ಅಂಕಣ

ಮೌಲ್ಯಗಳ ಮಹಾವೃಕ್ಷ ಮಹರ್ಷಿ ವಾಲ್ಮೀಕಿ; ಇಂದು ಜಯಂತಿ

ಆದಿಕವಿ, ಅಮರಕವಿಯೆಂದೇ ಖ್ಯಾತರಾದ ಮಹರ್ಷಿ ವಾಲ್ಮೀಕಿ ರಾಮಾಯಣ ಕಾವ್ಯದ ಮೂಲಕ ಇಡೀ ಮನುಕುಲಕ್ಕೆ ಬದುಕಿನ ಸಂದೇಶವನ್ನು ಸಾರಿದ ಸರ್ವತೋಮುಖ ಚಿಂತಕ. ಅಷ್ಟೇ ಅಲ್ಲ ಓರ್ವ ರಾಜನೀತಿಜ್ಞ, ಶಿಕ್ಷಣತಜ್ಞ, ಇತಿಹಾಸಕಾರ, ತತ್ತ್ವಜ್ಞಾನಿ, ತಪಸ್ವಿ, ಸಮಾಜ ಸುಧಾರಕ, ದಾರ್ಶನಿಕ ಹಾಗೂ ಮಹಾತ್ಮನಾಗಿ ತನ್ನ ವಿಚಾರಗಳನ್ನು ಅರುಹಿದ್ದಾನೆ. ರಾಮಾಯಣ ಕಾವ್ಯದ ಮೂಲಕ ಪ್ರಪಂಚಕ್ಕೆ ಹೆಸರಾದ ಈತ ರಾಮಾಯಣವನ್ನು ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ಪ್ರಮುಖವಾದ ಸ್ಥಾನ ಲಭ್ಯವಾಗುವಂತೆ ಮಾಡಿದವನು. ಸಂಸ್ಕೃತದಲ್ಲಿದ್ದ ವಾಲ್ಮೀಕಿ ಮಹಾಕಾವ್ಯ 24,000 ಶ್ಲೋಕ (ದ್ವಿಪದಿ)ಗಳನ್ನೊಳಗೊಂಡಿದೆ. ಬಾಲಕಾಂಡ, ಅಯೋಧ್ಯಕಾಂಡ, ಅರಣ್ಯಕಾಂಡ, ಕಿಷ್ಕಿಂಧಕಾಂಡ, ಸುಂದರ ಕಾಂಡ, ಯುದ್ಧಕಾಂಡ ಮತ್ತು ಉತ್ತರಕಾಂಡಗಳಲ್ಲಿ ಮತ್ತು 647 ಸರ್ಗ (ಅಧ್ಯಾಯ)ಗಳಲ್ಲಿ ಇದನ್ನು ವರ್ಗೀಕರಿಸಲಾಗಿದೆ.

ಇದೊಂದು ಸುಂದರವಾದ ಕಾವ್ಯ. ಸಂಸ್ಕೃತದ ಮೊದಲ ಕಾವ್ಯವಾಗಿರುವುದರಿಂದ ಇದನ್ನು ‘ಆದಿಕಾವ್ಯ’ವೆಂತಲೂ, ಇಂಪಾಗಿ ಹಾಡಲು ಬರುವುದರಿಂದ ಇದನ್ನು ರಚಿಸಿದ ವಾಲ್ಮೀಕಿಯನ್ನು ‘ಕವಿಕೋಗಿಲೆ’ಯಂತಲೂ ಕರೆಯುವುದುಂಟು. ವಾಲ್ಮೀಕಿಯ ಸ್ವರಶಕ್ತಿಯ ಕುರಿತಾಗಿ ಅಶ್ವಘೊಷನೆಂಬ ಒಂದನೆಯ ಶತಮಾನದ ಮಹಾಕವಿ ತನ್ನ ‘ಬುದ್ಧ ಚರಿತೆ’ಯಲ್ಲಿ ‘ವಾಲ್ಮೀಕಿಯ ಕವಿತಾಸ್ವರ ಮಹರ್ಷಿಚ್ಯಾವನನ ಕವಿತಾ ರಚನಾ ಶಕ್ತಿಯನ್ನು ಮೀರಿತ್ತು’ ಎನ್ನುತ್ತಾನೆ.

