| ಸುಚೇತನಾ ನಾಯ್ಕ
ಇಡ್ಲಿಯಲ್ಲಿ ಎರಡು ಸಾವಿರಕ್ಕೂ ಅಧಿಕ ವೆರೈಟಿಗಳಿವೆ. ಬಟ್ಟಲಲ್ಲಿ ಮಾಡಿದರೆ ಬಟ್ಟಲು ಇಡ್ಲಿ, ಸಾಫ್ಟ್ ಸಾಫ್ಟ್ ಆಗಿರೋ ಮಲ್ಲಿಗೆ ಇಡ್ಲಿ, ಹಲಸಿನ ಎಲೆಯಲ್ಲಿ ಮಾಡುವ ಮೂಡೆ ಇಡ್ಲಿ, ಕೊಟ್ಟೆ ಇಡ್ಲಿ, ಬಾಳೆ ಎಲೆಯಲ್ಲಿ ಬೇಯಿಸುವ ಕೊಟ್ಟಿಗೆ, ಬ್ರೆಡ್ನಲ್ಲಿ ತಯಾರಿಸುವ ಬ್ರೆಡ್ ಇಡ್ಲಿ, ಸಾಂಬಾರಿನಲ್ಲಿ ಮುಳುಗಿಸುವ ತಿರುಪತಿ ಇಡ್ಲಿ, ಬಿಡದಿ ಹಾಗೂ ತುಮಕೂರಿನ ಫೇಮಸ್ ತಟ್ಟೆ ಇಡ್ಲಿ, ರವೆಯಿಂದ ಮಾಡುವ ರವೆ ಇಡ್ಲಿ, ಸಿರಿಧಾನ್ಯದಿಂದ ಮಾಡುವ ಸಾವಯವ ಇಡ್ಲಿ... ಅಷ್ಟೇ ಅಲ್ಲ, ರೆಡ್ರೈಸ್ ಇಡ್ಲಿ, ಓಟ್ಸ್ ಇಡ್ಲಿ, ಉದ್ದಿನ ಇಡ್ಲಿ, ರಾಗಿ ಇಡ್ಲಿ, ಮಸಾಲೆ ಇಡ್ಲಿ, ಬೆಲ್ಲದ ಸ್ವೀಟ್ ಇಡ್ಲಿ, ಖಾರದ ಇಡ್ಲಿ, ಸೌತೆಕಾಯಿ ಇಡ್ಲಿ.... ಹೇಳಿದಷ್ಟೂ ಸಾಲದು ಈ ಇಡ್ಲಿ ವೈವಿಧ್ಯ.
ದಕ್ಷಿಣ ಭಾರತದಲ್ಲಿ, ಅದರಲ್ಲೂ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ಇಡ್ಲಿಯ ಘಮ ಇಡೀ ವಿಶ್ವಕ್ಕೆ ಹರಡಿದೆ. ಅದರ ವಿಶೇಷವನ್ನು ಇನ್ನಷ್ಟು ವ್ಯಾಪಕವಾಗಿ ಪ್ರಚಾರ ಮಾಡುವ ನಿಟ್ಟಿನಲ್ಲಿ ತಮಿಳುನಾಡಿನ ಕೊಯಮತ್ತೂರಿನ ಇನಿಯವನ್ ಎಂಬ ಇಡ್ಲಿ ವ್ಯಾಪಾರಿ 2015ರಲ್ಲಿ ಇಡ್ಲಿ ದಿನ ಆಚರಿಸುವುದನ್ನು ಆರಂಭಿಸಿದರು. ಅದೇ ಈಗ ಇಡೀ ದೇಶದಲ್ಲಿ, ಅಷ್ಟೇ ಏಕೆ, ಇಡೀ ವಿಶ್ವದಲ್ಲಿ ಪ್ರತಿ ವರ್ಷ ಮಾ. 30ರಂದು ಆಚರಣೆಯಾಗುತ್ತಿದೆ.
ಮೂರು ಇಡ್ಲಿ ತಿಂದರೆ ಅದರಲ್ಲಿ ದೇಹಕ್ಕೆ ಏನೆಲ್ಲಾ ಸಿಗುತ್ತೆ ಗೊತ್ತಾ? 50 ಗ್ರಾಂ ಕಾರ್ಬೆಹೈಡ್ರೇಟ್, 5 ಗ್ರಾಂ ನಾರು, 230 ಕ್ಯಾಲರಿ ಎನರ್ಜಿ, 4 ಗ್ರಾಂ ಕೊಬ್ಬು, 7 ಗ್ರಾಂ ಪ್ರೊಟೀನ್, 30 ಗ್ರಾಂ ಕ್ಯಾಲ್ಸಿಯಂ. ಅತ್ಯಂತ ಹಗುರ ಆಹಾರವಾದ್ದರಿಂದ ಸುಲಭವಾಗಿ ಜೀರ್ಣವಾಗುತ್ತದೆ.
