ಅಂಕಣ

ಮಾತೃವಾತ್ಸಲ್ಯದ ಭಾಗೀರಥಿ ಶ್ರೀಮಾತೆ ಶಾರದಾದೇವಿ

Webdesk - Ravikanth
ಶಾರದಾದೇವಿ ಮತ್ತು ಶ್ರೀರಾಮಕೃಷ್ಣರ ಮಧುರ, ಗೌರವಪೂರ್ಣ ಪವಿತ್ರ, ಪ್ರೀತಿ, ವಿಶ್ವಾಸದಿಂದ ಕೂಡಿದ ದಾಂಪತ್ಯ ನಿಜಕ್ಕೂ ವಿಶಿಷ್ಟ. ಅದರಲ್ಲಿ ದೈವತ್ವದಿಂದ ಕೂಡಿದ ಮಾನವ ಸಂಬಂಧವನ್ನು ಕಾಣಬಹುದು. ಪ್ರತಿಯೊಬ್ಬರಲ್ಲಿಯೂ ಈ ದೈವತ್ವ ಸುಪ್ತವಾಗಿರುವುದರಿಂದ ಸಾಂಸಾರಿಕ ಜೀವನದಲ್ಲಿದ್ದರೂ ನಾವು ಕೂಡ ದೈವತ್ವವನ್ನು ಜಾಗೃತಗೊಳಿಸಿಕೊಂಡು ಪ್ರಕಟಿಸಲು ಶ್ರೀಮಾತೆಯ ಜೀವನ ಸ್ಪೂರ್ತಿ ನೀಡುತ್ತದೆ.

ಇಂದು ನಮಗೆ ಬೇಕಾಗಿರುವುದು ಗೃಹಸ್ಥಜೀವನದಲ್ಲಿ ಆಧ್ಯಾತ್ಮಿಕ ಆದರ್ಶಗಳ ಮರುಪ್ರತಿಷ್ಠಾಪನೆ ಹಾಗೂ ದಿನನಿತ್ಯದ ಕರ್ತವ್ಯಗಳ ಜೊತೆಗೆ ಹೇಗೆ ಆಧ್ಯಾತ್ಮಿಕ ಸಾಧನೆಯ ಅಭ್ಯಾಸವನ್ನು ಸಹಜವಾಗಿ ಅನುಸರಿಸಬಹುದು ಎಂಬ ಒಳನೋಟ. ನಿತ್ಯಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಅಳವಡಿಸಿಕೊಂಡು, ಆಂತರಿಕ ಸಂತೃಪ್ತಿ ಮತ್ತು ಪರಿಪೂರ್ಣತೆಯನ್ನು ಪಡೆಯಬಹುದು ಎಂದು ಶ್ರೀಮಾತೆ ಶ್ರೀಶಾರದಾದೇವಿಯವರು ಸರಳ, ಸಹಜ ಜೀವನದಲ್ಲಿ ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಅವರ ಬದುಕು ಮತ್ತು ಆಧ್ಯಾತ್ಮಿಕ ಸಾಧನೆಯ ರೀತಿ ಇಂದಿನ ಗೃಹಸ್ಥರಿಗೆ ಮಾರ್ಗದರ್ಶಕ. ಕೌಟುಂಬಿಕ ಕರ್ತವ್ಯಗಳ ಜವಾಬ್ದಾರಿಯನ್ನು ಹೊತ್ತುಕೊಂಡು ಜೀವನ ನಡೆಸುವವರಿಗೆ, ಶ್ರೀಮಾತೆಯವರು ಪ್ರಾಯೋಗಿಕ ಆದರ್ಶವೆನ್ನಬಹುದು.

