ಇಂದು ಭಾರತದಲ್ಲಿ ದೊಡ್ಡದಾಗಿ ಕೇಳಿಬರುತ್ತಿರುವ ಪ್ರಶ್ನೆ- ‘ಮೋದಿ ಸರ್ಕಾರವನ್ನು ಉರುಳಿಸಿ ಬೇರೊಂದು ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ವಿಫಲ ಪ್ರಯತ್ನಕ್ಕಾಗಿ ಅಮೆರಿಕಾದ ತೆರಿಗೆದಾರರ 21 ಮಿಲಿಯನ್ ಡಾಲರ್ಗಳು ಅಂದರೆ ಸುಮಾರು 182 ಕೋಟಿ ರೂಪಾಯಿಗಳು ಬಳಕೆಯಾದವೇ?’ ಫೆಬ್ರವರಿ 14ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ "We missed you!' ಎಂದು ಆತ್ಮೀಯವಾಗಿ ಹೇಳಿ, ನಾಲ್ಕು ತಾಸುಗಳ ಮಾತುಕಥೆ ನಡೆಸಿದ ಒಂದು ವಾರದೊಳಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಹೇಳಿದ್ದು, ‘ಮೋದಿ ಸರ್ಕಾರದ ಸ್ಥಾನದಲ್ಲಿ ಮತ್ತೊಂದನ್ನು ತರಲು ಯುಎಸ್ಎಐಡಿ 21 ಮಿಲಿಯನ್ ಡಾಲರ್ಗಳನ್ನು ವ್ಯಯಿಸಿದೆ. ಇದರ ವಿವರಗಳನ್ನು ಮೋದಿ ಸರ್ಕಾರೊಂದಿಗೆ ನಾವು ಹಂಚಿಕೊಳ್ಳುತ್ತೇವೆ’ ಎಂದು! ಮುಂದಿನ ನಾಲ್ಕು ದಿನಗಳಲ್ಲಿ ಟ್ರಂಪ್ ಇದೇ ಮಾತನ್ನು ದಿನಕ್ಕೊಂದು ಸಲವಾದರೂ ಪುನರುಚ್ಚರಿಸಿದ್ದಾರೆ.
ಅಷ್ಟೇ ಅಲ್ಲ, ಯುಎಸ್ಎಐಡಿ ಕಾರ್ಯಯೋಜನೆಗಳು ಅಮೆರಿಕಾದ ಹಿತಾಸಕ್ತಿಗಳಿಗೆ ಸಹಕಾರಿಯಲ್ಲ ಹಾಗೂ ಅದು ವ್ಯಯಿಸುತ್ತಿರುವ ಹಣ ಅಮೆರಿಕಾದ ಬೊಕ್ಕಸಕ್ಕಾಗುತ್ತಿರುವ ಒಂದು ದೊಡ್ಡ ನಷ್ಟ ಎಂದು ಹೇಳಿ ಯುಎಸ್ಎಐಡಿಯ 1,600 ನೌಕರರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಇನ್ನೂ 4,000 ನೌಕರರನ್ನು ರಜೆ ಮೇಲೆ ಕಳುಹಿಸಿದ್ದಾರೆ! ಟ್ರಂಪ್ರ ಹೇಳಿಕೆಗಳಲ್ಲಿ ಮತ್ತು ಅವರ ಸರ್ಕಾರದ ಮೂಲಗಳಿಂದ ಕಳೆದ ಆರು ದಿನಗಳಿಂದಲೂ ಹೊರಬರುತ್ತಿರುವ ವಿವರಗಳ ಪ್ರಕಾರ, ಮೋದಿಯವರ ವಿರುದ್ಧ ಷಡ್ಯಂತ್ರಗಳಿಗಾಗಿ ಯುಎಸ್ಎಐಡಿ ಹಣ ಚೆಲ್ಲಲಾರಂಭಿಸಿದ್ದು 2019ರ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಪ್ರಚಂಡ ವಿಜಯ ಸಾಧಿಸಿದ ನಂತರ. ಹಾಗೆ ಹರಿದ ಹಣ ಸುಮಾರು 400 ಮಿಲಿಯನ್ ಡಾಲರ್ಗಳು ಎಂದು ಹೇಳುತ್ತವೆ. 2024ರ ಚುನಾವಣೆಗಳಲ್ಲಿ ಎನ್ಡಿಎ ಅನ್ನು ಸೋಲಿಸಲೆಂದೇ ಸುಮಾರು 12 ಬಿಲಿಯನ್ ಡಾಲರ್ಗಳ ಅಗಾಧ ಮೊತ್ತ ವಿದೇಶಗಳಿಂದ ಭಾರತಕ್ಕೆ ಹರಿದುಬಂದಿದೆ ಎಂಬ ಮಾತೂ ಕೇಳಿಬರುತ್ತಿದೆ.
ಮೋದಿ ಸರ್ಕಾರದ ವಿರುದ್ಧದ ಈ ಪ್ರಯತ್ನದಲ್ಲಿ ಭಾರತದಲ್ಲಿರುವ ಯುಎಸ್ಎಐಡಿ ಮಿಷನ್ ಡೈರೆಕ್ಟರ್ ವೀಣಾ ರೆಡ್ಡಿಯವರ ಹೆಸರು ಪ್ರಧಾನವಾಗಿ ಕೇಳಿಬರುತ್ತಿದೆ. ಅವರ ಚಟುವಟಿಕೆಗಳ ತನಿಖೆಯಾಗಬೇಕು ಎಂಬ ಮಾತೂ ಹಿರಿಯ ನ್ಯಾಯವಾದಿಯೊಬ್ಬರಿಂದ ಬಂದಿರುವುದರಿಂದಾಗಿ ವೀಣಾ ರೆಡ್ಡಿ ಇಡೀ ಪ್ರಕರಣದಲ್ಲಿ ಒಂದು ಮುಖ್ಯ ಕೊಂಡಿಯಂತೆ ಕಾಣತೊಡಗಿದ್ದಾರೆ. ಈ ನಡುವೆ, ರಾಜಕೀಯ ಉದ್ದೇಶಗಳಿಗಾಗಿ ಯುಎಸ್ಎಐಡಿ 21 ಮಿಲಿಯನ್ ಡಾಲರ್ಗಳನ್ನು ಖರ್ಚುಮಾಡಿದ್ದು ಭಾರತದಲ್ಲಿ ಅಲ್ಲ, ಬಾಂಗ್ಲಾದೇಶದಲ್ಲಿ, ಹಸೀನಾ ಸರ್ಕಾರದ ವಿರುದ್ಧ ಎಂದು ಹೇಳುವ ಲೇಖನವೊಂದನ್ನು ಭಾರತದ ಪ್ರಮುಖ ಆಂಗ್ಲ ದೈನಿಕವೊಂದು ಪ್ರಕಟಿಸಿತು. ಇದೇ ಬಗೆಯ ಬರಹ ಅಮೆರಿಕಾದ ಪ್ರಮುಖ ದೈನಿಕವೊಂದರಲ್ಲೂ ಕಾಣಿಸಿಕೊಂಡಿತು.
ಅಲ್ಲಿಯವರೆಗೆ ಬಯಲಾಗಿದ್ದ ವಿವರಗಳಿಗೆ ವಿರುದ್ಧವಾದ ಮಾತುಗಳನ್ನು ಈ ಲೇಖನಗಳು ಹೇಳಿದ್ದು ಮತ್ತು ಇವುಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಮತ್ತು ಕೆಲವರು ಬಿಜೆಪಿ-ವಿರೋಧಿ ಪತ್ರಕರ್ತರು ದೊಡ್ಡದಾಗಿ ಗಲಾಟೆಯೆಬ್ಬಿಸಿದ್ದು ಏಕೆಂದು ಅರ್ಥವಾಗುವುದಿಲ್ಲ. ‘ಕನ್ಡೋರ್ಷಿಯಂ ಫಾರ್ ಎಲೆಕ್ಷನ್ಸ್ ಆಂಡ್ ಪೊಲಿಟಿಕಲ್ ಪ್ರೋಸೆಸ್ ಸ್ಟ್ರೆಂಥನಿಂಗ್’ (ಸಿಇಪಿಪಿ) ಎಂಬ ಸಂಸ್ಥೆಗೆ ವಿವಿಧ ದೇಶಗಳಲ್ಲಿ ರಾಜಕೀಯ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವುದಕ್ಕಾಗಿ ಯುಎಸ್ಎಐಡಿ ಕೊಟ್ಟದ್ದು 480 ಮಿಲಿಯನ್ ಡಾಲರ್ಗಳು: ಆ ಹಣ ಮೊಲ್ಡೋವಾ, ಪೆರು, ಕೊಲಂಬಿಯಾ, ಮೊಝಾಂಬಿಕ್ ಸೇರಿದಂತೆ ಹಲವಾರು ದೇಶಗಳಲ್ಲಿ ಬಳಕೆಯಾಗಿದೆ. ಭಾರತಕ್ಕೆ 21 ಮಿಲಿಯನ್, ಬಾಂಗ್ಲಾದೇಶಕ್ಕೆ 29 ಮಿಲಿಯನ್ ಮತ್ತು ನೇಪಾಳಕ್ಕೆ 39 ಮಿಲಿಯನ್ ಡಾಲರ್ಗಳೂ ಬಂದಿವೆ ಎನ್ನುವುದು ಕನಿಷ್ಠ ಒಂದು ವಾರದಷ್ಟು ಹಳೆಯ ಸುದ್ದಿ!
