕೋವಿಡ್ ವಾರಿಯರ್​ನಂತಹ ಹತ್ತು ಹಲವು ಕೋರ್ಸ್​ಗೆ ಸೇರಿ ಕೌಶಲ ಸಂಪಾದಿಸಿ ಉದ್ಯಮಗಳನ್ನು ಸೇರಿ ದುಡಿಯಲು ಪ್ರಾರಂಭಿಸಬಹುದು. ನಮ್ಮ ರಾಜ್ಯದ ಕರ್ನಾಟಕ ಸ್ಕಿಲ್ ಡೆವಲಪ್ಮೆಂಟ್ ಕಾಪೋರೇಷನ್ ವಿಪೋ› ಮತ್ತು ಜಿ ಇ ಹೆಲ್ತ್​ಕೇರ್ ಉದ್ಯಮಗಳ ಸಹಯೋಗದಲ್ಲಿ ಮೂರು ತಿಂಗಳ ಅವಧಿಯ ಕೋವಿಡ್ ಕ್ರ್ಯಾಷ್ ಕೋರ್ಸ್ ಪ್ರಾರಂಭಿಸಿ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ಪಿಯುಸಿ ಹಂತದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಕೋವಿಡ್ ಮತ್ತು ಅಂತಹ ಯಾವುದೇ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜನಸಾಮಾನ್ಯರಿಗೆ ತಿಳಿವಳಿಕೆ ನೀಡಲು ಅರ್ಹ ಅಭ್ಯರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಯಾವುದೇ ರೀತಿಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ನರ್ಸಿಂಗ್ ಶಿಕ್ಷಣದಲ್ಲಿ ಕಲಿಸುವಂತೆ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆನ್ ಜಾಬ್ ಟ್ರೖೆನಿಂಗ್ ನೀಡಲಾಗುತ್ತದೆ. 125 ರೂಪಾಯಿ ದಿನ ಭತ್ಯೆ ಮತ್ತು ದೂರದೂರುಗಳಿಂದ ಜಿಲ್ಲಾಕೇಂದ್ರಕ್ಕೆ ಬರುವವರಿಗೆ ವಸತಿ ಸೌಲಭ್ಯ ನೀಡಿ ರೋಗಕ್ಕೆ ತುತ್ತಾದವರು ಔಷಧ ಹೇಗೆ ಸೇವಿಸಬೇಕು, ಲಘು ವ್ಯಾಯಾಮ ಹೇಗೆ ಮಾಡಬೇಕು, ತುರ್ತು ಚಿಕಿತ್ಸೆ ಹೇಗೆ ನೀಡಬೇಕು, ಸೋಂಕು ಮರುಕಳಿಸದಂತೆ ಹೇಗೆ ಜಾಗ್ರತಿ ವಹಿಸಬೇಕು ಎಂಬುದನ್ನು ಕಲಿಸಲಾಗುತ್ತದೆ. ತರಬೇತಿ ಪಡೆದುಕೊಂಡವರು ಆಸ್ಪತ್ರೆಗಳಲ್ಲಿ ನರ್ಸ್ ಮತ್ತು ವೈದ್ಯರ ಸಹಾಯಕರಾಗಿ ಕೆಲಸ ಪಡೆದು ಬದುಕು ರೂಪಿಸಿಕೊಳ್ಳಬಹುದು.