ಧಾರ್ವಿುಕ ಇತಿಹಾಸದಲ್ಲಿ ಹೆಚ್ಚಾಗಿ ಕಾಣುವುದು ಸತ್ಪುರುಷರ, ವಿದ್ವಾಂಸರ ಶಾಸ್ತ್ರಗಳ ಅಧ್ಯಯನ, ಪಾಂಡಿತ್ಯ, ಸಂತರ ತಪಸ್ಸು, ವಿರಕ್ತ ಜೀವನ. ಸಾಮಾನ್ಯ ಗೃಹಸ್ಥರು ಅನುಸರಿಸಲಾಗದ ಉತ್ತುಂಗ ಆಧ್ಯಾತ್ಮಿಕ ಜೀವನ, ದೈವಿ ಪವಾಡ, ಮಹೋನ್ನತ ಕಠಿಣ ಆದರ್ಶಗಳನ್ನು ಪಾಲಿಸಿದ ಹಲವು ಸತ್ಪುರಷರನ್ನು ನಾವು ಅಲ್ಲಿ ಕಾಣುತ್ತೇವೆ. ಆದರೆ ಸಾಮಾನ್ಯ ಗೃಹಸ್ಥರಿಗೆ ಕೈಗೆಟುಕುವ, ಅವರು ನಿತ್ಯಜೀವನದಲ್ಲಿ ಅನುಸರಿಸಲು ಸಾಧ್ಯವಾಗುವ, ಸಂಸಾರದ ಮಧ್ಯದಲ್ಲಿದ್ದೂ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಗೃಹಿಣಿಯರಿಗೂ ಹಾಗೂ ಪುರುಷರಿಗೂ ಒಂದು ಅಧಿಕೃತ, ಜ್ವಲಂತ ಆದರ್ಶ ಮುಖ್ಯವಾಗಿ ನಮಗೆ ಬೇಕು. ಈ ಯುಗದ ಜನರ ಪರಿಸ್ಥಿತಿಯನ್ನು ಮನಗಂಡ ಮಹಾಮಾತೆ ಈ ಅವಶ್ಯಕತೆಯನ್ನು ಪೂರೈಸಲು ಬೇಕಾದ ಆದರ್ಶವನ್ನು ಜಗತ್ತಿಗೆ ಕೊಟ್ಟರು. ಶ್ರೀರಾಮಕೃಷ್ಣ ಅವತರಣದ ಒಂದು ಮುಖ್ಯ ಉದ್ದೇಶ ಕೂಡ ಇದಾಗಿತ್ತು. ಆದ್ದರಿಂದಲೇ ಅವರು ಶ್ರೀಶಾರದಾದೇವಿಯವರನ್ನು, ದಿವ್ಯ ಉದ್ದೇಶಕ್ಕಾಗಿ ಧರೆಗೆ ಕರೆತಂದರು.

‘ಪಶ್ಚಿಮ ಬಂಗಾಳದ ಜಯರಾಂಬಾಟಿ ಗ್ರಾಮದ ಮುಖರ್ಜಿ ಮನೆಯಲ್ಲಿ, ನನಗೆ ಯೋಗ್ಯವಾದ ವಧು ಇದ್ದಾಳೆ; ಅಲ್ಲಿ ಹೋಗಿ’ ಎಂದು ತಮ್ಮ ಮದುವೆ ಮಾಡಲು ವಧುವಿಗಾಗಿ ಹುಡುಕಾಡುತ್ತಿದ್ದ ತಾಯಿ ಹಾಗೂ ಅಣ್ಣನಿಗೆ, ದೈವಪ್ರಜ್ಞೆಯಿಂದ ಜಾಗೃತವಾದ ದಿವ್ಯದೃಷ್ಟಿಯಿಂದ ರಾಮಕೃಷ್ಣರು ತಿಳಿಸಿದರು. ಈ ಪ್ರಸಂಗವು ಶ್ರೀರಾಮಕೃಷ್ಣ- ಶಾರದಾದೇವಿಯವರು ಗೃಹಸ್ಥರ ಉದ್ಧಾರಕ್ಕೆ, ಕುಟುಂಬ ಜೀವನದಲ್ಲಿ ಆಧ್ಯಾತ್ಮಿಕ ಆದರ್ಶವನ್ನು ಎತ್ತಿ ಹಿಡಿದು ಪುನಃ ಪ್ರತಿಷ್ಠಾಪಿಸಲು ಮಾಡಿದ ಅಪೂರ್ವ ದೈವಿಲೀಲೆ ಎನ್ನಬಹುದು.

ಅನೇಕಾನೇಕ ಸಂತಮಹಾತ್ಮರ, ದೇಶಪ್ರೇಮಿಗಳ ಜನ್ಮಭೂಮಿಯಾದ ಬಂಗಾಳದ ಆಮೋದರ ತೀರದಲ್ಲಿರುವ ಜಯರಾಮಬಾಟಿ ಎಂಬ ಚಿಕ್ಕ ಗ್ರಾಮದಲ್ಲಿ ರಾಮಚಂದ್ರ ಮುಖರ್ಜಿ ದಂಪತಿ ಮನೆಯಲ್ಲಿ ಹುಟ್ಟಿದ ಹಳ್ಳಿಯ ಮುಗ್ಧ ಬಾಲಕಿ ಹೇಗೆ ತನ್ನ ತಪಸ್ಸು, ಅನುಕಂಪ ಮತ್ತು ಪಾವಿತ್ರ್ಯ, ಆಧ್ಯಾತ್ಮಿಕ ಅನುಭೂತಿ ಹೊಂದಿದ ಶ್ರೀರಾಮಕೃಷ್ಣಮಯ ಜೀವನದಿಂದ ವಿಶ್ವವಂದ್ಯೆ ಶಾರದಾದೇವಿಯಾದಳು ಎಂಬುದು ನಮ್ಮನ್ನೆಲ್ಲ ವಿಸ್ಮಯಗೊಳಿಸುವ ಅನುಕರಣೀಯ ಜೀವನ ಚರಿತ್ರೆಯಾಗಿದೆ.

ಬಾಲಕಿಯಾಗಿ ಶ್ರೀರಾಮಕೃಷ್ಣರನ್ನು ಮದುವೆಯಾದ ಶಾರದೆ ಕೆಲವು ವರ್ಷಗಳ ನಂತರ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಂಡರು. ದಕ್ಷಿಣೇಶ್ವರಕ್ಕೆ ಬಂದು ಶ್ರೀರಾಮಕೃಷ್ಣರ ಸಾಧನಾಮಯ ಜೀವನವನ್ನು ಪ್ರವೇಶಿಸಿ, ಅವರಿಗೆ ಸೇವೆ ಸಲ್ಲಿಸುವ ಸಹಧರ್ವಿುಣಿಯಾದರು. ಹೀಗೆ ತಾರುಣ್ಯದಲ್ಲಿ ಪತಿಯನ್ನು ಮೊದಲ ಬಾರಿ ಸಂದರ್ಶಿಸಿದಾಗ ಶ್ರೀರಾಮಕೃಷ್ಣರು ಶಾರದಾದೇವಿಯವರನ್ನು- ‘ನೀನು ನನ್ನ ಸಹಧರ್ವಿುಣಿ, ನೀನು ಹಾಗೆ ಬಯಸಿ ನನ್ನನ್ನು ಸಾಂಸಾರಿಕ ಜೀವನಕ್ಕೆ ಆಗ್ರಹಿಸಿದರೆ, ನಿನ್ನ ಇಚ್ಛೆ ಪೂರೈಸಬಲ್ಲೆ’ ಎಂದು ಹೇಳಿದಾಗ, ಸಹಜವಾಗಿ ಪ್ರತಿಕ್ರಿಯಿಸಿದ ಶಾರದಾದೇವಿ, ‘ನಾನು ಸಹಧರ್ವಿುಣಿಯಾಗಿ ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ ಸಹಕರಿಸಲು ಬಂದಿದ್ದೇನೆ. ನಿಮ್ಮನ್ನು ಸಂಸಾರದ ಬಂಧನಕ್ಕೆ ಆಗ್ರಹಿಸುವುದಕ್ಕಲ್ಲ’ ಎಂದರು. ಮುಂದೆ ಶ್ರೀಮಾತೆ ಗುರುವಾಗಿ, ಆಧ್ಯಾತ್ಮಿಕ ಆದರ್ಶವಾಗಿ ನಿಲ್ಲುವುದಕ್ಕೆ ಬರೆದ ಮುನ್ನುಡಿಯಂತಿದೆ ಈ ಮಾತು.

