ಅಂಕಣ

ಶ್ರಾವಣ ಬಂತು ನಾಡಿಗೆ...

Webdesk - Ravikanth
ಶ್ರಾವಣವೆಂದರೆ ಹಬ್ಬಗಳ ವಿಶೇಷ ಪರ್ವಕಾಲ. ಈ ಮಾಸದಲ್ಲಿ ಒಂದೊಂದು ದಿನವೂ ಒಂದೊಂದು ವಿಶಿಷ್ಟ ವಿಭಿನ್ನ ಹಬ್ಬಗಳು, ವ್ರತಗಳು ಇರುತ್ತವೆ. ಅವುಗಳ ಆಚರಣೆಯ ಬಗೆ ಮತ್ತು ದಿನಾಂಕಗಳ ಸಂಕ್ಷಿಪ್ತವಾದ ಮಾಹಿತಿ ಇಲ್ಲಿದೆ.

| ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ವೈಶಿಷ್ಟ್ಯ ಹಾಗೂ ಪ್ರಾಮುಖ್ಯತೆ ಇದೆ. ಪ್ರತಿಯೊಬ್ಬರಲ್ಲಿಯೂ ಧಾರ್ವಿುಕ ಮನೋಭಾವನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಬ್ಬಗಳ ಪಾತ್ರ ಮಹತ್ವದ್ದು. ಆಚರಿಸುವ ವಿಧಾನಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾದರೂ ಉದ್ದೇಶ ಒಂದೇ. ಭಾರತೀಯ ಸಂಪ್ರದಾಯವು ಸಕಲ ಜಾತಿ-ಮತ-ಧರ್ಮಗಳನ್ನು ಏಕತೆಯಿಂದ ಕಾಣುವ ಸರ್ವತೋಮುಖ ದೃಷ್ಟಿಯನ್ನು ಹೊಂದಿದೆ. ಆದ್ದರಿಂದ ಕೃಷ್ಣನ ಪೂಜೆ, ಮಹಾಲಕ್ಷ್ಮೀ ಪೂಜೆ, ಶಿವಾರಾಧನೆ, ಪಾರ್ವತೀ ಪೂಜೆ ಎಲ್ಲವೂ ಯಾವುದೇ ಒಂದು ಧರ್ಮಕ್ಕಾಗಲಿ ಜಾತಿಗಾಗಲಿ ಸೀಮಿತಗೊಂಡಿಲ್ಲ. ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ ಗುರು-ಹಿರಿಯರ ಪ್ರಬುದ್ಧ ನಡೆ ನುಡಿಗಳು, ಆಚಾರ ವಿಚಾರಗಳು, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರನ್ನು ಸುಸಂಸ್ಕೃತರನ್ನಾಗಿಸುತ್ತವೆ. ದೇವರ ಪೂಜೆ, ಭಜನೆ, ಸಂಭ್ರಮ, ಸಡಗರ ಇವೆಲ್ಲದರಿಂದ ಕೂಡಿದ ಆಚರಣೆ ಮನೆಯ ವಾತಾವರಣದಲ್ಲಿ ಒಂದು ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಎಲ್ಲರೂ ತಮ್ಮ ತಮ್ಮ ಅನುಕೂಲತೆಗೆ ತಕ್ಕಂತೆ ಪೂಜಿಸಬೇಕು. ಭಕ್ತಿ-ಶ್ರದ್ಧೆಗಳ ವೈಭವದಿಂದ ಕೂಡಿದರೆ ಮಾತ್ರ ಹಬ್ಬಗಳ ಆಚರಣೆ ಸಾರ್ಥಕವೆನಿಸುತ್ತದೆ.

ಮಾಸಮಹಾಲಕ್ಷ್ಮೀ, ವರಮಹಾಲಕ್ಷ್ಮೀ ವ್ರತ

ಶ್ರಾವಣದಲ್ಲಿ ಅತಿಮುಖ್ಯವಾದದ್ದು ಶ್ರೀ ಮಹಾಲಕ್ಷ್ಮೀ ಪೂಜೆ. ಶ್ರಾವಣದ ಪ್ರಾರಂಭದಿಂದ ಬರುವ ನಾಲ್ಕು ಇಲ್ಲವೇ ಐದು ಶುಕ್ರವಾರಗಳಲ್ಲಿ, ಕಲಶ ಅಥವಾ ಚಿತ್ರದಲ್ಲಿ ಮಹಾಲಕ್ಷ್ಮಿಯ ಧ್ಯಾನ ಆವಾಹನಾದಿಗಳನ್ನು ಮಾಡಿ ಷೋಡಶೋಪಚಾರ ಪೂಜೆ ಮಾಡುವುದು ಮಾಸಮಹಾಲಕ್ಷ್ಮೀವ್ರತ. ಶ್ರಾವಣಮಾಸದ ಎರಡನೇ ಶುಕ್ರವಾರ ಅಥವಾ ಹುಣ್ಣಿಮೆ ಸಮೀಪದ ಶುಕ್ರವಾರದಂದು ಮಾಡುವ ವಿಶೇಷಪೂಜೆಯೇ ವರಮಹಾಲಕ್ಷ್ಮೀವ್ರತ. ಕೇವಲ ಲಕ್ಷ್ಮೀಪೂಜೆ ಎಂದಿಗೂ ವಿಹಿತವಲ್ಲವೆಂದು ಭಗವದ್ಗೀತೆ, ಪುರಾಣಗಳಲ್ಲಿ ಇದೆ. ಆದ್ದರಿಂದ ನಾರಾಯಣ ಸಮೇತ ಲಕ್ಷ್ಮೀ ಪೂಜೆಯನ್ನೇ ಮಾಡಬೇಕು. ಕೇವಲ ಲಕ್ಷ್ಮೀಪೂಜೆಯಿಂದ ಸಿಗುವ ಸಂಪತ್ತು ನಶ್ವರವಾದರೆ ನಾರಾಯಣನ ಸಮೇತ ಲಕ್ಷ್ಮೀ ಪೂಜೆ ಸಾತ್ವಿಕ ದೈವೀಸಂಪತ್ತನ್ನು ತಂದುಕೊಡುತ್ತದೆ. ಈ ಸಲದ ಮಾಸಮಹಾಲಕ್ಷ್ಮೀವ್ರತ ದಿನಗಳು- ಜು. 29, ಆ. 5, 12, 19, 26. ಈ ಸಲದ ವರಮಹಾಲಕ್ಷ್ಮೀವ್ರತ ದಿನ ಆ. 5.

ಮಂಗಳಗೌರಿಪೂಜೆ ಆ. 2, 9, 16, 23

ನವವಿವಾಹಿತ ಸ್ತ್ರೀಯರಿಗಾಗಿ ಮಾಂಗಲ್ಯರಕ್ಷಕಳಾದ ಮಂಗಳಗೌರಿಗೆ ಈ ಪೂಜೆ. ಮದುವೆಯಾದ ವರುಷದಿಂದ 5 ವರ್ಷಗಳವರೆಗೆ ಬಿಡದಂತೆ ಈ ಮಂಗಳಗೌರಿ, ಅಂದರೆ ಉಮಾಮಹೇಶ್ವರರ ಪೂಜೆ ಮಾಡಬೇಕು. ನಾಲ್ಕು ಮಂಗಳವಾರ ನಾಲ್ಕು ಪೂಜೆ. ಸಾಮಾನ್ಯವಾಗಿ ಆಷಾಢದಲ್ಲಿ ತವರು ಮನೆಗೆ ಹೋದ ನವವಿವಾಹಿತ ಸ್ತ್ರೀಯು ಭೀಮನ ಅಮಾವಾಸ್ಯೆಯ ಪೂಜೆಗೆಂದು ಗಂಡನ ಮನೆಗೆ ಬರುತ್ತಾಳೆ. ಅಂದಿನಿಂದ ಹಬ್ಬಗಳ ಜಾತ್ರೆ ಪ್ರಾರಂಭವಾಗುತ್ತದೆ. ಸ್ತ್ರೀಯರಿಗೆ ಅದರಲ್ಲಿಯೂ ನವವಿವಾಹಿತೆಯರಿಗೆ ಈ ಗೌರೀಪೂಜೆ ಏಕೆ ಇಷ್ಟೊಂದು ವಿಹಿತವಾಗಿದೆ ಎಂದರೆ, ಅದಕ್ಕೆ ಶ್ರೀಮನ್ಮಧ್ವಾಚಾರ್ಯರು ಒಂದು ಸಂದೇಶವನ್ನು ನೀಡಿದ್ದಾರೆ.

ಉಮಾ ವೈ ವಾಕ್ ಸಮುದ್ದಿಷ್ಟಾ ಮನೋ ರುದ್ರ ಉದಾಹೃತಃ|

ತದೇತತ್ ಮಿಥುನಂ ಜ್ಞಾತ್ವಾ ನ ದಾಂಪತ್ಯಾತ್ ವಿಹೀಯತೇ||

ಪಾರ್ವತಿಯು ವಾಗಭಿಮಾನಿನಿ. ಮಹರುದ್ರದೇವರು ಮನೋಭಿಮಾನಿಗಳು. ಮಾತು ಮತ್ತು ಮನಸ್ಸು ಒಂದಾದರೆ ಎಂದಿಗೂ ವಿರಸವೇ ಬರುವುದಿಲ್ಲ. ಆದ್ದರಿಂದ ದಾಂಪತ್ಯಕ್ಕೆ ಅಭಿಮಾನಿಗಳಾದ ಶಿವಪಾರ್ವತಿಯರ ಪೂಜೆ ಅಥವಾ ಗೌರೀಪೂಜೆ ಬಹಳ ಮಹತ್ವ ಪಡೆದಿದೆ.

ಸಂಪತ್ ಶನಿವಾರ ಜು.30, ಆ.6,13,20,27

ಇದು ಕೂಡ ಮಹಾಲಕ್ಷ್ಮಿಯ ಪೂಜೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಆಚರಣೆಯಲ್ಲಿದೆ. ಶ್ರಾವಣದ ಎಲ್ಲ ಶನಿವಾರಗಳಲ್ಲಿ ಕಲಶದಲ್ಲಿ ಲಕ್ಷ್ಮಿಪೂಜೆ ಮಾಡಬೇಕು. ಜೋಳದ ಹಿಟ್ಟಿನಿಂದ ಕಡುಬನ್ನು ಮಾಡಿ ಜೋಳದ ಪದಾರ್ಥಗಳನ್ನೇ ನಿವೇದಿಸುವ ಪದ್ಧತಿಯಿದೆ. ದಾರಿದ್ರ್ಯ ದುಃಖ ಕೊನೆಗೊಳಿಸಿ ಸಾತ್ವಿಕ ಸಂಪತ್ತನ್ನು ಕೊಡುವ ವಿಶೇಷಪೂಜೆ ಈ ಸಂಪತ್ ಶನಿವಾರ.

ಶ್ರಾವಣ ಸೋಮವಾರ ಆ. 1, 8, 15, 22

ಶ್ರಾವಣದ ಸೋಮವಾರಗಳಂದು ಶಿವಾರಾಧನೆ ಬಹಳ ಮಹತ್ವದ ಸ್ಥಾನ ಪಡೆದಿದೆ. ರುದ್ರದೇವರ ಎಲ್ಲ ದೇವಸ್ಥಾನಗಳಲ್ಲಿ ಈ ಶ್ರಾವಣ ಸೋಮವಾರಗಳಲ್ಲಿ ವಿಶೇಷವಾಗಿ ಕ್ಷೀರದಿಂದ ರುದ್ರಾಭಿಷೇಕ ನಡೆಯುತ್ತದೆ. ಅನೇಕರು ಸೋಮವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವ್ರತವನ್ನು ಆಚರಿಸುತ್ತಾರೆ. ಮನೋನಿಯಾಮಕರಾದ ಮಹರುದ್ರದೇವರ ವಿಶೇಷ ಪೂಜೆ ಉಪಾಸನೆಗಳನ್ನು ಮಾಡುವುದೇ ಈ ಶ್ರಾವಣ ಸೋಮವಾರದ ವ್ರತ.

ನಾಗರ ಚೌತಿ ಹಾಗೂ ಪಂಚಮೀ (ಚೌತಿ ಆ. 1, ಪಂಚಮೀ ಆ. 2)

ನಾಗರಚೌತಿ ಮತ್ತು ನಾಗರಪಂಚಮೀ ದಿನಗಳಲ್ಲಿ ನಾಗರಾಜನೆನಿಸಿದ ಶೇಷದೇವರ ಪೂಜೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ನಾಗಜಾತಿಯನ್ನು ಸ್ಮರಿಸಿ ಸರ್ಪಗಳಿಗೂ ಹಾಲೆರೆದು ಪೂಜಿಸುವ ಅದ್ಭುತ ಸಂಪ್ರದಾಯ ನಮ್ಮ ದೇಶದಲ್ಲಿದೆ. ಸತ್ಕಾರ್ಯಗಳಲ್ಲಿ ನಮ್ಮ ಮನಸ್ಸು ತೊಡಗಬೇಕೆಂದರೆ ಶೇಷದೇವರ ವಿಶೇಷಾನುಗ್ರಹ ಬೇಕು. ಅಣ್ಣ ತಮ್ಮಂದಿರ ದೀರ್ಘಾಯುಷ್ಯವನ್ನು ಪ್ರಾರ್ಥಿಸಿ ಚೌತಿಯಂದು ನಾಗ ಉಪವಾಸವನ್ನು ಮಾಡುವ ಸಂಪ್ರದಾಯವೂ ಇದೆ.

ಋಕ್-ಯಜು ಉಪಾಕರ್ಮ (ಋಗುಪಾಗರ್ಮ ಆ. 2, ಯಜುರ್ವೆದಿಗಳು ಆ. 11)

ಈ ಮಾಸದಲ್ಲಿ ಪುರುಷರಿಗಾಗಿ ಒಂದು ಮಹತ್ವದ ಆಚರಣೆ ಇದೆ, ಅದೇ ಉಪಾಕರ್ಮ. ಈ ದಿನದಂದು ವರುಷವಿಡೀ ಅಧ್ಯಯನ ಮಾಡಿದ್ದನ್ನು ದೇವರಲ್ಲಿ ಸಮರ್ಪಿಸಿ ನೂತನಾಧ್ಯಯನಕ್ಕೆ ಸಂಕಲ್ಪಿಸುವುದು ಪ್ರಮುಖವಾಗಿದೆ. ಧಾರ್ವಿುಕ ಹಿನ್ನೆಲೆ ಹೊಂದಿದ ಈ ಜನಿವಾರ ಧಾರಣೆಯನ್ನು ಅನೇಕ ಸಂಪ್ರದಾಯದವರು ಪಾಲಿಸುವುದುಂಟು.

ರಕ್ಷಾಬಂಧನ ಆ. 12

ನೂಲಹುಣ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸುತ್ತಾರೆ. ಶ್ರೀಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟಿದಳು. ಅಂತೆಯೇ ದ್ರೌಪದಿಗೆ ಕೃಷ್ಣ ಅಕ್ಷಯವಸ್ತ್ರ ನೀಡಿ ಮಾನ ರಕ್ಷಿಸಿದ. ಇದರ ಸಂಕೇತವಾಗಿ ಅಂದು ಅಕ್ಕತಂಗಿಯರು ಅಣ್ಣ ತಮ್ಮಂದಿರಿಗೆ ‘ನಮ್ಮನ್ನು ಸದಾ ಕಷ್ಟಕಾರ್ಪಣ್ಯಗಳಿಂದ ರಕ್ಷಿಸಲಿ’ ಎಂದು ಕೋರಿ ಕೈಗೆ ದೋರಬಂಧವನ್ನು ಮಾಡುವ ಸಂಪ್ರದಾಯ ಎಂದಿನಿಂದಲೂ ಬಂದಿದೆ. ಕೇವಲ ಒಡಹುಟ್ಟಿದವರಿಗಷ್ಟೇ ಅಲ್ಲದೇ ಅಣ್ಣ ತಮ್ಮಂದಿರಂತೆ ಸಹಾಯ ಮಾಡಿ ಪ್ರೀತಿ ತೋರಿಸಿದವರೂ ಸಹ ರಕ್ಷಾಬಂಧನಕ್ಕೆ ಅರ್ಹರು.

