ಅಂಕಣ

ವಂಶ ರಾಜಕಾರಣ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ

Webdesk - Ravikanth
ಭಾರತದಂಥ ವೈವಿಧ್ಯಮಯ ಹಾಗೂ ವಿಶಾಲ ದೇಶದಲ್ಲಿ ಪ್ರತಿ ನಾಗರಿಕರಿಗೂ ಆಡಳಿತದಲ್ಲಿ ಸಮಾನ ಅವಕಾಶ ಸಿಗಬೇಕೆಂಬ ದೃಷ್ಟಿಯಿಟ್ಟುಕೊಂಡು ಸಂವಿಧಾನ ಕರ್ತರು ಬಹು-ಪಕ್ಷ ಪ್ರಜಾಪ್ರಭುತ್ವವನ್ನು ಅಳವಡಿಸಿದರು. ಬಡವಾತಿಬಡವರನ್ನು ಸಬಲೀಕರಿಸಿ ಅವರು ಕೂಡ ಸರ್ಕಾರದ ಅತ್ಯುನ್ನತ ಹುದ್ದೆ ತಲುಪುವುದನ್ನು ಖಾತರಿಪಡಿಸುವುದು ನಮ್ಮ ಸಂವಿಧಾನದ ಮೂಲ ತತ್ವವಾಗಿದೆ. ಆದರೆ, ಆರಂಭದಿಂದಲೂ ನಮ್ಮ ಬಹು-ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯು ಅಲುಗಾಡುತ್ತಲೇ ಇದ್ದು, ಸಂವಿಧಾನವು ಅನೇಕ ಸಂದರ್ಭಗಳಲ್ಲಿ ಅಗ್ನಿಪರೀಕ್ಷೆ ಎದುರಿಸಬೇಕಾಗಿತ್ತು. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ದೇಶದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಲು ರಚನೆಯಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ರಾಜಕೀಯಕರಣಗೊಳಿಸಿದ್ದು ಹಾಗೂ ನಂತರದಲ್ಲಿ ಪಕ್ಷದ ಮೇಲೆ ಒಂದು ಕುಟುಂಬದ ನಿಯಂತ್ರಣ ಸ್ಥಾಪನೆಯಾಗಿದ್ದು. ಎರಡನೆಯದಾಗಿ, ತಾನು ಸರ್ಕಾರ ರಚಿಸಿದ ರಾಜ್ಯಗಳಲ್ಲಿನ ಜನತೆಗೆ ಕಾಂಗ್ರೆಸ್ ದ್ರೋಹ ಎಸಗಿದ್ದು ಹಾಗೂ ಪ್ರಾದೇಶಿಕ ಆಶೋತ್ತರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು.