ತದನಂತರ ಸುಮಾರು ವರ್ಷಗಳ ಕಾಲ ಆಗಾಗ್ಗೆ ಸಮಾಧಿ ಮಗ್ನರಾಗಿರುತ್ತಿದ್ದ ಶ್ರೀರಾಮಕೃಷ್ಣರೊಡನೆ ಸೇವಾನಿರತರಾಗಿ ಅವರ ಆಧ್ಯಾತ್ಮಿಕ ಸಹಧರ್ವಿುಣಿಯಾಗಿ ಶ್ರೀಮಾತೆ ನಡೆಸಿದ ಬಾಳ್ವೆ ಅನನ್ಯ ಮತ್ತು ಆದರ್ಶಮಯ, ಒಬ್ಬ ತಪಸ್ವಿನಿ ಹಾಗೂ ಕರ್ಮಯೋಗಿಯಾಗಿ, ಶ್ರೀರಾಮಕೃಷ್ಣರ ಮಾರ್ಗದರ್ಶನದಂತೆ ಜೀವನವನ್ನು ರೂಪಿಸಿಕೊಂಡ ರೀತಿ ಪರಮಾದ್ಭುತ ಮತ್ತು ಅನುಕರಣೀಯವಾದುದು. ಹೀಗೆ ಶ್ರೀರಾಮಕೃಷ್ಣರು ಅವರನ್ನು ‘ಲೋಕಮಾತೆ ಶಾರದಾದೇವಿ’ಯನ್ನಾಗಿ ಪರಿವರ್ತಿಸಿ, ಶ್ರೀರಾಮಕೃಷ್ಣ ಸಂಘದಜನನಿ ಹಾಗೂ ನೂರಾರು ಸಾಧಕರಿಗೆ ಆಧ್ಯಾತ್ಮಿಕ ಮಾರ್ಗದರ್ಶನವನ್ನೀಯುವ ಗುರುಪದಕ್ಕೆ ಏರಿಸಿ ಭವಿಷ್ಯದಲ್ಲಿ ಅವರು ಸ್ತ್ರೀಶಕ್ತಿ, ಮಾತೃಶಕ್ತಿ ಮತ್ತು ಗುರುಶಕ್ತಿಯ ಸಂಯುಕ್ತ ಆದರ್ಶವಾಗಿ ಬೆಳಗುವಂತೆ ಮಾಡಿದರು.

ಶ್ರೀಮಾತೆಯ ಮಹತ್ವವನ್ನು ಮೇಲ್ನೋಟದಲ್ಲಿ ತಿಳಿಯುವುದು ಕಷ್ಟ. ಏಕೆಂದರೆ ಅಲ್ಲಿ ಬಾಹ್ಯಾಡಂಬರ ಸ್ವಲ್ಪವೂ ಇಲ್ಲ. ಅವರ ಜೀವನದ ಕೊನೆಯ ಕೆಲವು ವರ್ಷಗಳನ್ನು ಬಿಟ್ಟರೆ, ಲೋಕದ ಕಣ್ಣಿಗೆ ಗೋಚರಿಸದ, ಯಾರಿಗೂ ಕಾಣಿಸದ, ಗುಪ್ತಗಾಮಿನಿಯಾಗಿ ಪ್ರವಹಿಸುವ ಸರಸ್ವತಿ ನದಿಯಂತೆ ಅವರ ಜೀವನ. ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣರ ಜೊತೆಯಲ್ಲಿ ಇದ್ದಷ್ಟು ಕಾಲ, ಒಂದು ಚಿಕ್ಕದಾದ ಕೋಣೆ- ನಹಬತ್​ಖಾನೆಯಲ್ಲಿ ತಮ್ಮ ಒಂದಿಬ್ಬರು ಸಂಗಡಿಗರೊಡನೆ ವಾಸಿಸುತ್ತಿದ್ದರು. ಅಲ್ಲಿಯೇ ಅಡುಗೆ ಮಾಡುತ್ತಿದ್ದರು. ಎಲೆಮರೆ ಕಾಯಿಯಂತೆ ಹಗಲಿರುಳು ಸೇವಾನಿರತರಾಗಿದ್ದ ಅವರ ಜೀವನದಲ್ಲಿ ಕಂಡು ಬರುವ ನಿರ್ಮಮತ್ವ, ಆಂತರಿಕ ತ್ಯಾಗ, ಪವಿತ್ರತೆಯ ಸ್ಪಷ್ಟ ಅಭಿವ್ಯಕ್ತಿ ಮತ್ತು ಹೃದಯವಂತಿಕೆಯನ್ನು ಮರೆಯಲು ಸಾಧ್ಯವೇ ಇಲ್ಲ.

ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯವರನ್ನು ಮುಂದಿನ ಜೀವನದಲ್ಲಿ ಶ್ರೀರಾಮಕೃಷ್ಣರ ನೇರ ಶಿಷ್ಯರ ಸಂನ್ಯಾಸಿ ವೃಂದಕ್ಕೆ, ಶ್ರೀರಾಮಕೃಷ್ಣ ಮಹಾಸಂಘಕ್ಕೆ ಮತ್ತು ಭಕ್ತರಿಗೆ ಮಾರ್ಗದರ್ಶಕ ಮತ್ತು ಆದರ್ಶಪ್ರಾಯವಾದ ಸ್ಪೂರ್ತಿಯ ಶಕ್ತಿಕೇಂದ್ರವಾಗಿ ನೆಲಸಬೇಕೆಂದೇ ಈ ವಿಶೇಷ ಆಧ್ಯಾತ್ಮಿಕ ತರಬೇತಿ ಕೊಟ್ಟಿದ್ದರು.

ಶ್ರೀಮಾತೆ ಜನರಿಗೆ ಬೋಧಿಸಲು ಬಂದಂತಿರಲಿಲ್ಲ; ಪ್ರೀತಿಸಲು ಮತ್ತು ತಾಳ್ಮೆಯಿಂದ ಸೇವೆ ಸಲ್ಲಿಸಲು ಬಂದಂತಿತ್ತು ಅವರ ಬದುಕು. ತಾಳ್ಮೆಯಿಂದ ಜೀವನದ ಕಹಿಕಷ್ಟಗಳನ್ನು ಸಹಿಸಿದ ಅಪೂರ್ವವಾದ ಸಹನಾಮಯ ಜೀವನ ಅವರದು. ಎಲ್ಲರಿಗೂ ಅವರು ನಿಜವಾಗಿ ತಾಯಿಯಾಗಿದ್ದರು. ಪರತನಭಾವನೆಯನ್ನು ಮೀರಿ ನಿಂತ ವಿಶಾಲ ಹೃದಯವಂತಿಕೆಯುಳ್ಳ ಪ್ರಖರ ತಾಯ್ತನದ ವ್ಯಕ್ತಿತ್ವ ಅವರದು. ಉದಾಹರಣೆಗೆ ಅವರು ಎಂದೂ ಸಂನ್ಯಾಸಿ ಭಕ್ತರನ್ನು ಅವರಿಗೆ ಇಟ್ಟ ಹೆಸರಿನಿಂದ ಕರೆಯುತ್ತಿರಲಿಲ್ಲ. ಒಬ್ಬ ತಾಯಿಗೆ ತನ್ನ ಮಗ ಸಂನ್ಯಾಸಿಯಾಗಿದ್ದಾನೆಂದರೆ ಹೇಗೆ ಅನ್ನಿಸುತ್ತದೆಯೋ ಹಾಗೆಯೇ ಅವರಿಗೂ ಅನ್ನಿಸುತ್ತಿತ್ತು ಎನ್ನುವುದು ಇದಕ್ಕೆ ಕಾರಣ.

‘ನನ್ನ ಮಗುವೊಂದು ಕೆಸರಿನಲ್ಲಿ ಮೈ ಹೊರಳಿಸಿ ಹೊಲಸು ಮಾಡಿಕೊಂಡಿದ್ದರೆ, ಅದನ್ನು ತೊಳೆದು ಸ್ವಚ್ಛ ಮಾಡಬೇಕೆಲ್ಲವೇ’ ಎನ್ನುವ ಭಾವದಿಂದಲೇ ಅವರು ಅನೈತಿಕ ಜೀವನ ನಡೆಸಿದವರನ್ನೂ ಪುತ್ರವಾತ್ಸಲ್ಯದಿಂದ ಕಾಣುತ್ತಿದ್ದರು. ಆಶ್ರಮದಲ್ಲಿ ಅವರ ಸೇವೆಯನ್ನು ಮಾಡುವ ಶಾರದಾನಂದರ ಮೇಲೆ ಅವರಿಗೆ ಎಷ್ಟು ಪ್ರೀತಿಯೋ, ಅಷ್ಟೇ ಪ್ರೀತಿ ಕಳ್ಳತನ, ದರೋಡೆ ಮಾಡುವ ಅಮ್​ದ್ ಮೇಲೂ ಇತ್ತು. ಶ್ರೀಮಾತೆಯವರದು ಪಕ್ಷಪಾತರಹಿತವಾದ, ನಿಃಸ್ವಾರ್ಥ ಪ್ರೇಮ. ಅವರು ಎಷ್ಟೋ ಸಲ ಭಕ್ತರಿಗೆ ಬೀಸಣಿಕೆ ಬೀಸಿದ್ದುಂಟು. ಅವರ ಊಟದ ತಟ್ಟೆಗಳನ್ನು ಸ್ವಚ್ಛ ಮಾಡಿದ್ದುಂಟು.

