ಕಾಮುಗಿಲು ಕವಿದು ಧೋ ಎಂದು ಮಳೆ ಸುರಿಯುವ ಮಳೆಗಾಲದ ಒಂದು ದಿನವದು. ಮನೆಯೊಡತಿ ಎಂದಿನಂತೆಯೇ ದನಕರುಗಳನ್ನು ಹುಲ್ಲು ಮೇಯಲು ಬಿಟ್ಟಿದ್ದಳು. ಹಳ್ಳಿಯ ತುಂಬೆಲ್ಲ ಸ್ವಚ್ಛಂದವಾಗಿ ಮೇಯುತ್ತ ಸಾಗಿದ ದನಕರುಗಳು, ನದಿಯಾಚೆಗೂ ಹುಲ್ಲು ತಿನ್ನುವ ಹಂಬಲದಿಂದ ಹೋದವು. ಅವಕ್ಕೆ ಭಾರಿ ಮಳೆಯ ಗೊಡವೆ ಇಲ್ಲದೆ, ಹೊಟ್ಟೆ ತುಂಬಿಸಿಕೊಳ್ಳುವ ಧಾವಂತ ಮಾತ್ರ ಇದ್ದಿತು. ಸೂರ್ಯಾಸ್ತದ ಸಮಯದಲ್ಲಿ ವರುಣನ ಆರ್ಭಟಕ್ಕೆ ನದಿ ತುಂಬಿ ಹರಿಯಲಾರಂಭಿಸಿತು. ದನಕರುಗಳಿಗೆ ಮನೆಗೆ ತೆರಳಲು ನದಿ ದಾಟಲಸಾಧ್ಯದ ಸ್ಥಿತಿ ಉಂಟಾಯಿತು. ಇತ್ತ ಮನೆಯೊಡತಿ ದನಕರುಗಳನ್ನು ಹುಡುಕುತ್ತ, ನದಿಯಾಚೆಗಿನ ಅವುಗಳ ಮೂಕವೇದನೆ ಮತ್ತು ಮನೆ ಸೇರುವ ತವಕದ ‘ಅಂಬಾ’ ಎಂಬ ಕೂಗನ್ನು ಕೇಳಿಸಿಕೊಂಡಳು. ದಿಕ್ಕು ತೋಚದೆ ಮರುಗಿದಳು.
ಕೆಲ ಕ್ಷಣಗಳಲ್ಲಿ ದೊಡ್ಡ ಹಸುವೊಂದು ಉಕ್ಕಿ ಹರಿಯುತ್ತಿದ್ದ ನದಿಗೆ ಧುಮುಕಿತು. ನೀರಿನ ಸೆಳೆತಕ್ಕೆ ತೇಲುತ್ತ, ಈಜುತ್ತ ಹೆಣಗಾಟ ನಡೆಸಿತು. ಸುಮಾರು ದೂರ ನದಿಯಲ್ಲಿ ಸಾಗಿ ಅಂತೂ ದಡವನ್ನು ಸೇರಿಯೇಬಿಟ್ಟಿತು. ಮನೆಯೊಡತಿಯ ಬಳಿ ಬಂದು ಪ್ರೀತಿಯ ಮೌನದಿ ಮಾತನಾಡಿತು. ಈ ಹಸುವೇನೋ ಬಂತು. ಉಳಿದವುಗಳ ಪಾಡೇನು? ಎಂದು ಮನೆಯೊಡತಿ ವೇದನೆಗೊಳಗಾದಾಗ, ಉಳಿದವು ಕೂಡ ದೊಡ್ಡ ಹಸು ತೋರಿದ ಧೈರ್ಯದ ಪಥದಲ್ಲಿಯೇ ನದಿಗೆ ಜಿಗಿದು, ಪ್ರಯಾಸವಾದರೂ ಆತ್ಮವಿಶ್ವಾಸವೆಂಬ ಪರಿಶ್ರಮದಿಂದ ದಡ ಸೇರಿ, ಮನೆಯೊಡತಿಯ ಪ್ರೀತಿಯ ಬಂಧದ ಕೊಟ್ಟಿಗೆಗೆ ಸೇರಿದವು. ಮೂಕಭಾಷೆಯಲ್ಲಿ ಸಾರ್ಥಕತೆಯನ್ನು ಸಾರಿದವು.
ನಮ್ಮ ಜೀವನದ ನಾಗಾಲೋಟ ಕೂಡ ಹೀಗೆ ಸಾಗುತ್ತಿರುತ್ತದೆ. ಮೊದಮೊದಲು ಕೇವಲ ಆಹಾರ, ವಸತಿ, ಬಟ್ಟೆಯಂಥ ಮೂಲ ಅಗತ್ಯಗಳನ್ನು ಹುಡುಕುತ್ತ ಮುನ್ನಡೆಯುತ್ತೇವೆ. ಈ ಹುಡುಕಾಟದ ಹಾದಿಯಲ್ಲಿ ಇನ್ನೂ ಮುಂದೆ ಪಯಣಿಸಿ, ಅದ್ದೂರಿ ಜೀವನ, ಮತ್ತಷ್ಟು ಇನ್ನಷ್ಟು ಬೇಕೆಂಬ ಹಂಬಲ ಬೆಳೆಸಿಕೊಳ್ಳುತ್ತೇವೆ. ನನ್ನ ಮನೆ, ನಮ್ಮವರು ಎಂಬುದಕ್ಕಿಂತಲೂ ಹೊಸ ಜನ, ಬಣ್ಣಬಣ್ಣದ ಕನಸಿನ ಲೋಕದತ್ತ ಮುಖಮಾಡುತ್ತೇವೆ. ಈ ಹುಡುಕಾಟದಲ್ಲಿ ಬಸವಳಿದು ಅಗತ್ಯ ಮೀರಿದ ಒತ್ತಡವನ್ನು ಅನುಭವಿಸುತ್ತಿದ್ದೇವೆಂಬ ಅರಿವು ಮೂಡಿದಾಗ ನೆಮ್ಮದಿ, ನಮ್ಮವರು ಎಂಬ ಭಾವಬಂಧದ ಮನೆ-ಮನವೆಂಬ ಪುಟ್ಟ ಗೂಡಿನೊಳಗೆ ಇರಬಯಸುತ್ತೇವೆ. ಆದುದರಿಂದ ಯಾವುದೋ ಕ್ಷಣದಲ್ಲಿ ಒತ್ತಡದ ಮಾಯೆಗೋ, ಕಷ್ಟದ ಸಂಕೋಲೆಗೋ ಸಿಲುಕಿದಾಗ, ತಾಳ್ಮೆ ಕಳೆದುಕೊಳ್ಳದೇ ಮೌನ ಅನಂತದ ಭಾಷೆಯೆಂಬಂತೆ, ಪ್ರಶಾಂತ ಮನಸ್ಸಿನಿಂದ ಮರಳಿ, ನೆಮ್ಮದಿ ತಳೆಯಬೇಕಿದೆ. ಜೀವನದಲ್ಲಿ ಯಶಸ್ಸಿನ, ಸಿರಿವಂತಿಕೆಯ ಎವರೆಸ್ಟ್ ಏರಿದರೂ ಮನೆಯೆಂಬ ಮಂದಿರ, ನಮ್ಮವರು ಎಂಬ ಬಂಧನವನ್ನು ನಾವು ಸೇರಲೇಬೇಕಿದೆ.
‘ಮನುಷ್ಯನು ಜಗತ್ತಿನ ಎಲ್ಲ ವಿಷಯಗಳನ್ನು ಅರಿಯುವುದರಲ್ಲಿ ತೋರಿಸುವ ಲವಲವಿಕೆಯನ್ನು ಮೊದಲು ತನ್ನನ್ನು ಅರಿಯುವುದರಲ್ಲಿ ತೋರಿದ್ದರೆ ದುಃಖಕ್ಕೆ ಎಡೆ ಇರುತ್ತಿರಲಿಲ್ಲ’ ಎಂಬ ಶ್ರೀ ಶ್ರೀಧರ ಸ್ವಾಮಿಗಳ ಅಣಿಮುತ್ತಿನಂತೆ, ನಮ್ಮನ್ನು ಅರಿತು, ನಮ್ಮವರು ಮತ್ತು ಕುಟುಂಬದ ಭಾವಬಂಧದಲ್ಲಿ ಕಲೆತು, ಬಾಳದೋಣಿಯನ್ನು ಮುನ್ನಡೆಸುವುದರಲ್ಲೇ ಬಾಳಿನ ಸಾರ್ಥಕತೆ ಇದೆ.
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)