ಬೇಕಾಗುವ ಪದಾರ್ಥಗಳು: ಅಕ್ಕಿ 2 ಕಪ್, ಉದ್ದಿನಬೇಳೆ 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಚಿಟಿಕೆ ಸೋಡಾ.
ಮಾಡುವ ವಿಧಾನ: ಚೆನ್ನಾಗಿ ತೊಳೆದ ಉದ್ದಿನಬೇಳೆ ಹಾಗೂ ಅಕ್ಕಿಯನ್ನು 8-9 ಗಂಟೆ ಪ್ರತ್ಯೇಕವಾಗಿ ನೆನೆಸಿ. ಅವುಗಳನ್ನು ಪ್ರತ್ಯೇಕವಾಗಿಯೇ ರುಬ್ಬಿ ನಂತರ ಎರಡನ್ನೂ ಮಿಕ್ಸ್ ಮಾಡಿ. ಬೇಕಿದ್ದರೆ ಉಪ್ಪನ್ನು ಆಗಲೇ ಸೇರಿಸಿ ಪಾತ್ರೆ ಮುಚ್ಚಿಡಿ. ರಾತ್ರಿ ಇಷ್ಟು ಮಾಡಿಟ್ಟರೆ ಬೆಳಗ್ಗೆ ಇಡ್ಲಿ ತಯಾರಿಸಲು ಹಿಟ್ಟು ರೆಡಿಯಾಗಿರುತ್ತದೆ. ಇಡ್ಲಿ ತಟ್ಟೆಗೆ ತುಪ್ಪ ಅಥವಾ ಅಡುಗೆ ಎಣ್ಣೆ ಹಚ್ಚಿ ಹಿಟ್ಟು ಹಾಕಿ ಕುಕ್ಕರಿನಲ್ಲಿಟ್ಟು ಬೇಯಲು ಇಡಬೇಕು. ಕುಕ್ಕರಿನ ಸೀಟಿ ಬೇಡ. 15-20 ನಿಮಿಷ ಹಾಗೆಯೇ ಬಿಟ್ಟರೆ ಇಡ್ಲಿ ರೆಡಿ. ಉದ್ದಿನ ಬೇಳೆಯ ಬದಲು ಅಕ್ಕಿಯನ್ನಷ್ಟೇ ನೆನೆಸಿಟ್ಟು ವಿಧವಿಧ ಬಗೆಯ ಸೊಪು್ಪಗಳನ್ನು (ಕೊತ್ತಂಬರಿ, ಸಬ್ಬಸಿಗೆ ಇತ್ಯಾದಿ) ಅಕ್ಕಿಯ ಜತೆ ರುಬ್ಬುವಾಗ ಹಾಕಿದರೆ ವೈವಿಧ್ಯಮಯ ಇಡ್ಲಿಗಳನ್ನು ಮಾಡಬಹುದು.
ಬುಟ್ಟಿ ಇಡ್ಲಿ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರಿನ ಬಾಬು ಹೋಟೆಲ್ನಲ್ಲಿ ತಯಾರಿಸುವ ಬುಟ್ಟಿ ಇಡ್ಲಿಯೂ ಸಕತ್ ಪಾಪ್ಯುಲರ್. ಇಲ್ಲಿ ಇಡ್ಲಿ ತಿನ್ನಲು ಜನರು ಮುಗಿಬೀಳುತ್ತಾರೆ. ನಟರು, ರಾಜಕಾರಣಿಗಳು ಹುಡುಕಿಕೊಂಡು ಬರುವುದು ವಿಶೇಷ.
ದರಸಗುಪ್ಪೆಯ ಬೆಣ್ಣೆ ಇಡ್ಲಿ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ದರಸಗುಪ್ಪೆ ಗ್ರಾಮದ ಬೆಣ್ಣೆ ಇಡ್ಲಿ ಸಿಕ್ಕಾಪಟ್ಟೆ ಫೇಮಸ್. ಇಲ್ಲಿ ವೃದ್ಧ ದಂಪತಿ ಎರಡೂವರೆ ದಶಕದಿಂದ ಬೆಣ್ಣೆ ಇಡ್ಲಿ ವ್ಯಾಪಾರ ಮಾಡುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಹುಡುಕಿಕೊಂಡು ಬರುತ್ತಾರೆ. ವಿಶೇಷವೆಂದರೆ, ಇಲ್ಲಿ ಒಬ್ಬರು ಸಂಪೂರ್ಣವಾಗಿ ತಿನ್ನುವವರೆಗೂ ಮತ್ತೊಬ್ಬರಿಗೆ ತಿಂಡಿ ಕೊಡುವ ಪದ್ಧತಿ ಇಲ್ಲ!