ರಾಯರ ಆರಾಧನೆ ಆ. 13

ಕಲಿಯುಗದ ಕಾಮಧೇನು ಕಲ್ಪವೃಕ್ಷರೆಂದೇ ಪ್ರಸಿದ್ಧರಾದ ಗುರುಸಾರ್ವಭೌಮ ಮಂತ್ರಾಲಯ ಪ್ರಭುಗಳು, ರಾಯರು ಎಂದೇ ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆ ಈ ಶ್ರಾವಣಮಾಸದ ಕೃಷ್ಣಪಕ್ಷದಲ್ಲಿ ಬರುತ್ತದೆ. ಜಾತಿ-ಮತ-ಧರ್ಮಗಳ ಚೌಕಟ್ಟನ್ನು ಒಡೆದು ಕೇವಲ ಭಕ್ತಿಯಿಂದ ರಾಯರ ನೆನೆಯುವ ಪರಮಪವಿತ್ರವಾದ ರಾಯರು ವೃಂದಾವನಸ್ಥರಾದ ದಿನ.

ಬುಧ-ಬೃಹಸ್ಪತಿ ಪೂಜೆ ಆ. 3-4, 10-11, 17-18, 24-25

ಶ್ರಾವಣದ ಪ್ರತಿ ಬುಧವಾರ ಮತ್ತು ಗುರುವಾರ ಬುಧ-ಬೃಹಸ್ಪತಿಯ ಪೂಜೆಯನ್ನು ಮಾಡುತ್ತಾರೆ. ನವಗ್ರಹಗಳಲ್ಲಿ ಇಬ್ಬರಾದ ಈ ಬುಧ-ಬೃಹಸ್ಪತಿಯನ್ನು ವಿಶೇಷವಾಗಿ ಅಡುಗೆ ಮಾಡುವ ಸ್ಥಳದಲ್ಲಿ ಮತ್ತು ಧನದ ಪೆಟ್ಟಿಗೆಯಲ್ಲಿ ಬುಧ-ಬೃಹಸ್ಪತಿಗಳ ಚಿತ್ರವನ್ನಿಟ್ಟು ಪೂಜಿಸುತ್ತಾರೆ. ಧನಧಾನ್ಯದ ಅಭಿವೃದ್ಧಿಯ ಜತೆಗೆ ಬೃಹಸ್ಪತಿಯು ಜ್ಞಾನ ನೀಡಿದರೆ ಬುದ್ಧಿಯ ಚತುರತೆಯನ್ನು ಬುಧ ಅನುಗ್ರಹಿಸುತ್ತಾನೆ. ಬುಧ-ಗುರುವಾರದಂದು ವಟುಗಳಿಗೆ ವಿಶೇಷವಾಗಿ ಭೋಜನ ಮಾಡಿಸುವ ಸಂಪ್ರದಾಯವುಂಟು.

ವಿಶ್ವ ಸಂಸ್ಕೃತೋತ್ಸವ ಆ. 12

ಇದನ್ನು ಶ್ರಾವಣದ ಹುಣ್ಣಿಮೆಯಂದು ದೇಶಾದ್ಯಂತ ಆಚರಿಸುತ್ತಾರೆ. ಸಂಸ್ಕೃತಭಾಷೆಯ ಮಹತ್ವ ಸಾರು ವುದು ಇದರ ಉದ್ದೇಶ. ವಿಶ್ವದಲ್ಲಿ ಭಾರತದ ಪ್ರತಿಷ್ಠೆ ಎರಡು- ಸಂಸ್ಕೃತ ಮತ್ತು ಸಂಸ್ಕೃತಿ. ನಮ್ಮ ದೇಶದ ಸಂಸ್ಕೃತಿಯು ಅನಾದಿಕಾಲದಿಂದ ಅವಿಚ್ಛಿನ್ನವಾಗಿ ಉಳಿದಿರುವುದು ಸಂಸ್ಕೃತ ಭಾಷೆಯಿಂದ. ಆದ್ದರಿಂದ ದೇವಭಾಷೆಯಾದ ಸಂಸ್ಕೃತದ ದಿನಾಚರಣೆಯು ಎಲ್ಲ ಭಾರತೀಯರಿಗೆ ಒಂದು ಹಬ್ಬವೇ ಸರಿ.

ಶ್ರೀಕೃಷ್ಣಜನ್ಮಾಷ್ಟಮಿ ಆ. 19

ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಅತಿ ಸಡಗರದ ವಿಶ್ವವ್ಯಾಪಿಯಾಗಿ ಎಲ್ಲೆಡೆ ಆಚರಿಸುವ ಹಬ್ಬವೇ ಕೃಷ್ಣಜನ್ಮಾಷ್ಟಮಿ. ಕಲಿಯುಗಕ್ಕೆ ಅತಿ ಹತ್ತಿರದ ಭಗವಂತನ ರೂಪ ಕೃಷ್ಣರೂಪ. ಜಗನ್ನಿಯಾಮಕನಾದ ಸೃಷ್ಟಿಕರ್ತನಾದ ನಾರಾಯಣನು ಕೃಷ್ಣನಾಗಿ ಅವತರಿಸಿದ ಪರಮಪಾವನ ದಿನ. ಇದನ್ನು ವಿಶ್ವದೆಲ್ಲೆಡೆ ಒಂದೊಂದು ಪ್ರಾಂತ್ಯದಲ್ಲಿಯೂ ಒಂದೊಂದು ವಿಧವಾಗಿ ಆಚರಿಸುತ್ತಾರೆ. ಒಬ್ಬ ಸಾರ್ಥಕ ಮಗನಾಗಿ, ಸೋದರನಾಗಿ, ಸ್ನೇಹಿತನಾಗಿ, ಆಪ್ತರ ರಕ್ಷಕನಾಗಿ, ಮಹಾರಾಜ ಮುತ್ಸದ್ದಿಯಾಗಿ ಜಗತ್ತಿಗೆ ಬದುಕುವ ಸಂದೇಶವನ್ನು ನೀಡಿದ ಕೃಷ್ಣ. ಸರ್ವಮನುಕುಲಕ್ಕೆ ಸಂವಿಧಾನರೂಪವಾದ ಭಗವದ್ಗೀತೆಯನ್ನು ಕೊಟ್ಟು ವಿರಾಟ್ ರೂಪ ತೋರಿಸಿದ ಪರಮಾತ್ಮನ ಜನ್ಮದಿನ. ದೇಶ-ಭಾಷೆಗಳ ಎಲ್ಲೆ ಮೀರಿ ವಿಶ್ವದೆಲ್ಲೆಡೆ ಆಚರಿಸುವ ಹಬ್ಬ ಈ ಕೃಷ್ಣಜನ್ಮಾಷ್ಟಮಿ. ವಿಶೇಷವಾಗಿ ರೋಹಿಣೀ ನಕ್ಷತ್ರದ ಸಂಬಂಧವಿರುವ ಅಷ್ಟಮೀ ರಾತ್ರಿಯಂದು ಕೃಷ್ಣನಿಗೆ ಅರ್ಘ್ಯಾದಿಗಳನ್ನು ಸಮರ್ಪಿಸಿ ಪೂಜಿಸುವ ಸುದಿನ.