ಇದನ್ನು ತಿಳಿಯದ ಕಾಂಗ್ರೆಸ್ ನಾಯಕರು ಮತ್ತು ಪತ್ರಕರ್ತರು, ‘ಬಾಂಗ್ಲಾದೇಶಕ್ಕೆ ಹೋದ ಹಣವನ್ನು ಭಾರತಕ್ಕೆ ಬಂದದ್ದು ಎಂದು ಟ್ರಂಪ್ ತಪ್ಪಾಗಿ ತಿಳಿದಿದ್ದಾರೆ, ಢಾಕಾ ಮತ್ತು ನವದೆಹಲಿಯ ನಡುವೆ ಗೊಂದಲ ಮಾಡಿಕೊಂಡಿದ್ದಾರೆ’ ಎಂದೆಲ್ಲ ಹೇಳಿದ್ದು ನಗೆ ತರಿಸುವುದರ ಜತೆಗೆ ಕೆಲವು ಪ್ರಶ್ನೆಗಳನ್ನೂ ಮೂಡಿಸುತ್ತದೆ. ಮೋದಿ ಸರ್ಕಾರವನ್ನು ಉರುಳಿಸಲು ಯುಎಸ್ಎಐಡಿ ಹಣ ವ್ಯಯಿಸಿಲ್ಲ ಎಂದು ಹೇಳಲು ಇವರು ಏಕೆ ಇಷ್ಟು ಆತುರ ಮತ್ತು ಉದ್ರೇಕ ತೋರಿದರು? ಇವರ ನಡೆ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡವರ ಕಥೆಯಂತಿದೆಯಲ್ಲ! ಇವರುಗಳ ಮಾತಿಗೆ ಉತ್ತರವೆಂಬಂತೆ ಟ್ರಂಪ್ ಮತ್ತೆ ವಿಷಯ ಪ್ರಸ್ತಾಪಿಸಿ, ಭಾರತ ಹಾಗೂ ಬಾಂಗ್ಲಾದೇಶಗಳಿಗೆ ಹೋಗಿರುವ ಹಣ ಬೇರೆಬೇರೆ ಎಂದು ಹೇಳಬೇಕಾಯಿತು.
ನಂತರ ಭಾರತದ ಅರ್ಥ ಮಂತ್ರಾಲಯ ಪ್ರಕಟಣೆಯೊಂದನ್ನು ನೀಡಿ, ‘2023-24ನೇ ಸಾಲಿನಲ್ಲಿ ಭಾರತದಲ್ಲಿ ಯುಎಸ್ಎಐಡಿ ಭಾಗಿಯಾಗಿರುವ ಕಾರ್ಯಯೋಜನೆಗಳು ಏಳು, ಅವುಗಳಲ್ಲಿ ಖರ್ಚಾಗುತ್ತಿರುವುದು 750 ಮಿಲಿಯನ್ ಡಾಲರ್ಗಳು, ಈ ಮೊತ್ತದಲ್ಲಿ ಯುಎಸ್ಎಐಡಿಯ ಪಾಲು 97 ಮಿಲಿಯನ್ ಡಾಲರ್ಗಳು’ ಎಂದು ಹೇಳಿತು. ಮುಖ್ಯ ವಿಷಯವೆಂದರೆ ಈ ಯೋಜನೆಗಳು ಆಹಾರ ಸುಭದ್ರತೆ, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತಹವು. ಈ ಪಟ್ಟಿಯಲ್ಲಿ ರಾಜಕೀಯ ಕಾರ್ಯಯೋಜನೆಗಳು ಇಲ್ಲ! ಅಂದರೆ ಯುಎಸ್ಎಐಡಿ ಭಾರತದಲ್ಲಿ ಜನಹಿತ ಕಾರ್ಯಯೋಜನೆಗಳಲ್ಲೂ ಭಾಗಿಯಾಗಿದೆ, ರಾಜಕೀಯ ಪಿತೂರಿಗಳಲ್ಲೂ ಪಾತ್ರ ವಹಿಸುತ್ತಿದೆ! ಏನೀ ದ್ವಂದ್ವ ಮುಖ? ವಾಸ್ತವವಾಗಿ ಈ ಯುಎಸ್ಎಐಡಿ ಅಂದರೆ ಏನು? ಅದರ ಇತಿಹಾಸವೇನು? ಅದರ ವಿವಿಧ ಮುಖಗಳೇನು? ಇವು ಮೂರು ಭಾಗಗಳ ಈ ಲೇಖನದ ವಸ್ತುವಿಷಯ.
