ಹೋಟೆಲ್ ಉದ್ಯಮದಲ್ಲಿ ತುಂಬ ಲಾಭ ಇದೆ ಅಂತ ಬಹುತೇಕರು ಅನ್ಕೊಂಡಿದ್ದಾರೆ, ಇದು ನಿಜ ಕೂಡ. ಆದ್ರೆ ಹೋಟೆಲ್ ಮಾಲೀಕರನ್ನು ಮಾತಾಡಿಸಿ ನೋಡಿ, ಗೊತ್ತಾಗುತ್ತೆ ಅದರಲ್ಲಿ ಲಾಭದ ಜೊತೆಗೆ ಎಷ್ಟು ತಲೆನೋವಿದೆ ಅಂತ. ಅತಿ ದೊಡ್ಡ ಸಮಸ್ಯೆ ಕೆಲಸದವರದ್ದೇ, ಇವತ್ತಿದ್ದವ ನಾಳೆ ಇರೋಲ್ಲ. ಯಜಮಾನ ಬೆಳಗ್ಗೆ ಐದು ಗಂಟೆಗೇ ಹೋಟೆಲ್ ತೆರೆದು ಒಂದು ಲೋಟ ಕಾಫಿ ಅಂಗಳದಲ್ಲಿ ಚೆಲ್ಲಿ ದೇವರ ಪೂಜೆ ಮಾಡಿ, ಹಿಟ್ಟು ಗೊಟಾಯಿಸಿ ರೆಡಿ ಮಾಡಿ ಇಟ್ಟರೆ ದೋಸೆ ಹಾಕುವವನು ತಡವಾಗಿ, ಅವನಿಗೆ ಬೇಕಾದಾಗ ಬರುತ್ತಾನೆ. ಬೈದ್ರೆ, ‘ಸರಿ ಬಿಡಿ... ನಿಮ್ಮಹತ್ರ ದಿನಾ ಬೈಸ್ಕೊಂಡು ಸಾಕಾಗಿದೆ. ಲೆಕ್ಕಾಚಾರ ಮಾಡಿ, ನಾನು ಹೋಗ್ತೇನೆ’ ಅಂತ ಬೆದರಿಕೆ ಹಾಕ್ತಾನೆ. ಹೇಳದೆ ಕೇಳದೆ ರಜೆನೂ ಹಾಕಿ ಬಿಡುತ್ತಾನೆ. ಅದೇನಾದ್ರೂ ಅವನ ಸಹಾಯಕನಿಗೆ ಮೊದಲೇ ತಿಳಿದಲ್ಲಿ ಎಲ್ಲ ಕೆಲಸ ತಾನೇ ಮಾಡಬೇಕಾದುದರಿಂದ ಅವನೂ ಕೈ ಕೊಡುತ್ತಾನೆ. ಯಾರ ಮೇಲಾದರೂ ಸೇಡು ತೀರಿಸ್ಕೋಬೇಕು ಅಂತ ಇದ್ರೆ, ಹೋಟೆಲ್ ಮಾಡೋ ಐಡಿಯಾ ಕೊಡಿ ಸಾಕು. ಇಷ್ಟೆಲ್ಲ ಹೇಳಿದ ಮೇಲೂ ಹೋಟೆಲ್ ಮಾಡೋ ಐಡಿಯಾ ನಿಮ್ದಾದ್ರೆ ಕೆಲವು ಟಿಪ್ಸ್ ಕೊಡುತ್ತೇನೆ ಕೇಳಿ.
