ಉಗ್ರರನ್ನು ಬೆಳೆಸುವಲ್ಲಿ, ಅವರಿಗೆ ತರಬೇತಿ ನೀಡುವಲ್ಲಿ ಅಮೆರಿಕ ಪಾತ್ರ ಇದ್ದಿದ್ದು ಹೌದಾದರೂ, ಯಾವಾಗ ತನ್ನ ಮೇಲೇ ದಾಳಿ ನಡೆಯಿತೋ ಆಗ ಅದು ನಡೆಸಿದ ಕಾರ್ಯಾಚರಣೆ ಮತ್ತು ದೇಶರಕ್ಷಣೆಗೆ ಕೈಗೊಂಡ ಕ್ರಮಗಳು ಅಭೂತಪೂರ್ವ ಎಂಬುದರಲ್ಲಿ ಎರಡು ಮಾತಿಲ್ಲ. ಅದರಿಂದ ಅಂತಾರಾಷ್ಟ್ರೀಯವಾಗಿ, ಜಾಗತಿಕ ಭಯೋತ್ಪಾದನೆ ಮೇಲೆ ಆದ ಪರಿಣಾಮಗಳೂ ಅನೇಕ.
ಯಾರಿಗಾದರೂ ಹಲ್ಲುನೋವು ಅಥವಾ ಕಿವಿನೋವು ಬಂದರೆ ಎದುರುಗಿರುವರಿಗೆ ಮೇಲ್ನೋಟಕ್ಕೆ ಏನೂ ಕಾಣುವುದಿಲ್ಲ. ಆದರೆ ನೋವು ಅನುಭವಿಸುತ್ತಿರುವಾತನಿಗೆ ಮಾತ್ರ ನೋವಿರುವ ಹಲ್ಲನ್ನು ಕಿತ್ತೊಗೆದುಬಿಡಬೇಕು ಎಂಬಷ್ಟು ಚಡಪಡಿಕೆ. ಎಷ್ಟು ಬೇಗ ದಂತವೈದ್ಯರ ಬಳಿ ಹೋಗಿ ಮಾತ್ರೆ ಬರೆಸಿಕೊಂಡು ನುಂಗುತ್ತೇನೋ ಎನ್ನುವಂತಾಗುತ್ತದೆ. ಹಾಗಾಗೇ, ಹಲ್ಲು ಅಥವಾ ಕಿವಿನೋವು ಅನುಭವಿಸಿದವರಿಗೆ ಮಾತ್ರ ಗೊತ್ತಾಗುತ್ತದೆ ಎಂದು ಹೇಳುವುದು.
2001ರ ದಾಳಿ ನಂತರದಲ್ಲಿ ಅಮೆರಿಕದಲ್ಲಿ ಅತಿ ವೇಗವಾಗಿ ಬೆಳವಣಿಗೆಗಳು ನಡೆಸಿದವು. ಸೆಂಟ್ರಲ್ ಇನ್ವೆಸ್ಟಿಗೇಟಿವ್ ಏಜೆನ್ಸಿ (ಸಿಐಎ) ತನಿಖೆಯ ಜವಾಬ್ದಾರಿಯನ್ನು ತೆಗೆದುಕೊಂಡಿತು. ಪ್ರಕರಣದ ಜಾಡುಹಿಡಿದು ಹೊರಟಾಗ ದಾಳಿ ನಡೆಸಿದ್ದು ಅಲ್ ಕೈದಾ ಎಂದೂ, ಒಸಾಮಾ ಬಿನ್ ಲಾದೆನ್ ಇದರ ಸೂತ್ರಧಾರ ಎಂದೂ ತಿಳಿದುಬಂತು. ಅಮೆರಿಕದ ನಾಲ್ಕು ವಿಮಾನಗಳನ್ನು ಅಪಹರಿಸಿ ಈ ದಾಳಿಗಳನ್ನು ನಡೆಸಲಾಗಿತ್ತು. ಅಣಕ ಎನ್ನಿ ಅಥವಾ ವಿಪರ್ಯಾಸ ಎನ್ನಿ, ಈ ಹಿಂದೆ ಅಮೆರಿಕವೇ ಅಲ್ ಕೈದಾ ಉಗ್ರರಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳ ನೆರವನ್ನು ಸಹ ನೀಡಿತ್ತು! ಆ ಸನ್ನಿವೇಶ ಮತ್ತು ಉದ್ದೇಶ ಬೇರೆ. ರಷ್ಯಾದಿಂದ ಅಫ್ಘಾನಿಸ್ತಾನದಲ್ಲಿ 1978ರಲ್ಲಿ ಕಮ್ಯೂನಿಸ್ಟ್ ಸರ್ಕಾರ ರಚನೆಯಾಗಿ, ಮರುವರ್ಷವೇ ರಷ್ಯಾ ಆ ದೇಶದ ಮೇಲೆ ದಾಳಿಮಾಡಿತು. ಇದು ಸಹಜವಾಗಿಯೇ ಇತರ ಮುಸ್ಲಿಮ್ ದೇಶಗಳಲ್ಲಿ ಮತ್ತು ವಿಶ್ವದಲ್ಲಿ ಇಸ್ಲಾಮಿಕ್ ಆಡಳಿತದ ಕನಸು ಕಂಡ ಲಾದೆನ್ ನಂತಹವರಿಗೆ ಆಕ್ರೋಶ ತರಿಸಿತು. ಇದೇ ವೇಳೆ, ರಷ್ಯಾ ಜತೆಗೆ ವೈರತ್ವ ಹೊಂದಿದ್ದ ಅಮೆರಿಕ, ಅಫ್ಘಾನಿಸ್ತಾನದಲ್ಲಿ ರಷ್ಯಾ ಸೈನ್ಯದ ಮೇಲೆ ದಾಳಿ ನಡೆಸಲು ಜಿಹಾದಿಗಳಿಗೆ ಸಕ್ರಿಯ ಸಹಕಾರ, ಬೆಂಬಲ ನೀಡಿತು. 1989ರಲ್ಲಿ ರಷ್ಯನ್ನರು ಅಪ್ಘಾನಿಸ್ತಾನದಿಂದ ತೆರಳಿದರು. ಆದರೆ ಅಷ್ಟರಲ್ಲಿ ಆ ದೇಶ ಉಧ್ವಸ್ಥಗೊಂಡಿತ್ತು; ಜನರ ಪರಿಸ್ಥಿತಿ ಅಸಹನೀಯವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಅಮೆರಿಕ ಆ ದೇಶದ ಬಗ್ಗೆ ಯಾವ ಕಾಳಜಿಯನ್ನೂ ತೆಗೆದುಕೊಳ್ಳದೆ ಸುಮ್ಮನಾಯಿತು. ರಷ್ಯಾ ಅಲ್ಲಿಂದ ಕಾಲ್ತೆಗೆದ ನಂತರ ಅಮೆರಿಕಕ್ಕೆ ಅಫ್ಘಾನಿಸ್ತಾನದ ಮೇಲೆ ಆಸಕ್ತಿ ಉಳಿಯಲಿಲ್ಲ. ಈ ಅಂಶ ಕೂಡ ಒಸಾಮಾಗೆ ಸಿಟ್ಟು ತರಿಸಿತು. ಮೊದಲೇ ಪಾಶ್ಚಿಮಾತ್ಯ ಶಿಕ್ಷಣ ಮತ್ತು ಜೀವನಶೈಲಿ ಬಗ್ಗೆ ದಟ್ಟ ತಿರಸ್ಕಾರ ಹೊಂದಿದ್ದ ಆತ ಈಗ ಮತ್ತಷ್ಟು ಕಠಿಣಗೊಂಡ. ಅದು ಅಮೆರಿಕದ ಮೇಲೆ ವಿಮಾನದಾಳಿಯಲ್ಲಿ ಪರ್ಯವಸಾನಗೊಂಡಿತು.
ಈ ಎಲ್ಲ ವಿವರಗಳನ್ನು ಕುತೂಹಲಕರವಾಗಿ, ಸವಿವರವಾಗಿ ಕಟ್ಟಿಕೊಡುವ ಕೃತಿ ಡಾ.ಡಿ.ವಿ.ಗುರುಪ್ರಸಾದ್ ಅವರ ‘ಆಪರೇಷನ್ ತ್ರಿಶೂಲ.’ ಇದಕ್ಕೇಕೆ ತ್ರಿಶೂಲ ಎಂಬ ಹೆಸರು ಎಂಬ ಅನುಮಾನ ಬರಬಹುದು. ಲೇಖಕರು ಅದನ್ನು ಸ್ಪಷ್ಟಪಡಿಸಿದ್ದಾರೆ. ಒಸಾಮಾ ಕಾರ್ಯಾಚರಣೆಗೆ ಅಮೆರಿಕ ಇಟ್ಟ ಹೆಸರು ‘ಆಪರೇಷನ್ ನೆಪ್ಚೂನ್ ಸ್ಪಿಯರ್.’ ನೆಪ್ಚೂನ್ ರೋಮನ್ನರ ಸಮುದ್ರದೇವತೆ, ಭಗವಾನ್ ಶಿವನ ಹಾಗೆ ಆತನ ಆಯುಧವೂ ತ್ರಿಶೂಲ. ಅಲ್ಲದೆ, ಈ ಕಾರ್ಯಾಚರಣೆಯನ್ನು ನಡೆಸಿದ ಅಮೆರಿಕ ಸೇನೆಯ ನೇವಿ ಸೀಲ್ ತಂಡದ ಲಾಂಛನ ಕೂಡ ತ್ರಿಶೂಲ. ಹೀಗಾಗಿ ಕೃತಿಗೆ ಈ ಹೆಸರು.
ಉಗ್ರರನ್ನು ಬೆಳೆಸುವಲ್ಲಿ, ಅವರಿಗೆ ತರಬೇತಿ ನೀಡುವಲ್ಲಿ ಅಮೆರಿಕ ಪಾತ್ರ ಇದ್ದಿದ್ದು ಹೌದಾದರೂ, ಯಾವಾಗ ತನ್ನ ಮೇಲೇ ದಾಳಿ ನಡೆಯಿತೋ ಆಗ ಅದು ನಡೆಸಿದ ಕಾರ್ಯಾಚರಣೆ ಮತ್ತು ದೇಶರಕ್ಷಣೆಗೆ ಕೈಗೊಂಡ ಕ್ರಮಗಳು ಅಭೂತಪೂರ್ವ ಎಂಬುದರಲ್ಲಿ ಎರಡು ಮಾತಿಲ್ಲ. ಅದರಿಂದ ಅಂತಾರಾಷ್ಟ್ರೀಯವಾಗಿ, ಜಾಗತಿಕ ಭಯೋತ್ಪಾದನೆ ಮೇಲೆ ಆದ ಪರಿಣಾಮಗಳೂ ಸಹ ಅನೇಕ. ಹೀಗೆಂದೇ ಇತಿಹಾಸಕಾರರು, 11/9 ದಾಳಿ ನಂತರದ ಬೆಳವಣಿಗೆಗಳನ್ನು ಜಾಗತಿಕ ಇತಿಹಾಸದಲ್ಲಿ ಪ್ರಮುಖ ತಿರುವುಬಿಂದುಗಳ್ಲೊಂದು ಎಂದು ಗುರುತಿಸುತ್ತಾರೆ. ಅಮೆರಿಕದ ಈ ಕಾರ್ಯಾಚರಣೆಯನ್ನು ಕಣ್ಣಿಗೆ ಕಟ್ಟುವಂತೆ, ವಿರಳ ಮಾಹಿತಿಗಳೊಂದಿಗೆ ಈ ಕೃತಿ ಹಿಡಿದಿಡುತ್ತದೆ. ಲೇಖಕರು ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು ಮತ್ತು ಗುಪ್ತಚರದಳ ಮುಖ್ಯಸ್ಥರಾಗಿಯೂ ಅನುಭವ ಹೊಂದಿದ್ದರಿಂದ ಈ ಕೃತಿಗೆ ವಿಶಿಷ್ಟತೆ ಪ್ರಾಪ್ತವಾಗಿದೆ. ಈ ಪುಸ್ತಕಕ್ಕಾಗಿ ಲೇಖಕರು ಅನೇಕ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ; ಅಮೆರಿಕ ಸರ್ಕಾರ ರಚಿಸಿದ್ದ ಆಯೋಗದ ವರದಿಯನ್ನು ಓದಿದ್ದಾರೆ; ಹಲವು ವೀಡಿಯೊ ಮತ್ತು ಸಾಕ್ಷ್ಯಚಿತ್ರಗಳನ್ನು ನೋಡಿದ್ದಾರೆ. ಜತೆಗೆ, ಒಸಾಮಾ ಕಾರ್ಯಾಚರಣೆಗೆ ಇದನ್ನು ಸೀಮಿತಗೊಳಿಸದೆ ಹಲವು ಆಯಾಮಗಳಲ್ಲಿ ವಿಸ್ತರಿಸಿದ್ದಾರೆ. ಕಾಶ್ಮೀರದ ಉಗ್ರರಿಗೂ ಲಾದೆನ್ ಗೂ ಇದ್ದ ಸಂಬಂಧವನ್ನು ಬಿಡಿಸಿಟ್ಟಿದ್ದಾರೆ; ಅಮೆರಿಕ ಸಿಐಎ ಕಾರ್ಯಸ್ವರೂಪವನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ. ಒಂದು ಘಟನೆಯ ಹಿಂದೆ ಏನೆಲ್ಲ ಸಂಚು, ಪೂರ್ವತಯಾರಿಗಳು ನಡೆಯುತ್ತವೆ; ಉಗ್ರರು ಕಾರ್ಯನಿರ್ವಹಿಸುವ ವಿಧಾನ; ಅವರ ಮನಸ್ಥಿತಿ ಈ ಎಲ್ಲ ಅಂಶಗಳತ್ತ ಲೇಖಕರು ಗಮನಹರಿಸುವುದರಿಂದ ಒಳನೋಟಗಳೂ ದಕ್ಕುತ್ತವೆ. ಅಮೆರಿಕ ದಾಳಿಯಲ್ಲಿ ಭಾಗವಹಿಸಿದ ಎಲ್ಲ ಉಗ್ರರ ಬಗ್ಗೆ ಮತ್ತು ಇಡೀ ಯೋಜನೆಯ ಇಂಚಿಂಚೂ ಮಾಹಿತಿಯನ್ನು ಲೇಖಕರು ಕಲೆಹಾಕಿದ್ದಾರೆ.
ಲಾದೆನ್ ನನ್ನು ಹುಡುಕುವ ಸಲುವಾಗಿ ಮತ್ತು ಅಲ್ ಕೈದಾ ಮೇಲೆ ಪ್ರತೀಕಾರದ ಉದ್ದೇಶದೊಂದಿಗೆ ಅಫ್ಘಾನಿಸ್ತಾನಕ್ಕೆ ಸೇನೆಯನ್ನು ಕಳಿಸಿದ ಅಮೆರಿಕ, ಲಾದೆನ್ ಬಂಟರನ್ನು ಮತ್ತು ಆಪ್ತರನ್ನು ವಿಶ್ವದ ವಿವಿಧೆಡೆಗಳಲ್ಲಿ ಬೇಟೆಯಾಡಿದ ವಿವರಗಳು ಇಲ್ಲಿವೆ. ಅದು ಒಂದು ತೂಕವಾದರೆ, ಲಾದೆನ್ ನನ್ನು ಪತ್ತೆಹಚ್ಚಿ, ಕೊಂದಿದ್ದು ಮತ್ತೊಂದು ತೂಕ. ಏಕೆಂದರೆ ಆತನ ಪತ್ತೆಗೆ ಅಮೆರಿಕ ಹತ್ತು ವರ್ಷ ಶ್ರಮಿಸಬೇಕಾಯಿತು! ಲಾದೆನ್ ಅಡಗುದಾಣವನ್ನು ಕಂಡುಹಿಡಿಯಲು ಸಿಐಎ ಏನೆಲ್ಲ ತಿಪ್ಪರಲಾಗ ಹಾಕಿತು ಎಂಬುದಕ್ಕೆ ಉದಾಹರಣೆ ನೋಡಿ: ಅಡಗುದಾಣದಿಂದ ಲಾದೆನ್ ಕಳಿಸಿದ ಅನೇಕ ವೀಡಿಯೊ ಮತ್ತು ಆಡಿಯೊಗಳನ್ನು ಸಿಐಎ ಅಧಿಕಾರಿಗಳು ಪರಿಶೀಲಿಸಿದರು. ಆತನ ಮಾತಿನ ಹಿನ್ನೆಲೆಯಲ್ಲಿ ಕಾಣುತ್ತಿದ್ದ ಪ್ರದೇಶ ಗುಡ್ಡಗಾಡೋ, ಮರುಭೂಮಿಯೋ, ಅಲ್ಲಿ ಕೆರೆ ನದಿಗಳೇನಾದರೂ ಇವೆಯೋ, ಅಕ್ಕಪಕ್ಕ ಕಟ್ಟಡಗಳೇನಾದರೂ ಇವೆಯೋ ಎಂದೆಲ್ಲ ಕೂಲಕಂಷವಾಗಿ ಗಮನಿಸುತ್ತಿದ್ದರು. ಒಂದೊಮ್ಮೆ ಅದರಲ್ಲಿ ಮರಗಿಡಗಳು ಅಥವಾ ಪ್ರಾಣಿ ಕಾಣಿಸಿದರೆ ತಜ್ಞರ ಮೂಲಕ ಆ ಭೂಪ್ರದೇಶ ಯಾವುದೆಂದು ತಿಳಿಯುವ ಯತ್ನ ಮಾಡುತ್ತಿದ್ದರು; ಪಕ್ಷಿಯ ಧ್ವನಿ ಕೇಳಿಸಿದಲ್ಲಿ, ಅದು ಯಾವ ಪಕ್ಷಿ ಮತ್ತು ಜಗತ್ತಿನ ಯಾವ ಭಾಗದಲ್ಲಿ ವಾಸಿಸುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಪಕ್ಷಿತಜ್ಞರ ಬಳಿ ಕೇಳಲಾಗುತ್ತಿತ್ತು. ಈ ಹುಡುಕಾಟ ಮಾಡಿ ಮಾಡಿ ಸಿಐಎ ಅಧಿಕಾರಿಗಳು ಕೊನೆಕೊನೆಗೆ ರೋಸಿಹೋಗಿದ್ದರಂತೆ! ಲಾದೆನ್ ಅಡಗುದಾಣ ಪತ್ತೆಹಚ್ಚಿದ ಬಗೆಯೂ ರೋಚಕವಾಗಿದೆ. ಆತ ಸೆಲ್ ಫೋನ್ ಇತ್ಯಾದಿ ಬಳಸುತ್ತಿರಲಿಲ್ಲ. ಕೇವಲ ಸಂದೇಶವಾಹಕರ ಮೂಲಕ ಮಾಹಿತಿಗಳನ್ನು ರವಾನೆ ಮಾಡುತ್ತಾನೆ ಎಂಬ ಸುಳಿವಿನ ಜಾಡುಹಿಡಿದು ಮುಂದುವರಿದಾಗ ಕುವೈತಿ ಎನ್ನುವವನ ಪತ್ತೆಯಾಗುತ್ತದೆ. ಆತ ಅಬೋಟಾಬಾದ್ ಹೊರವಲಯದಲ್ಲಿರುವ ಮೂರಂತಸ್ತಿನ ಬಂಗ್ಲೆಗೆ ಆಗಾಗ ಹೋಗುವುದನ್ನು ಪತ್ತೆಹಚ್ಚಿದ ಸಿಐಎ ಅಲ್ಲಿ ತಿಂಗಳಾನುಗಟ್ಟಲೆ ಕಣ್ಣಿಡುತ್ತದೆ. ಆದರೆ ಅಲ್ಲಿ ಲಾದೆನ್ ಇದ್ದಾನೊ ಇಲ್ಲವೊ ಎಂಬುದು ಸ್ಪಷ್ಟವಾಗುವುದಿಲ್ಲ. ಬಲವಾದ ಸಂಶಯದ ಆಧಾರದ ಮೇಲೆ ಗೂಢಚರ್ಯು ಮುಂದುವರಿಸಿ, ಅಂತಿಮವಾಗಿ 2011ರ ಮೇ 1ರಂದು ನೇವಿ ಸೀಲ್ ಕಮಾಂಡೊಗಳು ಆ ಮನೆ ಮೇಲೆ ದಾಳಿ ನಡೆಸಿ, ಲಾದೆನ್ ನನ್ನು ಹತ್ಯೆಗೈಯುತ್ತಾರೆ. ಅಂದಹಾಗೆ, ಲಾದೆನ್ ಅಡಗಿದ್ದ ಮನೆ ಪಾಕ್ ಸೈನ್ಯದ ಮಿಲಿಟರಿ ಅಕಾಡೆಮಿಯಿಂದ ಕೇವಲ ಒಂದು ಕಿಲೋಮೀಟರ್ (ಇಸ್ಲಾಮಾಬಾದ್ ನಿಂದ 120 ಕಿಮೀ) ದೂರದಲ್ಲಿತ್ತು! ಭಯೋತ್ಪಾದನೆ ವಿರುದ್ಧದ ಸಮರದ ಹೆಸರಿನಲ್ಲಿ ಪಾಕಿಸ್ತಾನ ಅಮೆರಿಕದಿಂದ ಭರ್ಜರಿ ಕಮಾಯಿ ಮಾಡಿತ್ತು. ಆದರೆ ಅಮೆರಿಕ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ವರ್ಷಗಳಿಂದ ಹುಡುಕಾಡುತ್ತಿದ್ದ ಲಾದೆನ್ ಅದೇ ಪಾಕಿಸ್ತಾನದಲ್ಲಿದ್ದ!
(ಕೃತಿ: ಆಪರೇಷನ್ ತ್ರಿಶೂಲ- ಒಸಾಮಾ ಬಿನ್ ಲಾದೆನ್ ನ ಪತ್ತೆ-ಹತ್ಯೆ
ಲೇಖಕರು: ಡಾ.ಡಿ.ವಿ.ಗುರುಪ್ರಸಾದ್, ಪ್ರಕಾಶಕರು: ವಿಕ್ರಂ ಪ್ರಕಾಶನ, ಭುವನೇಶ್ವರಿ ನಗರ, ಬೆಂಗಳೂರು, ಪುಟಗಳು: 219, ಬೆಲೆ: 199 ರೂ.)
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)