ಅಂಕಣ

ಸ್ಕ್ರ್ಯಾಚ್ ಕಾರ್ಡ್ ವಂಚನೆ

Webdesk - Manjunatha B
45 ವರ್ಷದ ಸುಜಾತಾ ಎಂ.ಬಿ.ಎ. ಪದವಿ ಮುಗಿಸಿದ ಬಳಿಕ ಪುಣೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಹಿರಿಯ ಹುದ್ದೆಯಲ್ಲಿದ್ದು ಕೈತುಂಬ ಸಂಬಳ ಗಳಿಸುತ್ತಿದ್ದಳು. ಲಗ್ನವಾಗದಿರಲು ನಿರ್ಧರಿಸಿದ್ದ ಆಕೆ ಒಬ್ಬಂಟಿಯಾಗಿಯೇ ಅಪಾರ್ಟ್​ವೆುಂಟ್ ಒಂದರಲ್ಲಿ ವಾಸಿಸುತ್ತಿದ್ದಳು. ಸುಜಾತಾಳ ಮಾತಾಪಿತರು ಮತ್ತು ಸೋದರ ಮಹಾರಾಷ್ಟ್ರದ ಜಿಲ್ಲಾ ಕೇಂದ್ರವೊಂದರಲ್ಲಿ ವಾಸಿಸುತ್ತಿದ್ದರು. ಪುಣೆಯಲ್ಲಿ ತನ್ನ ಸ್ವಂತ ಮನೆಯೊಂದನ್ನು ಹೊಂದಬೇಕೆಂದು ನಿರ್ಧರಿಸಿದ್ದ ಸುಜಾತಾ ಸುಮಾರು 2 ಕೋಟಿ ರೂಪಾಯಿಯಷ್ಟು ಬೆಲೆಯ ಆಪಾರ್ಟ್​ವೆುಂಟ್ ಬುಕ್ ಮಾಡಿದ್ದಳು. ಕೆಲವೇ ತಿಂಗಳಲ್ಲಿ ಅವಳ ಮನೆಯನ್ನು ಅವಳಿಗೆ ಹಸ್ತಾಂತರಿಸುವುದಾಗಿ ಬಿಲ್ಡರ್ ತಿಳಿಸಿದ್ದ.

ಒಂದು ಸಂಜೆ ಸುಜಾತಾ ಕಚೇರಿಯಿಂದ ಮನೆಗೆ ಮರಳಿದ ನಂತರ ಆಕೆಗೆ ಕೊರಿಯರ್ ಮೂಲಕ ಒಂದು ಪತ್ರ ಬಂತು. ಪ್ರತಿಷ್ಠಿತ ಅನ್​ಲೈನ್ ಫ್ಯಾಷನ್ ಕಂಪನಿ ಮೀಷೋದ ವಿಳಾಸದಿಂದ ಆ ಪತ್ರ ಬಂದಿತ್ತು. ದುಬಾರಿ ಬೆಲೆಯ ಬಟ್ಟೆಗಳು ಮತ್ತಿತರ ಉನ್ನತ ಬೆಲೆಯ ವಸ್ತುಗಳನ್ನು ಮಾರುತ್ತಿದ್ದ ಮೀಷೋದಿಂದಲೇ ಸುಜಾತಾ ಈ ಹಿಂದೆ ವಸ್ತುಗಳನ್ನು ಖರೀದಿಸಿದ್ದ ಕಾರಣ ಲಕೋಟೆಯಲ್ಲಿ ಏನಿರಬಹುದೆಂಬ ಉತ್ಸುಕತೆಯಿಂದ ಆಕೆ ಲಕೋಟೆಯನ್ನು ಒಡೆದಳು. ಅದರಲ್ಲಿದ್ದ ಪತ್ರದಲ್ಲಿ ಹೀಗೆ ಬರೆದಿತ್ತು:

‘ಪ್ರಿಯರೇ, ನೀವು ಮೀಷೋ ಕಂಪನಿಯ ನಂಬಿಕಸ್ಥ ಗ್ರಾಹಕರಾಗಿರುವುದಕ್ಕೆ ಧನ್ಯವಾದಗಳು. ಇನ್ನು ಕೆಲವೇ ವಾರಗಳಲ್ಲಿ ನಿಮ್ಮ ಕಂಪನಿಯು ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸುಸಂದರ್ಭದ ಪ್ರಯುಕ್ತ ನಾವು ನಿಮ್ಮಂತಹ ಕೆಲವು ಪ್ರಮುಖ ಗ್ರಾಹಕರಿಗೆ ಲಾಟರಿಯೊಂದನ್ನು ಏರ್ಪಡಿಸಿದ್ದೇವೆ. ಇದರಲ್ಲಿನ ಬಹುಮಾನಗಳೆಲ್ಲವೂ ನಗದು ಬಹುಮಾನಗಳೇ ಆಗಿದ್ದು ಮೊದಲ ಬಹುಮಾನ ಒಂದು ಕೋಟಿ ರೂ.; ನಿಮಗೆ ಬಂದಿರುವ ಬಹುಮಾನವೇನೆಂದು ತಿಳಿಯಲು ಈ ಪತ್ರದೊಡನೆ ಲಗತ್ತಿಸಿರುವ ಸ್ಕ್ರ್ಯಾಚ್ ಕಾರ್ಡ್ ಉಜ್ಜಿರಿ. ಧನ್ಯವಾದಗಳು.’ ಕುತೂಹಲಗೊಂಡ ಸುಜಾತಾ ಕೂಡಲೇ ಆ ಸ್ಕ್ರ್ಯಾಚ್ ಕಾರ್ಡ್ ಉಜ್ಜಿದಾಗ ಅದರಲ್ಲಿ ‘ಕಂಗ್ರಾಚುಲೇಷನ್ಸ್. ನೀವು 15 ಲಕ್ಷ ರೂಪಾಯಿಗಳ ನಗದು ಬಹುಮಾನ ಪಡೆದಿದ್ದೀರಿ. ಈ ಹಣವನ್ನು ಪಡೆಯಲು ಕೆಳಗಿನ ಸಂಖ್ಯೆಗೆ ಭಾನುವಾರವನ್ನು ಹೊರತುಪಡಿಸಿ ಬೆಳಗಿನ ಹತ್ತರಿಂದ ಸಂಜೆ 5ರವರೆಗೆ ಕರೆ ಮಾಡಿ’ ಎಂದು ಬರೆದು ಕರೆ ಮಾಡಬೇಕಾಗಿದ್ದ ಫೋನ್ ನಂಬರ್ ಕೊಡಲಾಗಿತ್ತು.

