ಯಜ್ಞಯಾಗಾದಿ ಕರ್ತೃಗಳ ಆಶ್ರಯಭೂಮಿ
ದಿವ್ಯ ಅವತಾರಗಳ ಜನ್ಮಭೂಮಿ
ಧರ್ಮ-ನೀತಿಗಳ ಪ್ರತಿರೂಪ ಈ ತ್ಯಾಗಭೂಮಿ
| ಭಗವಾನ್ ಶ್ರೀಸತ್ಯಸಾಯಿ ಬಾಬಾ
ಅನಾದಿ ಕಾಲದಿಂದಲೂ ದೇಶದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚೌಕಟ್ಟಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದ ದಿವ್ಯಪುರುಷರನ್ನು ಹೆತ್ತು ಹೊತ್ತ ಪವಿತ್ರಭೂಮಿ ನಮ್ಮ ಭಾರತ. ಪ್ರಾಚೀನ ಕಾಲದಲ್ಲಿ ಅಂತರಂಗದ ಅತ್ಯುನ್ನತ ದಿವ್ಯಸ್ಥಿತಿಯಲ್ಲಿ ಲೀನರಾಗಿ ತಾವು ಕಂಡುಕೊಂಡ ವೇದಗಳನ್ನು ಜಗತ್ತಿಗೆ ನೀಡಿದ ಋಷಿಗಳಿಂದ ಹಿಡಿದು, ಆಧುನಿಕ ಕಾಲದಲ್ಲಿ ವೇದಗಳ ಮೇಲೆ ನವಪ್ರಕಾಶವನ್ನು ಬೀರಿದ ಮಹಾಯೋಗಿ ಅರವಿಂದರವರೆಗೆ, ಹಿಂದಿನ ಕಾಲದ ಶ್ರೀರಾಮ-ಶ್ರೀಕೃಷ್ಣಾದಿ ಅವತಾರೀಪುರುಷರಿಂದ ಹಿಡಿದು, ನಮ್ಮ ಕಾಲದ ಮಹಾನ್ ದಿವ್ಯಗುರು ಶ್ರೀರಾಮಕೃಷ್ಣ ಪರಮಹಂಸರವರೆಗೆ, ಆಗಿಂದಾಗ್ಗೆ ನಮ್ಮ ತಾಯ್ನಾಡಿನಲ್ಲಿ ಸಮಯ-ಸಂದರ್ಭಗಳ ಅವಶ್ಯಕತೆಗನುಗುಣವಾಗಿ ಅನೇಕ ದಿವ್ಯವ್ಯಕ್ತಿಗಳು ಜನ್ಮ ತಳೆಯುತ್ತಲೇ ಇದ್ದಾರೆ. ಇವರಲ್ಲಿ ಹಲವಾರು ದಿವ್ಯ ಸ್ತ್ರೀಯರೂ ಇದ್ದಾರೆ.
ಇಪ್ಪತ್ತನೆಯ ಶತಮಾನದಲ್ಲಿ ಘಟಿಸಿದ ದಿವ್ಯಭವ್ಯ ಆಧ್ಯಾತ್ಮಿಕ ವಿದ್ಯಮಾನವೆಂದರೆ ಭಗವಾನ್ ಶ್ರೀಸತ್ಯಸಾಯಿ ಬಾಬಾರವರ ಅವತರಣ. 1926 ನವೆಂಬರ್ 23ರಂದು ಆಂಧ್ರಪ್ರದೇಶದ ಕುಗ್ರಾಮ ಪುಟ್ಟಪರ್ತಿಯಲ್ಲಿ ಅವರ ಜನನವಾಯಿತು. ಸರಳ ಆಸ್ತಿಕ ದಂಪತಿಗೆ ಪುತ್ರನಾಗಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸತ್ಯನಾರಾಯಣರಾಜು ಬಾಲ್ಯದಲ್ಲಿಯೇ ತನ್ನ ವಯಸ್ಸಿಗೆ ಮೀರಿದ ದಿವ್ಯಜ್ಞಾನ ಹಾಗೂ ಶಕ್ತಿಗಳನ್ನು ತೋರಿದನು. ಆತನ ಅದ್ಭುತ ಊಹಾತೀತ ಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲು ಅಸಮರ್ಥರಾದ ಗ್ರಾಮಸ್ಥರು, ಮೊದಲಿಗೆ ಪ್ರತಿರೋಧ ತೋರಿದರೂ, ಕೊನೆಯಲ್ಲಿ ಕಿರಿಯ ಬಾಲಕನ ಅಸಾಧಾರಣ ವ್ಯಕ್ತಿತ್ವಕ್ಕೆ ಶರಣು ಹೋದರು.
