1991ರಲ್ಲಿ ಕೈಗಾರಿಕೆಗಳನ್ನು ಲೈಸೆನ್ಸ್ ಮುಕ್ತಗೊಳಿಸಿದಂತೆ ಈಗ ಚರ್ಚೆಯಲ್ಲಿರುವ ಮೂರು ಕೃಷಿ ಮಸೂದೆಗಳು ಕೃಷಿಯನ್ನು ನಿರ್ಬಂಧಮುಕ್ತಗೊಳಿಸುವ ಗುರಿ ಹೊಂದಿವೆ. 2024ರ ವೇಳೆಗೆ ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಗುರಿ ಸಾಧನೆಯಲ್ಲಿ ಈ ಕಾನೂನುಗಳು ನೆರವಾಗಲಿವೆ.
ನಮ್ಮ ದೇಶ ಹಲವು ದಶಕಗಳ ಕಾಲ ಆಹಾರ ಕೊರತೆ ಎದುರಿಸಿತ್ತು. ವಿವಿಧ ಕ್ರಮಗಳ ಫಲವಾಗಿ ಕ್ರಮೇಣ ಹೆಚ್ಚುವರಿ ಆಹಾರ ಉತ್ಪಾದಿಸುವ ಹಂತಕ್ಕೆ ಬಂದಿತು. ಕೃಷಿಕರು ಬೆಳೆದ ಅಧಿಕ ಫಸಲನ್ನು ಲಾಭದಾಯಕ ಬೆಲೆಗೆ ಮಾರಾಟ ಮಾಡುವಂಥ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿತ್ತು. ಇದು ಕೃಷಿ-ಸಾಗಾಟ, ಕೃಷಿ ಸಂಸ್ಕರಣೆ, ಮಾರುಕಟ್ಟೆ ಮುಂತಾದ ನೀತಿಗಳನ್ನು ಸರ್ಕಾರಗಳು ರೂಪಿಸಲು ಪ್ರೇರಕವಾಯಿತು. ಉತ್ಪಾದನೆ ಮತ್ತು ಬಳಕೆ ವಲಯಗಳ ನಡುವೆ ಸೇತುವೆ ಕಲ್ಪಿಸುವ ಸರಬರಾಜು ಸರಪಣಿಯನ್ನು ಸೃಷ್ಟಿಸುವ ಗುರಿಯನ್ನು ಹಾಕಿಕೊಳ್ಳಲಾಯಿತು. ಈ ಹೊಸ ತಂತ್ರವು ಕೃಷಿಯನ್ನು ಕೃಷಿ-ಉದ್ಯಮವನ್ನಾಗಿಯೂ ಪರಿವರ್ತಿಸುತ್ತದೆ. ಅದರನ್ವಯ, ಮಾರುಕಟ್ಟೆಯಲ್ಲಿನ ಬೇಡಿಕೆ ಹಾಗೂ ಬೆಲೆಯನ್ನು ಆಧರಿಸಿ ಕೃಷಿಕರು ಉತ್ಪಾದನಾ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಉತ್ಪಾದನೆ ಹಾಗೂ ಸವಾಲನ್ನು ನಿರ್ವಹಿಸುವುದನ್ನು ಗುರಿಯಾಗಿಸಿಕೊಂಡ ಸುಧಾರಣೆಗಳ ಫಲವಾಗಿ, ದೇಶ ಎಲ್ಲ ಕೃಷಿ ಉಪ ವಲಯಗಳಲ್ಲಿ ಐತಿಹಾಸಿಕ ಅಧಿಕ ಉತ್ಪಾದನೆಯನ್ನು ಸಾಧಿಸಿತು.
ಒಂದು ದೇಶ-ಒಂದು ಮಾರುಕಟ್ಟೆ: ಚದುರಿಹೋಗಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ಸಮಗ್ರಗೊಳಿಸುವ ಉದ್ದೇಶದಿಂದ 2016ರ ಏಪ್ರಿಲ್ನಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ರ ಜನ್ಮದಿನದಂದು ‘ಇನ್ಯಾಮ್ ಪರಿಚಯಿಸಲಾಯಿತು. ‘ಒಂದು ದೇಶ-ಒಂದು ಮಾರುಕಟ್ಟೆ’ ರಚನೆಯತ್ತ ಮೊದಲ ಹೆಜ್ಜೆಯಾದ ಈ ಕ್ರಮ ರೈತರು ಹಾಗೂ ವಿವಿಧ ವಾಣಿಜ್ಯ ವಿಭಾಗಗಳನ್ನು ಒಂದೇ ವೇದಿಕೆಗೆ ತರುವಂತೆ ಮಾಡಿತು. ಇದರಿಂದ ಹೆಚ್ಚು ಪಾರದರ್ಶಕ ಹಾಗೂ ಸ್ಪರ್ಧಾತ್ಮಕ ಬೆಲೆ ವ್ಯವಸ್ಥೆ ರೂಪುಗೊಳ್ಳಲು ಸಹಕಾರಿಯಾಯಿತು.
