ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾಯಿತ ಶಾಸಕಾಂಗ, ಜವಾಬ್ದಾರಿಯುತ ಕಾರ್ಯಾಂಗ ಇವೆಲ್ಲವೂ ರೂಢಿಗೆ ಬಂದಿದ್ದು ನಮ್ಮದೇ ಆದ ಸಂವಿಧಾನ ರಚನೆಯ ನಂತರ. ಆದರೆ 1881ರಲ್ಲಿ ಮೈಸೂರು ಮಹಾರಾಜರಾದ ಚಾಮರಾಜೇಂದ್ರ ಒಡೆಯರ್ ಜಾರಿಗೆ ತಂದ ಆದೇಶ, ಅಂದಿನ ಬ್ರಿಟಿಷ್ ಸರ್ಕಾರದಲ್ಲಿದ್ದ House of Lords and House of Commons ಮಾದರಿಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳ ಹುಟ್ಟಿಗೆ ಕಾರಣವಾಯಿತು.
ಭಾರತದ ಸಂಸತ್ತು, ರಾಜ್ಯ ಶಾಸಕಾಂಗಗಳ ಹುಟ್ಟು, ಬೆಳವಣಿಗೆಯ ಆಧುನಿಕ ಚರಿತ್ರೆಯಲ್ಲಿ ಮೈಸೂರು ಸಂಸ್ಥಾನವು ಆರಂಭಿಕ ಘಟ್ಟದಲ್ಲಿ ನಮೂದಾಗಿರಲೇಬೇಕು. ಜನಪ್ರತಿನಿಧಿಗಳಾಗಲು ಚುನಾವಣಾ ರಾಜಕಾರಣದಲ್ಲಿ ಸೆಣೆಸಿ ಜಯಿಸಿ ಬರುವವರು ಒಂದು ಕಡೆ. ವಿವಿಧ ಕ್ಷೇತ್ರಗಳಲ್ಲಿ ವ್ಯಾವಹಾರಿಕ ವಿಚಕ್ಷಣತೆ ಹಾಗೂ ಕಾನೂನು ರಚನಾ ಕೌಶಲ ಹೊಂದಿದ ತಜ್ಞರು ಆಡಳಿತದ ಜೊತೆ ಸಹಕರಿಸುವಂತೆ ಮಾಡಲು ನ್ಯಾಯವಿಧಾಯಕ ಸಭೆ ಸ್ಥಾಪಿಸಲ್ಪಟ್ಟಿತು. ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾದ ವಿ.ಪಿ.ಮಾಧವರಾಯರ ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸಲಹೆ ಹಾಗೂ ಒತ್ತಾಯದ ಮೇರೆಗೆ ಪ್ರಥಮ ಬಾರಿಗೆ ನ್ಯಾಯವಿಧಾಯಕ ಸಭೆಯನ್ನು 1907ರಲ್ಲಿ ಸ್ಥಾಪಿಸಲಾಯಿತು. ದಿವಾನರು ಅಧ್ಯಕ್ಷರಾದ ನ್ಯಾಯವಿಧಾಯಕ ಸಭೆಯ ಮೊದಲ ಸಭೆ 1907ರ ಜುಲೈ 24ರಂದು ನಡೆಯಿತು.
1919ರ ನ್ಯಾಯವಿಧಾಯಕ ಸಭಾ ಶಾಸನದ ಫಲವಾಗಿ ಅನೇಕ ಸುಧಾರಣೆಗಳಾದವು. ಕೇವಲ 10-15 ಸದಸ್ಯರ ಸಂಖ್ಯೆ 30ಕ್ಕೆ ಏರಿತು. 1923ರಲ್ಲಿ ಸದಸ್ಯರ ಸಂಖ್ಯೆ 50ಕ್ಕೆ ಏರಿ, 1939ರಲ್ಲಿ ಅದು 68ಕ್ಕೆ ಹೆಚ್ಚಿತು. ನಂತರದ ದಿನಗಳಲ್ಲಿ ಸದಸ್ಯರ ಸಂಖ್ಯೆ 75ಕ್ಕೆ ಹೆಚ್ಚಿದೆ. ನ್ಯಾಯ ವಿಧಾಯಕ ಸಭೆಯು ಇಂದು ವಿಧಾನ ಪರಿಷತ್ತು ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.
ಸರ್ಕಾರದ ರಾಜ್ಯಭಾರ ನಿರ್ವಹಣೆಯಲ್ಲಿ ಆಡಳಿತಕ್ಕೆ ನೆರವಾಗುವಂಥ ಚಿಂತಕರ ಚಾವಡಿಯಾಗಿದ್ದು, ಆ ಕಲ್ಪನೆಗೆ ಪೂರಕವಾಗಿ ಚರ್ಚೆ ನಡೆಯಬೇಕೆಂಬುದು ಇದರ ಉದ್ದೇಶ. ಶಿಕ್ಷಕರು, ಪದವೀಧರರ ಪ್ರತಿನಿಧಿಗಳು, ಸಾಹಿತ್ಯ, ಸಂಗೀತ, ಕಲೆ ಕ್ಷೇತ್ರದ ತಜ್ಞರನ್ನು ಪರಿಷತ್ತು ಒಳಗೊಂಡಿದೆ. ಅದಕ್ಕಾಗಿಯೇ ಪರಿಷತ್ತನ್ನು ಮೇಲ್ಮನೆ ಎನ್ನಲಾಗುತ್ತದೆ.
ಆಯಾ ಕಾಲಕ್ಕೆ ಪ್ರಸ್ತುತ ವಿಚಾರಗಳು ಮೇಲ್ಮನೆಯಲ್ಲಿ ಮಾರ್ದನಿಸಿವೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಸ್ವಾತಂತ್ರ್ಯದ ಆಶಯಗಳು, ಕರ್ನಾಟಕ ಏಕೀಕರಣದ ಅಗತ್ಯವನ್ನು ಮೇಲ್ಮನೆ ಎತ್ತಿ ಹಿಡಿದಿದೆ.
ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪ, ಹೆಸರಾಂತ ಪತ್ರಕರ್ತ ಎಂ.ವೆಂಕಟಕೃಷ್ಣಯ್ಯ, ಖಾದ್ರಿ ಶಾಮಣ್ಣ, ಕೆ.ರಾಮಣ್ಣ, ಎಚ್.ಬಿ.ಗುಂಡಪ್ಪ, ಜೆ.ಬಿ.ಮಲ್ಲಾರಾಧ್ಯ, ಜಿ.ವಿ.ಹಳ್ಳಿಕೇರಿ, ಎಂ.ಆರ್.ಲಕ್ಷ್ಮಮ್ಮ, ಶ್ರೀನಿವಾಸ ಶೆಟ್ಟರು, ಎಂ.ಪಿ.ಎಲ್.ಶಾಸ್ತ್ರಿ, ಸಿ.ಹಯವದನರಾವ್, ಜೆ.ಮಹಮದ್ ಇಮಾಂ, ಪುಟ್ಟಣ್ಣ ಚೆಟ್ಟಿ, ಶ್ರೇಷ್ಠ ರಾಜಕಾರಣಿಗಳಾದ ಕೆ.ಸಿ.ರೆಡ್ಡಿ, ಎಸ್.ನಿಜಲಿಂಗಪ್ಪ, ಎಚ್.ಸಿ.ದಾಸಪ್ಪ, ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಹೀಗೆ ಆಯಾ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಹಲವು ಗಣ್ಯರು ಮೌಲ್ಯಯುತ ಚರ್ಚೆಗಳಿಂದ ಪರಿಷತ್ತಿನ ಘನತೆಯನ್ನು ಹೆಚ್ಚಿಸಿದ್ದಾರೆ. ಖ್ಯಾತ ಗಾಯಕರಾದ ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್ ಅವರುಗಳಲ್ಲದೆ ಹಲವು ಗಣ್ಯಾತಿಗಣ್ಯರುಗಳು ಸದನಕ್ಕೆ ಶೋಭೆ ತಂದಿದ್ದಾರೆ.
ರಾಜಕೀಯ ಚರ್ಚೆ ಅನಿವಾರ್ಯವಾದರೂ ಅದು ಪಕ್ಷಾತೀತವಾದ ಮಾರ್ಗದಲ್ಲಿ ನಡೆಯಬೇಕೆಂಬುದು ಮೇಲ್ಮನೆಯ ಪರಿಕಲ್ಪನೆ. ವಿಧೇಯಕಗಳ ಬಗ್ಗೆ ವಿಶ್ಲೇಷಣಾಯುತ ಚರ್ಚೆ ನಡೆಸಿ, ಸಾರ್ವಜನಿಕ ಅಭಿಪ್ರಾಯ ರೂಪಿಸುವಂತೆ ಪ್ರೇರೇಪಿಸುವುದು ಅತ್ಯಗತ್ಯ. ನಾನು ಕಾಲೇಜಿಗೆ ತೆರಳುವ ದಿನಗಳಲ್ಲಿ ಪರಿಷತ್ ಸಭಾಪತಿಯಾಗಿದ್ದ ಡಿ. ಬಿ. ಕಲ್ಮಣ್ಕರ್(ದಿಗಂಬರ್ರಾವ್ ಬಲವಂತರಾವ್ ಕಲ್ಮಣ್ಕರ್) ಮಾತುಗಳನ್ನು ಕೇಳಿ ಪ್ರಭಾವಿತನಾಗಿದ್ದೆ. ಹೈದರಾಬಾದ್ ವಿಮೋಚನಾ ಚಳವಳಿಯ ಹಿನ್ನೆಲೆ ಹೊಂದಿದ್ದ ಅವರು 1982ರಿಂದ 1994ರವರೆಗೆ ಪರಿಷತ್ ಸದಸ್ಯರಾಗಿದ್ದರು. 1993ರಲ್ಲಿ ಸಭಾಪತಿಯಾಗಿ ಆಯ್ಕೆಯಾದ ಕಲ್ಮಣ್ಕರ್ ವ್ಯಕ್ತಿತ್ವದ ಘನತೆ ಎಷ್ಟಿತ್ತೆಂದರೆ, ಎರಡನೇ ಅವಧಿಗೆ ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅಷ್ಟು ವರ್ಷದ ಪರಿಷತ್ ಇತಿಹಾಸದಲ್ಲಿ ಎರಡನೇ ಬಾರಿ ಆಯ್ಕೆಯಾದ ಮೊದಲ ಸಭಾಪತಿ ಇವರೇ ಆಗಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬಗೆಗೆ ಯೋಚಿಸುವವರು ಯಾರೂ ಇಲ್ಲವೇ ಎಂಬ ಚರ್ಚೆಗಳು ಹೊರಗೆ ನಡೆಯುತ್ತಿದ್ದರೆ ಇಷ್ಟು ಗಂಭೀರ, ಜನಪರ ವಿಚಾರಗಳ ವಿಚಾರ ಮಂಥನ ನಡೆಯುವ ವೇದಿಕೆ ಇದೆಯಲ್ಲ ಎಂಬ ಸಂತೋಷ ಆಗಿತ್ತು. ಎಂ. ಚಂದ್ರಶೇಖರ್, ಪ್ರೊ.ಲಕ್ಷಿ್ಮೕಸಾಗರ್ ಸೇರಿ ಅನೇಕರು ಪರಿಷತ್ನಲ್ಲಿ ಆಡಿದ ಮಾತುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭರವಸೆ ಮೂಡಿಸಿವೆ. ಕಲ್ಮಣ್ಕರ್ ಎರಡನೇ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾದರು ಎಂದರೆ ಸಭಾಪತಿಯವರಷ್ಟೆ ಆಗಿನ ಸದಸ್ಯರನ್ನೂ ಪ್ರಶಂಸಿಸಬೇಕಲ್ಲವೇ? ಎರಡೂ ಕಡೆ ಉತ್ತಮ ಗುಣಗಳಿದ್ದಾಗಲಷ್ಟೆ ಇಂತಹ ಘಟನೆಗಳು ನಡೆಯಲು ಸಾಧ್ಯ. ಇಂತಹ ಭವ್ಯ ಇತಿಹಾಸ ಹೊಂದಿರುವ ಪರಿಷತ್ತಿನಲ್ಲಿ ಶಿಕ್ಷಕರು, ಪದವೀಧರರು, ವಿವಿಧ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು, ಸಾಧಕರು ಎಂಬ ಹೆಸರಿನಲ್ಲಿ ಬಂದ ಸದಸ್ಯರಾರು? ಯಾವುದೇ ಪಕ್ಷಭೇದವಿಲ್ಲದೆ ರಿಯಲ್ ಎಸ್ಟೇಟ್ ಧಣಿಗಳು, ಉದ್ಯಮಿಗಳು, ಯಾವುದೇ ಸಾರ್ವಜನಿಕ ಕ್ಷೇತ್ರದಲ್ಲಿ ಪರಿಣತಿ ಇಲ್ಲದವರು ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಇನ್ನು, ಸಾಹಿತ್ಯ ಕ್ಷೇತ್ರಗಳಲ್ಲಿ ಪ್ರೊ. ದೊಡ್ಡರಂಗೇಗೌಡರು, ಡಾ. ಸಿದ್ದಲಿಂಗಯ್ಯರಂಥ ಸಾಧಕರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಇದೇ ವೇಳೆ, ಕ್ಷೇತ್ರದಲ್ಲಿ ತೃಣಮಾತ್ರದ ಕೊಡುಗೆ ಇದ್ದರೂ ವಿವಿಧ ರಾಜಕೀಯ ಕಾರಣಗಳಿಗಾಗಿ ಸಾಹಿತ್ಯ, ಸಿನಿಮಾ ಕ್ಷೇತ್ರಗಳಿಂದ ನಾಮನಿರ್ದೇಶನ ಮಾಡಿದ ಉದಾಹರಣೆಗಳೂ ಇವೆ. ಇಷ್ಟೆಲ್ಲ ಸವಾಲುಗಳ ನಡುವೆಯೂ ಹಿಂದುಳಿದ ಗುಡ್ಡಗಾಡು ವಾಸಿ ಸಿದ್ದಿ ಸಮುದಾಯದಿಂದ ಶಾಂತಾರಾಂ ಸಿದ್ದಿ, ದಲಿತ ವರ್ಗಕ್ಕೆ ಸೇರಿದ ಸಂಶೋಧಕ ಡಾ. ತಳವಾರ್ ಸಾಬಣ್ಣರನ್ನು ಆಯ್ಕೆ ಮಾಡಿದ ಭಾರತೀಯ ಜನತಾ ಪಾರ್ಟಿ ಸಂಘಟನೆ ಹಾಗೂ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ನಿಜಕ್ಕೂ ಅಭಿನಂದನಾರ್ಹ. ಆದರೆ ಎಲ್ಲ ಕಾಲದಲ್ಲೂ ಇಂತಹ ನೇಮಕ ಮಾಡಲಾಗದೆ, ವಿಧಾನ ಪರಿಷತ್ ಸಹ ರಾಜಕೀಯ ಅಖಾಡ ಆದ ಎಷ್ಟೋ ಉದಾಹರಣೆಗಳಿವೆ. ಸದನದಲ್ಲಿ ಪ್ರತಿಭಟಿಸಬಾರದು, ಕರಪತ್ರ ಪ್ರದರ್ಶಿಸಬಾರದು ಎಂಬ ಅನೇಕ ನಿಬಂಧನೆಗಳಿದ್ದರೂ ಪಾಲನೆ ಆಗುತ್ತಿಲ್ಲ.
ಎರಡು ವರ್ಷದ ಹಿಂದೆ, ದೇಶದ ಏಳು ರಾಜ್ಯಗಳಲ್ಲಷ್ಟೆ ವಿಧಾನ ಪರಿಷತ್ ಅಸ್ತಿತ್ವದಲ್ಲಿತ್ತು. ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಉತ್ತರಪ್ರದೇಶ. ಆದರೆ 2020ರ ಜನವರಿಯಲ್ಲಿ, ತನ್ನ ರಾಜ್ಯದ ವಿಧಾನ ಪರಿಷತ್ತನ್ನು ವಿಸರ್ಜಿಸುವ ನಿರ್ಧಾರವನ್ನು ಆಂಧ್ರಪ್ರದೇಶ ಸರ್ಕಾರ ಕೈಗೊಂಡು ಸಂಚಲನ ಮೂಡಿಸಿತು. ತೆಲುಗುದೇಶಂ ಸಂಸ್ಥಾಪಕ ಎನ್.ಟಿ.ರಾಮರಾವ್ 1985ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಆಂಧ್ರ ವಿಧಾನ ಪರಿಷತ್ತನ್ನು ರದ್ದುಗೊಳಿಸಿದ್ದರು. ಈ ಸದನದಿಂದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಅವರು ಹೇಳಿದ್ದರು. 22 ವರ್ಷಗಳ ಬಳಿಕ ಅಂದರೆ 2007ರಲ್ಲಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ವಿಧಾನಪರಿಷತ್ತನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದರು. 13 ವರ್ಷಗಳ ಹಿಂದೆ ತಮ್ಮ ತಂದೆ ಮತ್ತೆ ಅಸ್ತಿತ್ವಕ್ಕೆ ತಂದಿದ್ದ ವಿಧಾನ ಪರಿಷತ್ತನ್ನು ರದ್ದುಗೊಳಿಸುವ ನಿರ್ಧಾರವನ್ನು ಜಗನ್ಮೋಹನ ರೆಡ್ಡಿ 2020ರಲ್ಲಿ ಕೈಗೊಂಡರು.
ಕರ್ನಾಟಕದಲ್ಲಿಯೂ ಈ ಹಿಂದೆ ವಿಧಾನ ಪರಿಷತ್ತನ್ನು ರದ್ದುಪಡಿಸುವ ಪ್ರಯತ್ನಗಳು ನಡೆದಿವೆ ಎಂಬ ಸುದ್ದಿಗಳು ಹರಿದಾಡಿದವು. 2020 ಡಿಸೆಂಬರ್ 15ರ ರೀತಿಯ ಘಟನೆಗಳು ಮರುಕಳಿಸಿದರೆ ಕರ್ನಾಟಕದಲ್ಲೂ ಪರಿಷತ್ ಕುರಿತು ಜನರ ಭಾವನೆ ಬದಲಾಗುವ ಅಪಾಯವಿದೆ.
ಸಭಾಪತಿ ಸ್ಥಾನಕ್ಕೆ ಕೆ. ಪ್ರತಾಪಚಂದ್ರ ಶೆಟ್ಟಿ ಫೆಬ್ರವರಿ 4ರಂದು ರಾಜೀನಾಮೆ ನೀಡಿದರು. ರಾಜೀನಾಮೆ ಪತ್ರದಲ್ಲಿ ಅವರು ಹೇಳಿದ, ‘ಬರಬರುತ್ತ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಕಡಿಮೆ ಆಗುತ್ತಿರುವುದನ್ನು ನಿಮ್ಮಂತೆಯೇ ನಾನೂ ಗಮನಿಸಿದ್ದೇನೆ. ವೈಯಕ್ತಿಕವಾಗಿ ನಾವೆಲ್ಲರೂ ಒಳ್ಳೆಯವರೇ. ಆದರೆ ನಮ್ಮ ನೈತಿಕ ಮೌಲ್ಯಗಳು, ಪಕ್ಷ ರಾಜಕಾರಣ, ಹಿತಾಸಕ್ತಿಗಳು ಹಾಗೂ ಅನಿವಾರ್ಯತೆಗಳು ನಮ್ಮನ್ನು ಆತ್ಮಸಾಕ್ಷಿಗೆ ನಡೆದುಕೊಳ್ಳಲು ಅಡ್ಡಿ ಮಾಡುತ್ತವೆ’ ಎಂಬ ಮಾತುಗಳು ಸಾರ್ವಜನಿಕ ಜೀವನದಲ್ಲಿರುವ ನಾವೆಲ್ಲರೂ ಆಲೋಚಿಸಬೇಕಾದದ್ದು.
ಪರಿಷತ್ತಿನ ಘನತೆ ಕುರಿತು ಯಾರೂ ಬೆರಳು ತೋರದಂತೆ ಮಾಡಲು ಈಗಲೂ ಅವಕಾಶವಿದೆ. ಸಂವಿಧಾನ ಕರ್ತೃಗಳ ಆಶಯಕ್ಕೆ ಅನುಗುಣವಾಗಿ ವಿವಿಧ ಕ್ಷೇತ್ರಗಳ ತಜ್ಞರು, ಸಾಧಕರನ್ನೇ ಆಯ್ಕೆ ಮಾಡುವಂತಾಗಬೇಕು. ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ಇಂತಹ ನಿರ್ಧಾರ ಕೈಗೊಂಡಾಗ ಮಾತ್ರವೇ ಇದು ಸಾಧ್ಯ ಎಂಬುದನ್ನು ಮರೆಯುವಂತಿಲ್ಲ.
(ಲೇಖಕರು ಬಿಎಂಟಿಸಿ ಉಪಾಧ್ಯಕ್ಷರು)