ಅವರು ಗುರುವಾಗಿ ಉಪದೇಶ ಮಾಡುವಾಗ ಅಲ್ಲಿ ತಾಯಿಯ ಮೃದುತ್ವವಿರುತ್ತಿತ್ತು. ಅವರ ಒಂದು ಪ್ರಮುಖ ಬೋಧನೆಯೆಂದರೆ ‘ಬೇರೆಯವರ ದೋಷಗಳನ್ನು ನೋಡಬಾರದು’ ಎಂಬುದು. ಅವರ ಬೋಧನೆ ತುಂಬ ಸರಳ ಮತ್ತು ಅನುಕರಣೀಯ. ಅವರು ಒಬ್ಬ ಆದರ್ಶ ಮಗಳಾಗಿ ತಂದೆ-ತಾಯಿಯರ ಸೇವೆ ಮಾಡಿದರು. ಆದರ್ಶ ಬಂಧುವಾಗಿ ಬಳಗದವರಿಗೆ ಸಹಾಯ ಮಾಡಿದರು. ಆದರ್ಶ ಪತ್ನಿಯಾಗಿ ಪತಿಸೇವೆ ಮಾಡಿದರು. ಆದರ್ಶ ಗೃಹಿಣಿಯಾಗಿ ಮನೆ ನಿಭಾಯಿಸಿದರು. ಆದರ್ಶ ಗುರುವಾಗಿ ಅಧ್ಯಾತ್ಮದ ಮೇರುಶಿಖರ ಎನಿಸಿದರು ಹಾಗೂ ಆದರ್ಶ ತಾಯಿಯಾಗಿ ಎಲ್ಲರಿಗೂ ಪ್ರೀತಿ ಹಂಚಿದರು.

ಶ್ರೀರಾಮಕೃಷ್ಣ ಮತ್ತು ಶಾರದಾಮಾತೆ ಒಂದೇ ನಾಣ್ಯದ ಎರಡು ಮುಖಗಳಂತೆ. ಒಂದೇ ದೈವತ್ವದ ಎರಡು ಬಿಂಬಗಳು. ಶ್ರೀರಾಮಕೃಷ್ಣರ ಅಸಾಧಾರಣ ಜೀವನ ಬೃಹತ್ ಉತ್ತುಂಗದ ಹಿಮಾಲಯದಂತಿದ್ದರೆ, ಮಾತೆಯ ಜೀವನ ಹಿಮಾಲಯದಲ್ಲಿ ಹುಟ್ಟಿದ ಗಂಗೆಯಂತೆ-ಹಿಮಕರಗಿ ಉಂಟಾದ ತಪೋಜಲವನ್ನು ಜನಸಾಮಾನ್ಯರಿಗೆ ಅಪ್ಯಾಯಮಾನವಾಗುವ ರೀತಿಯಲ್ಲಿ ಕೆಳಗಿಳಿದು ಬಯಲಿಗೆ ಬಂದ ಪವಿತ್ರ ಗಂಗೆ, ಮಾತೃವಾತ್ಸಲ್ಯದ ಭಾಗೀರಥಿ.

