| ರಾಜೇಶ್ವರಿ ಪಿ., ಮೈಸೂರು
ಧರ್ಮಗಳು ತಮ್ಮದೇ ಆದ ಆಚಾರ ವಿಚಾರ, ನಡೆ ನುಡಿ, ಪದ್ಧತಿಗಳನ್ನು ಹೊಂದಿರುತ್ತವೆ. ಒಂದು ಅಪರೂಪದ ಭಾವವನ್ನು ಪ್ರೀತಿಯಿಂದ ಹೃದಯಕ್ಕೆ ಸ್ವಾಗತಿಸಿಕೊಳ್ಳುವುದೇ ಈ ಆಚರಣೆಗಳ ಮುಖ್ಯ ಉದ್ದೇಶ. ಮುಂಜಾನೆ ಎದ್ದು ಮನೆ ಮುಂದೆ ಗುಡಿಸಿ ಸಾರಿಸಿ ಒಂದು ಚೆಂದದ ರಂಗೋಲಿ ಇಟ್ಟಾಗ ಅದೊಂದು ಚಿಕ್ಕ ಕೆಲಸವೇ ಆಗಿರಬಹುದು, ಒಂದು ಕಲೆಯೇ ಆಗಿರಬಹುದು, ಅದರಲ್ಲಿ ಸಿಗುವ ಆನಂದವೇ ಬೇರೆ. ಹಾಗೆಯೇ ಶಿಲ್ಪಿಯೊಬ್ಬ ತನ್ನ ಕೈ ಚಳಕದಿಂದ ಕಲ್ಲನ್ನು ಕೆತ್ತಿ ಒಂದು ಸುಂದರ ಮೂರ್ತಿಯ ರೂಪ ಕೊಟ್ಟು ಅದನ್ನು ಮಂದಿರದೊಳಗಿಟ್ಟು ಹೂವುಗಳಿಂದ ಅಲಂಕರಿಸಿ ಪೂಜಿಸಿದಾಗ ಹೃದಯದಲ್ಲಿ ಸಂತೃಪ್ತ ಭಾವ ನೆಲೆಸುತ್ತದೆ. ಇವೆಲ್ಲವೂ ನಾವು ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡುವ ಆಚರಣೆಗಳೆ ಆಗಿದ್ದರೂ ಆ ಆನಂದದ ಸುಖವನ್ನು ಅನುಭವಿಸಿದಾಕ್ಷಣವೇ ಮನಸ್ಸಿನಲ್ಲಿ ನೆಮ್ಮದಿ, ಶಾಂತಿ ನೆಲೆಗೊಳ್ಳುತ್ತದೆ. ಪ್ರತಿಯೊಂದು ಹಬ್ಬದ ಆಚರಣೆಯಲ್ಲೂ ಒಂದು ವಿಶೇಷವಾದ ಆಸಕ್ತಿ ಹಾಗೂ ಶ್ರದ್ಧೆಯನ್ನು ಮೂಡಿಸುವಂತಹ ಸನ್ನಿವೇಶಗಳೇ ಆಗಿರುತ್ತವೆ. ಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯದ ಅನುಸರಣೆಯಲ್ಲಿ ಮನುಷ್ಯ ತನ್ನ ನಿತ್ಯ ಜೀವನದಲ್ಲಿ ಹೊಸತನವನ್ನು ಕಾಣುತ್ತಾನೆ. ಉತ್ಸಾಹದ ಬದುಕನ್ನು ಅನುಭವಿಸುತ್ತಾನೆ.
ಮಾಡುವ ಯಾವುದೇ ಕೆಲಸವಾಗಿರಲಿ ಅದರಲ್ಲಿ ಶ್ರದ್ಧೆ - ಪ್ರೀತಿಗಳೆರಡೂ ಬೆರೆತರೆ ಮಾತ್ರ ಬದುಕು ಸಾರ್ಥಕ್ಯದ ಕಡೆಗೆ ವಾಲುತ್ತದೆ. ಸಂತೃಪ್ತ ಭಾವದಿಂದ ಹೃದಯ ಮನಸ್ಸುಗಳೆರಡೂ ತುಂಬಿಬರುತ್ತದೆ. ಜೀವನದಲ್ಲಿ ಕಷ್ಟಗಳು ಸರತಿಯಂತೆ ಎದುರಾದ ಸಂದರ್ಭದಲ್ಲಿ ಮನುಷ್ಯ ಸಹಜವಾಗಿ ಧಾರ್ವಿುಕತೆಯತ್ತ ಮುಖ ಮಾಡುತ್ತಾನೆ. ಪ್ರಾರ್ಥನೆ ಪೂಜೆಗಳಂತಹ ಆಚರಣೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲಾರಂಭಿಸುತ್ತಾನೆ. ದೇವರ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದವನೂ ತನ್ನ ಕಣ್ಣಿಗೆ ಕಾಣದ ಶಕ್ತಿಯನ್ನು ಪ್ರೀತಿಯಿಂದ ಪ್ರಾರ್ಥನೆ ಮಾಡಿ ಆರಾಧಿಸಲಾರಂಭಿಸುತ್ತಾನೆ. ಆ ದೇವರು ನಮ್ಮ ಕಷ್ಟಗಳೆಲ್ಲವನ್ನೂ ದೂರ ಮಾಡುತ್ತಾನೆ ಎಂಬ ನಂಬಿಕೆಯೇ ನಮ್ಮನ್ನು ಕಾಪಾಡಲಾರಂಭಿಸುತ್ತದೆ. ಕೈಹಿಡಿದು ನಡೆಸಲಾರಂಭಿಸುತ್ತದೆ.
ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯದ ಗೀತೆಯ ಸಾರದಲ್ಲಿ ಭಕ್ತಿಭಾವದ ಬಗ್ಗೆ ವಿವರಿಸಲಾಗಿದೆ. ಅರ್ಜುನ ಭಗವಂತನನ್ನು ಕೇಳುತ್ತಾನೆ- ವ್ಯಕ್ತದ ಉಪಾಸನೆ ಮಾಡುವವನೋ, ಅವ್ಯಕ್ತದ ಉಪಾಸನೆ ಮಾಡುವವನೋ, ಇಬ್ಬರಲ್ಲಿ ಯಾರು ಹೆಚ್ಚು? ಅದಕ್ಕೆ ಭಗವಂತನ ಉತ್ತರ - ಯಾರು ನನ್ನಲ್ಲಿ ಮನಸ್ಸನ್ನು ನೆಲೆಗೊಳಿಸಿ ಉಪಾಸನೆ ಮಾಡುತ್ತಾರೋ ಅವರೇ ನನ್ನ ಭಕ್ತರು. ಸಕಲ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡು ಸರ್ವತ್ರ ಸಮಬುದ್ಧಿಯುಳ್ಳವರಾಗಿ ದೃಢ ಸಂಕಲ್ಪದಿಂದ ನನ್ನ ಉಪಾಸನೆ ಮಾಡುತ್ತಾರೋ ಅವರು ನನ್ನನ್ನು ಪಡೆಯುತ್ತಾರೆ. ಹಾಗೆಯೇ ಮನಸ್ಸಿನ ವಿಕಾರಗಳನ್ನು ನಿಗ್ರಹಿಸುವ ಅಭ್ಯಾಸಯೋಗವನ್ನು ಸಾಧಿಸು, ಯಮ ನಿಯಮಗಳನ್ನು ಪಾಲಿಸು, ಪ್ರಾಣಾಯಾಮ ಮಾಡು, ಆಸನಾದಿಗಳನ್ನು ಆಭ್ಯಾಸ ಮಾಡು, ಹೀಗೆ ಮನಸ್ಸನ್ನು ವಶಪಡಿಸಿಕೊಳ್ಳುವಂತಹ ಅಭ್ಯಾಸ ನಿನಗೆ ಸಾಧ್ಯವಲ್ಲದಿದ್ದರೆ ಏನೇ ಕೆಲಸ ಮಾಡಲಿ ನನಗಾಗಿ ಮಾಡುತ್ತಿದ್ದೇನೆಂದು ಭಾವಿಸು, ಹೀಗೆ ಮಾಡಮಾಡುತ್ತ ನಿನ್ನ ಮೋಹ ಆಸಕ್ತಿ, ಬಾಡಿಹೋಗುತ್ತದೆ, ಕ್ರಮೇಣ ನೀನು ಪರಿಶುದ್ಧನೂ ಅಕಳಂಕನೂ ಆಗುತ್ತೀಯೆ, ನಿನ್ನೊಳಗೆ ಪ್ರೇಮದ ಚಿಲುಮೆ ಚಿಮ್ಮುತ್ತದೆ, ಇದನ್ನು ಮಾಡಲಿಕ್ಕೂ ನಿನ್ನಿಂದ ಸಾಧ್ಯವಾಗದಿದ್ದರೆ ನಿನ್ನ ಸರ್ವಕರ್ಮಗಳ ಫಲವನ್ನು ತ್ಯಜಿಸು, ನಿನ್ನ ಕರ್ಮಗಳ ಫಲಕ್ಕಾಗಿ ಹಂಬಲಿಸಬೇಡ, ಪಾಲಿಗೆ ಬಂದ ಕೆಲಸವನ್ನು ಮಾಡುತ್ತಿರು, ಈ ದಾರಿಗಳಲ್ಲಿ ನಿನಗೆ ಒಂದು ಹೆಚ್ಚು ಒಂದು ಕಡಿಮೆ ಎಂದು ತಿಳಿಯಬೇಡ, ಅದರಲ್ಲಿ ನಿನಗೆ ಯಾವುದು ಸೂಕ್ತವೆನಿಸುವುದೋ ಅಂತಹ ಭಕ್ತಿಯ ಭಾವವನ್ನು ಅನುಸರಿಸು ಎಂದು ಕೃಷ್ಣ ಗೀತೆಯಲ್ಲಿ ಅರ್ಜುನನಿಗೆ ಹೇಳುತ್ತಾನೆ. ನಾವು ಏನೇ ಕೆಲಸ ಮಾಡಿದರೂ ಆ ಭಗವಂತನಿಗಾಗಿ ಮಾಡುತ್ತೇವೆ ಎಂಬ ಭಾವನೆಯಿಂದ ಮಾಡಿದರೆ ಸಾಕು ಅಲ್ಲಿ ಭಕ್ತಿಯ ಭಾವ ನೆಲೆಸುತ್ತದೆ, ನಮ್ಮ ಮನಸ್ಸಿನ ಭಾವನೆಗಳಿಗನುಗುಣವಾಗಿ ಭಗವಂತ ನಮ್ಮ ಮನದಲ್ಲಿ ನೆಲೆಸುತ್ತಾನೆ. ಅದೇ ಆನಂದದ ಅನುಭವದ ಅಪರೂಪದ ಭಾವ.