ಚೀನಾದೊಂದಿಗೆ ಅಮೆರಿಕದ ತುಲನೆ ಮಾಡಲೇಬೇಕೆಂದಾದರೆ ಸ್ಥೂಲವಾಗಿ ಚೀನಾದ ಮೂರುಪಟ್ಟು ಸಂಪತ್ತನ್ನು, 5 ಪಟ್ಟು ಮಿಲಿಟರಿ ಸಾಮರ್ಥ್ಯವನ್ನು ಹೊಂದಿದೆ. ಒಟ್ಟಾರೆ, ಅಮೆರಿಕ ಜಗತ್ತಿನ ಶೇಕಡ 5ರಷ್ಟು ಜನಸಂಖ್ಯೆಯನ್ನು, ಶೇಕಡ 25ರಷ್ಟು ಸಂಪತ್ತನ್ನು ಹೊಂದಿದೆ. ಆದರೆ, ಆ ರಾಷ್ಟ್ರದ ಮುಂದಿರುವ ಸವಾಲುಗಳು ಕಡಿಮೆಯೇನಲ್ಲ.
ಅಮೆರಿಕದ ವಿಶ್ವವಿದ್ಯಾಲಯವೊಂದರ ರಾಜಕೀಯ ಶಾಸ್ತ್ರದ ಸಹಾಯಕ ಅಧ್ಯಾಪಕರಾದ ಮೈಕಲ್ ರ್ಬಕ್ಲಿ ಇತ್ತೀಚೆಗೆ ಪ್ರಕಟಿಸಿದ ಪುಸ್ತಕವೊಂದರಲ್ಲಿ ಈ ಕುರಿತಂತೆ ರ್ಚಚಿಸುತ್ತ ವಿಶ್ವ ನಾಯಕತ್ವದ ವಿಭಿನ್ನ ಮಗ್ಗಲುಗಳ ಕುರಿತಂತೆ ಬೆಳಕು ಚೆಲಿದ್ದಾರೆ. ‘ಅಮೆರಿಕ ಅಸ್ತವ್ಯಸ್ತವಾಗಿರುವ ರಾಷ್ಟ್ರ ನಿಜ, ಆದರೆ ಚೀನಾದ ವ್ಯವಸ್ಥೆ ಬಲುಕೆಟ್ಟು ಹೋಗಿದೆ. ಅಮೆರಿಕದ ಪ್ರಜಾಪ್ರಭುತ್ವ ಸೂಕ್ತ ರೀತಿಯದ್ದಲ್ಲ. ಆದರೆ ಚೀನಾದ ಸರ್ವಾಧಿಕಾರತ್ವ ಅದನ್ನು ಮಣ್ಣುಗೂಡಿಸಲು ಸಾಕು’ ಎನ್ನುತ್ತಾರೆ. ಹೀಗೆ ಜಗತ್ತಿನ ಎರಡು ಸೂಪರ್ಪವರ್ಗಳ ನಡುವಣ ವೈರುಧ್ಯಗಳನ್ನು ರ್ಚಚಿಸುತ್ತಲೇ ಕನಿಷ್ಠ ಒಂದು ದಶಕವಾದರೂ ಅಮೆರಿಕ ಈ ಪಟ್ಟದಿಂದ ಹಿಂದೆ ಸರಿಯುವುದು ಸಾಧ್ಯವೇ ಇಲ್ಲ ಎಂದು ವಾದಿಸುತ್ತಾರೆ. ಅದಕ್ಕವರು ಕೊಡುವ ಕಾರಣ ಅಮೆರಿಕ ಜಗತ್ತಿನ ಶೇಕಡ 5ರಷ್ಟು ಜನಸಂಖ್ಯೆಯನ್ನು, ಶೇಕಡ 25ರಷ್ಟು ಸಂಪತ್ತನ್ನು ಹೊಂದಿದೆ ಎಂಬುದು. ಜಗತ್ತಿನ ಶೇ.35ರಷ್ಟು ಆವಿಷ್ಕಾರಗಳು ಅಮೆರಿಕದಲ್ಲೇ ಆಗುವುದಾದರೆ ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಅರ್ಧದಷ್ಟು ಅಮೆರಿಕದಲ್ಲೇ ಇವೆಯಂತೆ. ಜಗತ್ತಿನ 2000 ಲಾಭ ಗಳಿಸುವ ಕಂಪನಿಗಳಲ್ಲಿ 600ರಷ್ಟು ಅಮೆರಿಕದ್ದೇ.
ಜಗತ್ತಿನಲ್ಲಿ ಎಲ್ಲ ರಾಷ್ಟ್ರಗಳು ಸೈನ್ಯಕ್ಕೆಂದು ಖರ್ಚು ಮಾಡುವ ಒಟ್ಟೂ ಹಣದಲ್ಲಿ ಶೇ.40ರಷ್ಟು ಅಮೆರಿಕವೊಂದೇ ಮಾಡುತ್ತದೆ! ಅಧಿಕೃತವಾಗಿ 68 ರಾಷ್ಟ್ರಗಳೊಂದಿಗೆ ಯುದ್ಧದ ದೃಷ್ಟಿಯಿಂದ ಸಂಬಂಧವನ್ನು ಹೊಂದಿರುವ ಅಮೆರಿಕ 587 ಸ್ಥಳಗಳಲ್ಲಿ ತನ್ನ ಯುದ್ಧವಿಮಾನಗಳಿಗೆ ಬೇಕಾಗಿರುವ ಏರ್ಬೇಸ್ ನಿರ್ವಿುಸಿಕೊಂಡಿದೆ. ಹೀಗಾಗಿ ತನ್ನ ದೇಶದಿಂದ ಬಲುದೂರದಲ್ಲಿ ಯುದ್ಧಮಾಡುವ ಸಾಮರ್ಥ್ಯವನ್ನು ಅಮೆರಿಕ ಪಡಕೊಂಡುಬಿಟ್ಟಿದೆ. ಚೀನಾದೊಂದಿಗೆ ತುಲನೆ ಮಾಡಲೇಬೇಕೆಂದಾದರೆ ಸ್ಥೂಲವಾಗಿ ಚೀನಾದ ಮೂರುಪಟ್ಟು ಸಂಪತ್ತನ್ನು, 5 ಪಟ್ಟು ಮಿಲಿಟರಿ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಸರಿದೂಗಿಸಲು ಚೀನಾಕ್ಕೆ ಒಂದು ದಶಕವಾದರೂ ಬೇಕು ಎಂಬುದು ಅವರ ವಾದ!
ಮೈಕಲ್ ಬರ್ಕ್ಲಿ ರಾಷ್ಟ್ರವೊಂದರ ಶಕ್ತಿಗೆ ಮೂರು ಆಧಾರಸ್ತಂಭಗಳನ್ನು ಗುರುತಿಸಿದ್ದಾರೆ. ಮೊದಲನೆಯದ್ದು ಆ ರಾಷ್ಟ್ರದ ಭೂಗೋಳ. ಎರಡನೆಯದು ಜನಸಮುದಾಯ ಮತ್ತು ಮೂರನೆಯದು ರಾಜಕೀಯ ಚಿಂತನೆಗಳು. ಹಾಗೆ ಸುಮ್ಮನೆ ಈ ಎರಡೂ ರಾಷ್ಟ್ರಗಳ ನಡುವೆ ತುಲನೆ ಮಾಡಿ ನೋಡಿ. ಅಮೆರಿಕಕ್ಕೆ ಗಡಿಯಲ್ಲಿ ಕ್ಯಾತೆ ತೆಗೆಯಬಹುದಾದ ರಾಷ್ಟ್ರಗಳು ಯಾವವೂ ಇಲ್ಲ. ಒಂದು ರೀತಿ ಸಾರ್ವಭೌಮವೇ ಆಗಿನಿಂತುಬಿಟ್ಟಿದೆ. ಚೀನಾಕ್ಕಾದರೋ ಸುತ್ತಲೂ ಇರುವ ರಾಷ್ಟ್ರಗಳಲ್ಲಿ ಯಾವುದರೊಂದಿಗೂ ನೆಮ್ಮದಿಯ ಬಾಂಧವ್ಯವಿಲ್ಲ. ಒಂದು ಕಾಶ್ಮೀರ ಫಡಫಡಿಸುವುದರಿಂದಲೇ ಹೈರಾಣಾಗಿರುವ ನಾವು ಕಾಶ್ಮೀರಕ್ಕಿಂತಲೂ ಹತ್ತಾರು ಪಟ್ಟು ವಿಸ್ತಾರವಾಗಿರುವ ಲಡಾಖ್ ಅನ್ನು ಚೀನಾ ಅಧೀನದಲ್ಲಿ ಇಟ್ಟುಕೊಳ್ಳಲು ಹೇಗೆ ಸಾಮರ್ಥ್ಯವನ್ನು ವ್ಯಯಿಸುತ್ತಿರಬಹುದು ಅಂದಾಜು ಮಾಡಿ. ಇನ್ನು ಭಾರತ, ಜಪಾನ್, ತೈವಾನ್, ವಿಯೆಟ್ನಾಂ ಯಾವುದರೊಂದಿಗೂ ಚೀನಾದ ಸಂಬಂಧ ಹೆಮ್ಮೆ ತರುವಂಥದ್ದಲ್ಲವೇ ಅಲ್ಲ. ಹೀಗಾಗಿ ಚೀನಾವನ್ನು ಮಣಿಸಲು ಅಮೆರಿಕ ಬಲುದೊಡ್ಡ ಸಾಹಸ ಮಾಡಬೇಕಿಲ್ಲ. ಇನ್ನು ಜನಸಮುದಾಯದ ವಿಚಾರಕ್ಕೆ ಬರುವುದಾದರೆ ಜನಸಂಖ್ಯೆಯಲ್ಲಿ ಚೀನಾ ಮುಂದಿರುವುದು ನಿಜವಾದರೂ ವೃದ್ಧರ ಸಂಖ್ಯೆ ಹೆಚ್ಚಿದೆ ಎನ್ನುವುದನ್ನು ಮರೆಯುವಂತಿಲ್ಲ. ‘ಅಮೆರಿಕದ ಜನರು ಹೆಚ್ಚು ವಿದ್ಯಾವಂತರು ಮತ್ತು ಹೆಚ್ಚು ಸಂಪತ್ತನ್ನು ಸೃಷ್ಟಿಸಬಲ್ಲ ಸಾಮರ್ಥ್ಯವುಳ್ಳವರು’ ಎಂದು ರ್ಬಕ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆಗೆ ಚೀನಾದಲ್ಲಿರುವ ಕಾರ್ವಿುಕರಲ್ಲಿ ಶೇ.65ರಷ್ಟು ಜನ ವಿದ್ಯಾವಂತರಲ್ಲವೆಂದೂ ಮತ್ತು ಹೆಚ್ಚು ಸಂಪತ್ತನ್ನು ಸೃಷ್ಟಿಸುವಲ್ಲಿ ಸೋಲುತ್ತಾರೆಂದು ಅಂಕಿ-ಅಂಶಗಳ ಮೂಲಕ ವಿವರಿಸಿದ್ದಾರೆ. ರಾಜಕೀಯದ ದೃಷ್ಟಿಕೋನಕ್ಕೆ ಬರುವುದಾದರೆ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ಸೌಧ ಕಟ್ಟಿರುವುದರಿಂದ ಅಮೆರಿಕಕ್ಕೆ ಸೂಪರ್ಪವರ್ ಪಟ್ಟದಲ್ಲೇ ಉಳಿಯುವ ಅವಕಾಶಗಳು ಹೆಚ್ಚು ಎಂಬುದು ರ್ಬಕ್ಲಿ ಅಭಿಪ್ರಾಯ.
ಇವೆಲ್ಲದರ ನಡುವೆ ಕರ್ಮಸಿದ್ಧಾಂತವೊಂದಿದೆಯಲ್ಲ. ಅದರ ಜಾಡುಹಿಡಿದು ಹೋದಾಗಲೆಲ್ಲ ಕಸಿವಿಸಿ ಉಂಟಾಗುತ್ತದೆ. ಆ ಪಥದಲ್ಲಿ ಅಮೆರಿಕ ಮತ್ತು ಚೀನಾ ಎರಡಕ್ಕೂ ಜಗತ್ತಿನಲ್ಲಿ ಪ್ರಭುತ್ವ ಉಳಿಸಿಕೊಳ್ಳುವ ಯಾವ ಅಧಿಕಾರವೂ ಇಲ್ಲ. ಹಾಗೇ ಸುಮ್ಮನೆ ಅಮೆರಿಕದ ಇತಿಹಾಸವನ್ನು ಕೆದಕಿ ನೋಡಿ. ಭಾರತವನ್ನು ಹುಡುಕುತ್ತ ಕೊಲಂಬಸ್ ಮುಗ್ಗರಿಸಿಬಿದ್ದಿದ್ದು ಅಮೆರಿಕದಲ್ಲಿ. ಅವತ್ತು ತಾನು ಭಾರತವನ್ನು ಕಂಡುಹಿಡಿದೆ ಎಂದೇ ಆತ ಹೇಳಿಕೊಂಡಿದ್ದ. ಆಗಲೇ ಅಮೆರಿಕದ ಕರಾವಳಿ ತೀರ ಸ್ಪೇನಿನ ಕಾಲನಿಯಾಗಿ ರೂಪುಗೊಳ್ಳಲಾರಂಭಿಸಿತ್ತು. ಮುಂದೆ 17ನೇ ಶತಮಾನದ ಆರಂಭದಲ್ಲಿ ಬ್ರಿಟನ್ ಅಲ್ಲಿ ತನ್ನ ವಸಾಹತುಗಳನ್ನು ಸ್ಥಾಪಿಸಿತು. 1750ರ ವೇಳಗೆ ಆ ಕರಾವಳಿಯ ಗಡಿಯುದ್ದಕ್ಕೂ ಅನೇಕ ಭೂಭಾಗಗಳಲ್ಲಿ ಬಿಳಿಯರ ಧ್ವಜ ಹಾರಾಡುತ್ತಿತ್ತು. ಹಾಗಂತ ಅದೇನು ಸುಲಭವಾಗಿ ದಕ್ಕಿಸಿಕೊಂಡ ಭೂಭಾಗವೆಂದು ಭಾವಿಸಿಬಿಡಬೇಡಿ.
ಸ್ಪೇನಿನ ಮಹತ್ವಾಕಾಂಕ್ಷಿ ಸೇನಾನಾಯಕ ಫ್ರಾನ್ಸಿಸ್ ಪಿಜಾರೊ 1533ರಲ್ಲಿ 300 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಇಂಕಾ ಸಾಮ್ರಾಜ್ಯದ ಕಥೆಯನ್ನು ಮುಗಿಸಿದ್ದ. ಬರಿಯ 180 ಸೈನಿಕರೊಂದಿಗೆ ಸಾಮ್ರಾಜ್ಯದ ಗಡಿಗೆ ಬಂದಿದ್ದ ಪಿಜಾರೋ ರಾಜ ಅತಾಹುಅಲ್ಪನ ಗೆಳೆತನ ಬೆಳೆಸಿದ. ಆತನಿಂದ ಯಾವ ತೊಂದರೆಯನ್ನೂ ಗ್ರಹಿಸದಿದ್ದ ರಾಜ ನಿಶ್ಶಸ್ತ್ರನಾಗಿಯೇ ಪಿಜಾರೋ ನೀಡಲಿಚ್ಛಿಸಿದ ಔತಣಕೂಟಕ್ಕೆ ಹೋದ. ಅಲ್ಲಿ ಮೋಸದಿಂದ ರಾಜನನ್ನು ಬಂಧಿಸಿ ಆತನನ್ನು ಕೊಂದುಬಿಡುವ ಬೆದರಿಕೆ ಹಾಕಿ ಇಂಕಾ ಸಾಮ್ರಾಜ್ಯಕ್ಕೆ ಸೇರಿದ 30 ಸಾವಿರ ಸೈನಿಕರನ್ನು ಮಾರಣಹೋಮ ಮಾಡಿದ! ಕೊನೆಗೆ ರಾಜನ ಬಿಡುಗಡೆಗೆ 24 ಟನ್ನುಗಳಷ್ಟು ಚಿನ್ನವನ್ನು ಪಡಕೊಂಡ. ಅಷ್ಟಾದರೂ ಸಮಾಧಾನವಾಗದೆ ಆತ ಸ್ಪೇನ್ ರಾಜನ ಪದಚ್ಯುತಿಗೆ ಪ್ರಯತ್ನಿಸಿದವನು ಎಂಬ ಆರೋಪ ಮಾಡಿ ಮರಣದಂಡನೆಯನ್ನೂ ವಿಧಿಸಿದ. ಕೊನೆಗೆ ಹೀಗೇ ಸಾಯುವುದಾದರೆ ಬೆಂಕಿಗೆ ಎಸೆಯಲಾಗುತ್ತದೆಂದೂ ಏಸುಕ್ರಿಸ್ತನನ್ನು ಒಪ್ಪಿಕೊಂಡು ಸತ್ತರೆ ಕುತ್ತಿಗೆಗೆ ಕಬ್ಬಿಣದ ರಿಂಗು ಸುತ್ತಿಸಿ ಕೊಲ್ಲಲಾಗುವುದು ಎಂದೂ ಹೇಳಿದ. ತನ್ನ ದೇಹ ಉಳಿದರೆ ಅದನ್ನು ಗೋರಿಗಳಲ್ಲಿ ಕಾಪಿಡಲು ಅನುಕೂಲ ಆಗಬಹುದೆಂಬ ಭರವಸೆಯಿಂದ ಅತಾಹುಅಲ್ಪ ಏಸುಕ್ರಿಸ್ತನನ್ನು ಒಪ್ಪಿಕೊಂಡು ಪ್ರಾಣಬಿಟ್ಟ.
ಜಗತ್ತನ್ನೆಲ್ಲ ಕಬಳಿಸಬೇಕೆಂದು ಹೊಂಚುಹಾಕಿದ್ದ ಕ್ರಿಶ್ಚಿಯನ್ನರದ್ದು ಕ್ರೂರಿ ಜನಾಂಗ. ಏಸುಕ್ರಿಸ್ತನನ್ನು ನಂಬಿ ನಡೆಯುವ ಬಿಳಿಯರು ಮಾತ್ರ ಶ್ರೇಷ್ಠ ಜನಾಂಗದವರು, ಉಳಿದವರೆಲ್ಲ ಅನಾಗರಿಕರೆಂಬ ಅಹಂಕಾರ ಅವರಿಗೆ. ಇದೇ ಜನ ಮುಂದೆ ಹಂತಹಂತವಾಗಿ ಅಮೆರಿಕದುದ್ದಕ್ಕೂ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸುತ್ತ ನಡೆದರು. ಅಲ್ಲಿನ ಮೂಲನಿವಾಸಿಗಳಲ್ಲಿ ಹೆದರಿಸಬಹುದಾಗಿದ್ದವರನ್ನು ಗುಲಾಮರಾಗಿಸಿಕೊಂಡರು. ಉಳಿದವರನ್ನು ತಮ್ಮ ವ್ಯಾಪ್ತಿಯಿಂದ ಓಡಿಸಿದರು. ಈ ನಡುವೆ ದೂರದ ಯುರೋಪಿನಲ್ಲಿ ಫ್ರೆಂಚರು ಬ್ರಿಟಿಷರ ನಡುವೆ, ಆಗಾಗ ಸ್ಪೇನಿಗರ ನಡುವೆಯೂ ಗಲಾಟ ನಡೆಯುತ್ತಲೇ ಇತ್ತು. ಅದರ ಪರಿಣಾಮವಾಗಿ ಇಲ್ಲಿಯೂ ಅವರ ವಸಾಹತುಗಳ ನಡುವೆ ಕಿತ್ತಾಟ ಇದ್ದೇ ಇತ್ತು. ಈ ಹಂತದಲ್ಲಿಯೇ ಫ್ರೆಂಚರ ವಸಾಹತುಗಳನ್ನು ವಶಪಡಿಸಿಕೊಳ್ಳುತ್ತ ಬ್ರಿಟಿಷರು ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತ ನಡೆದದ್ದು.
1773ರಲ್ಲಿ ಬ್ರಿಟನ್ ಸರ್ಕಾರ ಇಲ್ಲಿರುವ ಬ್ರಿಟಿಷರ ಮೇಲೆ ಅಧಿಕಾರ ಚಲಾಯಿಸಿ ತೆರಿಗೆ ಹೆಚ್ಚಳ ಮಾಡಿದಾಗ ಇಲ್ಲಿ ಬಂದು ನೆಲೆಸಿದ್ದವರಲ್ಲಿ ಆಕ್ರೋಶ ಮೂಡಿತು. ಆಗಲೇ ಟೀ ಮೇಲೆ ವಿಧಿಸಿದ್ದ ತೆರಿಗೆಯನ್ನು ವಿರೋಧಿಸಿ ಬಂದರಲ್ಲಿ ಲಂಗರು ಹಾಕಿದ್ದ ಹಡಗಿನಲ್ಲಿದ್ದ ಟೀಪುಡಿಯನ್ನಷ್ಟೂ ಸಮುದ್ರಕ್ಕೆ ಚೆಲ್ಲಿ ಪ್ರತಿಭಟಿಸಿದ್ದರು ಅಲ್ಲಿನ ದೇಶಭಕ್ತರು. ಬ್ರಿಟನ್ ಜಗ್ಗದೆ ಹೋದಾಗ ಅಮೆರಿಕದಲ್ಲಿದ್ದ ದೇಶಭಕ್ತರು ಮತ್ತು ಬ್ರಿಟಿಷರ ನಡುವೆ ಕದನ ಆರಂಭವಾಯ್ತು. ಫ್ರೆಂಚರ ಸಹಕಾರ ಪಡೆದು ಈ ದೇಶಭಕ್ತರು 1776 ಜುಲೈ 2ಕ್ಕೆ ಸ್ವಾತಂತ್ರ್ಯವನ್ನು ಘೊಷಿಸಿಕೊಂಡರು. ಬ್ರಿಟಿಷರ ಮೇಲೆ ಇದ್ದ ಕೋಪವನ್ನು ಈ ಮೂಲಕ ತೀರಿಸಿಕೊಂಡ ಫ್ರೆಂಚರು ಈ ಅಮೆರಿಕನ್ನರಿಗೆ ಪೂರ್ಣಬೆಂಬಲ ಕೊಟ್ಟು 1783ರಲ್ಲಿ ಬ್ರಿಟನ್ನು ಅಮೆರಿಕವನ್ನು ಸಾರ್ವಭೌಮ ರಾಷ್ಟ್ರವೆಂದು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಸಿತು! ಯುರೋಪಿನ ಮೊದಲ ಕಾಲನಿ ಸ್ವತಂತ್ರಗೊಂಡಿದ್ದು ಹೀಗೆ. ಹಾಗಂತ ಗಲಾಟೆಗಳೇನೂ ನಿಂತಿರಲಿಲ್ಲ. ಫ್ರೆಂಚರು, ಸ್ಪೇನರು ಆಗಾಗ ಕಿತ್ತಾಡುತ್ತಲೇ ಇದ್ದರು.
ಅಮೆರಿಕದಲ್ಲಿ ಇರುವ ಈ ಬಿಳಿಯರು ಮಾತ್ರ ವಿಸ್ತಾರದ ಮನೋಭಾವನೆಯನ್ನು ಬಿಡಲೇ ಇಲ್ಲ. ವಾಷಿಂಗ್ಟನ್ ಅನ್ನು ರಾಜಧಾನಿಯನ್ನಾಗಿಸಿಕೊಂಡು ಕೆನಡಾವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತ ಪಶ್ಚಿಮದ ಕಡೆಗೆ ರಾಷ್ಟ್ರವನ್ನು ವಿಸ್ತರಿಸುವ ಅವಕಾಶಗಳನ್ನು ಹುಡುಕುತ್ತಲೇ ಇದ್ದರು. 