‘ಹೊಸ ದಿಗಂತ’ ಎಂಬ ಹೆಸರಿನಲ್ಲಿ ಹೊಸ ಸಾಮಾಜಿಕ, ಆರ್ಥಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಮುಂದಿಟ್ಟುಕೊಂಡು ಜಾನ್ ಎಫ್. ಕೆನಡಿ 1961ರಲ್ಲಿ ಅಮೆರಿಕಾದ ಮೊತ್ತಮೊದಲ ಕ್ಯಾಥೋಲಿಕ್ ಧರ್ವಿುಯ ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸಿದ್ದೀಗ ಇತಿಹಾಸ. ಅಮೆರಿಕನ್ ಸಮಾಜ ಹಾಗೂ ರಾಜಕೀಯವನ್ನು ಬಹುತ್ವ ಮತ್ತು ಒಳಗೊಳ್ಳುವಿಕೆಯತ್ತ ಹೊರಳಿಸಬೇಕೆನ್ನುವುದು ಆ ನಲವತ್ತಮೂರರ ಹರೆಯದ ಕನಸಿಗ ಅಧ್ಯಕ್ಷರ ಮಹದಾಶಯವಾಗಿತ್ತು. ಆದರೆ ಅವರ ಗಮನವನ್ನು ಬೇರೊಂದು ದಿಕ್ಕಿನತ್ತ ತಿರುಗಿಸುವ ಬೆಳವಣಿಗೆಗಳು ಅವರು ಶ್ವೇತಭವನ ಪ್ರವೇಶಿಸಿದ ಮೂರು ತಿಂಗಳ ಒಳಗೇ ಘಟಿಸಲಾರಂಭಿಸಿದವು.
1959ರಲ್ಲಿ ದಕ್ಷಿಣದ ಕ್ಯೂಬಾದಲ್ಲಿ ಕಮ್ಯೂನಿಸ್ಟ್ ಕ್ರಾಂತಿ ಯಶಸ್ವಿಯಾಗಿ, ಸರ್ವಾಧಿಕಾರಿ ಬಾತಿಸ್ತಾನ ಉಚ್ಚಾಟನೆಯಾಗಿ, ಫಿಡೆಲ್ ಕ್ಯಾಸ್ತ್ರೋ ಅಧಿಕಾರ ವಹಿಸಿಕೊಂಡರಷ್ಟೇ. ಅಮೆರಿಕಾದ ಗಡಿಗೆ ಕೇವಲ 600 ಕಿಲೋಮೀಟರ್ಗಳಷ್ಟು ಹತ್ತಿರದಲ್ಲಿ ಕಮ್ಯೂನಿಸ್ಟ್ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದದ್ದು ತನಗಾದ ಹಿನ್ನಡೆ ಎಂದು ಆಗ ವಾಷಿಂಗ್ಟನ್ನಲ್ಲಿದ್ದ ಡ್ವೈಟ್ ಡಿ. ಐಸೆನ್ಹೋವರ್ ಆಡಳಿತ ಭಾವಿಸಿತು. ಶೀತಲಸಮರದ ಉತ್ತುಂಗದ ಆ ದಿನಗಳಲ್ಲಿ ಅದು ಸಹಜವೂ ಆಗಿತ್ತು. ಹೀಗಾಗಿ ಕ್ಯಾಸ್ತ್ರೋ ನೇತೃತ್ವದ ಕಮ್ಯೂನಿಸ್ಟ್ ಸರ್ಕಾರವನ್ನು ಕಿತ್ತೊಗೆಯಲು ಅಮೆರಿಕಾದ ಬೇಹುಗಾರಿಕಾ ಇಲಾಖೆ ‘ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ’ (ಸಿಐಐ) ಅನ್ನು ಐಸೆನ್ಹೋವರ್ ಸರ್ಕಾರ ನಿಯೋಜಿಸಿತು. ಇಂತಹ ಬುಡಮೇಲು ಕೃತ್ಯಗಳಲ್ಲಿ ಸಿಐಎಗೆ ದಶಕದ ಅನುಭವವಿತ್ತು. ತಕ್ಷಣ ಕಾರ್ಯಪ್ರವೃತ್ತವಾದ ಸಿಐಎ ಅಮೆರಿಕಾಗೆ ಓಡಿಬಂದಿದ್ದ ಕ್ಯಾಸ್ತ್ರೋ-ವಿರೋಧಿ ಕ್ಯೂಬನ್ ವಲಸಿಗರಲ್ಲಿ ಒಂದಷ್ಟು ಜನರನ್ನು ಕಲೆಹಾಕಿ ಗ್ವಾಟೆಮಾಲಾದಲ್ಲಿ ರಹಸ್ಯವಾಗಿ ತರಬೇತಿ ಆರಂಭಿಸಿತು. 1960ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಕೆನಡಿ ಜಯಗಳಿಸುವ ಹೊತ್ತಿಗೆ ಆ ತರಬೇತಿ ಪೂರ್ಣಗೊಂಡಿತ್ತು. ಆಗ ಸಿಐಎ ಮುಂದೆ ಉದ್ಭವವಾದ ಪ್ರಶ್ನೆ ತನ್ನ ಕ್ಯೂಬಾ ಯೋಜನೆಗೆ ಹೊಸ ಅಧ್ಯಕ್ಷರ ಅನುಮೋದನೆ ಇದೆಯೇ ಎಂದು.
ಸೂತ್ರಗಳ ಪ್ರಕಾರ ಕ್ಯಾಸ್ತ್ರೋ ಸರ್ಕಾರದ ವಿರುದ್ಧ ಬುಡಮೇಲು ಕೃತ್ಯಗಳಿಗೆ ಕೆನಡಿಯವರವ ಸಹಮತಿ ಇರಲಿಲ್ಲ. ಆದರೆ ಪೂರ್ಣಗೊಂಡಿದ್ದ ತಯಾರಿಯನ್ನು ಕೊನೆಯ ಗಳಿಗೆಯಲ್ಲಿ ನಿಲುಗಡೆಗೆ ತರುವುದೂ ಸಾಧ್ಯವಿರಲಿಲ್ಲ. ಹೀಗಾಗಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಸಿಐಎಗೆ ಹೊಸ ಅಧ್ಯಕ್ಷರು ಅನುಮತಿ ನೀಡಲೇಬೇಕಾಯಿತು. ಅದರ ಪರಿಣಾಮವೇ 1961ರ ಏಪ್ರಿಲ್ 17ರ ‘ಬೇ ಆಫ್ ಪಿಗ್ಸ್’ ಪ್ರಕರಣ. ಯೋಜನೆಯ ಪ್ರಕಾರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತರಬೇತುಗೊಂಡ ಶಸ್ತ್ರಸಜ್ಜಿತ ಕ್ಯೂಬನ್ ವಲಸಿಗರು ಅಮೆರಿಕಾದ ರಕ್ಷಣಾ ಪಡೆಗಳು ಒದಗಿಸಿದ ವಿಮಾನಗಳಲ್ಲಿ ಹವಾನಾ ತಲುಪಿ ಮಿಂಚಿನ ಕಾರ್ಯಾಚರಣೆಯಲ್ಲಿ ಕ್ಯಾಸ್ತ್ರೋ ಮತ್ತವರ ಸಹಯೋಗಿಗಳನ್ನು ಕೊಂದು ಸರ್ಕಾರದ ಅಂಗಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಇಡೀ ಪ್ರಕರಣದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಅಮೆರಿಕಾ ಜಗತ್ತಿನ ಮುಂದೆ ಮುಗ್ಧತೆ ತೋರಬಹುದಾಗಿತ್ತು. ಆದರೆ ಆದದ್ದೇ ಬೇರೆ. ಕ್ಯಾಸ್ತ್ರೋ-ವಿರೋಧಿ ಕ್ರಾಂತಿವೀರರುಗಳಿದ್ದ ವಿಮಾನಗಳೇ ಅಪಘಾತಕ್ಕೀಡಾಗುವುದರೊಂದಿಗೆ ಅವರಲ್ಲಿ ಹಲವರು ಪ್ರಾಣ ಕಳೆದುಕೊಂಡರೆ ಮತ್ತೆ ಕೆಲವರು ಬಂಧಿಗಳಾದರು, ಇಡೀ ಪ್ರಕರಣದಲ್ಲಿ ಅಮೆರಿಕಾದ ಪಾತ್ರ ತಕ್ಷಣವೇ ಜಗಜ್ಜಾಹೀರಾಗಿಹೋಯಿತು.