ಹದಿನಾಲ್ಕನೆಯ ವಯಸ್ಸಿನಲ್ಲಿ, ‘ನಾನು ಶಿರಡಿಯ ಸಾಯಿಬಾಬಾ!’ ಎಂದು ಘೊಷಿಸಿದಾಗ, ಆ ಗ್ರಾಮಪ್ರದೇಶ ದಲ್ಲಿ ಸಾಯಿಬಾಬಾ ಬಗ್ಗೆ ತಿಳಿದವರಾರೂ ಇರಲಿಲ್ಲ. ಕೆಲವರು ಆಶ್ಚರ್ಯಪಟ್ಟರೆ, ಇನ್ನೂ ಕೆಲವರು ಸಂಶಯಪಟ್ಟರು; ಕೆಲವರು ಧಿಕ್ಕರಿಸಿದರೆ, ಹಲವರು ಶರಣಾಗತರಾದರು; ಕೆಲವರು ಅವಹೇಳನದ ಮಾತುಗಳನ್ನಾಡಿದರೆ, ಹಲವರು ಆರಾಧಿಸಿದರು. ಆದರೆ ಅವನ ಶಕ್ತಿ, ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದವರು ಆಗಲು ಯಾರೂ ಇರಲಿಲ್ಲ, ಈಗಲೂ ಯಾರೂ ಇಲ್ಲ. ಏಕೆಂದರೆ ತರ್ಕಕ್ಕೆ ಸಿಲುಕದ ಭಗವಂತನ ಪ್ರತಿರೂಪವೇ ಆತನಾಗಿದ್ದನು. ಆತನನ್ನು ನಂಬಿದವರು ಆ ದಿವ್ಯ ಬಾಲಕನನ್ನು ಶ್ರೀಸತ್ಯಸಾಯಿ ಬಾಬಾ ಎಂದು ಕರೆಯಲು ಪ್ರಾರಂಭಿಸಿದರು.
ಶ್ರೀಸತ್ಯಸಾಯಿ ಬಾಬಾರ ಲೀಲೆ ಹಾಗೂ ಮಹಿಮೆಗಳನ್ನು ಕೇಳಿ, ಓದಿ ತಿಳಿದು ಲಕ್ಷಾಂತರ ಜನರು ಅವರ ಸನ್ನಿಧಿಗೆ ಧಾವಿಸಿದರು; ಸಹಸ್ರಾರು ಮಂದಿ ಅವರನ್ನು ಸನಿಹದಿಂದ ಕಂಡು ಮಾತನಾಡಿ ನಲಿದರು; ಹಾಗೂ ನೂರಾರು ಮಂದಿ ಅವರ ನಿಸ್ವಾರ್ಥ ಸೇವಾವಾಹಿನಿಯಲ್ಲಿ ಸೇರಿ ದುಡಿದು ಪಾವನರಾದರು. ಆದರೆ ‘ಅವರು ಯಾರು?’ ಎಂಬುದನ್ನು ಪರಿಪೂರ್ಣವಾಗಿ ವರ್ಣಿಸಲು ಹಿಂದೆಯೂ ಯಾರಿಗೂ ಸಾಧ್ಯವಾಗಿರ ಲಿಲ್ಲ; ಈಗಲೂ ಯಾರಿಗೂ ಸಾಧ್ಯವಿಲ್ಲ. ತರ್ಕವನ್ನು ಉಪಯೋಗಿಸಿ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ ಜನರಿಗೆ ಅವರು ಹೇಳಿದ್ದು ಒಂದೇ, ‘ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಡಿ, ಅನುಭವಿಸಿ, ಆನಂದಿಸಿ!’ ಎಂದು. ಅವರೊಬ್ಬ ಮಹಾನ್ ಅಧ್ಯಾತ್ಮವಾದಿ ಯಾಗಿದ್ದರು. ಆದರೆ ಒಂದು ಹೊಸ ಮತವನ್ನು ಹುಟ್ಟುಹಾಕು ವುದು ಅವರ ಉದ್ದೇಶವಾಗಿರಲಿಲ್ಲ. ಒಬ್ಬ ಹಿಂದೂವನ್ನು ಉತ್ತಮ ಹಿಂದೂವನ್ನಾಗಿ, ಒಬ್ಬ ಮುಸಲ್ಮಾನನ್ನು ಉತ್ತಮ ಮುಸಲ್ಮಾನನನ್ನಾಗಿ, ಒಬ್ಬ ಕ್ರೖೆಸ್ತನನ್ನು ಇನ್ನೂ ಉತ್ತಮ ಕ್ರೖೆಸ್ತನನ್ನಾಗಿ ಮಾಡುವುದೇ ಅವರ ಗುರಿಯಾಗಿತ್ತು. ಅವರೇ ಘೊಷಿಸಿರುವಂತೆ, ‘ನಿಮ್ಮ ಹೃದಯಗಳಲ್ಲಿ ಪ್ರೇಮ ಜ್ಯೋತಿಯನ್ನು ಬೆಳಗಲು ನಾನು ಬಂದಿದ್ದೇನೆ. ಯಾವುದೇ ಒಂದು ಮತದ ಪರವಾಗಿ ಪ್ರಚಾರ ಮಾಡುವುದು ನನ್ನ ಉದ್ದೇಶವಲ್ಲ. ಯಾವುದೇ ಪಂಥ ಅಥವಾ ಪಂಗಡದ ವಾದ-ಸಿದ್ಧಾಂತಗಳನ್ನು ಪ್ರಚುರ ಪಡಿಸಲು ನಾನು ಬಂದಿಲ್ಲ. ಅಥವಾ ಯಾವುದೇ ತತ್ತ್ವಕ್ಕೆ ಅನುಯಾಯಿಗಳನ್ನು ಸಂಗ್ರಹಿಸುವುದು ನನ್ನ ಯೋಜನೆಯಲ್ಲ. ಭಕ್ತರನ್ನು ಅಥವಾ ಶಿಷ್ಯರನ್ನು ನನ್ನ ಗುಂಪಿಗೆ ಸೇರಿಸಿ ಬೆಳೆಸುವುದಂತೂ ನನಗೆ ಇಷ್ಟವಿಲ್ಲ. ಸರ್ವ ಮತ-ಧರ್ಮಗಳ ಸಾರವಾದ ಪ್ರೇಮಧರ್ಮವನ್ನು ಮಾನವ ಜನಾಂಗದ ಹೃದಯದಲ್ಲಿ ಸ್ಥಾಪಿಸಲು ನಾನು ಬಂದಿದ್ದೇನೆ’. ಮತ-ಧರ್ಮ, ಜಾತಿ-ಪಂಥಗಳ ಹೆಸರಲ್ಲಿ ಒಡೆದು ಹೋಗಿರುವ ಜಗತ್ತನ್ನು ಒಟ್ಟುಗೂಡಿಸಿ, ಶಾಂತಿ-ಸಮರಸಗಳ ಸ್ಥಾಪನೆಯ ಆಶಾಕಿರಣವನ್ನು ಮೂಡಿಸಿದರು. ‘ಇರುವುದು ಒಂದೇ ಒಂದು ಧರ್ಮ, ಅದು ಪ್ರೇಮಧರ್ಮ. ಇರುವುದು ಒಂದೇ ಒಂದು ಜಾತಿ, ಅದುವೇ ಮಾನವ ಜಾತಿ’, ಎಂದು ಅವರು ಉದ್ಘೋಷಿಸಿದರು.