ಶ್ರೀಮಾತೆಯ ಜೀವನ ಎಷ್ಟೊಂದು ಸರಳವಾಗಿತ್ತು ಎಂದರೆ ಸಾಮಾನ್ಯ ಪ್ರಾಪಂಚಿಕ ಬುದ್ಧಿಯಿಂದ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಬಾಹ್ಯತೋರಿಕೆಗೆ ಸಾಮಾನ್ಯ ಜೀವನದಂತೆ ತೋರುತ್ತದೆ. ದೈನಂದಿನ ಗೃಹಕೃತ್ಯ, ಜಂಜಾಟಗಳ ಮಧ್ಯದಲ್ಲಿ ಇದ್ದು, ಜನಸಾಮಾನ್ಯರಂತೆ ಕಷ್ಟ, ನಷ್ಟ, ಕ್ಲೇಶ, ತಾಪಗಳನ್ನು ಎದುರಿಸಿದ ಜೀವನ. ಆದರೆ ಇಲ್ಲಿ ವಿಶೇಷತೆ ಏನೆಂದರೆ ಅವರ ಅಸಾಧಾರಣ ಸರಳತೆ, ಅಸಾಮಾನ್ಯ ತಾಳ್ಮೆ ಮತ್ತು ಆಂತರಿಕ ಪವಿತ್ರತೆ.

ಅವಿರತವಾದ ತಪಸ್ಸು, ಆಧ್ಯಾತ್ಮಿಕ ಸಾಧನೆ, ಪೂಜೆ ಮತ್ತು

ದಿನನಿತ್ಯದ ಕರ್ತವ್ಯಗಳನ್ನು ಪೋಣಿಸಿ ನಿರ್ವಹಿಸಿದ ಅವರ ದಿನಚರಿ ನಮಗೆಲ್ಲರಿಗೂ ಪ್ರೇರಕ ಶಕ್ತಿ. ಅವರ ಈ ರೀತಿಯ ಜೀವನ ದರ್ಶನ ನಮ್ಮ ಕುಟುಂಬ ಜೀವನದ ಇಂದಿನ ಪರಿಸ್ಥಿತಿಯಲ್ಲಿ ಹೇಗೆ ಅಧ್ಯಾತ್ಮ ಮತ್ತು ಸದ್ಗುಣಗಳನ್ನು ಸಹಜವಾಗಿ ಅಳವಡಿಸಿಕೊಳ್ಳಬಹುದು ಎಂಬುವುದಕ್ಕೆ ಜ್ವಲಂತವಾದ ಪ್ರಾಯೋಗಿಕ ಮಾದರಿ ಮತ್ತು ಮಾರ್ಗದರ್ಶಿ.

ಭಗಿನಿ ನಿವೇದಿತಾ ಶ್ರೀಮಾತೆಯವರ ಬಗ್ಗೆ ಹೀಗೆ ಹೇಳಿದ್ದಾರೆ: ‘ಶ್ರೀರಾಮಕೃಷ್ಣರು ಭಾರತೀಯ ನಾರಿಯರ ಆದರ್ಶದ ವಿಷಯವಾಗಿ ಹೇಳಿದ ಕೊನೆಯ ಮಾತು ಶ್ರೀಶಾರದಾದೇವಿಯವರ ಜೀವನ ಎಂದು ನನಗೆ ಯಾವಾಗಲೂ ಅನಿಸಿದೆ’. ಶ್ರೀಮಾತೆಯ ಜೀವನ ಮತ್ತು ಸಂದೇಶದ ಸಾರವೇನೆಂದರೆ ಮಾತೃವಾತ್ಸಲ್ಯ, ತ್ಯಾಗ, ದಯೆ, ಕ್ಷಮೆ ಮತ್ತು ತಾರತಮ್ಯವಿಲ್ಲದ ದೃಷ್ಟಿಯಿಂದ ಸೇವೆ. ಇವು ವಿಶೇಷವಾಗಿ ಶ್ರೀಮಾತೆಯ ಜೀವನದಲ್ಲಿ ವ್ಯಕ್ತವಾಗಿದ್ದನ್ನು ನಾವು ಕಂಡುಕೊಳ್ಳಬಹುದು.

ಶ್ರೀಮಾತೆ ತಮ್ಮ ಜೀವನದ ಮೂಲಕ ಇಂದಿನ ಜನಸಾಮಾನ್ಯರಿಗೆ ಬೇಕಾದ ಆದರ್ಶವನ್ನು ನಮ್ಮ ಮುಂದಿಟ್ಟಿದ್ದಾರೆ. ಏಕೆಂದರೆ ಶ್ರೀಮಾತೆಯ ಬದುಕು ನಮ್ಮಂತೆ ದೈನಂದಿನ ವ್ಯಾವಹಾರಿಕ ಜೀವನದ ಸಕಲ ಲಕ್ಷಣಗಳಿಂದ ಸಮನ್ವಿತವಾಗಿದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು. ಆದ್ದರಿಂದ ಗೃಹಸ್ಥ ಜೀವನ ನಡೆಸುವ ಎಲ್ಲರಿಗೂ ಅವಶ್ಯಕವಾಗಿ ಬೇಕಾದ ಆದರ್ಶ, ಸಾಂತ್ವನ, ಆಧ್ಯಾತ್ಮಿಕ ಸ್ಪೂರ್ತಿ, ಮಾರ್ಗದರ್ಶನ, ಸೇವಾಮನೋಭಾವ, ಮಾತೃವಾತ್ಸಲ್ಯ, ತಾಳ್ಮೆ, ಹೊಂದಾಣಿಕೆಯ ಜೀವನಸೂತ್ರಗಳು ಶ್ರೀಮಾತೆಯ ಜೀವನ ದರ್ಶನದಿಂದ ನಮಗೆ ದೊರಕುತ್ತದೆ. ಸಂಸಾರದ ಮಧ್ಯದಲ್ಲಿದ್ದರೂ, ಕಷ್ಟ/ಕ್ಲೇಶಗಳ ಮಧ್ಯದಲ್ಲಿದ್ದ ನಾವು ಆಧ್ಯಾತ್ಮಿಕ ಗುರಿಯ ಕಡೆಗೆ ಹೇಗೆ ಮುಂದುವರಿಯಬಹುದೆಂಬುದನ್ನು ಕೂಡ ಶ್ರೀಮಾತೆಯವರಿಂದ ಸ್ಪಷ್ಟವಾಗಿ ಮತ್ತು ಪ್ರಾಯೋಗಿಕವಾಗಿ ತಿಳಿಯಬಹುದಾಗಿದೆ ಹಾಗೂ ಜೀವನ ರಂಗದಲ್ಲಿ ಸಾರ್ಥಕತೆ ಮತ್ತು ಯಶಸ್ಸನ್ನು ಪಡೆಯಬಹುದಾಗಿದೆ.

ಆದ್ದರಿಂದ ಶ್ರೀಮಾತೆಯ ಈ ವಿಶಿಷ್ಟವಾದ ಗೃಹಸ್ಥ ಜೀವನವು, ಜನಸಾಮಾನ್ಯರು ತಮ್ಮ ಕುಟುಂಬ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಹಾಗೂ ಅದಕ್ಕೆ ಬೇಕಾದ ಆಧ್ಯಾತ್ಮಿಕ ಸ್ಪೂರ್ತಿಯನ್ನು ಪಡೆಯಲು, ಭಗವಾನ್ ಶ್ರೀರಾಮಕೃಷ್ಣರು ಮನುಕುಲಕ್ಕೆ ಕೊಟ್ಟ ದೊಡ್ಡ ವರ ಎನ್ನಬಹುದು. ಶ್ರೀಮಾತೆ ಮಾನವ ಜೀವನಕ್ಕೆ ದೂರವಾಗಿ ಅಪಾರ ಅಂತರದ ಆಕಾಶದಲ್ಲಿರುವ ನಿಲುಕದ ನಕ್ಷತ್ರವಲ್ಲ; ಅದ್ಭುತ ಎಂದು ಪ್ರಶಂಸಿಸಿ ನಾವು ದೂರ ನಿಲ್ಲುವ ಆದರ್ಶವಲ್ಲ. ಬದಲಾಗಿ ಪ್ರೇಮದಿಂದ ನಮ್ಮ ಜೀವನದೆಡೆಗೆ ಬಾಗಿ, ಆಪ್ತವಾಗುವ ಅನುಷ್ಠಾನ ಸಾಧ್ಯವಾದ ಆದರ್ಶವಾಗಿದ್ದಾರೆ ಎಂಬುದನ್ನು ಗೃಹೀ ಭಕ್ತರೆಲ್ಲರೂ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ತಿಳಿಯಬೇಕಾದ ಅಗತ್ಯವಿದೆಯಲ್ಲವೇ?

(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)