ಇದು ರಾಜ್ಯ-ಆಧಾರಿತ ರಾಜಕೀಯ ಪಕ್ಷಗಳ ಬೆಳವಣಿಗೆಗೆ ಹಾದಿ ಮಾಡಿಕೊಟ್ಟಿತು. ಅವುಗಳು ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಟಿಸಿಲುಗಳೇ ಆಗಿವೆ ಅಥವಾ ಪ್ರಾದೇಶಿಕ ಪಾಳೇಗಾರರ ನೇತೃತ್ವದ ಪಕ್ಷಗಳಾಗಿವೆ. ದುರದೃಷ್ಟವಶಾತ್, ಈ ರಾಜಕೀಯ ಪಕ್ಷಗಳನ್ನು ಕ್ರಮೇಣ ರಾಜಕೀಯ ದಿಗ್ಗಜರು ತಮ್ಮ ಕುಟುಂಬ ರಾಜಕಾರಣ ಮುಂದು ವರಿಸಲು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಈ ರಾಜಕೀಯ ಸಂಘಟನೆಗಳಲ್ಲಿ ಆಂತರಿಕ ಪ್ರಜಾ ಪ್ರಭುತ್ವದ ಕತ್ತು ಹಿಸುಕಲಾಯಿತು. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷ ಅರಂಭಿಸಿದ್ದ ಈ ಪ್ರವೃತ್ತಿಯನ್ನು ರಾಜ್ಯ- ಆಧಾರಿತ ಈ ವಂಶರಾಜಕಾರಣಿಗಳು ಎಗ್ಗಿಲ್ಲದೆ ಅಳವಡಿಸಿಕೊಂಡರು. ವಂಶಾಡಳಿತ ರಾಜಕಾರಣದಿಂದ ಆಗುವ ಅಪಾಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪದೇಪದೆ ಎಚ್ಚರಿಸುತ್ತಿದ್ದಾರೆ. ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ವೈವಿಧ್ಯಮಯವಾಗಿರುವ ನಮ್ಮ ದೇಶವು ಕುಟುಂಬ ರಾಜಕಾರಣದಿಂದಾಗಿ ದುರ್ಬಲಗೊಂಡಿದೆ ಎಂದವರು ಹೇಳಿದ್ದಾರೆ. ನಮ್ಮ ಸಮಾಜ ಹಾಗೂ ದೇಶದ ಒಳಿತಿಗಾಗಿ ಈ ಅನಿಷ್ಟದ ವಿರುದ್ಧ ಹೋರಾಡಲು ಕಾಲ ಕೂಡಿಬಂದಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ನಮ್ಮ ರಾಜಕೀಯದಲ್ಲಿ ಜನರ ಭಾಗವಿಸುವಿಕೆ ಮತ್ತು ಪ್ರಾತಿನಿಧ್ಯ ಹೆಚ್ಚಿಸಲು ಇದು ಸಕಾಲವಾಗಿದೆ. ವಿವಿಧ ಹಿನ್ನೆಲೆಯ ಯುವಜನರನ್ನು ರಾಜಕೀಯಕ್ಕೆ ತರುವುದು ಅಗತ್ಯವಾಗಿದೆ.

ಕಳೆದ ನಾಲ್ಕೈದು ದಶಕಗಳಿಂದ ಕುಟುಂಬ-ಆಧಾರಿತ ರಾಜಕೀಯ ಪಕ್ಷಗಳಿಂದಾಗಿ ಪ್ರತಿಭೆಗಳು ಕಮರಿ ಹೋಗಿದ್ದು, ರಾಜ್ಯಗಳ ಅಭಿವೃದ್ಧಿಗೆ ತೊಡಕಾಗಿದೆ. ವಂಶಾಡಳಿತದ ಈ ರಾಜಕೀಯ ಪಕ್ಷಗಳಿಗೆ ಯಾವುದೇ ತತ್ವ-ಸಿದ್ಧಾಂತಗಳಿಲ್ಲ, ದೂರದೃಷ್ಟಿಯೂ ಇಲ್ಲ. ಅಧಿಕಾರವನ್ನು ಕಬಳಿಸಿ ರಾಜ್ಯ ಹಾಗೂ ಜನರ ಹಿತ ಬಲಿಕೊಟ್ಟು ಅಧಿಕಾರಕ್ಕೆ ಅಂಟಿಕೊಂಡಿರುವುದಷ್ಟೇ ಅವುಗಳ ಗುರಿಯಾಗಿದೆ. ಮತ-ಬ್ಯಾಂಕ್ ಹಾಗೂ ತುಷ್ಟೀಕರಣ ರಾಜಕೀಯಕ್ಕೆ ಇದು ಕಾರಣವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಇದನ್ನೇ ಅಳವಡಿಸಿಕೊಂಡಿದೆ. ಕಾಂಗ್ರೆಸ್ ಇಂದು ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಅದು ಭಾರತೀಯವೂ ಅಲ್ಲ ಪ್ರಜಾಸತ್ತಾತ್ಮಕವೂ ಅಲ್ಲ. ಅದು ಸಹೋದರ-ಸಹೋದರಿ ಜೋಡಿಯ ಪಕ್ಷದ ಮಟ್ಟಕ್ಕೆ ಇಳಿದಿದೆ. ತಮ್ಮ ಬಂಧು-ಬಳಗಕ್ಕೆ ಅನುಕೂಲ ಮಾಡಿಕೊಡಲು ಈ ಪಕ್ಷಗಳು ಕೆಲಸ ಮಾಡುತ್ತವೆಯೇ ಹೊರತು ಸಮಾಜ ಮತ್ತು ದೇಶದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಗ್ರಾಮೀಣರು, ರೈತರು, ದಲಿತರು, ಮಹಿಳೆಯರು, ಯುವಜನರು ಇತ್ಯಾದಿಯಾಗಿ ಹೆಚ್ಚು ಗಮನ ಅಗತ್ಯವಾದ ಸಮಾಜದ ವಿಭಾಗಗಳನ್ನು ಈ ಪಕ್ಷಗಳು ನಿರ್ಲಕ್ಷಿಸಿವೆ. ವಂಶ ರಾಜಕಾರಣ, ವೋಟ್ ಬ್ಯಾಂಕ್​ಗಾಗಿ ತುಷ್ಟೀಕರಣದಿಂದಾಗಿ ಸಮಾಜದ ದೊಡ್ಡ ವಿಭಾಗಗಳ ಜನರು ತಮ್ಮ ಹಕ್ಕು ಮತ್ತು ಅನುಕೂಲಗಳಿಂದ ವಂಚಿತರಾಗಿದ್ದಾರೆ. ದೇಶ ಮತ್ತು ಸಮಾಜದ ಹಿತಕ್ಕೆ ವಿರುದ್ಧವಾದುದನ್ನು ಮಾಡಲು ಯಾವ ಮಟ್ಟಕ್ಕೆ ಹೋಗಲೂ ಅವು ಸಿದ್ಧವಿವೆ.

ಕುಟುಂಬಾಧಾರಿತ ಪಕ್ಷಗಳ ಇಂಥ ವಿಶಿಷ್ಟ ರಾಜಕೀಯದಿಂದಾಗಿಯೇ ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆಯಲು ಆಗಿರಲಿಲ್ಲ, ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಕ್​ನಿಂದ ಬಿಡುಗಡೆ ಮಾಡಲು ಆಗಿರಲಿಲ್ಲ, ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ.

370ನೇ ವಿಧಿ ಮತ್ತು ತ್ರಿವಳಿ ತಲಾಕ್ ತೆಗೆಯಲೆಂದು ಸಂಸತ್​ನಲ್ಲಿ ಮಂಡಿಸಿದ ಮಸೂದೆಗಳನ್ನು ಈ ಪಕ್ಷಗಳು ವಿರೋಧಿಸಿದವು. ಅಧಿಕಾರದಲ್ಲಿದ್ದಾಗ, ಭಯೋತ್ಪಾದನೆಗೆ ಭಾರತದ ಪ್ರತಿಕ್ರಿಯೆಯನ್ನು ದುರ್ಬಲಗೊಳಿಸುವ ಮೂಲಕ ದೇಶದ ಭದ್ರತೆ ಮತ್ತು ಸುರಕ್ಷತೆಯೊಂದಿಗೆ ಅವರು ಆಟವಾಡಿದರು. ನಂತರ, ಭಯೋತ್ಪಾದಕರ ವಿರುದ್ಧ ಗಡಿಯಾಚೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಗಳನ್ನು ಪ್ರಶ್ನಿಸಿಯೂ ಹೀಗೆ ಮಾಡಿದರು. ಪಾಕಿಸ್ತಾನವನ್ನು ಹೊಗಳಲೂ ಅವರು ಹಿಂಜರಿಯಲಿಲ್ಲ. ವಂಶಾಡಳಿತ ಪಕ್ಷಗಳು ನಮ್ಮ ಸಂವಿಧಾನಕ್ಕೆ ಬದ್ಧವಾಗಿಲ್ಲ. ಅವರಿಗೆ ಬಡವರ ಬಗ್ಗೆ ಕಾಳಜಿಯಲ್ಲ. ತಮ್ಮ ತಿಜೋರಿ ತುಂಬಿಸಿಕೊಳ್ಳುವುದಷ್ಟೇ ಅವರಿಗೆ ಗೊತ್ತಿರುವುದು. ಈ ಕಾರಣದಿಂದಾಗಿಯೇ ನಮ್ಮ ಜನಸಂಖ್ಯೆಯ ಮುಕ್ಕಾಲು ಭಾಗದ ಜನರಿಗೆ ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಬ್ಯಾಂಕ್ ಖಾತೆ ಇರಲಿಲ್ಲ. ಬಡ ಮಹಿಳೆಯರಿಗೆ ಅಡುಗೆ ಅನಿಲದ ಸೌಲಭ್ಯವಿರಲಿಲ್ಲ. ಬಡವರಿಗೆ ಆರೋಗ್ಯ ವಿಮೆ ಇರಲಿಲ್ಲ. ರೈತರನ್ನು ಲೇವಾಲೇವಿ ದಾರರು ವಂಚಿಸುತ್ತಿದ್ದರು. ಕೋಟ್ಯಂತರ ಕುಟುಂಬಗಳ ಮನೆಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸೌಕರ್ಯ ಇರಲಿಲ್ಲ. ಬಡವರಿಗೆ ವಾಸಕ್ಕೆ ಮನೆ ಇರಲಿಲ್ಲ. ವಂಶಾಡಳಿತ, ವೋಟ್-ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣದ ಬಗ್ಗೆ ಜನಸಾಮಾನ್ಯರಿಗೆ ಆಳವಾದ ಸಿಟ್ಟಾಗಲೀ ಅಪನಂಬಿಕೆಯಾಗಲೀ ಇರಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಅವರನ್ನು ನೋಡಿದಾಗಲೇ ಅವರಲ್ಲಿ ದೇಶ ಮತ್ತು ಸ್ವತಃ ತಮ್ಮ ಬಗ್ಗೆ ಆಶಾಕಿರಣ ಮೂಡಲು ಆರಂಭವಾಯಿತು. ದೇಶ ಮತ್ತು ಅದರ ರಾಜಕಾರಣ ವೇಗವಾಗಿ ಬದಲಾಗುತ್ತಿರುವುದನ್ನು ಅವರು ಕಂಡರು. ಬ್ಯಾಂಕ್​ಗಳೇ ತಮ್ಮ ಮನೆ ಬಾಗಿಲಿಗೇ ಬರುತ್ತಿರುವದನ್ನು ಕಂಡರು. ಬಡವರು ಮನೆಗಳು, ಆರೋಗ್ಯ ವಿಮೆ ಮತ್ತು ಕರೊನಾ ವೇಳೆ ಉಚಿತ ರೇಷನ್ ಪಡೆಯುತ್ತಿರುವುದನ್ನು ಅವರು ನೋಡಿದರು. ರೈತರಿಗೆ ಅಗತ್ಯವಾದ ಆರ್ಥಿಕ ನೆರವು ಸಿಗುತ್ತಿದೆ. ದೇಶದ ಎಲ್ಲ ಪ್ರಜೆಗಳಿಗೆ ಉಚಿತವಾಗಿ ಕರೊನಾ ಲಸಿಕೆ ಸಿಗುತ್ತಿದೆ.

2014ರ ನಂತರ, ವಿನಮ್ರ ಹಿನ್ನಲೆಯಿಂದ ಬಂದ ಇಬ್ಬರು ಭಾರತದ ರಾಷ್ಟ್ರಪತಿ ಹಾಗೂ ಪ್ರಧಾನಿ ಆಗಿದ್ದನ್ನು ಕಂಡಿತು. ಇದು ‘ನವ ಭಾರತ’ ಆಗಿದ್ದು ಇಡೀ ಜಗತ್ತು ಇದರ ಬಗ್ಗೆ ಮಾತನಾಡುತ್ತಿದೆ. ಭಾರತ ನಿಜ ಅರ್ಥದಲ್ಲಿ ಜಾಗತಿಕ ನಾಯಕ ಸ್ಥಾನವನ್ನು ಮರಳಿ ಗಳಿಸಿಕೊಂಡಿದೆ. ಬಿಜೆಪಿಯ ಪಯಣವು ಸುಲಭದ್ದಾಗಿರಲಿಲ್ಲ. ತನ್ನ ಸಿದ್ಧಾಂತ ಮತ್ತು ‘ಅಂತ್ಯೋದಯ’ದ ತತ್ವಗಳನ್ನು, ಸಮಗ್ರ ಮಾನವೀಯತೆ ಮತ್ತು ಸಾಂಸ್ಕೃತಿಕ ರಾಷ್ಟ್ರೀಯ ವಾದವನ್ನು ಪಾಲಿಸುತ್ತಾ ಬಂದ ಬಿಜೆಪಿ, ವಂಶ ರಾಜಕಾರಣಕ್ಕೆ ಅಸ್ಪಶ್ಯವಾಗಿತ್ತು. ಅದು ರಾಜಕೀಯ ಅಸ್ಪಶ್ಯತೆ, ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣದಂಥ ರಾಜಕೀಯದ ಅನಿಷ್ಟಗಳನ್ನು ಖಂಡಿಸಿತು. ಬಿಜೆಪಿ ನಿಯಮಿತವಾಗಿ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿದೆ. ಆದರೆ, ವಂಶ ರಾಕಾರಣದ ಪಕ್ಷದಲ್ಲಿ ಪಕ್ಷದ ಅಧ್ಯಕ್ಷ ಹುದ್ದೆ ಮತ್ತು ಸರ್ಕಾರದಲ್ಲಿ ಪಾಲ್ಗೊಳ್ಳುವಿಕೆ ‘ಕುಟುಂಬಕ್ಕೆ’ ಮೀಸಲಾಗಿದೆ.

ಚುನಾವಣೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ರಾಜಕೀಯ ಪಕ್ಷಗಳ ಸಂಖ್ಯೆ ತಗ್ಗಿಸಬೇಕು ಹಾಗೂ ಸಿದ್ಧಾಂತದ ಆಧಾರದಲ್ಲಿ ಅವುಗಳನ್ನು ಪುನರ್ ರೂಪಿಸಬೇಕೆಂದು ರಾಜಕೀಯ ಸುಧಾರಣೆ ಕುರಿತ ಆಯೋಗ ಸಲಹೆ ಮಾಡಿದೆ. ಕುಟುಂಬ ಆಧಾರಿತ ಪಕ್ಷಗಳು ಗುಡಿ ಕೈಗಾರಿಕೆಗಳಂತೆ ಹೆಚ್ಚಾಗುತ್ತಿದ್ದು, ಅದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಗಳ ಫಲಿತಾಂಶದ ರೂಪದಲ್ಲಿ ನಮ್ಮ ವಿವೇಕವಂತ ಮತದಾರರು ಸ್ಪಷ್ಟ ಸೂಚನೆ ನೀಡಿದ್ದು ಉತ್ತಮ ಬೆಳವಣಿಗೆಯಾಗಿದೆ. ದೇಶವನ್ನು ಕುಟುಂಬ ರಾಜಕಾರಣದಿಂದ ಹೊರತರಲು ಮಹಾರಾಷ್ಟ್ರದಿಂದ ತೆಲಂಗಾಣವರೆಗೆ, ಬಿಹಾರ, ಉತ್ತರ ಪ್ರದೇಶ, ಝಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಮತ್ತು ತಮಿಳುನಾಡುವರೆಗೆ ದೀರ್ಘ ಹೋರಾಟ ನಡೆಸಬೇಕಾಗಿದೆ.

(ಲೇಖಕರು ಬಿಜೆಪಿಯ ರಾಜ್ಯಸಭಾ ಸದಸ್ಯರು)