ಹೋಟೆಲ್ ಶುರು ಮಾಡುವವರಿಗೆ ಟೇಬಲ್ ಸ್ವಚ್ಛ ಮಾಡುವುದರಿಂದ ಹಿಡಿದು ಅಡುಗೆ ಮಾಡುವವರೆಗೂ ತಿಳಿದಿರಬೇಕು. ಕೆಲಸದವರು ಕೈ ಕೊಟ್ಟಾಗಲೂ ಹೋಟೆಲ್ ನಡೆಸುವಂತಿರಬೇಕು. ಮತ್ತೊಂದು ಸಮಸ್ಯೆ ಕಳ್ಳತನದ್ದು, ದುಬಾರಿ ಐಟಂಗಳಾದ ಗೋಡಂಬಿ, ಏಲಕ್ಕಿ, ಲವಂಗಗಳನ್ನು ಕೆಲವು ಅಡುಗೆಯವರು ಜೇಬಿನಲ್ಲಿ ಹಾಕಿಕೊಂಡು ಹೋಗಿಬಿಡುತ್ತಾರೆ. ಕೆಲಸಗಾರರು ಮನೆಗೆ ಹೋಗುವಾಗ ಅವರ ಜೇಬನ್ನು ಗಮನಿಸಿ. ಇನ್ನು ಕೆಲವು ಸಪ್ಲಯರ್ಸ್ ಟಿಪ್ಸ್ ಜಾಸ್ತಿ ಕೊಡುವ ರೆಗ್ಯುಲರ್ ಗಿರಾಕಿಗಳ ಸ್ನೇಹ ಸಂಪಾದಿಸಿಕೊಂಡು ಅವರಿಗೆ ಬಹಳಷ್ಟು ಕಡಿಮೆ ಬಿಲ್ ಕೊಟ್ಟು ಹೆಚ್ಚಿಗೆ ಟಿಪ್ಸ್ ಪಡೆಯುತ್ತಾರೆ.
ಗಿರಾಕಿಗಳು ಬೇರೆಬೇರೆಯಾಗಿ ಕೂತು ಉಪಾಹಾರ ಮುಗಿಸಿ ಒಂದೇ ಬಿಲ್ಲನ್ನು ಕೊಟ್ಟು ಹೋಗುವವರಿದ್ದಾರೆ. ಇನ್ನು ಕೆಲವು ಗಿರಾಕಿಗಳನ್ನು ನೀವು ನೋಡಬೇಕು. ಒಬ್ಬ ಬರಿ ಕಾಫಿ ಕುಡಿದು ಸುಮ್ಮನೆ ಕೂತಿರುತ್ತಾನೆ. ಇನ್ನೊಬ್ಬ ಸಕತ್ತು ತಿಂದು, ಸಾಕಷ್ಟು ಪಾರ್ಸಲ್ ಕಟ್ಟಿಸಿಕೊಂಡು ಕಾಫಿಯವನ ಬಿಲ್ಲನ್ನು ತನ್ನ ಬಿಲ್ಲೊಂದಿಗೆ ಬದಲಾಯಿಸಿ ಕಾಫಿಯ 20 ರೂಪಾಯಿಯನ್ನು ಕೊಟ್ಟು ಹೋಗಿ ಬಿಡುತ್ತಾನೆ. ಸ್ವಲ್ಪ ಸಮಯದ ನಂತರ ಕಾಫಿಯವನು ಗಲಾಟೆ ಮಾಡಿ ಅವನೂ ಕೇವಲ 20 ರೂಪಾಯಿ ಕೊಟ್ಟು ಹೋಗುತ್ತಾನೆ. ನನ್ನ ಬಾಲ್ಯಮಿತ್ರನೊಬ್ಬ ಎಷ್ಟೇ ಸುಡುವ ಕಾಫಿಯನ್ನೂ ಕುಡಿಯುತ್ತಿದ್ದ. ಎಲ್ಲ ಹೋಟೆಲಿನಲ್ಲಿ ಕಾಫಿ ಆರ್ಡರ್ ಮಾಡಿ ತಂದಿಟ್ಟ ಕೂಡಲೇ ಗಟಗಟ ಕುಡಿದು ‘ತಣ್ಣನೆ ಕಾಫಿ ಕೊಟ್ಟಿದ್ದೀರಾ’ ಎಂದು ಜಗಳವಾಡಿ ಹಣ ಕೊಡದೇ ಬರುತ್ತಿದ್ದ. ಇನ್ನೊಬ್ಬ ಅರ್ಧ ತಿಂಡಿ ತಿಂದು ಕೊನೆಯಲ್ಲಿ ಕೂದಲೊಂದನ್ನು ಹಾಕಿ ಗಲಾಟೆ ಮಾಡಿ ಹಣ ಕೊಡುತ್ತಿರಲಿಲ್ಲ.