ಸದಾ ಕೈಹಿಡಿಯುವ ಕಂಪ್ಯೂಟರ್

ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಹಾರ್ಡ್ ಆಂಡ್ ಸಾಫ್ಟ್​ವೇರ್, ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿರುವುದರಿಂದ ಕಂಪ್ಯೂಟರ್ ಹಾರ್ಡ್​ವೇರ್, ನೆಟ್​ವರ್ಕಿಂಗ್, ಪೊ›ಗ್ರಾಮಿಂಗ್, ವೆಬ್ ಡಿಸೈನಿಂಗ್, ಗ್ರಾಫಿಕ್ಸ್, ಡಿಜಿಟಲ್ ಮಾರ್ಕೆಟಿಂಗ್, ಮೆಷಿನ್ ಲರ್ನಿಂಗ್, ಎಥಿಕಲ್ ಹ್ಯಾಕಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯೂರಿಟಿ , ಡೇಟಾ ಕಲೆಕ್ಷನ್ ಆಂಡ್ ಪೊ›ಸೆಸಿಂಗ್, ಐ ಓ ಟಿ ( ಇಂಟರ್ನೆಟ್ ಆಫ್ ಥಿಂಗ್ಸ್ ), 4 ಜಿ, 5ಜಿ ವೈರ್ಲೆಸ್ ಮತ್ತು ಕೇಬಲ್ ನೆಟ್ವರ್ಕ್ ಸಂಬಂಧಿತ ಕೋರ್ಸ್ ಕಲಿತವರಿಗೆ ಲಕ್ಷಾಂತರ ಉದ್ಯೋಗಾವಕಾಶಗಳಿವೆ . ಡೇಟಾ ಸೈನ್ಸ್ , ಸೈಬರ್ ಸೆಕ್ಯೂರಿಟಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನಿಮೇಷನ್, ಗೇಮಿಂಗ್, ವರ್ಚುಯಲ್ ರಿಯಾಲಿಟಿ (ವಿಆರ್) ಯಂಥ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಭಾರಿ ಬೇಡಿಕೆ ಇದೆ. ಪದವಿಗಿಂತ ಕೌಶಲವೇ ಮುಖ್ಯವಾಗುವುದರಿಂದ ಎಸ್ಸೆಸ್ಸೆಲ್ಸಿ ಮುಗಿಸಿದವರು ಮತ್ತು ಪಿಯುಸಿ ಫೇಲಾದವರಿಗೂ ಹೆಚ್ಚಿನ ಅವಕಾಶಗಳು ತೆರೆದಿವೆ.

ಪರೀಕ್ಷೆಯಲ್ಲಿ ಫೇಲ್, ಜೀವನದಲ್ಲಿ ಸಕ್ಸಸ್

ಪರೀಕ್ಷೆಯಲ್ಲಿ ಫೇಲ್ ಆಗಿ ಜೀವನದಲ್ಲಿ ಸಕ್ಸಸ್ ಕಂಡವರು ತುಂಬಾ ಮಂದಿ ನಮ್ಮ ಕಣ್ಣ ಮುಂದೆ ಇದ್ದಾರೆ. ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆೆಂಡೂಲ್ಕರ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾಗಿದ್ದವರು. ಆದರೆ ಅವರು ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆದ ಇತಿಹಾಸ ನಿರ್ವಿುಸಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ವರನಟ ಡಾ. ರಾಜ್​ಕುಮಾರ್ ಅವರು ಓದಿದ್ದು 4 ನೇ ತರಗತಿವರೆಗೆ ಮಾತ್ರ. ಆದರೆ ಭಾರತ ಚಲನಚಿತ್ರ ರಂಗ ಕಂಡ ಶ್ರೇಷ್ಠ ನಟರಲ್ಲಿ ರಾಜ್​ಕುಮಾರ್ ಕೂಡ ಒಬ್ಬರು. ಫೇಲ್ ಆದ ವಿದ್ಯಾರ್ಥಿಗಳು ಇಂತಹ ವ್ಯಕ್ತಿಗಳನ್ನು ಮಾದರಿಯನ್ನಾಗಿ ಇಟ್ಟುಕೊಂಡು ಜೀವನದಲ್ಲಿ ಸಾಧನೆ ಮಾಡಬೇಕಿದೆ.

ಮಕ್ಕಳು ಪರೀಕ್ಷೆಯಲ್ಲಿ ಫೇಲಾದರೆ ಅದನ್ನು ಪೋಷಕರು ಅವಮಾನ ಎಂದು ಭಾವಿಸಬೇಡಿ. ಬದಲಿಗೆ ಮತ್ತೊಂದು ಪ್ರಯತ್ನ ಮಾಡಲು ಅವರನ್ನು ಉತ್ತೇಜಿಸಿ. ಬಿಸಿನೆಸ್​ನಲ್ಲಿ ಯಶಸ್ವಿಯಾಗಲಿಲ್ಲ, ಕೆಲಸದಲ್ಲಿ ಬಡ್ತಿ ಸಿಗಲಿಲ್ಲ ಎಂದು ಯಾರೂ ಸಾಯುವುದಿಲ್ಲ. ಹಾಗಾಗಿ ಪರೀಕ್ಷೆ ಫಲಿತಾಂಶ ಒಂದರಿಂದಲೇ ಮಕ್ಕಳ ಬುದ್ಧಿ ಸಾಮರ್ಥ್ಯವನ್ನು ಅಳೆಯಬೇಡಿ. | ಡಾ. ಉಮಾ ಹಿರಿಸಾವೆ ಸೀನಿಯರ್ ಫ್ರೊಫೆಸರ್, ಕ್ಲಿನಿಕ್ ಸೈಕಾಲಜಿ ವಿಭಾಗ, ನಿಮ್ಹಾನ್ಸ್