ಕೇವಲ ಇಪ್ಪತ್ತು ವಯಸ್ಸಿನ ಪ್ರಾಯದಲ್ಲಿಯೇ ಅವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಅವರ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರ ಅಣ್ಣನಿಗೆ ಒಂದು ಐತಿಹಾಸಿಕ ಪತ್ರವನ್ನು ಬರೆದು ತಮ್ಮ ಅವತಾರೋದ್ದೇಶವನ್ನು ಬಹಿರಂಗ ಪಡಿಸಿದರು- ‘ಅಖಿಲ ಮಾನವತೆಗೆ ಆನಂದವನ್ನು ನೀಡಿ ರಕ್ಷಿಸುವುದೇ ನನ್ನ ದೀಕ್ಷೆ; ಧರ್ಮಮಾರ್ಗವನ್ನು ಬಿಟ್ಟು ಭ್ರಷ್ಟರಾದ ಜನರ ಕೈಹಿಡಿದು ಕಾಪಾಡುವುದೇ ನನ್ನ ವ್ರತ; ದೀನ-ದರಿದ್ರರ ಬಾಧೆಯನ್ನು ತೊಲಗಿಸಿ ಅವರ ಅಗತ್ಯಗಳನ್ನು ಪೂರೈಸುವುದೇ ನನಗೆ ಪರಮ ಪ್ರೀತಿ’ ಎಂದು. ಭೌತಿಕ ಜೀವನದ ಅಂತ್ಯದವರೆಗೂ ಅವರು ತಾವು ಹೇಳಿದಂತೆಯೇ ಮಾಡಿದರು. ತಮ್ಮ ಗ್ರಾಮದಲ್ಲಿ ಅವರು ಸ್ಥಾಪಿಸಿದ ಸಣ್ಣ ಚಿಕಿತ್ಸಾಲಯ ಮುಂದೆ ಬೆಳೆದು ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಆಸ್ಪತ್ರೆಯಾಗಿ ಮಾರ್ಪಟ್ಟಿತು; ಗ್ರಾಮೀಣ ಮಕ್ಕಳಿಗಾಗಿ ಗ್ರಾಮದಲ್ಲಿ ಪ್ರಾರಂಭವಾದ ಸಣ್ಣ ಶಾಲೆ ಉನ್ನತ ವಿಶ್ವ ವಿದ್ಯಾಲಯವಾಗಿ ಬೆಳೆಯಿತು; ಗ್ರಾಮಸ್ಥರ ದಾಹವನ್ನು ತಣಿಸಲು ಅವರು ಅಗೆದ ಬಾವಿ ಮುಂದೆ ಯಾವುದೇ ಸಾಮಾಜಿಕ ಸೇವಾ ಸಂಸ್ಥೆ ಕೈಗೊಂಡ ಜಗತ್ತಿನಲ್ಲೇ ಬೃಹತ್ ಕುಡಿಯುವ ನೀರಿನ ಸರಬರಾಜು ಯೋಜನೆಯಾಗಿ ವೃದ್ಧಿಗೊಂಡಿತು. ಈ ಎಲ್ಲ ಸೇವೆಗಳನ್ನು ಉಚಿತವಾಗಿ ಅವರು ಸಮಾಜಕ್ಕೆ ನೀಡಿದರು. ಮೂಲಭೂತ ಭೌತಿಕ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯಸೇವೆ ಹಾಗೂ ನೀರನ್ನು ಉಚಿತವಾಗಿಯೇ ನೀಡಬೇಕೆಂಬುದು ಅವರ ಅಭಿಮತವಾಗಿತ್ತು. ಈ ಮೂಲಭೂತ ಸೇವೆಗಳು ಜನಸಾಮಾನ್ಯರಿಗೆ ಎಟುಕದಂತಾಗಿರುವ ಇಂದಿನ ಪ್ರಪಂಚದಲ್ಲಿ ಶ್ರೀಸತ್ಯಸಾಯಿ ಬಾಬಾರವರು ಆದರ್ಶ ಯೋಜನೆಗಳಿಂದ ಮಾನವತೆಗೆ ನವಮಾರ್ಗವನ್ನು ತೋರಿದರು. ಆರ್ಥಿಕ ಪ್ರತಿಬಂಧಕಗಳ ಗೋಡೆಯನ್ನು ಬೇಧಿಸಿ ಸಮಸ್ತ ಜನತೆಯ ಮೂಲಭೂತ ಭೌತಿಕ ಅವಶ್ಯಕತೆಗಳನ್ನು ಉಚಿತವಾಗಿ ಪೂರೈಸುವುದು ಸಾಧ್ಯವಿದೆಯೆಂದು ಅವರು ತೋರಿಸಿಕೊಟ್ಟರು. ‘ಎಲ್ಲರನ್ನೂ ಪ್ರೀತಿಸಿ ಎಲ್ಲರಿಗೂ ಸೇವೆಯನ್ನು ಸಲ್ಲಿಸಿ (Love All, Serve All’) ಎಂಬುದೇ ಅವರ ಮೂಲಮಂತ್ರವಾಗಿತ್ತು. ಅವರ ಜೀವನವೇ ಅವರ ಸಂದೇಶವಾಗಿ ಬೆಳಗಿತು.