ಕೌಶಿಕ ಮುನಿಯ,

‘ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ

ಆರುಹ್ಯ ಕವಿತಾ ಶಾಖಂ ವಂದೇ ವಾಲ್ಮೀಕಿ ಕೋಕಿಲಂ’

(ಕಾವ್ಯ ಹೆಮ್ಮರದ ಕೊಂಬೆಯ ಮೇಲೆ ಕುಳಿತು, ರಾಮಾ ರಾಮಾ ಎಂಬ ಮಧುರ ಅಕ್ಷರಗಳನ್ನು, ಸುಮಧುರ ಧ್ವನಿಯಲ್ಲಿ

ಹಾಡುವ ವಾಲ್ಮೀಕಿ ಕೋಗಿಲೆಗೆ ನಮನಗಳು) ಎಂದಿರುವುದು ವಾಲ್ಮೀಕಿಯ ಕವಿತಾಶಕ್ತಿಗೆ ಸಾಕ್ಷಿಯಾಗಿದೆ.

ವಾಲ್ಮೀಕಿ ರಾಮಾಯಣ ಕ್ರಿ.ಪೂ. 3 ಅಥವಾ 4ನೆಯ ಶತಮಾನದಲ್ಲಿ ರಚಿತವಾಗಿರಬಹುದೆಂಬುದು ಅನೇಕ ವಿದ್ವಾಂಸರ ಅಭಿಪ್ರಾಯ. ಭೌಗೋಳಿಕವಾಗಿ ಇಡೀ ಭಾರತವನ್ನೇ ಆವರಿಸಿದ ರಾಮಾಯಣದ ಕಥೆ ರಾಮನಷ್ಟೇ ಅಲ್ಲದೆ, ಅನೇಕ ಲೋಕಪೂಜ್ಯರ ಕಥೆಯನ್ನು ಅರುಹುತ್ತದೆ. ಕಾಲಾತೀತವಾದ ಈ ಕಾವ್ಯ ಗತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲಕ್ಕೂ ಉಪಯುಕ್ತವಾಗುವ ವಿಚಾರಗಳನ್ನು ತಿಳಿಸುತ್ತದೆ.

ಭಾರತೀಯ ಸಂಸ್ಕೃತಿಯ ಸಮಗ್ರತೆಯನ್ನು ಚಿತ್ರಿಸಿದ ರಾಮಾಯಣ ಹಾಗೂ ಮಹಾಭಾರತದ ಕಾವ್ಯಗಳ ಕುರಿತು ಸ್ವಾಮಿ ವಿವೇಕಾನಂದರು, ‘In fact the Ramayana and Mahabharata are the two encyclopaedias of ancient Aryan life and wisdom Portraying and ideal civilization, which humunity has yet to aspire after‘ ಎಂದಿರುವುದು ಸಮಂಜಸವಾಗಿದೆ.

