(ಲೇಖಕರು ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ಗುರುಗಳು)
ಯಸ್ಯಾಂತಃ ಸ್ಯಾದ್ ಅಹಂಕಾರೋ ನ ಕರೋತಿ ಕರೋತಿ ಸಃ |
ನಿರಹಂಕಾರ ಧೀರೇಣ ನ ಕಿಂಚಿದಕೃತಂ ಕೃತಮ್ ||
ಈ ಶ್ಲೋಕದ ಸಾರವೇನೆಂದರೆ, ಅಹಂಕಾರವಿರುವ ವ್ಯಕ್ತಿ ತನ್ನನ್ನು ದೇಹ ಮತ್ತು ಮನಸ್ಸಿನೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುತ್ತಾನೆ. ಆದ್ದರಿಂದ ದೇಹ ಮತ್ತು ಮನಸ್ಸಿನ ಮೂಲಕ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ತಾನೇ ಕರ್ತನೆಂದು ಭಾವಿಸುತ್ತಾನೆ. ಹೀಗಾಗಿ ಏನನ್ನೂ ಮಾಡದಿದ್ದರೂ, ಎಲ್ಲವನ್ನೂ ತಾನೇ ಮಾಡುತ್ತಿದ್ದೇನೆ ಎಂಬ ಭಾವನೆ ಅವನಲ್ಲಿ ಮೂಡುತ್ತದೆ. ಆದರೆ ಅಹಂಕಾರವನ್ನು ಮೀರಿದ ವ್ಯಕ್ತಿಗೆ ‘ನಾನು ಮಾಡುತ್ತಿದ್ದೇನೆ’ ಎಂಬ ಕರ್ತೃತ್ವದ ಭಾವವೇ ಇರುವುದಿಲ್ಲ. ಆದ್ದರಿಂದ ಕ್ರಿಯೆ ಮತ್ತು ಅಕ್ರಿಯೆ ಎರಡೂ ಅವನಿಗೆ ಸಮಾನವಾಗಿರುತ್ತವೆ. ಅವನು ಎಲ್ಲವನ್ನೂ ಸಾಕ್ಷಿಭಾವದಿಂದ ನೋಡುತ್ತಾನೆ. ಅವನಿಗೆ ಯಶಸ್ಸು ಉಲ್ಲಾಸವನ್ನು ತರುವುದಿಲ್ಲ. ವೈಫಲ್ಯ ದುಃಖವನ್ನೂ ನೀಡುವುದಿಲ್ಲ. ಏಕೆಂದರೆ ಅವನು ತನ್ನನ್ನು ಕ್ರಿಯೆಗಳ ಕರ್ತನೆಂದು ಅಲ್ಲ, ಅವುಗಳ ಸಾಕ್ಷಿಯೆಂದು ಅರಿತುಕೊಂಡಿರುತ್ತಾನೆ.
ಈ ಒಂದು ಶ್ಲೋಕವೇ ನಮ್ಮ ಆಧ್ಯಾತ್ಮಿಕ ಬೆಳವಣಿಗೆಯನ್ನು ಅಳೆಯುವ ಸರಳ ಮಾನದಂಡ. ನಮ್ಮೊಳಗೆ ‘ನಾನು’ ಎಂಬ ಭಾವನೆ ಎಷ್ಟು ಪ್ರಬಲವಾಗಿದೆಯೋ, ಅಷ್ಟರ ಪ್ರಮಾಣದಲ್ಲಿ ಅಹಂಕಾರ ಮನೆ ಮಾಡಿರುತ್ತದೆ. ಹಾಗಾದರೆ, ನಮ್ಮ ಇಗೋ ಮೀಟರ್ ಯಾವ ಮಟ್ಟದಲ್ಲಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ನಾವು ಯಾವುದೇ ಕ್ರಿಯೆ ಅಥವಾ ಅದರ ಫಲಕ್ಕೆ ಅಂಟಿಕೊಳ್ಳಬಾರದು. ನಮ್ಮ ಹೆಸರು, ಹುದ್ದೆ ಮತ್ತು ಸ್ಥಾನಮಾನಗಳೊಂದಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದನ್ನು ಬಿಟ್ಟಾಗ ಮಾತ್ರ ಇದು ಸಾಧ್ಯ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ, ಅನೇಕ ಬಾರಿ ನಮ್ಮ ಅಂತರ್ಗತ ಸ್ವಭಾವವೇ ತನ್ನ ಸ್ವಾಭಾವಿಕ ಪ್ರೇರಣೆಯಿಂದ ವ್ಯಕ್ತವಾಗುತ್ತದೆ. ಈ ಸತ್ಯವನ್ನು ಅರಿತ ವ್ಯಕ್ತಿ ಕ್ರಿಯೆಗೂ, ಅದರ ಫಲಕ್ಕೂ ಬಂಧಿಯಾಗುವುದಿಲ್ಲ. ಆದ್ದರಿಂದ ಜ್ಞಾನಿಗಳು ಜಗತ್ತಿನಲ್ಲಿ ಎಷ್ಟೇ ಕಾರ್ಯಗಳನ್ನು ಮಾಡಿದರೂ ಅವುಗಳಿಗೆ ಅಂಟಿಕೊಳ್ಳುವುದಿಲ್ಲ. ಯಶಸ್ಸು ಅವರನ್ನು ಉಬ್ಬಿಸುವುದಿಲ್ಲ. ವೈಫಲ್ಯ ಅವರನ್ನು ಕುಗ್ಗಿಸುವುದಿಲ್ಲ. ಆತಂಕ, ಸಂತೋಷ, ನಿರಾಶೆ ಅಥವಾ ಖಿನ್ನತೆಯಂತಹ ಭಾವನೆಗಳು ಅವರನ್ನು ಅಲುಗಾಡಿಸುವುದಿಲ್ಲ.
ಇದರ ಮೂಲ ಕಾರಣವೆಂದರೆ, ಅವರು ತಾವು ದೇಹವೂ ಅಲ್ಲ, ಮನಸ್ಸೂ ಅಲ್ಲ ಎಂಬ ಸತ್ಯವನ್ನು ಅರಿತಿರುತ್ತಾರೆ. ಶ್ರೀಕೃಷ್ಣನ ಭಾಷೆಯಲ್ಲಿ ಹೇಳುವುದಾದರೆ, ಕ್ರಿಯೆಗಳು ಪ್ರಕೃತಿಯ ಗುಣಗಳಿಂದ ನಡೆಯುತ್ತವೆ. ಇನ್ನೊಂದು ದೃಷ್ಟಿಯಿಂದ ನೋಡಿದರೆ, ಎಲ್ಲದರ ಮೂಲವಾದ ಆತ್ಮ ಅಥವಾ ಚೈತನ್ಯವು ರೂಪ, ಹೆಸರು, ಗುರುತು ಮತ್ತು ಬಂಧನಗಳ ಆಚೆಯಾಗಿದೆ. ಆದ್ದರಿಂದ ಅದು ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಅಹಂಕಾರ ಇದ್ದರೆ ಅಕ್ರಿಯೆಯೂ ಕ್ರಿಯೆಯೇ: ಅಷ್ಟಾವಕ್ರ ಹೇಳುವುದೇನೆಂದರೆ, ‘ನೀನು ಕೇವಲ ಕುಳಿತಿದ್ದೀಯೆಂದು ಭಾವಿಸಿದರೂ ಕ್ರಿಯೆ ನಡೆಯುತ್ತಲೇ ಇರುತ್ತದೆ.’
ಏಕೆಂದರೆ ನಿನ್ನೊಳಗೆ ಅಹಂಕಾರವಿದೆ. ಅಹಂಕಾರ ಇರುವವರೆಗೆ ‘ನಾನೇ ಮಾಡುತ್ತಿದ್ದೇನೆ’ ಎಂಬ ಭಾವನೆ ಜೀವಂತವಾಗಿರುತ್ತದೆ. ಹಾಗಾದರೆ ನಾವು ಕ್ರಿಯೆಗಳಿಂದ ಮತ್ತು ಅವುಗಳ ಫಲಗಳಿಂದ ಹೇಗೆ ದೂರವಿರಬಹುದು? ಅದಕ್ಕೆ ಇರುವ ಮಾರ್ಗ ಒಂದೇ. ದೇಹ ಮತ್ತು ಮನಸ್ಸು ಕೇವಲ ಸಾಧನಗಳು ಎಂಬ ಅರಿವು ಮೂಡಬೇಕು. ನೀನು ದೇಹವಲ್ಲ, ಮನಸ್ಸಲ್ಲ; ಅವುಗಳ ಸಾಕ್ಷಿ ಮಾತ್ರ. ಆದ್ದರಿಂದ ಎಲ್ಲ ಕ್ರಿಯೆಗಳಿಂದ ಒಂದು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು.
ಹೊಸದಾಗಿ ಕೇಳುವವರಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು. ‘ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ಅದರ ಸಂತೋಷ ಅಥವಾ ದುಃಖವನ್ನೂ ನಾನೇ ಅನುಭವಿಸುತ್ತಿದ್ದೇನೆ. ಹಾಗಿದ್ದರೆ ಕರ್ತೃ ನಾನು ಅಲ್ಲವೇ?’ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಸತ್ಯವನ್ನು ಅನುಭವಾತ್ಮಕವಾಗಿ ಗ್ರಹಿಸಲು ಸಮಯ ಮತ್ತು ಸಾಧನೆ ಎರಡೂ ಬೇಕಾಗುತ್ತವೆ. ಅಹಂನಿಂದ ಸೋಹಂ ಕಡೆಗೆ: ನಾವೆಲ್ಲರೂ ಬಾಲ್ಯದಿಂದಲೇ ‘ಇದು ನನ್ನ ಹೆಸರು, ಇದು ನನ್ನ ಕುಟುಂಬ, ಇದು ನನ್ನ ಸ್ಥಾನ, ಇದು ನನ್ನ ಪಾತ್ರ’ ಎಂಬ ಗುರುತುಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳುತ್ತೇವೆ.
ಹೀಗಾಗಿ ಬದುಕಿನ ಆರಂಭವೇ ಅಹಂನಿಂದ ಆಗುತ್ತದೆ. ಆದರೆ ಆಧ್ಯಾತ್ಮಿಕ ಪಯಣದ ಅಂತಿಮ ಗುರಿ ಅಹಂ ಅಲ್ಲ; ‘ಸೋಹಂ’ ಅಂದರೆ ‘ನಾನು ಅದು’ ಎಂಬ ಅನುಭೂತಿ. ಇಲ್ಲಿ ‘ಅದು’ ಎಂದರೆ ದೈವತ್ವ. ಈ ಸ್ಥಿತಿಯಲ್ಲಿ ವ್ಯಕ್ತಿ ಯಾವುದನ್ನೂ ಮಾಡುವುದಿಲ್ಲ, ಯಾವುದನ್ನೂ ತನ್ನದೆಂದು ಅನುಭವಿಸುವುದಿಲ್ಲ, ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಕರ್ತೃತ್ವದ ಭಾವನೆ ಇಲ್ಲದ ಕಾರಣ ಬಂಧನವೂ ಇರುವುದಿಲ್ಲ. ಕೇವಲ ಅಸ್ತಿತ್ವ ಮಾತ್ರ ಇರುತ್ತದೆ. ಪ್ರಕೃತಿಯ ನಿಯಮದಂತೆ ಎಲ್ಲವೂ ನಡೆಯುತ್ತಿರುತ್ತದೆ.
ಆದರೆ ಅಹಂನಿಂದ ಸೋಹಂ ಕಡೆಗೆ ಸಾಗುವುದು ಸುಲಭದ ಪಯಣವಲ್ಲ. ಅದು ದೀರ್ಘವಾದ ಆಂತರಿಕ ಯಾತ್ರೆ. ಅನೇಕ ಅನುಭವಗಳು, ಅನೇಕ ಜನ್ಮಗಳ ಸಾಧನೆ ಬೇಕಾಗಬಹುದು. ಈ ಪಯಣಕ್ಕೆ ಅತಿ ದೊಡ್ಡ ಅಡ್ಡಿಯೇ ಅಹಂಕಾರ. ಸೋಹಂಗೆ ಸಾಗುವ ಮಧ್ಯಂತರ ಹಂತವೇ ದಾಸೋಹಂ. ಇಲ್ಲಿ ವ್ಯಕ್ತಿ ಕೆಲಸವನ್ನು ತಾನೇ ಮಾಡುತ್ತಿದ್ದೇನೆ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ ಅದನ್ನು ತನ್ನ ಸ್ವಾರ್ಥಕ್ಕಾಗಿ ಅಲ್ಲ, ದೇವರ ಸೇವಕನಾಗಿ ಮಾಡುತ್ತಿದ್ದೇನೆ ಎಂದು ಭಾವಿಸುತ್ತಾನೆ.