2011 ಏಪ್ರಿಲ್ 24ರಂದು ಶ್ರೀಸತ್ಯಸಾಯಿ ಬಾಬಾ ಭೌತಿಕ ಕಾಯವನ್ನು ತೊರೆದ ಮೇಲೆ ಅವರ ಅನೇಕ ಭಕ್ತರು ಹಾಗೂ ಅನುಯಾಯಿಗಳು, ಅವರು ಹಾಕಿಕೊಟ್ಟ ಪಥದಲ್ಲಿ ಅವಿಶ್ರಾಂತವಾಗಿ ದುಡಿಯುತ್ತ ಕಳೆದ ಹತ್ತು ವರ್ಷಗಳಲ್ಲಿ ಅವರು ಜಗತ್ತಿಗೆ ಸಾರಿದ ಉಚಿತ ಶಿಕ್ಷಣ, ಆರೋಗ್ಯಸೇವೆ ಹಾಗೂ ಆಹಾರ-ಪೌಷ್ಟಿಕತೆಯ ಯೋಜನೆಗಳನ್ನು ಕೈಗೆತ್ತಿಕೊಂಡು ಅವರಿಗೆ ತಮ್ಮ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಬಾಬಾರವರು ಅಂದು ತಮ್ಮ ಮೇಲೆ ಸುರಿಸಿದ ನಿಸ್ವಾರ್ಥಪ್ರೇಮ ಹಾಗೂ ಅನುಗ್ರಹಗಳೇ ಇಂದು ಅವರ ಪ್ರೇರಕಶಕ್ತಿಯಾಗಿವೆ. ಇದಕ್ಕೆ ಒಂದು ನಿದರ್ಶನ, ಕರ್ನಾಟಕದ 24, ತೆಲಂಗಾಣ ಹಾಗೂ ತಮಿಳುನಾಡಿನ ಒಂದೊಂದು ಜಿಲ್ಲೆಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಬೆಳೆದು ನಿಂತಿರುವ ಶ್ರೀಸತ್ಯಸಾಯಿ ಲೋಕ ಸೇವಾ ಗುರುಕುಲಂ ವಿದ್ಯಾಸಂಸ್ಥೆಗಳು. ಈ ನಲವತ್ತು ಶಾಲಾ-ಕಾಲೇಜುಗಳಲ್ಲಿ 3500 ಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶದ ಬಡಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಾಸಂಸ್ಥೆಗಳಿಗೆ ಮುಕುಟಪ್ರಾಯವಾಗಿರುವ ‘ಶ್ರೀಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ’ದಲ್ಲಿ ನೂರಾರು ಯುವಕ-ಯುವತಿಯರು ಶಿಕ್ಷಣದ ಜೊತೆಗೆ ಆಹಾರ, ವಸತಿ ಹಾಗೂ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಛತ್ತೀಸ್ಗಢ, ಹರ್ಯಾಣ ಹಾಗೂ ಮಹಾರಾಷ್ಟ್ರಗಳಲ್ಲಿ ಹತ್ತು ವರ್ಷಗಳಲ್ಲಿ ಸ್ಥಾಪಿತವಾದ ಮೂರು ಶ್ರೀಸತ್ಯಸಾಯಿ ಸಂಜೀವನಿ ಆಸ್ಪತ್ರೆಗಳು ಹೃದಯರೋಗ ಪೀಡಿತ ಬಡಮಕ್ಕಳಿಗೆ ಉಚಿತ ಚಿಕಿತ್ಸೆ-ಶಸ್ತ್ರಕ್ರಿಯೆಗಳನ್ನು