ಜಗತ್ತಿನ ಯಾವುದೇ ಭಾಗದಲ್ಲಿಯೂ ಕೃಷಿ ಮಾರುಕಟ್ಟೆಗಳು ಎಂದಿಗೂ ಪರಿಪೂರ್ಣವಾಗಿ ಇರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಒಂದು ಧನಾತ್ಮಕ ಪ್ರತಿಕ್ರಿಯೆಯಾಗಿ, ಹೊಸ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನೀತಿ ಜಾರಿಗೆ ಬಂದಿತು. ಅದು ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ ಶೇಕಡ 50 ಲಾಭವನ್ನು ಖಾತರಿಪಡಿಸಿತು. ಇದರಿಂದ ದ್ವಿದಳ ಧಾನ್ಯಗಳು, ಎಣ್ಣೆಬೀಜ ಮತ್ತು ಸಿರಿಧಾನ್ಯದಂಥ ಕೊರತೆಯಿರುವ ಕೃಷಿ ಉತ್ಪನ್ನಗಳ ಬೆಳೆಗಾರರಿಗೆ ಹೆಚ್ಚು ಅನುಕೂಲವಾಯಿತು. ಪಿಎಂ-ಆಶಾ ಎಂಬ ಹೊಸ ಖರೀದಿ ನೀತಿಯಿಂದ ಈ ನೀತಿಗೆ ಹೆಚ್ಚಿನ ಮೌಲ್ಯ ಒದಗಿತು. 2014-15ರಿಂದ 2015-2020ರ ವರೆಗಿನ 6 ವರ್ಷಗಳ ಅವಧಿಯಲ್ಲಿ 138.14 ಲಕ್ಷ ಟನ್ ದ್ವಿದಳ ಧಾನ್ಯ ಮತ್ತು ಎಣ್ಣೆಬೀಜಗಳನ್ನು -ಠಿ; 66,238.73 ಕೋಟಿಗೆ ಖರೀದಿಸಿದ್ದು ಅದರ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. 2008-09ರಿಂದ 2013-14ರವರೆಗಿನ ಅವಧಿಯಲ್ಲಿ 7.17 ಲಕ್ಷ ಟನ್ಗಳಷ್ಟನ್ನು -ಠಿ; 3,052.41 ಕೋಟಿಗೆ ಖರೀದಿಸಿದ್ದಕ್ಕೆ ಹೋಲಿಸಿದರೆ ಇದೊಂದು ದೊಡ್ಡ ಬೆಳವಣಿಗೆಯೆ ಅಲ್ಲವೆ?
ತ್ರಿವಳಿ ಮಸೂದೆಗಳ ಗುರಿ: ಈಚೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿರುವ ತ್ರಿವಳಿ ಕೃಷಿ ಮಸೂದೆಗಳು ಶೀಘ್ರದಲ್ಲೇ ರಾಷ್ಟ್ರಪತಿ ಅಂಕಿತ ಬಿದ್ದು ಕಾನೂನಾಗಿ ಬದಲಾಗಲಿವೆ. ಈ ಮಸೂದೆಗಳಿಗೆ ಪ್ರತಿಪಕ್ಷಗಳು ಹಾಗೂ ಕೆಲ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಈ ಮಸೂದೆಗಳು ಸುಧಾರಣೆ ಹಾದಿಯಲ್ಲಿ ದೊಡ್ಡ ಹೆಜ್ಜೆಯಾಗಿದ್ದು ಕೃಷಿಕ ಸಮುದಾಯಕ್ಕೆ ಮಹತ್ವದ ಕೊಡುಗೆಯಾಗಿವೆ ಎಂದು ಧಾರಾಳವಾಗಿ ಹೇಳಬಹುದು.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಮಸೂದೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ- ಇವೇ ಆ ಮೂರು ಮಸೂದೆಗಳು. ಈ ಮಸೂದೆಗಳಲ್ಲಿರುವ ಪ್ರಮುಖ ಅಂಶ ರೈತ ಬೆಳೆದ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ್ದು. ರಾಜ್ಯದೊಳಗಿನ ಹಾಗೂ ಅಂತಾರಾಜ್ಯ ನಡುವೆ ಕೃಷಿಕರು ಮತ್ತು ವರ್ತಕರು ವ್ಯವಹಾರ ನಡೆಸಲು ಇರುವ ಸ್ವಾತಂತ್ರ್ಯ ಎಪಿಎಂಸಿಗಳಿಗೆ ಪರ್ಯಾಯವನ್ನು ಒದಗಿಸುತ್ತದೆ. ತನ್ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ಆಯ್ಕೆಯಂತೆ ಎಲ್ಲಿಯಾದರೂ ಯಾರಿಗಾದರೂ ಮಾರುವ ಸ್ವಾತಂತ್ರ್ಯ ಹೊಂದಿರುತ್ತಾರೆ. ಬೆಳೆಗಳು ಮಾತ್ರವಲ್ಲದೆ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ವಲಯದ ಕೃಷಿಕರಿಗೂ ಇದರಿಂದ ಬಹಳ ಲಾಭವಾಗುತ್ತದೆ. ವಿವಿಧ ಇಲೆಕ್ಟ್ರಾನಿಕ್ ವಾಣಿಜ್ಯ ವೇದಿಕೆಗಳಿಂದಾಗಿ ವಾಣಿಜ್ಯ ವಲಯ ಅನಿರ್ಬಂಧಿತವಾಗಿ ಇಡೀ ಭಾರತವೇ ಒಂದು ಮಾರುಕಟ್ಟೆಯಾಗಿ ರೈತರಿಗೆ ವರದಾನವಾಗುತ್ತದೆ.
ಹೊಸ ನಿಯಮಗಳ ಪ್ರಕಾರ ಖರೀದಿದಾರರಲ್ಲಿ ವರ್ತಕರು, ಸಂಸ್ಕರಣೆಗಾರರು, ರಫ್ತುದಾರರು ಮೊದಲಾದವರೂ ಒಳಗೊಳ್ಳುವುದರಿಂದ ಮೌಲ್ಯ ಸರಪಣಿ ಬಲಿಷ್ಠಗೊಳ್ಳುತ್ತದೆ. ವರ್ತಕರ ಸರಳ ಮತ್ತು ಅಡೆತಡೆಮುಕ್ತ ನೋಂದಣಿ ಹಾಗೂ ವಿದ್ಯುನ್ಮಾನ ವ್ಯವಹಾರ ವೇದಿಕೆಗಳು ಈ ಮಸೂದೆಗಳ ಇತರ ಕೆಲವು ಪ್ರಗತಿಪರ ಅಂಶಗಳಾಗಿವೆ. ವ್ಯವಹಾರದ ದಿನವೇ ಅಥವಾ ಮೂರು ಕೆಲಸದ ದಿನದೊಳಗೆ ರೈತರಿಗೆ ಹಣ ಪಾವತಿ ಮಾಡುವುದು, ಬೆಲೆ ಮಾಹಿತಿ, ಮಾರುಕಟ್ಟೆ ವ್ಯವಸ್ಥೆ ಮತ್ತು ವಿವಾದಗಳ ಇತ್ಯರ್ಥಕ್ಕೆ ಅರೆ-ನ್ಯಾಯಾಂಗ ವ್ಯವಸ್ಥೆ ಮೊದಲಾದವೂ ಉತ್ತಮ ಕ್ರಮಗಳಾಗಿವೆ.
ಬೆಲೆ ಭರವಸೆ ಮಸೂದೆಯು, ಭವಿಷ್ಯದಲ್ಲಿ ಬೆಲೆಗಳ ಏರುಪೇರಿನಿಂದ ಆಗಬಹುದಾದ ಸಮಸ್ಯೆಯಿಂದ ರೈತರಿಗೆ ರಕ್ಷಣೆ ಒದಗಿಸುವತ್ತ ದಿಟ್ಟ ಹೆಜ್ಜೆಯಾಗಿದೆ. ಹಿಂದಿನ 2003ರ ಮಾದರಿ ಎಪಿಎಂಸಿ ಕಾನೂನಿನಲ್ಲಿ ಇದರ ಕೊರತೆಯಿತ್ತು. 2018ರ ಮಾದರಿ ಗುತ್ತಿಗೆ ಕೃಷಿ ಕಾನೂನು ಇದನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿದ್ದು ಪ್ರಸಕ್ತ ಮಸೂದೆ ಇನ್ನಷ್ಟು ಬಲ ತುಂಬಲಿದೆ. ರೈತರ ಜಮೀನಿನ ಮೇಲೆ ಅವರ ಮಾಲಿಕತ್ವವನ್ನು ರಕ್ಷಣೆ ಮಾಡುವಲ್ಲಿಯೂ ಅದು ಸಹಕಾರಿಯಾಗಲಿದೆ. ಪ್ರಾಯೋಜಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡರೂ ಮಾಲಿಕತ್ವದ ಸಮಸ್ಯೆ ಉದ್ಭವಿಸದು. ಉತ್ಪನ್ನಗಳ ಗುಣಮಟ್ಟವನ್ನು ಖಾತರಿಪಡಿಸಲೂ ಇದು ಸಹಕಾರಿ.