ಸ್ವಂತ ಉದ್ಯಮ ಆರಂಭಿಸಬಹುದು

ಸರ್ಕಾರ ಹಾಗೂ ಬ್ಯಾಂಕ್​ಗಳ ನೆರವಿನಿಂದ ಸ್ವಂತ ಉದ್ಯಮ ಪ್ರಾರಂಭಿಸಬಹುದು. ಭಾರತದ ಅನೇಕ ನವೋದ್ಯಮ (ಸ್ಟಾರ್ಟ್​ಅಪ್)ಗಳು ಡಿಪ್ಲೊಮಾ ಕಲಿತವರಿಂದಲೇ ಪ್ರಾರಂಭವಾಗಿವೆ. ಹೆಚ್ಚಿನ ಸಂಬಳ ಬಯಸುವ ಇಂಜಿನಿಯರಿಂಗ್ ಪದವೀಧರರ ಬದಲಾಗಿ ಡಿಪ್ಲೊಮಾ ಕೋರ್ಸ್ ಮುಗಿಸಿದವರನ್ನು ಸೇರಿಸಿಕೊಂಡು ಹೆಚ್ಚಿನ ಉತ್ಪಾದನೆ ಮತ್ತು ಲಾಭ ಮಾಡಿಕೊಂಡ ಅನೇಕ ನವೋದ್ಯಮಗಳು ನಮ್ಮಲ್ಲಿವೆ. ಸಾಗರ ತಂತ್ರಜ್ಞಾನ (ಮರಿನ್ ಇಂಜಿನಿಯರಿಂಗ್) ವಿಭಾಗದ ಡಿಪ್ಲೊಮಾ ಕೋರ್ಸಗಳಿಗೆ ಭಾರಿ ಬೇಡಿಕೆ ಇದೆ. ಓದು ಮುಗಿಸಿದ ಬಹುತೇಕರಿಗೆ ಉತ್ತಮ ಸಂಬಳದ ಕೆಲಸಗಳಿವೆ. ಸಾಗರ ತಂತ್ರಜ್ಞಾನ, ವೈರ್​ವ್ಯಾನ್, ವೆಲ್ಡರ್, ನಾವಿಕರ ಕೌಶಲ ಕಲಿಯುವ ಯುವಕ-ಯುವತಿಯರಿಗೆ ಭಾರತೀಯ ನೌಕಾಸೇನೆ, ಖಾಸಗಿ ನೌಕಾ ಉದ್ಯಮ, ತೈಲ ಸಂಸ್ಕರಣ ಉದ್ಯಮ, ತೈಲ ಸಂಸ್ಕರಣೆ, ಸಾಗರ ಪ್ರವಾಸೋದ್ಯಮ, ಬಂದರು ನಿರ್ವಣ, ಪ್ಯಾಕಿಂಗ್ ಕ್ಷೇತ್ರಗಳಲ್ಲಿ ಹಲವು ಹಂತದ ಉದ್ಯೋಗಗಳು ಇವೆ. ಆರು ತಿಂಗಳಿನಿಂದ ಎರಡು ವರ್ಷಗಳವರೆಗಿನ ಅವಧಿಯ ಕೋರ್ಸ್​ಗಳು ಮಾರುಕಟ್ಟೆಗೆ ಬೇಕಾದ ಕೌಶಲ ಕಲಿಸಿ ನಿಶ್ಚಿತ ಉದ್ಯೋಗಗಳನ್ನು ದೊರಕಿಸಿಕೊಡುತ್ತವೆ.

(ನಿರೂಪಣೆ: ಮಂಜುನಾಥ ಕೆ.)