‘ಬೇ ಆಫ್ ಪಿಗ್ಸ್’ ಪ್ರಕರಣ ಎಂದು ಇತಿಹಾಸದಲ್ಲಿ ಕುಖ್ಯಾತಿಗೊಂಡಿರುವ ಇದರಿಂದಾಗಿ ಮುಖಭಂಗ ಅನುಭವಿಸಿದ್ದು ಕೆನಡಿ ಸರ್ಕಾರ. ಹಿಂದಿನ ದಶಕದಲ್ಲಿ ಸಿಐಎ ಲ್ಯಾಟಿನ್ ಅಮೆರಿಕಾವಲ್ಲದೆ ದೂರದ ಇರಾನ್ನಲ್ಲೂ ರಹಸ್ಯ ಬುಡಮೇಲು ಕೃತ್ಯಗಳನ್ನು ಯಶಸ್ವಿಯಾಗಿ ಎಸಗಿ ಅಮೆರಿಕಾಪರ ಸರ್ಕಾರಗಳನ್ನು ಅಸ್ತಿತ್ವಕ್ಕೆ ತಂದಿತ್ತು. ವಿಫಲವಾದೆಡೆ ಅದು ತನ್ನ ಹೆಜ್ಜೆಗುರುತುಗಳನ್ನು ಸುಲಭವಾಗಿ ಕಾಣುವಂತೆ ಬಿಟ್ಟಿರಲಿಲ್ಲ. ಆದರೆ ‘ಬೇ ಆಫ್ ಪಿಗ್ಸ್’ ಪ್ರಕರಣ ಸಿಐಎಯ ಕರಾಳ ಕೈಗಳನ್ನು ಜಗತ್ತಿನ ಮುಂದೆ ಬೆತ್ತಲಾಗಿಸಿತು ಮತ್ತು ಕೆನಡಿ ಸರ್ಕಾರವನ್ನು ಅಪರಾಧಿಯನ್ನಾಗಿ ನಿಲ್ಲಿಸಿತು. ಆದರೆ, ಆ ಕಾರಣದಿಂದಾಗಿ ಶೀತಲ ಸಮರದ ಆ ದಿನಗಳಲ್ಲಿ ಜಗತ್ತಿನ ವಿವಿಧೆಡೆ ಅಮೆರಿಕಾ-ವಿರೋಧಿ ಸರ್ಕಾರಗಳು ಒಂದರ ಹಿಂದೊಂದರಂತೆ ಹುಟ್ಟಿಕೊಳ್ಳುವು ದನ್ನು ತಡೆಯದೆ ಗತ್ಯಂತರವೂ ಇರಲಿಲ್ಲ. ಈ ಸಂದಿಗ್ಧ ಸನ್ನಿವೇಶದಲ್ಲಿ 1961ರ ಸೆಪ್ಟೆಂಬರ್ 1ರಂದು ಜರುಗಿದ ಜಾಗತಿಕ ಸಮಾವೇಶವೊಂದು ಅಮೆರಿಕಾದ ಮುಂದೆ ದೊಡ್ಡ ದೊಂದು ಸವಾಲನ್ನು ನಿಲ್ಲಿಸುವುದರ ಜತೆಗೆ ಪರಿಸ್ಥಿತಿಯನ್ನು ಚಾಕಚಕ್ಯತೆಯಿಂದ ನಿಭಾಯಿಸುವ ಕಳ್ಳದಾರಿಯೊಂದನ್ನೂ ಕೆನಡಿ ಸರ್ಕಾರಕ್ಕೆ ತೋರಿತು.
ದ್ವಿತೀಯ ಮಹಾಯುದ್ಧದಲ್ಲಿ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಪರಸ್ಪರ ಸಹಕರಿಸಿ ಜಯಶೀಲರಾದ ಅಮೆರಿಕಾ ಮತ್ತು ಸೋವಿಯತ್ ಯೂನಿಯನ್ಗಳು ಯುದ್ಧಾನಂತರ ವಿರುದ್ಧ ದಿಕ್ಕುಗಳತ್ತ ಹೊರಳಿ ನ್ಯಾಟೋ ಮತ್ತು ವಾರ್ಸಾ ಸಂಧಿ ಎಂಬ ಸೇನಾಕೂಟಗಳನ್ನು ಕಟ್ಟಿಕೊಂಡು ಭೀಕರ ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ತೊಡಗಿ ಮಾನವಕುಲವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದವು. ಇದರಿಂದ ಚಿಂತಿತರಾದ ಇತರ ಜಾಗತಿಕ ನೇತಾರರು ತಂತಮ್ಮ ದೇಶಗಳನ್ನು ಯಾವ ಶಕ್ತಿಬಣಕ್ಕೂ ಸೇರಿಸದೆ ‘ಅಲಿಪ್ತ ಕೂಟ’ವೆಂಬ ತೃತೀಯ ಕೂಟವನ್ನು ರಚಿಸಿ ಜಾಗತಿಕ ಶಾಂತಿಯ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಯುಗೋಸ್ಲಾವಿಯಾದ ಅಧ್ಯಕ್ಷ ಮಾರ್ಷಲ್ ಟೀಟೋ, ಭಾರತದ ಪ್ರಧಾನಿ ಜವಾಹರ್ಲಾಲ್ ನೆಹರು, ಇಂಡೋನೇಷ್ಯಾದ ಅಧ್ಯಕ್ಷ ಅಚ್ಮೆದ್ ಸುಕಣೋ, ಈಜಿಪ್ಟ್ನ ಅಧ್ಯಕ್ಷ ಗೆಮಾಲ್ ಅಬ್ದುಲ್ ನಾಸೆರ್ ಮುಂದಾಳತ್ವ ವಹಿಸಿ 1955ರಲ್ಲೇ ಇಂಸೋನೇಶಿಯಾದ ಬಾಂಡುಂಗ್ನಲ್ಲಿ ಅಲಿಪ್ತ ಚಳವಳಿಯ ಪೀಠೀಕಾ ಸಮಾವೇಶವೊಂದನ್ನು ಆಯೋಜಿಸಿಯೂ ಇದ್ದರು. ಅದರ ರ್ತಾಕ ಮುಂದುವರಿಕೆಯಾಗಿ 1961ರ ಸೆಪ್ಟೆಂಬರ್ 1ರಂದು ಈ ಎಲ್ಲ ನಾಯಕರ ಜತೆ ಘಾನಾದ ಅಧ್ಯಕ್ಷ ಫ್ರಾನ್ಸಿಸ್ ಕ್ವಾಮೋ ಎನ್ಕ್ರುಮಾ ಸಹ ಸೇರಿ ಯುಗೋಸ್ಲಾವಿಯಾದ ರಾಜಧಾನಿ ಬೆಲ್ಗ್ರೇಡ್ನಲ್ಲಿ ಸಮಾವೇಶವನ್ನು ಆಯೋಜಿಸಿ ಅಲಿಪ್ತ ಚಳವಳಿಯನ್ನು ಅಧಿಕೃತವಾಗಿ ಜಾಗತಿಕ ರಂಗಕ್ಕೆ ತಂದೇಬಿಟ್ಟರು.
ಇವರ ಮಾತುಗಳನ್ನು ಕೇಳಿ ಇನ್ನೂ ಇಪ್ಪತ್ತು ದೇಶಗಳ ನಾಯಕರು ಬೆಲ್ಗ್ರೇಡ್ ಸಮ್ಮೇಳನದಲ್ಲಿ ಭಾಗವಹಿಸಿ ಅಲಿಪ್ತ ಚಳವಳಿಯನ್ನು ಅಪ್ಪಿಕೊಂಡರು. ಇದು ಸಾಲದು ಎಂಬಂತೆ ಅಮೆರಿಕಾದ ಹಿತ್ತಲಿನಲ್ಲೇ ಇರುವ ಬ್ರೆಜಿಲ್, ಬೊಲಿವಿಯಾ ಮತ್ತು ಈಕ್ವೆಡಾರ್ಗಳು ಸಮ್ಮೇಳನದಲ್ಲಿ ಅಬ್ರರ್ವರ್ ರಾಷ್ಟ್ರಗಳಾಗಿ ಭಾಗವಹಿಸಿದವು. ಇದೆಲ್ಲದರ ಅರ್ಥ ಅಲಿಪ್ತ ಚಳವಳಿ ವೇಗವಾಗಿ ಜಗತ್ತಿನೆಲ್ಲೆಡೆ ಪ್ರಸರಿಸುತ್ತಿದೆ, ಅದರಿಂದಾಗಿ ಅಮೆರಿಕಾದ ನೀತಿಗಳನ್ನು ಜಾಗತಿಕವಾಗಿ ಬೆಂಬಲಿಸುವ ದನಿಗಳು ಕಡಿಮೆಯಾಗುತ್ತಿವೆ, ಪರಿಣಾಮವಾಗಿ ಶೀತಲ ಸಮರ ರಾಜಕಾರಣದಲ್ಲಿ ಅಮೆರಿಕಾ ಮತ್ತದರ ನ್ಯಾಟೋ ಸಹಯೋಗಿಗಳು ಏಕಾಂಗಿಯಾಗುತ್ತವೆ ಎಂದು. 1960ರ ದಶಕದ ಆರಂಭದ ಆ ದಿನಗಳಲ್ಲಿ ಆಫ್ರಿಕಾದಲ್ಲಿ ಯೂರೋಪಿಯನ್ ವಸಾಹತುಶಾಹಿ ವೇಗವಾಗಿ ಕುಸಿದು, ದೊಡ್ಡ ಸಂಖ್ಯೆಯಲ್ಲಿ ಹೊಸ ಸ್ವತಂತ್ರ ರಾಷ್ಟ್ರಗಳು ಒಂದರ ಹಿಂದೊಂದರಂತೆ ಉದಯಿಸುತ್ತಿದ್ದುದರಿಂದ ಮತ್ತು ಪಶ್ಚಿಮ-ವಿರೋಧಿ ಮನೋಭಾವ ಅವೆಲ್ಲವನ್ನೂ ಸಾರಾಸಗಟಾಗಿ ಅಲಿಪ್ತ ಚಳವಳಿಗೆ ಮಡಿಲಿಗೆ ಕೆಡವುದೂ ನಿಶ್ಚಿತವಾಗಿತ್ತು.
ಆಗ ಕೆನಡಿ ಸರ್ಕಾರ ಮತ್ತು ಅಮೆರಿಕಾದ ಸಾಮರಿಕ ತಜ್ಞರಲ್ಲಿ ಮೂಡಿದ ಅಭಿಪ್ರಾಯವೆಂದರೆ ಮತ್ತೊಂದು ‘ಬೇ ಆಫ್ ಪಿಗ್ಸ್’ ಅವಮಾನಕ್ಕೆ ಸಿಲುಕದೆ ಅಮೆರಿಕಾ-ವಿರೋಧಿ ಸರ್ಕಾರಗಳನ್ನು ಕ್ಷಿಪ್ರಕ್ರಾಂತಿ, ರಕ್ತಪಾತ ಮುಂತಾದ ವಿಧಾನಗಳಿಂದ ಸಿಐಎ ಉರುಳಿಸುವುದನ್ನು ಮಿತಗೊಳಿಸಿ, ಅಮೆರಿಕಾ ತನ್ನ ಹಣಕಾಸಿನ ನೆರವು ನೀರುವ ಮೂಲಕ ಜಾಗತಿಕ ರಂಗದಲ್ಲಿ ತನ್ನ ವರ್ಚಸ್ಸನ್ನು ಬೆಳೆಸಿಕೊಳ್ಳುವುದರತ್ತ ಗಮನ ನೀಡಬೇಕು ಎಂದಾಗಿತ್ತು. ಜಗತ್ತಿನ ಅತಿ ಬಲಿಷ್ಠ ಆರ್ಥಿಕ ಶಕ್ತಿಯಾದ ಅಮೆರಿಕಾಗೆ ರಾಜಕೀಯ ಉದ್ದೇಶಗಳಿಗಾಗಿ ಹಣವನ್ನು ಸುರಿಯುವುದು ಕಷ್ಟವೇನೂ ಆಗಿರಲಿಲ್ಲ ಮತ್ತು ಅಮೆರಿಕಾದ ಈ ಸಾಮರ್ಥ್ಯವನ್ನು ಸರಿಗಟ್ಟುವುದಿರಲಿ, ಹತ್ತಿರ ಸುಳಿಯುವ ಸಾಧ್ಯತೆಯೂ ಸೋವಿಯತ್ ಯೂನಿಯನ್ಗಿರಲಿಲ್ಲ.
ಈ ಲೆಕ್ಕಾಚಾರದಲ್ಲಿ ಕೆನಡಿ ಸರ್ಕಾರ ಸ್ಥಾಪಿಸಿದ ಸಂಸ್ಥೆಯೇ "United States Agency for International Development'. ಇದರ ಹ್ರಸ್ವರೂಪ ‘ಖಿಖಅಐಈ’ ಸೂಸುವ ‘ಅಮೆರಿಕಾದ ನೆರವು’ ಎಂಬ ಅರ್ಥ ಸಹಜವಾಗಿಯೇ ಆಕರ್ಷಕ ಮತ್ತು ಆ ಕಾರಣದಿಂದಲೇ ಅದು ಬಡರಾಷ್ಟ್ರಗಳಿಂದಲೇ ತುಂಬಿದ್ದ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳ ನಾಯಕರು ಮತ್ತು ಜನರ ಕಿವಿಗೆ ಆಪ್ಯಾಯಮಾನವಾಗುತ್ತದೆ ಎಂದು ಯುಎಸ್ಎಐಡಿಯ ಪಿತೃಗಳು ಲೆಕ್ಕಹಾಕಿದರು.