ಅಂಕಣ

ಆತ್ಮವಿಸ್ಮೃತಿಯ ಪರದೆ ಹರಿಯಲಿ..

ಈ ನಾಡಿಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಹೋರಾಟಗಾರರು ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸಿದ್ದಾರೆ; ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಬಲಿದಾನ ನೀಡಿದ್ದಾರೆ. ಎಲ್ಲರ ಹೆಸರು, ಭಾವಚಿತ್ರವನ್ನು ಒಂದು ಜಾಹೀರಾತಿನಲ್ಲಿ ಹಾಕುವುದು ಸಾಧ್ಯವಿಲ್ಲದ ಮಾತು. ಇತ್ತೀಚೆಗೆ ಜವಾಹರ ಲಾಲ್ ನೆಹರು ಅವರ ಭಾವಚಿತ್ರ ಸರ್ಕಾರಿ ಜಾಹೀರಾತಿನಿಂದ ಕಾಣೆಯಾಗಿರುವುದರ ಬಗ್ಗೆ ಅನೇಕರು ದೊಡ್ಡದಾಗಿ ಹುಯಿಲೆಬ್ಬಿಸುತ್ತಿದ್ದಾರೆ. ರಾಮಾಯಣದಲ್ಲಿ ಲಂಕೆಗೆ ಸೇತುವೆ ಕಟ್ಟುವಾಗ ಹೇಗೆ ಒಂದೊಂದು ಸಣ್ಣ ಅಳಿಲುಗಳ ಸೇವೆಯೂ ಮುಖ್ಯವೆನಿಸಿತ್ತೋ ಇಲ್ಲಿಯೂ ಹಾಗೆ ಯಾವ ಕುಟುಂಬ, ಸಿರಿವಂತಿಕೆ, ಅಧಿಕಾರ ಎಲ್ಲದರ ಆಚೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಅವರ ಕೆಲಸದ ಮೂಲಕವಾಗಿ ಗುರುತಿಸಿ ಎಲ್ಲರಿಗೂ ಸಮಾನವಾದ ಗೌರವ ನೀಡುವುದೇ ಆಶಯ.

ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ ನೆಹರು ಅವರಿಗೆ ಸಲ್ಲಬೇಕಾದ ಎಲ್ಲ ಗೌರವಗಳನ್ನೂ ಕಳೆದ 75 ವರ್ಷಗಳಿಂದ ಆಳಿದ ಎಲ್ಲಾ ಸರ್ಕಾರಗಳು ಮಾತ್ರವಲ್ಲದೆ ಸ್ವತಃ ನೆಹರು ಅವರೇ ತಮಗೆ ಭಾರತ ರತ್ನ ಕೊಟ್ಟುಕೊಳ್ಳುವುದರ ಮೂಲಕ ಬೆನ್ನು ತಟ್ಟಿಕೊಂಡಿದ್ದಾರೆ. ಅಷ್ಟಕ್ಕೂ ಅದೆಷ್ಟೋ ತಳಸಮುದಾಯದ, ಆದಿವಾಸಿ, ಹಿಂದುಳಿದ ಸಮುದಾಯದ ಹೋರಾಟವನ್ನು ಸ್ವಾತಂತ್ರ್ಯ ಬಂದ ದಿನದಿಂದಲೂ ಎಲ್ಲ ಸರ್ಕಾರಗಳೂ ಕಡೆಗಣಿಸುತ್ತಲೇ ಬಂದಿದೆ. ಇದು ಆತ್ಮಘಾತುಕಥನದ ಪರಮಾವಧಿಯೆಂದು ಕಾಂಗ್ರೆಸ್ ಕೃಪಾಪೋಷಿತ ಯಾವ ಚಿಂತಕರಿಗೂ ಆಗ ಅನಿಸದೆ, ಈಗ ನೆಹರು ಭಾವಚಿತ್ರದ ಕುರಿತು ಮಾತು ಬಂದಾಗ ಆತ್ಮವಂಚನೆಯ ಸೋಗಿನಲ್ಲಿ ಘೀಳಿಡುತ್ತಿದ್ದಾರೆ.

ಅಷ್ಟಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ ‘ನೆಹರು ಅವರ ನಾಯಕರು’ ಎಂದಿದ್ದು ಅತಿಶಯೋಕ್ತಿಯೇನಲ್ಲ. ನೆಹರೂ ಯಾವತ್ತೂ ಕಾಂಗ್ರೆಸ್ಸಿನ ಪ್ರಧಾನಿಯಾಗಿದ್ದರೇ ಹೊರತು ಈ ದೇಶದ ಪ್ರಧಾನಿಯಾಗಿ ನಡೆದು ಕೊಳ್ಳಲಿಲ್ಲವಲ್ಲ! ಇವತ್ತು ನೆಹರು ಭಾವಚಿತ್ರ ಕಾಣದಾದಾಗ ಮಾತ್ರ ಪ್ರಜಾಪ್ರಭುತ್ವ ನೆನಪಾಗುತ್ತದೆಯೆ? ಸ್ವಾತಂತ್ರ್ಯ ಬಂದ ನಂತರ ರಚನೆಯಾದ ರಾಷ್ಟ್ರೀಯ ಸರ್ಕಾರವು ಅನುಸರಿಸಿದ ಹಿಂದೂವಿರೋಧಿ ನೀತಿಗಳನ್ನು ವಿರೋಧಿಸಿ ರಾಜೀನಾಮೆ ಕೊಟ್ಟು ಹೊರನಡೆದ ಶ್ಯಾಮಪ್ರಸಾದ್ ಮುಖರ್ಜಿಯವರು ಜನಸಂಘವನ್ನು ಕಟ್ಟುವಾಗ ಅವರ ಚುನಾವಣಾ ಪ್ರಚಾರಗಳಿಗೆ ಮಾಧ್ಯಮದ ಕಡಿವಾಣ ಹಾಕುವ, ಅದನ್ನು ವರದಿ ಮಾಡದಂತೆ, ಪತ್ರಿಕೆ, ದೂರದರ್ಶನಗಳಿಗೆ ತಡೆಯೊಡ್ಡಿದ್ದು ಇದೇ ನೆಹರು. ಇದು ಪ್ರಜಾತಾಂತ್ರಿಕವಾದ ವಿಚಾರವೆ? ಅತ್ತ ಪೂರ್ವ, ಪಶ್ಚಿಮೀ ಪಾಕಿಸ್ತಾನದಿಂದ ಸಾವಿರಾರು ಲಕ್ಷಾಂತರ ಸಂಖ್ಯೆಯಲ್ಲಿ ನಿರಾಶ್ರಿತರು ಗತಿಯಿಲ್ಲದೆ ಮಾನಪ್ರಾಣಗಳನ್ನುಳಿಸಿಕೊಳ್ಳಲು ಭಾರತಕ್ಕೆ ಶರಣಾಗಿ ಬಂದಾಗ ಇದೇ ಪಂಡಿತ್ ನೆಹರು ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡಿದ್ದು ಇತಿಹಾಸದ ದಾಖಲೆಯಲ್ಲಿದೆ. ಇದನ್ನು ಜನಸ್ನೇಹಿ ಆಡಳಿತ, ಉದಾರವಾದಿ ಮನೋಭಾವ ಎನ್ನಬಹುದೆ?

ಚಿಂತಕರೆನಿಸಿಕೊಂಡವರೊಬ್ಬರು ‘ಆತ್ಮವಂಚನೆ ಎನ್ನುವುದು ಭಾರತದ ರಾಜಕೀಯ ಸಂಸ್ಕೃತಿಯ ಭಾಗ’ ಎಂದು ಬರೆದಿದ್ದರು. ಆದರೆ ಅದು ಕಾಂಗ್ರೆಸ್ಸಿನ ರಾಜಕೀಯ ಸಂಸ್ಕೃತಿಯ ಭಾಗ ಎಂಬ ಉಲ್ಲೇಖ ಮಾಡುವುದನ್ನು ಅವರು ಮರೆತಿರಬಹುದು. ಇನ್ನು ಆತ್ಮಘಾತುಕತೆಯ ಹಾದಿ ಹಿಡಿದಿದ್ದಾರೆ ಎಂಬುದನ್ನೂ ಹೇಳಿದ್ದಾರೆ. ಬಹುಶಃ ಭಾರತ ಒಂದು ಕುಟುಂಬದ ಜಹಗೀರಲ್ಲ, ನಾವು ಯಾರಿಗೂ ಗುಲಾಮರಲ್ಲ ಎಂಬುದನ್ನು ನೆನಪು ಮಾಡಿಕೊಂಡು ಆತ್ಮವಿಸ್ಮೃಯ ಪರದೆಯನ್ನು ಹರಿದರೆ ಅವರ ಆತ್ಮಘಾತುಕತೆಯ ಹಾದಿಗೆ ಮಾತ್ರವಲ್ಲ, ದೇಶಕ್ಕೂ ಹಿತವೇ.

ನೆಹರು ಅವರನ್ನು ಕೇವಲ ಒಂದು ಜಾಹೀರಾತಿನಲ್ಲಿ ಹಾಕಲಿಲ್ಲ ಎಂದ ಮಾತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ಕಾಂಗ್ರೆಸ್ ಕೃಪಾಪೋಷಿತ ಬುದ್ಧಿಜೀವಿ ವರ್ಗದ ಕಡೆಯಿಂದ ಬರಬಹುದಾದರೆ ಲಾಲಾ ಲಜಪತ್​ರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ವೀರ ಸಾವರ್ಕರ್, ಮದನ ಮೋಹನ ಮಾಳವೀಯ, ಲಾಲಾ ಹರದಯಾಳ್, ಮೇಡಂಕಾಮಾ, ಅರವಿಂದ ಘೊಷರಂತಹ ಮಹಾನ್ ಹೋರಾಟಗಾರರನ್ನೆಲ್ಲ ಅನೇಕ ದಶಕಗಳಿಂದ ನೇಪಥ್ಯಕ್ಕೆ ಸರಿಸಲಾಗಿತ್ತಲ್ಲವೆ? ನೆಹರು ಹೆಸರಿನಲ್ಲಿ 450ಕ್ಕೂ ಹೆಚ್ಚು ಯೋಜನೆ, ಅನೇಕ ಶಿಕ್ಷಣ ಸಂಸ್ಥೆಗಳು, ಪಂದ್ಯಾವಳಿ, ಪ್ರಶಸ್ತಿ ಮಾತ್ರವಲ್ಲ ದೆಹಲಿಯ ಹೃದಯ ಭಾಗದಲ್ಲಿ 53 ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಕೇವಲ ಅವರ ದೇಹ ಸಮಾಧಿ ಮಾಡಲು ಉಪಯೋಗಿಸಿ, ಉಳಿದ ಹೋರಾಟಗಾರರಿಗೆ ಅವಕಾಶವೇ ಇರದ ರೀತಿ ಮಾಡಿ, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡುವಾಗ ಈ ಕಾಂಗ್ರೆಸ್ ಕೃಪಾಪೋಷಿತ ಬುದ್ಧಿಜೀವಿಗಳಿಗೆ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಮಾನತೆ ಇದ್ಯಾವುದೂ ಕಣ್ಣಿಗೆ ಬರಲಿಲ್ಲ ಏಕೆ?

ಸತ್ಯ ಹೊರಬರುವಾಗ ಹೀಗೆಲ್ಲ ಸುಳ್ಳನ್ನೇ ಹಡೆದವರಿಗೆ ಮುಜುಗರವಾಗುವುದು ದೊಡ್ಡ ಸಂಗತಿಯೇನಲ್ಲ. ಹೋರಾಟಗಾರರಿಗೆ ಸಮಾನವಾದ ನ್ಯಾಯ, ಗೌರವ ಸಲ್ಲಿಸಬೇಕಾದದ್ದು ಸಮಾಜವಾಗಿ ನಮ್ಮಕರ್ತವ್ಯ. ಗಾಂಧಿ-ನೆಹರು ಕುಟುಂಬಕ್ಕೆ ಜೀತ ಮಾಡುವ ಮನೋವೈಕಲ್ಯವನ್ನು ದೂರಗೊಳಿಸಿಕೊಂಡಾಗ ಪ್ರಜಾಪ್ರಭುತ್ವದ ದಾರಿ ತೆರೆದುಕೊಳ್ಳಲು ಸಾಧ್ಯ. ಇಷ್ಟೆಲ್ಲದರ ಆಚೆಗೂ ನೆಹರು ಈ ದೇಶದ ಎರಡನೆಯ ಪ್ರಧಾನಮಂತ್ರಿಯಾಗಿದ್ದರು. (ಇತಿಹಾಸದ ಪ್ರಕಾರ ಮೊದಲ ಪ್ರಧಾನಮಂತ್ರಿ ಸುಭಾಷ್​ಚಂದ್ರ ಬೋಸರು) ಅವರಿಗೆ ಸಂವಿಧಾನದತ್ತವಾಗಿ, ಪ್ರಜಾಸತ್ತಾತ್ಮಕ ಮೌಲ್ಯಯುತ ಸಮಾಜವಾಗಿ ಗೌರವವನ್ನು ನೀಡಬೇಕಿರುವುದು ಸರ್ಕಾರವಾಗಿ ನಮ್ಮಕರ್ತವ್ಯ. ಅಷ್ಟಕ್ಕೂ ಕೇವಲ ಒಂದು ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಇಲ್ಲದಿದ್ದರೆ ಜನ ಮರೆತುಹೋಗುವುದಿಲ್ಲ ಮತ್ತು ಅವರು ಭಾರತಕ್ಕೆ ಮಾಡಿರುವ ಅನ್ಯಾಯಗಳ ಪಟ್ಟಿ ಅವರನ್ನು ಮರೆಯಲು ಬಿಡುವುದೂ ಇಲ್ಲ.

(ಲೇಖಕರು ಬರಹಗಾರರು)