ಮಾಡುತ್ತ ಸಾವಿರಾರು ಬಡಕುಟುಂಬಗಳಿಗೆ ಜೀವನದಲ್ಲಿ ಆಶಾಕಿರಣಗಳಾಗಿವೆ. ಒಂದು ಲಕ್ಷ ಐವತ್ತು ಸಾವಿರ ಮಕ್ಕಳ ಹೃದಯ ತಪಾಸಣೆಯನ್ನು ಮಾಡಿ ಹದಿನೇಳು ಸಾವಿರ ಶಸ್ತ್ರಕ್ರಿಯೆಗಳನ್ನು ಉಚಿತವಾಗಿ ನಡೆಸಿವೆ. ಇತ್ತೀಚೆಗೆ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಮುದ್ದೇನಹಳ್ಳಿಯಲ್ಲಿ ತಲೆಯೆತ್ತಿ ನಿಂತಿರುವ ‘ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಬಹುವಿಶೇಷ ವಿಭಾಗ ಆಸ್ಪತ್ರೆ’ ಗ್ರಾಮಸ್ಥರ ಪಾಲಿಗೆ ದಿವ್ಯವರವಾಗಿದೆ. ಶ್ರೀಸತ್ಯಸಾಯಿ ಅನ್ನಪೂರ್ಣ ಉಪಾಹಾರ ಯೋಜನೆ ದೇಶದಾದ್ಯಂತ ಹದಿನೇಳು ಪ್ರಾಂತ್ಯಗಳಲ್ಲಿ, ಐದು ಲಕ್ಷ ಶಾಲಾಮಕ್ಕಳಿಗೆ ಪೌಷ್ಟಿಕತೆಯ ಅವಶ್ಯಕತೆಯನ್ನು ಪೂರೈಸುತ್ತಿದೆ; ಅಲ್ಲದೆ ಲಕ್ಷಾಂತರ ಗ್ರಾಮೀಣ ಜನರಿಗೆ ಇದೇ ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರು ಪ್ರತಿದಿನ ಲಭ್ಯವಾಗುತ್ತಿದೆ.
ಇಂದು ಭಗವಾನ್ ಶ್ರೀಸತ್ಯಸಾಯಿ ಬಾಬಾರವರ 96ನೇ ವಾರ್ಷಿಕ ವರ್ಧತಿಯಾಗಿದೆ. ಅವಿರತ ನಿಸ್ವಾರ್ಥ ಜನಸೇವೆಯಿಂದ ಮಾನವತೆಗೆ ಆದರ್ಶವನ್ನು ಹಾಕಿಕೊಟ್ಟ ಅವರಿಗೆ ನಾವು ಹೇಗೆ ಕೃತಜ್ಞತೆ ಸಲ್ಲಿಸಬಹುದು? ಅವರು ತೋರಿದ ಮಾರ್ಗದಲ್ಲಿ ನಡೆಯುತ್ತ ಸಮಾಜಸೇವೆಗೆ ನಮ್ಮನ್ನು ನಾವು ಪುನಃ ಪುನಃ ಸಮರ್ಪಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ಸರಿಯಾದ ಕೃತಜ್ಞತೆಯಾಗಿದೆ. ಅವರ ಜೀವನ ಹಾಗೂ ಉಪದೇಶಗಳು ಸರ್ವಕಾಲ ಪ್ರಸ್ತುತ. ಅವರು ತೋರಿದ ಪ್ರೇಮಧರ್ಮ ಕಾಲಾತೀತ. ಇಂತಹ ಕಾಲಾತೀತ ದಿವ್ಯಪುರುಷ ಭಗವಾನ್ ಶ್ರೀಸತ್ಯಸಾಯಿ ಬಾಬಾರವರಿಗೆ ನಮೋ ನಮೋ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)