ನಿಮ್ಮದು ಫುಲ್ ಮೀಲ್ಸ್ ಆದ್ರೆ ‘ಭೂತಯ್ಯನ ಮಗ ಅಯ್ಯು’ ಸಿನಿಮಾದಲ್ಲಿ ಆದಂತೆ ಕೂಡ ಆಗಬಹುದು. ಇಂಥ ನಷ್ಟಗಳನ್ನು ತಪ್ಪಿಸಲು ವೇಟರ್ಸ್ ಮತ್ತು ಗಿರಾಕಿಗಳನ್ನು ಗಮನಿಸುತ್ತ ಇರಿ. ಕೇವಲ ಗಲ್ಲಾಪೆಟ್ಟಿಗೆ ಮೇಲೆ ಕೂತು ಹಣ ಎಣಿಸುತ್ತೇನೆ ಎಂದರೆ ಆಗದು.
ಇನ್ನು ಹೋಟೆಲ್ ಸಿಬ್ಬಂದಿಯನ್ನು ನಿರ್ವಹಿಸುವ ಬಗೆ. ಒಬ್ಬ ಮುಖ್ಯ ಬಾಣಸಿಗನನ್ನು ಬಿಟ್ಟು ಮತ್ಯಾರನ್ನೂ ನೇರವಾಗಿ ಅಡುಗೆಯ ಕೆಲಸಕ್ಕೆ ತೆಗೆದುಕೊಳ್ಳದೆ, ಕೆಳಹಂತದ ಕೆಲಸದವರನ್ನೇ ಬೇರೆ ಬೇರೆ ಕೆಲಸಗಳಿಗೆ ತರಬೇತುಗೊಳಿಸುವುದು ಉತ್ತಮ. ಕೆಳಹಂತದ ಕೆಲಸದವರಿಗೆ ಕಡಿಮೆ ಸಂಬಳವಿರುತ್ತದೆ. ಅವರು ಮೇಲಿನ ಹಂತಗಳಿಗೆ ಬಡ್ತಿಯಾದಂತೆಲ್ಲ ಅವರ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆ ಬಗ್ಗೆ ನಿಮಗೆ ಸಾಕಷ್ಟು ಅರಿವು ಮೂಡುವುದರಿಂದ ಜಾಸ್ತಿ ಟೆನ್ಶನ್ ಇರೋದಿಲ್ಲ. ಹಾಗೆಯೇ ಹಳೆಯ ನಂಬಿಗಸ್ಥನನ್ನೇ ಗಲ್ಲಾ ಪೆಟ್ಟಿಗೆ ಮೇಲೆ ಬಿಡಿ. ಹೊಸದಾಗಿ ಸೇರಿದವರು ಹಣವನ್ನು ಲಪಟಾಯಿಸುವ ಸಾಧ್ಯತೆ ಇದೆ. ಸಮಸ್ಯೆಗಳ ಬಗ್ಗೆ ಚರ್ಚೆ ಸಾಕು, ಈಗ ಒಂದಿಷ್ಟು ನನ್ನ ಅನುಭವದ ಕೆಲವು ಟಿಪ್ಸ್ ಕೊಡುತ್ತೇನೆ. ಮೊದಲಿಗೆ ಹೋಟೆಲಿನಲ್ಲಿ ಸಾಧ್ಯವಾದಷ್ಟು ಸ್ವಚ್ಛತೆ ಕಾಪಾಡಿ. ಅಂದಿನ ಮೆನುವನ್ನು ಆಕರ್ಷಣೀಯವಾಗಿ ಬರೆಯಿರಿ. ಉದಾಹರಣೆಗೆ ‘ಇಡ್ಲಿ ಸಿಗುತ್ತದೆ’ ಎಂದು ಬರೆಯುವ ಬದಲಿಗೆ ‘ಮಲ್ಲಿಗೆಯಂಥ ಮೃದುವಾದ ಬಿಸಿಬಿಸಿ ಇಡ್ಲಿ,’ ‘ಹಸುವಿನ ಶುದ್ಧ ತುಪ್ಪದ ದೋಸೆ’, ‘ಘಮಘಮ ಮಲೆನಾಡಿನ ಕಾಫಿ’, ‘ಗರಿಗರಿ ಕೋಡುಬಳೆ’... ಎಂದು ವಿಶೇಷಣಗಳನ್ನು ಸೇರಿಸಿದರೆ ಗ್ರಾಹಕರಿಗೆ ತಾವು ಎಂದೋ ಹಿಂದೆ ಚಪ್ಪರಿಸಿದ ಖಾದ್ಯಗಳ ಚಿತ್ರಣ ಮನಃಪಟಲದಲ್ಲಿ ಮೂಡಿ ಬಾಯಲ್ಲಿ ನೀರೂರುತ್ತದೆ.
ಏನನ್ನೂ ಉಚಿತವಾಗಿ ಕೊಡಬೇಡಿ: ಕೆಲವು ಹೋಟೆಲ್ ಮಾಲೀಕರು ತಮ್ಮ ಆಪ್ತೇಷ್ಟರು ಬಂದಲ್ಲಿ ಬಿಲ್ಲನ್ನು ತೆಗೆದುಕೊಳ್ಳುವುದೇ ಇಲ್ಲ. ಹೀಗೆ ಮಾಡುವುದರಿಂದ ಮರ್ಯಾದಸ್ಥ ಕೆಲವು ಸಂಬಂಧಿಕರು ಮತ್ತೊಮ್ಮೆ ಅಲ್ಲಿಗೆ ಬರುವುದೇ ಇಲ್ಲ. ಫ್ರೀಯ ಬದಲಿಗೆ ಹತ್ತೋ, ಇಪ್ಪತ್ತೋ ಪರ್ಸೆಂಟ್ ರಿಯಾಯಿತಿ ಕೊಡಿ. ನಿಮಗೂ ನಷ್ಟವಿಲ್ಲ, ಅವರಿಗೂ ಮುಜುಗರವಿಲ್ಲ. ಪೆರ್ಡರಿನ ನನ್ನ ನೆಂಟ ಪ್ರಕಾಶ್ ನಾಯಕರು ಶಾಸಕರ ಭವನದಲ್ಲಿ ಕ್ಯಾಂಟಿನ್ ನಡೆಸುತ್ತಿದ್ದರು. ಅವರು ಮುಲಾಜಿನಿಂದ ಯಾವುದೇ ನೆಂಟರಿಂದ ಹಣ ಪಡೆಯದೇ ಕೊನೆಗೆ ನಷ್ಟವಾಗಿ ಹೋಟೆಲನ್ನೇ ಮುಚ್ಚಿ ಸಿಂಗಾಪುರಿಗೆ ಹೋಗಿ ನನ್ನ ಸಲಹೆಯನ್ನು ಪಾಲಿಸಿ, ಹಣ ಮಾಡಿ ಈಗ ಮಣಿಪಾಲದಲ್ಲಿ ಆರಾಮಾಗಿ ಇದ್ದಾರಂತೆ, ಫೋನ್ ಮಾಡಿ ಧನ್ಯವಾದ ತಿಳಿಸಿದ್ದರು.
ನಿಮ್ಮ ಹೋಟೆಲ್ ವಿಶೇಷವಾಗಿರಲಿ: ಜನ ನಿಮ್ಮ ಹೋಟೆಲ್ ಬಗ್ಗೆ ಮಾತಾಡುವ ಹಾಗಿರಬೇಕು. ಇದಕ್ಕೆ ಉದಾಹರಣೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿರುವ ‘ಹಾಫ್ ದೋಸೆ ಹೋಟೆಲ್’. ಇಲ್ಲಿ ಜನ ಸಾಲಿನಲ್ಲಿ ಕಾದು ಅರ್ಧ ದೋಸೆ ತಿನ್ನುತ್ತಾರೆ. ಇವರ ವಿಶೇಷ ಏನಪ್ಪಾ ಅಂದ್ರೆ ದೋಸೆ ಒಬ್ಬರಿಗೆ ಅರ್ಧ ಮಾತ್ರ ಕೊಡುತ್ತಾರೆ. ಸಪ್ಲೈ ಕಮ್ಮಿ ಆದ ಕೂಡಲೇ ಡಿಮಾಂಡ್ ಸೃಷ್ಟಿ ಆಗುತ್ತದೆ. ಡಿಮಾಂಡ್ ಅಂಡ್ ಸಪ್ಲೈ ಪಾಲಿಸಿಯನ್ನು ಅಳವಡಿಸಿಕೊಂಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ‘ಫ್ರೂಟ್ ರಾಜ’ ಎನ್ನುವ ಜ್ಯೂಸ್ ಸ್ಟಾಲಿನಲ್ಲಿ ಹಣ್ಣಿನ ತಿರುಳನ್ನು ತೆಗೆದ ಹಣ್ಣಿನ ಗೊರಟೆಯಲ್ಲೇ ಜ್ಯೂಸ್ ಕೊಡುವಂಥ ವಿಭಿನ್ನ ಮತ್ತು ನವೀನ ಶೈಲಿ ಗ್ರಾಹಕರನ್ನು ಆಕರ್ಷಿಸಿದೆ.
ಒಂದು ಹೋಟೆಲ್ ದಮ್ ಬಿರಿಯಾನಿಗೆ ಹೆಸರು ವಾಸಿ ಯಾಗಿತ್ತು, ಭರ್ಜರಿ ವ್ಯಾಪಾರವಾಗುತ್ತಿತ್ತು. ಒಂದು ದಿನ ‘ಚೆಕ್ಕೆ ಮುಗಿದು ಹೋಗಿದೆ’ ಎಂದು ಅಡುಗೆಯವ ತಿಳಿಸಿದಾಗ ಯಜಮಾನ ಚೆಕ್ಕೆಯಿಲ್ಲದೆ ಬಿರಿಯಾನಿ ಮಾಡಲು ತಿಳಿಸಿದ. ಮಾಲೀಕ ಭಯದಿಂದಲೇ ಜನರನ್ನು ಸಮಾಧಾನ ಮಾಡಲು ತಯಾರಾಗಿ ಕುಳಿತಿದ್ದ. ಆದರೆ ಗ್ರಾಹಕರಾರೂ ಚೆಕ್ಕೆ ಬಗ್ಗೆ ಚಕಾರ ಎತ್ತಲಿಲ್ಲ. ಮಾಲೀಕ ಖುಷಿಯಾಗಿ ಹೋದ. ತಿಂಗಳಿಗೆ ಎರಡೂವರೆ-ಮೂರು ಸಾವಿರ ಚೆಕ್ಕೆಯ ಖರ್ಚು ಉಳಿಯಿತಲ್ಲ ಎಂದು ಬೆರಳು ಮಡಚಿ ಲೆಕ್ಕ ಹಾಕಿ ಖುಷಿ ಪಟ್ಟ. ಮರುದಿನದಿಂದ ಬಿರಿಯಾನಿಗೆ ಚೆಕ್ಕೆ ಇಲ್ಲ. ವ್ಯಾಪಾರ ಏನೂ ಕಮ್ಮಿ ಆಗಲಿಲ್ಲ. ಇನ್ನೊಮ್ಮೆ ಹೀಗೇ ಏಲಕ್ಕಿ ಇರದೇ ಹಾಗೆ ಮಾಡಿದ. ಆಗಲೂ ಗ್ರಾಹಕರು ಮಾತಾಡದೇ ತಿಂದು ಹೋದರು. ನಂತರದ ದಿನಗಳಲ್ಲಿ ಒಂದೊಂದೇ ಐಟಂ ಕಡಿಮೆ ಮಾಡುತ್ತ ಲಾಭ ಜಾಸ್ತಿ ಮಾಡಿಕೊಳ್ಳುತ್ತ ಬಂದ. ಹೀಗೆ ಕಡಿಮೆಯಾಗುತ್ತ ಬಿರಿಯಾನಿ ತನ್ನ ರುಚಿ ಕಳೆದುಕೊಂಡಿತ್ತು. ‘ಛೆ! ಮೊದಲಿದ್ಹಾಗೆ ಇಲ್ಲಾ ರೀ’ ಎಂದು ಗೊಣಗುತ್ತ ಜನರು ಬರೋದೇ ಬಿಟ್ಟರು. ಆ ನಂತರ ಯಜಮಾನ ಏನೇ ಹಾಕಿದರೂ ಕಳೆದು ಹೋದ ಗಿರಾಕಿಗಳು ಮತ್ತೆಂದೂ ಅವನ ಹೋಟೆಲಿನ ಕಡೆ ತಲೆ ಹಾಕಲಿಲ್ಲ. ಹೀಗೆ ಒಮ್ಮೆ ಹೆಸರನ್ನು ಕೆಡಿಸಿಕೊಂಡರೆ ಕಥೆ ಮುಗಿಯಿತು.
ಜೋಕು: ಹೋಟೇಲ್ ನಡೆಸುತ್ತಿದ್ದ ಗುಂಡನಿಗೆ ವ್ಯಾಪಾರಿ ಜೆರ್ಸಿ ಹಸುವನ್ನು ತೋರಿಸಿ ‘ಇದಕ್ಕೆ ಐವತ್ತು ಸಾವಿರ, ದಿನಕ್ಕೆ ಮೂರು ಬಕೆಟ್ ಹಾಲು ಕೊಡುತ್ತೆ’ ಅಂದುದಕ್ಕೆ ಗುಂಡ ‘ದಿನಕ್ಕೆ ಮೂರು ಬಕೆಟಾ? ಹಾಲು ಕೊಡದಿದ್ರೂ ಪರ್ವಾಗಿಲ್ಲ, ಒಂದು ಸ್ಟೀಲ್ ಬಕೆಟಿಗೆ ಕಮ್ಮಿ ಅಂದ್ರೂ ನೂರು ರೂಪಾಯಿ ಇರಲ್ವಾ? ದಿನಕ್ಕೆ ಮೂರು ಬಕೆಟ್ ಅಂದ್ರೂ ಮುನ್ನೂರು ಆಯ್ತು, ತಿಂಗಳಿಗೆ ಒಂಬತ್ತು ಸಾವಿರ, ಆರು ತಿಂಗಳಿಗೆ ಪೈಸಾ ವಸೂಲ್. ಹೋಟೆಲ್ ವ್ಯಾಪಾರ ಯಾಕೆ ಬೇಕು, ಬಕೆಟ್ಗಳನ್ನೇ ಮಾರಿದ್ರೆ ಸಾಕಲ್ವಾ?’ ಅಂತ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತ ಹಸು ಕೊಂಡುಕೊಂಡ.
(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)