ಅಂಕಣ

ವಿವಾಹಬಂಧದ ಬದಲು ಬಂಧನ: ಆ ಕ್ಷಣ..

ಸರಿತಾ ಉತ್ತರ ಭಾರತದ ರಾಜ್ಯವೊಂದರ ಪುಟ್ಟ ಗ್ರಾಮದಲ್ಲಿ ತಾಯಿ ಮತ್ತು ಇಬ್ಬರು ಅಣ್ಣಂದಿರೊಂದಿಗೆ ವಾಸವಾಗಿದ್ದಳು. ಅವಳ ಹಿರಿಯಣ್ಣ ಮದುವೆಯಾಗಿ ನಗರವೊಂದರಲ್ಲಿ ಶಿಕ್ಷಕನಾಗಿದ್ದ. ತಾಯಿ ಮತ್ತು ಇಬ್ಬರು ಸೋದರರು ಕುಟುಂಬದ ಒಡೆತನದ ಐದು ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದರು. 17 ವರ್ಷ ವಯಸ್ಸಿನ ಸರಿತಾ ಪಕ್ಕದ ಗ್ರಾಮದ ಸರ್ಕಾರಿ ಶಾಲೆಯಲ್ಲಿ 12 ನೆಯ ತರಗತಿಯಲ್ಲಿ ಕಲಿಯುತ್ತಿದ್ದು ಆಗ ತಾನೇ ಅಂತಿಮ ಪರೀಕ್ಷೆಗಳನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು.

21 ವರ್ಷ ವಯಸ್ಸಿನ ಸಂಜಯ್ ಸರಿತಾಳ ರಾಜ್ಯದವನೇ ಆದ ಅಂಧ ಯುವಕ. ಬಡ ಕುಟುಂಬದಿಂದ ಬಂದಿದ್ದ ಆತ ಅಂಧರ ಶಾಲೆಗೆ ಸೇರಿ ವಿದ್ಯಾಭ್ಯಾಸವನ್ನು ಮುಂದುವರಿಸಿದ. ಹೈಸ್ಕೂಲಿಗೆ ಬಂದಾಗ ಆತ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡ. ಇದನ್ನು ಕಂಡ ಮಾಸ್ತರರೊಬ್ಬರು ಅವನಿಗೆ ಕ್ರಿಕೆಟ್ ಆಡಲು ಪ್ರೇರೇಪಿಸಿದರು. ಕ್ರಿಕೆಟ್​ನಲ್ಲಿ ಪ್ರಾವೀಣ್ಯ ಗಳಿಸಿದ ಸಂಜಯ್ ಅಂಧರ ರಾಜ್ಯ ಕ್ರಿಕೆಟ್ ತಂಡಕ್ಕೆ ಸೇರ್ಪಡೆಗೊಂಡ. ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿ ರಾಜ್ಯ ತಂಡದ ನಾಯಕನಾದ. ಮುಂದೆ ಅವನನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಯಿತು. ಆತ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿಯೂ ಉತ್ತಮವಾಗಿ ಆಡಿ ಭಾರತ ತಂಡದ ಪ್ರಮುಖ ಆಟಗಾರನಾದ. ಅವನ ಆರ್ಥಿಕ ಸ್ಥಿತಿ ಸುಧಾರಿಸಿತು. ಆತ ತನ್ನ ರಾಜ್ಯದ ರಾಜಧಾನಿಯಲ್ಲಿ ವಾಸಿಸುತ್ತಿದ್ದ.

ಒಂದು ರಜಾದಿನದಂದು ಸಮಾರಂಭವೊಂದಕ್ಕಾಗಿ ಸಂಜಯ್ ತನ್ನ ಸಂಬಂಧಿಕರ ಮನೆಗೆ ಹೋದ. ಅಲ್ಲಿ ಅವನಿಗೆ ಅವನ ಸಂಬಂಧಿಕನ ಪತ್ನಿ ಸರಿತಾ ತನ್ನ ಖಾಸಾ ಗೆಳತಿಯೆಂದೂ ಆಕೆ ಪಕ್ಕದ ಗ್ರಾಮದವಳೆಂದೂ ಪರಿಚಯ ಮಾಡಿಕೊಟ್ಟಳು. ಇಬ್ಬರೂ ಮಾತಿಗಾರಂಭಿಸಿದರು. ‘ನೀವು ಎರಡೂ ಕಣ್ಣುಗಳನ್ನು ಮುಚ್ಚಿರುವರೇಕೆ?’ ಎಂದು ಸರಿತಾ ಕೇಳಿದಾಗ, ‘ನಾನು ಹುಟ್ಟು ಕುರುಡನಲ್ಲ, ಕಾಲಕ್ರಮೇಣ ಕುರುಡನಾದೆ. ನನಗೆ ರಾತ್ರಿ ವೇಳೆಯಲ್ಲಿ ಪೂರ್ತಿ ಕಣ್ಣು ಕಾಣುವುದಿಲ್ಲ, ಬೆಳಗ್ಗೆ ಮಸುಕು ಮಸುಕಾಗಿ ಕಾಣುತ್ತದೆ’ ಎಂದ. ‘ನೀನು ಸುಂದರಿ ಎಂಬುದನ್ನು ಕಂಡಿದ್ದೇನೆ’ ಎಂದ. ಸರಿತಾ ನಾಚಿದಳು. ತಾನು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಆಟವಾಡಿದ ಬಗ್ಗೆ ರೋಚಕ ಕಥೆಗಳನ್ನು ಅವಳಿಗೆ ಹೇಳಿದ. ಅವನು ಧರಿಸಿದ ಬಟ್ಟೆ, ಕೈಗಡಿಯಾರ ಮುಂತಾದುವನ್ನು ನೋಡಿದ ಸರಿತಾ ಅವನಲ್ಲಿ ಅನುರಕ್ತಗೊಂಡಳು. ಇಬ್ಬರೂ ತಂತಮ್ಮ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಂಡರು.

ಇಬ್ಬರೂ ಪ್ರತಿದಿನ ಫೋನಿನಲ್ಲಿ ಮಾತನಾಡತೊಡಗಿದರು. ಸುಮಾರು ಮೂರು ತಿಂಗಳ ನಂತರ ಮತ್ತೊಮ್ಮೆ ತನ್ನ ಸಂಬಂಧಿಕರ ಮನೆಗೆ ಬಂದ ಸಂಜಯ್ ಸರಿತಾಳನ್ನು ಭೇಟಿಮಾಡಿ ತನ್ನನ್ನು ಲಗ್ನವಾಗುವೆಯಾ ಎಂದು ಕೇಳಿದ. ‘ನಾನು ಒಪ್ಪಿದರೂ ಕುಟುಂಬದವರು ಒಪ್ಪಲಾರರು’ ಎಂದಳು ಆಕೆ. ಹಾಗಾದರೆ ನಾವಿಬ್ಬರೂ ಓಡಿ ಹೋಗಿ ಮದುವೆ ಮಾಡಿಕೊಳ್ಳೋಣವೆಂದ. ಆಕೆ ಒಪ್ಪಿದಳು. ‘ಒಂದು ವಾರದ ನಂತರ ವಾಹನವನ್ನು ತೆಗೆದುಕೊಂಡು ಬಂದು ನಿನಗೆ ಫೋನ್ ಮಾಡುವೆ, ನೀನು ಮನೆಯಿಂದ ಓಡಿ ಬಾ’ ಎಂದ.

2021ರ ಜುಲೈ ತಿಂಗಳ ಒಂದು ಸಂಜೆ ಜಮೀನಿನಿಂದ ಜಾನುವಾರುಗಳಿಗೆ ಹುಲ್ಲನ್ನು ತರುತ್ತೇನೆಂದು ಹೊರಟ ಸರಿತಾ ರಾತ್ರಿ ಎಂಟಾದರೂ ಮನೆಗೆ ವಾಪಸಾಗಲಿಲ್ಲ. ಅವಳ ತಾಯಿ ಆತಂಕಗೊಂಡು ಅವಳನ್ನು ಹುಡುಕಲು ಗಂಡು ಮಕ್ಕಳನ್ನು ಕಳುಹಿಸಿದಳು. ರಾತ್ರಿಯೆಲ್ಲಾ ಹುಡುಕಾಡಿದರೂ ಸೋದರಿ ಸಿಗದಿದ್ದಾಗ ಹಿರಿಯ ಸೋದರನಿಗೆ ಮಾಹಿತಿ ಹೋಯಿತು. ಆತ ರಾತ್ರಿಯೇ ಮನೆಗೆ ಬಂದ. ಬೆಳಿಗ್ಗೆ ಮತ್ತೊಮ್ಮೆ ಹುಡುಕಾಡಿದರು. ಸರಿತಾ ಸಿಗಲಿಲ್ಲ. ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಅವಳನ್ನು ಯಾರೋ ಅಪಹರಿಸಿದ್ದಾರೆ ಎಂದು ದೂರಿದ ಹಿರಿಯಣ್ಣ. ಪೊಲೀಸರು ಪ್ರಕರಣ ದಾಖಲಿಸಿ ಸರಿತಾಳ ಸ್ನೇಹಿತರನ್ನು ವಿಚಾರಿಸಿದರು. ಅವಳು ಸಂಜಯ್ನ ಜೊತೆ ಓಡಿಹೋಗಿರಬಹುದು ಎಂದು ಅವರು ಹೇಳಿದರು. ಆಗಸ್ಟ್ 8 ರಂದು ಪೊಲೀಸರು ಸಂಜಯ್ನ ಸೋದರಿಯ ಮನೆಗೆ ದಾಳಿ ಮಾಡಿ ಅಲ್ಲಿದ್ದ ಯುವಜೋಡಿಯನ್ನು ವಶಕ್ಕೆ ಪಡೆದರು.

ತಾವಿಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಲು ನಿರ್ಧರಿಸಿರುವುದಾಗಿ ಸಂಜಯ್ ತಿಳಿಸಿದ. ಆಗ ಸರಿತಾಳ ಸೋದರ ಆಕೆ ಇನ್ನೂ 17 ವರ್ಷದವಳೆಂಬ ದಾಖಲೆಗಳನ್ನು ತನಿಖಾಧಿಕಾರಿಗೆ ನೀಡಿದ. ‘ನನ್ನನ್ನು ಗ್ರಾಮದಿಂದ ಕರೆದುಕೊಂಡು ಹೋಗಲು ಸಂಜಯ್ ರಾತ್ರಿ ಕಾರಿನಲ್ಲಿ ಬಂದ. ಅಲ್ಲಿಂದ ಹೊರಟ ನಾವು ಹತ್ತಿರದ ಪಟ್ಟಣದಲ್ಲಿದ್ದ ಹೊಟೇಲೊಂದಕ್ಕೆ ಹೋಗಿ ಆ ರಾತ್ರಿ ಅಲ್ಲಿ ತಂಗಿದೆವು. ಮಾರನೆಯ ದಿನ ಸಂಜಯ್ನ ಸೋದರಿಯ ಮನೆಗೆ ಹೋದೆವು. ಅಲ್ಲಿ ನಾಲ್ಕು ದಿನ ಇದ್ದೆವು. ಆ ಸಮಯದಲ್ಲಿ ಸಂಜಯ್ ನನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ. ಆನಂತರ ಸಂಜಯ್ ನನ್ನನ್ನು ತನ್ನ ಇನ್ನೊಬ್ಬ ಸೋದರಿಯ ಮನೆಗೆ ಕರೆದುಕೊಂಡು ಹೋದ. ಪೊಲೀಸರು ಬರುವವರೆಗೂ ಅಲ್ಲಿದ್ದೆವು’ ಎಂದು ಸರಿತಾ ಮಹಿಳಾ ಪೊಲೀಸ್ ಅಧಿಕಾರಿಗಳ ಮುಂದೆ ತಿಳಿಸಿದಳು. ಇಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಯಿತು. ಅಲ್ಲಿ ಅವರ ದೈಹಿಕ ಪರೀಕ್ಷೆ ಮಾಡಿ ರಕ್ತದ ಮಾದರಿಗಳನ್ನೂ ತೆಗೆದುಕೊಳ್ಳಲಾಯಿತು.

ಸರಿತಾಳನ್ನು ಪರೀಕ್ಷಿಸಿದ ವೈದ್ಯರು ಅವಳ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ. ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿರುವ ಕುರುಹುಗಳಿಲ್ಲ, ಅವಳ ಕನ್ಯಾಪೊರೆ ಇರಲಿಲ್ಲ ಎಂಬ ವರದಿ ನೀಡಿ, ಅವಳ ಗುಪ್ತಾಂಗದಲ್ಲಿನ ದ್ರವವನ್ನು ಮತ್ತು ಅವರಿಬ್ಬರ ರಕ್ತದ ಮಾದರಿಗಳನ್ನು ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಶಾಲೆಗೆ ಕಳುಹಿಸಲಾಗಿದೆ ಎಂದರು. ಪೊಲೀಸರೂ ಸರಿತಾಳ ಒಳಉಡುಪು ಮತ್ತು ಬಟ್ಟೆಗಳನ್ನು ವೀರ್ಯಾಣುಗಳ ಪತ್ತೆಗಾಗಿ ಪ್ರಯೋಗಶಾಲೆಗೆ ಕಳಿಸಿದರು. ಆ ಸಮಯಕ್ಕೆ ಸ್ಪಷ್ಟವಾಗಿದ್ದ ಎರಡು ವಿಷಯಗಳೇನೆಂದರೆ ಸರಿತಾ ಅಪ್ರಾಪ್ತಳು ಹಾಗೂ ಆಕೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಳು ಎನ್ನುವುದು. ಸಂಜಯನೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಎನ್ನುವುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಬೇಕಾಗಿತ್ತು. ಈ ನಡುವೆ ಪೊಲೀಸರು

ಸರಿತಾಳಿಗೆ ‘ನೀನು ನಡೆದ ವಿಷಯದ ಬಗ್ಗೆ ಮ್ಯಾಜಿಸ್ಟ್ರೇಟರ ಮುಂದೆ ಹೇಳಿಕೆ ನೀಡುವೆಯಾ’ ಎಂದು ಕೇಳಿದಾಗ ಆಕೆ ಒಪ್ಪಿ ಮಾರನೆಯ ದಿನವೇ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸಂಜಯ್ ತನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ನಂಬಿಸಿ ಅತ್ಯಾಚಾರ ನಡೆಸಿದ್ದಾಗಿ ಹೇಳಿದಳು. ಸಿಆರ್​ಪಿಸಿ ಕಲಂ 164ರನ್ವಯ ಈ ಹೇಳಿಕೆ ದಾಖಲಾಯಿತು.

ಪ್ರಯೋಗಶಾಲೆಯ ವರದಿಯಲ್ಲಿ, ಸರಿತಾಳ ದೇಹದಲ್ಲಿನ ದ್ರವದಲ್ಲಿ ವೀರ್ಯಾಣುಗಳು ಇದ್ದವೆಂದೂ ಅವನ್ನು ಮತ್ತು ಸಂಜಯ್ನ ರಕ್ತದ ಮಾದರಿಯನ್ನು ಡಿ.ಎನ್.ಎ ಪರೀಕ್ಷೆಯಲ್ಲಿ ಹೋಲಿಸಿದಾಗ ಎರಡೂ ಒಬ್ಬನದೇ ದೇಹದಿಂದ ಬಂದಿದ್ದವೆಂದೂ ತಿಳಿಯಿತು. ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಸಂಜಯ್ನ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟರ ಮುಂದೆ ತಾನು ಈ ಹಿಂದೆ ಕೊಟ್ಟ ಹೇಳಿಕೆಯನ್ನು ಸರಿತಾ ಸಮರ್ಥಿಸಿದಳು. ಆದರೆ ಹತ್ತು ದಿನಗಳ ನಂತರ ನಡೆದ ಮುಂದಿನ ವಿಚಾರಣೆಯಲ್ಲಿ ಆಕೆ ಸಂಜಯ್ ಯಾರೆಂದು ತನಗೆ ಗೊತ್ತೇ ಇಲ್ಲವೆಂದೂ, ಆತ ತನ್ನನ್ನು ಅಪಹರಿಸಿಲ್ಲವೆಂದೂ, ತನ್ನ ಮೇಲೆ ಅತ್ಯಾಚಾರ ನಡೆಸಿಲ್ಲವೆಂದೂ ತಿಳಿಸಿದಳು. ಹೀಗಾಗಿ ಪ್ರಾಸಿಕ್ಯೂಷನ್ ಪರ ವಕೀಲರು ಅವಳ ಮರುವಿಚಾರಣೆಯನ್ನು ಮಾಡಬೇಕಾಯಿತು. ಆಗಲೂ ಆಕೆ ಸ್ಪಷ್ಟವಾಗಿ ಏನನ್ನೂ ತಿಳಿಸಲಿಲ್ಲ. ಸಂತ್ರಸ್ತಳಾಗಿದ್ದ ಆಕೆಯೇ ಅತಿ ಪ್ರಮುಖ ಸಾಕ್ಷಿಯಾಗಿದ್ದ ಕಾರಣ ಆಕೆ ಯಾರದೋ ಪ್ರಭಾವಕ್ಕೊಳಗಾಗಿ ಹೀಗೆ ವರ್ತಿಸಿರಬಹುದೆಂಬ ಶಂಕೆ ನ್ಯಾಯಾಧೀಶರಲ್ಲಿ ಮೂಡಿತು.

ನ್ಯಾಯಾಲಯದಲ್ಲಿ ಮಂಡಿಸಲಾಗಿದ್ದ ಸಾಕ್ಷ್ಯದಲ್ಲಿ ವಿದಿತವಾಗಿದ್ದ ಅಂಶಗಳೆಂದರೆ- ಸರಿತಾ 17 ವರ್ಷ ವಯಸ್ಸಿನವಳಾಗಿದ್ದು ಮನೆಯಿಂದ ಓಡಿಹೋಗಿದ್ದಳು; ಆಕೆ ಸಂಜಯ್ನ ಜತೆ ಸುಮಾರು ಒಂದು ವಾರ ಕಾಲ ಇದ್ದಳು; ಸಂಜಯ್ ಹಾಗೂ ಅವಳ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿತ್ತು ಎನ್ನುವುದು. ಸಂಜಯ್ ಸಂಪೂರ್ಣ ಅಂಧನಾಗಿರುವುದು ನಿರ್ವಿವಾದವಾಗಿತ್ತು. ಆತ ಒಬ್ಬಂಟಿಗನಾಗಿ ಸರಿತಾಳನ್ನು ಅಪಹರಿಸಿಕೊಂಡು ಹೋಗಬಲ್ಲನೇ ಎನ್ನುವುದೇ ವಿವಾದಾಸ್ಪದವಾಗಿತ್ತು. ಆದರೆ ಅವನ ವಕೀಲರು ಈ ಬಗ್ಗೆ ವಾದವನ್ನೇ ಮಾಡಿರಲಿಲ್ಲ. ಈ ಇಡೀ ಪ್ರಕರಣದಲ್ಲಿ ಸಂಜಯ್ ಯಾರದೋ ಸಹಾಯ ತೆಗೆದುಕೊಂಡಿರಲೇಬೇಕು ಎಂದು ನ್ಯಾಯಾಧೀಶರಿಗೆ ಅನಿಸಿದರೂ ಪೊಲೀಸರು ಈ ಬಗ್ಗೆ ಯಾವ ಸಾಕ್ಷ್ಯವನ್ನೂ ಸಂಗ್ರಹಿಸಿರಲಿಲ್ಲ. ಸರಿತಾ ಸ್ವಇಚ್ಛೆಯಿಂದಲೇ ಆರೋಪಿಯ ಜತೆಗೆ ಓಡಿಹೋಗಿದ್ದು ಅವನೊಡನೆ ಸ್ವಇಚ್ಛೆಯಿಂದಲೇ ಲೈಂಗಿಕ ಕ್ರಿಯೆ ನಡೆಸಿರಬಹುದು ಎಂಬ ಸಂದೇಹ ಬಂದರೂ ನ್ಯಾಯಾಲಯವು ಸಂಜಯ್ನನ್ನು ಶಿಕ್ಷಿಸದೇ ಇರಲು ಸಾಧ್ಯವಿರಲಿಲ್ಲ. ಏಕೆಂದರೆ ಪೋಸ್ಕೋ ಪ್ರಕರಣದಲ್ಲಿ ಒಬ್ಬ ಬಾಲಕಿಯ ಜತೆಗೆ ಅವಳ ಇಚ್ಛೆಯ ಮೇರೆಗೇ ಲೈಂಗಿಕ ಕ್ರಿಯೆ ನಡೆಸಿದರೂ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಹೀಗಾಗಿ ಸರಿತಾಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಕಾರಣಕ್ಕಾಗಿ ಸಂಜಯ್ಗೆ ನ್ಯಾಯಾಲಯವು ಪೋಸ್ಕೋ ಕಾಯಿದೆಯಡಿಯಲ್ಲಿ 10 ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಿತಲ್ಲದೇ ಅಪಹರಣದ ಅಪರಾಧಕ್ಕಾಗಿ 3 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು.

ಒಂದು ವೇಳೆ ಸರಿತಾಗೆ ಕಾನೂನಿನನ್ವಯ ಸಮ್ಮತಿಯ ವಯಸ್ಸಾದ 18 ವರ್ಷ ತುಂಬಿದ್ದರೆ ಸಂಜಯ್ನಿಗೆ ತೊಂದರೆಯೇ ಬರುತ್ತಿರಲಿಲ್ಲ. ಸಮ್ಮತಿಯ ವಯಸ್ಸನ್ನು ಇಳಿಸಬೇಕೆಂಬ ಕೂಗು ದೇಶದಲ್ಲಿ ಈಗ ಚರ್ಚೆಯಾಗುತ್ತಿದೆ. ‘ಬದುಕು ಜಟಕಾಬಂಡಿ ವಿಧಿಯದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ’ ಎಂದು ಡಿವಿಜಿಯವರು ಹೇಳಿದಂತೆ, ಅಂಧತ್ವವನ್ನು ಮೆಟ್ಟಿನಿಂತು ಕ್ರೀಡೆಯಲ್ಲಿ ಅಸಾಧಾರಣ ಸಾಧನೆಗೈದವನ ಜೀವನಯಾತ್ರೆಯನ್ನು ಕೀರ್ತಿಶಿಖರಕ್ಕೇರಿಸಿ ಮತ್ತೆ ಅಂಧಕಾರದಲ್ಲಿ ಮುಳುಗಿಸಿದ್ದು ವಿಧಿಯ ಆಟವೇ ಸರಿ. ಪಾದ ಕುಸಿಯುವ ನೆಲದ ಮೇಲೆ ನಡೆಯುವಾಗ ಎಚ್ಚರದಿಂದಿರಬೇಕೆನ್ನುವುದನ್ನು ಯೌವ್ವನ ಮರೆಸಿತೇನೋ...

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)