ವಿವಾದ ಇತ್ಯರ್ಥಕ್ಕಾಗಿ ಪ್ರಸ್ತಾಪಿಸಲಾಗಿರುವ ವ್ಯವಸ್ಥೆಯಲ್ಲಿ ಮೇಲ್ಮನವಿ ಪ್ರಾಧಿಕಾರದ ಮುಖ್ಯಸ್ಥರಾದ ಜಿಲ್ಲಾಧಿಕಾರಿ ಹೊರಡಿಸುವ ಆದೇಶಗಳು ಸಿವಿಲ್ ನ್ಯಾಯಾಲಯದ ಆದೇಶದಷ್ಟೇ ಮಹತ್ವವನ್ನು ಪಡೆದಿರುತ್ತದೆ ಎನ್ನುವುದು ಗಮನಾರ್ಹ ಸಂಗತಿ. ಈ ಮಸೂದೆಗಳ ಜತೆಗೆ, ಈಗಾಗಲೇ ಘೋಷಿಸಲಾದ, ಒಂದು ಲಕ್ಷ ಕೋಟಿ ರೂ. ಮೊತ್ತದ ‘ಕೃಷಿ ಮೂಲಸೌಕರ್ಯ ನಿಧಿ’, 20,050 ಕೋಟಿ ರೂ. ಮೊತ್ತದ ಮೀನುಗಾರಿಕಾ ಅಭಿವೃದ್ಧಿ ಯೋಜನೆ ಹಾಗೂ ಪಶು ಸಂಗೋಪನಾ ವಲಯಕ್ಕೆ 15,000 ಕೋಟಿ ರೂ. ಯೋಜನೆ- ಇವು ಕೂಡ ಕೃಷಿ ರಂಗದ ಬೆಳವಣಿಗೆಗೆ ಸಹಕಾರಿಯಾಗಬಲ್ಲವು.
ಬಿಕ್ಕಟ್ಟಿನ ಸಮಯದಲ್ಲಿ ರೈತರು ಅಗ್ಗದ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಅವರಿಗೆ ಆರ್ಥಿಕ ತೊಂದರೆಯಾಗುತ್ತದೆ. ಇಂಥ ಪರಿಸ್ಥಿತಿಯಿಂದ ತಡೆದು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ 10 ಸಾವಿರ ರೈತರ ಉತ್ಪಾದನಾ ಸಂಘಗಳು (ಎಫ್ಪಿಒ), 22 ಸಾವಿರ ಗ್ರಾಮೀಣ ಕೃಷಿ ಮಾರುಕಟ್ಟೆಗಳನ್ನು (ಗ್ರಾಮ್ಸ್) ರಚಿಸಲು ಉದ್ದೇಶಿಸಲಾಗಿದೆ. 1991ರಲ್ಲಿ ಕೈಗಾರಿಕೆಗಳನ್ನು ಲೈಸೆನ್ಸ್ಮುಕ್ತಗೊಳಿಸಿದಂತೆ ಈ ಮೂರು ಕೃಷಿ ಮಸೂದೆಗಳು ಕೃಷಿಯನ್ನು ಕೂಡ ನಿರ್ಬಂಧಮುಕ್ತ ಗೊಳಿಸುವ ಗುರಿ ಹೊಂದಿವೆ.
2024ರ ವೇಳೆಗೆ ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಗುರಿ ಸಾಧನೆಯಲ್ಲಿ ಕೃಷಿಕ್ಷೇತ್ರದ ಹಾಗೂ ರೈತರ ಕೊಡುಗೆಯನ್ನು ಖಾತರಿಪಡಿಸಲು ಈ ಕಾನೂನುಗಳು ನೆರವಾಗಲಿವೆ ಎಂದು ಹೇಳಬಹದು.
(ಲೇಖಕರು ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ)