ಡಿಜಿಟಲ್ ಮಾಯೆ ಸ್ಮಾರ್ಟ್‌ಫೋನ್ ಎಂಬ ಎರಡು ಅಲಗಿನ ಕತ್ತಿ 
ಅಮೃತ ಸಿಂಚನ – ಸದ್ಗುರು ಶ್ರೀ ಮಧುಸೂದನ ಸಾಯಿ

ಡಿಜಿಟಲ್ ಮಾಯೆ ಸ್ಮಾರ್ಟ್‌ಫೋನ್ ಎಂಬ ಎರಡು ಅಲಗಿನ ಕತ್ತಿ

ವಿಶ್ವಾಸ್​ ಎನ್​ ಜೋಳದಾಳು
(ಲೇಖಕರು ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ಗುರುಗಳು.
https://srimadhusudansai.org/)
ಯುವಜನರು ಸ್ಮಾರ್ಟ್‌ಫೋನ್‌ಗಳ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗುತ್ತಿದ್ದಾರೆ. ಅವರನ್ನು ಇದರಿಂದ ಹೊರಗೆ ಕರೆತರುವುದು ಹೇಗೆ?’ ಎನ್ನುವ ಪ್ರಶ್ನೆಯನ್ನು ಹಲವರು ಹಲವು ಬಾರಿ ನನ್ನಲ್ಲಿ ಕೇಳಿದ್ದಾರೆ.

ಇದು ಕೇವಲ ಯುವಜನರ ಸಮಸ್ಯೆಯಲ್ಲ; ಇಡೀ ಆಧುನಿಕ ಸಮಾಜವನ್ನು ಕಾಡುತ್ತಿರುವ ಬಹುದೊಡ್ಡ ಆತಂಕ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಾಪ್‌ಗಳಂಥ ವೇದಿಕೆಗಳಲ್ಲಿ ಪ್ರತಿದಿನ ನೂರಾರು ಜನರೊಂದಿಗೆ ಸಂಪರ್ಕದಲ್ಲಿರುವ ಧಾವಂತದಲ್ಲಿ ಜನರು ತಮ್ಮ ಏಕಾಗ್ರತೆ ಹಾಗೂ ಬದುಕಿನ ನೈಜ ಉದ್ದೇಶವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅವರ ಶಾಲಾ-ಕಾಲೇಜುಗಳ ಅಧ್ಯಯನದ ಮೇಲೆಯೂ ಇದರ ಪರಿಣಾಮ ಗಂಭೀರವಾಗಿ ಕಾಣಿಸಿಕೊಳ್ಳುತ್ತಿದೆ. ಹೊರಗಿನ ಪ್ರಪಂಚದೊಂದಿಗೆ ಮತ್ತು ಸಾಮಾಜಿಕ ಸಂಬಂಧಗಳೊಂದಿಗೆ ಸದಾ ಸಂಪರ್ಕದಲ್ಲಿರಬೇಕು ಎಂಬ ವಿಪರೀತ ಒತ್ತಡಕ್ಕೆ ಸಿಲುಕಿ, ನಮ್ಮೊಳಗಿನ ಪ್ರಪಂಚದ ಸಂಪರ್ಕವನ್ನೇ ನಾವು ಕಡಿದುಕೊಂಡಿದ್ದೇವೆ, ಕಳೆದುಕೊಂಡಿದ್ದೇವೆ. ಈ ಡಿಜಿಟಲ್ ವ್ಯಸನದಿಂದ ಮುಕ್ತಿ ಪಡೆಯುವುದು ಹೇಗೆ ಮತ್ತು ಈ ತಂತ್ರಜ್ಞಾನವನ್ನು ನಮ್ಮ ಆಧ್ಯಾತ್ಮಿಕ ಹಾಗೂ ಬೌದ್ಧಿಕ ಪ್ರಗತಿಗೆ ಹೇಗೆ ಬಳಸಿಕೊಳ್ಳಬಹುದು ಎನ್ನುವುದು ಇಂದಿನ ಅತಿಮುಖ್ಯ ಚಿಂತನೆಯಾಗಿದೆ.
ಈ ಸಮಸ್ಯೆಯ ಮೂಲ ಬೇರು ಇರುವುದು ಯಾವುದೋ ಸಾಧನ (ಟೂಲ್) ಅಥವಾ ಅಪ್ಲಿಕೇಶನ್‌ಗಳಲ್ಲಿ (ಆಪ್) ಅಲ್ಲ. ನಿಜವಾದ ಸಮಸ್ಯೆ ಇರುವುದು ನಮ್ಮ ಮನಸ್ಸಿನಲ್ಲಿ ಮತ್ತು ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದ ನಮ್ಮ ಜೀವನಶೈಲಿಯಲ್ಲಿ. ನಿಮ್ಮೊಂದಿಗೆ ನೀವು ನಿಜಕ್ಕೂ ಸಂತೋಷವಾಗಿದ್ದರೆ, ನಿಮ್ಮ ಬದುಕಿನ ರೀತಿಯಲ್ಲಿ ಸಂತೃಪ್ತಿಯಿದ್ದರೆ ಸಂತೋಷಕ್ಕಾಗಿ ನಿಮಗೆ ಮತ್ತೊಬ್ಬರ ಅಥವಾ ಮತ್ತೊಂದು ಸಾಧನದ ಅಗತ್ಯವೇ ಬರುವುದಿಲ್ಲ. ನಿಮ್ಮೊಳಗೆ ನೀವು ಕಂಡುಕೊಳ್ಳಬೇಕಾದ ಸಂತೋಷವನ್ನು ನೀವು ಅದೆಲ್ಲೋ ಫೇಸ್‌ಬುಕ್‌ನಲ್ಲೋ, ಇನ್‌ಸ್ಟಾದಲ್ಲೋ ಹುಡುಕಲು ಶುರು ಮಾಡಿದರೆ ಸಮಸ್ಯೆಗಳು ಆರಂಭವಾಗುತ್ತವೆ. ನೀವು ಏನಾಗಿದ್ದೀರೋ, ಹೇಗಿದ್ದೀರೋ ಮತ್ತು ಎಲ್ಲಿದ್ದೀರೋ ಆ ವಾಸ್ತವವನ್ನು ಮನಃಪೂರ್ವಕವಾಗಿ ಅನುಭವಿಸುವಂತಿದ್ದರೆ, ನಿಮ್ಮ ಸಂತೋಷವನ್ನು ದೃಢೀಕರಿಸಲು ನಿಮಗೆ ಹೊರಜಗತ್ತಿನ ರಂಜನೆಯ ಅವಶ್ಯಕತೆಯಿರುವುದಿಲ್ಲ. ನಿಮಗೆ ಪರಿಪೂರ್ಣವಾದ ‘ಆತ್ಮತೃಪ್ತಿ’ ಇರುತ್ತದೆ. ಆದರೆ, ಇಂದಿನ ಬಹುತೇಕ ಜನರಿಗೆ, ವಿಶೇಷವಾಗಿ ಯುವಜನರಿಗೆ ಈ ಆತ್ಮತೃಪ್ತಿ ಇಲ್ಲ ಎನ್ನುವುದೇ ಅತಿದೊಡ್ಡ ಸವಾಲು. ಅವರ ಮನಸ್ಸು ಸದಾ ಚಡಪಡಿಸುತ್ತಿರುತ್ತದೆ. ಯಾವುದೋ ಕ್ಷಣಿಕ ಸಂತೋಷದ ಹುಡುಕಾಟದಲ್ಲಿ ಇರುತ್ತದೆ.
ಬೇರೆ ಯಾರೋ ಬಂದು, ಅಥವಾ ಯಾವುದೋ ವಿಡಿಯೋ ಬಂದು ತಮ್ಮನ್ನು ಖುಷಿಪಡಿಸುತ್ತದೆ, ರಂಜಿಸುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಅವರು ಸದಾ ಇರುತ್ತಾರೆ. ಅವರ ಮನಸ್ಸು ಹುಡುಕಾಟದಲ್ಲೇ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾರುತ್ತಿರುತ್ತದೆ. ಏನನ್ನು ಹುಡುಕುತ್ತಿದ್ದೇವೆ ಎನ್ನುವ ಅರಿವೂ ಅವರಿಗೆ ಇರುವುದಿಲ್ಲ. ಒಂದಷ್ಟು ಹೊತ್ತು ಮೌನವಾಗಿ ಕೂತು ತಮ್ಮೊಳಗೆ ಹುಡುಕಾಡಿದರೆ ಅವರಿಗೆ ಬೇಕಾಗಿದ್ದು ಸಿಗಬಹುದು. ಆದರೆ, ಅದಕ್ಕೆ ಅವರಲ್ಲಿ ಸಂಯಮ ಇರುವುದಿಲ್ಲ. ಯಾವುದೇ ತೊಂದರೆ ಇಲ್ಲದೆ, ಒಂದೇ ಸ್ಥಳದಲ್ಲಿ ಕುಳಿತು ಎರಡೂವರೆ ತಾಸಿನ ಚಲನಚಿತ್ರವನ್ನು ಅವರು ನೋಡಬಲ್ಲರು; ಆದರೆ, ಕೇವಲ ಹತ್ತು ನಿಮಿಷಗಳ ಕಾಲ ಕಣ್ಮುಚ್ಚಿ ಕುಳಿತು ಧ್ಯಾನ ಮಾಡುವುದು ಮತ್ತು ತಮ್ಮ ಉಸಿರಾಟವನ್ನು ಗಮನಿಸುವುದು ಅವರಿಗೆ ಅತ್ಯಂತ ಕಷ್ಟಕರವಾಗುತ್ತದೆ.
ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು, ನಮ್ಮ ಮನಸ್ಸನ್ನು ಸೃಷ್ಟಿಸಿರುವ ರೀತಿಯೇ ಹಾಗಿದೆ. ಅದು ಯಾವಾಗಲೂ ‘ಬಹಿರ್ಮುಖ’ವಾಗಿಯೇ ಇರುತ್ತದೆ. ಅಂದರೆ ಅದು ಸದಾ ಹೊರಜಗತ್ತಿಗೆ ತನ್ನನ್ನು ತೆರೆದುಕೊಳ್ಳಲು ಬಯಸುತ್ತಿರುತ್ತದೆ. ಕಣ್ಣು (ನೋಟ), ಕಿವಿ (ಶ್ರವಣ), ನಾಲಿಗೆ (ರುಚಿ), ಚರ್ಮ (ಸ್ಪರ್ಶ) ಮತ್ತು ಮೂಗು (ವಾಸನೆ) ಮೂಲಕ ಇಂದ್ರಿಯಗಳಿಗೆ ಸುಖವನ್ನು ಒದಗಿಸಲು ಅದು ಸದಾ ಹೊರಜಗತ್ತನ್ನೇ ಹುಡುಕುತ್ತಿರುತ್ತದೆ. ಇದರಿಂದ ಹೊರಬರುವುದು ಸಾಧ್ಯವಿದೆಯೇ? ಖಂಡಿತ ಸಾಧ್ಯವಿದೆ. ಗುರುತ್ವಾಕರ್ಷಣೆಯ ನಿಯಮದಂತೆ, ವಸ್ತುವೊಂದನ್ನು ಕೆಳಗೆಸೆಯುವುದು ಅತ್ಯಂತ ಸುಲಭ; ಅದು ಸ್ವಾಭಾವಿಕವಾಗಿ ಕೆಳಗೆ ಬೀಳುತ್ತದೆ. ಆದರೆ ಅದೇ ವಸ್ತುವನ್ನು ಮೇಲಕ್ಕೆತ್ತಬೇಕಾದರೆ ನೀವು ಹೆಚ್ಚಿನ ಶ್ರಮ ಮತ್ತು ಶಕ್ತಿಯನ್ನು ಹಾಕಬೇಕಾಗುತ್ತದೆ.
ನಮ್ಮ ಮನಸ್ಸೂ ಇದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಅದು ಸುಲಭವಾಗಿ ಕೆಳಮಟ್ಟದ ಇಂದ್ರಿಯ ಸುಖಗಳಿಗೆ ಜಾರುತ್ತದೆ, ಆದರೆ ಅದನ್ನು ಮೇಲಕ್ಕೆತ್ತಿ ‘ಅಂತರ್ಮುಖಿ’ಯಾಗಿಸಲು ಸತತವಾದ ಅಭ್ಯಾಸ ಮತ್ತು ದೃಢಸಂಕಲ್ಪದ ಅಗತ್ಯವಿದೆ. ಬದುಕಿನ ಆಟದಲ್ಲಿ ನಮಗೆ ಎದುರಾಳಿ ಬೇರೆ ಯಾರೂ ಅಲ್ಲ. ನಮ್ಮ ಮನಸ್ಸು ನಮ್ಮ ಎದುರಾಳಿ ಆಟಗಾರನಿದ್ದಂತೆ. ನೀವು ಗುರಿಮುಟ್ಟದಂತೆ ಅದು ಸದಾ ತಡೆಯೊಡ್ಡುತ್ತಿರುತ್ತದೆ ಮತ್ತು ಇಂದ್ರಿಯಗಳ ಸುಖದತ್ತಲೇ ನಿಮ್ಮನ್ನು ಎಳೆಯುತ್ತಿರುತ್ತದೆ.
ಒಮ್ಮೆ ನೀವು ಮನಸ್ಸನ್ನು ಗೆದ್ದು, ನಿಮ್ಮೊಳಗೆ ನೀವು ಆತ್ಮಸಂತೃಪ್ತಿಯನ್ನು ಅನುಭವಿಸಿದರೆ, ನಿಮ್ಮನ್ನು ರಂಜಿಸಲು ಯಾವುದೇ ಬಾಹ್ಯ ಸಾಧನಗಳ ಅಗತ್ಯವೇ ಇರುವುದಿಲ್ಲ. ಜನರು ತಮ್ಮ ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಲು ವಿಫಲರಾಗಿರುವುದರಿಂದಲೇ ಸತತವಾಗಿ ಇಂಟರ್ನೆಟ್ ಸಂಪರ್ಕದಲ್ಲಿರಬೇಕೆಂದು ಬಯಸುತ್ತಾರೆ. ಅಂಥವರು ತಮ್ಮ ಇಂದ್ರಿಯಗಳಿಗೆ ಸಂಪೂರ್ಣ ದಾಸರಾಗಿರುತ್ತಾರೆ. ಫೋನ್ ಇಲ್ಲದೆ ಅವರನ್ನು ಒಂದು ಕೊಠಡಿಯೊಳಗೆ ಒಂಟಿಯಾಗಿ ಬಿಟ್ಟರೆ, ಚಡಪಡಿಸುತ್ತಾರೆ ಹಾಗೂ ಕೆಲವೇ ಕ್ಷಣಗಳಲ್ಲಿ ಉಸಿರುಗಟ್ಟಿದಂತಾಗಿ ಹೊರಗೆ ಓಡಿಬರುತ್ತಾರೆ. ಏಕೆಂದರೆ, ಅವರು ಎಂದಿಗೂ ತಮಗೆ ತಾವೇ ಮುಖಾಮುಖಿಯಾಗಿಲ್ಲ, ತಮ್ಮೊಂದಿಗೆ ತಾವು ಒಂಟಿಯಾಗಿ ಸಮಯ ಕಳೆದಿಲ್ಲ, ತಮ್ಮ ಮನಸ್ಸಿನೊಂದಿಗೆ ಏಕಾಂತದಲ್ಲಿ ಮಾತನ್ನೇ ಆಡಿಲ್ಲ, ಒಳದನಿಯನ್ನು ಕೇಳಿಸಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ. ತಮ್ಮಷ್ಟಕ್ಕೆ ತಾವು ಹೇಗೆ ತೃಪ್ತರಾಗಿರಬೇಕೆಂದು (ಆತ್ಮತೃಪ್ತಿ) ಅವರಿಗೆ ತಿಳಿದಿಲ್ಲ. ಇದು ದೊಡ್ಡ ಸವಾಲು ಮತ್ತು ಇದನ್ನು ಎದುರಿಸಿ ಗೆಲ್ಲಲು ಆರಂಭದಲ್ಲಿ ನೀವು ಮನಸ್ಸನ್ನು ಬಲವಂತವಾಗಿ ಒಳಗೆ ಸೆಳೆದುಕೊಳ್ಳಬೇಕಾಗುತ್ತದೆ. ಈ ಪ್ರಯತ್ನದಿಂದ ನೀವು ದೂರ ಉಳಿದರೆ, ಸಾಮಾಜಿಕ ಮಾಧ್ಯಮಗಳೆಂಬ ಮಾಯಾಜಾಲದಲ್ಲಿ ಮನಸ್ಸು ನಿಮ್ಮನ್ನು ಇನ್ನಷ್ಟು ಹೊರಗೆ ಎಳೆಯುತ್ತಲೇ ಇರುತ್ತದೆ.
ಹಾಗಾದರೆ ತಂತ್ರಜ್ಞಾನ ಕೆಟ್ಟದ್ದೇ? ಖಂಡಿತ ಇಲ್ಲ. ತಂತ್ರಜ್ಞಾನ ಅಥವಾ ಸ್ಮಾರ್ಟ್‌ಫೋನ್‌ಗಳು ಅವುಗಳಷ್ಟಕ್ಕೆ ಅವು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಅವು ಉಪಕರಣ ಮಾತ್ರ. ಉದಾಹರಣೆಗೆ ಒಂದು ಚಾಕುವನ್ನು ತೆಗೆದುಕೊಳ್ಳಿ: ಅದನ್ನು ತರಕಾರಿ ಹೆಚ್ಚಲೂ ಬಳಸಬಹುದು, ಅಥವಾ ಯಾರನ್ನಾದರೂ ಕೊಲ್ಲಲೂ ಬಳಸಬಹುದು. ನಾವು ಚಾಕುವನ್ನು ದೂರುವಂತಿಲ್ಲ; ಅದು ಕೇವಲ ಒಂದು ಸಾಧನ. ಹೀಗೆಯೇ ಜಗತ್ತಿನಲ್ಲಿ ಎಲ್ಲದಕ್ಕೂ ಎರಡು ಮುಖಗಳಿವೆ. ಅದನ್ನು ನೀವು ಹೇಗೆ ಉಪಯೋಗಿಸುತ್ತೀರಿ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಆಧುನಿಕ ತಂತ್ರಜ್ಞಾನವನ್ನು ಯಾವಾಗ ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಇಂದಿನ ಜಗತ್ತಿನಲ್ಲಿ ಮಾಹಿತಿಯು ಅತಿ ಮಹತ್ವದ ಸ್ಥಾನ ಪಡೆದಿದೆ. ತಂತ್ರಜ್ಞಾನವು ನಿಮಗೆ ಉಪಯುಕ್ತ ಜ್ಞಾನವನ್ನು ಪೂರೈಸಿದರೆ, ಅದು ಒಳ್ಳೆಯದು. ಆ ಮಾಹಿತಿಯು ನಿಮ್ಮಲ್ಲಿ ಸಕಾರಾತ್ಮಕ ಪರಿವರ್ತನೆಗೆ ಕಾರಣವಾದರೆ ಅದು ಇನ್ನೂ ಶ್ರೇಷ್ಠ. ತಂತ್ರಜ್ಞಾನವನ್ನು ಪ್ರಪಂಚದ ಮೂಲೆಮೂಲೆಯಲ್ಲಿರುವ ಜನರೊಂದಿಗೆ ಸತ್ಕಾರ್ಯಗಳಿಗಾಗಿ ಸಂಪರ್ಕ ಬೆಳೆಸಲು, ಯೋಜನೆಗಳನ್ನು ವೇಗವಾಗಿ ಮುಗಿಸಲು ಬಳಸಬಹುದು. ನಮ್ಮ ಶಿಕ್ಷಣ ಸಂಸ್ಥೆಗಳಲ್ಲೂ ನಾವು ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಮೂಲಕ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಪ್ರಯತ್ನಿಸುತ್ತೇವೆ. ಆದರೆ, ಅದೇ ತಂತ್ರಜ್ಞಾನವನ್ನು ಕೇವಲ ಮನರಂಜನೆ, ವ್ಯರ್ಥ ಕಾಲಹರಣ ಮತ್ತು ಇಂದ್ರಿಯ ಸುಖಕ್ಕಾಗಿ ಬಳಸಿದರೆ, ನಿಮ್ಮ ಮನಸ್ಸೇ ನಿಮ್ಮ ಅತ್ಯಂತ ಕ್ರೂರ ಶತ್ರುವಾಗುತ್ತದೆ.
ನಿಮ್ಮ ಫೋನ್ ನಿಮಗೆ ಸ್ನೇಹಿತನೋ ಅಥವಾ ಶತ್ರುವೋ ಎನ್ನುವುದು ನಿಮ್ಮ ಕೈಯಲ್ಲೇ ಇದೆ. ಭಗವದ್ಗೀತೆಯಲ್ಲಿ (6.5) ಭಗವಾನ್ ಶ್ರೀಕೃಷ್ಣನು ಅತ್ಯದ್ಭುತವಾದ ಮಾತೊಂದನ್ನು ಹೇಳಿದ್ದಾನೆ:
‘ಆತ್ಮೈವ ರಿಪುರ್ ಆತ್ಮನಃ,
ಆತ್ಮೈವ ಹ್ಯಾತ್ಮನೋ ಬಂಧುಃ’
ಅಂದರೆ, ನಿಮಗೆ ನೀವೇ ಗೆಳೆಯರು, ನಿಮಗೆ ನೀವೇ ಶತ್ರುಗಳು.
ತಾಂತ್ರಿಕ ಸಾಧನಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದು ಸಂಪೂರ್ಣವಾಗಿ ನಿಮ್ಮ ವಿವೇಚನೆಗೆ ಬಿಟ್ಟದ್ದು. ನೀವು ಇವುಗಳಿಗೆ ಮಾರುಹೋಗಿ ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂದು ಅನಿಸಿದ ಕೂಡಲೇ ಎಚ್ಚೆತ್ತುಕೊಳ್ಳಿ. ಫೋನ್ ಬಳಸಲು ದಿನದಲ್ಲಿ ಇಂತಿಷ್ಟೇ ಸಮಯ ಎಂದು ಪ್ರತ್ಯೇಕವಾಗಿ ಮೀಸಲಿಡಿ. ಎಷ್ಟರ ಮಟ್ಟಿಗೆ ಬಳಸಬೇಕು ಎಂದು ನಿಮಗೇ ನೀವೇ ಕಡಿವಾಣ ಹಾಕಿಕೊಳ್ಳಿ. ಹೆಚ್ಚಿನ ತಾಯಂದಿರು ತಮ್ಮ ಮಕ್ಕಳು ಹೊರಗೆ ಹೋಗಿ ಆಟವಾಡದೆ ಕೇವಲ ಕಂಪ್ಯೂಟರ್, ಮೊಬೈಲ್ ಫೋನ್‌ಗಳಲ್ಲಿ ಮುಳುಗಿರುತ್ತಾರೆ ಎಂದು ದೂರುತ್ತಾರೆ. ಆದರೆ ಈ ಸಾಧನಗಳನ್ನು ಅವರಿಗೆ ಕೊಟ್ಟವರು ಯಾರು? ಆ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಮನೋನಿಯಂತ್ರಣವನ್ನು ಕಲಿಸಿಕೊಡುವ ಜವಾಬ್ದಾರಿ ಹಿರಿಯರಾದ ನಿಮ್ಮ ಮೇಲಿದೆ. ಸಾಮಾಜಿಕ ಜಾಲತಾಣದ ಹೊಂಡಕ್ಕೆ ಬೀಳದಂತೆ ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿ. ಇಲ್ಲದೇ ಇದ್ದರೆ ನಿಮ್ಮ ಮಕ್ಕಳಿಗೆ ಹೇಳುವ ಯಾವ ನೈತಿಕತೆಯೂ ನಿಮಗೆ ಇರುವುದಿಲ್ಲ. ಒಂದನ್ನು ಸದಾ ನೆನಪಲ್ಲಿ ಇಟ್ಟುಕೊಳ್ಳಿ- ತಂತ್ರಜ್ಞಾನವು ಎರಡು ಅಲಗಿನ ಕತ್ತಿಯಿದ್ದಂತೆ; ಅದು ಎರಡೂ ಕಡೆಯಿಂದಲೂ ಕತ್ತರಿಸಬಲ್ಲದು. ಆದ್ದರಿಂದ, ಅತ್ಯಂತ ಎಚ್ಚರಿಕೆಯಿಂದ ಇರಬೇಕು. ನಿಯಂತ್ರಣವು ನಿಮ್ಮ ಕೈಯಲ್ಲೇ ಇದೆ; ಬೇರೆ ಯಾರೂ ನಿಮ್ಮ ನೆರವಿಗೆ ಬರುವುದಿಲ್ಲ, ನಿಮ್ಮ ಆಂತರಿಕ ಶಕ್ತಿಯಿಂದ ನಿಮ್ಮನ್ನು ನೀವೇ ಉದ್ಧಾರ ಮಾಡಿಕೊಳ್ಳಬೇಕು.