ಮಹಮದ್ ಯೂನುಸ್ ಅಮೆರಿಕಕ್ಕೆ ಹೋದಮೇಲೆ ಕ್ಲಿಂಟನ್ ಗ್ಲೋಬಲ್ ಫೌಂಡೇಶನ್ಗೆ ಹೋಗದಿರಲಾಗುತ್ತದೆಯೇ? ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಭೇಟಿಯಾಗದಿದ್ದರೆ ಆಗುತ್ತದೆಯೇ? ಯೂನುಸ್ ಸಾಹೇಬರನ್ನು ಇದುವರೆಗೆ ಸಾಕಿ ಸಲಹಿ ಬಡ ಬಾಂಗ್ಲಾದೇಶದಲ್ಲಿ ಭಾರಿ ಕುಳವನ್ನಾಗಿ ಮಾಡಿ, ನೊಬೆಲ್ ಪಾರಿತೋಷಕವನ್ನೂ ಕೊಡಿಸಿ ಜಗತ್ತಿನಾದ್ಯಂತ ದೊಡ್ಡಮನುಷ್ಯನನ್ನಾಗಿ ಮಾಡಿದ್ದೇ ಕ್ಲಿಂಟನ್ಗಳು. ಅದು ಸಾಲದು ಎಂಬಂತೆ ‘ಪ್ರೆಸಿಡೆನ್ಷಿಯಲ್ ಮೆಡಲ್
ಶಫ್ಪಿ›ೕಡಂ ಮತ್ತು ಕಾಂಗ್ರೆಸನಲ್ ಗೋಲ್ಡ್ ಮೆಡಲ್’ ಅನ್ನೂ ಕೊಡಿಸಿ ಬಾಂಗ್ಲಾದೇಶದ ಈ ಅರ್ಥಶಾಸ್ತ್ರಜ್ಞ ಡೆಮೋಕ್ರಾಟಿಕ್ ಪಕ್ಷಕ್ಕೆ ಅದೆಷ್ಟು ಮುಖ್ಯ ಎಂದೂ ತೋರಿಸಿಕೊಟ್ಟದ್ದೂ ಕ್ಲಿಂಟನ್ಗಳೇ, ತಮ್ಮ ಗ್ಲೋಬಲ್ ಫೌಂಡೇಷನ್ ಮೂಲಕ. ಯೂನುಸ್ರ ಸಾಧನೆಯ ‘ಫೌಂಡೇಶನ್’ (ಅಸ್ತಿಭಾರ ಎಂದು ನೀವು ಅಂದುಕೊಳ್ಳಲಡ್ಡಿಯಿಲ್ಲ) ಅದೆಷ್ಟು ಬಲವಾಗಿದೆ ಎನ್ನುವುದು ಮತ್ತು ಇಂದು ಶೇಖ್ ಹಸೀನಾ ಬದಲು ಢಾಕಾದ ಗದ್ದುಗೆಯಲ್ಲಿ ಕೂರಲು ಅವರೇ ಸೂಕ್ತ ವ್ಯಕ್ತಿ ಎಂದು ಅಮೆರಿಕದ ಡೆಮೋಕ್ರಾಟಿಕ್ ಪಕ್ಷದ ಸರ್ಕಾರ ತೀರ್ವನಿಸಿರುವುದರ ಹಿಂದಿನ ಮರ್ಮ ಬಹುತೇಕ ಬಾಂಗ್ಲಾದೇಶೀಯರಿಗೆ ಗೊತ್ತಿಲ್ಲ.
ಮಹಮ್ಮದ್ ಯೂನುಸ್ ಅಮೆರಿಕಕ್ಕೆ ಹೋಗುವಾಗ ಖುಷಿಖುಷಿಯಾಗಿದ್ದರು. ವಾಪಸ್ ಬಂದಾಗ ಮಂಕಾಗಿಬಿಟ್ಟಿದ್ದರು. ಅದಕ್ಕೇನೂ ಜೆಟ್ಲ್ಯಾಗ್ ಕಾರಣವಾಗಿರಲಿಲ್ಲ. ಢಾಕಾದಲ್ಲಿ ಕಾಲಿಡುತ್ತಿದ್ದಂತೆ ಮಧ್ಯಂತರ ಸರ್ಕಾರ ಭಾರತದ ಬಗ್ಗೆ ಮಾಡಿದ್ದ ಕೆಲವು ತೀರ್ವನಗಳನ್ನು ಹಿಂತೆಗೆದುಕೊಂಡಿತು! ಹಾಗೆ ಮಾಡಿ ಅಂತ ಮಧ್ಯಂತರ ಸರ್ಕಾರದ ‘ಮುಖ್ಯ ಸಲಹೆಗಾರ’ರಿಗೇ ಅತಿ ಮುಖ್ಯ ಸಲಹೆ ವಾಷಿಂಗ್ಟನ್ನಲ್ಲಿ ದೊರೆತಿದೆ ಎನ್ನುವುದು ಇದರಿಂದ ಸ್ಪಷ್ಟವಾಯಿತು. ಅಷ್ಟೇ ಅಲ್ಲ, ಭಾರತ-ದ್ವೇಷವನ್ನೇ ಉಸಿರಾಡುವ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಸಹ ನಮ್ಮ ದೇಶದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು ಗೋಳದ ಆಚೆಬದಿಯಿಂದ ಬಂದ ‘ಸಲಹೆ’ ಭಾರಿಯಾದದ್ದೇ ಎಂಬ ಸೂಚನೆಯನ್ನೂ ನೀಡಿತು.
ಢಾಕಾದ ಈ ಹೊಸ ರಾಗ ನಮಗರ್ಥವಾಗಬೇಕಾದರೆ ಕಳೆದೆರಡು ತಿಂಗಳುಗಳಲ್ಲಿ ಮೂಡಣದ ಆ ನಾಡಿನಿಂದ ಹೊರಡುತ್ತಿದ್ದ ಸೊಲ್ಲುಗಳನ್ನು ಒಮ್ಮೆ ನೆನಪಿಸಿಕೊಳ್ಳುವುದು ಅಗತ್ಯ. ಆಗಸ್ಟ್ 5ರಿಂದಲೇ ಬಿಎನ್ಪಿ ಮತ್ತು ಜಮಾತ್-ಎ-ಇಸ್ಲಾಮಿ ಕಾರ್ಯಕರ್ತರು ಅಲ್ಲಿನ ಹಿಂದೂಗಳ ಮೇಲೆ ಎಸಗಿದ ಕರಾಳ ಕೃತ್ಯಗಳು ‘ಅ್ಝ ಉಢಛಿಠ ಟ್ಞ ಈಜಚkಚ’ ಎಂಬ ಹ್ಯಾಷ್ಟ್ಯಾಗ್ ಇಲ್ಲದೆಯೂ, ನಮ್ಮ ಒಬ್ಬ ಮಹಾನ್ ‘ಯುವ’ ನೇತಾರರೊಬ್ಬರು ಆ ಬಗ್ಗೆ ಮಾತಾಡಲು ನಿರಾಕರಿಸಿದರೂ ನಿಮಗೆಲ್ಲ ತಿಳಿದಿದೆ. ಆಮೇಲೆ ಶೇಖ್ ಹಸೀನಾರಿಗೆ ಆಶ್ರಯ ನೀಡಿದ ಭಾರತದ ಬಗ್ಗೆ ಢಾಕಾದ ಹೊಸ ನಾಯಕರುಗಳೂ ತಲೆಗೊಂದು ಮಾತಾಡಿದ್ದಲ್ಲದೆ ಎಪ್ಪತ್ತೇಳರ ಆ ನಾಯಕಿಯನ್ನು ತಮಗೊಪ್ಪಿಸಬೇಕೆಂದೂ ಹಲವುಹತ್ತು ಬಾಯಿಗಳು ನವದೆಹಲಿಗೆ ಪದೇಪದೆ ಆಗ್ರಹ ಹಾಗೂ ಧಮಕಿಯನ್ನೂ ನೀಡಿದ್ದನ್ನು ಕೇಳಿಸಿಕೊಂಡೆವು. ಜತೆಗೆ, ಭಾರತದ ಬಗ್ಗೆ ಸದಾ ವಿಷ ಕಾರುವ ಮಮೂನುಲ್ ಹಕ್ನಂತಹವರನ್ನೂ ಯೂನುಸ್ ಭೇಟಿಯಾದದ್ದನ್ನೂ ಕಂಡೆವು. ನಡುವೆಯೊಮ್ಮೆ ದೇಶದ ಪೂರ್ವದಲ್ಲಾದ ಪ್ರವಾಹಕ್ಕೆ ಭಾರತವನ್ನೇ ದೂಷಿಸಿ ಜನನಾಯಕರು ಮತ್ತು ಜನಸಾಮಾನ್ಯರು ವಿಷ ಕಾರಿದ್ದೂ ನಡೆದುಹೋಯಿತು. ಈ ಮಾತುಗಳ ನಡುವೆ ಹಿಲ್ಸಾ ಮೀನುಗಳ ಕುರಿತಾಗಿ ಯೂನುಸ್ ಸರ್ಕಾರ ಎಸಗಿದ ಕೃತ್ಯವೊಂದು ಹೆಡ್ಲೈನ್ ಆಗಿಬಿಟ್ಟಿತು.
ಬಂಗಾಳಿಗಳ ಮೀನುಪ್ರೀತಿ ಯಾರಿಗೆ ತಿಳಿಯದು? ಅದರಲ್ಲೂ ಬಾಂಗ್ಲಾದೇಶದ ಪದ್ಮಾ ನದಿಯ ಹಿಲ್ಸಾ ಮೀನೆಂದರೆ ಬಾಯಿ ಬಿಡದ ಬಂಗಾಳಿಯೇ ಇಲ್ಲ ಬಿಡಿ. ಆ ಮೀನು ಭಾರತಕ್ಕೆ ಬಾಂಗ್ಲಾದೇಶ ರಪ್ತು ಮಾಡುವ ಮುಖ್ಯ ಸರಕುಗಳಲ್ಲೊಂದು. ಕೆಲವೊಮ್ಮೆ ಯಾವುದೇ ಕಾರಣದಿಂದಾಗಿ ಹಿಲ್ಸಾ ಮೀನುಗಳ ಲಭ್ಯತೆಯಲ್ಲಿ ಕೊರತೆಯಾಗಿ ಹೊರದೇಶಗಳಿಗೆ ಅದರ ರಫ್ತನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಸನ್ನಿವೇಶ ಬಂದಾಗಲೂ ಭಾರತಕ್ಕೆ ಮಾತ್ರ ಅದರ ಪೂರೈಕೆ ನಿಲ್ಲದಂತೆ ಶೇಖ್ ಹಸೀನಾ ಸರ್ಕಾರ ಇದುವರೆಗೂ ನೋಡಿಕೊಂಡಿತ್ತು. ಆದರೆ ಈ ವರ್ಷ ಆ ಕ್ರಮವನ್ನು ಮುರಿದು ಭಾರತಕ್ಕೆ ಹಿಲ್ಸಾ ಮೀನು ನಿರ್ಯಾತವಾಗುವುದನ್ನು ನಿಲ್ಲಿಸುವ ತೀರ್ವನವನ್ನು ಅರ್ಥಶಾಸ್ತ್ರಜ್ಞ ಯೂನುಸ್ ನೇತೃತ್ವದ ಸರ್ಕಾರ ಅಧಿಕೃತವಾಗಿ ಕೈಗೊಂಡು ಈಗಾಗಲೇ ತಳ ಕಂಡಿರುವ ಬಾಂಗ್ಲಾದೇಶದ ಆದಾಯವನ್ನು ಇನ್ನಷ್ಟು ಕುಗ್ಗಿಸಹೊರಟಿತು.
ಆದರೆ ನ್ಯೂಯಾರ್ಕ್ನಿಂದ ಹಿಂತಿರುಗಿದ ಯೂನುಸ್ ಬದಲಾಗಿದ್ದಾರೆ. ಭಾರತಕ್ಕೆ ಹಿಲ್ಸಾ ಮೀನು (ಹಿಲೀಸ್ ಮಾಚ್) ಪೂರೈಕೆಯನ್ನು ಪುನರಾರಂಭಿಸಿದ್ದಾರೆ, ಮೊದಲ ಕಂತಾಗಿ ಐವತ್ತು ಅನ್ ಅಂದರೆ ಐವತ್ತು ಸಾವಿರ ಕಿಲೋಗ್ರಾಂ ಮೀನು ಭಾರತಕ್ಕೆ ಸರಬರಾಜಾಗುತ್ತಿದೆ. ಜತೆಗೆ ಭಾರತ-ವಿರೋಧಿ ಮತ್ತು ಪಾಕಿಸ್ತಾನ-ಪರ ಬೇಗಂ ಖಲೀದಾ ಜಿಯಾರ ರಾಜಕೀಯ ಪಕ್ಷ ಬಿಎನ್ಪಿ ಹೇಳಿಕೆ ಹೊರಡಿಸಿ, ತಾನು ಭಾರತ-ದ್ವೇಷಿಯಲ್ಲ, ಹಿಂದೂ ದ್ವೇಷಿಯಲ್ಲ ಎಂದು ಹೇಳಿದೆ. ‘ಸರ್ಕಾರ ಬದಲಾದ ನಂತರ ನಡೆದ ಹಿಂದೂಗಳ ವಿರುದ್ಧದ ಕೃತ್ಯಗಳಲ್ಲಿ ನಮ್ಮ ಪಾತ್ರವಿಲ್ಲ; ಭಾರತದೊಂದಿಗೆ ನಮಗೆ ಯಾವುದೇ ವೈಮನಸ್ಯವಿಲ್ಲ, ಒಂದಿಷ್ಟು ಗೊಂದಲಗಳಿವೆ ಅಷ್ಟೇ, ಅವುಗಳನ್ನು ಪರಿಹರಿಸಿಕೊಳ್ಳಬೇಕಷ್ಟೇ’ ಎಂದೂ ಬಿಎನ್ಪಿ ಹೇಳಿದೆ!
ಇದೆಲ್ಲವೂ ಹೊಸ ಸರ್ಕಾರದ ಭಾರತ ಕುರಿತಾದ ನೀತಿಯಲ್ಲಿ ಹೊಸದೊಂದು ಯುಗದ ಮುನ್ಸೂಚನೆಯಂತೆ ಕಾಣುತ್ತಿದೆ. ಇದಕ್ಕೆ ಚಾವಿ ತಿರುಗಿಸಿದ್ದು ಯಾರು ಎಂದು ಸಂಕ್ಷಿಪ್ತವಾಗಿ ಹೇಳಿಬಿಡುವುದಾದರೆ, ಹೇಳಿಕೇಳಿ ಮಹಮದ್ ಯೂನುಸ್ ಅಮೆರಿಕದ ಡೆಮೋಕ್ರಾಟಿಟ್ ಪಕ್ಷ ತನ್ನ ದೂರಗಾಮಿ ಯೋಜನೆಗನುಗುಣವಾಗಿ ಬೆಳೆಸಿಕೊಂಡು ಬಂದು ಈಗ ಢಾಕಾದಲ್ಲಿ ಕೂರಿಸಿರುವ ಕೈಗೊಂಬೆ. ಈ ಗೊಂಬೆಯ ಆಟವೆಲ್ಲ ವಾಷಿಂಗ್ಟನ್ನಿಂದ ನಿಯಂತ್ರಿತ.
ಈಗ ಚಾವಿ ತಿರುಗಿಸಿದ್ದು ಹೇಗೆ ಎನ್ನುವ ವಿಷಯಕ್ಕೆ ಬರೋಣ. ಭಾರತದ ಜತೆಗೆ ತಾನು ಹಾಳುಮಾಡಿಕೊಂಡ ಸಂಬಂಧಗಳು ಹಾಗೂ ವಿಶ್ವಾಸವನ್ನು ಪುನರ್ಸ್ಥಾಪಿಸಿಕೊಳ್ಳುವ ಪ್ರಕ್ರಿಯೆಯ ಮೊದಲ ಹಂತವಾಗಿ ಹಿಲ್ಸಾ ಮೀನು ರಫ್ತನ್ನು ಪುನರಾರಂಭಿಸುವ ಯೂನುಸ್ ಸರ್ಕಾರದ ನಿರ್ಧಾರ ಮತ್ತು ಭಾರತದ ಕುರಿತಾಗಿ ಒಳ್ಳೆಯ ಮಾತುಗಳನ್ನಾಡುವ ಬಿಎನ್ಪಿಯ ನಡವಳಿಕೆಯ ಪ್ರೇರಕಶಕ್ತಿ ಶ್ವೇತಭವನ. ಇದರರ್ಥ ಅಧ್ಯಕ್ಷ ಬೈಡೆನ್ ಎಂದಲ್ಲ. ಯೂನುಸ್ರನ್ನು ಬೈಡೆನ್ ಅಪ್ಪಿಕೊಂಡಿದ್ದು ಸೇರಿ ಇಬ್ಬರೂ ಜತೆಗಿದ್ದದ್ದು ಐದು ನಿಮಿಷಗಳಷ್ಟೇ ಅಂತೆ. ಯಾಕೆಂದರೆ ಏನು ಹೇಳಬೇಕು, ಹೇಗೆ ಹೇಳಬೇಕು ಎನ್ನುವುದು ಬೈಡೆನ್ರಿಗೆ ಪೂರ್ಣವಾಗಿ ತಿಳಿದಿರುವ ಸಾಧ್ಯತೆ ಇಲ್ಲ. ಅದೆಲ್ಲವೂ ನಡೆಯುವುದು ಆಂಟನಿ ಬ್ಲಿಂಕನ್ ನೇತೃತ್ವದ ವಿದೇಶಾಂಗ ಇಲಾಖೆಯ ಜಬಾಬ್ದಾರಿ. ಸೂಕ್ತ ಸಮಯದಲ್ಲಿ ತಿದ್ದುಪಡಿ ಸೂಚಿಸಿ ರೈಲನ್ನು ಮತ್ತೆ ಹಳಿಗೇರಿಸುವುದು ಲಾಯ್್ಡ ಜಾರ್ಜ್ ನೇತೃತ್ವದ ರಕ್ಷಣಾ ಇಲಾಖೆ. ಹೀಗಾಗಿ ಕ್ಯಾಮೆರಾ ಕಣ್ಣಿನಿಂದ ಮರೆಯಾಗಿ ‘ಬೇರೆಬೇರೆ ವ್ಯಕ್ತಿಗಳು’ ಯೂನುಸ್ ಸಾಹೇಬರನ್ನು ತಮ್ಮ ಮುಂದೆ ಸಾಕಷ್ಟು ಕಾಲ ಕೂರಿಸಿಕೊಂಡು ‘ಗ್ಯಾನ್’ ನೀಡಿದ್ದಾರೆ. ಅದೇನು ಎನ್ನುವುದು ಆ ವ್ಯಕ್ತಿಗಳು ಮುಂದೊಂದು ದಿನ ತಮ್ಮ ಆತ್ಮಚರಿತ್ರೆಗಳನ್ನು ಬರೆಯುವವರೆಗೂ ನಮಗೆ ಗೊತ್ತಾಗುವುದಿಲ್ಲ. ಆದರೆ, ‘ಭಾರತದ ಜತೆ ಸರಿಯಾಗಿ ನಡೆದುಕೊಳ್ಳಿ’ ಎಂದು ಯೂನುಸ್ರಿಗೆ ಹೇಳಬೇಕಾದವರು ಹೇಳಬೇಕಾದ ಬಗೆಯಲ್ಲೇ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆ ಮಾಡಿದ್ದು ಅಮೆರಿಕ. ಅಮೆರಿಕದ ಈ ಹಸ್ತಕ್ಷೇಪದ ಸೂಚನೆಗಳು 2023ರ ಜೂನ್ನಲ್ಲೇ ಕಾಣಿಸಿಕೊಂಡವು. ಆದರೆ ಜಗತ್ತಿಗೆ ಕಾಣದೇ ಈ ಹುನ್ನಾರಗಳು 2022ರ ಮೊದಲ ಭಾಗದಲ್ಲೇ ಆರಂಭವಾದವು. ಚೀನಾದ ರೆಕ್ಕೆಗಳನ್ನು ಕತ್ತರಿಸಲು ಡೊನಾಲ್ಡ್ ಟ್ರಂಪ್ ಆರಂಭಿಸಿದ್ದ ಕಾರ್ಯಯೋಜನೆಗಳ ಮಹತ್ವವನ್ನು ಬೈಡೆನ್ ಸರ್ಕಾರ ಕೊನೆಗೂ ಅರ್ಥಮಾಡಿಕೊಂಡದ್ದು 2022ರ ಆರಂಭದಲ್ಲಿ. ಆ ಪ್ರಕಾರ ತಮ್ಮ ಚೀನಾ ವಿರುದ್ಧದ ಸಾಮರಿಕ ಯೋಜನೆಗಳಲ್ಲಿ ದಕ್ಷಿಣ ಏಷ್ಯಾ ವಲಯದಲ್ಲಿ ಪ್ರಮಖ ಪಾತ್ರ ವಹಿಸುವುದು ಪಾಕಿಸ್ತಾನ, ಭಾರತ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಎಂದು ಬೈಡೆನ್ ಸರ್ಕಾರ ಗುರುತಿಸಿತು. ಅದರಂತೆ ತಮಗೆ ಅನುಕೂಲಕರವಾಗಿ ಕಂಡುಬರದ ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸಿತು. ಭಾರತದಲ್ಲಂತೂ ಚೀನಾವನ್ನು ನಿಗ್ರಹಿಸುವ ಕಟುನಿರ್ಧಾರ ತೆಗೆದುಕೊಂಡ ನರೇಂದ್ರ ಮೋದಿ ಸರ್ಕಾರವಿದ್ದದ್ದು ಅಮೆರಿಕಕ್ಕೆ ವರದಾನವೇ ಆಯಿತು. ತೊಂದರೆಯಾದದ್ದು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ. ಅಲ್ಲಿನ ಪಶ್ಚಿಮ-ಪರ ಪ್ರಜಾಪ್ರಭುತ್ವವಾದಿ ಸರ್ಕಾರವನ್ನು ಉರುಳಿಸಿ ಚೀನಾ-ಪರ ಸೇನಾ ಸರ್ಕಾರ ಬಂದದ್ದು ಅಮೆರಿಕದ ಯೋಜನಗೆ ತೊಡಕಾಯಿತು. ಆಗ ಒತ್ತಡ ಬಿದ್ದದ್ದು ಬಾಂಗ್ಲಾದೇಶದ ಮೇಲೆ.
ಶೇಖ್ ಹಸೀನಾ ಸರ್ಕಾರ ಚೀನಾ ಪರವೇನೂ ಆಗಿರಲಿಲ್ಲ. ಆದರೆ ಅದು ಚೀನಾವನ್ನು ಪೂರ್ಣವಾಗಿ ಬಿಟ್ಟಿರಲೂ ಇಲ್ಲ. ಅದು ಭಾರತ ಮತ್ತು ಚೀನಾಗಳೆರಡರ ನಡುವೆ ಸಮತೋಲನ ಕಾಪಾಡಿಕೊಂಡು ಎರಡೂ ಕಡೆಯಿಂದ ಅನುಕೂಲ ಪಡೆದುಕೊಳ್ಳುತ್ತಿತ್ತು. ಸಹಜ ಸನ್ನಿವೇಶದಲ್ಲಿ ಇದು ತುಂಬ ಒಳ್ಳೆಯ ರಾಜತಂತ್ರ. ಆದರೆ ಈ ದಿನಗಳು ಸಹಜವಲ್ಲ ಎನ್ನವುದನ್ನು ಹಸೀನಾ ಅರ್ಥಮಾಡಿಕೊಳ್ಳಲಿಲ್ಲ. ಅಲ್ಲದೆ ಕಾಲ ಬದಲಾಗಿದೆ ಎನ್ನುವುದನ್ನು ಗುರುತಿಸುವುದರಲ್ಲೂ ಅವರು ಸೋತರು. 1971ರ ಸ್ವಾತಂತ್ರ್ಯ ಸಮರ ಮತ್ತು ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನದ ಪರವಾಗಿ ಅಮೆರಿಕ ನಿಂತದ್ದನ್ನು ಅವರು ಮರೆಯಲೇ ಇಲ್ಲ. ಜತೆಗೆ 1975ರಲ್ಲಿ ತಮ್ಮ ತಂದೆ ಮುಜೀಬುರ್ ರಹಮಾನ್ರ ಹತ್ಯೆಯಲ್ಲೂ ಪುಟ್ಟದಾದರೂ ಅಮೆರಿಕದ ಪಾತ್ರವಿತ್ತು ಎನ್ನುವುದನ್ನೂ ಕ್ಷಮಿಸಲು ಅವರು ತಯಾರಿಲ್ಲ. ಒಬ್ಬಳು ಮಗಳಾಗಿ ಕ್ಷಮಿಸಕೂಡದು, ನಿಜ. ಆದರೆ ದೇಶದ ಪ್ರಧಾನಮಂತ್ರಿಯಾಗಿ ಅವರು ದೇಶದ ಹಿತಾಸಕ್ತಿಗಳನ್ನು ವೈಯಕ್ತಿಕ ನೋವುನಲಿವುಗಳಿಗಿಂತ ಮೇಲಿಡಬೇಕಾಗಿತ್ತು. ಎರಡನೆಯ ಮಹಾಯುದ್ಧದಲ್ಲಿ ಜರ್ಮನಿಯಿಂದ ಹಾನಿ ಅನುಭವಿಸಿದ ಆರೇ ವರ್ಷಗಳಲ್ಲಿ ಫ್ರಾನ್ಸ್ ಇತಿಹಾಸವನ್ನು ಹಿಂದಕ್ಕಿಟ್ಟು ಪಶ್ಚಿಮ ಜರ್ಮನಿಯೊಂದಿಗೆ ಘನಿಷ್ಟ ಆರ್ಥಿಕ ಸಂಬಂಧಗಳನ್ನು ಸ್ಥಾಪಿಸಿಕೊಂಡಿತು, ಮುಂದೆ ಅದೇ ಯೂರೋಪಿಯನ್ ಇಕನಾಮಿಕ್ ಕೌನ್ಸಿಲ್ (ಇಇಸಿ), ತದನಂತರದ ಯೂರೋಪಿಯನ್ ಯೂನಿಯನ್ನ ಜನ್ಮಕ್ಕೂ ಕಾರಣವಾಯಿತು. ಅಷ್ಟೇ ಅಲ್ಲ, 1968ರ ವಿದ್ಯಾರ್ಥಿ ಆಂದೋಲನಕ್ಕೆ ಹೆದರಿ ಫ್ರೆಂಚ್ ಅಧ್ಯಕ್ಷ ಚಾರ್ಲಸ್ ಡಿಗಾಲ್ ಜರ್ಮನಿಗೆ ಓಡಿಹೋಗಿ ಆಶ್ರಯ ಪಡೆದರು! ನಮ್ಮ ದೇಶಕ್ಕೇ ಬಂದು, ನಮ್ಮ ಜನರನ್ನು ಕೊಂದ ಜರ್ಮನರು ನಾನು ಅಲ್ಲಿಗೇ ಹೋದರೆ ಸುಮ್ಮನೆ ಬಿಡುತ್ತಾರೆಯೇ ಎಂದು ಅವರು ಯೋಚಿಸಲಿಲ್ಲ. 23 ವರ್ಷಗಳಲ್ಲಿ ಇತಿಹಾಸ ಪೂರ್ಣವಾಗಿ ಬದಲಾಗಿಹೋಗಿದೆ ಎಂದು ಅವರು ಗುರುತಿಸಿದ್ದರು. ಮೋದಿಯವರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನಮ್ಮ ದೇಶದ ‘ಕಾಕ’ಗಳ ಚಾಡಿಮಾತು ಕೇಳಿ ಬರಾಕ್ ಒಬಾಮ ಸರ್ಕಾರ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ಅಮೆರಿಕಕ್ಕೆ ಕಾಲಿಡಲೂ ಬಿಟ್ಟಿರಲಿಲ್ಲ. ಅದರೆ ಅದೇ ಮೋದಿ ಭಾರತದ ಪ್ರಧಾನಿಯಾದಾಗ ಅದೇ ಒಬಾಮರನ್ನು 2015ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದರು! ಆಹ್ವಾನವನ್ನು ಒಪ್ಪಿಕೊಂಡು ಒಬಾಮ ಬಂದರು ಸಹಾ. ತಮಗಾಗಿದ್ದ ವೈಯಕ್ತಿಕ ಅವಮಾನಕ್ಕಿಂತ ರಾಷ್ಟ್ರಹಿತಕ್ಕೆ ಅಮೆರಿಕದ ಸಖ್ಯ ಬಹುಮುಖ್ಯ ಎಂದು ವಿವೇಕಿ ಮೋದಿ ತಿಳಿದರು ಮತ್ತು ‘ಕಾಕ’ಗಳು ಹೇಳಿದ್ದೆಲ್ಲ ಸುಳ್ಳಿನ ಕಂತೆ ಎಂದು ಒಬಾಮ ಸಹ ಅರಿತಿದ್ದರು. ಇಬ್ಬರೂ ಹೀಗೆ ಇತಿಹಾಸವನ್ನು ಹಿಂದಕ್ಕಿಟ್ಟು ಒಳ್ಳೆಯ ಭವಿಷ್ಯಕ್ಕಾಗಿ ಮನಸ್ಸುಮಾಡಿದರು. ಪರಿಣಾಮವಾಗಿ ಇಂದು ಅಧ್ಯಕ್ಷ ಬೈಡೆನ್ ಹೇಳುತ್ತಾರೆ, ‘ಭಾರತ-ಅಮೆರಿಕ ಸಂಬಂಧಗಳು ಇಂದು ಅತ್ಯಂತ ಗಾಢ ಮತ್ತು ಗತಿಶೀಲವಾಗಿವೆ’ ಎಂದು!
ಶೀತಲ ಸಮರದ ಕಾಲದಲ್ಲಿ ಪಾಕಿಸ್ತಾನವನ್ನು ಒಂದಾಗಿಯೇ ಉಳಿಸಿಕೊಳ್ಳಬೇಕಾಗಿದ ಒತ್ತಡಕ್ಕೆ ಅಮೆರಿಕ ಸಿಲುಕಿತ್ತು, ಆದರೀಗ ಕಾಲ ಬದಲಾಗಿದೆ, ಚೀನಾ ಜತೆಗಿನ ಹೊಸ ಶೀತಲಸಮರ ಕಾಲದಲ್ಲಿ ಅಮೆರಿಕಕ್ಕೆ ಬಾಂಗ್ಲಾದೇಶ ಮುಖ್ಯವಾಗಿದೆ ಎನ್ನವುದನ್ನು ಅರಿಯಲಾಗದ ಶೇಖ್ ಹಸೀನಾ ಇತಿಹಾಸದ ಬಂಧಿಯಾಗಿಯೇ ಉಳಿದುಹೋದರು. ಹೀಗಾಗಿ ಉತ್ತರ ಬಂಗಾಳ ಕೊಲ್ಲಿಯಲ್ಲಿ ಚೀನಾ ವಿರುದ್ಧ ಬಳಸಬಹುದಾದ ಸಾಮರಿಕ ಸವಲತ್ತುಗಳನ್ನು ಬಳಿಸಿಕೊಳ್ಳುವುದಕ್ಕಾಗಿ ಅವರನ್ನು ಕೆಳಗಿಳಿಸುವುದು ಅಮೆರಿಕಕ್ಕೆ ಮುಖ್ಯವಾಯಿತು. ಅಮೆರಿಕ ನಿರೀಕ್ಷಿಸಿದ ಸವಲತ್ತನ್ನು ನೀಡುವುದು ಬಾಂಗ್ಲಾದೇಶಕ್ಕೇ ಸಹಕಾರಿಯಾಗಬಹುದು ಎನ್ನುವುದನ್ನು ಶೋಧಿಸುವ ಒಂದು ಪ್ರಯತ್ನವನ್ನು ಹಸೀನಾ ಮಾಡಬಹುದಾಗಿತ್ತು. ಇಷ್ಟಾಗಿಯೂ, ಹಸೀನಾ ಸುರಕ್ಷಿತವಾಗಿ ದೇಶ ತೊರೆದದ್ದು ಅಮೆರಿಕದ ನೇರ ಗಮನ ಹಾಗೂ ಸಲಹೆಯಿಂದ. ಅಲ್ಲದೆ, ಢಾಕಾ ಸನಿಹದ ಮೀರ್ಪುರ್ ನೆಲೆಯಿಂದ ಹಸೀನಾರನ್ನು ಕರೆತಂದ ವಿಮಾನದ ಬೆಂಗಾವಲಾಗಿ ಹೊದ್ದು ನಮ್ಮ ಎರಡು ಸುಕೋಯ್ ಯುದ್ಧವಿಮಾನಗಳು, ಅವು ಬಾಂಗ್ಲಾದೇಶದ ವಾಯುಪ್ರದೇಶವನ್ನು ಯಾವುದೇ ತಡೆಯಿಲ್ಲದೆ ಪ್ರವೇಶಿಸಿ ಹೊರಬಂದವು ಎನ್ನುವುದು ಭಾರತ, ಅಮೆರಿಕ ಮತ್ತು ಬಾಂಗ್ಲಾ ಸೇನಾ ಪ್ರಮುಖ ಜ.ವಖಾರ್-ಉಝ್-ಜಮಾನ್ರ ನಡುವಿನ ಆ ದಿನದ ಹೊಂದಾಣಿಕೆಯ ಸುಳಿವನ್ನೂ ನೀಡುತ್ತದೆ. ಈ ಸುಳಿವು ಸೂಜಿ ಚುಚ್ಚುವುದು ಬಾಂಗ್ಲಾವನ್ನು ನುಂಗಿದ ಮೇಲೆ ಅಮೆರಿಕದ ಮಾರಿ ಕಣ್ಣು ಭಾರತದತ್ತ ತಿರುಗುತ್ತವೆ ಎಂಬ ಬ್ರೇಕಿಂಗ್ ನ್ಯೂಸ್ನ ಬುರುಡೆ ಬಲೂನ್ಗೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)