ಹೌದು, ಇಲ್ಲಿಯೂ ಅಹಂ ಇದೆ. ಆದರೆ ಇದು ಪರಿಷ್ಕೃತ ಅಹಂ. ‘ನನಗಾಗಿ’ ಎನ್ನುವುದು ನಕಾರಾತ್ಮಕ ಅಹಂ. ‘ದೇವರಿಗಾಗಿ’ ಎನ್ನುವುದು ಶುದ್ಧೀಕರಿಸಲ್ಪಟ್ಟ ಅಹಂ. ಇದಕ್ಕೆ ಸೇವೆಯೇ ಮಾರ್ಗ. ಸೇವೆ ಮಾಡುತ್ತಾ ಹೋದಂತೆ ಅಹಂಕಾರ ಕರಗಲು ಆರಂಭಿಸುತ್ತದೆ. ಸೇವಕನಾಗುತ್ತಾ ಹೋದಂತೆ ‘ನಾನು’ ಎಂಬ ಭಾವನೆ ದುರ್ಬಲವಾಗುತ್ತದೆ. ನಿಜವಾದ ಸೇವಕನಿಗೆ ಅಹಂಕಾರ ಇರುವುದಿಲ್ಲ. ಅವನು ದೈವದ ಮುಂದೆ ವಿನಮ್ರವಾಗಿ ತಲೆಬಾಗುತ್ತಾನೆ.
ದಾಸೋಹಂನಿಂದ ನಾಹಂ, ನಾಹಂನಿಂದ ಸೋಹಂ: ಸೇವೆಯ ಮೂಲಕ ಅಹಂಕಾರ ಕ್ಷೀಣಿಸಿದಂತೆ ವ್ಯಕ್ತಿ ‘ನಾಹಂ’ ಎಂಬ ಸ್ಥಿತಿಗೆ ಬರುತ್ತಾನೆ. ಅಂದರೆ ‘ನಾನು ಇಲ್ಲ’ ಎಂಬ ಅನುಭವ. ‘ನನ್ನದು ಏನೂ ಇಲ್ಲ; ಎಲ್ಲವೂ ದೇವರದು’ ಎಂಬ ಭಾವನೆ ಮೂಡುತ್ತದೆ. ನೀರಿನಿಂದ ತುಂಬಿದ ಪಾತ್ರೆಯಿಂದ ನೀರನ್ನು ತೆಗೆದರೆ ಅದರ ಜಾಗವನ್ನು ಗಾಳಿ ತುಂಬಿಕೊಳ್ಳುತ್ತದೆ. ಅದೇ ರೀತಿ ಅಹಂಕಾರ ಖಾಲಿಯಾದಾಗ ದೈವಿಕತೆ ಆ ಸ್ಥಾನವನ್ನು ತುಂಬಿಕೊಳ್ಳುತ್ತದೆ. ಅದೇ ಸೋಹಂ ಸ್ಥಿತಿ.
ಆದ್ದರಿಂದಲೇ ಸೇವಾ ಮನೋಭಾವಕ್ಕೆ ಆಧ್ಯಾತ್ಮಿಕ ಜೀವನದಲ್ಲಿ ಅತ್ಯಂತ ಮಹತ್ವವಿದೆ. ಸೇವೆಯಿಂದ ಅಹಂಕಾರ ಕರಗುತ್ತದೆ. ಅಹಂಕಾರ ಇರುವಲ್ಲಿ ಆಧ್ಯಾತ್ಮಿಕತೆ ಅರಳುವುದಿಲ್ಲ; ಆಧ್ಯಾತ್ಮಿಕತೆ ಇರುವಲ್ಲಿ ಅಹಂಕಾರ ಉಳಿಯುವುದಿಲ್ಲ. ಆಧ್ಯಾತ್ಮಿಕತೆ ಎಂದರೆ ಕೇವಲ ವಿಭೂತಿ ಧರಿಸುವುದು, ಮಾಲೆ ಹಾಕಿಕೊಳ್ಳುವುದು ಅಥವಾ ನಾಮಜಪ ಮಾಡುವುದಲ್ಲ. ಬದಲಾಗಿ ಅಹಂಕಾರ ಕಡಿಮೆಯಾಗುತ್ತಿರುವ ಆಂತರಿಕ ಪರಿವರ್ತನೆ.
ಒಂದು ಸರಳ ಮಾನದಂಡದ ಮೂಲಕ ‘ನಾವು ಆಧ್ಯಾತ್ಮಿಕರೇ’ ಎಂದು ಪರೀಕ್ಷಿಸಿಕೊಳ್ಳಲು ಸಾಧ್ಯವಿದೆ. ಅದುವೇ ನಿಮ್ಮ ‘ಇಗೋ ಮೀಟರ್’. ಯಶಸ್ಸು ಸಿಕ್ಕಾಗ ಪ್ರಶಂಸೆ ಕೇಳಿ ಹಿಗ್ಗುತ್ತಿದ್ದರೆ, ಇಗೋ ಮೀಟರ್ ಮೇಲಕ್ಕೆ ಹೋಗುತ್ತಿದೆ ಎಂದರ್ಥ. ವೈಫಲ್ಯ ಬಂದಾಗ ತಮ್ಮನ್ನೇ ದೂಷಿಸಿಕೊಂಡು ಕುಗ್ಗುತ್ತಿದ್ದರೆ, ಅದು ಕೂಡ ಇಗೋದ ಮತ್ತೊಂದು ರೂಪ. ಕೆಲವರು ಯಶಸ್ಸಿನ ಶ್ರೇಯಸ್ಸನ್ನು ದೇವರಿಗೆ ಅರ್ಪಿಸುತ್ತಾರೆ. ಆದರೆ ವೈಫಲ್ಯ ಬಂದಾಗ ತಮ್ಮನ್ನೇ ಶಪಿಸಿಕೊಳ್ಳುತ್ತಾರೆ. ಇದು ಕೂಡ ಸೂಕ್ಷ್ಮ ಅಹಂಕಾರವೇ. ಏಕೆಂದರೆ ಕೆಲಸವನ್ನು ತಾವೇ ಮಾಡಿದ್ದೇವೆ ಎಂಬ ಭಾವನೆ ಇನ್ನೂ ಉಳಿದಿದೆ. ಆದ್ದರಿಂದ ಇಗೋ ಮೀಟರ್ ಶೂನ್ಯದಲ್ಲಿರಬೇಕು. ಯಶಸ್ಸು ಬಂದರೂ ಶೂನ್ಯ.
ವೈಫಲ್ಯ ಬಂದರೂ ಶೂನ್ಯ. ಯಾವುದೇ ಕೆಲಸ ಮಾಡಿದ ನಂತರ ನಿಮ್ಮೊಳಗೆ ಏನು ಭಾವನೆ ಮೂಡುತ್ತಿದೆ ಎಂಬುದನ್ನು ಗಮನಿಸಿ. ‘ನಾನು’ ಎಂಬ ಭಾವನೆ ಎಷ್ಟು ಇದೆ ಎಂದು ಪರಿಶೀಲಿಸಿ. ನಿಮ್ಮ ಇಗೋ ಯಾವ ಮಟ್ಟದಲ್ಲಿದೆ ಎಂಬುದು ನಿಮಗೇ ತಿಳಿಯುತ್ತದೆ. ಪ್ರತಿದಿನ ಕೇಳಬೇಕಾದ ಪ್ರಶ್ನೆಗಳು. ಅಹಂ ಎಲ್ಲರಲ್ಲಿಯೂ ಇರುತ್ತದೆ. ಅದು ಹುಟ್ಟುಗುಣ. ಆದರೆ ಅದನ್ನು ದಾಸೋಹಂ ಮೂಲಕ ಪರಿಷ್ಕರಿಸಬಹುದು. ನಂತರ ನಾಹಂ ಸ್ಥಿತಿಗೆ ಕೊಂಡೊಯ್ಯಬಹುದು. ಇದಕ್ಕಾಗಿ ಪ್ರತಿದಿನ ಕೆಲವು ಪ್ರಶ್ನೆಗಳನ್ನು ನಿಮ್ಮನ್ನು ನೀವು ಕೇಳಿಕೊಳ್ಳಿ. ನಾನು ಯಾರು? ನಿಜವಾಗಿ ಕೆಲಸವನ್ನು ಯಾರು ಮಾಡುತ್ತಿದ್ದಾರೆ? ಈ ಸಾಧನೆ ಯಾರದು? ಈ ಅನುಭವವನ್ನು ಯಾರು ಅನುಭವಿಸುತ್ತಿದ್ದಾರೆ?