1835ರ ವೇಳೆಗೆ ಟೆಕ್ಸಾಸ್ ವಶವಾಯ್ತು. ಅಲ್ಲಿಂದ 15 ವರ್ಷಗಳಲ್ಲಿ ಕ್ಯಾಲಿಫೋರ್ನಿಯಾ ಇವರ ತೆಕ್ಕೆಗೆ ಬಂತು. ಈ ನಡುವೆ ಬಿಳಿಯರು ಕರಿಯರ ಕಿತ್ತಾಟ, ಜತೆಗೆ ಗುಲಾಮರ ಮಾಲೀಕರ ನಡುವೆ ಬಡಿದಾಟಗಳು ನಡೆದೇ ಇದ್ದವು. ಆ ಸಿರಿವಂತ ದೇಶದ ಒಡೆಯರಾಗಿದ್ದ ಮೂಲನಿವಾಸಿಗಳು ತಮ್ಮದ್ದೇ ದೇಶದಲ್ಲಿ ಪರಕೀಯರಾಗಿದ್ದರು! ಆದರೆ ವ್ಯಾಪಾರ, ವಹಿವಾಟಿನಲ್ಲಿ ತೀಕ್ಷ್ಣರಾಗಿದ್ದ ಇವರು ಕೃಷಿಯಲ್ಲಿ ಮತ್ತು ಕಾರ್ಖಾನೆಗಳನ್ನು ಸ್ಥಾಪಿಸಿ ಉತ್ಪಾದನೆ ಮಾಡುವಲ್ಲಿ ಸಾಧನೆ ಮೆರೆದರು. 19ನೇ ಶತಮಾನದ ಅಂತ್ಯದ ವೇಳೆಗೆ ಆರ್ಥಿಕವಾಗಿ ಸಬಲವಾಗಿ ಇರುವಂತಹ ರಾಷ್ಟ್ರವಾಗಿ ರೂಪುಗೊಂಡರು. ಸಹಜವಾಗಿಯೇ ಹಣ ಕೂಡಿಕೊಂಡಾಗ ವಿಸ್ತಾರವಾಗಬೇಕು ಎನ್ನುವ ಹುಚ್ಚು ಬರುತ್ತದೆ. ಹವಾಯ್ ದ್ವೀಪಗಳನ್ನು ಅಮೆರಿಕ ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದು ಈ ಹೊತ್ತಿನಲ್ಲೇ. ಕ್ಯೂಬಾ ಮೇಲೆ ಕಣ್ಣು ಹಾಕಿ ಯುದ್ಧಕ್ಕೆ ಪ್ರಚೋದಿಸಿದ್ದು, ಪೋರ್ಟೆರಿಕೊ ಮತ್ತು ಫಿಲಿಪೈನ್ಸ್ ದ್ವೀಪಗಳನ್ನು ವಶಕ್ಕೆ ಸೆಳಕೊಂಡಿದ್ದು ಈ ಹೊತ್ತಲ್ಲೇ.
ಅಮೆರಿಕ ಸದ್ದಿಲ್ಲದೆ ಹೀಗೆ ಬೆಳೆಯುತ್ತಿರುವಾಗಲೇ ಮೊದಲ ವಿಶ್ವಯುದ್ಧ ಶುರುವಾಯ್ತು. ಯುರೋಪ್ ಯುದ್ಧರಂಗಕ್ಕೆ ಧುಮುಕಿದರೂ ಅಮೆರಿಕ ಶಾಂತವಾಗಿ ಗಮನಿಸುತ್ತಿತ್ತು. ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತ ತನ್ನ ಉದ್ದಿಮೆಗಳನ್ನು ಬಲಪಡಿಸಿಕೊಳ್ಳುತ್ತಿತ್ತು. ಜರ್ಮನಿ ಸುಮ್ಮನಿರದೆ ಅಮೆರಿಕದ ಹಡಗೊಂದನ್ನು ಮುಳುಗಿಸಿಬಿಟ್ಟಾಗ ವಿಧಿಯಿಲ್ಲದೆ ಅಮೆರಿಕ ಯುದ್ಧರಂಗಕ್ಕೆ ಧುಮುಕಿತು. 20 ಲಕ್ಷ ಸೈನಿಕರನ್ನು ಯುದ್ಧರಂಗಕ್ಕೆ ಕಳಿಸಿತು. ಯುದ್ಧ ಮುಗಿದು ಬ್ರಿಟನ್ನು ನೆಮ್ಮದಿಯ ನಿಟ್ಟುಸಿರುಬಿಡುವ ವೇಳೆಗಾಗಲೇ ತನಗರಿವಿಲ್ಲದಂತೆ ಅಮೆರಿಕದ ಸಾಲಕ್ಕೆ ಒಳಗಾಗಿಬಿಟ್ಟಿತ್ತು. ಪ್ರಥಮ ಮಹಾಯುದ್ಧದ ನಂತರ ಆರ್ಥಿಕವಾಗಿ ಜಗತ್ತೆಲ್ಲ ಕಂಗಾಲಾಗಿ ಹೋಗಿದ್ದರೂ ಅಮೆರಿಕ ಅರಳಿ ಮೊದಲಿಗಿಂತ ಹೆಚ್ಚು ನಳನಳಿಸುತ್ತಿತ್ತು. 1930ರ ದಶಕದ ವೇಳೆಗೆ ಜಾಗತಿಕವಾದ ಆರ್ಥಿಕ ದುಃಸ್ಥಿತಿಗೆ ಅಮೆರಿಕವೂ ಬಲಿಯಾಯ್ತು. ತನ್ನನ್ನು ತಾನು ಉದ್ಧರಿಸಿಕೊಳ್ಳಲು ಅದಕ್ಕಿದ್ದ ಮಾರ್ಗ ಶಸ್ತ್ರಾಸ್ತ್ರಗಳನ್ನು ಮಾರುವುದೊಂದೇ. ಅದು ಯೋಗಾಯೋಗವೋ ಅಮೆರಿಕದ್ದೇ ಕೈವಾಡವೋ ಗೊತ್ತಿಲ್ಲ. ಆ ಹೊತ್ತಲ್ಲಿ ಸರಿಯಾಗಿ ಎರಡನೇ ವಿಶ್ವಯುದ್ಧ ಶುರುವಾಯ್ತು. ಮತ್ತೆ ಅಮೆರಿಕ ಶಸ್ತ್ರಗಳನ್ನು ಮಾರಾಟ ಮಾಡಿ ಸಾಕಷ್ಟು ದುಡ್ಡು ಸಂಪಾದಿಸಿತು. ಪರ್ಲ್ಹಾರ್ಬರ್ನ ಮೇಲೆ ಜಪಾನ್ ದಾಳಿ ಮಾಡಿದ ಬಳಿಕ ಅಮೆರಿಕ ಮೈಕೊಡವಿಕೊಂಡು ನಿಂತಿತು. ವಿಜ್ಞಾನಿಗಳ ಸಂಶೋಧನೆಯ ಕೂಸಾದ ಎರಡು ಬೇಬಿಬಾಂಬ್ಗಳನ್ನು ಹಿರೋಷಿಮಾ ಮತ್ತು ನಾಗಾಸಾಕಿಗಳ ಮೇಲೆಸೆಯಿತು. ಜಪಾನ್ ಬೇಷರತ್ತಾಗಿ ಶರಣಾಗುವುದರೊಂದಿಗೆ ಯುದ್ಧ ಮುಗಿಯಿತೇನೋ ನಿಜ. ಆದರೆ ಅಮೆರಿಕ ಮೊದಲಿಗಿಂತ ಹೆಚ್ಚು ಬಲಾಢ್ಯ ರಾಷ್ಟ್ರವಾಗಿ ಅನಾವರಣಗೊಂಡಿತ್ತು!
ನಿಜವಾದ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಇಲ್ಲಿಂದ ಆರಂಭವಾಗುತ್ತದೆ. ತನ್ನೆಲ್ಲ ಕುಟಿಲನೀತಿಯನ್ನು ಬಳಸಿ ಅಮೆರಿಕ ಎದುರಿಗೆ ಬಂದವರನ್ನು ಮುಲಾಜಿಲ್ಲದೆ ಮುಗಿಸುತ್ತ ಈ ಹಂತಕ್ಕೆ ಬಂದು ನಿಂತುಬಿಟ್ಟಿತು. ಸ್ಪೇನಿನಲ್ಲಿ ಕರೊನಾ ತಾಂಡವನೃತ್ಯ ನಡೆಸುತ್ತಿರುವಾಗ ಜನರಲ್ ಪಿಜಾರೋನಾ ದೇಹ ಸಮಾಧಿಯಲ್ಲೇ ಮಗ್ಗಲು ಬದಲಿಸಿದ್ದು ನಿಜವಾದರೆ, ಕರ್ಮಸಿದ್ಧಾಂತ ಅಮೆರಿಕವನ್ನು ಅಟ್ಟಿಸಿಕೊಂಡು ಹೋಗುವುದೂ ಅಷ್ಟೇ ನಿಜ. ಆದರೆ ಆ ಕಾಲ ಬಂದಿದೆಯೋ ಬರಬೇಕಿದೆಯೋ ಕಾದುನೋಡಬೇಕಷ್ಟೇ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)