ಪುರುಷ ಪುರುಷೋತ್ತಮನಾದ ಶ್ರೀರಾಮನ ಕಥೆಯನ್ನು ಅವನ ಸಮಕಾಲೀನನಾದ ವಾಲ್ಮೀಕಿಯು ಪ್ರತ್ಯಕ್ಷದರ್ಶಿಯಾಗಿ ಈ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾನೆ. ಪಿತೃವಾಕ್ಯ ಪರಿಪಾಲನೆ ಮಾಡಿದ ರಾಮ, ಲಕ್ಷ್ಮಣ, ಭರತರು, ಅಣ್ಣನ ರಕ್ಷಣೆಗಾಗಿ ತೆರಳಿದ ಲಕ್ಷ್ಮಣನ ಭ್ರಾತೃಪ್ರೇಮ, ‘ಅಣ್ಣನ ಪಟ್ಟಕ್ಕೆ ನಾನು ಕುಳಿತುಕೊಳ್ಳುವುದಿಲ್ಲ, ರಾಮನ ಪಾದುಕೆಗಳೇ ರಾಜ್ಯವಾಳಲಿ’ ಎಂದ ಭರತನ ಔದಾರ್ಯಗಳು ಇಲ್ಲಿವೆ. ಜಗತ್ತಿನಲ್ಲಿ ಅನೇಕ ಕಾವ್ಯಗಳು ಸಹೋದರತ್ವವನ್ನು ವಿವರಿಸಲು ಹೋಗಿ ಯಶಸ್ಸನ್ನು ಸಾಧಿಸಲಿಲ್ಲ. ಆದರೆ ಈ ಕಾವ್ಯ ಮಾತ್ರ ಯಶಸ್ಸನ್ನು ಸಾಧಿಸಿತು. ಹೀಗಾಗಿ ಟಿ.ಎಸ್. ರಾಮಸ್ವಾಮಿಯವರು ‘ಮೂನ್ನೂರು ಕಾವ್ಯಗಳು ಹುಟ್ಟಿದವು, ಆದರೆ ವಾಲ್ಮೀಕಿ ರಾಮಾಯಣದಂಥ ಕಾವ್ಯ ಹುಟ್ಟಲೇ ಇಲ್ಲ’ ಎನ್ನುತ್ತಾರೆ. ಸೀತೆಯ ಪಾವಿತ್ರ್ಯತೆ, ಹನುಮನ ಸ್ವಾಮಿನಿಷ್ಠೆ, ಶಬರಿಯ ಭಕ್ತಿನಿಷ್ಠೆ, ವಿವಿಧ ಮಾನವೀಯ ಸಂಬಂಧಗಳು ಮತ್ತು ಮೌಲ್ಯಗಳು ವಾಲ್ಮೀಕಿ ರಾಮಾಯಣದಲ್ಲಿವೆ.

ತಾತ್ವಿಕ ಚಿಂತನೆ, ನೀತಿಬೋಧೆ, ಧರ್ಮಬೋಧೆ ಮತ್ತು ನೀತಿಯುಕ್ತ ರಾಜ್ಯನೀತಿ ಸಾರ್ವಕಾಲಿಕ ನೀತಿಯಾಗಿ ಉಳಿದಿದೆ. ಸಾವಿರಾರು ವರ್ಷಗಳು ಗತಿಸಿದರೂ ರಾಮನ ರಾಜನೀತಿ ಇಂದಿಗೂ ಮಾಸಿಲ್ಲ. ಅನೇಕ ಆಡಳಿತಾತ್ಮಕ ವ್ಯವಸ್ಥೆಗೆ ಮಾದರಿಯಾಗಿದೆ. ಸಾಮಾಜಿಕ, ಕೌಟುಂಬಿಕ ಮೌಲ್ಯಗಳು, ಇಲ್ಲಿಯ ಸಹೃದಯತೆ, ಸಹಕಾರ, ತಾಳ್ಮೆ, ತ್ಯಾಗ, ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದಂತಹ ಗುಣಗಳನ್ನು ಅನೇಕ ಘಟನೆಗಳ ಮೂಲಕ ಅರುಹುವ ವಾಲ್ಮೀಕಿ ಮೌಲ್ಯಗಳ ಮಹಾವೃಕ್ಷವಾಗಿದ್ದಾನೆ. ಶ್ರವಣಕುಮಾರನ ಪಿತೃಭಕ್ತಿಯಂಥ ನೂರಾರು ಉಪಕಥೆಗಳು ರಾಮಾಯಣದಲ್ಲಿವೆ. ಇವು ಸಮಾಜಕ್ಕೆ ದಾರಿದೀಪದಂತಿವೆ.