ಇದರ ಜತೆಗೆ ಇನ್ನೂ ಆಳವಾದ ಪ್ರಶ್ನೆಗಳನ್ನು ಕೇಳಿಕೊಳ್ಳಿ. ನನ್ನ ಮೂಲಕ ಯಾರು ಉಸಿರಾಡುತ್ತಿದ್ದಾರೆ? ನನ್ನ ಹೃದಯವನ್ನು ಯಾರು ಬಡಿಯುತ್ತಿದ್ದಾರೆ? ನಾನು ತಿಂದ ಆಹಾರ ಹೇಗೆ ಜೀರ್ಣಿಸುತ್ತದೆ? ಈ ಪ್ರಶ್ನೆಗಳ ಮೇಲೆ ಧ್ಯಾನಿಸಿದಾಗ ಒಂದು ಸತ್ಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಇವೆಲ್ಲವೂ ನಮ್ಮಿಂದ ನಡೆಯುತ್ತಿಲ್ಲ. ಒಂದು ದೈವಿಕ ಶಕ್ತಿ ಮೂಲಕ ನಮ್ಮ ದೇಹ ಮನಸ್ಸುಗಳೆಲ್ಲವೂ ಕಾರ್ಯನಿರ್ವಹಿಸುತ್ತಿವೆ. ಆಧ್ಯಾತ್ಮಿಕತೆಯ ನಿಜವಾದ ಗುರಿ: ಯಾವುದೇ ಕ್ಷೇತ್ರದಲ್ಲಿ, ಯಾವುದೇ ಸಂಸ್ಥೆಯಲ್ಲಿ, ಯಾವುದೇ ಜವಾಬ್ದಾರಿಯಲ್ಲಿ ಇರಬಹುದು. ಆದರೆ ಒಂದು ಗುರಿ ಮಾತ್ರ ಸ್ಪಷ್ಟವಾಗಿರಲಿ. ಇಗೋ (ಅಹಂ) ರಹಿತ ಸ್ಥಿತಿಯತ್ತ ಸಾಗುವುದು ನಿಮ್ಮ ಗುರಿಯಾಗಿರಲಿ.
ನಿಜ, ಕ್ರೆಡಿಟ್ಗಾಗಿ ಹಾತೊರೆಯುವವರ ನಡುವೆ, ಕಾಲೆಳೆಯುವವರ ನಡುವೆ, ಸ್ಪರ್ಧೆ ಮತ್ತು ಸ್ವಾರ್ಥ ತುಂಬಿದ ವಾತಾವರಣದಲ್ಲಿ ಈ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯುವುದು ಸುಲಭವಲ್ಲ. ಆದರೆ ಸಜ್ಜನರ ಸಂಗ, ಸೇವೆಯ ಮಾರ್ಗ ಮತ್ತು ನಿರಂತರ ಆತ್ಮಪರಿಶೀಲನೆ ಇದ್ದರೆ ಅಹಂ ನಿಧಾನವಾಗಿ ಕರಗಿ, ದಾಸೋಹಂ ಮೂಲಕ ಸೋಹಂ ಎಂಬ ದೈವಿಕ ಅನುಭವದತ್ತ ನಮ್ಮನ್ನು ಕರೆದೊಯ್ಯುತ್ತದೆ. ‘ನಾನು ಮಾಡುತ್ತಿಲ್ಲ; ನನ್ನ ಮೂಲಕ ದೈವಿ ಶಕ್ತಿಯೇ ಕೆಲಸ ಮಾಡುತ್ತಿದೆ’ ಎನ್ನುವುದೇ ಆಧ್ಯಾತ್ಮಿಕತೆಯ ಅಂತಿಮ ಸಾರ.