| ದೇವೇಂದ್ರ ಯಕ್ಕುಂಡಿ
ಕೈಬರಹ ವಿಶ್ಲೇಷಣೆಗಾರರು, ಆಪ್ತ ಸಲಹೆಗಾರರು
ಕೋವಿಡ್ ಜಗತ್ತಿನಾದ್ಯಂತ ಸಾಮಾಜಿಕವಾಗಿ, ಆರ್ಥಿಕವಾಗಿ ಸಮಸ್ಯೆಗಳನ್ನು ಉಂಟು ಮಾಡಿರುವಂತೆಯೇ ಶೈಕ್ಷಣಿಕವಾಗಿಯೂ ಅನೇಕ ತೊಂದರೆ ತಂದಿಟ್ಟಿದೆ. ಆಫ್ಲೈನ್ ತರಗತಿಗಳಿಂದ ಪರೀಕ್ಷೆಗಳನ್ನು ಪೂರ್ತಿಗೊಳಿಸಿದರೂ ಅವರಲ್ಲಿ ಆತಂಕ, ಭಯದ ವಾತಾವರಣ ಉಂಟಾಗಿರುವುದನ್ನು ನಿರಾಕರಿಸಲಾಗುವುದಿಲ್ಲ. ವಿವಿಧ ಪದವಿ/ಸ್ನಾತಕೋತ್ತರ ವಿದ್ಯಾರ್ಥಿಗಳು ಸಹ ಇದಕ್ಕೆ ಹೊರತಲ್ಲ. ಇಂತಹ ಆತಂಕಿತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ನಿಮ್ಹಾನ್ಸ್ ಮತ್ತಿತರ ಸಂಸ್ಥೆಗಳು ಗಮನಿಸಿವೆ.
ತಾಂತ್ರಿಕವಾಗಿ ಮುಂದುವರಿದ ದೇಶಗಳಲ್ಲಿ ಬರವಣಿಗೆಗಾಗಿ ತರಗತಿಗಳಲ್ಲಿ ಗಣಕಯಂತ್ರಗಳ ಉಪಯೋಗ ಪ್ರಾರಂಭಿಸಲಾಗಿದೆ. ಆದರೆ ಮಕ್ಕಳ ಕೈಬರಹ ಕುಶಲತೆಗೆ ಗಣಕಯಂತ್ರಗಳು ಪರ್ಯಾಯವಲ್ಲ ಎಂಬುದು ಸಾಬೀತಾಗಿದೆ. ಇದೇ ಕಾರಣಕ್ಕಾಗಿ ಕೈಬರಹ ಕುಶಲತೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕಾಗಿದೆ. ಕೈಬರಹ ಕೇವಲ ಸಂವಹನ ಮಾರ್ಗಸೂಚಿ ಅಷ್ಟೇ ಅಲ್ಲ ಅದು ವ್ಯಕ್ತಿತ್ವ ನಿರ್ಮಾಣ ಮಾಡಬಲ್ಲದು. ಬರವಣಿಗೆ ಒಂದು ಕೌಶಲ ಮತ್ತು ಭಾವನೆ-ಸಂಗತಿಗಳನ್ನು ತಿಳಿಸುವ ಸಂವಹನ. ಅಕ್ಷರಗಳ ರಚನೆ, ಗುರುತಿಸುವಿಕೆ ಎಲ್.ಕೆ.ಜಿ. ಯಿಂದಲೇ ಪ್ರಾರಂಭವಾದರೂ 3ನೇ ವರ್ಗದ ನಂತರ ಭಾವನಾತ್ಮಕವಾಗಿ ವ್ಯಕ್ತಪಡಿಸುವುದನ್ನು ಈ ಕ್ರಿಯೆಯಲ್ಲಿ ಭಾಗವಹಿಸುವುದನ್ನು ಪ್ರಾರಂಭಿಸಲಾಗುವುದು. ಮಗು ತೀವ್ರತರಹದ ಭಾವನಾತ್ಮಕ ಅಂಶಗಳಿಂದ ಬಳಲುತ್ತಿದ್ದಲ್ಲಿ ಕೌಟುಂಬಿಕ ಆಪ್ತ ಸಲಹೆಯನ್ನು ಕೈಗೊಳ್ಳಬೇಕಾಗುತ್ತದೆ. ಅವಶ್ಯವಿದ್ದಲ್ಲಿ ಮಾನಸಿಕ ತಜ್ಞರಿಗೆ ಶಿಫಾರಸು ಮಾಡಬೇಕಾಗುತ್ತದೆ. ಶಿಕ್ಷಕರು ಮತ್ತು ಪಾಲಕರು ಜತೆಯಾಗಿ ಮಕ್ಕಳೊಂದಿಗೆ ಹೆಚ್ಚಿನ ಕಾಳಜಿ ವಹಿಸ ಬೇಕಾಗುತ್ತದೆ.
ಕೈ ನೋವು ತಪ್ಪಿಸಿಕೊಳ್ಳಿ: ಸರಿಯಾದ ಪೆನ್ ಬಳಸಿ, ಪೆನ್ ಹಿಡಿತ ಮಂದವಾಗಿರಲಿ, ಚಲನೆಗೆ ಮುಂಗೈ ಬಳಸಿಕೊಳ್ಳಿ, ನಿಯಮಿತವಾಗಿ ಕೈ, ತೋಳುಗಳಿಗೆ ಸರಳ ವ್ಯಾಯಾಮ ಮಾಡಿ. ಎಡಚರಾಗಿದ್ದರೆ ಬಲವಂತವಾಗಿ ಬಲಗೈಯಿಂದ ಬರೆಯಬೇಡಿ. ಇದಕ್ಕೆ ಪಾಲಕರೂ ಒತ್ತಡ ತರಬಾರದು. ಪ್ರಪಂಚದ ಅನೇಕ ಮಹಾನ್ ವ್ಯಕ್ತಿಗಳು ಎಡಗೈ ಬರಹಗಾರರು ಎಂಬುದು ತಿಳಿದಿರಲಿ (ಉದಾ: ಡಾ. ರಾಜೇಂದ್ರ ಪ್ರಸಾದ್, ಅಮಿತಾಭ್ ಬಚ್ಚನ್, ತೆಂಡುಲ್ಕರ್ ಇತ್ಯಾದಿ).
ಉದ್ಯೋಗಾವಕಾಶವೂ ಇದೆ: ಕೈಬರಹ ವಿಷಯದಲ್ಲಿ ಪರಿಣತಿ ಹೊಂದಿದವರಿಗೆ ಫೊರೆನ್ಸಿಕ್ ಲ್ಯಾಬ್, ಕೌನ್ಸೆಲಿಂಗ್, ಹ್ಯಾಂಡ್ರೈಟಿಂಗ್ ಅನಲಿಸಿಸ್, ಕ್ರೖೆಂ ಬ್ರಾಂಚ್ಗಳಲ್ಲಿ ಉದ್ಯೋಗಾವಕಾಶ ಇದೆ. ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಲಾಗುತ್ತಿದ್ದರೂ, ಕೈಬರಹ ತಜ್ಞರಿಗೆ ಬೇಡಿಕೆ ಇದ್ದೇ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಫೊರೆನ್ಸಿಕ್ ಸೈನ್ಸ್ನಲ್ಲಿ ಬಿಎಸ್ಸಿ/ಎಂಎಸ್ಸಿ ಅಥವಾ ಖಾಸಗಿ ಸಂಸ್ಥೆಗಳ ತರಬೇತಿ ಪಡೆಯಬಹುದು.
ಬರಹಕ್ಕೆ ಮಾನಸಿಕ ಸ್ಥಿತಿಯೂ ಪ್ರಮುಖ: ಸಾಮಾನ್ಯವಾಗಿ ಕೈಬರಹ ಎಂದ ಕೂಡಲೆ ಕಾಪಿ ರೈಟಿಂಗ್ ಬಗ್ಗೆ ಹೇಳುತ್ತೇವೆ. ಕೆಲ ಮಕ್ಕಳು ಕಾಪಿ ರೈಟಿಂಗ್ ಕೂಡ ಅಂದವಾಗಿ ಬರೆದಿರುವುದಿಲ್ಲ ಅಥವಾ ಅಂದವಾಗಿ ಕಾಣುವುದಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳಿರುತ್ತವೆ. ಮಕ್ಕಳ ಮಾನಸಿಕ, ದೈಹಿಕ, ಸಾಮಾಜಿಕ ಪರಿಸ್ಥಿತಿಗಳು ಪರಿಣಾಮ ಬೀರುತ್ತವೆ. ಆದರೆ ಅಧ್ಯಯನ ವಿಷಯಕ್ಕೆ ಬಂದಾಗ ಮಕ್ಕಳ ಮಾನಸಿಕ ಸ್ಥಿತಿ ಉತ್ತಮವಾಗಿರಬೇಕು. ಮಕ್ಕಳು ಬರವಣಿಗೆ ಅಭ್ಯಾಸಕ್ಕೆ ಆಯ್ದುಕೊಳ್ಳುವ ಪೆನ್ನು ಕೂಡ ಕೈಬರಹ/ಹ್ಯಾಂಡ್ರೈಟಿಂಗ್ ಮೇಲೆ ಪರಿಣಾಮ ಬೀರುತ್ತದೆ.
| ದೇವಾಂಶು ವಲ್ಲಭ ಕೈಬರಹ ತಜ್ಞ