ಮಹಿಳೆಯ ಮಹತ್ವದ ಕುರಿತಾಗಿ ಯಥೇಚ್ಛ ಮಾಹಿತಿ ನೀಡುತ್ತದೆ. ಪತಿ ಕುರಿತಾದ ಅಪಾರ ಅಭಿಮಾನ ಹೊಂದಿದ ಸೀತೆಯ ಪತಿವ್ರತ್ಯ, ರಾವಣ ಆಕೆಯನ್ನು ಮುಟ್ಟಲಾಗದದ್ದು ಸೀತೆಯ ತಪಸ್ಸಿನ ಫಲವೇ ಸರಿ. ಲಕ್ಷ್ಮಣನ ಹೆಂಡತಿ ಸೌಮಿತ್ರಿ ಲಕ್ಷ್ಮಣನ ಜೊತೆಗೆ ತೆರಳಲಿಲ್ಲ. ಕಾರಣ ಲಕ್ಷ್ಮಣನು ಮಾಡುವ ಅತ್ತಿಗೆಯ ಸೇವೆಗೆ ತಾನು ಅಡ್ಡಿಯಾಗಬಾರದೆಂಬ ಆಲೋಚನೆ, ಸೀತೆಯನ್ನು ವಾಲ್ಮೀಕಿ ಸಾಕಿ ಸಲುಹಿ ಲವ-ಕುಶಲರಿಗೆ ಶಿಕ್ಷಣವನ್ನು ಧಾರೆಯೆರೆದ ಪರಿ, ರಾಮನ ಬರುವಿಕೆಗಾಗಿ ಜೀವನವನ್ನೇ ಮುಡಪಾಗಿಟ್ಟ ಶಬರಿ, ರಾಮ ಬಂದಾಗ ಆತನಿಗೆ ನೀಡಿದ ಅತಿಥಿ ಸತ್ಕಾರ ಮಾದರಿಯಾದುದು.

ಅಷ್ಟೇ ಅಲ್ಲ, ವಾಲ್ಮೀಕಿ ರಾಮಾಯಣದಲ್ಲಿ ಭೌಗೋಳಿಕತೆ, ಜೀವವಿಕಾಸ ಸಿದ್ಧಾಂತ, ಪ್ರಕೃತಿಯ ವರ್ಣನೆ, ಪ್ರಾಣಿಸಂಕುಲ, ಪಕ್ಷಿಸಂಕುಲ, ಸಸ್ಯಸಂಕುಲ, ಜಲಸಂರಕ್ಷಣೆ, ಋತುಗಳು, ಪ್ರಜಾಪ್ರಭುತ್ವದ ಲಕ್ಷಣಗಳು, ರಾಜತಾಂತ್ರಿಕ, ನ್ಯಾಯದ ವಿಚಾರಗಳು, ಊಟೋಪಚಾರಗಳು, ಉಡುಗೆ-ತೊಡುಗೆಗಳು, ನಿರ್ಲಕ್ಷಿತ ಸಮುದಾಯಗಳು, ಭ್ರಾತೃಪ್ರೇಮ, ಮೌಲ್ಯಗಳ ಪ್ರತಿಪಾದನೆ, ನಂಬಿಕೆ-ಶಕುನಗಳು, ಯೋಗಾಚರಣೆಗಳು, ದೇವತೆಗಳು, ರಾಕ್ಷಸರು, ವರ್ಣವ್ಯವಸ್ಥೆ, ದೇಶಭಕ್ತಿ

