ಪೊಲೀಸ್ ಠಾಣೆ ಹಾಗೂ ಎಲ್ಲ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ಮಾಡಿದೆ. ತನಿಖೆ ಹೆಸರಿನಲ್ಲಿ ಆರೋಪಿತರಿಗೆ ಹಿಂಸೆ, ಕಿರುಕುಳ ನೀಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ. ಹಾಗಾದರೆ ಬಲಪ್ರಯೋಗ ಮಾಡದೆ ಒಬ್ಬ ಆರೋಪಿಯ ಬಾಯಿ ಬಿಡಿಸುವುದು ಹೇಗೆ? ಎಂಬ ಯಕ್ಷಪ್ರಶ್ನೆ ಪೊಲೀಸರ ಮುಂದಿದೆ. ಕಳ್ಳ, ಕೊಲೆಗಡುಕ, ಅತ್ಯಾಚಾರಿಗೆ ಗೌರವಾತಿಥ್ಯದಿಂದ ಗದ್ದ ಸವರಿ ‘ಸತ್ಯವನ್ನು ಹೇಳು’ ಎಂದರೆ ಆತ ಹೇಳುತ್ತಾನೆಯೇ? ಇಷ್ಟಕ್ಕೂ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಹಾಕಿದರೇನು? ಠಾಣೆಯಿಂದ ಆಚೆ ಗುಪ್ತ ಸ್ಥಳದಲ್ಲಿ ಆರೋಪಿಗಳನ್ನು ಚೆನ್ನಾಗಿ ವಿಚಾರಿಸುವ ತಂತ್ರಗಳನ್ನು ಪೊಲೀಸರು ಹುಡುಕುವುದಿಲ್ಲ ಎಂದು ಹೇಗೆ ನಂಬುವುದು?
ಕಾನೂನು ಉಲ್ಲಂಘನೆ, ಶಾಂತಿಭಂಗ ಮಾಡುವ ಸಾಮಾಜಿಕ ಕಂಟಕರನ್ನು ಹೊಡೆಯುವ, ವಿಚಾರಣೆ ಸಂದರ್ಭದಲ್ಲಿ ಬಲ ಪ್ರಯೋಗಿಸುವ, ತಮ್ಮವರನ್ನು ಅಥವಾ ಅಮಾಯಕರನ್ನು ಹತ್ಯೆ ಮಾಡಿದ್ದಾರೆ ಎಂಬ ಕಾರಣಕ್ಕೆ ಅಂಥವರನ್ನು ಎನ್ಕೌಂಟರ್ ಮಾಡುವ ಅಧಿಕಾರ ಪೊಲೀಸರಿಗೆ ಇದೆಯೆ? ಸ್ಥಾಪಿತ ಕಾನೂನು ನಿಯಮಗಳ ಅಡಿಯಲ್ಲಿ, ನ್ಯಾಯಿಕ ವಿಚಾರಣೆ ಪ್ರಕ್ರಿಯೆ ಮೂಲಕವಲ್ಲದೆ ಯಾವುದೇ ವ್ಯಕ್ತಿಯನ್ನು ಶಿಕ್ಷಿಸುವಂತಿಲ್ಲ. ಆರೋಪಿತನ ಕೃತ್ಯ ಅಪರಾಧ ಎಂದು ಸಾಬೀತಾಗುವವರೆಗೆ ಆತನು ನಿರಪರಾಧಿಯೇ. ಆರೋಪಿ ಅಪರಾಧ ಎಸಗಿದ್ದಾನೋ ಇಲ್ಲವೋ ಎಂಬುದನ್ನು ನ್ಯಾಯಾಲಯ ತೀರ್ವನಿಸುತ್ತದೆ. ಇಂಥ ವಿಚಾರಣಾ ಪ್ರಕ್ರಿಯೆಗೆ ಬೇಕಾದ ಸಾಕ್ಷ್ಯ, ಪುರಾವೆಗಳನ್ನು ತನಿಖೆ ಮೂಲಕ ನ್ಯಾಯಾಲಯಕ್ಕೆ ಒಪ್ಪಿಸುವ, ಆರೋಪಿಯನ್ನು ಹಾಜರಿಪಡಿಸುವ ಕೆಲಸ ಮಾತ್ರ ಪೊಲೀಸರದು.
ಹೊಡೆಯುವ, ಲಾಠಿಚಾರ್ಜ್, ಎನ್ಕೌಂಟರ್ ಮಾಡುವ ಕುರಿತು ಯಾವುದೇ ಕಾನೂನಿನಲ್ಲಿ ಹೇಳಿಲ್ಲ. ಹಾಗಾದರೆ ಹೊಡೆಯಬಾರದು ಎನ್ನುವುದಾದರೆ ಪೊಲೀಸರಿಗೆ ಲಾಠಿ, ಬೂಟು, ಬಂದೂಕು ಏಕೆ ಕೊಡಲಾಗುತ್ತದೆ? ಎಂಬ ಪ್ರಶ್ನೆ ಏಳುತ್ತದೆ. ಲಾಠಿ ಇರುವುದೇ ಹೊಡೆಯುವುದಕ್ಕೆ, ಬಂದೂಕು ಇರುವುದೇ ಕೊಲ್ಲುವುದಕ್ಕೆ ಎಂದು ತಿಳಿದುಕೊಂಡಿದ್ದರೆ, ಅದು ತಪು್ಪ. ಸಿಆರ್ಪಿಸಿ 129 ಕಲಂ ಪ್ರಕಾರ ಕಾನೂನುಬಾಹಿರವಾಗಿ ಒಟ್ಟುಗೂಡುವುದನ್ನು ಚದುರಿಸಲು ನಾಗರಿಕವಾದ ಶಕ್ತಿ ಬಳಸಬೇಕು. ದಂಡಾಧಿಕಾರಿಯು ಕಲಂ 130ರ ಪ್ರಕಾರ ಸಶಸ್ತ್ರಪಡೆ ಮುಖಾಂತರ ದಂಗೆ, ಆಸ್ತಿ, ಜೀವಹಾನಿ ಮುಂತಾದ ಘಟನೆಗಳನ್ನು ತಡೆಯಬೇಕು ಎಂದು ಹೇಳುತ್ತದೆ. ಆದರೆ, ಅಪರಾಧ ಕೃತ್ಯದ ಉದ್ದೇಶವಿಲ್ಲದೆ ಸಂಚರಿಸುವ ಜನರನ್ನು ಶಾಂತಿ, ಸುವ್ಯವಸ್ಥೆ ಮತ್ತು ನಿಯಮ ಪಾಲನೆ ಹೆಸರಿನಲ್ಲಿ ಮನಬಂದಂತೆ ಥಳಿಸುವ ಅಧಿಕಾರ ಪೊಲೀಸರಿಗೆ ಇಲ್ಲ. ಕಾನೂನಿನ ಪ್ರಕಾರ ಅವರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಬೇಕು.
ಯಾವುದೆ ವ್ಯಕ್ತಿಯನ್ನು ಸಕಾರಣವಿಲ್ಲದೆ ಬಂಧಿಸುವಂತಿಲ್ಲ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 41ರ ಪ್ರಕಾರ ಸೌಜ್ಞಾಪ್ರಕರಣಗಳಲ್ಲಿ ವ್ಯಕ್ತಿಯನ್ನು ಬಂಧಿಸಬಹುದು. ಬಂಧನದ ಕಾರಣಗಳನ್ನು ತಿಳಿಸಬೇಕು. ಕಾನೂನು/ವಕೀಲರ ನೆರವು ಪಡೆಯುವ ಅವಕಾಶವನ್ನು ಬಂಧಿತನಿಗೆ ನೀಡಬೇಕು. ಬಂಧಿಸಿದ 24 ತಾಸಿನೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು. ವಿಚಾರಣೆ ಹೆಸರಿನಲ್ಲಿ ಹಿಂಸೆ ನೀಡಬಾರದು. ಈ ಕುರಿತು ಜೋಗಿಂದರಕುಮಾರ್ V/S ಉತ್ತರಪ್ರದೇಶ (1994) ಪ್ರಕರಣ ಮತ್ತು ಡಿ.ಕೆ.ಬಸು V/S ಪಶ್ಚಿಮ ಬಂಗಾಳ(1997) ಪ್ರಕರಣಗಳಲ್ಲಿ ‘ವ್ಯಕ್ತಿಯ ಜೀವ ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸಬಾರದು’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಡಿ.ಕೆ.ಬಸು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಾರ್ಗಸೂಚಿಗಳನ್ನು ಪ್ರತಿ ಪೊಲೀಸ್ ಠಾಣೆಯಲ್ಲೂ ಸಾರ್ವಜನಿಕರಿಗೆ ಎದ್ದುಕಾಣುವಂತೆ ಪ್ರದರ್ಶಿಸಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೆ 2006ರಲ್ಲಿ ಪ್ರಕಾಶ ಸಿಂಗ್ V/S ಕೇಂದ್ರ ಸರ್ಕಾರ ಪ್ರಕರಣದಲ್ಲಿ ತನಿಖೆಯನ್ನು ಮಂಪರು ಪರೀಕ್ಷೆ, ವಿಡಿಯೋ ಚಿತ್ರಿಕರಣ ಮುಂತಾದ ವೈಜ್ಞಾನಿಕ ವಿಧಾನಗಳ ಮೂಲಕ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಎಂಥದ್ದೇ ಅಪರಾಧ ಎಸಗಿದ್ದರೂ ಆರೋಪಿಯನ್ನು ಎನ್ಕೌಂಟರ್ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ V/S ಮಹಾರಾಷ್ಟ್ರ-2014 ಪ್ರಕರಣ). ಆದರೆ ಆರೋಪಿಯು ಜೀವ ಮತ್ತು ಆಸ್ತಿಹಾನಿಗೆ ಮುಂದಾದಾಗ ಮಾತ್ರ ಆತ್ಮಸಂರಕ್ಷಣೆಗಾಗಿ ಗುಂಡು ಹಾರಿಸಬಹುದು ಎಂದು ಐಪಿಸಿ ಕಲಂ 100 ಮತ್ತು 101 ಹೇಳುತ್ತವೆ. ಮಾನವ ಹಕ್ಕು ಆಯೋಗ ಮತ್ತು ನ್ಯಾಯಾಲಯಗಳ ಶಿಫಾರಸ್ಸುಗಳ ಪ್ರಕಾರ ಗುಂಡು ಹಾರಿಸುವಾಗ ಆರೋಪಿಯ ಮೊಣಕಾಲು ಕೆಳಗೆ ಗುಂಡು ಹೊಡೆದು ಆತನನ್ನು ಜೀವಂತ ಸೆರೆ ಹಿಡಿಯಬೇಕು.
ಇನ್ನು ಕೆಲ ಸಂದರ್ಭಗಳಲ್ಲಿ ಆರೋಪಿ ವಿರುದ್ಧ ಬಲವಾದ ಸಾಕ್ಷ್ಯಗಳು ಸಿಗುವುದಿಲ್ಲ. ಆತ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಎನ್ಕೌಂಟರ್ಗಳು ನಡೆಯುತ್ತವೆ. ತೆಲಂಗಾಣದ ವೈದ್ಯವಿದ್ಯಾರ್ಥಿನಿ ಹತ್ಯೆ ಪ್ರಕರಣದಲ್ಲಿ ನಡೆದ ಎನ್ಕೌಂಟರ್ ಇದೇ ರೀತಿಯದು ಎಂದು ಸಮುದಾಯ ಭಾವಿಸಿದರೂ, ಕಾನೂನು ಇದನ್ನು ಒಪ್ಪಲಾರದು. ಆದರೆ, ನರಹಂತಕ ವೀರಪ್ಪನ್ನನ್ನು ಎನ್ಕೌಂಟರ್ ಮಾಡಿದ ಕ್ರಮವನ್ನು ತಮಿಳುನಾಡು ಹೈಕೋರ್ಟ್ ಸಮರ್ಥಿಸಿತು. ಕಾಶ್ಮೀರದಲ್ಲಿ ಭಯೋತ್ಪಾದಕರ, ಉತ್ತರಪ್ರದೇಶದಲ್ಲಿ ರೌಡಿಗಳ ಎನ್ಕೌಂಟರ್ ಆಗಾಗ ನಡೆಯುತ್ತವೆ. ಸಮಾಜಘಾತುಕರನ್ನು ಹತ್ಯೆ ಮಾಡಿದಾಗ ನ್ಯಾಯಾಲಯಗಳು ಮನ್ನಿಸಿವೆ. ಹಾಗಾಗಿ, ಪೊಲೀಸರು ಲಾಠಿ, ಬಂದೂಕು ಬಳಸಬಾರದೆಂದೇನಲ್ಲ. ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು, ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಶಾಂತಿ ಕಾಪಾಡಲು ಅವರು ದಂಡನೀತಿಯನ್ನು ಅನುಸರಿಸಲೇಬೇಕಾಗುತ್ತದೆ. ಖಡ್ಗ ಹರಿತವಾಗಿರುವಂತೆ, ಯಮ ಕ್ರೂರಿಯಾಗಿರುವಂತೆ, ಪೊಲೀಸ್ ವ್ಯವಸ್ಥೆ ಕಠೋರವಾಗಿರಲೇಬೇಕು.
(ಲೇಖಕರು ಹವ್ಯಾಸಿ ಬರಹಗಾರರು)