ಹಿರಿಯರೊಬ್ಬರು ಹೇಳಿದ ಘಟನೆ. ಆಕೆ ಶ್ರೀಮಂತರ ಮನೆಕೆಲಸ ಮಾಡುತ್ತಿದ್ದ ನಂಬಿಕೆಗೆ ಅರ್ಹಳಾದ ಮಹಿಳೆ. ಪ್ರತಿದಿನ ಶ್ರೀಮಂತರ ಮನೆ ಕೆಲಸ ಮುಗಿಸಿ ಹೋಗುವಾಗ ಆಕೆಯ ಸೆರಗಿನ ಮರೆಯಲ್ಲಿ ಅದೇನೋ ಕೊಂಡೊಯ್ಯುತ್ತಿದ್ದಳು. ಅದೊಂದು ದಿನ ಆ ಮನೆಯ ಸೊಸೆ ಅದನ್ನು ಗಮನಿಸಿ ಅತ್ತೆಗೆ ತಿಳಿಸಿದಳು. ಆದರೆ, ಕೇಳುವುದು ಹೇಗೆ?! ಮನೆಯ ವಸ್ತುಗಳ್ಯಾವೂ ಕಳವಾಗಿರಲಿಲ್ಲ. ಮಾರನೆಯ ದಿನವೂ ಎಂದಿನಂತೆ ಕೆಲಸದ ಹೆಂಗಸು ಸೆರಗಿನ ಮರೆಯಲ್ಲಿ ಏನನ್ನೋ ಇಟ್ಟು ಹೊರ ನಡೆಯುತ್ತಾಳೆ. ಒಳಗಿನ ವಸ್ತುಗಳು, ಮಾಡಿದ ಅಡುಗೆ ಎಲ್ಲವೂ ಯಥಾ ಸ್ಥಿತಿಯಲ್ಲಿವೆ. ಪ್ರಶ್ನಿಸಲು ಸಾಧ್ಯವಾಗದ ಸಂದಿಗ್ಧತೆ!
ಮನೆಯೊಡತಿ ಅಡುಗೆ ಮನೆಗೆ ಸಿಸಿ ಕ್ಯಾಮರವನ್ನೂ ಹಾಕಿಸುತ್ತಾಳೆ. ಎಂದಿನಂತೆ ಆ ಹೆಂಗಸು ಕೆಲಸ ಮುಗಿಸಿ ಸೆರಗಿನ ಮರೆಯಲ್ಲಿ ಏನನ್ನೊ ಇಟ್ಟುಕೊಂಡು ಹೊರಡುತ್ತಾಳೆ. ಮನೆಯವರಿಗೆ ಕುತೂಹಲ, ಸಿಸಿ ಟಿವಿ ಫೂಟೇಜ್ನಲ್ಲಿ ಅದೇನೋ ವಸ್ತು ಕವರಿನಲ್ಲಿ ಇಟ್ಟುಕೊಂಡು ಹೋಗುವ ದೃಶ್ಯ.ಅದು ಮನೆಯವರು ತಿಂದುಳಿಸಿದ ಆಹಾರ! ಒಯ್ಯುತ್ತಿರುವುದೆಲ್ಲಿಗೆ?! ಮಾರನೇ ದಿನ ಮನೆಯೊಡತಿ ಕಾರ್ ಡ್ರೖೆವರಿಗೆ ಇದನ್ನು ಪತ್ತೆ ಮಾಡಲು ಹೇಳಿದಳು. ಆತ ಆಕೆಯನ್ನು ಹಿಂಬಾಲಿಸುತ್ತಾನೆ. ಆ ಮನೆಯೊಳಗಿನ ದೃಶ್ಯ ನೋಡಿ ಆತನ ಕಣ್ಣಲ್ಲಿ ನೀರು. ಆಕೆ ಹೊತ್ತೊಯ್ದ ತಟ್ಟೆಯಲ್ಲಿ ತಿಂದುಳಿದ ಆಹಾರ ಹಂಚಿ ತಿನ್ನುತ್ತಿರುವ ದೃಶ್ಯ! ಮಾರನೇ ದಿನ ಹೆಂಗಸು ಕೆಲಸ ಮುಗಿಸಿ ಹೋಗುವಾಗ ಅದೇ ನಡೆಯುತ್ತದೆ. ಆದರೆ, ಮನೆಯೊಡತಿ ಉಳಿದ ಆಹಾರವನ್ನು ಬಲವಂತವಾಗಿ ಕಸಕ್ಕೆ ಹಾಕಿಸುತ್ತಾಳೆ.
ಅವಳಿಗೋ ಸಂಕಟ! ರಾತ್ರಿ ಮನೆಯವರ ಊಟಕ್ಕೆ ಏನು ಮಾಡುವುದು? ಯೋಚಿಸುತ್ತಲೇ ಹೊರಡುವಾಗ ಆ ಮನೆಯೊಡತಿ ಅದಾಗಲೇ ಪ್ಯಾಕ್ ಮಾಡಿದ ಆಹಾರವನ್ನು ಆಕೆಗೆ ಕೊಟ್ಟು ಎಂಜಲನ್ನು ತಿನ್ನುವ ಪ್ರಮೇಯ ಏಕೆ ಎಂದಾಗ, ಆಕೆ ಹೇಳುತ್ತಾಳೆ, ‘ನಾವು ಬಡವರು ಮನೆಯಲ್ಲಿ ಕಾಲು ಕಳೆದುಕೊಂಡ ಗಂಡ, ವಯಸ್ಸಾದ ಅತ್ತೆ ಮಾವ, ಚಿಕ್ಕಮಕ್ಕಳು. ನಿಮ್ಮ ಮನೆಯಲ್ಲಿ ಬರೀ ತಟ್ಟೆಯಲ್ಲೇ ಎಲ್ಲ ಊಟ ಬಿಡ್ತಾರೆ. ಎರಡು ಸ್ಪೂನ್ ತಿಂದು. ಎಂಜಲು ಸರಿಯಾಗಿ ಆಗಿರಲ. ಬರೀ ತುಪ, ಗೋಡಂಬಿ, ಬಾಸುಮತಿ ಅನ್ನ ಇರುವ ಊಟ ಮುಸುರೆಗೆ ಹಾಕಲು ಮನಸ್ಸೇ ಬರ್ತಿರಲಿಲ್ಲ. ಮನೆಗೆ ತೆಗೆದುಕೊಂಡು ಹೋಗುತ್ತಿದ್ದೆ’ ಅಂದಾಗ ಯಜಮಾನಿಯ ಕಣ್ಣಂಚಲ್ಲಿ ನೀರು! ಹೌದು, ತಿನ್ನುವ ಅನ್ನವನ್ನು ಪ್ರಸಾದ ಎನ್ನುವ ಸಂಸ್ಕೃತಿ ನಮ್ಮದು. ಆದರೆ, ನಾವಿಂದು ಮನೆಯಲ್ಲೂ ಮದುವೆ ಮತ್ತಿತರ ಸಮಾರಂಭದಗಳಲ್ಲೂ ತಿನ್ನದೇ ಬಿಸಾಡುವ ಇಂಥ ಸಾಮಾನ್ಯ ದೃಶ್ಯವನ್ನೇ ನೋಡುತ್ತೇನೆ. ತಟ್ಟೆ ಎಲೆಯಲ್ಲಿ ಆಹಾರ ಉಳಿಸುವುದೇ ನಾಗರಿಕತೆ ಎಂಬ ಅನಾಗರಿಕ ಪ್ರಜ್ಞೆ ನಮ್ಮನ್ನಾವರಿಸಿದೆ. ಎಷ್ಟೋ ಜನರಿಗೆ ಒಂದೊತ್ತಿನ ಕೂಳಿಗೆ ಕಷ್ಟವಾಗಿರುವಾಗ ಮತ್ತೊಬ್ಬರು ತಿನ್ನುವಷ್ಟು ಉಳಿಸಿ ಬಿಸಾಡುತ್ತೇವಲ್ಲ! ಅದು ಮಹಾಪಾಪ ಎಂಬ ಪಾಪ ಪ್ರಜ್ಞೆ ನಮ್ಮನ್ನು ಕಾಡದಿದ್ದರೆ ನಾವೆಂಥ ಮನುಷ್ಯರು ಅಲ್ಲವೇ?!
(ಲೇಖಕರು ಹವ್ಯಾಸಿ ಬರಹಗಾರರು)