ಯಂಥ ಸಂಗತಿಗಳು ಸಾಂದರ್ಭಿಕವಾಗಿ ವಿವಿಧ ಘಟನೆಗಳ ಮೂಲಕ ವಿಶ್ಲೇಷಣೆಗೊಳಪಟ್ಟಿವೆ. ಸಾಮಾನ್ಯ ಮನುಷ್ಯನಾಗಿ ಹುಟ್ಟಿದ ರಾಮನು ಪುರುಷೋತ್ತಮನಾಗಿ, ದೇವರಾಗಿ ಪೂಜೆಗೊಳ್ಳುತ್ತಿದ್ದಾನೆ. ವಾಲ್ಮೀಕಿ ಕಂಡ ರಾಮರಾಜ್ಯ ಆದರ್ಶವಾದದ್ದು. ಗಾಂಧೀಜಿ ಸಹ ರಾಮರಾಜ್ಯದ ಕನಸನ್ನು ಕಾಣುತ್ತ, ಇದು ‘ಆದರ್ಶ ಪ್ರಜಾರಾಜ್ಯ’ವೆಂದು ಕರೆದರು. ರಾಮನಾಮವನ್ನೇ ಸ್ವಾತಂತ್ರ್ಯದ ಅಸ್ತ್ರವನ್ನಾಗಿ ಬಳಸಿದರು. ವಾಲ್ಮೀಕಿಯ ಈ ಆದರ್ಶ ರಾಜ್ಯ ಶಾಶ್ವತವಾದುದು. ಹೀಗಾಗಿ ಜಗತ್ತಿನಲ್ಲಿ ಅನೇಕ ರಾಜಕೀಯ ಚಿಂತಕರು ಅನಂತರದಲ್ಲಿ ಈ ಆದರ್ಶ ರಾಜ್ಯದ ಕುರಿತು ಚಿಂತನೆಗೈದದ್ದುಂಟು. ಪ್ಲೇಟೋ ಕಲಾವಿದರು, ಸಾಹಿತಿಗಳು, ನಾಟಕಕಾರರು ಮುಂತಾದವರು ದೇಶದಲ್ಲಿರಬಾರದೆಂದ. ಆದರೆ ಆ ರಾಜ್ಯವೂ ಉಳಿಯಲಿಲ್ಲ. ಬಸವಣ್ಣನ ಕಾಲದಲ್ಲಿ ಸರ್ವಸಮಾನತೆಯನ್ನು ಸಾಧಿಸಿ ತೋರಿಸಿದರೂ, ಅದೂ ಅವನತಿ ಹೊಂದಿತು. ಆದರೆ ವಾಲ್ಮೀಕಿಯ ಆದರ್ಶ ಪ್ರಜಾರಾಜ್ಯ ಮಾತ್ರ ಶಾಶ್ವತವಾಗಿ ಉಳಿಯಿತು. ಹೀಗಾಗಿ ಇದು ಆದರ್ಶದ ಮಹಾಕಾವ್ಯವಾಗಿದೆ.

ವಾಲ್ಮೀಕಿ ರಾಮಾಯಣವನ್ನಾಧರಿಸಿಯೇ ಅನೇಕ ರಾಮಾಯಣ ಗ್ರಂಥಗಳು ಹೊರಬಂದಿವೆ. ಭಾರತದ ಬಹುಭಾಷೆಗಳಲ್ಲಿ ರಾಮಾಯಣಗಳಿವೆ. ತುಳಸಿದಾಸರ ರಾಮಚರಿತ ಮಾನಸ-ಹಿಂದಿ, ಕೃತಿವಾಸನ ರಾಮಾಯಣ-ಬಂಗಾಳಿ, ಕಂಬ ರಾಮಾಯಣ-ತಮಿಳು, ರಾಮಚರಿತ-ಮಲಯಾಳಿ, ದ್ವಿಪದಿ ರಾಮಾಯಣ- ತೆಲುಗು, ಭಾವಾರ್ಥ ರಾಮಾಯಣ-ಮರಾಠಿ, ಪಂಪ ರಾಮಾಯಣ, ತೊರವೆ ರಾಮಾಯಣ-ಕನ್ನಡ ಹೀಗೆ ಇನ್ನೂ ಮುಂತಾದವುಗಳು ಪ್ರಮುಖವಾಗಿವೆ. ವಾಲ್ಮೀಕಿ ರಾಮಾಯಣದ ಸಂಸ್ಕೃತಿ ಹಾಗೂ ವಿವಿಧ ಮಹಿಮೆಗಳು ಬಹಳ ದಿನಗಳ ಹಿಂದೆಯೇ ಭಾರತದ ಹೊರಗೂ ವ್ಯಾಪಿಸಿದ್ದುಂಟು. ರಾಮಾಯಣದ ಕಥೆ ಚಂಪಾದೇಶದ (ಇಂಡೋ ಚೀನಾದ ಇಂದಿನ ಅಣ್ಣಾಂಭಾಗ) ಜನರಿಗೆ ಕ್ರಿ.ಶ. 7ನೇ ಶತಮಾನದ ಹಿಂದೆಯೇ ತಿಳಿದಿತ್ತು. ಅಲ್ಲದೆ ಜಾವಾ, ಸುಮಾತ್ರ ಹಾಗೂ ಇತರ ಪೌರ್ವಾತ್ಯ ರಾಷ್ಟ್ರಗಳಲ್ಲೆಲ್ಲ ಶ್ರೀರಾಮನ ಕಥೆಗಳಿವೆ. ಸಿಂಹಳದಲ್ಲಿ ಜಾನಕೀಕರಣ, ಜಪಾನಿನಲ್ಲಿ ಹೊಬಟ್ನುಶು, ನೇಪಾಳದಲ್ಲಿ ರಾಮಾಶ್ವಮೇಧ, ಜಾವಾದಲ್ಲಿ ಕಕವಿನ್ ರಾಮಾಯಣ, ಮಲಯಾದಲ್ಲಿ ಹಿಕಾಯತ್ ರಾಮಾಯಣ, ಥೈಲಾಂಡಿನ ರಾಮಕೈನ್, ಲಾವೋದ ಫಾಲಕ್ ಫಾಲಾಮ್ ಮತ್ತು ಖವೈಧೌರಪಿ ಮುಂತಾದವುಗಳನ್ನು ಹೆಸರಿಸಬಹುದಾಗಿದೆ. ವೈದಿಕ, ಬೌದ್ಧ ಹಾಗೂ ಜೈನ ಪರಂಪರೆಯ ರಾಮಾಯಾಣಗಳೂ ಇವೆ. ಅನೇಕ ಪ್ರಾಚೀನ ಕಾವ್ಯಗಳು, ನಾಟಕಗಳು ಮೂಲ ರಾಮಾಯಣವನ್ನು ಆಧರಿಸಿಯೇ ರಚನೆಯಾಗಿವೆ. ಸಂಸ್ಕೃತದಲ್ಲೂ ರಚನೆಯಾದ ಸಾಹಿತ್ಯವೇನೂ ಕಡಿಮೆಯಿಲ್ಲ.

ವಾಲ್ಮೀಕಿ ರಾಮಾಯಣದ ಮರುಸೃಷ್ಟಿ ಒಂದು ಲಕ್ಷವನ್ನು ಮೀರಿದೆ. 2010ರಲ್ಲೂ ಇದು ಫ್ರೆಂಚ್ ಭಾಷೆಯಲ್ಲಿ 660 ಚಿತ್ರಗಳುಳ್ಳ 1480 ಪುಟಗಳ ಉದಂಥವಾಗಿ ಪ್ರಕಟವಾಗಿದೆ. ಹೀಗೆ ವಾಲ್ಮೀಕಿ ರಾಮಾಯಣ ಪ್ರಾದೇಶಿಕತೆ, ಭಾಷೆ ಹಾಗೂ ವಿಷಯವಸ್ತುವಿನ ದೃಷ್ಟಿಯಿಂದ ವಿವಿಧ ಆಯಾಮಗಳನ್ನು ಒಳಗೊಂಡ ಬದುಕಿನ ಒಂದು ಸಂವಿಧಾನವೇ ಸರಿ. ಜೀವನದ ಸಾಂಸ್ಕೃತಿಕ ಮೌಲ್ಯವಾಗಿ, ಆಯಾಯ ಕಾಲದ ಸಾಧ್ಯತೆ-ಸವಾಲುಗಳನ್ನು ಪ್ರತಿಪಾದಿಸುವುದಾಗಿದೆ. ಬಹುಮುಖೀಯ ಸಾಂಸ್ಕೃತಿಕವಾದ ಸಾಮಾಜಿಕತೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಸರಿಸಿದೆ. ಹೀಗಾಗಿ ಇದೊಂದು ಸಾರ್ವಕಾಲಿಕ ಸತ್ಯವಾಗಿದೆ.