ಮಾರನೆಯ ದಿನಕ್ಕಾಗಿ ಕಾತರದಿಂದ ಎದುರುನೋಡುತ್ತಿ್ತದ್ದ ಸುಜಾತಾ ಬೆಳಗಿನ ಹತ್ತು ಗಂಟೆಗೆ ಸರಿಯಾಗಿ ಸ್ಕ್ರ್ಯಾಚ್ ಕಾರ್ಡ್​ನಲ್ಲಿದ್ದ ನಂಬರ್​ಗೆ ಕರೆ ಮಾಡಿದಳು. ಆ ನಂಬರ್ ಬಹಳ ಕಾಲದವರೆಗೆ ಕನೆಕ್ಟ್ ಆಗಲಿಲ್ಲ. ಕಡೆಗೂ ಹನ್ನೆರಡು ಗಂಟೆಗೆ ಆ ಸಂಖ್ಯೆ ಕನೆಕ್ಟ್ ಆಯಿತು. ಕರೆ ಸ್ವೀಕರಿಸಿದ ವ್ಯಕ್ತಿ, ‘ಮೇಡಂ, ನೀವು ಮುಂದೇನು ಮಾಡಬೇಕು ಎಂದು ನಂತರ ತಿಳಿಸುತ್ತೇವೆ. ಆದರೆ ಎಲ್ಲಕ್ಕಿಂತ ಮೊದಲಿಗೆ ನೀವು ನಿಮ್ಮ ಫೋಟೋ, ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸ್ಕ್ಯಾನ್ ಕಾಪಿ ಮಾಡಿಕೊಂಡು ನಾವು ಬರೆದಿರುವ ಪತ್ರದ ಮತ್ತು ಸ್ಕ್ರ್ಯಾಚ್ ಕಾರ್ಡ್​ನ ಫೋಟೋ ತೆಗೆದು ಈ ನಂಬರ್​ಗೆ ವಾಟ್ಸ್ಯಾಪ್ ಮಾಡಿ’ ಎನ್ನುತ್ತಾ ಕರೆ ಮುಗಿಸಿದ. ಅದೇ ರೀತಿ ಸುಜಾತಾ ಆ ಎಲ್ಲಾ ದಾಖಲಾತಿಗಳನ್ನು ಅವನು ಕೊಟ್ಟ ವಾಟ್ಸ್ಯಾಪ್ ನಂಬರ್​ಗೆ ಕಳುಹಿಸಿದಳು. ಆನಂತರ ಅವಳಿಗೆ ‘ನಿಮ್ಮ ಐಡೆಂಟಿಟಿ ಗುರುತಿಸಲಾಗಿದೆ. ನಮ್ಮಿಂದ ಬರುವ ಪತ್ರ ನಿರೀಕ್ಷಿಸಿ’ ಎನ್ನುವ ರೆಕಾರ್ಡ್ ಮಾಡಿದ ಸಂದೇಶ ಬಂದಿತು.

ಸುಮಾರು 15 ದಿನಗಳ ನಂತರವೂ ಆಕೆಗೆ ಯಾವುದೇ ಸಂದೇಶ ಬರದೇ ಹೋದಾಗ ಆಕೆ ಮತ್ತೆ ಅದೇ ವಾಟ್ಸ್ಯಾಪ್​ಗೆ ಸಂದೇಶ ಕಳುಹಿಸಿದಳು. ಆಗ ಅವಳಿಗೆ ಕರೆ ಮಾಡಿದ ಒಬ್ಬ ವ್ಯಕ್ತಿ ‘ಮೇಡಂ, ಒಂದು ಸಣ್ಣ ಸಮಸ್ಯೆಯಾಗಿದೆ. ನೀವು ವಾಸಿಸುತ್ತಿರುವ ರಾಜ್ಯದಲ್ಲಿ ಲಾಟರಿ ಗೆದ್ದವರ ಹಣದಿಂದ ನಾವು ಶೇ. 30ರಷ್ಟು ಹಣವನ್ನು ಕಡಿತಗೊಳಿಸಿ ಅದನ್ನು ತೆರಿಗೆ ಇಲಾಖೆಗೆ ಕಟ್ಟಬೇಕಾಗಿದೆ. ಈ ಪ್ರಕ್ರಿಯೆಗೆ ಸುಮಾರು 2 ತಿಂಗಳು ಹಿಡಿಯುತ್ತದೆ. ನಿಮಗೆ ಕೂಡಲೇ ಹಣ ಬೇಕಾದ್ದಲ್ಲಿ ನೀವು ತೆರಿಗೆ ಹಣವಾದ 4,50,000 ರೂಪಾಯಿಗಳನ್ನು ನಾವು ಹೇಳಿದ ಅಕೌಂಟ್​ಗೆ ಕಳುಹಿಸಿದರೆ ನಿಮ್ಮ ಬಹುಮಾನದ ಹಣವನ್ನು ಕೂಡಲೇ ಕಳುಹಿಸಲಾಗುವುದು’ ಎಂದ. ‘ವಿಳಂಬವಾದರೂ ಪರವಾಗಿಲ್ಲ, ತೆರಿಗೆ ಹಣವನ್ನು ಮುರಿದುಕೊಂಡೇ ಉಳಿದ ಹಣವನ್ನು ನನಗೆ ಕಳುಹಿಸಿ’ ಎಂದಳು ಸುಜಾತಾ.

‘ಇಲ್ಲಿ ಒಂದು ಸಮಸ್ಯೆಯಿದೆ. ಇನ್ನು 15 ದಿನಗಳೊಳಗೆ ತೆರಿಗೆಯನ್ನು ತುಂಬದಿದ್ದಲ್ಲಿ, ನಿಮ್ಮ ಬಹುಮಾನ ಬೇರೆಯವರ ಪಾಲಾಗುತ್ತದೆ. ಬೇರೆ ಬಹುಮಾನ ವಿಜೇತರು ಈಗಾಗಲೇ ತೆರಿಗೆ ಹಣವನ್ನು ತುಂಬಿದ್ದಾರೆ’ ಎಂದು ಆತ ಫೋನ್ ಕಟ್ ಮಾಡಿದ. ಸುಜಾತಾ ಸಂದಿಗ್ಧ ಸ್ಥಿತಿಗೆ ಸಿಲುಕಿದಳು. ಹೇಗಿದ್ದರೂ ಅನಾಯಾಸವಾಗಿ ತನಗೆ 15 ಲಕ್ಷ ಬರುತ್ತಿದೆ. ಇದನ್ನು ಒಟ್ಟಾರೆಯಾಗಿಯೇ ಬಿಲ್ಡರ್​ಗೆ ಕೊಟ್ಟು ತನ್ನ ಹೊಸ ಫ್ಲ್ಯಾಟ್​ಗಾಗಿ ಕಡೆಯ ಕಂತನ್ನೂ ಕಟ್ಟಿದರೆ ತನ್ನ ಕೈಗೆ ಹೊಸ ಮನೆಯು ಬೇಗನೇ ಸಿಗಬಹುದೆಂದು ಆಕೆ ಯೋಚಿಸಿದಳು. ಮತ್ತೆ ಅದೇ ನಂಬರಿಗೆ ಕರೆ ಮಾಡಿ ತೆರಿಗೆಯ ಹಣವನ್ನು ಎಲ್ಲಿಗೆ ತುಂಬಬೇಕೆಂದು ಕೇಳಿ ಹಣ ತುಂಬಬೇಕಾದ ಬ್ಯಾಂಕ್ ಅಕೌಂಟ್ ವಿವರಗಳನ್ನು ಕೇಳಿ ಪಡೆದಳು.

‘ಮೇಡಂ, ನೀವು ಹಣವನ್ನು ತುಂಬಿದ ಕೂಡಲೇ ಅದರ ಸ್ಕಿ›ೕನ್ ಷಾಟನ್ನು ನಮಗೆ ವಾಟ್ಸ್ಯಾಪ್ ಮುಖಾಂತರವೇ ಕಳುಹಿಸಿ’ ಎಂದು ಆ ವ್ಯಕ್ತಿ ಹೇಳಿದ. ಮಾರನೆಯ ದಿನವೇ ಸುಜಾತಾ ನಾಲ್ಕೂವರೆ ಲಕ್ಷ ರೂ.ಗಳನ್ನು ವರ್ಗಾಯಿಸಿ ಆ ಸಂಸ್ಥೆಯ ನಂಬರಿಗೆ ಮಾಹಿತಿಯಿತ್ತು ಸ್ಕಿ›ೕನ್ ಷಾಟನ್ನು ಕಳುಹಿಸಿದಳು. ಕೂಡಲೇ ಅದೇ ಸಂಸ್ಥೆಯಿಂದ ಅವಳಿಗೆ ಕರೆ ಬಂದಿತು. ‘ನಿಮ್ಮ ಹಣ ನಮಗೆ ಮುಟ್ಟಿದೆ. ನಿಮ್ಮ ಕ್ಲೈಮ್ ಪ್ರೊಸೆಸ್ ಮಾಡುತ್ತಿದ್ದೇವೆ, ಕೆಲವೇ ದಿನಗಳಲ್ಲಿ ನಿಮ್ಮ ಅಕೌಂಟ್​ಗೆ ನಿಮ್ಮ ಹಣವನ್ನು ಹಾಕಲಾಗುವುದು’ ಎಂದು ಕರೆ ಮಾಡಿದಾತ ಹೇಳಿದ.

ಲಾಟರಿ ಹಣವು ಬಂದ ಬಗ್ಗೆ ತನ್ನ ಬ್ಯಾಂಕಿನಿಂದ ಯಾವುದಾದರೂ ಎಸ್​ಎಂಎಸ್ ಬರುತ್ತದೆಯೋ ಎಂದು ಪ್ರತಿದಿನವೂ ಸುಜಾತಾ ಕಾದು ನೋಡುತ್ತಿದ್ದಳು. ಆದರೆ ಯಾವ ಸಂದೇಶವೂ ಬರಲಿಲ್ಲ. 15 ದಿನ ಕಾದ ನಂತರ ಮತ್ತೆ ಅದೇ ನಂಬರ್​ಗೆ ಕರೆ ಮಾಡಿದಳು. ‘ಮೇಡಂ, ಇನ್ನೊಂದು ತೊಂದರೆಯಾಗಿದೆ. ನಿಮ್ಮ ರಾಜ್ಯದ ರೂಲ್ಸ್ ಪ್ರಕಾರ 15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಪಡೆಯುವವರು ಶೇ. 47ರಷ್ಟು ತೆರಿಗೆ ಕಟ್ಟಬೇಕಂತೆ. ನೀವು ಶೇ. 30 ಮಾತ್ರ ಕಟ್ಟಿದ್ದೀರಿ. ಉಳಿದ ಶೇ. 17ರಷ್ಟು ಟ್ಯಾಕ್ಸ್, ಅಂದರೆ 2,55,000 ರೂ. ಹಣವನ್ನು ತುಂಬಿದರೆ ಮಾತ್ರ ನಿಮ್ಮ ಲಾಟರಿ ಹಣ ನಿಮಗೆ ಬರುತ್ತದೆ’ ಎಂದು ಹೊಸ ಬ್ಯಾಂಕ್ ಅಕೌಂಟ್ ಒಂದನ್ನು ನೀಡಿದ. ಸುಜಾತಾ ಈ ಹಣವನ್ನೂ ತುಂಬಿದಳು.

ಎರಡು ದಿನಗಳ ನಂತರ ಅವಳಿಗೆ ವಾಟ್ಸ್ಯಾಪ್ ಸಂದೇಶವೊಂದು ಬಂತು. ಅದರಲ್ಲಿ ಲಾಟರಿ ಹಣದ ಮೊದಲ ಕಂತನ್ನು ಅವಳ ಬ್ಯಾಂಕಿಗೆ ತುಂಬಲಾಗಿದೆಯೆಂದೂ ಪರಿಶೀಲಿಸಿ ತಿಳಿಸಬೇಕೆಂದೂ ಬರೆದಿತ್ತು. ಸುಜಾತಾ ಆನ್​ಲೈನ್ ಮೂಲಕ ತನ್ನ ಅಕೌಂಟನ್ನು ಪರಿಶೀಲಿಸಿದಳು. ಐವತ್ತು ಸಾವಿರ ರೂ. ಸಂದಾಯವಾಗಿತ್ತು. ಕಂಪನಿಯವರನ್ನು ಮತ್ತೆ ಸಂರ್ಪಸಿದ ಸುಜಾತಾ ‘15 ಲಕ್ಷದ ಬದಲು 50 ಸಾವಿರ ರೂ. ಮಾತ್ರ ಏಕೆ ಸಂದಾಯವಾಗಿದೆ’ ಎಂದು ಕೇಳಿದಳು. ‘ಬ್ಯಾಂಕ್ ಅಕೌಂಟ್ ನಿಮ್ಮದೇ ಎಂದು ಖಾತ್ರಿಪಡಿಸಿಕೊಳ್ಳಲು ಕಡಿಮೆ ಹಣ ಹಾಕಿದ್ದೇವೆ. ನಾಳೆಯೇ ಉಳಿದ ಹಣವನ್ನು ಕಳುಹಿಸಲಾಗುವುದು’ ಎಂಬ ಉತ್ತರ ಬಂತು.

ಇದಾದ ಒಂದು ವಾರದ ನಂತರ ಮತ್ತೆ ಆ ಸಂಸ್ಥೆಯ ಅಧಿಕಾರಿಯೆಂದು ಹೇಳಿಕೊಂಡವನು ಅವಳನ್ನು ಸಂರ್ಪಸಿ, ‘ಮೇಡಂ, ನಿಮ್ಮದು ಇನ್ನೊಂದು ತೊಂದರೆಯಾಗಿದೆ, ತೆರಿಗೆ ಅಧಿಕಾರಿಗಳು ನೀವು ಕಳೆದ ವರ್ಷದ ತೆರಿಗೆಯ ಬಾಕಿ ಉಳಿಸಿಕೊಂಡಿರುವಿರೆಂದು ತಿಳಿಸಿ ನಿಮಗೆ ಅಲ್ಲಿಯವರೆಗೆ ಯಾವುದೇ ಹಣ ಪಾವತಿ ಮಾಡಬಾರದು ಎಂಬ ನಿರ್ಬಂಧವನ್ನು ನಮಗೆ ಹಾಕಿದ್ದಾರೆ. ನಿಮ್ಮ ಕಳೆದ ವರ್ಷದ ತೆರಿಗೆ ಬಾಕಿ 2,34,750 ರೂ. ತುಂಬಿಸಿಕೊಂಡ ನಂತರವೇ ನಿಮ್ಮ ಲಾಟರಿ ಹಣವನ್ನು ಕೊಡಲು ಹೇಳಿದ್ದಾರೆ. ಅದರಂತೆ ಬಾಕಿ ಹಣವನ್ನು ತುಂಬಿ’ ಎಂದು ಮತ್ತೊಂದು ಬ್ಯಾಂಕಿನ ಅಕೌಂಟ್ ನಂಬರನ್ನು ಕೊಟ್ಟ.

‘ಕಳೆದ ವರ್ಷ ನಾನು ಆದಾಯತೆರಿಗೆ ಸರಿಯಾಗಿಯೇ ತುಂಬಿರುವ ಬಗ್ಗೆ ನನಗೆ ಆ ಇಲಾಖೆ ಇ ಮೇಲ್ ಮೂಲಕವೇ ಮಾಹಿತಿ ನೀಡಿದೆಯಲ್ಲ? ಇದೇನು ಹೊಸ ಸುದ್ದಿ ಹೇಳುತ್ತಿರುವಿರಿ?’ ಎಂದು ಸುಜಾತಾ ಪ್ರಶ್ನಿಸಿದಾಗ ಆ ಅಧಿಕಾರಿ ತನಗೇನೂ ಗೊತ್ತಿಲ್ಲವೆಂದ.

ಮುಂದೇನು ಮಾಡಬೇಕೆಂದು ತೋಚದ ಸುಜಾತಾ ತೆರಿಗೆ ಬಾಕಿಯೆಂದು ಹೇಳಿದ್ದ ಹಣವನ್ನೂ ತುಂಬಿದಳು. ಒಂದು ವಾರದ ನಂತರವೂ ಲಾಟರಿ ಹಣ ಬರದೇ ಇದ್ದಾಗ ಆಕೆ ತನ್ನನ್ನು ಸಂರ್ಪಸಿದ್ದವರ ಫೋನ್​ಗಳನ್ನು ಸಂರ್ಪಸಿದಳು. ಮೂರೂ ಫೋನ್​ಗಳು ಸ್ವಿಚ್ ಆಫ್ ಆಗಿದ್ದವು. ಗಾಬರಿಗೊಂಡ ಸುಜಾತಾ ಮೀಷೋ ಕಂಪನಿಯ ಕೇಂದ್ರ ಕಚೇರಿಗೇ ಹೋದಳು. ಅಲ್ಲಿನ ಅಧಿಕಾರಿಗಳು ತಮ್ಮ ಸಂಸ್ಥೆಯು ಯಾವುದೇ ಲಾಟರಿ ಯೋಜನೆಯನ್ನು ಪ್ರಾಯೋಜಿಸಿಲ್ಲ ಎಂದರು. ಆಗ ಆಕೆ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಳು. ಅಲ್ಲಿಯವರೆಗೆ ಆಕೆ 8.90 ಲಕ್ಷ ರೂ.ಗಳನ್ನು ಮೂರು ವಿವಿಧ ಬ್ಯಾಂಕ್ ಅಕೌಂಟ್​ಗಳಿಗೆ ವರ್ಗಾಯಿಸಿದ್ದಳು.

ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಾರಂಭವಾಯಿತು. ಆದರೆ ಆರೋಪಿಗಳು ಮೂರೂ ಖಾತೆಗಳನ್ನು ಮುಚ್ಚಿ ಅವುಗಳಲ್ಲಿದ್ದ ಎಲ್ಲಾ ಹಣವನ್ನು ತೆಗೆದುಕೊಂಡು ಮಾಯವಾಗಿದ್ದರು. ಕಡೆಗೂ ಆರೋಪಿಗಳೂ ಸಿಗಲಿಲ್ಲ. ಪ್ರಕರಣವನ್ನು ಮುಚ್ಚುವಾಗ ತನಿಖಾಧಿಕಾರಿ ಸುಜಾತಾಳಿಗೆ, ‘ಅಂಗಡಿಗಳಿಗೆ ಹೋಗಿ ವಸ್ತುಗಳನ್ನು ಖರೀದಿಸಿ ಬಿಲ್ ಪಾವತಿಸುವಾಗ ನಿಮ್ಮ ಸೆಲ್ ಫೋನ್ ನಂಬರ್ ಮತ್ತು ಇಮೇಲ್ ಐಡಿಯನ್ನು ಕೊಡಲೇಬೇಡಿ’ ಎಂಬ ಸಲಹೆಯಿತ್ತರು.

‘‘ಮೂರ್ಖರು ಜೀವನದಲ್ಲಿ ಮೂರು ವಸ್ತುಗಳನ್ನು ಅತಿ ವೇಗವಾಗಿ ಲಭಿಸಿಕೊಳ್ಳಬೇಕೆಂದು ಬಯಸುತ್ತಾರೆ- ಅವೇ ಹಣ, ಯಶಸ್ಸು ಮತ್ತು ಇತರರ ಗಮನ ಎನ್ನುತ್ತಾನೆ’ ಅಮೆರಿಕದ ಆರ್ಥಿಕ ಸಲಹೆಗಾರ ಜೇಮ್್ಸ ವಿಲಿಯಂ ಫ್ರಿಕ್. ವಿದ್ಯಾವಂತೆಯಾಗಿದ್ದರೂ ವಿವೇಚನೆಯನ್ನು ಬಳಸದ ಸುಜಾತಾ ಮೂರ್ಖರ ಸಾಲಿಗೆ ಸೇರಿದ್ದು ಆಶ್ಚರ್ಯಕರ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)