ಅಂಕಣ

ಸಾಧನೆಯ ಗುರು ಮಾನವತೆಯ ಮೇರು ಬಾಲಗಂಗಾಧರನಾಥ ಸ್ವಾಮೀಜಿ

ಆದಿಚುಂಚನಗಿರಿ ಕ್ಷೇತ್ರಕ್ಕೆ ಹೊಸರೂಪ ನೀಡಿದ, ಮಠದ ಕಾರ್ಯವನ್ನು ವಿಸ್ತರಿಸಿದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಭೌತಿಕ ಜಗತ್ತಿನಿಂದ ಮರೆಯಾಗಿ ಇದೇ ಸಂಕ್ರಾಂತಿಗೆ ಎಂಟು ವರ್ಷಗಳಾದವು. ತನ್ನಿಮಿತ್ತ ಜನವರಿ13ರಿಂದ 18ರವರೆಗೆ ಆದಿಚುಂಚನಗಿರಿಯಲ್ಲಿ ಸಂಸ್ಮರಣೋತ್ಸವ ಮತ್ತು ಜಯಂತ್ಯುತ್ಸವ ಏರ್ಪಾಡಾಗಿದೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಪ್ಪತ್ತೆರಡನೇ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಪದ್ಮಭೂಷಣ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ನಿಷ್ಕಾಮ ಕರ್ಮಯೋಗಿಗಳು. ಶ್ರೀಗಳು ಶ್ರೀಮಠದ ಸಿದ್ಧಸಿಂಹಾಸನವನ್ನೇರಿದ ಆ ಅಮೃತ ಘಳಿಗೆ ಹೊಸ ಮನ್ವಂತರಕ್ಕೆ ನಾಂದಿಯಾಯಿತು. ಭೈರವನ ಭಕ್ತರಿಗಷ್ಟೇ ಸೀಮಿತವಾಗಿದ್ದ ಶ್ರೀಕ್ಷೇತ್ರವನ್ನು ಕೇವಲ ಮೂರೂವರೆ ದಶಕಗಳಲ್ಲಿ ಮಹಾಕ್ಷೇತ್ರವನ್ನಾಗಿಸಿದ್ದು ವಿಶೇಷ. ತ್ರಿವಿಧ ದಾಸೋಹಿಗಳೆಂದೇ ಜನಮಾನಸದಲ್ಲಿ ನೆಲೆಯಾಗಿರುವ ಸ್ವಾಮಿಗಳವರು ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆಗೈದಿದ್ದಾರೆ.

ಸ್ವಾಮಿಗಳು ಪ್ರಾರಂಭದ ದಿನಗಳಲ್ಲಿ ಎಲ್ಲೂ ದೇವಾಲಯಗಳನ್ನು ಕಟ್ಟಲಿಲ್ಲ. ಜ್ಞಾನಪ್ರಸಾರದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದರಿತು ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡರು. ಗ್ರಾಮೀಣ ಜನತೆ ಉದ್ಧಾರವಾಗಬೇಕಾದರೆ ಮೊದಲು ಆ ಪ್ರದೇಶದ ಬಡಮಕ್ಕಳು ವಿದ್ಯಾವಂತರಾಗಬೇಕು ಎಂಬ ದೃಷ್ಟಿಯಿಂದ ಹಳ್ಳಿಹಳ್ಳಿಗಳಲ್ಲೂ ವಿದ್ಯಾಸಂಸ್ಥೆಗಳನ್ನು ತೆರೆದರು. ನಾಡಿನಾದ್ಯಂತ 475ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು, ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಇಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿವರ್ಷ 1.45 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ.

ಶಿಕ್ಷಣದ ನಂತರ ಶ್ರೀಗಳು ಆರಿಸಿಕೊಂಡುದು ಆರೋಗ್ಯಕ್ಷೇತ್ರವನ್ನು. ಬಡಜನರ ಆರೋಗ್ಯ ರಕ್ಷಣೆಗಾಗಿ ಜವರನಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಎರಡು ಸಾವಿರ ಹಾಸಿಗೆಗಳನ್ನುಳ್ಳ ಬೃಹತ್ ಆಸ್ಪತ್ರೆಯನ್ನು ತೆರೆದರು. ನಂತರ ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರು ಮುಂತಾದೆಡೆ ಅತ್ಯಾಧುನಿಕ ಆಸ್ಪತ್ರೆಗಳನ್ನು ತೆರೆದರು. ಜೊತೆಗೆ ಭಾರತೀಯ ವೈದ್ಯಪದ್ಧತಿ ಪುನರುಜ್ಜೀವನ ನಿಟ್ಟಿನಲ್ಲಿ ಚಿಂತಿಸಿ ಬೆಂಗಳೂರಿನ ವಿಜಯನಗರದಲ್ಲಿ 1996ರಲ್ಲಿಯೇ ಹತ್ತು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ಆಯುರ್ವೆದ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸಿದರು.

ಅಂಧಮಕ್ಕಳ ವಸತಿ ಶಾಲೆ, ಅನಾಥಾಲಯ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಿದರು. ಬರಪೀಡಿತ ಪ್ರದೇಶಗಳಿಂದ ಜಾನುವಾರುಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಲು ಮಂಡ್ಯ, ಬೆಂಗಳೂರು ಮತ್ತು ಚಿತ್ರದುರ್ಗಗಳಲ್ಲಿ ಅತ್ಯಾಧುನಿಕ ಗೋಶಾಲೆಗಳನ್ನು ತೆರೆದರು.

ಸ್ವಾಮಿಗಳವರು ಪರಿಸರ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಮಾತ್ರವಲ್ಲದೆ, ತಮ್ಮ ಅಧ್ಯಕ್ಷತೆಯಲ್ಲಿ ನಾಡಿನ ವಿವಿಧ ಮಠಾಧಿಪತಿಗಳು ಹಾಗೂ ಧರ್ಮಗುರುಗಳನ್ನೊಳಗೊಂಡ ಕರ್ನಾಟಕ ವನಸಂವರ್ಧನ ಟ್ರಸ್ಟ್(ರಿ.) ರಚಿಸಿ, ತನ್ಮೂಲಕ ನಾಡಿನ ಐದು ಕೋಟಿ ಜನಸಂಖ್ಯೆಗೆ ಅನುಗುಣವಾಗಿ ಐದು ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟು ವನ ಸಂವರ್ಧನೆಗೆ ನೀಡಿದ ಕೊಡುಗೆ ಅನುಪಮವಾದುದು.

ಚಿತ್ರದುರ್ಗದ ಶ್ರೀ ಕಬೀರಾನಂದಾಶ್ರಮ, ಹಿರಿಯೂರಿನ ಆದಿಜಾಂಬವಮಠ, ಪಟ್ಟನಾಯಕನ ಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮಾಂಡೇಶ್ವರ ಮಠ, ಮಳವಳ್ಳಿಯ ಶ್ರೀ ರಾಮಾರೂಢ ಮಠ, ಬೆಂಗಳೂರಿನ ಶ್ರೀ ಗೋಸಾಯಿ ಮಠ... ಮುಂತಾದ ಹಿಂದುಳಿದ ವರ್ಗಗಳ ಮಠಗಳ ಸ್ಥಾಪನೆಯಲ್ಲಿ, ಹಾಗೂ ಆ ಮಠಗಳಿಗೆ ಗುರುಗಳನ್ನು ನೇಮಿಸುವಲ್ಲಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ನೀಡಿದ ಸಹಕಾರ, ಪೋ›ತ್ಸಾಹ ಸ್ಮರಣಾರ್ಹ.