ಭಾರತದಲ್ಲಿಯ ಅಸಂಖ್ಯ ರಾಮಾಯಣಗಳಿರುವ ಕುರಿತು ಗದುಗಿನ ಭಾರತದ ಮಹಾನ್ ಕವಿ ಕುಮಾರವ್ಯಾಸನು ತಾನೇಕೆ ರಾಮಾಯಣವನ್ನು ಬರೆಯದೆ ಮಹಾಭಾರತವನ್ನು ಬರೆದೆ ಎಂಬುದಕ್ಕೆ, ‘ತಿಣಿಕಿದನು ಫಣಿರಾಯ ರಾಮಾಯಣದ ಭಾರದಲಿ’ (ಇಡೀ ಭೂಮಂಡಲವನ್ನು ಆದಿಶೇಷನೆಂಬ ನಾಗರಹಾವು ತನ್ನ ಹೆಡೆಯ ಮೇಲೆ ಹೊತ್ತು ನಿಂತಿದೆ. ಆದರೆ ನಾಗ ಸಹಸ್ರಾರು ವಿದ್ವಾಂಸರು ಬರೆದ ರಾಮಾಯಣದ ಭಾರದಿಂದ ತಿಣುಕಿ ಹೋದ) ಎಂದಿರುವುದು ವಾಲ್ಮೀಕಿ ರಾಮಾಯಣದ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ.

ಆದಿಮ ಸಂಸ್ಕೃತಿಯ ಆಗರವಾದ ರಾಮಾಯಣ ಬಹುಶಿಸ್ತೀಯ ನೆಲೆಯ ಜ್ಞಾನಭಂಡಾರವೂ ಹೌದು. ಬಾಳನ್ನು ತಿದ್ದಿಕೊಳ್ಳಲು ದೊಡ್ಡ ಸಾಧನವೂ ಆಗಿದೆ. ಭಾರತೀಯರ ದೊಡ್ಡ ಆಸ್ತಿ ಸಂಸ್ಕೃತಿ. ಅಂತಹ ಸಂಸ್ಕೃತಿಯನ್ನು ಕಟ್ಟಿಕೊಡುವ ರಾಮನನ್ನು, ರಾಮಾಯಣವನ್ನು, ಕಲ್ಯಾಣ ರಾಜ್ಯದ ಕನಸನ್ನು ಕೊಟ್ಟ ವಾಲ್ಮೀಕಿ ಜನರ ಹಾಗೂ ಜಗದ ಕವಿಯಾಗಿದ್ದಾನೆ. ವಾಲ್ಮೀಕಿ ರಾಮಾಯಣ ಜನಮಾನಸದ ಮಹಾಕಾವ್ಯ. ಭಾರತದ ಸಾಹಿತ್ಯ ಪರಂಪರೆಯ ಮೇರುಕೃತಿ. ಇದು ಮಾನವನ ಬದುಕಿನ ದಿಗ್ದರ್ಶನವಾಗಿದೆ. ಜೀವನದರ್ಶನದ ಕಥೆಯೂ ಹೌದು. ಇಲ್ಲಿಯ ಪಾತ್ರಗಳು ಮಾನವಕುಲಕ್ಕೆ ನೀತಿ, ಬೋಧನೆಗಳನ್ನು ಅರುಹುತ್ತವೆ. ಇದು ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತವಾಗದೆ, ವಿಶ್ವಮಾನ್ಯವಾಗಿದೆ.

(ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು)