ಕರೊನಾ ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಖರೀದಿಸಿದ ಆರೋಗ್ಯ ಪರಿಕರಗಳಲ್ಲಿ -ಠಿ; 2 ಸಾವಿರ ಕೋಟಿ ಅವ್ಯವಹಾರವಾಗಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆಪಾದನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಆರೋಪಗಳ ಬೆನ್ನಲ್ಲೇ ಬಿಜೆಪಿ ಸರ್ಕಾರದ ಐವರು ಸಚಿವರುಗಳು ದಾಖಲೆಗಳನ್ನು ಮಂಡಿಸಿ, ಅವ್ಯವಹಾರ ನಡೆದಿರುವುದನ್ನು ನಿರಾಕರಿಸಿದ್ದಾರೆ. ಹಾಗಾದರೆ ಇವರಲ್ಲಿ ಯಾರು ಸತ್ಯವಂತರು ಎಂಬುದು ಯಕ್ಷಪ್ರಶ್ನೆಯಾಗಿದೆ. ಇದರ ಸತ್ಯಾಸತ್ಯತೆ ಜನರಿಗೆ ತಿಳಿಯಬೇಕು. ಬರೀ ಆರೋಪ-ಪ್ರತ್ಯಾರೋಪಗಳಿಂದ ಯಾವುದೂ ಸಾಬೀತಾಗುವುದಿಲ್ಲ. ಅಲ್ಲದೆ, ಕರೊನಾ ಸಂಕಷ್ಟದ ಸಮಯದಲ್ಲಿ ರಾಜಕೀಯ ಹಿತಕ್ಕಾಗಿ ಪ್ರಯತ್ನಿಸುವುದು ಸರಿಯಲ್ಲ.
ಆರೋಗ್ಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆಯೇ ಅಥವಾ ಪಾರದರ್ಶಕ ವ್ಯವಹಾರ ಮಾಡಲಾಗಿದೆಯೇ ಎಂಬುದು ತನಿಖೆ ಮೂಲಕವೇ ಹೊರಬರಲಿ. ಈ ವಿಷಯದಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡುವುದಕ್ಕಿಂತ ತನಿಖೆಗೆ ಆದೇಶಿಸುವುದು ಸೂಕ್ತ. ಆಗಲೇ ವಾಸ್ತವ ಸಂಗತಿ ಜನರ ಮುಂದೆ ಅನಾವರಣಗೊಳ್ಳಬಲ್ಲದು.
| ವಿ.ಜಿ.ಇನಾಮದಾರ ಸಾರವಾಡ (ವಿಜಯಪುರ ಜಿಲ್ಲೆ)