ತಮಿಳುನಾಡಿನಲ್ಲಿ ಸುನಾಮಿ ಬಂದಾಗ, ಗುಲ್ಬರ್ಗ ಮುಂತಾದೆಡೆ ನೆರೆಹಾವಳಿ ಸಂಭವಿಸಿದಾಗ, ಶಿವಮೊಗ್ಗದಲ್ಲಿ ಉಂಟಾದ ಕಾಡ್ಗಿಚ್ಚಿನಿಂದ ಜನತೆ ತೊಂದರೆಗೆ ಸಿಲುಕಿದಾಗ, ಉತ್ತರ ಕರ್ನಾಟಕ ಜನತೆ ನೆರೆಹಾವಳಿಯಿಂದ ತತ್ತರಿಸಿ ನೆಲೆ ಕಳೆದುಕೊಂಡಾಗ.....ಹೀಗೆ ಜನತೆ ತೊಂದರೆಗೊಳಗಾದಾಗಲೆಲ್ಲ ಶ್ರೀಮಠದಿಂದ ತಕ್ಷಣವೇ ಸ್ಪಂದಿಸಿದ್ದರು; ತಾವೇ ಸ್ವತಃ ಹೋಗಿ ಸಂಕಷ್ಟಕ್ಕೀಡಾದವರಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ಶ್ರೀ ಬಾಲಗಂಗಾಧರನಾಥರು ಸಕಲ ಮಾನವ ಕುಲಕ್ಕೆ ಲೇಸನೇ ಬಯಸಿದ ಮಹಾನ್ ಮಾನವತಾವಾದಿ. ಇಂದಿನ ಸಮಕಾಲೀನ ಸಮಸ್ಯೆಗಳಿಗೆ ಜ್ಞಾನ ವಿಜ್ಞಾನ ಸಮ್ಮಿಳಿತವಾದ ಧರ್ಮಪರ ದೃಷ್ಟಿಯಿಂದ ಪರಿಹಾರವನ್ನೊದಗಿಸುತ್ತಿದ್ದರು.

ಇಪ್ಪತ್ತು ವರ್ಷಗಳಿಗೂ ಹೆಚ್ಚುಕಾಲ ಶ್ರೀಗುರುಗಳ ಸಾನ್ನಿಧ್ಯದಲ್ಲಿದ್ದು ಸೇವೆ ಸಲ್ಲಿಸಿದ ನಾನು ಕಂಡ, ಅನುಭವಿಸಿದ ನೂರಾರು ಘಟನೆಗಳು ಸ್ಮತಿಪಟಲದಲ್ಲಿ ದಾಖಲಾಗಿವೆ. ಅಂತಹ ಒಂದು ಸ್ಮರಣೀಯ ಘಟನೆ ಇಲ್ಲಿದೆ. ಸ್ವಾಮಿಗಳು ಆದಿಚುಂಚನಗಿರಿ ಕ್ಷೇತ್ರದ ಪ್ರವೇಶ ದ್ವಾರದಲ್ಲಿ ಮಹಾದ್ವಾರ ನಿರ್ವಿುಸಬೇಕೆಂದು ಸಂಕಲ್ಪಿಸಿದರು. ಆ ಸಮಯದಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನ ಭಕ್ತರು ಆಗಮಿಸಿ, ಮಹಾದ್ವಾರದ ನಿರ್ವಣದ ವೆಚ್ಚವನ್ನು ತಾವು ನೀಡುವುದಾಗಿಯೂ, ಅದಕ್ಕಾಗಿ ಸ್ವಾಮಿಗಳವರು ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಒಂದು ವಾರ ಕಾಲ ಪ್ರವಾಸ ಮಾಡಬೇಕೆಂದೂ ಕೋರಿಕೊಂಡರು. ಶ್ರೀಗಳು ಒಪ್ಪಿದರು. ಪ್ರವಾಸ ಕಾಲದಲ್ಲಿ ಭಕ್ತರು ತಮ್ಮ ಮನೆಗಳಿಗೆ ಕರೆದೊಯ್ದು ಪಾದಪೂಜೆ ಮಾಡುವ ಸಮಯದಲ್ಲಿ ನೀಡುವ ಕಾಣಿಕೆಯಿಂದ ಶ್ರೀಕ್ಷೇತ್ರದಲ್ಲಿ ಪ್ರವೇಶ ದ್ವಾರವನ್ನು ನಿರ್ವಿುಸುವುದು ಸ್ವಾಮೀಜಿಯವರ ಸಂಕಲ್ಪವಾಗಿತ್ತು.

ಅದೊಂದು ದಿನ ಕೃಷ್ಣರಾಜಪೇಟೆಯ ಶ್ರೀಮಂತರೊಬ್ಬರ ಮನೆಯಲ್ಲಿ ಪಾದಪೂಜೆಯಿತ್ತು. ಮನೆಯ ಯಜಮಾನನನ್ನು ಕುರಿತು ಸ್ವಾಮೀಜಿ, ‘ದೇವರು ನಿಮ್ಮನ್ನು ಚೆನ್ನಾಗಿ ಇರಿಸಿದ್ದಾನೆ. ಮಹಾದ್ವಾರದ ನಿರ್ವಣಕ್ಕೆ ನೀವು ಹೆಚ್ಚಿನ ಕಾಣಿಕೆಯನ್ನೇ ನೀಡಬಹುದು’ ಎಂದರು. ಆ ಯಜಮಾನರು ‘ಇಲ್ಲಾ.... ಸ್ವಾಮೀಜಿ, ತುಂಬಾ ತೊಂದರೆಯಲ್ಲಿದ್ದೇನೆ. ನಿಗದಿಪಡಿಸಿರುವ ಕಾಣಿಕೆಯನ್ನು ನೀಡುವುದಕ್ಕೇ ಕಷ್ಟವಾಗಿದೆ’ ಎಂದು ಎರಡು ಸಾವಿರ ರೂಪಾಯಿಗಳನ್ನು ಮಾತ್ರ ಅರ್ಪಿಸಿದರು. ಗುರುಗಳು ಅವರ ಮನದಿಂಗಿತ ಅರಿತು ಸುಮ್ಮನಾದರು.

ಪ್ರವಾಸದ ಕೊನೆಯ ದಿನ. ಬೆಳಗಿನಿಂದ ಸಾಮೂಹಿಕ ಪಾದಪೂಜೆಯೂ ಸೇರಿ ಹದಿನೈದಕ್ಕೂ ಹೆಚ್ಚು ಮನೆಗಳಲ್ಲಿ ಪಾದಪೂಜೆ ನೆರವೇರಿತ್ತು. ಅಂದು ನಾನೂ ಊರಿನ ತುಂಬೆಲ್ಲ ಓಡಾಡಿ ಮಠದ ಪತ್ರಿಕೆಗೆ ಐವತ್ತು ಮಂದಿಯನ್ನು ಚಂದಾದಾರರನ್ನಾಗಿ ಮಾಡಿದ್ದೆ. ಅಂದಿನ ಚಂದಾಹಣ ಇಪ್ಪತ್ತೈದು ಸಾವಿರ ರೂಪಾಯಿ ಆಗಿತ್ತು. ಗುರೂಜಿ ಬಳಿ ಹೆಮ್ಮೆಯಿಂದ ಹೇಳಿಕೊಂಡೆ.

ಕೊನೆಯ ಮನೆಯಲ್ಲಿ ಪಾದಪೂಜೆ ಮುಗಿಸಿ ಹೊರಡಲು ಸಿದ್ಧವಾಗುತ್ತಿದ್ದೆವು. ಗೋಧೂಳಿ ಸಮಯ. ಆ ಸಮಯದಲ್ಲಿ ಅವಸರ ಅವಸರವಾಗಿ ಬಂದ ಬಡ ದಂಪತಿ, ‘ಸ್ವಾಮೀಜಿ, ದಯವಿಟ್ಟು ಕ್ಷಮಿಸಿ, ಕೂಲಿ ಕೆಲಸ ಮುಗಿಸಿ ಬರುವುದು ತಡವಾಯಿತು. ಆದಿಚುಂಚನಗಿರಿಯ ಕಾಲಭೈರವೇಶ್ವರ ನಮ್ಮ ಮನೆದೇವರು, ನೀವೇ ನಮ್ಮ ಕುಲಗುರು. ದಯಮಾಡಿ ನಮ್ಮ ಮನೆಗೆ ಬಂದು ಪಾದಪೂಜೆ ಸ್ವೀಕರಿಸಿ ನಮ್ಮನ್ನು ಪಾವನಗೊಳಿಸಬೇಕು’ ಎಂದರು. ಅಲ್ಲಿದ್ದ ಪುರಪ್ರಮುಖರು ‘ನಿನ್ನದೆಂತಹ ಮನೆ ಅಂತಾ ಸ್ವಾಮೀಜಿ ಬರ್ತಾರೆ, ಸಾಮೂಹಿಕ ಪೂಜೆಯಲ್ಲಿಯೇ ಬಂದು ನಮಸ್ಕಾರ ಮಾಡಿಕೊಂಡು ಹೋಗೋದು ಬಿಟ್ಟು ಈಗ ಬಂದಿದ್ದಾನೆ...ಹೋಗಯ್ಯ ಆಗೋದಿಲ್ಲ’ ಎಂದರು. ಆ ದಂಪತಿ ಬಡವರೆಂಬುದು ಮೇಲುನೋಟಕ್ಕೇ ತೋರುತ್ತಿತ್ತು. ಅವರ ಮುಖದಲ್ಲಿ ಆತಂಕದ ಜೊತೆಗೆ ದೈನ್ಯತಾಭಾವವೂ ಆವರಿಸಿತ್ತು. ಸಮಯ ಮೀರುತ್ತಿದೆ, ಆದರೂ ಆಯಿತು ನಡೆಯಪ್ಪ ಎಂದ ಸ್ವಾಮೀಜಿ ಅವರೊಡನೆ ಹೊರಡಲನುವಾದರು. ಅವನೊಡನೆ ಹೆಜ್ಜೆ ಹಾಕುತ್ತಾ ‘ಯಾಕಪ್ಪ ತಡ ಮಾಡಿದೆ, ಬೇಗ ಬರಬಾರದಿತ್ತಾ’ ಎಂದರು. ‘ಸ್ವಾಮೀಜಿ ನಿಮ್ಮನ್ನು ನಮ್ಮ ಮನೆಗೆ ಕರೆದು ಪಾದಪೂಜೆ ಮಾಡಬೇಕೆಂಬ ಆಸೆಯಿಂದ ಒಂದು ತಿಂಗಳಿನಿಂದ ಕೂಲಿಯನ್ನು ಪಡೆಯದೆ ಮೇಸ್ತ್ರಿಯ ಬಳಿಯೇ ಬಿಟ್ಟಿದ್ದೆವು. ಅದನ್ನು ತೆಗೆದುಕೊಂಡು ಬರುವುದು ತಡವಾಯಿತು. ಬೇಸರ ಮಾಡಿಕೊಳ್ಳಬೇಡಿ, ಬೇಗ ಪೂಜೆ ಮಾಡಿಬಿಡುತ್ತೇವೆ’ ಎಂದು ಹೇಳುವಷ್ಟರಲ್ಲಿ ಆತನ ಮನೆ ಬಂದಿತು.

ಬಾಗಿಲಿಗೆ ಆಗ ತಾನೇ ಸೆಗಣಿ ನೀರು ಹಾಕಿ ರಂಗೋಲಿ ಬಿಡಲಾಗಿತ್ತು. ಸ್ವಾಮೀಜಿ ಮನೆ ಬಾಗಿಲಿಗೆ ಬಂದಾಗ, ಹರಿದು ಹೋಗಿದ್ದ ಲಂಗವನ್ನು ತೊಟ್ಟಿದ್ದ ಹತ್ತು-ಹನ್ನೆರಡು ವರ್ಷದ ಹುಡುಗಿ ಗುರುಗಳ ಪಾದ ತೊಳೆದು ಆರತಿ ಬೆಳಗಿದಳು. ಗುರುಗಳು ಮನೆಯೊಳಗೆ ಪ್ರವೇಶಿಸಿದರು. ಮನೆಯನ್ನೆಲ್ಲ ಒಮ್ಮೆ ನೋಡಿದರು. ನಾಡು ಹೆಂಚಿನ ಹಳೆಯ ಮನೆ. ಹೆಂಚುಗಳೆಲ್ಲ ಹಾಳಾಗಿ ಸೂರು ಯಾವಾಗ ಬೀಳುತ್ತದೆಯೋ ಎಂಬ ಸ್ಥಿತಿಯಲ್ಲಿದೆ. ಹಜಾರದಲ್ಲಿಯೇ ಹಸುಗಳನ್ನು ಕಟ್ಟುವ ಕೊಟ್ಟಿಗೆ. ಅಲ್ಲಿಯೇ ಮೂಲೆಯಲ್ಲಿ ಗುರುಗಳು ಕೂರಲು ಕುರ್ಚಿ ಇರಿಸಿದ್ದಾರೆ. ಅಂಗಿಯನ್ನು ಕಳಚಿಟ್ಟು ಹೆಂಡತಿಯೊಡನೆ ಪಾದಪೂಜೆಗೆ ಕುಳಿತ ಗಂಡ. ಹರಿದ ಬನಿಯನ್ನಿನಲ್ಲಿ ಆತನ ಮೈಯೆಲ್ಲಾ ಕಾಣುತ್ತಿದೆ. ಅತ್ಯಂತ ಭಕ್ತಿಯಿಂದ ಪಾದಪೂಜೆ ನೆರವೇರಿಸಿದ ದಂಪತಿ, ತಟ್ಟೆಯಲ್ಲಿ ಬಾಳೆಹಣ್ಣು, ತೆಂಗಿನಕಾಯಿ, ಎಲೆ ಅಡಿಕೆಯ ಜೊತೆ ಐದು ಸಾವಿರ ರೂಪಾಯಿ ಇರಿಸಿ ‘ನಮ್ಮ ಮನೆಗೆ ನೀವು ಬಂದಿದ್ದು ಕುಲದೈವ ಭೈರವನೇ ಬಂದಂತಾಯಿತು. ಮನೆಗೆ ಬಂದು ನಮ್ಮನ್ನು ಉದ್ಧರಿಸಿದ್ದೀರಿ, ಈ ಕಾಣಿಕೆಯನ್ನು ಸ್ವೀಕರಿಸಬೇಕು’ ಎಂದರು. ಗುರುಗಳು ಪಕ್ಕದಲ್ಲಿಯೇ ಇದ್ದ ನನ್ನನ್ನು ಕರೆದು, ‘ಪತ್ರಿಕೆಯ ಚಂದಾಹಣ ಇಪ್ಪತ್ತೈದು ಸಾವಿರ ಇದೆ ಎಂದೆಯಲ್ಲ ಅದನ್ನು ಕೊಡು’ ಎಂದರು. ಗುರೂಜಿಯವರು ಗುರುದಕ್ಷಿಣೆಯ ತಟ್ಟೆಯಲ್ಲಿಟ್ಟಿದ್ದ ಐದು ಸಾವಿರದ ಜೊತೆಗೆ ಈ ಹಣವನ್ನೂ ಇರಿಸಿ, ತಟ್ಟೆಯನ್ನು ಹಿಡಿದು, ‘ಈ ಹಣದಲ್ಲಿ ನಿನ್ನ ಮನೆಯನ್ನು ರಿಪೇರಿ ಮಾಡಿಸು. ಹೆಂಡತಿ ಮಕ್ಕಳಿಗೆ ಹೊಸ ಬಟ್ಟೆ ಹೊಲಿಸು. ಶ್ರೀಕ್ಷೇತ್ರಕ್ಕೆ ಬಾ, ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆ’ ಎಂದು ಹರಸಿ ಹೊರಟರು.

ಶ್ರೀಗಳ ಅಂತಃಕರಣಕ್ಕೆ ಇದೊಂದು ಸಾಕ್ಷಿಯಷ್ಟೆ. ಇಂಥ ಘಟನೆಗಳು ಅದೆಷ್ಟೋ...

(ಲೇಖಕರು ಹವ್ಯಾಸಿ ಬರಹಗಾರರು )